Dec 31, 2009

ಹೊಸ ವರುಷದಲ್ಲಿ ಹಳೆಯ ನಿರೀಕ್ಷೆ.....!


ಗೆಳತಿ, ಹೊಸ ಬೆಳಕಲ್ಲಿ ಹಳೆಯ ನಿರೀಕ್ಷೆ,


ಇಂದಿಗೂ ನದಿ ತೀರದಲ್ಲೇ ಕುಳಿತಿದ್ದೇನೆ,
ನಿನ್ನ ಸವಿ ಸ್ನೇಹ ನೆನೆಯುತ್ತಾ.........
ಎಂದೆಂದಿಗೂ ನಿನಗಾಗಿ ಕಾಯುತ್ತೇನೆ,
ನೀನು ಬರೋ ದಾರಿಯ ನೋಡುತ್ತಾ.....

ಕಾಯುವುದು
ಹೊಸತಲ್ಲ.........
ಬರುವ ದಿನ ಹೊಸತು.......

ಅಂದು ನಾ ಕಾದಿದ್ದೆ ಹಿಡಿ ಪ್ರೀತಿಗಾಗಿ,
ಕಾದು ಕಾದು ಸೋತು ಹೋಗಿದ್ದೆ.....
ಇಂದು ನಾ ಕಾಯುತಿರುವೆ ಸಿಹಿ ಸ್ನೇಹಕ್ಕಾಗಿ,
ಕಾಡಿಸದಿರು ನನ್ನ ಪ್ರೀತಿಯ ಗೆಳತಿ........

ಇರುಳಲ್ಲೊಮ್ಮೆ ಬೆಳಕನ್ನು ಮುಟ್ಟಿ,
ಕಾಯುತ್ತಿರುವೆ ನೀ ಬರುವ ದಾರಿ........

ನೀ ