Dec 7, 2010

ಕಾಡುವ ಕತ್ತಲು.....!

ನನ್ನದೇ ನೆರಳು ಉದ್ದುದ್ದವಾಗಿದೆ...
ದೂರದಾ ಬೆಳಕು ನನ್ನ ಮೇಲೆ ಬಿದ್ದಾಗ....
ನಿನ್ನದೇ ನೆನಪು ಓಡೋಡಿ ಬಂದಿದೆ,
ಮಗ್ಗುಲಿನ ಮಿಂಚುಹುಳ ಮಿನುಗಿದಾಗ....

ಕಡುಗತ್ತಲೆಗೆ ಕಣ್ಣು ಕೂಡ ಸೋತಿದೆ,

ನನಸಾಗದೇ ಕಾಡುವ ಕನಸಿನ ಹಾಗೆ.....
ಕಡುಗಪ್ಪು ಬಣ್ಣದಲೂ ಚಿತ್ತಾರ ಮೂಡಿದೆ,
ಕಾಣದೆಲೇ ಕುಣಿಸುವ ಕಾಲನ ಹಾಗೆ....

ಕತ್ತಲೆಯ ಮಡಿಲಿನಲೂ ಏನೋ ಒಂದು ಹಿತವಿದೆ,

ಬಿಗಿದಷ್ಟೂ ಜಾರುವ ಪ್ರೀತಿಯ ಹಾಗೆ....
ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
ಗುರಿಯಿರದ ದಾರಿಯ ತಿರುವಿನ ಹಾಗೆ.....

ಹೊರಗಿನ ಕತ್ತಲಲೂ ಮನದ ದೀಪ ಬೆಳಗು
ತಿದೆ,
ಬದುಕಿಗೇ ದಾರಿ ತೋರುವ ಕನಸಿನ ಹಾಗೆ.....
ಕತ್ತಲಿನ ದಾರಿಯಲ್ಲೂ ಬೆಳಕ ನಿರೀಕ್ಷೆಯಿದೆ,
ಕಾಡಿದರೂ ಕಾಪಾಡುವ ದೇವರ ಹಾಗೆ......

Oct 22, 2010

ನನ್ನದೇನು ತಪ್ಪು....?

ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು....  ತಿಂಗಳ ನಂತರ ಹೆಂಡತಿ ಮಕ್ಕಳನ್ನು ನೋಡಲು ಹೋಗುವವನಿದ್ದೆ ಈ ದಿನ.....  ಪೇಪರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ..... ತಿಂಗಳಿಗೊಮ್ಮೆ ರಜೆ ಸಿಗುತ್ತಿತ್ತು..... ಊರಿಗೆ ಹೋಗಲು ಹತ್ತು ಘಂಟೆ ಪ್ರಯಾಣ ಮಾಡಬೇಕಿತ್ತು..... ಕೆಲಸ ಬಿಡುವ ಸಮಯ ಆಗುತ್ತಲಿದ್ದರಿಂದ ಗಮನವೆಲ್ಲಾ ಗಡಿಯಾರದ ಮೇಲೆಯೆ ಇತ್ತು..... ಕೊನೆಗೂ ಸಮಯಕ್ಕೆ ಸರಿಯಾಗಿ ಬಿಟ್ಟಿದ್ದರಿಂದ ಓಡುತ್ತಾ ರೂಮಿಗೆ ಬಂದು ಊರಿಗೆ ಹೋಗಲು ಬೇಕಾದ ಸಾಮಾನೆಲ್ಲಾ ಬ್ಯಾಗ್ ಗೆ ಹಾಕಿದೆ...... ಮಗನಿಗೆ ತೆಗೆದುಕೊಂಡಿದ್ದ ಅಂಗಿಯನ್ನು ಮುದ್ದಿಸಿ ಚೀಲಕ್ಕೆ ಹಾಕಿದೆ..... ಹಿಂದಿನ ವಾರ ಪೇಟೆಗೆ ಹೊಗಿದ್ದಾಗ ತೆಗೆದುಕೊಂಡಿದ್ದ ಕಪ್ಪು ಬ್ಯಾಗ್ ತುಂಬಾ ಇಷ್ಟಪಟ್ಟು ಕೊಂಡಿದ್ದೆ...... ನನ್ನ ಹೆಂಡತಿಯ ಇಷ್ಟದ ಬಣ್ಣ ಅದು..... ಈ ಸಾರಿ ಬರುವಾಗ ಮಗನಿಗೆ ಸಣ್ಣದೊಂದು ಅಲಾರಾಂ ಇರುವ ಗಡಿಯಾರ ತರಲು ಹೇಳಿದ್ದಳು..... ಮಗನಿಗೆ ಬೆಳಿಗ್ಗೆ ಬೇಗನೆ ಎದ್ದು ಓದಲು ಅನುಕೂಲ ಆಗಲಿ ಎಂದು ಆಕೆಯ ಆಶೆಯಾಗಿತ್ತು..... ಚಿಕ್ಕದಾದ ಗಡಿಯಾರ  ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಮುದ್ದಾಗಿತ್ತು.... " ಹೇಯ್ ರಷೀದ್.... ಟೈಮ್ ಆಗ್ತಾ ಇದೆ ಬಾರೋ..... ಬಸ್ ಸಿಗಲ್ಲ ಮತ್ತೆ..... " ಪಕ್ಕದ ರೂಮಿನಿಂದ ಗೆಳೆಯ ಕರೆಯುತ್ತಿದ್ದ...... ಮುಖ ತೊಳೆಯಲೂ ಹೋಗಲಿಲ್ಲ.... ಹಾಕಿಕೊಂಡಿದ್ದ ಅಂಗಿ ,ಪ್ಯಾಂಟ್ ಬದಲಾಯಿಸಲೂ ಹೋಗಲಿಲ್ಲ...... ಬ್ಯಾಗ್ ಹೆಗಲಿಗೆ ತೂಗುಹಾಕಿಕೊಂಡವನೇ ಗೆಳೆಯನ ರೂಮಿಗೆ ಓಡಿದೆ..... ಅವನ ರೂಮಿನಲ್ಲಿ ಟಿವಿಯಲ್ಲಿ ದೊಡ್ಡದಾದ ಸದ್ದಿನಲ್ಲಿ ಸುದ್ದಿ ಬರ್ತಾ ಇತ್ತು...... " ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ... ಹಲವರಿಗೆ ಗಾಯ..... ದುಷ್ಕರ್ಮಿಗಳಿಗಾಗಿ ಹುಡುಕಾಟ.." ಎಂದೆಲ್ಲಾ ಒದರುತ್ತಿತ್ತು ಟಿ.ವಿ...... ನಾನು ಒಂದು ಕ್ಷಣ ಗಾಬರಿಯಾದೆ..... ಒಂದು ಬಾಂಬ್ ಎಲ್ಲೇ  ಸ್ಫೊಟವಾದರೂ ಸಮಸ್ಯೆಯಾಗುವುದು ನಮ್ಮಂಥ ಪಾಪದವರಿಗೆ...... ಅದರಲ್ಲೂ ಬಡ ಜನರು, ದಿನಗೂಲಿ ಮಾಡುವವರಿಗೆ ಇದೊಂದು ದೊಡ್ಡ ಶಾಪವಾಗಿತ್ತು..... ಎಲ್ಲೇ ಬಾಂಬ್ ಬಿದ್ದರೂ ಅನುಮಾನ ಶುರುವಾಗೋದು ಮುಸ್ಲೀಮರ ಮೇಲೇ..... ಮೊದಲೆಲ್ಲಾ ದೂರದಲ್ಲಿ ಬಾಂಬ್ ಬೀಳುತ್ತಿತ್ತು, ಇಲ್ಲಿ ಅಷ್ಟೇನೂ ಪರಿಣಾಮ ಬೀರುತ್ತಿರಲಿಲ್ಲ... ಈಗ ಮಾತ್ರ ಬುಡಕ್ಕೇ ಬಿದ್ದಿತ್ತು ಬಾಂಬ್..... ಈಗ ಇಲ್ಲೆಲ್ಲಾ ಏನೇನ್ ಸಮಸ್ಯೆ ಆಗುವುದಿದೆಯೊ ಅನಿಸಿ ಭಯ ಶುರು ಆಗಿತ್ತು.... ಗೆಳೆಯ ಬಂದು ಕೈಹಿಡಿದು ಎಳೆದುಕೊಂಡು ಹೋಗಿರದಿದ್ದರೆ ನಾನು ಅಲ್ಲೇ ನಿಂತಿರುತ್ತಿದ್ದೆ.....

ಮನಸ್ಸು ಗೊಂದಲದ ಗೂಡಾಗಿತ್ತು..... ಯಾಕೆಲ್ಲಾ ಇದನ್ನೆಲ್ಲಾ ಮಾಡುತ್ತಾರೋ ಜನ..... ಇದನೆಲ್ಲಾ ಸಮರ್ಥನೆ ಮಾಡಿಕೊಳ್ಳುವ ಜನರೂ ಇದ್ದಾರೆ.... ಅವರವರ ಭಾವಕ್ಕೆ ತಕ್ಕ ಹಾಗೆ ಯೋಚನೆ ಮಾಡುತ್ತಾರೆ.... ಸಮಸ್ಯೆ ನಮ್ಮಂಥ ಜನ ಸಾಮಾನ್ಯರಿಗೆ.... ಸೂತ್ರಧಾರರು ಎಲ್ಲೋ ಕುಳಿತು ಇದನ್ನೆಲ್ಲಾ ಮಾಡಿಸುತ್ತಾರೆ.... ಅವರ ಸೂತ್ರಕ್ಕೆ ಕುಣಿಯುವ ಗೂಬೆಗಳು , ಅವರ ಆಮಿಷಕ್ಕೆ ಒಳಗಾಗಿ ಇದನ್ನೆಲ್ಲಾ ಮಾಡುತ್ತಾರೆ.... ಇವೆಲ್ಲದರ ನೇರ ಪರಿಣಾಮ ನಮ್ಮಂಥ ಬಡಪಾಯಿ ಮುಸಲ್ಮಾನರ ಮೇಲೆ ಆಗತ್ತೆ ಅನ್ನೋದು ಇದನ್ನೆಲ್ಲಾ ಮಾಡಿಸುವ ಖದೀಮರಿಗೆ ಅರ್ಥಾನೇ ಆಗಲ್ಲ..... ಹಿಂದಿನ ಸಾರಿ ದೆಹಲಿಯಲ್ಲಿ ಬಾಂಬ್ ಹಾಕಿದ್ದಾಗ ನನ್ನ ಕೆಲವು ಗೆಳೆಯರು ಮುಸ್ಲೀಂ ಎಂದು ಗೊತ್ತಾಗದಿರಲಿ ಅಂತ ಗಡ್ಡ ಬೋಳಿಸಿದ್ದರು..... ನಾನು ಮಾತ್ರ ಯಾವುದೊ ತಲೆ ಕೆಟ್ಟ ಜನರ ಮನೆಹಾಳ ಕೆಲಸಕ್ಕೆ ಹೆದರಿ ನಾನು ಗಡ್ಡ ಬೋಳಿಸಲು ತಯಾರಾಗಿರಲಿಲ್ಲ.....    ನಾನು ಮುಸ್ಲಿಂ ಎಂದು ಗೌರವ ಪಟ್ಟುಕೊಳ್ಳಲು ತುಂಬಾ ಜನ ಮಹಾತ್ಮರು ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ... ನಾನು ಆ ಜನರ ಗುಂಪಿಗೆ ಸೇರಿದ್ದೇನೆಯೆ ಹೊರತು..... ಯಾರೋ ದೇಶದ್ರೋಹಿಗಳ ಮತಕ್ಕೆ ಸೇರಿದವನಲ್ಲ ಎಂದು ಸಾರಬೇಕಿತ್ತು..... ಕೈಯಿ ನನ್ನ ಎದೆಮಟ್ಟದ ಗಡ್ಡವನ್ನು ಸವರುತ್ತಿತ್ತು.... ಬೇಗ  ಬಸ್ ಬಂದು ಎಷ್ಟು ಬೇಗ ಊರು ಸೇರುತ್ತೇನೋ ಎನ್ನುವ ಹಾಗಾಗಿತ್ತು......

ಹಿಂದಿನ ಊರಿಂದ ಬರಬೇಕಿದ್ದ ಬಸ್ ಸ್ವಲ್ಪ ತಡವೇ ಆಗಿತ್ತು..... ಆಗೀಗ ಸೈರನ್ ಹಾಕಿಕೊಂಡು ಬರುವ ಪೋಲಿಸ್ ಜೀಪುಗಳು ನಡುಕ ಹುಟ್ಟಿಸುತ್ತಿದ್ದವು.... ತಪ್ಪೇ ಮಾಡದೇ ಇದ್ದರೂ ಯಾಕೆ ಹೆದರಿಕೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತಿರಲಿಲ್ಲ..... ಅಂಗಿ ಕೊಳಕಾಗಿತ್ತು.... ಪ್ಯಾಂಟ್ ಸಹ ಕೊಳಕಾಗಿತ್ತು...... ಮನೆಗೆ ಹೋಗುವ ಗಡಿಬಿಡಿಯಲ್ಲಿ ಎಲ್ಲವನ್ನೂ ಮರೆತು ಹಾಗೇ ಓಡಿ ಬಂದಿದ್ದೆ.... ಗೂಡಾ ಅಂಗಡಿಯವ ಚಾ ಕೊಡುವಾಗಲೂ ಒಂಥರಾ ಮುಖ ಮಾಡಿಕೊಂಡಿದ್ದ..... ನನ್ನ ಅಂಗಿ ಪ್ಯಾಂಟ್ ಕೊಳಕಾಗಿದ್ದನ್ನ ಮತ್ತೆ ನನ್ನ ಕೈಲಿದ್ದ ಕಪ್ಪು ಬ್ಯಾಗನ್ನ ನೋಡಿ ಆತ ನನ್ನ  ಬಗ್ಗೆ ತಪ್ಪು ತಿಳಿದಿರಬೇಕು ಎಂದುಕೊಂಡು ಸಮಾಧಾನ ಮಾಡಿಕೊಂಡೆ....  ತಡವಾಗಿ ಬಂದ ಬಸ್ನಲ್ಲಿ ಜನ ತುಂಬಿಹೋಗಿದ್ದರು...... ನಾನು ಅದರಲ್ಲೇ ತೂರಿಕೊಂಡು ಒಳಗೆ ಹೋದೆ.......

ನನ್ನಷ್ಟಕ್ಕೆ ಒಳಗೆ ಹೋದವನೇ ನನ್ನ ಬ್ಯಾಗ್ ಇಟ್ಟೆ...... ಎಲ್ಲರೂ ನನ್ನನ್ನೇ ನೋಡುತ್ತಿದ್ದರು..... ನನ್ನ ಗಡ್ಡವನ್ನೊಮ್ಮೆ, ನನ್ನ ಕಪ್ಪು ಬ್ಯಾಗನ್ನೊಮ್ಮೆ ದುರುಗುಟ್ಟಿ ನೋಡುತ್ತಿದ್ದರು...... ನಾನು ತಲೆ ತಗ್ಗಿಸಿ ನಿಂತೆ....... ಎಲ್ಲರ ಮುಖದಲ್ಲಿನ ದ್ವೇಷ, ಸಿಟ್ಟು ತಿರಸ್ಕಾರ ರಾಚುತ್ತಿತ್ತು.... ಅದರಲ್ಲಿ ಒಬ್ಬ " ಇಲ್ಲಿನ ಗಾಳಿ, ನೀರು ಬೇಕು.... ಉಳಿಯಲು ಜಾಗವೂ ಬೇಕು... ಆದ್ರೆ ನಿಷ್ಟೆ ಮಾತ್ರ ಪಾಕಿಸ್ತಾನಕ್ಕೆ ಯಾಕೆ...? " ಎನ್ನುತ್ತಿದ್ದ...... ನನ್ನ ಮನಸ್ಸಲ್ಲೂ ಇದೇ ಪ್ರಶ್ನೆ ಕಾಡುತ್ತಿತ್ತು...... ಆದರೆ ಉತ್ತರ ಯಾರಿಂದ ಪಡೆಯಲಿ ........?.. ಇನ್ನೊಬ್ಬ " ಯಾರನ್ನೂ ನಂಬುವ ಹಾಗಿಲ್ಲ..... ಉಣ್ಣುವ ಮನೆಗೆ ಬಾಂಬ್ ಹಾಕುವವರು ಎಲ್ಲಾ ಕಡೆ ಇದ್ದಾರೆ...." ಆತನ ಕಣ್ಣು ನನ್ನನ್ನೇ  ನೋಡುತ್ತಿತ್ತು..... ನನ್ನಲ್ಲಿ ಉತ್ತರ ಇರಲಿಲ್ಲ...... ಕಂಡಕ್ಟರ್ ಬಂದು ಟಿಕೇಟ್ ಕೇಳಿದ..... " ಭಟ್ಕಳಕ್ಕೆ ಒಂದು ಟಿಕೇಟ್ " ಎಂದೆ.....  ಆತ ನನ್ನನ್ನು ಮೇಲಿಂದ ಕೆಳಗಿನವರೆಗೂ  ನೋಡಿ ಟಿಕೇಟ್ ಕೊಟ್ಟ...... ಯಾರೋ ಫೋನಿನಲ್ಲಿ ಮಾತನಾಡುತ್ತಾ ಇದ್ದರು.." ಹೌದಾ...? ಇಬ್ಬರು ಸತ್ತರಂತಾ...? ಬೇರೆ ಕಡೆಯೂ ಬಾಂಬ್ ಹಾಕುವ ಸುದ್ದಿ ಇದೆಯಂತಾ...? ಈ ಮಕ್ಕಳನ್ನೆಲ್ಲಾ ಸುಟ್ಟುಬಿಡಬೇಕು...." ಎಂದೆಲ್ಲಾ ಅಬ್ಬರಿಸುತ್ತಿದ್ದ..... ಫೋನಿನಲ್ಲಿ ಮಾತು ಮುಗಿಸಿದವನೇ ಆತ " ಎಲ್ಲಾ ಕಡೆ ಬಾಂಬ್ ಹಾಕಬಹುದಂತೆ.... ಆ ಬ....ಮಕ್ಕಳ ಗ್ಯಾಂಗ್ ಎಲ್ಲಾ ಕಡೆ ಇದೆಯಂತೆ....ಜನರೆಲ್ಲಾ ಅನುಮಾನ ಬಂದಲ್ಲೆಲ್ಲಾ ಪೋಲಿಸರಿಗೆ ತಿಳಿಸಬೇಕಂತೆ.... ಈಗಾಗಲೇ ಬಾಂಬ್ ಎಲ್ಲಾ ಕಡೆ ಸಪ್ಲೈ ಆಗಿದೆಯಂತೆ.... ಇನ್ನು ಸ್ಫೋಟ ಆಗೊದೊಂದೇ ಬಾಕಿಯಂತೆ...." ಎಂದೆಲ್ಲಾ ಕೂಗುತ್ತಿದ್ದ...... ನನಗೆ ಮನೆಯಲ್ಲಿ ನನಗಾಗಿ ಕಾಯುತ್ತಿದ್ದ ಹೆಂಡತಿ ಮಕ್ಕಳ ನೆನಪಾಯಿತು.....


ಊಟದ ಸಲುವಾಗಿ ಡ್ರೈವರ್ ಬಸ್ಸನ್ನು ನಿಲ್ಲಿಸಿದ..... ನಾನು ದೊಡ್ಡದಾದ ಉಸಿರು ಬಿಟ್ಟು ಹೊರಗೆ ಬಂದೆ..... ಕೆಳಗೆ ಇಳಿಯುತ್ತಿದ್ದವರೆಲ್ಲಾ ನನ್ನ ಬ್ಯಾಗ್ ಕಡೆ ನೋಡುತ್ತಾ ಇಳಿಯುತ್ತಲಿದ್ದರು..... ನನಗೆ ಒಂದೂ ತಿಳಿಯುತ್ತಿರಲಿಲ್ಲ..... ಬೇಗನೇ ಊಟ ಮುಗಿಸಿ ಬಸ್ ಒಳಗೆ ಬಂದೆ..... ಅಲ್ಲಿ ಕುಳಿತವರೆಲ್ಲಾ ನನ್ನನ್ನು ನೋಡುತ್ತಲಿದ್ದರು.... ಕೆಲವರು ನನ್ನ ಬ್ಯಾಗ್ ಕಡೆ ನೋಡುತ್ತಾ ಮಾತನಾಡುತ್ತಿದ್ದರು...... ನಾನೂ ಗಮನವಿಟ್ಟು ಕೇಳಿದೆ.... ಟಿಕ್.... ಟಿಕ್.... ಟಿಕ್ ಎನ್ನುವ ಶಬ್ಧ ಬರುತ್ತಾ ಇತ್ತು...... ಎಲ್ಲಿಂದ ಅಂತ ಗೊತ್ತಿರಲಿಲ್ಲ....ಕೆಲವರು ಆಗಲೇ ಬಸ್ ಕೆಳಗಿಳಿಯಲು ಶುರು ಮಾಡಿದ್ದರು..... ನನಗೂ ಹೆದರಿಕೆ ಶುರು ಆಗಿತ್ತು.... ನನಗೆ ಗೊತ್ತಿಲ್ಲದೇ ಕೈಯಿ ನನ್ನ ಬ್ಯಾಗ್ ಎತ್ತಿಟ್ಟುಕೊಂಡಿತ್ತು.....  ಬ್ಯಾಗ್ ಎದೆಗವಚಿ ಇಟ್ಟುಕೊಂಡೆ...... ಹಿಂದೆ ಮುಂದೆ ಯೋಚಿಸದೇ ಕೆಳಗಿಳಿದು ಬಿಟ್ಟೆ.... ನಾನು ಕೆಳಗೆ ಇಳಿದದ್ದೇ ತಡ... ಎಲ್ಲರೂ ಬಸ್ ಹತ್ತಿದರು...... ನಾನು ಅರ್ಥವಾಗದೇ ಅಲ್ಲೇ ನಿಂತೆ..... ಟಿಕ್ ಟಿಕ್ ಶಬ್ಧ ನಿಂತಿರಲಿಲ್ಲ....... ಬಸ್ ಹೊರಟೇಬಿಟ್ಟಿತು...... ಟಿಕ್ ಟಿಕ್ ಶಬ್ಧ ಇನ್ನೂ ಹತ್ತಿರವಾದಂತಿತ್ತು....... ಆಗ ನೆನಪಾಯಿತು.... ಬ್ಯಾಗ್ನಲ್ಲಿದ್ದ ಮಗನಿಗಾಗಿ ಕೊಂಡ ಗಡಿಯಾರ......... ಬ್ಯಾಗ್ ಓಪನ್ ಮಾಡಿ ಹೊರ ತೆಗೆದೆ....... ಮಗನ ಮುದ್ದು ಮುಖ ನೆನಪಾಗಿ ಗಡಿಯಾರಕ್ಕೆ ಮುತ್ತು ಕೊಟ್ಟೆ..... ಯಾರೋ ಮಾಡಿದ ತಪ್ಪಿಗೆ ಯಾರನ್ನೋ ಅನುಮಾನದಿಂದ ನೋಡುವ ಜಗತ್ತಿನ ಬಗ್ಗೆ ಯೋಚಿಸಿ ನಗು ಬಂತು.....

ಬೆನ್ನ ಹಿಂದೆ ಪೋಲಿಸ್ ಸೈರನ್ ಹತ್ತಿರವಾಗುತ್ತಿತ್ತು.........

Sep 30, 2010

ಮನಸು ಹಗುರಾದ ಬಗೆ.....!

ಆಫೀಸಿನಲ್ಲಿ ತುಂಬಾ ಗಡಿಬಿಡಿಯಿತ್ತು..... ಕೆಲಸವಿತ್ತು ಕೂಡ..... ಘಳಿಗೆಗೊಮ್ಮೆ ರಿಂಗಣಿಸುವ ಫೋನಿನದೊಂದು ದೊಡ್ದ ಕಿರಿಕಿರಿಯಾಗಿತ್ತು..... ಫೋನ್ ತೆಗೆದು ಬಿಸಾಡಿಬಿಡೋಣ ಎನಿಸಿಬಿಟ್ಟಿತ್ತು......  ಮೊಬೈಲ್ ದೂರದಲ್ಲಿರಿಸಿ ಕುಳಿತಿದ್ದೆ..... " ಯಾವ ಮೋಹನ ಮುರಳಿ ಕರೆಯಿತೊ" ಎಂದು ನನ್ನ ಮೊಬೈಲ್ ಕರೆಯಲು ಶುರು ಮಾಡಿತು..... ಅಯ್ಯೋ... ಯಾರದಪ್ಪಾ ಇದು...? ನೋಡಿದೆ.... ಲೋಕಲ್ ನಂಬರ್ ಇತ್ತು...... ಬೇಗ ಏನಾದರೂ ಹೇಳಿ ಮುಗಿಸೋಣ ಎಂದುಕೊಂಡು " ಹೆಲೋ" ಎಂದೆ.... ಅತ್ತಲಿಂದ " ಹಲೊ...... ದಿನಕರ್ ಸರ್ ಅಲ್ರೀ..... ನಾನ್ರಿ... ಗೊತ್ತಾಯ್ತೇನ್ರೀ.....?"  ಆ ಧ್ವನಿ ಮರೆತಿರಲಿಲ್ಲ ನಾನು....
ಆರ್. ಎನ್. ಶೆಟ್ಟಿ ಕಂಪನಿ.........

ಮೊದಲ ಕೆಲಸ.......

