Apr 14, 2014

ಬೇಲಿ ಮತ್ತು ದಣಪೆ..!!!

 ಪ್ರಕಾಶಣ್ಣ ಬರೆದ  http://ittigecement.blogspot.in/2014/04/blog-post.html          ಈ ಕಥೆಯನ್ನು ಮುಂದುವರಿಸುವ ಪ್ರಯತ್ನ ಇದು...

  ದೇಹ ಜಾರುತ್ತಿತ್ತು... ಮನಸ್ಸು ಬೇಡ, ಬೇಡ ಎನ್ನುತ್ತಿತ್ತು... ಇಷ್ಟು ವರ್ಷ ಜತನದಿಂದ ಮನಸ್ಸಿಗೆ, ಬುದ್ದಿಗೆ ಹಾಕಿದ್ದ ಬೇಲಿ ಎಗ್ಗಿಲ್ಲದೇ ಬಿರುಗಾಳಿಗೆ ಸಿಕ್ಕಿತ್ತು... ಇಷ್ಟು ವರ್ಷದಿಂದ ಒಳ್ಳೆಯ ಗೆಳೆಯನಾಗಿದ್ದವ ಈಗ ಇನಿಯನಾಗುವ ಪರಿಸ್ಥಿತಿ ಹೇಗೆ ಬಂತು..? ಉತ್ತರ ಇರಲಿಲ್ಲ... ಆತನ ಉಸಿರು ನನ್ನ ತುಟಿ ಸೋಕುತ್ತಿತ್ತು.. ನನ್ನ ತುಟಿ ಅದುರುತ್ತಿತ್ತು.. ಬಯಸದೇ ಬಂದ ಸುಖಕ್ಕಾಗಿ ದೇಹ ಕಾದಿತ್ತಾ..? ಆತನ ಮೈ ಬಿಸಿ ನನ್ನನ್ನು ಕರಗಿಸುತ್ತಾ ಇತ್ತು... ನಾನು ಸೋಲಲು ಸರ್ವಥಾ ತಯಾರಾಗಿದ್ದೆ..

   ಅಷ್ಟರಲ್ಲೇ ಹೆಜ್ಜೆ ಸದ್ದು... ಕಿವಿ ನೆಟ್ಟಗಾಯಿತು.. ಪರಿಚಿತ ಹೆಜ್ಜೆ ಸದ್ದಾಗಿತ್ತು ಅದು...ತಕ್ಷಣ ಎಚ್ಚೆತ್ತೆ... ಆತನಿಂದ ದೂರ ಸರಿದೆ... ಸೆರಗೆಲ್ಲಾ ಕೆಳಗೆ ಬಿದ್ದಿತ್ತು... ಸರಿ ಮಾಡಿಕೊಂಡೆ... ಆತ ತಲೆ ತಗ್ಗಿಸಿದ.. ಇಬ್ಬರಲ್ಲೂ ಪಾಪ ಪ್ರಜ್ನೆ ಇತ್ತು... ಹೆಜ್ಜೆ ಸದ್ದು ಯಾರದೆಂದು ಗೊತ್ತಾಗಿತ್ತು ನನಗೆ.. ಓಡಿ ಹೋಗಿ ಬಾಗಿಲು ತೆಗೆದೆ.. ಎದುರಿಗೆ ನನ್ನ ಗಂಡ ನಿಂತಿದ್ದರು.. ನನ್ನವರು ತುಂಬಾ ಒಳ್ಳೆಯವರು.. ನನ್ನ ಗೆಳೆಯನನ್ನು ನೋಡಿ ಇನ್ನೂ ಖುಶಿಯಾದರು.. " ಸರ್, ನಿಮ್ಮ ಸಹಕಾರ ಮನೋಭಾವ ನಮ್ಮಂಥ ಉದ್ಯಮಿಗಳಿಗೆ ಅವಶ್ಯಕ.. ಅದ್ರಲ್ಲೂ ನೀವು ನನ್ನಾಕೆಯ ಗೆಳೆಯನಾಗಿದ್ದುದು ನನ್ನ ಭಾಗ್ಯ” ಎಂದರು..

ನನಗೆ ಮುಜುಗರವಾಯಿತು..ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ... " ನಾನು ಟೀ ಮಾಡಿಕೊಂಡು ಬರುತ್ತೇನೆ.." ಎನ್ನುತ್ತಾ ಒಳಗೆ ಹೋದೆ... ಬೇಗ ಬೇಗನೆ ಟಿ ಮಾಡಿಕೊಂಡು ಬಂದೆ.. ಟೀ ಕುಡಿದು ಗೆಳೆಯ ಬೇಗ ಹೋಗಲಿ ಎನ್ನುವುದಾ ನನ್ನ ಆಶಯ ..? ನನಗೇ ತಿಳಿದಿರಲಿಲ್ಲ.. ” ಟೀ ಎಂದರೆ ಇದು..ಅಮ್ರ‍ತ.. ದೇವತೆಗಳು ಮಾತ್ರ ಕುಡಿಯುವ ಟಿ ಇದು.. " ಎಂದ ಆತ ನನ್ನ ನೋಡುತ್ತಾ.. ನನಗೆ ನಾಚಿಕೆಯಾಯ್ತು... ಅಲ್ಲಿಂದ ಹೊರಟೆ.. ಒಳಗಡೆಗೆ... ನನ್ನವರು ಆತನಿಗೆ ಊಟ ಮಾಡಿಸಿಯೇ ಕಳಿಸುವ ಉದ್ದೇಶದಲ್ಲಿದ್ದರು... ನನಗೆ ಮನಸ್ಸಿರಲಿಲ್ಲ... ಇಷ್ಟೆಲ್ಲಾ ನಡೆದ ನಂತರ ಆತನನ್ನು ನನ್ನ ಗೆಳೆಯ ಎಂದು ಕರೆಯಲು ಮನಸ್ಸು ಒಪ್ಪುತ್ತಾ ಇರಲಿಲ್ಲ... ಆತನಿಗೂ ನನ್ನ ಮುಜುಗರ ಅರ್ಥವಾಗಿರಬೇಕು... ಊಟಕ್ಕೆ ಒಪ್ಪದೇ ಹೊರಟು ಹೋದ.. ನನಗೆ ಬೈ ಕೂಡ ಹೇಳದೆ... ನನಗೆ ಪಿಚ್ಚೆನಿಸಿತು...

ಗೆಳೆಯನ ಸನಿಹ ಕೂಡ ಬೇಕು.. ಆತ ದೂರವೂ ಇರಬೇಕು.. ನನ್ನ ಮನಸಿನ ಮರ್ಮ ನನಗೆ ಅರ್ಥವಾಗಲಿಲ್ಲ... ಒಮ್ಮೊಮ್ಮೆ ಹೀಗೆ ಮನಸಿನ ಮರಳುತನ ಅರ್ಥಕ್ಕೆ ಸಿಗೋದೆ ಇಲ್ಲ...
ನನ್ನವರು ನನ್ನ ಬಳಿ ಬಂದು ಸೊಂಟ ಬಳಸಿದರು... ಅವರ ಈ ಕಾರ್ಯಕ್ಕೆ ಯಾವಾಗಲೂ ಪುಳಕಿತಗೊಳ್ಳುವ ನನಗೆ ಈಗ ಮುಳ್ಳು ಚುಚ್ಚಿದ ಅನುಭವ.. ಮೆಲ್ಲಗೆ ಬಿಡಿಸಿಕೊಂಡೆ.... " ಯಾಕೆ..? ಏನಾಯ್ತು..? ಮೈ ಹುಶಾರಿಲ್ವಾ..? ಆವಾಗ್ಲಿಂದ ನೋಡ್ತಾ ಇದ್ದೇನೆ.. ಸಪ್ಪಗಿದ್ದೀಯಾ...ಏನಾಯ್ತು..? " ಎಂದರು ಗಾಬರಿಯಿಂದ.. ನನಗೆ ಏನಾದರೂ ಹೇಳಿ ನುಣುಚಿಕೊಳ್ಳುವ ಅವಸರ.. " ತಲೆ ನೋಯ್ತಾ ಇದೇರಿ..ಸ್ವಲ್ಪ ಹೊತ್ತು ಮಲಗುತ್ತೇನೆ " ಎಂದು ಹೇಳಿ ಅವರ ಉತ್ತರಕ್ಕೂ ಕಾಯದೇ ಬೆಡ್ ರೂಮಿಗೆ ಬಂದೆ...
ಮಲಗುವ ಮನಸ್ಸಿರದೇ ಇದ್ದರಿಂದ ಬಾತ್ ರೂಮಿಗೆ ಹೊಕ್ಕೆ... ಮೈ ತೊಳೆದುಕೊಂಡರೆ ಮನಸ್ಸು ಹಗುರಾಗಬಹುದು ಎನ್ನುವ ಆಶಯದಿಂದ.. ಶಾವರ್ ನಿಂದ ಬಂದ ತಂಪು ನೀರು ನನ್ನನ್ನು ಗತಕಾಲಕ್ಕೆ ಕೊಂಡೊಯ್ದಿತು...

  ಅದು ನಮ್ಮ ಕಾಲೇಜಿನ ಕೊನೆಯ ವರ್ಷ .. ಮಂಗಳೂರು, ಬೇಕಲ್ ಪೋರ್ಟ್ ಟೂರ್ ಇತ್ತು... ನಮ್ಮ ಸಂಖ್ಯೆ ತುಂಬಾ ಇದ್ದರಿಂದ ಎರಡು ಬಸ್ ಬೇಕಾಗಿತ್ತು... ಹುಡುಗ , ಹುಡುಗಿ ಎನ್ನುವ ಭೇದ ಇಲ್ಲದೆ, ಎಲ್ಲರೂ ಸೇರಿ ಕುಳಿತೆವು.. ನಾನು ನನ್ನ ಊರಿನ ಗೆಳತಿಯ ಜೊತೆ ಕುಳಿತರೆ, ನನ್ನ ಹಿಂದೆ ಇದೇ ಗೆಳೆಯ ಇನ್ನೊಂದು ಹುಡುಗಿಯ ಜೊತೆ ಕುಳಿತಿದ್ದ... ನನ್ನ ಮನಸ್ಸಲ್ಲೂ ಏನೂ ಭಾವವಿರಲಿಲ್ಲ.. ಆತನೂ ಸಹಜವಾಗಿಯೇ ಇದ್ದ.. ಅಂತಾಕ್ಷರಿ, ಡಾನ್ಸ್ ಎಲ್ಲಾ ಜೋರಾಗಿತ್ತು... ಅಂತಾಕ್ಷರಿ ತಂಡದಲ್ಲಿ ನಾವಿಬ್ಬರು ಒಂದು ತಂಡ.. ನಮ್ಮಿಬ್ಬರ ಸ್ನೇಹದ ಬಗ್ಗೆ ಎಲ್ಲರಿಗೂ ಗೌರವ ಇತ್ತು... ನನಗಿನ್ನೂ ನೆನಪಿದೆ.. ಅಂತಾಕ್ಷರಿ ಆಟದ ’ನ’ ಅಕ್ಷರಕ್ಕೆ ಆತ " ನಾನಿನ್ನ ಮರೆಯಲಾರೆ.. ” ಹಾಡಿದ್ದ.. ಆ ಪರಿಯ ಸ್ನೇಹದಲ್ಲೂ ನಾನು ನಾಚಿದ್ದೆ... " ಮೆಲ್ಲುಸಿರೆ ಸವಿಗಾನ” ಎನ್ನುತ್ತಾ ಮುಖ ಹತ್ತಿರಕ್ಕೆ ತಂದಿದ್ದ... ಮೈ ಜುಮ್ಮೆಂದರೂ, ಮನಸ್ಸು ತಿಳಿಯಾಗಿತ್ತು... ’ ಸ್ನೇಹ ಜಿಂದಾಬಾದ್, ಪ್ರೀತಿ ಜಿಂದಾಬಾದ್.. ನಾನೂ ಸ್ನೇಹಜೀವಿ, ನೀನೂ ಸ್ನೇಹಜೀವಿ’ ಹಾಡಿಗೆ ನಾನೂ ದನಿಗೂಡಿದ್ದೆ.. ನನ್ನ ದನಿಗೆ ಆತ ಕಣ್ಣಲ್ಲೇ ಮೆಚ್ಚುಗೆ ತೋರಿಸಿದ್ದ... ಹಾಡು, ಕೂಗು ಎಲ್ಲಾ ಮುಗಿದಾಗ ರಾತ್ರಿ ಎರಡು ಗಂಟೆ... ಸಿಕ್ಕ ಸಿಕ್ಕ ಸೀಟ್ ನಲ್ಲೇ ಒರಗಿದ್ದೆವು..

ಬೇಕಲ್ ಪೋರ್ಟ್ ತಲುಪಿದಾಗ ಬೆಳಿಗ್ಗೆ ಆರು ಗಂಟೆ...  ಕೋಟೆಯ ಮೇಲೆ ನಿಂತು ಬೆಳಗಿನ ಸೂರ್ಯನ ಆಗಮನ ನೋಡುವುದೇ ಚಂದ.. ಪಕ್ಕದಲ್ಲೇ ಇದ್ದ ಸಮುದ್ರದಲ್ಲಿ ಹೊಯ್ದಾಡಿದೆವು... ನೀರಾಟ, ಸಮುದ್ರದ ಮರಳಿನ ಹೊಡೆದಾಟ ಮುಗಿದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ... ಹೊರಡುವ ಮುನ್ನ ಎಲ್ಲರೂ ಸೇರಿ ಗ್ರೂಪ್ ಫೋಟೊ ತೆಗೆದುಕೊಂಡೆವು... ಆತ ನನ್ನತ್ತ ಓಡಿ ಬಂದು ನನ್ನ ಪಕ್ಕದಲ್ಲೇ ನಿಂತಿದ್ದ... ಗ್ರೂಪ್ ಫೋಟೊ ಆದ ನಂತರ ನಮ್ಮಿಬ್ಬರದೇ ಬೇರೆ ತೆಗೆದುಕೊಂಡೆವು.. ಆಗ ಆತನ ಕೈ ನನ್ನ ಹೆಗಲ ಮೇಲೆ ಇತ್ತು.. ಆತನ ಕೈ ಬೆಚ್ಚಗಿತ್ತು... ನಾನು ಗಮನಿಸಿದರೂ ಕೇಳಲಿಲ್ಲ... ಹತ್ತಿರದಲ್ಲೇ ಇದ್ದ ಹೊಟೆಲ್ ನಲ್ಲಿ ಸ್ನಾನ ಮಾಡಿ ಮಂಗಳೂರಿಗೆ ಹೊರಟೆವು..  ಮಂಗಳಾದೇವಿ, ಕದ್ರಿ, ಕುದ್ರೋಳಿ ದೇವರ ದರ್ಶನ ಪಡೆದು ಪಣಂಬೂರು ಬೀಚ್ ಗೆ ಹೋದೆವು...

