Dec 20, 2018

ಬಿದ್ದ ಹಲ್ಲು- ಗೆದ್ದ ಮಗಳು..!!!


ಬಿದ್ದೋಯ್ತಲ್ಲೇ ಅಮ್ಮ ನನ್ ಹಲ್ಲು...
ಮತ್ತೆ ಬರಲ್ವಾ..?
ಹೀಗೇ ಬೊಚ್ ಬಾಯಾ ಹೇಗೆ?
ಕಚ್ಚಲಿ ಹೇಗೇ ಸೇಬು
ಕಡಿಯಲಾಗದು ಕಬಾಬೂ!
ಬೇಕೇ ಬೇಕು ಈಗ್ಲೇ ನನ್ ಹಲ್ಲು

ಓ ಅಂತ ಅತ್ತಳು ಮಗಳು
ಅಮ್ಮನಿಗೋ ದಿಗಿಲು

ಮಗಳೇ... ಈ ಹಲ್ಲು ಹಳತು..
ಇದು ಬಿದ್ದರೆ, ಬರತ್ತೆ ಹೊಸತು..
ದೇವಲೋಕದ ‘ಪರಿ’ ಬಂದು ಕೊಡ್ತಾಳೆ ಹೊಸತು

ತರಕಾರಿ ತಿಂದರೆ ಮಗಳೇ
ಬಿಟ್ಟರೆ ತಂಟೆಯು ರಗಳೇ
ಬರುತಾಳೆ ಕನಸಲಿ  ‘ಪರಿ’
ಬಿದ್ದ ಹಲ್ಲಿನ ಬದಲು ಕೊಡ್ತಾಳೆ ಚಿನ್ನದ ಹಲ್ಲು...

ಯೋಚನೆಗೆ ಬಿದ್ದಳು‌ ಪೋರಿ,
ನಾಲಿಗೆ ಹೊರಳಿಸಿ ಹಲ್ಲ ಸಂದಿಗಳಲಿ

ಅಮ್ಮಾ ನನ್ನ ಹಲ್ಲು ನನಗೇ ಬರಲಿ
ಚಿನ್ನದ ಹಲ್ಲು ಅವಳಲ್ಲಿರಲಿ
ದಿನಾ ಹೋಂವರ್ಕನ್ನ ಮಾತ್ರ
ಪ್ಲೀಸ್ ಪ್ಲೀಸ್ ಅವಳೇ ಬರ್ಕೊಡಲಿ...

( ನಾನು ಬರೆದ ಸಾಧಾರಣ ಕವನಕ್ಕೆ ಬಂಗಾರದ ರಂಗು ಕೊಟ್ಟವರು ಬದರಿನಾಥ್ ಪಲವಳ್ಳಿಯವರು..)

Dec 16, 2018

ಆಸೆ....!!!

3K ಚಿತ್ರ-ಕವನ ಸ್ಪರ್ಧೆಗಾಗಿ ಬರೆದ ಕವನ...

ಮುನಿಸಿ ಹೇಳದೇ ಹೋದ
ಗೆಳೆಯನ ನೆನಪಿಗೆ ಬರವಿಲ್ಲ..
ಅವನ  ಇರುವಿಕೆಗಾಗಿ
ಕುರುಹು ಇರಲೇ ಬೇಕಿಲ್ಲ....

ಕಾಡುವ ಕನಸಿನ ನಡುವೆ
ನೆನಪಿನ ನೆರಳಿಗೆ ಸಾವಿಲ್ಲ...
ಬರಿದಾದ ಕಣ್ಣೀರಿಗೆ
ಕಾರಣವ ಹುಡುಕುವ ಮನಸಿಲ್ಲ...

ಮನದ ಮುನಿಸಿಗೆ ಮುಲಾಮು
ಸವರಿದರೂ ಮಾಯುವ ಗಾಯ ಇದಲ್ಲ...
ಅಳಿಸಿಹೋದ ಹೆಜ್ಜೆ ಗುರುತ
ಹುಡುಕುವ ಬಯಕೆಯಂತೂ ಇಲ್ಲ...

ಇರುವುದೊಂದೆ ಆಸೆ ನನಗೆ....

ಮನೆಯ ಮುಚ್ಚಿದ ಬಾಗಿಲಿಗೆ
ಪತ್ತೆಯಾಗದ ಸಾಕ್ಷ್ಯವಿರಿಸು...
ಮನಸ ಮುರಿದ ಕಾರಣ ತಿಳಿಸಿ
ವಿಳಾಸವಿರದ ಪತ್ರವಿರಿಸು...