ರಾತ್ರಿ ಪಾಳಿ......

ಫೋನ್........

ಆಕ್ಸಿಡೆಂಟ್.........

ಮಾಡದ ಸಹಾಯ.......

ಉಳಿದ ಪಾಪಪ್ರಜ್ನೆ........

ಎಲ್ಲಾ ನೆನಪಾಯಿತು......" ನಿನ್ನನ್ನು ಹೇಗೆ ಮರೆಯಲಿ..... ಹೇಗಿದ್ದೀಯಾ ಜಗದೀಶ್ " ಎಂದೆ...... ಅವನಿಗೆ ಶಾಕ್...... " ಸರ್ರ್..... ಹ್ಯಾಂಗ್ ನೆನಪಿಟ್ಟೀರ್ರೀ ನನ್ನ... ಇಷ್ಟ್ ವರ್ಷ್ ಆದ್ರೂ ನನ್ನ ಗುರ್ತ ಮಾಡೀರಲ್ರೀ ಸರ್ರ್..... ಎಲ್ಲಿದೀರ್ರೀ ಸರ್ರ್... ಹ್ಯಾಂಗ್ ಅದೀರ್ರೀ...ನಾನ್ ಇಲ್ಲೇ ಮಂಗ್ಳೂರ್ನಾಗೇ ಬಂದೀನ್ರೀ ಸರ್ರ್..... ನಿಮ್ಗ್ ಸಿಗ್ಬೇಕಿತ್ರೀ ...." ಅಂದ......... " ಯಪ್ಪಾ ಮಹಾರಾಯ... ನಿನ್ನನ್ನೂ ನಾನು ತುಂಬಾ ದಿನದಿಂದ ಹುಡುಕುತ್ತಾ ಇದ್ದೇನೆ...... ನೀನು ಎಲ್ಲೇ ಇರು ..... ಅಲ್ಲೇ ನಿಂತಿರು.... ಅರ್ಧ ಘಂಟೆಯಲ್ಲಿ ಅಲ್ಲಿರುತ್ತೇನೆ" ಎನ್ನುತ್ತಾ ಹೊರಗೋಡಿ ಬಂದೆ..... ಕಾರಿನಲ್ಲಿ ಕುಳಿತವನೆ " ನಡಿ.... ಪಂಪ್ವೆಲ್ ಸರ್ಕಲ್ ಕಡೆ.. ಅರ್ಜಂಟ್ " ಎಂದೆ..... ಕಾರು ಓಡುತ್ತಿತ್ತು ಪಂಪ್ ವೆಲ್ ಸರ್ಕಲ್ ಕಡೆ..... ನನ್ನ ನೆನಪು ಓಡುತ್ತಿತ್ತು ನನ್ನ ಭೂತಕಾಲದ ಕಡೆ......

 ನಾನು ಡಿಪ್ಲೋಮಾ ಮುಗಿಸಿದವನೇ ಕೆಲಸ ಸೇರಿದ್ದೆ..... ಆರ್. ಎನ್. ಶೆಟ್ಟಿಯವರ ಕಂಪನಿಯಲ್ಲಿ .....ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಅದಾಗಿತ್ತು... ಹೊಸದಾಗಿ ಸೇರಿದ್ದರಿಂದ ನನ್ನನ್ನು ರಾತ್ರಿಪಾಳಿಯ ಕೆಲಸ ಕೊಟ್ಟಿದ್ದರು....... ಊಟ ಮುಗಿಸಿ, ರಾತ್ರಿ ೮ ಕ್ಕೆ ಹೊರಡಬೇಕಿತ್ತು.... ರಾತ್ರಿ ಹೆಚ್ಚಿಗೆ ಕೆಲಸವಿರದೇ ಇರುತ್ತಲಿದ್ದರಿಂದ ಒಂದು ಟಿಪ್ಪರ್ ಇಡುತ್ತಿದ್ದರು..... ಅದಕ್ಕೆ "ಸ್ಟ್ಯಾಂಡ್ ಬೈ" ಗಾಡಿ ಎಂದು ಕರೆಯುತ್ತಿದ್ದರು.... ಏನಾದರು ತುರ್ತು ಕೆಲಸಕ್ಕೆ ಅದನ್ನು ಉಪಯೋಗಿಸಬೇಕಿತ್ತು..... ಅದಕ್ಕೆ ಒಬ್ಬ ಚಾಲಕನೂ ಇರುತ್ತಿದ್ದ..... ನಾನು ಹೊಸಬನಾದ್ದರಿಂದ ಅವನನ್ನು ಮಾತನಾಡಿಸಲು ಹೋಗಲಿಲ್ಲ..... ನನಗೆ ಗೊತ್ತಿತ್ತು ನನ್ನ ಸಂಬಳಕ್ಕಿಂತ ಅವನ ಸಂಬಳವೇ ಹೆಚ್ಚು ಎಂದು.... ನನಗೆ ಸಂಬಳ ಆಗ ೧೮೦೦ ರುಪಾಯಿ ಆದ್ರೆ ಅವನದು ೩೩೦೦..... ಮೆಕ್ಯಾನಿಕಲ್ ಸ್ಟಾಫ್ ಗೆ ಸ್ವಲ್ಪ ಹಮ್ಮು ಇದೆ ಎಂದು ನನ್ನ ಸಂಗಡಿಗರು ಮಾತನಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೆ..... ಅದಕ್ಕೇ ನಾನು ನನ್ನ ಕೆಲಸದಲ್ಲಿ ತಲ್ಲೀನನಾಗಿದ್ದೆ..." ಕಂಪನಿಗೆ ಹೊಸಬರೆನ್ರಿ " ಎಂದಂತಾಗಿ ತಿರುಗಿದೆ.... ಒಬ್ಬ ಸಪೂರ ಹುಡುಗ ನಿಂತಿದ್ದ....." ಹೌದು.... ಒಂದು ವಾರ ಆಯ್ತು...." ಎಂದೆ.... ಆತ ಸಂಭಾವಿತನಂತೆ ಕಂಡ....ತನ್ನ ಹೆಸರನ್ನ ಜಗದೀಶ್ ಎಂದು ಆತ ಪರಿಚಯ ಮಾಡಿಕೊಂಡ....

"ಊಟ ಆತೇನ್ರೀ ಸರ್ರ್.... ನಾ ಎನಾರ ತರ್ಲೇನ್ರಿ ತಿನ್ನಾಕೆ..." ಎಂದ ಆತ.....ನಾನು ಬೇಡ ಎಂದೆ.... ನನಗೆ ತುರ್ತಾಗಿ ಮನೆಗೆ ಫೋನ್ ಮಾಡಬೇಕಿತ್ತು.... ಹೊಸದಾಗಿ ಮನೆಯಲ್ಲಿ ಫೋನ್ ತೆಗೆದುಕೊಂಡಿದ್ದರು.....  ಮನೆಗೆ ಫೋನ್ ಮಾಡಿ ಅಪ್ಪ ಅಮ್ಮನ ಜೊತೆ ಮಾತನಾಡಬೇಕಿತ್ತು..... ಫೋನ್ ಮಾಡಬೇಕೆಂದರೆ ಐದು ಕಿಲೋಮೀಟರ್ ಹೋಗಬೇಕಿತ್ತು......ಅದಕ್ಕೆ ಆತನನ್ನು ಕರೆದು....." ಜಗದೀಶ್, ಮನೆಗೆ ಫೋನ್ ಮಾಡಬೇಕಿತ್ತು..... ಹೋಗೋಣ್ವಾ..." ಎಂದೆ....." ಅದ್ಕ್ಯಾಕ್ರೀ ಹೀಗ್ ಕೇಳ್ತಿರೀ..... ನಮ್ ಕೆಲ್ಸಕ್ಕೇ ಇಟ್ಟಿದ್ದು ಈ ಗಾಡೀನ.....ನಡಿರ್ರಿ....." ಎಂದವನೇ ಗಾಡಿ ಸ್ಟಾರ್ಟ್ ಮಾಡಿಯೇ ಬಿಟ್ಟ.... ನಾನು ಸುಮ್ಮನೇ ಹೋಗಿ ಕುಳಿತೆ..... ಟಿಪ್ಪರ್ ಒಳ್ಳೆ ಜೀಪ್ ತರಹ ಓಡಿಸುತ್ತಿದ್ದ..... ನಾನು ಗಟ್ಟಿಯಾಗಿ ಕುಳಿತಿದ್ದೆ..... ಐದು ನಿಮಿಷದಲ್ಲಿ ಎಸ್. ಟಿ ಡಿ. ಬೂತ್ ಎದುರಿಗೆ ನಿಂತಿದ್ದೆವು..... ದೊಡ್ಡ ಕ್ಯೂ ಇತ್ತು ಬೂತ್ ಎದುರಿಗೆ..... ನಾನೂ ನಿಂತೆ ಕ್ಯೂನಲ್ಲಿ...... ನನ್ನ ಹಿಂದೆ ಆತನೂ ನಿಂತ.... ಅರ್ಧ ತಾಸಿನ ನಂತರ ನನ್ನ ಪಾಳಿ ಬಂತು..... ಮನೆಯವರೆಲ್ಲರ ಜೊತೆ ಮಾತನಾಡಿ ನಾನು ಹೊರ ಬಂದೆ..... ಆತನೂ ಎಲ್ಲಿಗೋ ಮಾತನಾಡಿ ಬಂದ.... ನಾನು ಮೊದಲೇ ಗಾಡಿಯಲ್ಲಿ ಹೋಗಿ ಕುಳಿತಿದ್ದೆ....... ಆತ ದೊಡ್ಡದಾಗಿ ಹಾಡು ಹೇಳುತ್ತಾ ಬಂದ...." ಹೊಗೊಣೇನ್ರೀ..... ಸರ್ರ...." ಎಂದವನೆ ಗಾಡಿ ಸ್ಟಾರ್ಟ್ ಮಾಡಿದ....  ಟಿಪ್ಪರ್ ಮುಂದೆ ಒಂದು ಸೈಕಲ್ ನಿಂತಿತ್ತು........ ಸೈಕಲ್ ಪಕ್ಕಕ್ಕಿಡಲು ನಾನು ಕೆಳಗಿಳಿಯಲು ಹೋಗುವವನಿದ್ದೆ.....    " ಹೇ ಬಿಡ್ರೀ ಸರ್ರ..... ನೀವ್ಯಾಕ್ ಇಳಿತೀರ್ರೀ.... ತಡೀರ್ರಿ...... ಹಿಂದಕ್ಕ್ ತಗಿತಿನಿ ಗಾಡೀನ......" ಎಂದವನೇ ರಿವರ್ಸ್ ಗೇರ್ ಹಾಕಿ ಹಿಂದಕ್ಕೆ ಹೋದ..........." " ದಡಾಲ್......... ಕಟ್......ಕಟ್......" " ಎಂದು ದೊಡ್ದದಾಗಿ ಸದ್ದಾಯಿತು......

ಎದೆ ಒಂದು ಸಲ ನಿಂತಂತಾಯಿತು...... ಯಾರಾದರು ನಿಂತಿದ್ದಿರಬಹುದಾ....? .... ಅವರ ಮೇಲೆ ಗಾಡಿ ಹೋಗಿರಬಹುದಾ....? ಅವರೇನಾದರು ಸತ್ತು ಹೋದರೆ...? ನಾನು ಇಷ್ಟು ದೂರ ಗಾಡಿ ತೆಗೆದುಕೊಂಡು ಬಂದಿದ್ದೆ ತಪ್ಪು..... ಯಾರಿಗಾದರೂ ಗೊತ್ತಾದರೆ ನನ್ನ ಕೆಲಸ ಹೋಗುತ್ತದೆ...... ಕೆಳಗೆ ಇಳಿಯಲು ಮನಸ್ಸೇ ಆಗಲಿಲ್ಲ..... ಆತ ಸಲೀಸಾಗಿ ಕೆಳಗಿಳಿದು ಹೋಗಿ ಬಂದು..." ಬಜಾಜ್ ಸ್ಕೂಟರ್ ಮ್ಯಾಲ ನಮ್ ಗಾಡಿ ಹತೈತ್ರೀ ಸರ್ರ...... ನೀವೇನೂ ಇಳಿಬ್ಯಾಡ್ರೀ.... ನಾನ್ ಮಾತಾಡ್ ಬರ್ತೀನ್ರೀ..." ಎಂದವನೇ ಮತ್ತೆ ಹಿಂದುಗಡೆ ಹೋದ..... ನಾನು ನನ್ನ ಕಿಸೆಗೆ ಕೈ ಹಾಕಿದೆ...... ಕಿಸೆಯಲ್ಲಿ ಐವತ್ತು ರುಪಾಯಿ ಇತ್ತು...... ರೂಮಿನಲ್ಲಿದ್ದ ಏಳು ನೂರಾ ಐವತ್ತು ರುಪಾಯಿ ನೆನಪಾಯಿತು......  ಎನೋ ದೊಡ್ದ ಸಿರಿವಂತನ ಹಾಗೆ ಕೆಳಗಿಳಿದು ಹೋದೆ.....ಸ್ಕೂಟರ್ ಮಾಲಿಕ ಜಗದೀಶನ ಜೊತೆ ಜಗಳವಾಡುತ್ತಿದ್ದ..... " ಅಲ್ರೀ... ಹೋಗಿ ಹೋಗಿ ಟಿಪ್ಪರ್ ಹಿಂದಕ್ಕ್ ಯಾರಾದ್ರೂ ಗಾಡಿ ನಿಲ್ಲಿಸ್ತಾರೇನ್ರೀ....? ನಿಮ್ಗೂ ತಲಿ ಐತೋ ಇಲ್ವೋ..." ಎಂದು ರೇಗುತ್ತಿದ್ದನಾದರೂ ಅವನ ದ್ವನಿಯಲ್ಲಿ ತನ್ನದೇ ತಪ್ಪಿದೆ ಎನ್ನುವ ಭಾವ ಇತ್ತು...... ನಾನು ಎನೂ ಮಾತನಾಡುತ್ತಿರಲಿಲ್ಲ..... ಯಾಕಂದ್ರೆ , ನನ್ನ ಹತ್ತಿರ ದುಡ್ಡೂ ಇರಲಿಲ್ಲ.... ನಮ್ಮದೇ ತಪ್ಪಿದೆ ಎನ್ನುವ ಅಭಿಪ್ರಾಯವು ನನ್ನದಿತ್ತು.....  ಹಾಗಾಗಿ ನಾನು ಸುಮ್ಮನಿದ್ದೆ......  " ನೀವ್ ಹೋಗ್ ಕುಂದರ್ರೀ ಸರ್ರ್..... ನಾ ಮಾತಾಡ್ ಬರ್ತೀನ್ರಿ. " ಎಂದ ಜಗದೀಶ.... ನಾನು ಸುಮ್ಮನೆ ಹೋದೆ....

ಸ್ವಲ್ಪ ಹೊತ್ತಿನಲ್ಲಿ ಬಂದು ಕುಳಿತ......ಟಿಪ್ಪರ್ ಸ್ಟಾರ್ಟ್ ಮಾಡಿದ..... ಮುಖ ಸ್ವಲ್ಪ ಗಂಭೀರವಾಗಿತ್ತು.... ನಾನು ಸ್ವಲ್ಪ ಅಳುಕುತ್ತಲೇ ಕೇಳಿದೆ.... " ಏನಾಯ್ತು...? "
" ಏನಿಲ್ರೀ ಸರ್ರ್....ಅವ್ನಿಗೆ ಹಣ ಕೊಡ್ತೀನಿ ಅಂದೀನ್ರಿ...... ಸುಮ್ನೆ ಹ್ವಾದ....." ನಾನು ಅಳುಕುತ್ತಲೇ " ಎಷ್ಟು....? " ಎಂದು ಕೇಳಿದೆ...... ಆತ " ನಾಲ್ಕು ಸಾವಿರ ಅಷ್ಟೇರಿ...." ಅಂದ ಎನೂ ಟೆನ್ಶನ್ ಇಲ್ಲದೇ...... ನನ್ನ ಉಸಿರು ನಿಂತಿತು..... ನನ್ನ ಗಣೀತ ಮೊದಲೇ ವೀಕ್...... ನಾಲಿಗೆ ಆಗಲೇ ನಾಲ್ಕು ಸಾವಿರವನ್ನು ನನ್ನ ತಿಂಗಳ ಸಂಬಳದಿಂದ ಬಾಗಿಸಲು ಶುರು   ಮಾಡಿತ್ತು..... ಹೇಗೆ ಬಾಗಿಸಿದರೂ ನನ್ನ ಎರಡು ತಿಂಗಳ ಸಂಬಳಕ್ಕಿಂತ ಹೆಚ್ಚು ಬೇಕಾಗಿತ್ತು..... ನನ್ನಲ್ಲಿ ಮಾತನಾಡಲು ಎನೂ ಇರಲಿಲ್ಲ...... ಮಾತನಾಡಿದರೆ ನಾನು ಹಣ ಹಂಚಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ ಎನಿಸಿ ಸುಮ್ಮನೆ ಕುಳಿತೆ.... ಕಂಪನಿಯ ಜೊತೆ ಮಾತನಾಡಿ ಹಣ ಕೊಡಿಸೋಣ ಎಂದರೆ ಗಾಡಿ ಹೊರಗಡೆ ತಂದಿದ್ದೇ ತಪ್ಪಾಗಿತ್ತು.... ಹಣವಿರದೇ ನಾನು ಅಸಹಾಯಕನಾಗಿದ್ದೆ..... ಆತನಿಗೆ ಸಹಾಯ ಮಾಡದ ಪರಿಸ್ಥಿತಿಯಲ್ಲಿದ್ದೆ.....

ಜಗದೀಶ ಸ್ಕೂಟರ್ ರಿಪೇರಿ ಮಾಡಿಸಿ ತಂದು ಕೊಟ್ಟಿದ್ದಾನೆ ಎಂದು ಕೇಳಿ ತಿಳಿದಿದ್ದೆ..... ಆದ್ರೆ ಆತನಿಗೆ ಏನೂ ಸಹಾಯ ಮಾಡಲಾಗದೇ ಇದ್ದುದಕ್ಕೆ ನನಗೆ ಪಾಪಪ್ರಜ್ನೆ ನನ್ನನ್ನು ಕಾಡುತ್ತಿತ್ತು..... ನಂತರದ ದಿನಗಳಲ್ಲಿ ಆತ ನನ್ನ ಎದುರಿಗೆ ಬಂದರೂ ನನಗೆ ಮುಜುಗರವಾಗುತ್ತಿತ್ತು.... ಹಣ ಸಹಾಯ ಮಾಡೊಣವೆಂದರೂ ನನಗೆ ಆ ಸ್ಥಿತಿ ಇರಲಿಲ್ಲ...... ಸುಮಾರು ದಿನದ ನಂತರ ಆತನ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿತ್ತು..... ಇದರ ನಂತರ ನನ್ನ ಪಾಪಪ್ರಜ್ನೆ ಇನ್ನೂ ಹೆಚ್ಚಾಗಿತ್ತು..... ಆತನಿಗೆ ಏನಾದರೂ ಸಹಾಯ ಮಾಡಬೇಕಿತ್ತು ಎನ್ನುವ ನನ್ನ ಒಳಮನಸ್ಸು ಚುಚ್ಚುತ್ತಿತ್ತು...... ಆದರೆ ಆತನ ವಿಳಾಸ ತಿಳಿಯದೇ ಪೇಚಿಗೆ ಸಿಲುಕಿದ್ದೆ.... ಏನೂ ಮಾಡಲು ಆಗದೇ ಒದ್ದಾಡುತ್ತಿದ್ದೆ..... ಆತನಿಗೆ ಸಿಕ್ಕು ಕ್ಷಮಾಪಣೆ ಕೇಳಬೇಕು ಎಂದು ತುಂಬಾ ದಿನದಿಂದ ಆಶಿಸುತ್ತಿದ್ದೆ.......

ಇದೆಲ್ಲಾ ನಡೆದು ಹನ್ನೆರಡು ವರ್ಷವಾಗಿತ್ತು....


ಆತನನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕೆಂದುಕೊಂಡ  ದಿನ ಬಂದೇ ಬಿಟ್ಟಿತ್ತು.....

" ಸರ್, ಎಲ್ಲಿಗೆ ಹೋಗಬೇಕು " ಎಂದು ಕೇಳುತ್ತಿದ್ದ ಕಾರ್ ಡ್ರೈವರ್..... ನಾನು  ಹೋಟೆಲ್ ಕಡೆ ಕೈ ತೋರಿಸಿ, ತಲೆ ಹೊರಗಡೆ ಹಾಕಿ ಆತನನ್ನು ಹುಡುಕುತ್ತಿದ್ದೆ.... ಆತ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ.... ಕಂಡ ಕೂಡಲೇ ಅಕ್ಷರಶಃ ಕೆಳಗೆ ಜಿಗಿದು ಓಡಿದೆ.... ಅವನನ್ನು ಬಿಗಿದುಹಿಡಿದೆ...... ಆತನಿಗೆ ನನ್ನ ಗುರುತು ಹಿಡಿಯಲು ಸ್ವಲ್ಪ ಸಮಯ ಹಿಡಿಯಿತು.... ನಾನು ಆತನ ಕೈ ಬಿಡದೇ ಕೇಳಿದೆ....." ಹೇಗಿದ್ದೀಯಾ...... ? ಕೆಲಸ ಮಾಡ್ತಾ ಇದೀಯಾ....? ಹೇಗಿದೆ ನಿನ್ನ ಲೈಫ್...? ಮದುವೆಯಾಗಿದೆಯಾ...? " ಎಂದೆಲ್ಲಾ ಕೇಳುತ್ತಲಿದ್ದೆ....... ಆತ ಶಾಂತವಾಗಿ..." ಎಷ್ಟ್ ಪ್ರಶ್ನಿ ಕೇಳ್ತೀರ್ರಿ ಸರ್ರ್...... ಅಲ್ಲಾ, ಎಟ್ ಚೇಂಜ್ ಆಗೀರ್ರೀ...... ನಾ ಆರಾಮ್ ಅದೀನ್ರೀ..... ಸರಕಾರಿ ಕೆಲ್ಸಾರ್ರೀ...... ಕೆ. ಎಸ್. ಆರ್.ಟಿ. ಯಾಗ್ ಡ್ರೈವರ್ ಆಗಿನ್ರೀ....... ನಿಮ್ ನಂಬರ್ ನಿಮ್ ದೋಸ್ತ್ ಒಬ್ರು ಕೊಟ್ರೀ...... ಅದಕ್ ಫೋನ್ ಮಾಡೀನ್ರೀ....." ನನಗೆ ಹಾಲು ಕುಡಿದ ಹಾಗಾಯಿತು....... ಆತನನ್ನು ಭೇಟಿಯಾಗಿ ಮಾತನಾಡಿದ್ದೆ ನನ್ನ ಅರ್ಧ ಪಾಪಪ್ರಜ್ನೆ ಯನ್ನು ಕಡಿಮೆ ಮಾಡಿತ್ತು.......

ಆತನ ಜೊತೆ ಊಟ ಮಾಡಿದೆ.....ಸ್ವಲ್ಪ ಸಿಹಿ ತಿಂಡಿ ಕಟ್ಟಿಸಿ ಕೊಟ್ಟೆ...... ಮನೆಗೆ ತೆಗೆದುಕೊಂಡು ಹೋಗಲು ಹೇಳಿದೆ...... ಕೊನೆಯದಾಗಿ ಕೇಳಿದೆ....." ಜಗದೀಶ್, ಆ ದಿನ ನನ್ನ ಕೈಯಲ್ಲಿ ದುಡ್ಡಿರಲಿಲ್ಲ..... ಆ ಬಗ್ಗೆ ನಿನ್ನ ಜೊತೆ ಮಾತನಾಡಿದರೆ ನೀನೆಲ್ಲಿ ಹಣ ಕೇಳುತ್ತೀಯೆನೋ ಎಂದು ನಿನ್ನನ್ನು ಮಾತನಾಡಿಸಿರಲಿಲ್ಲ ಆಗ.... ತಪ್ಪಾಯ್ತು ಕಣೋ..... ಕ್ಷಮಿಸಿಬಿಡು" ಇಷ್ಟು ಹೇಳುವಷ್ಟರಲ್ಲೇ ನನ್ನ ಧ್ವನಿ ತೇವವಾಗಿತ್ತು......" ಹೇ.... ಬಿಡ್ರೀ.... ಸರ್ರ, ನಿಮ್ ಜಾಗ್ದಾಗ್ ನಾನಿದ್ರೂ ಅದೇ ಮಾಡ್ತಿದ್ನೋ ಏನೋ....ಅದ್ಯಾಕೆ ನೆನಪ್ ಮಾಡ್ತೀರ್ರೀ ಈಗ...... ಬಿಡ್ರಲ್ಲಾ...... " ಎಂದ ಶಾಂತವಾಗಿ...... ನನಗೆ ಇನ್ನೂ ಕೇಳಬೇಕಿತ್ತು....... ನಾನು " ಜಗದೀಶ್, ಆ ಹಣ ನಾನು ಕೊಡಲಾ..... ಹೀಗೆ ಕೇಳ್ತಾ ಇದೀನಿ ಅಂತ ಬೇಸರ ಮಾಡಿಕೊಳ್ಳಬೇಡ..." ಎಂದು ಕೇಳಿದೆ ಜೀವವನ್ನು ಹಿಡಿ ಮಾಡಿಕೊಂಡು.....  " ಸರ್ರ.... ಬಿಡ್ರೀ.... ದೇವ್ರು ನಂಗೆ ಒಳ್ಳೇದೆ ಮಾಡ್ಯಾನ್ರೀ....ದುಡ್ಡು ಗಿಡ್ದು ಏನೂ ಬ್ಯಾಡ್ರೀ......ನಿಮ್ಮ ಒಳ್ಳೆ ಮನ್ಸು ಹೀಗೇ ಇರಲ್ರೀ....." ನನ್ನ ಮನಸ್ಸು ತುಂಬಿ ಬಂತು...... ಗಟ್ಟಿಯಾಗಿ ತಬ್ಬಿಕೊಂಡೆ......