ಅಲ್ಲಿ ಕೆಲವು ಹುಡುಗರು ಬಿಯರ್ ಕದ್ದು ಮುಚ್ಚಿ ಕುಡಿಯಲು ಶುರು ಮಾಡಿದರು.. ಇದು ನಮಗೆ ತಿಳಿದು ಹುಡುಗಿಯರು ಒಂದು ಗುಂಪಾದೆವು.. ನನ್ನ ಗಮನ ಆತನ ಮೇಲಿತ್ತು, ಈತ ಕುಡಿಯುತ್ತಾನಾ ಎನ್ನುವ ಕುತೂಹಲಕ್ಕಾಗಿ ಅಷ್ಟೆ.. ಕತ್ತಲೆಯಾಗುತ್ತಾ ಬಂದಿತ್ತು.. ನಾವು ಹೊರಡಲು ರೆಡಿಯಾದೆವು..   ಹೇಗೂ ವಾಪಸ್ ಊರಿಗೇ ಹೋಗುವುದಾದ್ದರಿಂದ ಸ್ವಲ್ಪ ಹೊತ್ತು ಇಲ್ಲೇ ಕಳೆದು ಪ್ರಯಾಣ ಬೆಳೆಸಿದರಾಯಿತು ಎನ್ನುವುದು ನಮ್ಮ ಜೊತೆ ಬಂದಿದ್ದ ಅಧ್ಯಾಪಕರದ್ದು... ಹಾಗೆಯೇ ಊಟವನ್ನೂ ಅಲ್ಲೇ ಇದ್ದ ಢಾಬಾದಲ್ಲಿ ಮುಗಿಸಿದೆವು... ಊಟ ಮುಗಿಸಿದ ನಾನು   ಸ್ವಲ್ಪ ಹೊತ್ತು ಸಮುದ್ರದ ಕಡೆಗೆ ವಾಕ್ ಗೆ ಹೊರಟೆ, ಸ್ವಲ್ಪ ದೂರ ಹೋದ ನಂತರ ಆತ ಓಡುತ್ತಾ ನನ್ನ ಜೊತೆ ಬಂದ... " ಬೆಳದಿಂದಳ ರಾತ್ರಿಯಲ್ಲಿ ಇಷ್ಟು ಚಂದದ ಹುಡುಗಿಯರು ಸಮುದ್ರ ತಟದಲ್ಲಿ ವಿಹಾರ ಮಾಡಬಾರದಂತೆ " ಎಂದ ನಾಟಕೀಯವಾಗಿ.. ನಾನೂ " ಅಹುದೇ, ವಿಹರಿಸಿದರೆ ಏನಾಗತ್ತೆ  ಮಹಾಪ್ರಭು..? " ಕೇಳಿದೆ ನಗುತ್ತಲೇ.. ಆತ " ಇನ್ನೇನಿಲ್ಲ, ತಿಮಿಂಗಲ ಬಂದು ಕಚ್ಚೊಂಡು ಹೋಗತ್ತೆ ಅಷ್ಟೆ.. ಅವೌ.." ಅಂದ ಜಗ್ಗೇಶ್ ದನಿಯಲ್ಲಿ... ನಾನು ನಾಚಿದೆ.. ಆತ ಇನ್ನೂ ಹತ್ತಿರ ಬಂದ
" ಸುತ್ತಲೂ ಬೆಳದಿಂಗಳ ಬೆಳಕು, ಸಮುದ್ರದ ತೆರೆಗಳೂ ಉಕ್ಕೇರಿದೆ.. ಪೂರ್ಣಮೆಯ ಬೆಳದಿಂಗಳಿಗೆ ನಿನ್ನ ಸೌಂದರ್ಯ ಕರಗೋದಿಲ್ಲಾ ತಾನೆ..? ಅಂದ ಆತ ಕಣ್ಣಲ್ಲಿ ಪ್ರೀತಿ ತುಂಬಿಕೊಂಡು... "ಕರಗಿದ್ರೆ ನೀನು ಏನ್ಮಾಡ್ತೀಯಾ..?" ಎಂದೆ ನಾನು ನಿರ್ಭಾವುಕಳಾಗಿ...  " ಬೆಳದಿಂಗಳ ಬೆಳಕೇ ನಿನ್ನನ್ನು ಕರಗಿಸುವುದಾದರೆ ಇದೇ ಕೈಯಿಂದ ಚಂದಿರನನ್ನು ಮುಚ್ಚಿಡುತ್ತೇನೆ.." ಎಂದ ಆತನ ಮಾತಿಗೆ ನಾನು ಜೋರಾಗಿ ನಕ್ಕೆ...  ’ಬಾ , ಇಲ್ಲೇ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ..’ ಎಂದವನಿಗೆ  ಇಲ್ಲ ಎನ್ನದಾದೆ... ಸಮುದ್ರದ ಮರಳ ರಾಶಿಯಲ್ಲಿ ಕೈ ಯಾಡಿಸುತ್ತಾ ಆತನ ಮಾತಿಗೆ ತಲೆದೂಗುತ್ತಾ ಇದ್ದವಳಿಗೆ ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ... ದೂರದಲ್ಲಿ ಬಸ್ ಸ್ಟಾರ್ಟ್ ಆದ ಸದ್ದು ಕೇಳಿ ಎದ್ದು ಬಂದೆವು.. ನಾವು ಬರುವಷ್ಟರಲ್ಲಿ ಬಸ್ ಹೊರಟಾಗಿತ್ತು... ನಂತರ ಗೊತ್ತಾದ ವಿಷಯ ಏನೆಂದರೆ ಎರಡು ಬಸ್ ಇದ್ದ ಕಾರಣ, ಎರಡೂ ಬಸ್ ನವರು ಇನ್ನೊಂದು ಬಸ್ ನಲ್ಲಿ ಇರಬಹುದು ಎಂಬ ಊಹೆಯೊಂದಿಗೆ ನಮ್ಮನ್ನು ಬಿಟ್ಟು ಹೋಗಿದ್ದರು...  ಆ ತಂಪು ಗಾಳಿಯಲ್ಲೂ ಮೈ ಬೆವತು ಹೋಯಿತು...