                          (ಜಗದೀಶನ ಜೊತೆ  "ಅರ್ಧಚಂದ್ರ ತೇಜಸ್ವಿ" ಯ ಅರ್ಧ ಫೋಟೊ....)

Sep 16, 2010

ಬರೀ ಬಿಳುಪು.....!

ವಾಕಿಟಾಕಿಯಲ್ಲಿ ಸಂದೇಶ ಬರುತ್ತಲೇ ಇತ್ತು......
"ನೀರು ಮೇಲೇರುತ್ತಲೇ ಇದೆ ಸರ್..... ಬೇಗ ಹೊರಟುಬಿಡಿ...."

ಅಣೇಕಟ್ಟಿನಿಂದ ಹೊರಬಿಟ್ಟ ನೀರು ನನಗೆ ಸರಕಾರ ಕೊಟ್ಟ ಮನೆಯ ಒಳಗೆ ಹೊಕ್ಕಿತ್ತು...... ಮಕ್ಕಳು ಹೆಂಡತಿಯನ್ನು ತವರುಮನೆಗೆ ಕಳುಹಿಸಿ ನಾನು ಮುಳುಗುತ್ತಿರುವ ಮನೆಯಿಂದ ಅವಶ್ಯಕ ಮತ್ತು ಪ್ರಮುಖ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೆ......


ಹೆಂಡತಿಯ ಇಷ್ಟದ ಕಸೂತಿಯ ಪರದೆಗಳು,ಟಿಪಾಯಿಯ ಮೇಲೆ ಹಾಕಿದ ಹೊದಿಕೆ, ಎಲ್ಲವನ್ನೂ ತೆಗೆದುಕೊಂಡಿದ್ದೆ.....
ನನ್ನನ್ನು ಇಷ್ಟಪಡುವ ಹೆಂಡತಿಯ , ನನಗಾಗಿ ಏನನ್ನಾದರೂ ಮಾಡಲು ರೆಡಿಯಾಗಿರುವ ನನ್ನಾಕೆಗೆ ಇದನ್ನಾದರೂ ಮಾಡಬೇಕಾಗಿತ್ತು....

ಸೆಲ್ ಫೊನ್ ರಿಂಗಣಿಸಿತು....
ನೋಡಿದೆ......
ನನ್ನವಳ ಸುಂದರ ಚಿತ್ರದೊಡನೆ ಅವಳ ನಂಬರ್ ಇತ್ತು.....

"ಹೆದರಬೇಡ ಚಿನ್ನ... ನಾನು ಚೆನ್ನಾಗಿದ್ದೇನೆ.....ನಿನ್ನ ಎಲ್ಲಾ ಇಷ್ಟದ ವಸ್ತುಗಳನ್ನು ತೆಗೆದುಕೊಂಡಿದ್ದೇನೆ.... ಈಗಲೇ ಬಿಡುತ್ತಿದ್ದೇನೆ.... ಮಕ್ಕಳನ್ನು ಹೊರಗಡೆ ಬಿಡಬೇಡ" ಎಂದೆ....

"ರೀ......." ಅವಳು ಹೀಗೆ ಕರೆದರೇ ನನಗೆ ಇಷ್ಟ......." ನೀವು ಅಲ್ಲಿಂದ ಇನ್ನೂ ಹೊರಟಿಲ್ಲ ಎಂದಾದರೆ ನಿಮ್ಮ ಸಹಾಯಕರನ್ನಾದರೂ ಕಳಿಸಿ ಹಾಲ್ ನಲ್ಲಿರೋ ಶೊಕೇಸಿನಲ್ಲಿ ನನ್ನ ಅಪ್ಪ ನಿಮಗೆ ಕೊಟ್ಟಿರೊ ಚಿನ್ನದ ಸರ ಸರ ಇದೆ... ತೆಗೆದುಕೊಂಡು ಬನ್ನಿ" ಎಂದಳು......

"ಚಿನ್ನಾ, ನೀರು ತುಂಬಾ ಮೇಲೆರುತ್ತಿದೆ ಕಣೇ..... ನನ್ನ ಸೊಂಟದವರೆಗೂ ಬಂದಿದೆ ನೀರು..... ಈಗ ಹೆಲಿಕಾಫ್ಟರ್ನಿಂದ ಕೆಳಗೆ ಕಾಲಿಟ್ಟರೂ ಕಷ್ಟ ಕಣೇ...." ಎಂದೆ.... "ಸರಿ ನಿಮ್ಮಿಷ್ಟ .. ಬೇಗ ಬನ್ನಿ" ಎಂದು ಹೇಳಿ ಇಟ್ಟಳು.....

 ಆಡಳಿತ ಸೇವೆಯ ಸ್ಪರ್ದಾತ್ಮಕ ಪರೀಕ್ಶೆಯಲ್ಲಿ ಪ್ರಥಮ ಸ್ಥಾನ ಪಡೆದಾಗ ನನ್ನ ಮಾವ ಕೊಟ್ಟ ಚಿನ್ನದ ಸರ ಅದು.... ಆ ಸರದಲ್ಲಿ ನನ್ನ ಹುಡುಗಿ ಕೊಟ್ಟ...  ಲೊಕೆಟ್ ಇತ್ತು......

ಲೊಕೆಟ್ ನೆನಪಾದ ಕೂಡಲೇ ಹೆಲಿಕಾಫ್ಟರ್ನಿಂದ ಕೆಳಕ್ಕೆ ಧುಮುಕಿದೆ..... ನೀರು ಸೊಂಟದವರೆಗೂ ಇತ್ತು..... ನನ್ನ ಜೊತೆ ನನ್ನ ಸಹಾಯಕನೂ ಧುಮುಕಿದ... " ಸರ್, ಹೋಗಬೇಡಿ..ಏನು ಬೇಕು ಹೇಳಿ ನಾನೇ ತರುತ್ತೇನೆ ಸರ್..... ನೀರು ತುಂಬಾ ಜೋರಾಗಿದೆ ಸರ್.."

ನನಗೇನೂ ಕೇಳಿಸುತ್ತಿರಲಿಲ್ಲ....

 ನನಗೆ ಎಲ್ಲಾ ನೆನಪಾಯಿತು.........

ಸ್ಪರ್ಧಾತ್ಮಕ ಪರೀಕ್ಶೆಯ ಕೊನೆಯ ದಿನ ಆ ಹುಡುಗಿ ಕೊಟ್ಟಿದ್ದಳು.....

ನನಗೆ ಉತ್ತೇಜನ ಕೊಟ್ಟವಳು ಅವಳು...

ಅವಳ ನಗೆ ನನಗೆ ಖುಷಿ ಕೊಟ್ಟಿತ್ತು.....

ಅವಳ ಸನಿಹ ನನಗೆ ಹಿತ ನೀಡುತ್ತಿತ್ತು....

ನನ್ನ ಗೆಲುವು ಅವಳಿಗೆ ಮುದ ನೀಡುತ್ತಿತ್ತು.....

ನಮ್ಮ ಸಂಬಂಧಕ್ಕೆ ಹೆಸರು ಇರದೇ ಇದ್ದರೂ ನನಗೆ ಅವಳು ನನ್ನ ಸ್ಪೂರ್ತಿಯಾಗಿದ್ದಳು..... ನಮ್ಮ ಕೊನೆಯ ದಿನ ಅವಳದೊಂದು ಕಪ್ಪು ಬಿಳುಪಿನ ಚಿತ್ರ ಮತ್ತು ಚಿನ್ನದ ಲೊಕೆಟ್ ಕೊಟ್ಟು .... ಕಣ್ಣಲ್ಲಿ ನೀರು ತುಂಬಿಕೊಂಡು ಓಡಿ ಹೋಗಿದ್ದಳು ಹುಡುಗಿ....
ತಿರುಗಿ ಕೂಡ ನೋಡದೆ.......

ನನ್ನ ಕೈಯಿ ನನ್ನ ಕಿಸೆಯ ಮೇಲೆ ಇತ್ತು.....

ಅದರಲ್ಲಿದ್ದ ಅವಳ ಫೋಟೊ ನನಗೆ ಹಿತ ನೀಡುತ್ತಿತ್ತು...

ಅವಳು ಕೊಟ್ಟ ಲೊಕೆಟ್ , ನನ್ನ ಮಾವ ಕೊಟ್ಟ ಸರದ ಜೊತೆ ಸೇರಿ ನನಗೆ ಸ್ಪೂರ್ತಿ ಕೊಡುತ್ತಿತ್ತು.... ಅದನ್ನು ಧರಿಸಿದಾಗ ನನ್ನಾಕೆಯ ಸಂಭ್ರಮ ತೀರದಾಗಿತ್ತು....ಅವಳಿಗಾಗಿ ನಾನು ಅದನ್ನು ದಿನಾಲೂ ಧರಿಸುತ್ತಿದ್ದೆ..... ಅವಳಿಗೆ ತಿಳಿದಿರಲಿಲ್ಲ ನಾನು ಅದನ್ನು  ಧರಿಸುತ್ತಿದ್ದುದು ಆ ಹುಡುಗಿಯ ಲೊಕೆಟ್ ಗಾಗಿ ಎಂದು......

ಹೆಂಡತಿಗೆ ಮೋಸ ಮಾಡುತ್ತಿದ್ದೆನಾದರೂ ಮನಸ್ಸು ಅದಕ್ಕೆ 'ಮೋಸ'ದ ಹೆಸರು ಕೊಟ್ಟಿರಲಿಲ್ಲ.....

ಮನೆಯ ಅರ್ಧ ಬಾಗಿಲಿನವರೆಗೆ ನೀರು ತುಂಬಿತ್ತು.... ರಬಸ ಕೂಡ ಹೆಚ್ಚಿತ್ತು.....

ಒಳ ಮನಸ್ಸು ಯೊಚಿಸುತ್ತಿತ್ತು....
" ಆ ಹುಡುಗಿ ನನ್ನನ್ನು ಮರೆತು ಯಾರ ಜೊತೆಗೋ ಸುಖವಾಗಿ ಇರಬಹುದು.....
 ಅವಳು ನನಗೆ ಕೊಟ್ಟ ಕಾಣಿಕೆ ಗೌರವದಿಂದಲೂ ಇರಬಹುದು..
ಆ ಹುಡುಗಿ ಎಂದೋ ಕೊಟ್ಟ ಗಿಫ್ಹ್ಟ್ ಸಲುವಾಗಿ ನಾನು ನನ್ನ ಇವತ್ತಿನ ಜೀವನ ದಾಳವಾಗಿ ಇಡುವುದು ತಪ್ಪು...."

ಆದರೆ ಕಳ್ಳ ಬುದ್ದಿ ಇದನ್ನೆಲ್ಲಾ ಒಪ್ಪಲು ಸಿದ್ದವಿರಲಿಲ್ಲ..... ತುಂಬಾ ಕಷ್ಟಪಟ್ಟು ಮನೆಯ ಒಳಗೆ ಹೋಗಿ ಲೊಕೆಟ್ ಜೊತೆಗೆ ಸರವನ್ನು ಹಿಡಿದಾಗ ಮನಸ್ಸು ಹಗುರಾಗಿತ್ತು.....

ಸಹಾಯಕನ ಜೊತೆ ಸಾವಧಾನವಾಗಿ ನಡೆದು ಬಂದು ಹೆಲಿಕಾಫ್ಟರ್ ಹತ್ತಿ ಕುಳಿತೆ.....

ನೀರು ಅಪಾಯದ ಮಟ್ಟಕ್ಕೆ ಮುಟ್ಟಿದ್ದರಿಂದ ಪೈಲಟ್ ಕೂಡಲೇ ಸ್ಟಾರ್ಟ್ ಮಾಡಿ ಹೊರಟ.....

ಯಾಕೋ ಮನಸು ಆ ಹುಡುಗಿಯ ಸುತ್ತಲೆ ಗಿರಗಿಟ್ಲೆಯಾಡುತ್ತಿತ್ತು.....

ಹೆಂಡತಿಯ ತವರು ಮನೆಯ ಸಮೀಪ ಹೆಲಿಕಾಫ್ಟರ್ ಲ್ಯಾಂಡ್ ಮಾಡಿದರೂ ನನಗೆ ಇಳಿಯುವ ಮನಸ್ಸಿರಲಿಲ್ಲ...... ಕೈಯಲ್ಲಿನ ಲೊಕೆಟ್ ನನ್ನನ್ನು ಬ್ರಮಾಲೋಕಕ್ಕೆ ಕರೆದೊಯ್ದಿತ್ತು.....

ಇನ್ನೂ ಸ್ವಲ್ಪ ಹೆಲಿಕಾಫ್ಟರ್ನಲ್ಲೇ ಕುಳಿತಿರಲು ನೆವ ಬೇಕಿತ್ತು... ಅದಕ್ಕಾಗಿ ಅಲ್ಲೇ ಕುಳಿತು  ಹೆಂಡತಿಯ ಇಷ್ಟದ ಒಂದೊಂದೇ ವಸ್ತುಗಳನ್ನು ಕೆಳಕ್ಕೆ ಇಳಿಸಿ ಕಳಿಸುತ್ತಿದ್ದೆ...

 ಬಾಗಿಲಲ್ಲೆ ನಿಂತಿದ್ದ ನನ್ನಾಕೆ ಅವೆಲ್ಲವನ್ನು ಕಿರುಗಣ್ಣಿಂದಲೂ ನೋಡದೆ ಒಳಗೆ ಕಳಿಸುತ್ತಿದ್ದಳು.....

ನಾನು ದೂರದಿಂದಲೇ ಇದನ್ನೆಲ್ಲಾ ಗಮನಿಸುತ್ತಿದ್ದೆ.....   ತುಂಬಾ   ಕಷ್ಟಪಟ್ಟು ಅವಳ ಇಷ್ಟದ ವಸ್ತುಗಳನ್ನು ತಂದಿದ್ದೆ...... ಇವಳ್ಯಾಕೆ ಅದರ ಬಗ್ಗೆ ಗಮನವನ್ನೂ ಹರಿಸುತ್ತಿಲ್ಲ.....

ಇವಳಿಗೇನಾದರೂ ನನ್ನ ಲೊಕೆಟ್ ಕಥೆ ಗೊತ್ತಿದೆಯಾ....? ನನ್ನನ್ನು ಪರೀಕ್ಶೆ ಮಾಡಲೇ ಸರ ತರಲು ಹೇಳಿರಬಹುದಾ...?

ಅಷ್ಟು ತಂಪು ವಾತಾವರಣದಲ್ಲೂ ಸಣ್ಣಗೆ ಬೆವೆತೆ....

ಮನಸ್ಸು ಕೆಡುಕು ಯೊಚಿಸುತ್ತಿತ್ತು......

ಏನಾದರಾಗಲಿ ಎಂದು ಅವಳತ್ತ ನಡೆದೆ.....

ನನ್ನ ಕೈಲಿದ್ದ ಫೊಟೊ ಅಲ್ಬಂ ಅವಳು ತೆಗೆದುಕೊಂಡಳು....

ನನ್ನ ಎದೆ ಬಡಿತ ನನಗೇ ಕೇಳಿಸುತ್ತಿತ್ತು.....

ಅವಳು ನನ್ನನ್ನೇ ನೋಡುತ್ತಿದ್ದಳು....

" ನೋಡಮ್ಮಾ, ನಿನಗೆ ಬೇಕೆಂದಿದ್ದ ಎಲ್ಲಾ ವಸ್ತುಗಳನ್ನು ತಂದಿದ್ದೇನೆ..... ಕಸೂತಿಯ ಪರದೆಗಳು, ನಿನ್ನ ನೆಚ್ಚಿನ ಅಡುಗೆ ಸಾಮಾನು, ಮಕ್ಕಳ ಫೋಟೊ ಆಲ್ಬಂ ಎಲ್ಲಾ ತಂದಿದ್ದೇನೆ......ನೀನು ಹೇಳಿದ ಹಾಗೆ ಮಾವನವರು ಕೊಟ್ಟ ಸರ ತರಲು ನಾನು ತುಂಬಾ ಪ್ರಯಾಸಪಟ್ಟೆ ಗೊತ್ತಾ..."

ನನಗೆ ಗೊತ್ತಿತ್ತು ನಾನು ಸರ ತರಲು ಯಾಕೆ ಹೋಗಿದ್ದು ಎಂದು...

ಆದರೆ ಮೂಳೆ ಇಲ್ಲದ ನಾಲಿಗೆ ಸುಳ್ಳು ಹೇಳುತ್ತಿತ್ತು....

ಅವಳು ಕೈಲಿದ್ದ ಆಲ್ಬಂ ಬಿಸಾಡಿಬಿಟ್ಟಳು.....

ಸುತ್ತಲಿದ್ದ ಜನರನ್ನೂ ಲೆಕ್ಕಿಸದೇ ನನ್ನನ್ನು ಬಿಗಿದಪ್ಪಿದಳು......

" ಅಲ್ಲಾರೀ... ನನಗೇನೂ ಬೇಡಾರಿ...... ನಿಮ್ಮ ಜೀವಕ್ಕಿಂತ ಹೆಚ್ಚಾ ಈ ವಸ್ತುಗಳು ನನಗೆ.... ಅಪ್ಪ ಕೊಟ್ಟ ಸರ ತರಲು ನೀವು ನೀರಲ್ಲಿ ಹೋದ ವಿಷಯ ನಿಮ್ಮ ಸಹಾಯಕ ಹೇಳಿದಾಗ ನನ್ನ ಜೀವ ಬಾಯಿಗೆ ಬಂದಿತ್ತುರೀ........ ನನಗೇನೂ ಬೇಡಾರೀ..... ನೀವು ಬಂದಿರಲ್ಲ..... ಅಷ್ಟೇ ಸಾಕು .. " ಎಂದು ಬಿಗಿದಪ್ಪಿದಳು.....

ಇಷ್ಟು ಪ್ರೀತಿಸುವ ಹೆಂಡತಿ ಬಿಟ್ಟು ನಾನು ಎನೇನೋ ಯೋಚಿಸಿಬಿಟ್ಟೆನಲ್ಲಾ.......

ಇವಳ ಪ್ರೀತಿ ಬಿಟ್ಟು ನಾನು  ಎಂದೋ ಕೊಟ್ಟ ಗಿಫ್ಟ್ ,ಅದನ್ನು ಕೊಟ್ಟ ಹುಡುಗಿಯನ್ನು ನೆನಸಿಕೊಂಡು ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೆನಲ್ಲಾ.....
ನನ್ನ ಜೊತೆ ನನ್ನ ಸಂಸಾರಕ್ಕೂ , ಮಕ್ಕಳ ಭವಿಷ್ಯಕ್ಕೂ ಹೆಣಗಾಡುತ್ತಿರುವ ನನ್ನಾಕೆಯ ಬಿಟ್ಟು ಆ ಹುಡುಗಿಯ ನೆನಪು ಮಾಡಿಕೊಳ್ಳುವುದು ನನಗೆ ನಾನೇ ಮಾಡಿಕೊಳ್ಳುವ ಮೋಸ ಎನಿಸಲು ಶುರು ಆಯಿತು......

ಹೌದು ಇದಕ್ಕೆಲ್ಲಾ ಒಂದು ಅಂತ್ಯ ಹಾಡಲೇ ಬೇಕು....

ನನ್ನಾಕೆಗೆ ಸಮಾಧಾನ ಮಾಡಿ ಬಟ್ಟೆ ಬದಲಾಯಿಸಲು ನನ್ನ ರೂಮಿಗೆ ಬಂದೆ......

ಇಷ್ಟು  ಪ್ರೀತಿಯಿಂದ.. ಮಮತೆಯಿಂದ ನೋಡಿಕೊಳ್ಳುವ ನನ್ನಾಕೆಯ ಎದುರು ನಾನು  ಬಹಳ ಸಣ್ಣವನಾಗಿ ಬಿಟ್ಟಿದ್ದೆ .

    ಶರ್ಟ್ ಕಿಸೆಯಲ್ಲಿದ್ದ ಆ ಹುಡುಗಿಯ ಫೊಟೊ ನನ್ನ ಚಿತ್ತ ಕೆಣಕುತ್ತಿತ್ತು.....
    ಬೇಡ....
    ಬೇಡ....
    ಇನ್ನೆಂದೂ ಅವಳ ನೆನಪು ಮಾಡಿಕೊಳ್ಳಬಾರದು....
    ನನ್ನಾಕೆಗೆ ಮೋಸ ಮಾಡಬಾರದು......

    ಕಿಸೆಗೆ ಕೈಹಾಕಿ ಫೊಟೊ ಹೊರ ತೆಗೆದೆ......
    ಕೊರಳಲ್ಲಿದ್ದ ಲೊಕೆಟ್ ತೆಗೆದೆ....

    ಎರಡನ್ನೂ ಕಿಟಕಿಯ ಹೊರ ಬಿಸಾಡೋಣ ಎಂದುಕೊಂಡು ಕಿಟಕಿಯ ಪಕ್ಕ ಬಂದೆ......
    ಹೇಗೂ... ಫೋಟೋ  ಹೊರಗೆ ಎಸೆಯುತ್ತಿದ್ದೆ...

ನನ್ನ ಕಳ್ಳ ಮನಸ್ಸು  .... !!

ಒಮ್ಮೆ ನೋಡಿಬಿಡಬೇಕೆನ್ನುವ  ಆಸೆ ಜಾಸ್ತಿಯಾಯಿತು....

 ಇದೇ ಕೊನೆಯ ಸಾರಿಯಲ್ಲವಾ.... ಒಮ್ಮೆ ನೋಡಿ ಬಿಸಾಡೋಣ.......

ಹೊರಗೆ ತೆಗೆದೆ...

ಇಲ್ಲಿಯವರೆಗಿನ ನನ್ನ ಏಕಾಂತದಲ್ಲಿ...
ನನ್ನ ಒಂಟಿತನದ ಬೇಸರದಲ್ಲಿ.... ಕದ್ದು ಕದ್ದು    ಸಾಂತ್ವನ ಕೊಡುತ್ತಿದ್ದ   ಈ  ಫೋಟೋ...!!

    ಕೈಲಿದ್ದ ಫೋಟೊ ನೋಡಿದೆ........

    ಅಚ್ಚ ಬಿಳುಪಿತ್ತು........!!

    ಫೋಟೊ ಹಿಂಬದಿಯ ಬಿಳುಪಿರಬಹುದು ಎಂದು ತಿರುಗಿಸಿ ನೋಡಿದೆ.....

    ಅಲ್ಲೂ ಅಚ್ಚ ಬಿಳುಪಿತ್ತು.....!!

    ಆಗ ನೆನಪಾಯಿತು..... ಮಳೆಯಲ್ಲಿ ನೆನೆದಿದ್ದು.....



    ಕಿಸೆಯಲ್ಲಿನ ಫೋಟೊ ಒದ್ದೆಯಾದದ್ದು......


ಕಪ್ಪು ಬಿಳುಪು...
ಒದ್ದೆಯಾಗಿ...
 ಬರಿ ಬಿಳುಪು ಮಾತ್ರ  ಉಳಿದಿತ್ತು.... !






(ನನ್ನಲ್ಲಿ ಈ ಕಥೆಯನ್ನು ಬರೆಯಿಸಿದ ಪ್ರಕಾಶಣ್ಣನಿಗೆ ಈ ಕಥೆಯ ಶ್ರೇಯ ಸಲ್ಲುತ್ತದೆ..... ಕಥೆಯನ್ನು ತಿದ್ದಿ ತೀಡಿದ್ದಾರೆ.....
ತಪ್ಪಿದ್ದರೆ ಅದು ನನ್ನದು... )

Sep 4, 2010

ತಪ್ಪು ಯಾರದು..?

ನನ್ನ ಗುರಿ ತಲುಪಲು ಇನ್ನು ಐವತ್ತು ಕಿಲೊ ಮಿಟರ್ ಅಷ್ಟೇ ಇತ್ತು....... ಕಣ್ಣೂ ಜೊಂಪು ಹತ್ತಿತ್ತು........ ನನಗೆ ನಿದ್ದೆ ಬಂದರೆ ಅಷ್ಟೆ... ನನ್ನ ಸಂಗಡ ಪ್ರಯಾಣ ಮಾಡುತ್ತಿದ್ದವರೆಲ್ಲಾ ಶಿವನ ಪಾದ ಸೇರಬೇಕಾಗುತ್ತದೆ ಎಂದು ತಲೆ ಕೊಡವಿಕೊಂಡೆ.... ತಲೆ ಎತ್ತಿ ಮೇಲೆ ನೋಡಿದೆ, ಮೇಲೆ "ಭಾರತೀಯ  ರೈಲ್ವೆ " ಎಂದು ಬರೆದಿತ್ತು.... ಕೈಯಲ್ಲಿ ಮುಂಬಯಿ ಮಂಗಳೂರು ರೈಲಿನ ಚುಕ್ಕಾಣಿ ಇತ್ತು...... ಎರಡೂ ಕಡೆ ಇರುವ ಹಸಿರು ಮನವನ್ನು ಖುಶಿಗೊಳಿಸಿತ್ತು.... ತುಂಬಾ ದಿನದ ನಂತರ ರಜೆ ತೆಗೆದುಕೊಂಡು ಹೊಗುವವನಿದ್ದೆ ಈ ಪ್ರಯಾಣ ಮುಗಿಸಿ...... ಮನೆಯಲ್ಲಿ ಕಾಯುತ್ತಿರುವ ಹೆಂಡತಿ ಮಗನ ನೆನಪಾಗಿ ಸ್ವಲ್ಪ ವೇಗ ಜಾಸ್ತಿ ಮಾಡಿದೆ........ ರೈಲು ಉಡುಪಿ ಸ್ಟೇಷನ್ ಬಿಟ್ಟು ಮಂಗಳೂರು ಕಡೆ ಹೊರಟಿತ್ತು......ಈ ಸಾರಿ ಹೆಂಡತಿಯ ಜೊತೆ ವೈದ್ಯರಲ್ಲಿಗೆ ಹೋಗಿ ಎರಡನೇ ಮಗುವಿಗಾಗಿ ನಮ್ಮ ಪ್ರಯತ್ನದ ಬಗ್ಗೆ ತಿಳಿಸಿ ಅವರ ಸಲಹೆ ಕೇಳಬೇಕು..... ಮಗನ ಜೊತೆ ಆಟ ಆಡಲು ಒಬ್ಬಳು ಮಗಳು ಬಂದರೆ ಎಲ್ಲರಿಗೂ ಖುಶಿಯಾಗುತ್ತಿತ್ತು..... ಇದೆಲ್ಲಾ ಯೊಚನೆಯಲ್ಲಿ ಯಾವಾಗ ಸುರತ್ಕಲ್ ಬಂತೋ ತಿಳಿಯಲೇ ಇಲ್ಲ.... ಎರಡು ನಿಮಿಷದ ನಿಲುಗಡೆ ನಂತರ ಮುಂದಕ್ಕೆ ಹೊರಳಿಸಿದೆ ..... ಸ್ವಲ್ಪವೇ ದೂರದಲ್ಲಿ, ಇನ್ನೊಂದು ಸ್ಟೇಶನ್ ಕಟ್ಟುವ ಕೆಲಸ  ನಡೆಯುತ್ತಿತ್ತು...... ಸುತ್ತಲೆಲ್ಲಾ ಕಾಮಗಾರಿ ಕೆಲಸಗಾರರು ಗುಡಿಸಲು ಕಟ್ಟಿಕೊಂಡಿದ್ದರು..... ಮಕ್ಕಳೆಲ್ಲಾ ರೈಲಿನ ಹಳಿಯ ಪಕ್ಕದಲ್ಲೇ ಆಟವಾಡಿಕೊಂಡಿದ್ದರು.... ಎಂದಿನ ಹಾಗೆ ಮಕ್ಕಳಿಗೆ ಟಾಟಾ ಹೇಳಿದೆ..... ಅವರೂ ಕೂಡ ನನಗೆ ಟಾಟಾ ಮಾಡಿ ಕೂಗುತ್ತಿದ್ದರು....

ಈ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದೇ ಇವರೂ ಕೂಲಿ ಮಾಡಬೇಕಾಗುತ್ತದೆ.... ಇವರ ಪಾಲಕರಾದರೂ ಎಲ್ಲಿ ಅಂತ ಶಾಲೆಗೆ ಸೇರಿಸುತ್ತಾರೆ....ಇವತ್ತು ಇಲ್ಲಿ ಕೆಲಸ ಮಾಡಿದರೆ, ನಾಳೆ ಎಲ್ಲಿಯೊ..? ಅಪ್ಪ ಅಮ್ಮ ಇಬ್ಬರೂ ಕೆಲ್ಸ ಮಾಡದಿದ್ದರೆ ಸಂಜೆಗೆ ಗಂಜಿಯೇ ಗತಿ..... ಅನಕ್ಷರತೆ ಇವರನ್ನು ಸಂತಾನ ನಿಯಂತ್ರಣದ ಬಗ್ಗೆ  ಅರಿವು ದೊರಕಿಸಲೇ ಇಲ್ಲ.... ಒಬ್ಬರಿಗೆ ನಾಲ್ಕು ಐದು ಮಕ್ಕಳಿರುತ್ತಾರೆ.... ಹದಿನೈದು ವರ್ಷಕ್ಕೇ ಕೆಲಸಕ್ಕೆ ಸೇರಿಸುತ್ತಾರೆ..... ಇದರ ಬಗ್ಗೆ ಯೊಚಿಸುತ್ತಾ ಹೊರಟವನಿಗೆ ದೂರ ಹಳಿ ಮೇಲೆ ಯಾರೋ ನಡೆದು ಬರುವ ಹಾಗೆ ಕಂಡರು.....  "ಇದು ಯಾರಪ್ಪಾ..?" ಎಂದುಕೊಂಡೆ...... ಸ್ವಲ್ಪ ಹತ್ತಿರ ಬಂದೊಡನೆ ನಾಲ್ಕು ಜನ ಇದ್ದಂತೆ ಕಂಡಿತು...... ಹಳಿಯ ಪಕ್ಕದಲ್ಲೇ ನಿಂತಿದ್ದರು...... ನನ್ನ ರೈಲು ತುಂಬಾ ಸ್ಪೀಡ್ ಇತ್ತು.....ಇನ್ನೂ ಹತ್ತಿರ ಬರುತ್ತಲೇ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.... ಒಬ್ಬ ಗಂಡಸು, ಒಬ್ಬಳು ಹೆಂಗಸು, ಅವರಿಬ್ಬರ ಕೈಲಿ ಒಬ್ಬೊಬ್ಬರು ಮಕ್ಕಳು.... ಹೆಂಗಸಿನ ಕಂಕುಳಲ್ಲಿ ಇನ್ನೊಂದು ಮಗು ಕೂಡ ಇತ್ತು..... "ಇವರೇನು ಮಾಡ್ತಾ ಇದಾರೆ ಇಲ್ಲಿ" ಎನಿಸಿಕೊಂಡೆ....  ರೈಲು ಅವರ ಹತ್ತಿರಕ್ಕೆ ಬರುತ್ತಾ ಇತ್ತು......... ಗಂಡಸು , ಹೆಂಗಸಿಗೆ ಬೆನ್ನ ಮೇಲೆ ಹೊಡೆದ.... ಅವಳು ತನ್ನ ಕೈಲಿದ್ದ ಹುಡುಗನನ್ನು ಕರೆದುಕೊಂಡು ಹಳಿ ಮೇಲೆ ಮಲಗಿದಳು.... ನನಗೆ ಇದೇನೆಂದು ಅರ್ಥ ಆಗಲಿಲ್ಲ..... ರೈಲಿನ ಸ್ಪೀಡ್ ನೋಡಿದೆ..... ೧೨೫ ಇತ್ತು...... ಗಂಡಸು ಕೂಡ ಅವನ ಕೈಲಿದ್ದ ಮಗುವನ್ನು ಗಟ್ಟಿಯಾಗಿ ಹಿಡಿದು ಹಳಿ ಮೇಲೆಯೆ ಮಲಗಿದ...... ಆಕೆ ತನ್ನ ಕಂಕುಳಲ್ಲಿದ್ದ ಮಗುವನ್ನು ತನ್ನ ಮತ್ತು ಗಂಡಸಿನ ಮಧ್ಯೆ ಮಲಗಿಸಿಕೊಂಡಳು....ಪುಟ್ಟ ಕಂದನಾಗಿತ್ತು ಅದು........ನನಗೆ ಎನೂ ತೊಚಲೇ ಇಲ್ಲ..... ತಲೆ ಹೊರಗೆ ಹಾಕಿ ಕೂಗಿದೆ....." ಎದ್ದೇಳ್ರಲೆ, ಎನ್ ಮಾಡ್ತಾ ಇದ್ದೀರಾ..... ಎದ್ದೇಳಿ....." ನಾನು ಕೂಗುತ್ತಲೇ ಇದ್ದೆ..... ರೈಲಿನ ಸ್ಪೀಡ್ ೧೨೫ ಕ್ಕಿಂತ ಹೆಚ್ಚಿಗೆ ಇತ್ತು..... ಬ್ರೇಕ್ ಮೇಲೆ ಕಾಲಿಟ್ಟೆ...... ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ ಸಾವಿರಕ್ಕೂ ಹೆಚ್ಚಿತ್ತು.... ನಾನು ಇಷ್ಟು ಸಡನ್ ಆಗಿ ಬ್ರೇಕ್ ಒತ್ತಿದರೆ, ಹಿಂದಿದ್ದ ಬೋಗಿಗಳೆಲ್ಲ ತಲೆ ಮೇಲಾಗುತ್ತದೆ..... ಸಾವಧಾನವಾಗಿ ಬ್ರೇಕ್ ತುಳಿಯೊಣವೆಂದರೆ, ಅವರು ಮಲಗಿದ್ದ ಸ್ಥಳ ಹತ್ತಿರದಲ್ಲೇ ಇತ್ತು..... ಇನ್ನೊಮ್ಮೆ ತಲೆ ಹೊರಗೆ ಹಾಕಿ ಕೂಗಿದೆ.... ನನ್ನ ಪಕ್ಕದಲ್ಲಿದ್ದ ಸಿಗ್ನಲ್ ಹುಡುಗನೂ ಕೂಗಲು ಶುರು ಮಾಡಿದ....  " ಬೇಗ ಎದ್ದೇಳಿ, ಸಾಯುತ್ತೀರಾ " ......

ನನಗೆ ಎನೂ ಮಾಡಲು ತಲೆ ಹೊಳೆಯಲೇ ಇಲ್ಲ..... ನನ್ನ ಪಕ್ಕದ ಸಿಗ್ನಲ್ ಹುಡುಗ ಕೂಗುತ್ತಲೆ ಇದ್ದ.... ಆ ಗಂಡಸಿನ ಪಕ್ಕದಲ್ಲಿ ಮಲಗಿದ್ದ ಹುಡುಗ ಎದ್ದೇಳಲು ನೋಡಿದ .... ಆದರೆ ಆ ಗಂಡಸು ಆತನನ್ನು ಅಲ್ಲೇ ಅಮುಕಿ ಹಿಡಿದ...... ಇವರ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದಾರೆ..? ನಾನು ಏನು ಮಾಡಲಿ...? ಬ್ರೇಕ್ ಒತ್ತಿ ಬಿಡಲೆ...? ಇವರ ಮೇಲೆ ರೈಲು ಹತ್ತಿಸಿ ಬಿಡಲೇ....? ನನ್ನ ತಲೆ ಗೊಂದಲದ ಗೂಡಾಗಿತ್ತು....... ಬ್ರೇಕ್ ಒತ್ತಿದರೆ ಪ್ರಯಾಣಿಕರೆಲ್ಲಾ ಸಾಯುತ್ತಾರೆ...... ನನ್ನ ಕಾಲು ನಿಧಾನವಾಗಿ ಬ್ರೇಕ್ ಒತ್ತಲು ಶುರು ಮಾಡಿತ್ತು.... ಈ ಮಧ್ಯೆ ಆ ಹೆಂಗಸು ತಲೆ ಎತ್ತಿ ನೋಡಿದಳು..... ನಾನು ತಲೆ ಹೊರಗೆ ಹಾಕಿ, ಕೈ ಸನ್ನೆ ಮಾಡಿ ಹೊರಗೆ ಹೋಗಲು ಹೇಳಿದೆ..... ನನ್ನ ಪಕ್ಕದ ಹುಡುಗ ಕೂಗುತ್ತಲೇ ಇದ್ದ.... ಅವಳು ರೈಲಿನ ಕಡೆ ನೋಡಿ ಮತ್ತೆ ಮಲಗಿಕೊಂಡಳು.... ನಾನು " ಅಯ್ಯೋ ದೇವರೇ" ಎಂದೆ...... ರೈಲಿನ ಸ್ಪೀಡ್ ಸ್ವಲ್ಪ ಕಡಿಮೆಯಾಗಿತ್ತು ...... ೧೦೦ ರ ಹತ್ತಿರ ಇತ್ತು........ ಇನ್ನೂ ಕಡಿಮೆ ಮಾಡಲು ನೋಡಿದೆ...... ಸಣ್ಣದಾಗಿ ಜರ್ಕ್ ಹೊಡೆದ ಹಾಗಾಯಿತು..... ನನಗೆ ಹೆದರಿಕೆ ಆಗಲು ಶುರು ಆಯಿತು..... ಈ ಐದು ಜನರ ಪ್ರಾಣ ಉಳಿಸಲು ಹೋಗಿ ಸಾವಿರಾರು ಜನರ ಪ್ರಾಣ ಪಣಕ್ಕಿಡೋದು ಸರಿ ಕಾಣಲಿಲ್ಲ..... ಕಾಲನ್ನು ಬ್ರೇಕ್ ಮೇಲಿಂದ ತೆಗೆಯಲಿಲ್ಲ..... ರೈಲು ಪ್ರಾಧಿಕಾರದ ನಿಯಮದಂತೆ ಪ್ರಯಾಣಿಕರ ಪ್ರಾಣ ಉಳಿಸಲು ಮುಂದಾದೆ..... ಎಷ್ಟು ಕೂಗಿಕೊಂಡರೂ ಅವರು ಎದ್ದೇಳಲೇ ಇಲ್ಲ..... ಆತ್ಮಹತ್ಯೆಗೆ ನಿಶ್ಚಯ ಮಾಡಿಕೊಂಡೇ ಬಂದವರಂತೆ ಕಂಡರು.... ನಾನು ಅಸಹಾಯಕನಾಗಿದ್ದೆ...... ಅವರು ಮಲಗಿದ್ದ ಸ್ಥಳ ಹತ್ತಿರ ಬಂದಿತ್ತು..... ಕ್ಯಾಬಿನ್ ಗ್ಲಾಸ್ ನಿಂದ ಅವರನ್ನು ಸ್ಫಷ್ಟವಾಗಿ ನೋಡಿದೆ...... ಗಂಡಸಿನ ಪಕ್ಕದ ಹುಡುಗ ಕೊಸರಿಕೊಳ್ಳಲು ಪ್ರಯತ್ನ ಪಡುತ್ತಿದ್ದ.... ಹಾಗೆಯೇ, ಹೆಂಗಸಿನ ಪಕ್ಕದ ಹುಡುಗನೂ ಕೊಸರುತ್ತಿದ್ದ... ಇಬ್ಬರೂ ಮಕ್ಕಳನ್ನು ಅವರ ಪಕ್ಕದಲ್ಲಿದ್ದ ಗಂಡು , ಹೆಂಗಸು ಗಟ್ಟಿಯಾಗಿ ಹಿಡಿದುಕೊಂಡಿದ್ದರು..... ಅವರಿಬ್ಬರ ಮಧ್ಯೆ ಮಲಗಿದ್ದ ಮುದ್ದಾದ ಮಗು ಕೈಕಾಲು ಆಡಿಸುತ್ತಾ ಮಲಗಿತ್ತು..... ಮಗುವಿನ ಮುದ್ದಾದ ಮುಖ ಕೊನೆಯ ಬಾರಿ ನೋಡಿ ಕಣ್ಣು ಮುಚ್ಚಿದೆ...... ...ನನ್ನ ಪಕ್ಕದ ಹುಡುಗ.." ಅಯ್ಯೋ" ಎಂದಿದ್ದು ಕಿವಿಗೆ ಬಿತ್ತು............ ರೈಲಿನ ಸದ್ದು ಸತ್ತ ಜನರ ಕೊನೆಯ ಕೂಗನ್ನೂ ಅಳಿಸಿಹಾಕಿತ್ತು........ 


ಏನು ಮಾಡುವುದೆಂದೇ ತಿಳಿಯಲಿಲ್ಲ..... ಸ್ಟೇಷನ್ ಗೆ ವೈರ್ಲೆಸ್ ಸಂದೇಶ ಕೊಟ್ಟೆ...... ಮುಂದಿನ ಸ್ಟೇಷನ್ ನಲ್ಲಿ ನಿಲ್ಲಿಸಿ ರಿಪೋರ್ಟ್ ಬರೆದು ಹೋಗಲು ತಿಳಿಸಿದರು.....  ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲಿಲ್ಲ..... ನಮ್ಮ ರೈಲು ಕಂಕನಾಡಿ ಸ್ಟೇಷನ್ನಲ್ಲಿ ನಿಂತಿದ್ದಾಗಲೇ "ಮಂಗಳಾ ಎಕ್ಸ್ ಪ್ರೆಸ್ಸ್ " ಹಾದು ಹೋಗುತ್ತದೆ ಎಂದಿದ್ದರಿಂದ ನಾವು ಸ್ವಲ್ಪ ಕಾಯಬೇಕಾಯಿತು.... ಅಷ್ಟರಲ್ಲಿ ಅಲ್ಲಿ ಸತ್ತವರ ವಿವರ ವೈರ್ಲೆಸ್ಸ್ ಮೂಲಕ  ನನ್ನ ಕಿವಿಗೆ ಬೀಳತೊಡಗಿತು...... " ಸತ್ತವರು ಗಂಡ ಹೆಂಡತಿಯರಂತೆ... ಇಬ್ಬರು ಮಕ್ಕಳು ಕೂಡ ಸತ್ತಿದ್ದಾರೆ......... " ನಾನು ತಕ್ಷಣ ವಾಕಿಟಾಕಿ ತೆಗೆದುಕೊಂಡು " ಅವರ ಮಧ್ಯೆ ಒಂದು ಮಗು ಇತ್ತಲ್ಲ..? " ಎಂದೆ ಒಂದೇ ಉಸುರಿನಲ್ಲಿ....... " ಹೌದು.... ಆ ಮಗು ಹಳಿಯ ಮಧ್ಯೆ ಇದ್ದುದರಿಂದ ಆ ಮಗುವಿಗೆ ಎನೂ ಆಗದೇ ಬದುಕುಳಿದಿದೆ..." ಉತ್ತರ ಕೇಳಿ ನನಗೆ ಖುಶಿ ಪಡಲೋ, ಆ ಮಗುವಿನ ಪಾಲಕರು ಸತ್ತಿದ್ದಕ್ಕೆ ದುಃಖ ಪಡಲೋ ತಿಳಿಯಲಿಲ್ಲ......." ನನಗೆ ಅವರ ಮನೆ ಎಲ್ಲಿದೆ..? ಅವರ ಬಂಧುಗಳ ವಿಳಾಸ ನನಗೆ ತಿಳಿಸಿ" ಎಂದೆ ವಾಕಿಟಾಕಿಯಲ್ಲಿ...... ಮಂಗಳಾ ಎಕ್ಸ್ ಪ್ರೆಸ್ಸ್ ದಾಟಿ ಹೋದ ನಂತರ ಮಂಗಳೂರು ಸೆಂಟ್ರಲ್ ಗೆ ರೈಲನ್ನು ತಲುಪಿಸಿದರೂ ನನ್ನ ಮನಸ್ಸು ಪೂರಾ ಸತ್ತ ಜನರ ಸುತ್ತಲೇ ಸುತ್ತುತ್ತಿತ್ತು........

ರೈಲಿನ ರಿಪೋರ್ಟ್ ಎಲ್ಲಾ ಬರೆದು ಮನೆಗೆ ಹೊರಡುವ ವೇಳೆಗೆ ನನಗೆ ಅಲ್ಲಿ ಸತ್ತವರ ವಿವರ ಎಲ್ಲಾ ತಿಳಿದಿತ್ತು...... ಸತ್ತವರು, ಉತ್ತರ ಕರ್ನಾಟಕದವರೆಂದೂ, ಅಲ್ಲಿ ಪ್ರವಾಹ ಬಂದು ಇವರ ಬದುಕೆಲ್ಲಾ ಕೊಚ್ಚಿ ಹೋದಾಗ..... ಇಲ್ಲಿ ಕೆಲಸಕ್ಕೆಂದು ಬಂದವರಿಗೆ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಸೆಯಲ್ಲಿದ್ದರು..... ಪ್ರವಾಹ ಬಂದು ಹಾಳಾದ ಊರಲ್ಲಿ ತಮಗೆಲ್ಲಾ ಸರಕಾರ ಮನೆ ಕಟ್ಟಿಸಿ ಕೊಡುತ್ತದೆ ಎಂದು ಖುಶಿಯಲ್ಲಿದ್ದ ದಂಪತಿಗಳಿಗೆ , ತಮ್ಮ ಹೆಸರಲ್ಲಿ ಬೇರೆ ಯಾರೋ ಮನೆ, ಜಮೀನನ್ನು ಪಡೆದಿದ್ದಾರೆ ಎಂದು ತಿಳಿದಾಗ ದಿಕ್ಕೇ ತೋಚದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿಕ್ಕಿತು....   ಆತ್ಮಹತ್ಯೆಗೆ ಕಾರಣ ಯಾರೋ ಆದರೂ ನನ್ನ ರೈಲಿನಡಿ ಸಿಕ್ಕಿ ಸತ್ತಿದ್ದಕ್ಕಾಗಿ ನನ್ನಲ್ಲಿ ಪಾಪಪ್ರಜ್ನೆ ಕಾಡುತ್ತಿತ್ತು...... ಅವರ ಮನೆಯ ವಿಳಾಸ ಸಿಕ್ಕಿದ್ದರಿಂದ ಆ ಕಡೆಯೇ ಹೊರಟೆ......

ಅಲ್ಲಿ ಮುಟ್ಟುವ ವೇಳೆ ಕತ್ತಲಾಗುತ್ತಿತ್ತು...... ಮನೆ ಎಂದು ಕರೆಸಿಕೊಳ್ಳುವ ಜೊಪಡಿಯಲ್ಲಿ ಅವರೆಲ್ಲಾ ಇದ್ದರು...... ಸುತ್ತಮುತ್ತಲೆಲ್ಲಾ ಸಣ್ಣ ಸಣ್ಣ ಗುಡಿಸಲುಗಳು ಇತ್ತು.... ಆಗಲೇ ಶವವನ್ನು ತಂದಿದ್ದರು....ಬಟ್ಟೆಯಲ್ಲಿ ಮುಚ್ಚಿದ್ದರು...... ನನ್ನ ಕಣ್ಣು ಬದುಕುಳಿದ ಆ ಮಗುವನ್ನು ಹುಡುಕುತ್ತಿತ್ತು..... ಅಲ್ಲಿದ್ದ ಹಿರಿಯರನ್ನು ವಿಚಾರಿಸಿದೆ..... " ಆ ಮಗುವಿನ ಭವಿಶ್ಯಕ್ಕೆ ಏನು..? ಮಗುವಿನ ಬಂಧುಗಳ ಬಳಿ ಸ್ವಲ್ಪ ಹಣ ಸಹಾಯ ಮಾಡುತ್ತೇನೆ... " ಎಂದೆ..... ನನ್ನ ಪಾಪಪ್ರಜ್ನೆಯನ್ನು ಸ್ವಲ್ಪವಾಗಿಯಾದರೂ ಕಡಿಮೆ ಮಾಡಿಕೊಳ್ಳುವ ಉದ್ದೇಶ ನನ್ನದಾಗಿತ್ತು....... " ಇಲ್ಲ ಸರ್, ಆ ಮಗುವಿಗೆ ಯಾರೂ ಇಲ್ಲ.... ಊರಿಗೆ ನೆರೆ ಬಂದಾಗ ಎಲ್ಲಾ ಬಂಧುಗಳೂ ಸತ್ತು ಹೋಗಿದ್ದರು..... ಈಗ ಮಗುವಿನ ಹೆತ್ತವರು ಸತ್ತು ಹೋದರು.... ಈಗ ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲ..... ಗಂಡು ಮಗುವಾಗಿದ್ದರೆ ಎಲ್ಲರ ಜೊತೆ ಎಲ್ಲೆಲ್ಲೋ ಇದ್ದು ಬೆಳೆಯುತ್ತಿತ್ತು... ಈ ಹೆಣ್ಣುಮಗು ಯಾರಲ್ಲಿ ಬೆಳೆಸೋದು... ಜಗತ್ತು ತುಂಬಾ ಕೆಟ್ಟಿದೆ ಯಜಮಾನರೇ...." ಎಂದರು ಆ ಹಿರಿಯರು..... ಈಗ ನಿಜವಾಗಿಯೂ ನನ್ನ ಸ್ಥಿತಿ ಗಂಭೀರವಾಯಿತು..... ಸ್ವಲ್ಪ ಸಹಾಯ ಮಾಡಿ ಹೋಗೋಣ ಎಂದು ಬಂದವನಿಗೆ ಕಾಲಿಗೇ ತೊಡರಿಕೊಂಡಿತ್ತು....... ಸ್ವಲ್ಪ ಯೋಚಿಸಿ ಆ ಹಿರಿಯರಿಗೆ ಕೇಳಿದೆ...... " ಈ ಮಗುವನ್ನು ನನಗೆ ಕೊಡಿ, ನಾನು ನೋಡಿಕೊಳ್ಳುತ್ತೇನೆ.... ನನ್ನ ಮಗನ ಜೊತೆಗೆ ಈ ಹುಡುಗಿಯೂ ಬೆಳೆಯಲಿ.... ಮಗುವಿಗೆ ಒಳ್ಳೆಯ ವಿದ್ಯೆ ಕೊಟ್ಟು ಅವಳ ಬದುಕು ಕಟ್ಟಿ ಕೊಡುತ್ತೇನೆ" ಎಂದೆ.... ಆ ಕಡೆ ಆ ಮಗುವಿನ ಪಾಲಕರ ಅಂತ್ಯಕ್ರೀಯೆಗೆ ಪ್ರಯತ್ನ ನಡೆಯುತ್ತಿತ್ತು...... ಆ ಹಿರಿಯ ಸ್ವಲ್ಪ ಯೋಚನೆ ಮಾಡಿ ಆ ಕಡೆ ಹೋದರು.....