ಏನೂ ತೋಚಲಿಲ್ಲ... ಆದರೂ ಈತ ಇದ್ದಾನಲ್ಲ ಎನ್ನುವ ಬರವಸೆ... ಆತ ತನ್ನ ಪರ್ಸ್ ನೋಡುತ್ತಿದ್ದ... ಸ್ವಲ್ಪ ಇತ್ತು ಹಣ.. ಕಣ್ಣಲ್ಲಿ ’ ನಾನಿದ್ದೇನೆ, ಹೆದರಬೇಡ ’ ಎನ್ನುವ ಭಾವಕ್ಕೆ ನಾನು ಸಮಾಧಾನದಿಂದಿದ್ದೆ.. ತಡರಾತ್ರಿಯಾದ್ದರಿಂದ ನಿದ್ರೆ ಬರುತ್ತಿತ್ತು.. ಇದ್ದ ಹಣದಲ್ಲಿ ಹೇಗಾದರೂ ಮಾಡಿ ಊರಿಗೆ ತಲುಪುವ ಬರವಸೆ ಇತ್ತು.. ಪಕ್ಕದಲ್ಲೇ ಇದ್ದ ಲಾಡ್ಜ್ ಗೆ ಹೋಗಿ ವಿಚಾರಿಸಿದರೆ ಒಂದೇ ರೂಮ್ ಇತ್ತು... ನನ್ನ ಮೇಲೆ ನನಗೆ ಬರವಸೆ ಇದ್ದ ಕಾರಣ ಜೊತೆಯಲ್ಲಿ ಇರಲು ಒಪ್ಪಿದೆ... ಗುಂಪಿನಲ್ಲಿ ಇದ್ದಾಗಿನ ತುಂಟ ಗೆಳೆಯ ಇಬ್ಬನೇ ಇದ್ದಾಗ ಮೌನಿಯಾಗಿ ಬಿಟ್ಟಿದ್ದ... ನನಗೆ ಬೆಡ್ ಮೇಲೆ ಮಲಗಲು ಹೇಳಿ ಆತ ಅಲ್ಲಿಯೇ ಇದ್ದ ಸೋಫ ಮೇಲೆ ಮಲಗಿದ.. ಆತನ ಕಡೆ ತಿರುಗಿ ಮಲಗಲು ಹೆದರುತ್ತಿತ್ತು ಮನಸ್ಸು.. ನಿಟ್ಟುಸಿರಳತೆಯ, ಕೈಯಳತೆಯ ದೂರದಲ್ಲಿ ಮಲಗಿದ್ದರೂ ನಮ್ಮ ನಮ್ಮ ಬೇಲಿ ನಮಗೆ ತಿಳಿದಿತ್ತು.. ಸ್ನೇಹಕ್ಕೆ ಒಂದು ಚೌಕಟ್ಟು ಇತ್ತು... ಒಂದೇ ರೂಮಿನಲ್ಲಿದ್ದರೂ ಮೈ ಮನಸ್ಸು ದೂರದಲ್ಲಿತ್ತು...

ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜಿ ಸ್ನಾನ ಮುಗಿಸಿದೆ... ಬೇರೆ ಬಟ್ಟೆ ಇರದ ಕಾರಣ ಅದೇ ಬಟ್ಟೆ ಧರಿಸಿದೆವು... ತಿಂಡಿ ತಿಂದು ಬಸ್ ನಲ್ಲಿ ಹೊರಟೆವು ಊರ ಕಡೆಗೆ.. ಅಕ್ಕಪಕ್ಕದಲ್ಲೇ ಕುಳಿತು ಸುಮಾರು ಹತ್ತು ತಾಸು ಪ್ರಯಾಣ ಬೆಳೆಸಿ ಊರು ಮುಟ್ಟಿದೆವು.. ಭುಜಕ್ಕೆ ಭುಜ ಒರಗಿಸಿಕೊಂಡು, ಆ ತಿರುವು ಮುರುವಿನ ದಾರಿಯ ತಿಕ್ಕಾಟದಲ್ಲೂ ಸಂಯಮದಿಂದ ಇದ್ದ ದೇಹ, ಮನಸ್ಸಿನ ಬಗ್ಗೆ ನನಗೆ ಹೆಮ್ಮೆ ಇತ್ತು... ಕಾಲೇಜ್ ಮುಗಿದು ನಮ್ಮ ಮದುವೆ ಆದರೂ ಆ ಚೌಕಟ್ಟಿಗೆ ಭಂಗ ಬಂದಿರಲಿಲ್ಲ.. ಬಾತ್ ರೂಮಿನ ಬಾಗಿಲು ಬಡಿದ ಹಾಗಾಗಿ ವಾಸ್ತವಕ್ಕೆ ಬಂದೆ.. ನನ್ನವರು ಕರೆಯುತ್ತಿದ್ದರು.. ನಾನು ಸ್ನಾನ ಮುಗಿಸಿ ಹೊರಬಂದೆ... ಬಟ್ಟೆ ಬದಲಿಸಿ ಬೆಡ್ ಮೇಲೆ ಒರಗಿದೆ..