ತಿರುಗಿ ಬಂದ ಹಿರಿಯರ ಕೈಯಲ್ಲಿ ಆ ಮಗುವಿತ್ತು..... ನನ್ನ ಕೈಯಲ್ಲಿಟ್ಟು ಆ ಹಿರಿಯರೆಂದರು...." ಈ ಮಗು ತನ್ನ ಪಾಲಕರ ಅಂತ್ಯಕ್ರಿಯೆಯಲ್ಲಿ ಇರದೇ ತಮ್ಮನ್ನೇ ತನ್ನ ಪಾಲಕರೆಂದು ತಿಳಿದು ಬೆಳೆಯಲಿ..... ಈ ಮಗುವಿನ ಪಾಲನೆ ಚೆನ್ನಾಗಿ ಮಾಡಿ , ಚೆನ್ನಾಗಿ ಬೆಳೆಸಿರಿ "....... ನನ್ನ ಕೈಯಿ ನಡುಗುತ್ತಿತ್ತು............ ಈ ಮಗುವಿನ ಅಂತ್ಯಕ್ಕೆ ಕಾರಣ ನಾನು ಎಂದು ತಿಳಿದಿದ್ದರೆ ಈ ಹಿರಿಯರು ನನಗೆ ಮಗುವನ್ನು ಕೊಡುತ್ತಿದ್ದರೊ ಇಲ್ಲವೋ ತಿಳಿದಿಲ್ಲ...... ನನ್ನ ಕೈಲಿದ್ದ ಸ್ವಲ್ಪ ಹಣವನ್ನು ಆ ಹಿರಿಯರಿಗೆ ಕೊಟ್ಟು ಸತ್ತವರ ಅಂತ್ಯಕ್ರೀಯೆಗೆ ಉಪಯೋಗಿಸಿ ಎಂದು ಹೇಳಿ ನಾನು ಮಗುವನ್ನೆತ್ತಿಕೊಂಡು ನನ್ನ ಮನೆ ಹಾದಿ ಹಿಡಿದೆ......

ಬೆನ್ನ ಹಿಂದೆ ಬೆಂಕಿಯ ಜ್ವಾಲೆ ಮೇಲೇಳುತ್ತಿತ್ತು......

Aug 26, 2010

ಸೇಡಿನ ಹೊಸ ಬಗೆ...!!!

ತುರ್ತಾಗಿ ನಿನ್ನ ಮೇಲೆ
ಸೇಡು ತೀರಿಸಿಕೊಳ್ಳಬೇಕಿದೆ,
ತುಂಬಾ ಖುಶಿಯಿಂದ ಇದ್ದು,
ನಿನ್ನ ಮರೆಯಬೇಕಿದೆ.....


ಉಸಿರು ತಾಕುವಷ್ಟು ಹತ್ತಿರವೇ ಇದ್ದರೂ,
ಕೈಗೆ ಸಿಗದೇ ಇರಬೇಕಿದೆ......
ಒಳಗೊಳಗೆ ನೋವಿದ್ದರೂ,
ಮುಖದ ತುಂಬ ನಗು ತರಬೇಕಿದೆ......


ನಿನ್ನನ್ನೇ ಪ್ರೀತಿಸುತ್ತಾ ಇದ್ದರೂ,
ನಿನಗೆ ಹೇಳದೆ ಇರಬೇಕಿದೆ......
ಕಣ್ಣಲ್ಲಿ ನಿನ್ನದೇ ಚಿತ್ರ ನಿಂತರೂ,
ನಿನಗೆ ಕಾಣಿಸದೆ ಇರಬೇಕಿದೆ...


ಮನದ ತುಂಬಾ ನಿನ್ನದೇ ನೆನಪಿದ್ದರೂ,
ಹೃದಯದ ಹಾದಿ ತಪ್ಪಿಸಬೇಕಿದೆ....
ನೀ ನಡೆವ ದಾರಿಯಲ್ಲಿ ನಾನೇ ನಿಂತಿದ್ದರೂ,
ನಿನ್ನ ನೆರಳ ಸೋಕದೆ ನಿಲ್ಲಬೇಕಿದೆ...


ನಿನಗೆ ಫೋನ್ ಮಾಡಿದರೂ,
ಮಾತನಾಡದೇ ಸುಮ್ಮನೇ ಇರಬೇಕಿದೆ....
ಮರೆತು ಮೆಸೇಜ್ ಕಳಿಸಿದರೂ,
ಏನೂ ಬರೆಯದೇ ಬ್ಲ್ಯಾಂಕ್ ಇಡಬೇಕಿದೆ.....


ನೀನೇ ಉಸಿರೆಂದು ಗೊತ್ತಿದ್ದರೂ,
ಉಸಿರು ಹೊರಬಿಡಲೇಬೇಕಿದೆ....
ಹೊಸ ಉಸಿರಿಗೆ ದಾರಿ ಮಾಡಬೇಕಿದೆ...
ಮೂಗಿನ  ಹೊಳ್ಳೆ ತೆರೆಯಲೇಬೇಕಿದೆ.....

Aug 13, 2010

ನಾನ್ಯಾರು........?

ಇದೇ ಅಗಷ್ಟ್ ೧೫ ಕ್ಕೆ  ನನಗೆ ತೊಂಬತ್ತು ವರ್ಷ ವಯಸ್ಸು..... ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದ ನಾನು ಈಗ ಜೈಲಿನಲ್ಲಿದ್ದೇನೆ....ನನ್ನದಲ್ಲದ ತಪ್ಪಿಗೆ...... ನನ್ನದೇನೂ ತಪ್ಪಿಲ್ಲ ಎಂದು ವಾದಿಸಲು ನನ್ನ ಜೊತೆ ಯಾರೂ ಇಲ್ಲ..... ಈಗ ನನಗೆ ಜೈಲಿನ ಹೊರಗೆ ಬಂದು ಸಾಧಿಸಲು ಎನೂ ಉಳಿದಿಲ್ಲ.... ಅದಕ್ಕಾಗಿಯೇ ನನಗೆ ಸಿಕ್ಕ ಕ್ಷಮಾದಾನವನ್ನೂ ತಿರಸ್ಕರಿಸಿ ಇಲ್ಲೇ ಉಳಿದಿದ್ದೇನೆ.....

ನಾನು ಹುಟ್ಟಿದ್ದು ೧೯೨೦ ಅಗಷ್ಟ್ ೧೫...... ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದ ನನ್ನ ಮೇಲೆ ತುಂಬಾ ಜವಾಬ್ದಾರಿ ಇತ್ತು.... ಅಪ್ಪ ಅಮ್ಮನ ಅಭಿಲಾಷೆಯಂತೆ ನಾನು ಪದವೀಧರನಾದೆ..... ಅದೇ ಸಮಯದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು..... ದೇಶಕ್ಕಾಗಿ ಎನಾದರೂ ಮಾಡುವ ತುಡಿತ ನನ್ನಲ್ಲಿತ್ತು..... ನನ್ನ ಊರಿಗೆ ಬಂದಿದ್ದ ಗಾಂಧೀಜಿಯವರ ದಂಡೀಯಾತ್ರೆ ಮತ್ತು ಅವರ ಮಾತು ನನ್ನಲ್ಲಿನ ದೇಶಭಕ್ತಿಯನ್ನು ಜಾಗ್ರತಗೊಳಿಸಿತ್ತು..... ಆಂಗ್ಲರ ದುರಾಡಳಿತ ಮೇರೆ ಮೀರಿತ್ತು...... ಅಸಹಕಾರ ಚಳುವಳಿಯ ಮೂಲಕ ಭಾರತೀಯರು ಕರಾರುವಕ್ಕಾದ ಎದುರೇಟನ್ನೆ ನೀಡುತ್ತಿದ್ದರು..... ನಾನು ಮನೆ ಬಿಟ್ಟು ಗಾಂಧೀಜಿಯವರ ಚಳುವಳಿ ಸೇರಲು ತಯಾರಿ ನಡೆಸಿದ್ದೆ..... ನನ್ನ ಅಮ್ಮನಿಗೆ ನಾನು ಮನೆ ಬಿಟ್ಟು ಹೋಗುವುದು ಬೇಕಿರಲಿಲ್ಲ.... ಮನೆಯಲ್ಲಿದ್ದು ಏನಾದರೂ ಕೆಲಸ ಮಾಡಿಕೊಂಡಿರು ಎನ್ನುತ್ತಿದ್ದರು......

  ಭಾರತೀಯರ ದಂಗೆಯನ್ನು ಹತ್ತಿಕ್ಕಲು ಆಂಗ್ಲರು ತಮ್ಮ ಸೇನೆಯ ಶಕ್ತಿ ಹೆಚ್ಚಿಸಿಕೊಳ್ಳಲು ತಯಾರಿ ನಡೆಸಿದ್ದರು..... ನನ್ನ ಊರಲ್ಲೂ  ಸೇನೆಗೆ ಭರ್ತಿ ನಡೆಯುತ್ತಿತ್ತು..... ಈ ಕೆಲಸಕ್ಕೆ ಸೇರಲು ನನ್ನ ಅಮ್ಮ ಒತ್ತಾಯ ಹೇರುತ್ತಿದ್ದಳು..... ನನ್ನ ಗುರಿ ಆಂಗ್ಲರ ವಿರುದ್ಧ ಹೋರಾಡುವುದಾಗಿದ್ದರೆ, ಅಮ್ಮ ನನ್ನನ್ನು ಆಂಗ್ಲರಿಗಾಗಿ ಕೆಲಸ ಮಾಡಲು ಹಟ ಮಾಡುತ್ತಿದ್ದಳು... ಅಮ್ಮನಿಗೆ ನಾನು ಅವರನ್ನು ಬಿಟ್ಟು ದೂರ ಹೋಗುವುದು ಇಷ್ಟ ಇರಲಿಲ್ಲ ಅಷ್ಟೆ..... ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ನಾನು ಪೋಲಿಸ್ ಕೆಲಸಕ್ಕೆ ಸೇರಿದೆ.... ಆದರೆ ದೇಶಕ್ಕಾಗಿ ಸೇವೆ ಮಾಡುವ ಕನಸು ನನ್ನಲ್ಲಿ ಸತ್ತಿರಲಿಲ್ಲ..... ಪೋಲಿಸ್ ಕೆಲಸಕ್ಕೆ ಸೇರಿದ್ದರೂ ನಾನು ಎಂದೂ ಭಾರತೀಯರ ವಿರುದ್ದ ಕೈ ಎತ್ತಿರಲಿಲ್ಲ.... ಇದು ಕೆಲವು ಆಂಗ್ಲ ಅಧಿಕಾರಿಗಳ ಕಣ್ಣೂ ಕೆಂಪಗಾಗಿಸಿತ್ತು.... ಎಷ್ಟೋ ಸಾರಿ ನೌಕರಿ ಬಿಟ್ಟು ಓಡಿ ಹೋಗೊಣ ಎನಿಸಿದ್ದರೂ , ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದೆ....

ಇದೇ ಸಮಯದಲ್ಲಿ ಗಾಂಧೀಜಿಯವರ ಗ್ರಾಮ ಯಾತ್ರೆ ನಮ್ಮ ಊರಿಗೆ ಬರುತ್ತಿದೆ ಎಂದು ನಮ್ಮ ಪೋಲಿಸ್ ವಲಯದಲ್ಲಿ ಮಾತು ನಡೆಯುತ್ತಿತ್ತು..... ಅದರ ಬಂದೋಬಸ್ತಿಗಾಗಿ ಹೆಚ್ಚಿನ ಪೋಲಿಸ್ ಬಲವನ್ನು ಬೇರೆ ಊರಿನಿಂದ ಕೂಡ ಕರೆಸಲಾಗಿತ್ತು.... ಬಾಪೂಜಿಯವರ ಬಂಧನದ ಮಾತೂ ನಡೆಯುತ್ತಿತ್ತು..... ಆದರೆ ಅವರ ಬಂಧಿಸಿದರೆ ಮುಂದೆ ನಡೆಯುವ ಸಂಭವನೀಯ ಗಲಭೆಗಳ ಬಗ್ಗೆ ಆಂಗ್ಲ ಅಧಿಕಾರಿಗಳ ಭಯ ಇದ್ದೇ ಇತ್ತು....... ಹೇಗಾದರೂ ಮಾಡಿ ಈ ಗಾಂಧಿ ಎಂಬ ಮಂತ್ರದಂಡವನ್ನು ಭಾರತೀಯರಿಂದ ದೂರವಿರಿಸಬೇಕೆಂಬುದು ಫರಂಗಿಗಳ ವಿಚಾರವಾಗಿತ್ತು...... ಈ ವಿಷಯವೆಲ್ಲಾ ಭಾರತೀಯ ಪೊಲಿಸರಿಂದ ನಮಗೆಲ್ಲಾ ತಿಳಿಯುತ್ತಿತ್ತು..... ಈ ಸಾರಿ ಬರುವ ಗಾಂಧೀಜಿಯವರ ನಮ್ಮೂರ ಭೇಟಿ ಆಂಗ್ಲರನ್ನು ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೇ ನಮ್ಮೂರ ತೀವ್ರವಾದಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು... ನಮ್ಮೂರ ತೀವ್ರವಾದಿಗಳ ಗುಂಪಿಗೆ ಬಾಪೂಜಿಯ ಅಹಿಂಸಾ ಚಳುವಳಿ ರುಚಿಸಿರಲಿಲ್ಲ..... ಆಂಗ್ಲರ ಹಿಂಸೆಗೆ ಹಿಂಸೆಯಿಂದಲೇ ಉತ್ತರ ಕೊಡಬೇಕು..... ಅವರನ್ನು ಭಾರತದಿಂದಲೇ ಓಡಿಸಬೇಕೆಂಬುದು ಅವರ ವಾದವಾಗಿತ್ತು..... ಇದಕ್ಕೆ ಭೋಸರು, ಸಾವರ್ಕರ ರ ಸಹಾಯ, ಮಾರ್ಗದರ್ಶನವೂ ದೊರೆತಿತ್ತು.... ಇಂಥಾ ಸಮಯದಲ್ಲಿ ಬಾಪೂಜಿಯ ಭೇಟಿ ತೀವ್ರವಾದಿಗಳ ಎಲ್ಲಾ ತಂತ್ರಗಳನ್ನು ಬುಡಮೇಲು ಮಾಡಿತ್ತು....... ಅವರು ಪ್ರತಿತಂತ್ರ ಹೂಡುತ್ತಿದ್ದರು..... ಇದರ ಸುಳಿವು ಆಂಗ್ಲ ಅಧಿಕಾರಿಗಳಿಗೂ ಸಿಕ್ಕಿತ್ತು...... ಇದರ ಲಾಭ ಪಡೆಯಲು ಫರಂಗಿಗಳು ಉಪಾಯ ಹೂಡಿದ್ದರು......

ಆ ದಿನ ನನಗಿನ್ನೂ ಸರಿಯಾಗಿ ನೆನಪಿದೆ....ನಾನು ಎಂದಿನಂತೆ ಕೆಲಸದ ಮೇಲೆ ಮೇಲಧಿಕಾರಿಗಳ ಕೊಠಡಿ ಕಡೆ ಹೊರಟಿದ್ದೆ...... ಅಂದು ಮೈಸೂರು ಪ್ರಾಂತ್ಯದ ಮುಖ್ಯ ಅಧಿಕಾರಿ ಬಂದಿದ್ದ ಸುದ್ದಿ ನನಗೂ ತಿಳಿದಿತ್ತು...... ಮೇಲಧಿಕಾರಿಯ ಕೊಠಡಿಯ ಬಾಗಿಲು ಸ್ವಲ್ಪವೇ ತೆರೆದಿತ್ತು..... ನಾನು ಒಳಗೆ ಹೋಗಲು ಬಾಗಿಲು ದೂಡುವವನಿದ್ದೆ..... ಒಳಗಿನಿಂದ " ಗಾಂಧೀಜಿ" ಎನ್ನುವ ಹೆಸರು ಕೇಳಿ ಬಂದ್ದಿದ್ದರಿಂದ ಅಲ್ಲೇ ನಿಂತೆ...... ಒಳಗಿನಿಂದ ನಮ್ಮ ಮುಖ್ಯ ಅಧಿಕಾರಿಯ ಮಾತು ಕೇಳಿ ಬರುತ್ತಿತ್ತು.... " ಈ ಸಾರಿ ಭಾರತೀಯ ಕುನ್ನಿಗಳಿಗೆ ಸರಿಯಾದ ಪಾಠ ಕಲಿಸಬೇಕು..... ಅವರ ಪ್ರಮುಖ ಅಸ್ತ್ರವಾದ ಗಾಂಧಿಯನ್ನು ಈ ಸಾರಿ ಮುಗಿಸಿಬಿಡಬೇಕು....." " ಸರ್, ಹಾಗೆ ಮಾಡಿದರೆ, ಜನರು ದಂಗೆ ಏಳುತ್ತಾರೆ.....ನಮ್ಮ ಈ ಹೊಡೆತ ಅವರಿಗೆ ನಮ್ಮ ವಿರುದ್ದ ಇನ್ನೂ ರೊಚ್ಚಿಗೇಳಿಸಬಹುದು... ಅವರ ಕಿಚ್ಚು ಇನ್ನೂ ಹೆಚ್ಚಿ ನಮ್ಮ ಆಳ್ವಿಕೆಗೆ ಅಂತ್ಯ ಹಾಡಬಹುದು ಸರ್..." ಎಂದವರು ನನ್ನ ಮೇಲಧಿಕಾರಿ ಆಗಿದ್ದರು..... ನನಗೆ ಎನೋ ಕೆಡುಕು ಸಂಭವಿಸಲಿದೆ ಎನಿಸಲು ಶುರು ಆಗಿತ್ತು...... ನಾನು ಅಲ್ಲೇ ನಿಂತು ಉಳಿದ ಮಾತೂ ಕೇಳಿಸಿಕೊಳ್ಳಲು ತಯಾರಾದೆ...... ಮಾತು ಮುಂದುವರಿದಿತ್ತು...." ಹಾಗೇನೂ ಆಗಲ್ಲ.... ಅವರ ಹತ್ಯೆಯನ್ನು ತೀವ್ರವಾದಿಗಳ ತಲೆಗೆ ಕಟ್ಟೋಣ.. ಅವರ ಮತ್ತು ಗಾಂಧಿ ನಡುವಿನ ಭಿನ್ನಾಭಿಪ್ರಾಯವನ್ನು ನಾವು ಈ ರೀತಿ ಉಪಯೊಗಿಸಿಕೊಳ್ಳೋಣ.... ಯಾರಿಗೂ ಸಮಸ್ಯೆ ಇರೋದಿಲ್ಲ.... ಆಗ ಭಾರತೀಯರು ತಮ್ಮ ತಮ್ಮಲ್ಲೇ ಹೊಡೆದಾಡಿ ಸಾಯುತ್ತಾರೆ...... ನಾವು ಇನ್ನೂ ನೂರು ವರುಷ ಇಲ್ಲೇ ಆಳ್ವಿಕೆ ಮಾಡಬಹುದು... ಇದೇ ನಮ್ಮ ಇಂಗ್ಲಂಡಿನ ಆದೇಶವೂ ಆಗಿದೆ" ಮುಖ್ಹ್ಯ ಅಧಿಕಾರಿ ಮಾತನಾಡುತ್ತಲೇ ಇದ್ದ......... ನನ್ನ ಜೀವ ಝಲ್ ಎಂದಿತು...... ಇದೇನಾದರು ನಡೆದರೆ ಭಾರತ ಎಂದಿಗೂ ಸ್ವತಂತ್ರ ದೇಶವಾಗೋದೇ ಇಲ್ಲ.....  ಇಲ್ಲ.... ಇವರ ಈ ಉದ್ದೇಶ ಈಡೇರಲು ಬಿಡಬಾರದು.... ಬಾಪೂಜಿ ಇಲ್ಲದ ದೇಶ, ಚಳುವಳಿ ಸಾದ್ಯವೇ ಇಲ್ಲ.... ನನ್ನ ದೇಶಭಕ್ತ ಮನಸ್ಸು ಜಾಗ್ರತವಾಗಿತ್ತು.....

ನಿಧಾನವಾಗಿ ಒಳ ನಡೆದೆ........ ಅಧಿಕಾರಿಯ ಮೇಜಿನ ಮೇಲಿನ
ಬಂದೂಕು ನನ್ನ ಕೈ ಸೇರಿತ್ತು..... ಹಿಂದು ಮುಂದು ಯೊಚನೆ ಮಾಡದೇ ಸೀದಾ ಒಳಗೆ ಹೋಗಿ, ಮುಖ್ಯ ಅಧಿಕಾರಿ , ಮೇಲಧಿಕಾರಿ ಇಬ್ಬರನ್ನೂ ಗುಂಡಿಕ್ಕಿ ಕೊಂದು ಹಾಕಿದೆ..... ಢಂ...... ಢಮ್....... ಢಂ...... ಬಂದೂಕಿನಲ್ಲಿದ್ದ ಎಲ್ಲಾ ಗುಂಡುಗಳನ್ನೂ ಅವರ ದೇಹಕ್ಕೆ ಹೊಡೆದೆ....... ಅಷ್ಟರಲ್ಲಿ ಬಂದ ನನ್ನ ಪೋಲಿಸ್ ಸಹೋದ್ಯೋಗಿಗಳು ನನ್ನ ಸೆರೆ ಹಿಡಿದರು........ ಅವರಿಗೆ ನಾನು ಎನೂ ಹೇಳುವ ಹಾಗಿರಲಿಲ್ಲ...... ಕೆಳಕ್ಕೆ ಬಿದ್ದಿದ್ದ ನನ್ನ ಮುಖ್ಯ  ಅಧಿಕಾರಿ ಇಲ್ಲೂ ಆಟ ಆಡಿದ್ದ.... ನನ್ನ ಸೆರೆ ಹಿಡಿದಿದ್ದ ಪೋಲಿಸರಿಗೆ " ಇವನನ್ನು ಬಿಡಬೇಡಿ, ಇವನು ಗಾಂಧೀಜಿಯವರನ್ನು ಕೊಲ್ಲುವ ಯೋಜನೆ ಹಾಕಿದ್ದಾನೆ" ಎನ್ನುತ್ತಲೇ ಸತ್ತು ಹೋದ......ಅವನ ಮಾತನ್ನು ಎಲ್ಲರೂ ನಂಬಿದರು..... ನನ್ನ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.... ನನ್ನ ಉದ್ದೇಶ ಬಾಫೂಜಿಯವರನ್ನು ಉಳಿಸುವುದಾಗಿತ್ತು...... ಆ ಉದ್ದೇಶದಲ್ಲಿ ನಾನು ಯಶಸ್ವಿಯಾಗಿದ್ದೆ......

ಬಾಪೂಜಿಯನ್ನು ಕೊಲ್ಲುವ ಯೋಚನೆ ಮಾಡಿದ್ದ ಎನ್ನುವ ಕಾರಣದಿಂದ ನನ್ನನ್ನು ಯಾರೂ ಹತ್ತಿರ ಸೇರಿಸಲಿಲ್ಲ..... ನನ್ನ ಪರವಾಗಿ ಯಾರೂ ವಕಾಲತ್ತು ವಹಿಸಲಿಲ್ಲ..... ನಾನು ಜೈಲಿನಲ್ಲೆ ಕೊಳೆಯುತ್ತ ಹೋದೆ..... ಕೊನೆಗೂ ಬಾಪೂಜಿಯ ಪ್ರಯತ್ನದ ಫಲವಾಗಿ ಭಾರತಕ್ಕೆ ಸ್ವಾತಂತ್ಯ ದೊರೆಯಿತು..... ನಾನು ಜೈಲಿನಲ್ಲೇ ಕುಳಿತು ಸಿಹಿ ತಿಂದೆ...... ಈಗಲೂ ನನಗೆ ಸಿಹಿ ತಿಂಡಿ ತಂದು ಕೊಡುತ್ತಾರೆ..... ನಾನೂ ಎಲ್ಲರಷ್ಟೇ ಖುಶಿ ಪಡುತ್ತೇನೆ..... ನನಗೇ ಈಗಲೂ ತಿಳಿದಿಲ್ಲ .... ನಾನು ದೇಶಪ್ರೇಮಿಯೋ...... ದೇಶದ್ರೋಹಿಯೋ........

Aug 4, 2010

ಯಾರವರು........?

ಹಸಿರಂತೆ ಪ್ರೇಮ ಕಥೆಗಳು,
ಯಾರವರು ಬಣ್ಣ ಕೆಡಿಸುವವರು.....?
ಕನಸಿನ ಚಿತ್ರ ಬಿಡಿಸಲು ಹೇಳಿ,
ಯಾರವರು ಕುಂಚ ಕಸಿಯುವವರು....?

ಅಮರವಂತೆ ಪ್ರೇಮಿ ಮನಸು,
ಯಾರದು ಕಾರಣ ಹೇಳದೆ ಹೊರಟವರು...?
ಗಟ್ಟಿಯಂತೆ ಪ್ರೇಮಬಂಧ,
ಯಾರವರು ಜಾಣರಂತೆ ಜಾರಿಕೊಂಡವರು..?

ಬಚ್ಚಿಡುತ್ತಾರಂತೆ ಪ್ರೀತಿ ಎದೆಯಲಿ,
ಯಾರವರು ರೆಕ್ಕೆ ಬಿಚ್ಚಿ ಹಾರಿದವರು....?
ಬಿಚ್ಚಲಾರದಂತೆ ಮನದ ಅನುಭಂದ,
ಯಾರವರು ಬದುಕಿಗೆ ಕಿಚ್ಚಿಡುವವರು..?

ರಾಗವಂತೆ ಮಧುರ ಪ್ರೀತಿ,
ಯಾರವರು ತಂತಿ ಕಡಿಯುವವರು.....?
 ದಾರಿಯಂತೆ ಪ್ರೇಮ ಜ್ಯೋತಿ ,
ಯಾರವರು ದೀಪ ಆರಿಸಿದವರು...? 

Jul 22, 2010

ಮುಂಗಾರಿನ ನೆನಪು......!

ಮನದ ಮುಗಿಲು ಮೋಡ ಕಟ್ಟಿ,
ಗರಿಯ ಬಿಚ್ಚಿ ನೆಗೆಯುತಿದೆ.....
ತಂಪು ಗಾಳಿ ಎದೆಯ ಸೋಕಿ,
ತುಂತುರು ಮಳೆ ಸುರಿದಿದೆ......

ಎಲ್ಲಿಂದಲೋ ಬಂದ ಸುಳಿಯಗಾಳಿ,
ಕಹಿಯ ನೆನಪ ಕೆದಕಿದೆ.....
ಮಳೆಯ ಹನಿಯು ಭುವಿಯ ಸೇರಿ,
ಒಣಗಿದ ಗಾಯವ ನೆನೆಸಿದೆ.....

ಮಣ್ಣ ಮಧುರ ಪರಿಮಳ,
ಮನದ ಮೂಲೆ ತಲುಪಿದೆ,
ಮಂಜಿನ ಮಳೆಯ ಸಿಂಚನ,
ನೋವನೆಲ್ಲಾ ಮರೆಸಿದೆ.....

ನೆನೆದು ಹೋದ ನೆಲದ ಹಾಗೆ,
ನಿನ್ನ ನೆನಪ ನೆನೆಸಿದೆ.....
ಸುರಿದು ಹೋದ ಮಳೆಯು ,
ನೆನಪ ಹಸಿರು ಮಾಡಿದೆ....

Jul 5, 2010

' ಪೀಕಲಾಟವಯ್ಯಾ.........'

'' ಸರ್, ಒಳಗೆ ಬರಲಾ'' ಎಂದೆ..... ಒಳಗಡೆ ಒಬ್ಬರು 55  - 60 ವರ್ಷದ ಮನುಷ್ಯ ಕುಳಿತಿದ್ದರು...... ನಾನು  ಇತ್ತೀಚಿಗಷ್ಟೇ ಹೊಸ ಕೆಲಸಕ್ಕೆ  ಸೇರಿದ್ದೇನೆ.... ನಮ್ಮದು ಕುಂದಾಪುರದಿಂದ ಕೇರಳ ತನಕ ಇರುವ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡುವ ಕೆಲಸ...... ಹೀಗಾಗಿ ಕೆಲಸದ ಆರಂಭಕ್ಕೂ ಮೊದಲು, ಇರುವ ಮರಗಳ ಕಡಿದು ಹೊಸ ಮರ ನೆಡುವ ಕೆಲಸ, ಈಗಿರುವ ವಿದ್ಯುತ್ ಕಂಬಗಳ ಕಿತ್ತು ರಸ್ತೆಗಳ ದೂರಕ್ಕೆ ಹಾಕುವ ಕೆಲಸವನ್ನ  ಮಾಡಬೇಕಿತ್ತು...... ಆ ದಿನ ನಾನು ಅರಣ್ಯ ಇಲಾಖೆಗೆ ಹೋಗಿದ್ದೆ, ಎಲ್ಲಿಯದು, ಯಾರು ಎನ್ನುವದನ್ನು ಬರೆಯಲ್ಲ....ಅದು ಬೇಡದ ವಿಷಯ..... '' ಬನ್ನಿ, ಬನ್ನಿ '' ಎಂದರು ಆ ವ್ಯಕ್ತಿ.... ನಾನು ಕುಳಿತುಕೊಂಡೆ, ಏನೂ ಕೆಲಸವಿರದಿದ್ದರೂ ಕೆಲಸ ಮಾಡುತ್ತಿರುವ ಹಾಗೆ ನಟಿಸಿದರು..... ನಾನು ಸುಮ್ಮನಿದ್ದೆ....... '' ಹೇಳಿ ಏನು ವಿಷಯ '' ಎಂದರು ತಲೆ ಎತ್ತದೆ...... '' ಸರ್, ನಾನು ಕುಂದಾಪುರದಿಂದ ತಲಪಾಡಿ ತನಕ  four laning ಮಾಡುವ ಕಂಪನಿಯಿಂದ ಬಂದಿದ್ದೇನೆ.... ನಮಗೆ ರಸ್ತೆ ಬದಿ ಇರುವ ಮರಗಳ ಕಡಿಯಲು ಅನುಮತಿ ಪಡೆಯುವ ಬಗ್ಗೆ ಮಾತನಾಡಲು ಬಂದಿದ್ದೇನೆ '' ಎಂದೆ....... ವ್ಯಕ್ತಿ, ನನ್ನನ್ನೊಮ್ಮೆ ನೋಡಿ ಮತ್ತೆ ಕೆಲಸ ಮಾಡುವ ನಾಟಕ ಮುಂದುವರಿಸಿತು....... '' ಮರಗಳನ್ನು ಕಡಿಯದೇ, ರಸ್ತೆ ಮಾಡಲು ನಿಮಗೆ ಬರುವುದಿಲ್ಲವಾ, ಪಾಪದ ಮರಗಳನ್ನು ಕಡಿದು ಏನು ಮಹಾ  ಸಾಧಿಸುತ್ತೀರಿ ? .... ದಿನಾ ದಿನಾ ಮರ ಕಡಿದು ಭೂಮಿ ಬರಿದು ಮಾಡುತ್ತೀರಿ  '' ಎಂದರು..... ''ಸರ್, ಈಗ ಇರುವ ಮರಗಳು, ರಾಷ್ಟೀಯ ಹೆದ್ದಾರಿ ಜಾಗದಲ್ಲಿವೆ......ರಸ್ತೆ ಅಗಲ ಮಾಡುವ ಸಮಯಲ್ಲಿ ಈ ಮರಗಳನ್ನು ಕಡಿಯುವ ಶರತ್ತಿನ ಮೇಲೆಯೇ ನಿಮಗೆ ಅಲ್ಲಿ ಮರ ನೆಡುವ ಅನುಮತಿ ನೀಡಲಾಗಿತ್ತು ಅಲ್ಲವೇ'' ಎಂದೆ..... ''ಅದು ಸರಿ, ಆದರೆ ಈಗ ಮರ ಕಡಿದರೆ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತದಲ್ಲ ?'' ಎಂದರು... ನಾನು ಬಿಡಬೇಕಲ್ಲಾ, '' ಒಂದು ಮರ ಕಡಿದರೆ, ಎರಡು ಗಿಡ ಬೆಳೆಸುವ ಹಣ ನಿಮಗೆ ಸಂದಾಯ ಮಾಡುತ್ತೇವೆ, ಅದರ ಉಸ್ತುವಾರಿಯೂ ಸಹ ರಾಷ್ಟೀಯ ಹೆದ್ದಾರಿ ತೆಗೆದುಕೊಳ್ಳುತ್ತಿದೆ...... ಈಗ ಕಡಿಯುವ ಮರದ ಸಂಪೂರ್ಣ ವೆಚ್ಚ ಮತ್ತು ಅದರ ಹಣವನ್ನೂ ಈಗಾಗಲೇ ರಾಷ್ಟೀಯ ಹೆದ್ದಾರಿ ಭರಿಸಿದೆ.... ಅದರ ಹಣ ಒಂದು ತಿಂಗಳ ಮೊದಲೇ ಅರಣ್ಯ ಇಲಾಖೆಗೆ ಜಮಾ ಮಾಡಿದೆ '' ಎಂದೆ.......

  ''ಸರಿ, ನೀವು ರಾಷ್ಟೀಯ ಹೆದ್ದಾರಿ  ಕಡೆಯಿಂದ ಬಂದಿದ್ದೀರೋ ಅಥವಾ ಕಂಪನಿ ಕಡೆಯಿಂದ ಬಂದಿದ್ದೀರೋ'' ಎಂದರು..... ನಾನು'' ಕಂಪನಿ ಕಡೆಯಿಂದ'' ಎಂದೆ..... '' ಸರಿ, ನಮ್ಮ ಆಫೀಸಿನಲ್ಲಿ, ತಿಂಗಳ ಖರ್ಚು ಅಂತ ಇರತ್ತೆ, ಅದರ ಖರ್ಚಿಗೆಲ್ಲಾ ಸರಕಾರ ಹಣ ಮಂಜೂರು ಮಾಡಲ್ಲ.... ನಿಮ್ಮ ಕಂಪನಿಯಿಂದ ಹತ್ತು ಸಾವಿರ ರುಪಾಯಿ ಕೊಡಿ, ನಾನು ಇವತ್ತೇ order issue ಮಾಡ್ತೇನೆ''  ಎಂದರು.... ನನಗೆ ಉರಿದು ಹೋಯಿತು....... ಇಷ್ಟು ಹೊತ್ತು ಪರಿಸರ, ಅರಣ್ಯ ನಾಶ ಅಂತ ಮಾತಾಡಿದ ವ್ಯಕ್ತಿ ಇವರೇನಾ ಅಂತ ಅನುಮಾನ ಬಂತು...... '' ಸರ್, ಇದೂ ಸಹ ಸರಕಾರೀ ಕೆಲಸವೇ, ನಾವು ಮಾಡೋದು ನಮ್ಮ ಮನೆ ರಸ್ತೆಯಲ್ಲ.... ರಾಷ್ಟೀಯ ಹೆದ್ದಾರಿ...... ಅದಕ್ಕೆ ಸರಕಾರವೇ ಹಣ ಕೊಡುತ್ತಿದೆ..... ನಿಮ್ಮ ಇಲಾಖೆಗೆ ಸೇರಬೇಕಾದ ಹಣ ಈಗಾಗಲೇ ನಿಮ್ಮ ಇಲಾಖೆಗೆ ಜಮಾ ಆಗಿದೆ, ಈಗ ನೀವು ಹಣ ಯಾಕಾಗಿ ಕೇಳ್ತಾ ಇದೀರಾ ಅಂತ ಅರ್ಥ ಆಗ್ಲಿಲ್ಲ ಸರ್'' ಎಂದೆ ಸಾವದಾನವಾಗಿ...... '' ಸರಿ ಹಾಗಾದರೆ, ನೀವು ಒಂದು ವಾರ ಬಿಟ್ಟು  ಬನ್ನಿ..... ನಾನು ಎಲ್ಲ ರೆಕಾರ್ಡ್ ಪರಿಶೀಲಿಸಿ ನಿಮಗೆ ಪತ್ರ  ಬರೆಯುತ್ತೇನೆ'' ಎಂದರು.......   ತುಂಬಾ ಸಿಟ್ಟು ಬಂತು.... ಏನೂ ಮಾಡುವ ಹಾಗಿರಲಿಲ್ಲ..... ನನ್ನ  ಸ್ವಂತ ಕೆಲಸವಾಗಿದ್ದರೆ, ನನ್ನ ಮೂಗಿನ ನೇರಕ್ಕೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು..... ಆದರೆ, ನಾನು ಒಂದು ಕಂಪನಿಯಲ್ಲಿ ದುಡಿಯುತ್ತಿರುವ  ಒಬ್ಬ ನೌಕರ.... ಹಾಗಾಗಿ ದುಡುಕದೆ ಸುಮ್ಮನೆ ಕುಳಿತೆ, '' ಸರ್, ನಮ್ಮ ಬಾಸ್ ಗೆ ಫೋನ್ ಮಾಡಿ ಬರುತ್ತೇನೆ '' ಎಂದು ಹೊರಗಡೆ ಬಂದೆ.....

   ಬಾಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.......'' ಅಷ್ಟೆಲ್ಲ ಹಣ ಕೊಡಬೇಡ..... ನಮಗೂ ಕೆಲಸ ಮುಖ್ಯ , ಈ ಕೆಲಸ ತಡವಾದರೆ ನಮ್ಮ ಉಳಿದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ..... ಎಷ್ಟು ಕಡಿಮೆಯಲ್ಲಿ ಆಗುತ್ತದೋ, ಅಷ್ಟರಲ್ಲಿ ಮುಗಿಸಿ ಬಾ'' ಎಂದರು...... ನನ್ನಲ್ಲಿ ಹಣ ಇತ್ತು..... ಆದರೆ ಸ್ವಲ್ಪ ಸತಾಯಿಸೋಣ ಎನಿಸಿದೆ...... ಒಳಗೆ ಹೋದೆ...... '' ಸರ್, ನಮ್ಮ ಬಾಸ್ ಹತ್ತಿರ ಮಾತನಾಡಲು ಆಗಲಿಲ್ಲ.... ಅವರು ಈಗ ಇಲ್ಲಿಲ್ಲ'' ಅಂದೆ...... '' ಸರಿ, ಏನು ಮಾಡ್ತೀಯಾ ಈಗ '' ಎಂದರು....... '' ನನ್ನ ಹತ್ತಿರ ಈಗ ಎರಡು ಸಾವಿರ ಇದೆ, ನಿಮ್ಮ ಆಫೀಸಿನ ಖರ್ಚಿಗೆ ಇದನ್ನು ಕೊಡುತ್ತೇನೆ.... ನನ್ನ ಬಾಸ್ ಹತ್ತಿರ ಮಾತನಾಡಿ ಮತ್ತೆ ಹಣ ಕೊಡುತ್ತೇನೆ '' ಎಂದೆ..... '' ಏನ್ರಿ, ಇಷ್ಟು ದೊಡ್ಡ ಆಫೀಸಿಗೆ ಬಂದು ಎರಡು ಸಾವಿರದ ಮಾತಾಡ್ತೀರಾ'' ಎಂದರು ದೊಡ್ಡ ಕಣ್ಣು ಮಾಡಿ..... '' ಸರ್, ನನ್ನ ಹತ್ತಿರ ಇರುವುದು ಇಷ್ಟೇ  ಹಣ '' ಎಂದೆ ಮುಖ ಸಣ್ಣ ಮಾಡಿಕೊಂಡು......  '' ಛೆ ಛೆ, ಯಾಕಾದ್ರೂ ಬರ್ತೀರೋ ಇಂಥ ಆಫೀಸಿಗೆ ಹಣ ಇಲ್ಲದೆ, ಆಯ್ತು ಈಗ ಕೊಡಿ ಅದನ್ನ .... ನಂತರ  ಉಳಿದ ಹಣ ತೆಗೆದುಕೊಂಡು ಬನ್ನಿ '' ಎಂದರು..... '' ಎಲ್ಲಿ ಸರ್, ನಿಮ್ಮ ಆಫೀಸಿನ ಖರ್ಚಿಗೆ ಅಂತ ಇಟ್ಟ ಡಬ್ಬಿ..... ಅದರಲ್ಲೇ ಹಾಕುತ್ತೇನೆ ಹಣ  '' ಎಂದೆ....... ಅವರು ನನ್ನ ಮುಖ ನೋಡಿದ ರೀತಿ ನೋಡಬೇಕಿತ್ತು...... '' ಕೇಳಿ ಸರ್, ನಮ್ಮ ಇಲಾಖೆಯಿಂದ ನಡೆಯುವ ಸಭೆ, ಇಲಾಖೆಯ ಮಂತ್ರಿ, ಅವರ ಮಗ, ಹೆಂಡತಿ ಯಾರೇ ಬಂದರೂ ಅವರ ಖರ್ಚು ನಾನೇ ನೋಡಿಕೊಳ್ಳಬೇಕು..... ಅವರಿಗೆ ದೇವಸ್ತಾನಕ್ಕೆ ಕರೆದುಕೊಂಡು ಹೋಗಲು ಗಾಡಿ, ಅವರ ಇತರೆ ಖರ್ಚನ್ನೂ ನಾನೇ ನೋಡಿಕೊಳ್ಳಬೇಕು.... ಇದಕ್ಕೆ ಸರಕಾರ ಹಣ ಕೊಡಲ್ಲ...... ನಾನು ಇದನ್ನೆಲ್ಲಾ ಮಾಡದೆ ಇದ್ದರೆ, ನನ್ನ ವರ್ಗಾವಣೆ ಆಗತ್ತೆ.....
ಮಕ್ಕಳನ್ನು ಇಲ್ಲೇ ಶಾಲೆಗೇ ಹಾಕಿದ್ದೇನೆ.... ಎಲ್ಲಾ ಬಿಟ್ಟು ಹೋಗಲು ಆಗತ್ತಾ....... ಹಾಗಾಗಿ, ನಿಮ್ಮಿಂದ ಇದನ್ನೆಲ್ಲಾ ನಿರೀಕ್ಷೆ  ಮಾಡುತ್ತೇವೆ'' ಎಂದರು ಅಸಹಾಯಕರಾಗಿ.....

ನಾನು ಏನೂ ಮಾತಾಡಲಿಲ್ಲ..... ಇದಕ್ಕೆ, ಲಂಚ ಎನ್ನಲೋ... ಸಹಾಯ ಎನ್ನಲೋ ತಿಳಿಯಲಿಲ್ಲ..... ಏನನ್ನಾದರೂ ಕೊಟ್ಟು ನನ್ನ ಕೆಲಸ ಮುಗಿಸಿ ಹೊರಡಬೇಕಿತ್ತು.... ಕಿಸೆಯಲ್ಲಿದ್ದ ಕವರನ್ನು ತೆಗೆದು ಕೊಟ್ಟೆ..... ಸಾಹೇಬರು ಅದನ್ನ ಎಣಿಸಿ ಅವರ ಕಿಸೆಗೆ ಹಾಕಿಕೊಂಡರು...... ''ಸರಿ, ನಾಳೆ ಬಂದು ನಿಮ್ಮ ಲೆಟರ್ ತೆಗೆದುಕೊಂಡಿ ಹೋಗಿ.... '' ಎಂದರು..... ನಾನು ಹೊರಡಲು ಎದ್ದು ನಿಂತೇ......'' ಹೆಲೋ, ಎಲ್ಲಿ ಹೊರಟಿರಿ, ನಾಳೆ ನೀವು ಬರದೆ ಇದ್ದರೆ.... ನಾನು ನಿಮ್ಮನ್ನು ಹುಡುಕಿಕೊಂಡು ಬರಲಾ, ನಿಮ್ಮ ಬಾಸ್ ನಂಬರ್  ಕೊಡಿ , ನೀವು ಬರದೆ ಇದ್ದರೂ ಅವರಿಂದ ಪಡೆಯುತ್ತೇನೆ  '' ಎಂದರು.......   ನನಗೆ ಏನು ಮಾಡೋದು ಅಂತ ತಿಳಿಯಲಿಲ್ಲ..... ಬಾಸ್ ನಂಬರ್ ಕೊಟ್ಟರೆ ಸರಿ ಆಗಲ್ಲ... ಕೊಡದೆ ಇದ್ದರೆ ಈತ ಬಿಡಲ್ಲ.....  '' ಓಹೋ ಅದಕ್ಕೇನಂತೆ ಸರ್, ಬರೆದುಕೊಳ್ಳಿ..... 99614 .......... ''ಎಂದು ನಮ್ಮ ಬಾಸ್ ರ ನಿಜವಾದ ನಂಬರಿನ ಎರಡು ಅಂಕೆಗಳನ್ನು ಆಚಿಚೆ ಮಾಡಿ ಹೇಳಿದೆ ..... '' ಇರಿ  ಒಂದ್ನಿಮಿಷ, ನಿಮ್ಮೆದುರೆ ಮಾತನಾಡಿಸುತ್ತೇನೆ'' ಎಂದರು..... ಇದನ್ನು ನಾನು expect ಮಾಡಿರಲಿಲ್ಲ..... 'ಸುಮ್ಮನೆ ಒಂದು ನಂಬರ್ ಕೊಟ್ಟು ಬಂದರೆ ಆಯ್ತು.....  ಹಣ ಕೇಳಲು ಯಾರೂ ಆಫೀಸಿನಿಂದ ಫೋನ್ ಮಾಡಲ್ಲ..... ಸಂಜೆಯೊಳಗೆ ನನಗೆ ಬೇಕಾದ ಲೆಟರ್ ಟೈಪ್ ಆಗಿರತ್ತೆ.... ಇವರು  ಸಂಜೆ ಮನೆಗೆ ಹೋಗಿ ತಪ್ಪಾಗಿ ಕೊಟ್ಟ  ಬಾಸ್ ನಂಬರಿಗೆ  ಟ್ರೈ ಮಾಡ್ತಾ ಇರಲಿ' ಎಣಿಸಿ ತಪ್ಪು  ನಂಬರ್ ಕೊಟ್ಟಿದ್ದೆ.... ಪುಣ್ಯಾತ್ಮ, ಫೋನ್ ಮಾಡೇ ಬಿಡೋದಾ......

'' ಹೆಲೋ, ಇದು four laning ಮಾಡೋ ಕಂಪನಿಯ ಬಾಸಾ ? '' ನನಗೆ ನಗು ಬರುತ್ತಾ ಇತ್ತು...... ನಕ್ಕರೆ..... ನನ್ನ ಬಂದ ಕೆಲಸ ಕೆಡುತ್ತಿತ್ತು....ಸುಮ್ಮನಿದ್ದೆ..... ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತಮಗೆ ಬೇಕಾದವನಲ್ಲ ಎಂದು ಗೊತ್ತಾಗಿತ್ತು ಇವರಿಗೆ.... '' ಏನ್ರೀ, ತಪ್ಪು ನಂಬರ್ ಕೊಡ್ತೀರಾ....? ಹಣ ಕೊಡಲು ಆಗದೆ  ಇದ್ದರೆ ಹೇಳಬೇಕು... ಅದನ್ನ ಬಿಟ್ಟು ಹೀಗೆ  ಮಾಡ್ತೀರಾ .....ನಿಮ್ಮ ಆರ್ಡರ್ ಕೊಡಲ್ಲ ಹೋಗ್ರೀ'' ಎಂದರು ಸಿಟ್ಟಿನಿಂದ.....ನನಗೆ ನಡುಕ ಶುರು ಆಯ್ತು...... ಆದರೂ ಪಾರಾಗಬೇಕಲ್ಲ......'' ಸರ್, ನೀವು ಯಾವ ನಂಬರಿಗೆ ಮಾಡಿದ್ರೀ, ಅವರು ಈಗ ಇಲ್ಲಿಲ್ಲ..... ದೆಹಲಿಯಲ್ಲಿದ್ದಾರೆ....... ಇಲ್ಲಿಯ ನಂಬರ್ ಇಲ್ಲ ಅವರ ಹತ್ತಿರ..... ಅವರ ನಂಬರ್ ಮೊದಲಿಗೆ  ಸೊನ್ನೆ ಸೇರಿಸಿ ಮಾಡಿ ಸರ್... ನಾನು ಫೋನ್ ಮಾಡಿದಾಗ ಅವರ ಫೋನ್ not reachable  ಅಂತ ಬರ್ತಾ ಇತ್ತು  '' ಎಂದೆ..... ಸಮಯಕ್ಕೆ ಸರಿಯಾದ ಸುಳ್ಳನ್ನೇ ಹೇಳಿದ್ದೆ..... ವ್ಯಕ್ತಿ convince ಆದ ಹಾಗೆ ಕಂಡರು  ...... ಅಂತೂ ಬದುಕಿದೆ ಎನಿಸಿತು....... ' ಸರಿ ಸರ್, ನಾನು ಹೊರಡುತ್ತೇನೆ.... ನಾಳೆ ಆರ್ಡರ್ ಅನ್ನು ಕಳಿಸಿಕೊಡಿ... '' ಎಂದು ಹೊರಟೆ.....