ಈ  ಘಟನೆ ನಡೆದು ತುಂಬಾ ದಿನಗಳ ವರೆಗೆ ಆತನನ್ನು ನಾನು ಭೇಟಿಯಾಗಲಿಲ್ಲ.. ಫೊನ್ ಸಹ ಮಾಡಲಿಲ್ಲ..  ಆದರೆ ಮನ ಮಿಡಿಯುತ್ತಿತ್ತು.. ಹಾತೊರೆಯುತ್ತಿತ್ತು... ದೇಹ ಹದವಾಗಿತ್ತು... ನನ್ನವರ ಉದ್ಯಮಕ್ಕೆ ತುಂಬಾ ಸಹಾಯ ಮಾಡಿದ ಆತ ಎಂದೂ ಏನನ್ನೂ ಅಪೇಕ್ಷೆ ಪಟ್ಟಿರಲಿಲ್ಲ... ಸರಕಾರದ ಉನ್ನತ ಮಟ್ಟದಲ್ಲಿದ್ದ ಆತನ ಸಹಾಯಕ್ಕೆ ನನ್ನವರು ತುಂಬಾ ಚಿರರುಣಿಗಳಾಗಿದ್ದರು... ಹಾಗಿದ್ದ ಒಂದು ದಿನ, ನನ್ನವರ ಒಂದು ಪ್ರತಿಷ್ಟಿತ ಪ್ರಾಜೆಕ್ಟ್ ಗೆ ಆತನ ಅಂಕಿತ ಬೇಕಿತ್ತು... ಕಾನೂನು ರಿತ್ಯಾ ಎಲ್ಲಾ ಸರಿ ಇದ್ದ ಕಾರಣ ಆತನ ಸಹಿ ಬೀಳುವುದೂ ಸುಲಭವೂ ಆಗಿತ್ತು...

ಅವತ್ತು ಸಹಿ ಆಗಿ ಫೈಲ್ ತೆಗೆದುಕೊಂಡು ಬರಲು ಹೋದ ನನ್ನವರು, ಅರ್ಜಂಟ್ ಆಗಿ ಮುಂಬೈ ಗೆ ಹೋದರು.. ನನಗೆ ಫೈಲ್ ತೆಗೆದುಕೊಂಡು ಬರಲು ಹೇಳಿದ್ದರು... ಆತನ ಜೊತೆ ಮಾತನಾಡಿ ಸುಮಾರು ತಿಂಗಳುಗಳೇ ಕಳೆದಿದ್ದವು... ಎದೆ ಬಡಿತ ಜೋರಾಗಿತ್ತು.. ಮೊಬೈಲ್ ಸ್ಕ್ರೀನ್ ಮೇಲಿದ್ದ ಆತನ ಹೆಸರನ್ನು ಪ್ರೆಸ್ ಮಾಡುವಾಗ ಬೆರಳು ಅದುರಿತು.. " ಹಲೋ, ಏನಮ್ಮಾ... ಹ್ಯಾಗಿದೀಯಾ..?"ಅದೇ ದ್ವನಿ, ಅದೇ ತಂಪು.. ಮೈ ಜುಮ್ಮೆಂದಿತು.. ಸೆರಗು ಸರಿ ಮಾಡಿಕೊಂಡೆ... " ಅದೇ.. ನಮ್ಮವರು ಮುಂಬೈ ಗೆ ಹೋಗಿದ್ದಾರೆ.. ಫೈಲ್ ತೆಗೆದುಕೊಂಡು ಬರಲು ಹೇಳಿದ್ದಾರೆ... ಅದಕ್ಕೆ ಫೋನ್ ಮಾಡಿದೆ.." ಎಂದೆ ಸಾವಕಾಶವಾಗಿ.. " ಅರೆ.. ನೀನೇ ಬರ್ತೀಯಾ... ನಾನು ಆಗಲೇ ಆಫೀಸ್ ಬಿಟ್ಟಾಯ್ತು.. ಇವತ್ತೇ ಫೈಲ್ ಬೇಕು ಅನ್ನೋ ಹಾಗಿದ್ರೆ ಮನೆಗೆ ಬಂದು ಬಿಡು... ನಿನ್ನ ಕೈಯಿ ಟೀ ಕುಡಿದು ತುಂಬಾ ದಿನ ಆಯ್ತು .. ಮುಖ್ಯವಾಗಿ ನಿನ್ನ ನಾಚುವ ಮುಖ ನೋಡಿ. " ಅಂದ ಅದೇ ತುಂಟತನದಲಿ.. ಫೋನ್ ಗಟ್ಟಿಯಾಗಿ ಹಿಡಿದೆ... " ಅಬ್ಭಾ, ನಿಮ್ಮ ಮನೆಗೆ ಬಂದು ನಾನು ಟೀ ಮಾಡಬೇಕಾ..? ನಾನು ನಿಮ್ಮ ಮನೆಗೆ ಬರೋದು ಫೈಲ್ ಒಂದು ಕಾರಣವಾದರೆ, ಇನ್ನೊಂದು ಕಾರಣ ನಿನ್ನ ಮಗನ ಜೊತೆ ಆಟವಾಡಬೇಕು.. ಆತನ ಕಣ್ಣು ನಿನ್ನ ಹಾಗೇ ಇದೆ.. ಅದು ನನಗೆ ಇಷ್ಟ.." ಎಂದೆ.. " ಯಾಕೆ.. ನಾನು ಇಷ್ಟ ಇಲ್ವಾ..? " ಎಂದವನು ಹಾಗೇ ಮುಂದುವರಿದು" ಮನೆಯಾಕೆ ಮತ್ತು ಮಗ ಊರಿಗೆ ಹೋಗಿದ್ದಾರೆ.. ನಿಂಗೆ ತುಂಬಾ ಇಷ್ಟ ಅಂದ್ರೆ ನನ್ನ ಕಣ್ಣ ಜೊತೆ ಆಟ ಆಡಬಹುದು.. ಬೇಗ ಬಂದು ಬಿಡು " ಎಂದವನೇ ಫೋನ್ ಡಿಸ್ಕನೆಕ್ಟ್ ಮಾಡಿದ....

ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು... ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು... ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?

ಹೌದು ಎನಿಸಿ...ಇನ್ನಷ್ಟು ನಾಚಿದೆ...

Apr 2, 2014

ಸಾರ್ಥಕ ಭಾವ...!!!


  ಇದೊಂದು ಸಂತಸದ ವಿಷಯ ಹಂಚಿಕೊಳ್ಳುವ ಮನಸ್ಸು ಇತ್ತು... ಸ್ವಲ್ಪ ದಿನದ ಹಿಂದೆ ಅಷ್ಟೇ ನಡೆದ ಸಂಗತಿ ಇದು...  ನನ್ನ ಪುಸ್ತಕ ಬಿಡುಗಡೆ ನಡೆದು ಕೆಲವು ದಿನಗಳಾಗಿದ್ದವು... ಪುಸ್ತಕವನ್ನು ನನ್ನ ಊರಿನ ಕೆಲವು ಹಿರಿಯರಿಗೆ ಮತ್ತು ನನ್ನ ಹಿತೈಷಿಗಳಿಗೆ ಕಳುಹಿಸಿದ್ದೆ... ಪುಸ್ತಕ ಓದಿ ಅವರಿಂದ ಒಳ್ಳೆಯ ಅಭಿಪ್ರಾಯವೂ ದೊರೆತಿತ್ತು...

ಒಂದು ಶುಭ ದಿನ ಬೆಳಿಗ್ಗೆ ಫೋನ್ ರಿಂಗಾಯಿತು, ಅತ್ತಲಿಂದ ನಮ್ಮ ಸಮಾಜದ ಪದವೀಧರರ ಮತ್ತು ನೌಕರರ ಸಂಘದ ಅಧ್ಯಕ್ಷರು ಮಾತನಾಡುತ್ತಿದ್ದರು... ನನ್ನ ಕಥಾ ಸಂಕಲನಕ್ಕಾಗಿ ನನಗೆ ಸನ್ಮಾನ ಹಮ್ಮಿಕೊಂಡಿದ್ದರು... ನಮ್ಮದು ಹಿಂದುಳಿದ ಸಮಾಜ, ನಮ್ಮಲ್ಲಿ ಬರವಣಿಗೆ, ಪುಸ್ತಕ ಬರೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ... ನನ್ನ ಜೊತೆ ಇನ್ನೂ ಕೆಲವು ಸಾಧಕರಿಗೆ ಸನ್ಮಾನ ಇದೆ ಎಂದ ತಕ್ಷಣ ಒಪ್ಪಿಕೊಂಡೆ.. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದ ಹಾಗಾಗಲಿ ಎಂದುಕೊಂಡು..

ಅಪ್ಪ ಅಮ್ಮನಿಗೆ, ಅಣ್ಣನಿಗೆ ಖುಶಿಯಾಯಿತು... ಸನ್ಮಾನದ ದಿನದವರೆಗೂ ಏನೋ ಕೊರಗು.... ಈ ಸನ್ಮಾನಕ್ಕೆ ನಾನು ಅರ್ಹನಾ ಅಂತ.. ಯೋಚಿಸುತ್ತಾ ಯೋಚಿಸುತ್ತಾ ದಿನ ಬಂದೇ ಬಿಟ್ಟಿತು... ಸಮಾರಂಭಕ್ಕೆ ಅಣ್ಣ ಅಪ್ಪ ಮತ್ತು ಮಗಳು ಹೆಂಡತಿ ಬಂದಿದ್ದರು... ಕೊನೆಯ ಕ್ಷಣದವರಗೂ ಇದ್ದ ದುಗುಡಕ್ಕೆ ಕೊನೆ ಹಾಕಿ ಅಂತಿಮ ನಿರ್ಧಾರಕ್ಕೆ ಬಂದಿದ್ದೆ.