ಬಾಗಿಲ ತನಕ ಹೋಗಿದ್ದೆ......  '' ರೀ ನಿಮ್ಮ ನಂಬರೂ ಕೊಡಿ..... ಯಾವುದಕ್ಕೂ ಇರಲಿ'' ಎಂದರು ಬೆನ್ನು ಬಿಡದ ಬೇತಾಳದಂತೆ.... ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ  ಒಳಕ್ಕೆ ಬಂದ.... 'ಅಯ್ಯೋ... ಹೇಗಾದರೂ ಮಾಡಿ ತಪ್ಪಿಸಿಕೊಳ್ಳೋಣ ಎಂದುಕೊಂಡರೆ ಈತ ನನ್ನ ನಂಬರ್  ಕೇಳ್ತಾ ಇದ್ದಾನಲ್ಲ   ' ಎಂದುಕೊಂಡು....... ನನ್ನ ನಂಬರ್ ಹೇಳಿದೆ.... ಆಗಿನ ಹಾಗೆ ಒಂದು ನಂಬರ್ ಆಚಿಚೆ ಮಾಡಿ..... ಅಲ್ಲಿಗೆ ಬಂದ ವ್ಯಕ್ತಿ ಎದುರಿನ ಕುರ್ಚಿ ಮೇಲೆ ಕುಳಿತ...... ನಾನು ಸಹ ಅವನ ಪಕ್ಕದಲ್ಲೇ ನಿಂತಿದ್ದೆ...... ನನ್ನ ನಂಬರ್    ಅವರ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡರು  .... '' ರಿಂಗ್ ಕೊಡ್ತಾ ಇದ್ದೀನಿ ನೋಡಿ, ಇದು ನನ್ನ ನಂಬರ್... ಸೇವ್ ಮಾಡಿಕೊಳ್ಳಿ '' ಎಂದರು....... ' ಅಯ್ಯೋ ಸತ್ತೆ, ಮತ್ತೆ ಸಿಕ್ಕಿ ಹಾಕಿಕೊಂಡೆ' ಎನಿಸಿದೆ...... ಮೊಬೈಲ್ ರಿಂಗ್ ಕೇಳಿಸುತ್ತಾ  ಇತ್ತು... ........ ನನಗೋ ಆಶ್ಚರ್ಯ...... 'ನಂಬರ್ ತಪ್ಪಾಗಿ ಕೊಟ್ಟರೂ ರಿಂಗ್ ಹೇಗೆ ಬಂತು ' ಅಂತ....  '' ಸರಿ, ನೀವು ಹೊರಡಿ '' ಎಂದರು ಅವರು ..... ನಾನು ನನ್ನ ಮೊಬೈಲ್ ಹೊರ ತೆಗೆದೆ .... ನನ್ನ ಮೊಬೈಲ್ ನಲ್ಲಿ ಯಾವುದೇ ಮಿಸ್ ಕಾಲ್ ಬಂದಿರಲಿಲ್ಲ.... ಅದೇ ಸಮಯಕ್ಕೆ ಒಳಗೆ ಬಂದ ವ್ಯಕ್ತಿಯೂ ಸಹ ಅವನ ಕಿಸೆಯಿಂದ ಮೊಬೈಲ್ ಹೊರ ತೆಗೆಯುತ್ತಿದ್ದ....... ಆಗಲೇಗೊತ್ತಾಗಿದ್ದು  ನನಗೆ, ರಿಂಗ್ ಆದ ಮೊಬೈಲ್ ನನ್ನದಲ್ಲ ಎಂದು.... 

Jun 20, 2010

'ಅನುಭವ' ಮೊದಲನೆಯದು...........

ಮನಸ್ಸು ತುಂಬಾ ಖುಷಿಯಾಗಿತ್ತು...... ಹೆದರಿಕೆಯೂ ಇತ್ತು.....ಹೊಸದೊಂದು ಅನುಭವಕ್ಕೆ ಮೈ ಮನಸ್ಸು ಕಾತುರಗೊಂಡಿತ್ತು..... ಟಿ. ವಿ. ಯಲ್ಲಿ ನೋಡಿದ್ದೆ..... ಅನುಭವಿಸಿದವರ ಬಾಯಲ್ಲಿ ಕೇಳಿದ್ದೆ...... ಒಬ್ಬನೇ ಈ ಸಾಹಸಕ್ಕೆ ಕೈ ಹಾಕಲು ಧೈರ್ಯ ಇರಲಿಲ್ಲ.... ನನ್ನ ಗೆಳೆಯರಾದ ವೆಂಕಟೇಶ್, ನಾಗರಾಜ್ ನನ್ನ ಕಾತುರ ಕಂಡು ಈ ದಿನವನ್ನು ಆರಿಸಿದ್ದರು...... ಇಬ್ಬರೂ ನನ್ನ ಶಾಲಾ ಸಹಪಾಟಿಗಳಾಗಿದ್ದರು.. ...... ಆದ್ರೆ ಈ ಅನುಭವ ಪಡೆಯೋ ಮನಸ್ಸು ಮಾಡಿದಾಗ ನಾನು ಕೆಲಸ ಸೇರಿದ್ದೆ...... ನನ್ನ ಗೆಳೆಯ ನಾಗರಾಜನಂತೂ ನನ್ನನ್ನ ಮಾನಸಿಕವಾಗಿ ರೆಡಿ ಮಾಡಿದ್ದ..... ವೆಂಕಟೇಶನಿಗೆ ಮನಸ್ಸಿಲ್ಲದಿದ್ದರೂ, ನನಗಾಗಿ ಜೊತೆಯಾಗಲು ಮನಸ್ಸು ಮಾಡಿದ್ದ..... ನಾಗರಾಜ ಈ ಮೊದಲು ಒಂದೆರಡು ಸಲ ಈ ಅನುಭವ ಪಡೆದಿದ್ದ ಎಂದೇ ಹೇಳಿದ್ದ......'' ಸಕತ್ ಕಣೋ, ಏನೋ ಒಂಥರಾ ಆಕಾಶದಲ್ಲಿ ತೇಲೋ ಥರ ಆಗತ್ತೆ ........ ಇದರ ಖರ್ಚು ಎಲ್ಲಾ ನಂದೇ... ಒಂದು ಸಲ ನೋಡು... ಮುಂದಿನ ಸಲ ನೀನೆ ನನ್ನನ್ನು ಕರೀತೀಯಾ'' ಅಂದ...... ''ಸರಿಯಪ್ಪಾ ನಡಿ, ಮೊದಲು ಅನುಭವಿಸಿ ನಂತರ ನೋಡ್ತೀನಿ..... ಏನಾದರೂ ತೊಂದರೆ ಆದರೆ ಜಾಡಿಸಿ ಒದಿತೀನಿ'' ಅಂದ ವೆಂಕಿ...... ' ಮಗನೆ, ಏನಾದರೂ ಯಾರ ಕೈಲಾದರೂ ಸಿಕ್ಕಿ ಬಿದ್ದರೆ, ನಿನ್ನ ತಿಥಿ ಮಾಡಿ ಬಿಡ್ತೀನಿ'' ಎಂದೆ ನಾನು....... ' ಏನೂ ಆಗಲ್ಲ ನಡೀರಿ' ಅಂದ ನಾಗ......


ಎಲ್ಲದಕ್ಕೂ  ಮೊದಲು ಚೆನ್ನಾಗಿ ಊಟ ಮುಗಿಸಿದೆವು....... ಹೊರಗಡೆ ಬಂದು ನೋಡಿದೆ, ತುಂಬಾ ಜನ ಪರಿಚಯದವರ  ಹಾಗೆ ಕಂಡರು......ಎಲ್ಲರೂ ನಮ್ಮನ್ನೇ  ನೋಡುತ್ತಿದ್ದಾರೆ  ಎನಿಸುತ್ತಿತ್ತು..... ನನಗಂತೂ ಬೆವರೊಡೆಯಲು ಶುರು ಮಾಡಿತ್ತು...... ನಾಗ , ಗೂಡಂಗಡಿ ಕಡೆಗೆ ನಡೆದ....... ನಾನು, ವೆಂಕಿ ಸ್ವಲ್ಪ ದೂರ ಹೋಗಿ ನಿಂತೆವು....... ನಾಗ ಗೂಡಂಗಡಿಯವನ ಜೊತೆ ಏನೋ ಕೇಳಿದ, ಅವನು ತೆಗೆದು ಕೊಟ್ಟ...... ನಾಗ ಒಳ್ಳೆ ಅನುಭವಸ್ತನ ಹಾಗೆ, ಹುಷಾರಾಗಿ ಪೇಪರ್ನಲ್ಲಿ ಸುತ್ತಿ ಕಿಸೆಯಲ್ಲಿ ಇಟ್ಟುಕೊಂಡ...... ಆ ಕಡೆ, ಈ ಕಡೆ ನೋಡಿ ನಮ್ಮತ್ತ ಬಂದ....... ' ನಡೀರೋ, ಅಲ್ಲಿ ಎಲ್ಲಾ ರೆಡಿಯಾಗಿದೆ' ಎಂದ...... ನಾನು '' ಯಾಕೋ ಹೆದರಿಕೆ ಆಗ್ತಾ ಇದೆ ಕಣ್ರೋ'' ಎಂದೆ..... '' ಮಗನೆ, ಹೀಗೆ  ಮಾಡೋಣ ಎಂದವನೂ ನೀನೆ, ಈಗ ಹೆದರುವವನೂ ನೀನೆ, ನಡಿ, ಏನಾಗತ್ತೋ ನೋಡೋಣ ಒಂದು ಕೈ ನೋಡೇ ಬಿಡೋಣ '' ಎಂದ ವೆಂಕಿ..........




ಸ್ಸರಿ.........., ಬಂದವರೇ  , ನಾಗರಾಜ  ಅಂಗಡಿಯಿಂದ  ಏನೋ ತೆಗೆದುಕೊಂಡು ಕಿಸೆಗೆ ಹಾಕಿಕೊಂಡ......ನಂತರ ನಮ್ಮ ಸವಾರಿ  ಸೈಕಲ್ ಹತ್ತಿ ಹೊರಟೆವು............ ನನ್ನ ಪ್ರಶ್ನೆ  ಮುಂದುವರಿದಿತ್ತು.......'' ಮುಗಿದ ನಂತರ ತುಂಬಾ ಕಷ್ಟ ಆಗತ್ತಾ..? ಬೇರೆಯವರೀಗೆ  ಗೊತ್ತಾಗತ್ತಾ....? ಜಾಗ ಸೇಫ್ ಆಗಿದೆ ತಾನೇ....? ಹಸಿವೆ  ಆದರೆ ಏನಾದರೂ ಇದೆಯಾ ತಿನ್ನಲಿಕ್ಕೆ.....?   ಎಲ್ಲರಿಗೂ ಚಾನ್ಸ್ ಇದೆ ತಾನೇ....?'' ಸೈಕಲ್ ಹಿಂದೆ ಕುಳಿತಿದ್ದ ವೆಂಕಿಯ ಕೈ ನನ್ನ ತಲೆ ಮೇಲೆ ಬೀಳದೆ ಇದ್ದರೆ , ನನ್ನ ಪ್ರಶ್ನೆ ಇನ್ನೂ ಮುಂದುವರಿಯುತ್ತಿತ್ತು......... ನಮ್ಮ ಸವಾರಿ, ಒಂದು ಕಾಡಿನ ತನಕ ಬಂದು ನಿಂತಿತ್ತು........ ಸೈಕಲ್ ನ್ನು ಒಂದು ಪೊದೆಯ ಹಿಂದೆ ಇಟ್ಟು, ಕಾಡಿನ ಒಳಗೆ ಹೋದೆವು....... ಅಷ್ಟೇನೂ ಘನವಾದ ಕಾಡೆನೂ ಆಗಿರಲಿಲ್ಲ...... ಸ್ವಲ್ಪ  ದೂರ ಹೋಗಿ, ನೆಲದ ಮೇಲೆ ಕುಳಿತೆವು........ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು........


ನಾಗರಾಜ, ಕಿಸೆಯಿಂದ ಪೇಪರ್ನಲ್ಲಿ ಸುತ್ತಿದ್ದನ್ನ ಹೊರತೆಗೆದ....... ''ಇದರ ಹೆಸರೇನು'' ಎಂದು ಕೇಳಿದೆ ನಾನು........' classic menthol ' ....... ''ಎಷ್ಟು ಕೂಲ್ ಆಗಿರತ್ತೆ  ಗೊತ್ತಾ......ಗಂಟಲಿಗೆ ಹೋದ ನಂತರ  ಕೂಲ್ ಕೂಲ್...... ಒಂದು ಸಲ ಸೇದಿದರೆ, ಇನ್ನೊಮ್ಮೆ ಸೇದಬೇಕು   ಅನಿಸತ್ತೆ'' ಅಂದ...... ..... ನಾನೂ ಸಹ ಇದರ ಬಗ್ಗೆ ತುಂಬಾ ಕೇಳಿದ್ದೆ...... ಒಂದು ಸಲ ಅನುಭವಿಸಿಯೇ ಬಿಡೋಣ ಎಂದು ಈ ಸಾಹಸಕ್ಕೆ ಕೈ ಹಾಕಿದ್ದೆವು......... ಮೊದಲ  ಸಲ ಆದ್ದರಿಂದ ಮತ್ತು ತಪ್ಪು ಎಂದು ಗೊತ್ತಿದ್ದರಿಂದ ಹೀಗೆಲ್ಲಾ ಕಾಡಿಗೆ ಬಂದು ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೆವು..... ......


'' ಒಬ್ಬೊಬ್ಬರಿಗೆ, ಎರಡೆರಡು ತಂದಿದ್ದೇನೆ  ..... ಏನೂ ಆಗಲ್ಲ.... ಇದನ್ನ ಮುಗಿಸಿಯೇ ಹೊರಡಬೇಕು '' ಅಂದ ನಾಗರಾಜ......   ನಾನು, ವೆಂಕಿ ನಮ್ಮ ಪಾಲನ್ನು ಪಡೆದು, ಬಾಯಿಗಿಟ್ಟುಕೊಂಡೆವು  ..... ನಾಗರಾಜನ ಇನ್ನೊಂದು ಕಿಸೆಯಿಂದ ಬೆಂಕಿ ಪೊಟ್ಟಣ ಹೊರ ಬಂತು..... ನಾಗರಾಜ , ನುರಿತ ಸೇದುಗಾರನಾಗಿದ್ದ...... ಸಲೀಸಾಗಿ, ಬೆಂಕಿ ಹಚ್ಚಿಕೊಂಡ....... ನಾನು , ವೆಂಕಿ ಸ್ವಲ್ಪ ಕಷ್ಟಪಟ್ಟೆವು..... ಬೆಂಕಿ ತಾಗಿಸುವ ಸಮಯಕ್ಕೇ, ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು ಎಂದು ನಮಗೆ ತೋಚಿಯೇ ಇರಲಿಲ್ಲ.....ನಮಗೆ ಅದು ಸಾಧ್ಯವಾಗದೆ ಇದ್ದಾಗ ನಾಗರಾಜನೆ , ಹಚ್ಚಿ ಕೊಟ್ಟ......ಬಾಯಿಗಿಟ್ಟ ಕೂಡಲೇ, ತುಟಿ ಚುರ್ ಎಂದಿತು..... ಆದರೂ ಏನೋ ಒಂಥರಾ....... ವೆಂಕಿಯನ್ನು ನೋಡಿದೆ....... ಅವನದೂ ನನ್ನದೇ ಪಾಡು..... ಮುಖ ಇಂಗು ತಿಂದವನ ಹಾಗಿತ್ತು...... ನಾಗರಾಜ ಮಾತ್ರ ರಾಜನ ಹಾಗೆ ಎಳೆಯುತ್ತಿದ್ದ ದಮ್ಮು....... ನನ್ನ ಮೊದಲನೇ ದಮ್ಮು ಒಳಗೆಳೆದುಕೊಂಡೆ..... ತಂಬಾಕಿನ ಹೊಗೆಯ ಗಾಳಿ, ನಾಲಿಗೆಯನ್ನು ಸೋಕಿ ಕಹಿಯ ಅನುಭವವಾಯಿತು.... ಸಿಗರೇಟು ಕೈಯಲ್ಲಿ ಹಿಡಿದು , ಹೊಗೆಯನ್ನು ಹೊರಗೆ ಬಿಟ್ಟೆ...... ನಾಲಿಗೆ ಪೂರಾ ಕಹಿ ಕಹಿ ಎನಿಸಲು ಶುರು ಮಾಡಿತ್ತು....... ಬಾಯಿಯ ಒಳ ಮೈಯಿ, ಸುಟ್ಟ ಅನುಭವ ನೀಡಿತ್ತು..... '' ಥೂ.... '' ಎನ್ನುತ್ತಿದ್ದ ವೆಂಕಿ......... '' ಏನೆಂದೇ ಮಗನೆ, ಬಾಯಿ, ಗಂಟಲು  ಎಲ್ಲಾ ಕೂಲ್ ಆಗತ್ತೆ ಎಂದ್ಯಲ್ಲಾ........ ಎಲ್ಲಾ ಉರಿಯುತ್ತಿದೆ ಇಲ್ಲಿ'' ಎಂದೆ.......... ವೆಂಕಿಯೂ ದನಿಗೂಡಿಸಿದ......... '' ಮಕ್ಕಳೇ, ಹೊಗೆಯನ್ನು ಗಂಟಲಿನ ತನಕ ಎಳೆದುಕೊಂಡು ಸ್ವಲ್ಪ ಹೊತ್ತು ಇಟ್ಟುಕೊಂಡು ನಂತರ ಹೊರಗೆ ಬಿಡಿ...... ಆಗ ತಿಳಿಯತ್ತೆ ಇದರ ರುಚಿ '' ಎಂದ........ ನಾನು ವೆಂಕಿ ಮುಖ ಮುಖ ನೋಡಿಕೊಂಡೆವು...... 'ಇರಲಿ, ಇದನ್ನೂ ನೋಡೇ ಬಿಡೋಣ' ಎಂದುಕೊಂಡು ಮತ್ತೊಮ್ಮೆ ತುಟಿಗಿಟ್ಟೆ  ...... ಎರಡನೇ  ದಮ್ಮೂ ಒಳಗೆ ಹೋಗಲು ಶುರು ಮಾಡಿತು...... ಮೊದಲು ನಾಲಿಗೆ ಮುಟ್ಟಿದ ಹೊಗೆ, ಕ್ರಮೇಣ ತನ್ನ ಪಯಣವನ್ನು ಗಂಟಲಿನತ್ತ ಮುಂದುವರಿಸಿತ್ತು...... ನಾಗರಾಜ ಹೇಳಿದ್ದನಲ್ಲ,  ಗಂಟಲಿನಲ್ಲೇ  ಇಟ್ಟುಕೊಳ್ಳಬೇಕು ಅಂತ..... ಸ್ವಲ್ಪ ಹೊತ್ತು ಇಟ್ಟುಕೊಂಡೆ....... ಹೊಗೆ ತನ್ನ ಕರಾಮತ್ತು ತೋರಲು ಶುರು ಮಾಡಿತ್ತು...... ಗಂಟಲಲ್ಲಿ ತಂಪಿನ ಅನುಭೂತಿ ಶುರು  ಆಗುವುದರಲ್ಲಿತ್ತು........ ಅಷ್ಟರಲ್ಲೇ....... ಅದೆಲ್ಲಿತ್ತೋ........... ಕೆಮ್ಮು........ಕೆಮ್ಮು......... ಕೆಮ್ಮು.........


       ಬಾಯಲ್ಲಿ..... ಮೂಗಲ್ಲಿ....ಕಣ್ಣಲ್ಲಿ..... ಹೊಗೆ ಹೊರ ಬಂದ ಹಾಗಾಗಿತ್ತು.......  ಬಾಯಲ್ಲಿ ನೀರು..... ಕಣ್ಣಲ್ಲಿ ನೀರು ........ ಕೆಮ್ಮಿ ಕೆಮ್ಮಿ ಸುಸ್ತಾಗಿ, ವೆಂಕಿಯನ್ನು ನೋಡಿದೆ........ ಅವನ ಪರಿಸ್ತಿತಿ ಬೇರೆ ಏನೂ ಆಗಿರಲಿಲ್ಲ..... ನಾಗರಾಜ  ಮಾತ್ರ ಬಿಂದಾಸ್ ಆಗಿ ಹೊಗೆ ಬಿಡುತ್ತಿದ್ದ....... ಕೊನೆಯಲ್ಲಿ ನನ್ನ ಅರ್ಧ  , ವೆಂಕಿ ಅರ್ಧ  ಸಿಗರೇಟು ಸಹ ಅವನ ಬೆರಳುಗಳ ಮದ್ಯೆ ಇತ್ತು...... ತೋರು ಬೆರಳು, ಮಧ್ಯ ಬೆರಳು , ಕಿರು ಬೆರಳುಗಳ ಮಧ್ಯೆ ಮೂರು ಸಿಗರೇಟು ರಾರಾಜಿಸುತ್ತಿತ್ತು..... ನಮ್ಮ ಕೆಮ್ಮು ಮುಗಿದು ಒಂದು ಹಂತಕ್ಕೆ ಬಂದಿದ್ದೆವು........ ನಾಲಿಗೆ, ಬಾಯಿ ಕಹಿ..ಕಹಿ..... ಸುಟ್ಟ ಹಾಗಾಗಿತ್ತು....... ನಾಗರಾಜ ' ಏನು ಹುಡುಗ್ರಪ್ಪಾ, ಒಂದು ಸಿಗರೇಟು ಸೇದಲಿಕ್ಕೂ ಬರಲ್ಲ'' ಎಂದು ಎದ್ದು ನಿಂತ.... ನನಗೋ..... ಜಾಡಿಸಿ ಒದೆಯೋಣ ಎನಿಸಿತು.......  ಅರ್ಜಂಟಾಗಿ, ಬಾಯಿಗೆ ಏನಾದರೂ ಉಪಚಾರ ಮಾಡಬೇಕಿತ್ತು...... ಸೈಕಲ್ ಹತ್ತಿ , ಬೇಗ ಬೇಗ ಅಂಗಡಿಗೆ ಬಂದೆವು............ ಅಲ್ಲಿ, ನಮ್ಮ ಬಾಯಿಗಾಗುವ ಮದ್ದು ಏನೂ ಇರಲಿಲ್ಲ...... ಬಾಯಿ ಒಳಗೆ, ಹೊರಗೆ...... ಕೈಯಿ.... ಅಂಗಿ ಎಲ್ಲೆಲ್ಲೂ ಸಿಗರೇಟಿನ ವಾಸನೆ..... ಏನಾದರೂ ಅರ್ಜಂಟಾಗಿ, ಅದರ ವಾಸನೆಗಿಂತಲೂ ಕೆಟ್ಟದ್ದನ್ನು ಬಾಯಿಗೆ ಹಾಕಿಕೊಳ್ಳಬೇಕಿತ್ತು...... ಹುಡುಕಿದೆ..... ಹುಡುಕಿದೆ..... ಸಿಕ್ಕಿದ್ದು.... ಕೊತ್ತಂಬರಿ ಬೀಜ.......... ಗಬಕ್ಕನೆ ಬಾಯಿಗೆ ಹಾಕಿಕೊಂಡೆವು ನಾನು ಮತ್ತು ವೆಂಕಿ...... ನಾಗರಾಜ ಮಾತ್ರ ಕೂಲ್ ಆಗಿದ್ದ...... ಕೊತ್ತಂಬರಿ ಜಗಿದೆ....... ಸಿಗರೇಟಿನದು ಒಂದು ತೂಕದ್ದಾದರೆ, ಕೊತ್ತಮ್ಬರಿಯದ್ದೊಂದು ತೂಕ..... ಆದರೂ ಸಹಿಸಿಕೊಂಡೆ...... ನಾಗರಾಜನನ್ನು ಕೊಂದೇ ಹಾಕುವ ಮನಸ್ಸಾಗಿತ್ತು........




ನಂತರ ಎಂದೆಂದೂ ನಾನು ಸಿಗರೇಟಿಗೆ ತುಟಿ ಸೋಕಿಸಲೇ ಇಲ್ಲ...... ಆದರೂ ಆ ವಾಸನೆ ನನ್ನನ್ನು ಬೆನ್ನತ್ತುತ್ತಲೇ ಇದೆ...... ನನ್ನ ಗೆಳೆಯ ನಾಗರಾಜನ ನೆನಪಿನ ಹಾಗೆ...... 

May 19, 2010

ಕಳೆದೋದ ನಾನು......!


ಮರೆಯಾದೆ ನನ್ನೊಳಗೆ,
ನಾನೆಂಬ ನೆರೆಯೊಳಗೆ.......
ಕಳೆದೋದೆ ನನ್ನನ್ನೇ,
ಕಾಣೆಯಾದ ಕನಸೊಳಗೆ.........

Apr 13, 2010

'ಸುಮ್ ಸುಮ್ನೆ...... ಕೊರೀತಾನೆ.... '

ಸುಮ್ನೆ ......


ಏನೂ ಇಲ್ಲ........


ಏನೂ ಬರೆಯಲು ಮನಸ್ಸಿಲ್ಲ.......


ಏನಾದರೂ ಬರೆಯೋಣ ಎಂದುಕೊಂಡೆ , ಏನೂ ಹೊಳೆಯಲಿಲ್ಲ........ !

ಕಳೆದ ಸಾರಿ ಬರೆದ ಪೋಸ್ಟ್ ಯಾರ ಬ್ಲಾಗ್ ನಲ್ಲಿ ಅಪ್ಡೇಟ್ ಹೋಗದೆ ತುಂಬಾ ಬೇಸರವಾಯಿತು....... ಕಾರಣ ಇನ್ನೂ ತಿಳಿದಿಲ್ಲ..... ಕಾಮೆಂಟ್ ಸಹ ಕಡಿಮೆ ಬಂತು..... ಹಾಗಾಗಿ ಏನೂ ಬರೆಯೋ ಮನಸ್ಸಾಗಲಿಲ್ಲ...... ಆದರೂ ಬಿಡದೆ, ಎಲ್ಲರ ಬ್ಲಾಗ್ ಗೆ ಹೋಗಿ , ಆರ್ಕುಟ್ ನಲ್ಲಿ ಪ್ರಚಾರ ಮಾಡಬೇಕಾಗಿ ಬಂತು........ ಇದು ಯಾಕೋ ಸರಿ ಕಾಣಲಿಲ್ಲ ನನಗೆ.....

Apr 4, 2010

ಏನೋ ಮಾಡಲು ಹೋಗಿ.........

ತುಂಬಾ ಕಸಿವಿಸಿಯಾಗಿದೆ ಮನಸ್ಸು..... ಆಫೀಸ್ ಗೆ ಹೋಗಲಂತೂ ಮನಸ್ಸೇ ಇಲ್ಲ..... ..ಅದು ನಾನೇ ನನ್ನ ಕೈಯಾರೆ ಮಾಡಿಕೊಂಡ ತಪ್ಪಾಗಿತ್ತು..... ...ಅರ್ಧ ದಿನದ ರಜೆಗಾಗಿ ನನ್ನ ಟೀಂ ಲೀಡರ್ ಗೆ ಒಂದು ಸಿಹಿ smile ಬಿಸಾಡಿದ್ದೆ..... ಆ ಮುದಿಯ ಹೀಗೆ ಮಾಡುತ್ತಾನೆ ಎಣಿಸಿರಲಿಲ್ಲ.....

ಇಷ್ಟಕ್ಕೂ ನಡೆದಿದ್ದೇನೆಂದರೆ ........ ನಿನ್ನೆ ಕೆಲಸ ಮಾಡುವ ಮನಸ್ಸಿರಲಿಲ್ಲ..... ಮನೆಗೆ ಹೋಗಿ ಮಲಗೋಣ ಎನಿಸಿತು.... ಅಮ್ಮನ ಕೈಲಿ , ತಲೆ ಬಾಚಿಸಿಕೊಂಡು , ಎಣ್ಣೆ ಸ್ನಾನ ಮಾಡಿಸಿಕೊಂಡು ಸ್ವಲ್ಪ ಮಲಗೋಣ ಎನಿಸಿಕೊಂಡೆ..... ಸರಿ, ಬಾಸ್ ಗೆ ಹೇಳಿ ಹೋಗೋದು.... ಸುಮ್ಮನೆ ರಜೆ ಚೀಟಿ ಯಾಕೆ ಎಂದುಕೊಂಡು ಚೇಂಬರ್ ಬಾಗಿಲು ತಳ್ಳಿಕೊಂಡು ಒಳಗೆ ಹೋದೆ..... '' ಬಾರಮ್ಮ , ಕೂತ್ಕೋ .. ನನ್ನ ಚೇಂಬರ್ ಕಡೆ ಅಪರೂಪವಾಗಿ ಹೋದೆ ನೀನು.... ...ಏನು ವಿಶೇಷ ಇವತ್ತು,

Mar 25, 2010

ಇದು ಕಥೆಯಲ್ಲ ....ಜೀವನವೂ ಆಗದಿರಲಿ.......!

ಆಗಷ್ಟೇ ಸ್ನಾನ ಮಾಡಲು ಶುರು ಮಾಡಿದ್ದೆ... ಶೆಕೆಗಾಲದ ತಂಪು ನೀರು ಸ್ನಾನ ಮೈಗೆ, ಮನಸ್ಸಿಗೆ ಮುದ ನೀಡುತ್ತಿತ್ತು.... ಒಂದೇ ಸಮನೆ ಮನೆಯ ಕರೆಗಂಟೆ ಬಡಿದುಕೊಳ್ಳಲು ಶುರು ಮಾಡಿತು..... ಹೆಂಡತಿ ಊರಿಗೆ ಹೋಗಿದ್ದಳು..... ನಾನೇ ಹೋಗಿ ಬಾಗಿಲು ತೆರೆಯಬೇಕಿತ್ತು..... ನನ್ನ ಸ್ನಾನ ಅರ್ಧವಾಗಿತ್ತಷ್ಟೇ..... ಬೇಗ ಸ್ನಾನ ಮುಗಿಸೋಣ ಎಂದು ಸ್ನಾನ ಮುಂದುವರಿಸಿದೆ.... ಒಂದೇ ಸಮನೆ ಬೆಲ್ ಹೊಡೆದುಕೊಳ್ತಾ ಇತ್ತು..... ಯಾರಿರಬಹುದು ರೀತಿ ಬೆಲ್ ಮಾಡ್ತಾ ಇರೋರು ಅಂತ ಯೋಚನೆ ಮಾಡಿದೆ...... ಯಾರೆಂದು ಹೊಳೆಯಲಿಲ್ಲ..... ನನ್ನ ಗೆಳೆಯ ಮತ್ತು ಆತನ ಹೆಂಡತಿ ಮಾತ್ರ ರೀತಿ ಬೆಲ್ ಹೊಡೆಯುತ್ತಿದ್ದರು..... ಆದರೆ ಈಗೀಗ ಅವರಿಬ್ಬರ ನಡುವೆ ತುಂಬಾ ಜಗಳ ನಡೆಯುತ್ತಿತ್ತು.... ಇಬ್ಬರೂ ವಿದ್ಯಾವಂತರು... ಗಂಡ ಒಳ್ಳೆಯ ಕೆಲಸದಲ್ಲಿದ್ದ.... ಚಿಕ್ಕ ಚಿಕ್ಕ ವಿಷಯವನ್ನೇ ದೊಡ್ಡದು ಮಾಡಿಕೊಂಡು ಜಗಳವಾಡುತ್ತಿದ್ದರು..... ಸಂಸಾರದಲ್ಲಿ ಗಂಡಾಂತರ ಮಾಡಿಕೊಂಡಿದ್ದರು..... ನನ್ನನ್ನು ಅವರ ಜಗಳದಿಂದ ದೂರ ಇಟ್ಟಿದ್ದರು..... ಗೆಳೆಯನ ಹೆಂಡತಿ ಅವರ ಜಗಳದ ಬಗ್ಗೆ ಹೇಳುತ್ತಿದ್ದರೂ, ಆತನ ಬಗ್ಗೆ ಪೂರಾ ದೂರುಗಳೇ ಇರುತ್ತಿದ್ದವು..... ಯಾರನ್ನು ನಂಬೋದು ಅಂತ ಗೊತ್ತಿರಲಿಲ್ಲ.....

Mar 15, 2010

ಚಿಗುರಿದೆ ಕನಸು....!

ತಿಳಿಯಾಗಿದೆ ಮನಸ್ಸು,
ಕಲ್ಲೆಸೆಯಬೇಡ.....
ಹಳೆಯದಾಗಿದೆ ನೋವು,
ಮತ್ತೆ ಮತ್ತೆ ಕೆದಕಬೇಡ.....

Mar 4, 2010

ಎಲ್ಲಿಗೆ ಪಯಣ......?


ಅಲುಗಾಡುತ್ತಿದೆ ಭಾವದಾ ಬಂಡಿ,
ನಂಬಿಕೆಯೇ ಇಲ್ಲ ಯಾರೊಬ್ಬರ ಮೇಲೂ.....
ಯಾರಿಗ್ಯಾರಿಗೂ ಇಲ್ಲ ಇಲ್ಲಿ,
ನೂಕಿ ಹೊರಟಿಹರು ಎಲ್ಲರನ್ನ ......

Feb 22, 2010

ನನ್ನ ಕಥೆ.....!

ಇವತ್ತು ನನ್ನ ಮದುವೆ.. ....ನನ್ನ ಜೊತೆಗೆ ಯಾರೂ ಬಂದಿಲ್ಲ..... ಕೊನೆಯ ಘಳಿಗೆಯಲ್ಲಿ ಯಾರಾದರೂ ಬಂದಿರಬಹುದು ಎಂದು ಎಲ್ಲಾ ಕಡೆ ಕಣ್ಣು ಹಾಯಿಸಿದರೂ ಯಾರೂ ಕಾಣಿಸಲಿಲ್ಲ..... ಅವರಿಗೆ ಇಷ್ಟವಿರಲಿಲ್ಲ ಮದುವೆ...... ಅಮ್ಮ ಅಪ್ಪ, ಅಕ್ಕನ ಮನೆಗೆ ಹೋಗಿದ್ದಾರೆ ಇಲ್ಲಿಗೆ ಬರಲೇಬಾರದೆಂದು..... ಅವರಿಗಷ್ಟೇ ಅಲ್ಲ, ಯಾರಿಗೂ ಇಷ್ಟವಿರಲಿಲ್ಲ...... ನಾನು ಕೊನೆಯ ಹುಡುಗಿ ನನ್ನ ಮನೆಯಲ್ಲಿ, ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದೆ.... ಸುಖವಾಗಿದ್ದಾರೆ..... ನಾನು ಕಿರಿಯವಳಾದ್ದರಿಂದ ಸ್ವಲ್ಪ ಮುದ್ದು ನನ್ನ ಮೇಲೆ... ನನ್ನ ಹಟವೂ ಸ್ವಲ್ಪ ಅತಿಯಾಗೆ ಇತ್ತು......

Feb 14, 2010

ನನ್ನವಳ ಸ್ವಗತ..... .!

ಕಾಯುತಿರುವೆ ಎಂದೋ ನಾನು,
ನೀನು ಬರುವ ದಾರಿಯ....
ಮೌನದಿಂದ ನೋವ ಸಹಿಸಿ,
ಕಾಯ್ವೆ ನಿನ್ನ ದಾರಿಯ.....

Feb 6, 2010

ಮಲಯಾಳಿ ಮನುಷ್ಯ..... !

ನಾನು ಈಗ ಕೆಲಸ ಮಾಡ್ತಾ ಇರುವ ಕಂಪನಿಯಲ್ಲಿ team leader ಒಬ್ಬರಿದ್ದರು...... ಈಗ ಅವರಿಲ್ಲ , ವರ್ಗಾವಣೆ ಆಗಿದೆ..... ಅವರು ಕೇರಳದವರು.... ಅತಿಯಾದ ಮಲಯಾಳಿ ಪ್ರೇಮ, ಪ್ರೇಮ ಎನ್ನುವುದಕ್ಕಿಂತ ಕೇರಳದಲ್ಲಿಯೇ ಹೆಚ್ಚಿಗೆ ಕೆಲಸ ಮಾಡಿದ್ದರಿಂದ ಮಲಯಾಳಿ ಬಿಟ್ಟು ಬೇರೆ ಭಾಷೆ ಬಿಟ್ಟು ಮಾತಾಡಿರಲಿಲ್ಲ..... ಹಿಂದಿ ಭಾಷೆ ಸುಟ್ಟುಕೊಂಡು ತಿನ್ನಲೂ ಬರುತ್ತಿರಲಿಲ್ಲ.... ಒಂದು ಶಬ್ಧದ ಅರ್ಥವೂ ತಿಳಿದಿರಲಿಲ್ಲ..... ನಮ್ಮ ಸಂಭಾಷಣೆ 'ಮಂಗ್ಲಿಶ್ ' ನಲ್ಲಿ ನಡೆಯುತ್ತಿತ್ತು.... ಅಂದ್ರೆ ಅಲ್ಪ ಇಂಗ್ಲಿಷ್, ಉಳಿದದ್ದು ಮಲಯಾಳಿಯಲ್ಲಿ ನಡೆಯುತ್ತಿತ್ತು..... ಮಾತಿನ ಆರಂಭ ಇಂಗ್ಲಿಷ್ ನಲ್ಲಿ ಮಾಡಿದರೆ , ಮುಗಿಯೋದು ಮಲಯಾಳಿಯಲ್ಲಿ... ಅದೂ 'ರಾಜಧಾನಿ express' ಸ್ಪೀಡಿನಲ್ಲಿ...... ಫರ್ಮಾನು ಹೊರಡಿಸುತ್ತಿದ್ದರು.....ಯಾಕೆಂದರೆ ಮಂಗಳೂರು ಕೇರಳಕ್ಕೆ ಹತ್ತಿರವಂತೆ , ಹಾಗಾಗಿ ನಾವೆಲ್ಲಾ ಮಲಯಾಳಿ ಕಲಿಯಬೇಕಂತೆ..... ನಮ್ಮಲ್ಲಿ ಕೆಲವರು ಕರ್ನಾಟಕದವರು, ಆಂದ್ರ, ಉತ್ತರ ಪ್ರದೇಶ, ಬಂಗಾಳ, ತಮಿಳು ನಾಡಿನವರೂ ಕೆಲಸ ಮಾಡುತ್ತಿದ್ದರು..... ನಮಗೆ ಅವರು ಹೇಳಿದ್ದು ಅರ್ಥವೂ ಆಗುತ್ತಿರಲಿಲ್ಲ.... ಎಲ್ಲಾನೂ ಮಲಯಾಳಿಯಲ್ಲಿ ಹೇಳಿ ಮುಗಿಸಿ ಕೊನೆಗೆ ' understood na ' ಎಂದು ಬೇರೆ ಕೇಳುತ್ತಿದ್ದರು.... ಸುಮ್ಮನೆ ತಲೆಯಾಡಿಸಿ ಬರುತ್ತಿದ್ದೆವು..... 'ಪುಣ್ಯಾತ್ಮರು ' ಯಾವುದೇ ಕೆಲಸ ಹೇಳಿದ್ರೂ , ಎರಡನೇ ಬಾರಿ ಅದರ ಬಗ್ಗೆ ವಿಚಾರಿಸುತ್ತಾ ಇರಲಿಲ್ಲ...... ಕೇಳಿದ್ದರೂ, ನಾವು ಕೆಲಸ ಮಾಡಿರುತ್ತಿರಲಿಲ್ಲ.... ಯಾಕಂದ್ರೆ ಹೇಳಿದ ಕೆಲಸ ಅರ್ಥ ಆಗಿದ್ರೆ ತಾನೇ........
ನಾನಂತೂ ತುಂಬಾ ಕಷ್ಟ ಪಟ್ಟಿದ್ದೆ..... ಯಾವುದೇ ಕೆಲಸ ಇದ್ರೂ ನಂಗೆ ಕರೆದು ಹೇಳುತ್ತಿದ್ದರು ..... ಅದೇ ಮಂಗ್ಲಿಶ್ ಭಾಷೆಯಲ್ಲಿ , ಆರಂಭ ಇಂಗ್ಲಿಷ್....ಅಂತ್ಯ ಮಲಯಾಳಿ..... ಒಂದು
ಚೂರೂ ಅರ್ಥ ಆಗ್ತಿರಲಿಲ್ಲ..... ಹೇಗಾದರೂ ಮಾಡಿ ಅವರಿಗೆ ಚುರುಕು ಮುಟ್ಟಿಸಬೇಕು ಎಣಿಸಿಕೊಂಡೆ..... .. ನನ್ನ ಸಹಪಾಠಿಗಳು ಇದಕ್ಕೆ ಸಮ್ಮತಿಸಿದ್ದರು.....ಹೇಗೆ ಅಂತ ಗೊತ್ತಿರಲಿಲ್ಲ.....

Jan 28, 2010

ಬ್ರೇಕ್ ಹಾಕೋಕೆ ನೆನಪೇ ಇಲ್ಲ....

ಅವನು ಗಣಪತಿ....... ನಮ್ಮೊರ ಸೋಡಾ ಸಪ್ಲಯರ್.... ಹಳ್ಳಿಯಲ್ಲಿ 'ಗೋಲಿ ಸೋಡಾ' ಮಾರಾಟ ಮಾಡುತ್ತಿದ್ದ..... 'ಶುಂಟಿ ಸೋಡಾ' 'ಸಪ್ಪೆ ಸೋಡಾ' ತುಂಬಾ ಚೆನ್ನಾಗಿ ಮಾಡುತ್ತಿದ್ದ....... ಒಳ್ಳೆಯ ರುಚಿಯಿರುತ್ತಿತ್ತು ಕೂಡ..... ಮಾಡುವ ರೀತಿ, ಶುದ್ದಿಯ ಬಗ್ಗೆ ಅನುಮಾನಗಳಿದ್ದರೂ ಸಹ ರುಚಿಯ ಬಗ್ಗೆ ಮಾತಿರಲಿಲ್ಲ...... ತುಂಬಾ ಕೊಳಕಾಗಿ ಇರುತ್ತಿದ್ದ...... ಅದಕ್ಕಾಗಿಯೇ ಸೋಡಾ ರುಚಿಯಾಗಿರುತ್ತದೆ ಎಂದು ನಾವೆಲ್ಲಾ ಮಾತಾಡಿಕೊಳ್ಳುತ್ತಿದ್ದೆವು ..... ಅವನ ಸೈಕಲ್ ಮೇಲೆ ಊರಲ್ಲಿನ ಎಲ್ಲಾ ಅಂಗಡಿಗಳಿಗೂ ಈತನೇ ಸೋಡಾ ಸಪ್ಲಯ್ ಮಾಡುತ್ತಿದ್ದ.... ವ್ಯಾಪಾರ ಚೆನ್ನಾಗಿ ಆಗುತ್ತಿದ್ದ ಹಾಗೆ ಸ್ಕೂಟರ್ ತೆಗೆದುಕೊಂಡ....... ಸ್ಕೂಟರ್ ಹಿಂದೆ ಸೋಡಾ ರಾಕ್ ಇಟ್ಟುಕೊಂಡು ಹೊರಟನೆಂದರೆ, ''ಮೈಸೂರು ಅಂಬಾರಿ'' ಯ ನೆನಪು ತರಿಸುವ ಹಾಗೆ ಸ್ಕೂಟರ್ ನಡೆಸುತ್ತಿದ್ದ.....

Jan 18, 2010

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?


'' ಅವ್ವಾ, ಹೋಗಿ ಬರುತ್ತೇನೆ '' ..... ಅಣ್ಣ , ಅಮ್ಮನನ್ನು ಕರೆಯುತ್ತಿದ್ದ....
ಅಪ್ಪನ ಕಾಲಿಗೂ ನಮಸ್ಕರಿಸಿದ..... ಅಪ್ಪನ ಕಣ್ಣು ಆಗಲೇ ಹನಿಗೂಡುತ್ತಿತ್ತು..... ಅಮ್ಮ ಅಲ್ಲಿಗೆ ಬರುತ್ತಾ ಇದ್ದರು..... ಅವರ ಕಾಲಿಗೂ ಅಣ್ಣ ನಮಸ್ಕರಿಸಿದ..... ನಾನು ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ್ದೆ..... ಇದು ಪ್ರತಿ ಸಾರಿ ಊರಿಗೆ ಬಂದು ಅಲ್ಲಿಂದ ಹೊರಡುವಾಗ ನಡೆಯುವ ದ್ರಶ್ಯ..... ಈ ಸಾರಿ ಊರಹಬ್ಬಕ್ಕೆ ಮನೆಗೆ ಹೋಗಿ ಎರಡು ದಿನ ಳೆದು
ವಾಪಸ್ ಬರುವಾಗಲೂ ಹೀಗೆ ನಡೆಯಿತು .... ಸಾರಿ ಸಹ ಇದು ನನ್ನನ್ನು ತುಂಬಾ ಘಾಡವಾಗಿ ಕಾಡಿತು..... ಹಲವು ಪ್ರಶ್ನೆಗಳನ್ನು ಸಹ ಕೇಳಿತು.....

ನಾನು , ನನ್ನಣ್ಣ ಊರಿನಿಂದ ದೂರದಲ್ಲಿ ಕೆಲಸ ಮಾಡುತ್ತೇವೆ..... ನಮಗೆ ನಮ್ಮದೇ ಸಂಸಾರ, ನಮ್ಮದೇ ಆದ ತಾಪತ್ರಯಗಳಿವೆ..... ಹೊಟ್ಟೆಪಾಡಿಗಾಗಿ ನಾವು ನಮ್ಮ ಗೂಡಿಗೆ ಹಿಂತಿರುಗಿ ಬರಲೇ ಬೇಕು..... ಅಪ್ಪ ಅಮ್ಮನಿಗೆ ಬೇಸರವಾಗುತ್ತದೆ ಎಂದು ಅಲ್ಲೇ ಕುಳಿತರೆ ಬಡಪಾಯಿ ಹೊಟ್ಟೆಗೆ ಹಸಿವೆಯಾಗುತ್ತದಲ್ಲ... ..... ಅದಕ್ಕೆ ನೋವು ನಲಿವು, ಸಿಟ್ಟು ಸೆಡವು, ಪ್ರೀತಿ ಮತ್ತೆ ಅದರ ಆತ್ಮೀಯತೆ ಅರ್ಥವಾಗುವುದಿಲ್ಲವಲ್ಲ....

ಅಪ್ಪ ಅಮ್ಮ, ನಮಗೆ ವಿದ್ಯೆ ಕೊಡಿಸಲು ತುಂಬಾ ಕಷ್ಟ ಪಟ್ಟಿದ್ದರು..... ಅದರಲ್ಲೂ ಅಮ್ಮ , ಅಪ್ಪನ ಕೆಲಸದ ಹೊರತಾಗಿಯೂ, ಸಣ್ಣ ಪುಟ್ಟ ವ್ಯಾಪಾರ ಮಾಡಿ ನಮ್ಮ ಭವಿಷ್ಯದ ಕನಸಿಗೆ ಧಾರೆ ಎರೆದಿದ್ದರು ..... ಅವರ ಕಷ್ಟದ ದಿನಗಳು ನಮಗೆ ಆಗ ಏನೂ ಅರ್ಥ ಆಗುತ್ತಿರಲಿಲ್ಲ..... ದೀಪ ಹೇಗೆ ತನ್ನನ್ನು ಹೊತ್ತಿಕೊಂಡು ಇತರರಿಗೆ ಬೆಳಕು ಕೊಡುತ್ತದೋ ಹಾಗೆ ಅಪ್ಪ ಅಮ್ಮ ಅವರ ವರ್ತಮಾನ ಮರೆತು ನಮ್ಮ ಭವಿಷ್ಯಕ್ಕಾಗಿ ದುಡಿದಿದ್ದರು.... ಅವರ ಸ್ವಂತ ಸುಖ ಮರೆತು ನಮಗೆ ವಿದ್ಯೆ ಕೊಡಿಸಿ ಅದರಲ್ಲೇ ಸಾರ್ತಕ್ಯ ಕಂಡರು......ತಮ್ಮ ಹಾಗೆ ವಿದ್ಯೆ ಇಲ್ಲದೆ ಕಷ್ಟ ಪಡುವುದರ ಬದಲು ವಿದ್ಯೆ ಕಲಿತು ಒಳ್ಳೆಯ ಉದ್ಯೋಗಲ್ಲಿರಲಿ ಎಂದು ಹಾರೈಸಿ ಕನಸು ಕಂಡಿದ್ದರು.......

ಅವರ ಹಾರೈಕೆ, ಆಶಿರ್ವಾದದ ಫಲದಿಂದ ಉದ್ಯೋಗವೂ ದೊರೆತಿದೆ........ ಆದರೆ ಅವರಿಂದ ದೂರವೂ ತಳ್ಳಿದೆ... ...... ಮನೆಯಲ್ಲಿ ಏನಾದರೂ ಪೂಜೆ, ಊರಹಬ್ಬ ಇದ್ದರೆ, ಊರಿಗೆ ಹೋಗಿ ಒಂದೆರಡು ದಿನ ಮನೆಯಲ್ಲಿ ಕಳೆದು ಹೊರಡುತ್ತೇವೆ... ..... ಪ್ರತಿ ಬಾರಿ ಇಲ್ಲಿಂದ ಹೊರಡುವಾಗಲೂ ಇದೆ ಪ್ರಶ್ನೆ ನನ್ನನ್ನು ಪದೇ ಪದೇ ಕಾಡುತ್ತವೆ......

ನಾವಿಬ್ಬರೂ ಪ್ರತಿ ತಿಂಗಳೂ ಮನೆ ಖರ್ಚಿಗೆ ಅಂತ ಹಣ ಕಳಿಸಿಕೊಡುತ್ತೇವೆ.....

ಆದರೆ ಮಕ್ಕಳು ಕಳುಹಿಸುವ ಹಣ ಪ್ರೀತಿ ಕೊಡುತ್ತದಾ......?


ಅಪ್ಪ ಅಮ್ಮ ಇಬ್ಬರಿಗೂ ವಯಸ್ಸಾಗಿದೆ.......

ಅವರ ನರಳಿಕೆ ನಮಗೆ ಕೇಳಿಸುತ್ತದಾ.....?


ಕೆಲಸದ ಗಡಿಬಿಡಿಯಲ್ಲಿ ಫೋನ್ ಮಾಡುತ್ತೇವೆ ....

ಅವರ ನಿಟ್ಟುಸಿರಿಗೆ ಕಿವಿಯಾಗಲು ಸಾದ್ಯವಾಗತ್ತಾ.....?


ತಮ್ಮ ಜೀವ ತೇಯ್ದು ನಮಗೆ ಕೊಡಿಸಿದ ವಿದ್ಯೆ......

ನಮ್ಮನ್ನು ಅವರಿಂದ ದೂರ ತರಿಸಿತಾ.....?


ಅವರ ಹಾಗೆ ಕಷ್ಟ ಪಡುವುದು ಬೇಡ ಎಂದು ನಮಗೆ ಕಲಿಸಿದ ವಿದ್ಯೆ......

ಅವರ ಕೊನೆಗಾಲದಲ್ಲಿ ಅವರದೇ ಉಪಯೋಗಕ್ಕೆ ಬಾರದೆ ಹೋಯಿತಾ....?


ಸಿಮೆಂಟಿನಿಂದ ಕಟ್ಟಿಸಿದ ಮನೆ , ಮಕ್ಕಳು ಕೊಡುವ ನೆರಳು ಕೊಡತ್ತಾ....?

ನಿರ್ಜೀವ ಫೋನಿನಿಂದ ಬರುವ ಮಕ್ಕಳ ದ್ವನಿ, ಮನಸ್ಸಿಗೆ ನೆಮ್ಮದಿ ನೀಡತ್ತಾ....?


ಅಪ್ಪ ಅಮ್ಮ ನಮಗೆ ವಿದ್ಯಾ ಕೊಡಿಸದೇ ಇದ್ದಿದ್ದರೆ, ಇಂದು ನಾವು ಊರಲ್ಲೇ ಏನಾದರು ಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದೆವು..... ಅವರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದೆವು..... ಅಪ್ಪ ಅಮ್ಮ ಸ್ವಾರ್ಥಿಯಾಗದೆ ಇದ್ದದ್ದು ತಪ್ಪಾ....?

ನನ್ನ ಕೊನೆಯ ಪ್ರಶ್ನೆ....

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?