ನಾನು ಯಾವತ್ತೂ ವೇದಿಕೆಯಲ್ಲಿ ಮಾತನಾಡಿದವನಲ್ಲ.. ಅವತ್ತು ನನ್ನ ಹೆಸರು ಕರೆದಾಗ ಜೋರಾದ ಎದೆ ಬಡಿತದೊಂದಿಗೆ ವೇದಿಕೆ ಏರಿದೆ.. ವೇದಿಕೆಯಲ್ಲಿ ಕುಳಿತ ಎಲ್ಲರಿಗೂ ಜೊತೆಗೆ ಒಯ್ದಿದ್ದ ನನ್ನ ಕಥಾ ಸಂಕಲನ ಕೊಟ್ಟೆ.. ಸನ್ಮಾನಕ್ಕಾಗಿ ಕುಳಿತುಕೊಳ್ಳಲು ಇಟ್ಟ ಖುರ್ಚಿ ದಾಟಿ ಮೈಕ್ ಕೈಗೆತ್ತಿಕೊಂಡೆ.. " ಎಲ್ಲರಿಗೂ ನಮಸ್ಕಾರ" ಧ್ವನಿ ನಡುಗುತ್ತಿತ್ತು... ಬರೆಯುವುದು ಸುಲಭ , ಮಾತನಾಡುವುದಕ್ಕೆ ಗುಂಡಿಗೆ ಬೇಕು ಎನಿಸಿತು... " ಮೊದಲಿಗೆ ನನ್ನನ್ನು ಸನ್ಮಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ, ಇಲ್ಲಿ ನನ್ನದೊಂದು ವಿನಂತಿಯಿದೆ.. ನನ್ನ ಜೊತೆಗೆ ಸನ್ಮಾನಕ್ಕೆ ಆಯ್ಕೆಯಾದವರ ಪರಿಶ್ರಮದ ಜೊತೆಗೆ ನಮ್ಮ ಪಾಲಕರ ಪರಿಶ್ರಮವೂ ದೊಡ್ಡದು.. ಅವರ ಕರ್ತವ್ಯದ ಜೊತೆಗೆ ಅವರ ತ್ಯಾಗವೂ ಇರದಿದ್ದರೆ ನಾವೆಲ್ಲಾ ಇಲ್ಲಿ ಬಂದು ನಿಲ್ಲಲು ಸಾಧ್ಯವೇ ಇರಲಿಲ್ಲ... ನಾನೇನೋ ಪುಸ್ತಕ ಬರೆದೆ.. ಈ ಪುಸ್ತಕ ಬರೆಯಲು ಮೂಲ ಕಾರಣವಾದ ವಿಧ್ಯೆಯನ್ನೇ ನನಗೆ ಕಲಿಸದಿದ್ದರೆ ನಾನೆಲ್ಲಿ ಇರುತ್ತಿದ್ದೆ.. ಆದ ಕಾರಣ ನಿಮ್ಮೆಲ್ಲರ ಅನುಮತಿ ಕೋರಿ ನನ್ನ ಯಶಸ್ಸಿಗೆ ಕಾರಣರಾದ ನನ್ನ ತಂದೆಯವರಿಗೆ ಈ ಸನ್ಮಾನ ಮಾಡಬೇಕೆಂಬುದು ನನ್ನ ಆಶಯ.. ಇದು ಇನ್ನೂ ಎಷ್ಟೋ ಮಂದಿ ಪಾಲಕರಿಗೆ ಸ್ಪೂರ್ತಿಯಾಗಲಿ ಎನ್ನುವುದು ನನ್ನ ಬಯಕೆ" ಎಂದು ಸಂಘಟಕರ ಕಡೆ ತಿರುಗಿದೆ..

ಅವರ ಅನುಮತಿ ಮತ್ತು ವೇದಿಕೆ ಮೇಲಿದ್ದ ಅತಿಥಿಗಳ ಸಮ್ಮತಿ ಪಡೆದು ಅಪ್ಪನನ್ನು ವೇದಿಕೆಗೆ  ಕರೆ ತಂದೆ.. ಅಪ್ಪನ ಕಣ್ಣಲ್ಲಿ ನೀರಿತ್ತು... ಖುರ್ಚಿಯ ಮೇಲೆ ಕುಳ್ಳಿರಿಸಿ ಸನ್ಮಾನ ಮಾಡಿದರು.. ನನಗೆ ಸಾರ್ಥಕ ಭಾವ...

ನಾವು (ನಿಮ್ಮನ್ನೂ ಸೇರಿಸಿ) ಏನೇ ಸಾಧನೆ ಮಾಡಬಹುದು.. ಜಗತ್ತು, ಸಮಾಜ ನಮಗೆ ಸನ್ಮಾನ ಮಾಡಬಹುದು.. ನಮ್ಮ ಸಾಧನೆಗೆ ಮೂಲ ಕಾರಣರಾದ ನಮ್ಮ ಪಾಲಕರನ್ನು ಯಾರು ನೆನೆಯುತ್ತಾರೆ..? ಅವರಿಗೆ ಸಿಗಬೇಕಾದ ಗೌರವ ಸಿಗುವುದು ಯಾವಾಗ..? ಅವರ ತ್ಯಾಗಕ್ಕೆ ಬೆಲೆ ಮತ್ತು ಗೌರವ ಸಿಕ್ಕರೆ ನಮಗೂ ನೆಮ್ಮದಿ , ಅವರಿಗೂ ಸಂತ್ರಪ್ತಿ...
ವೇದಿಕೆಯಲ್ಲಿ ಹೆಚ್ಚಿಗೆ ಮಾತನಾಡಲು ಆಗಲಿಲ್ಲ... ಗಂಟಲುಬ್ಬಿ ಬಂದಿತ್ತು... ಅದಕ್ಕೆ ಇಲ್ಲಿ ಬರೆದೆ..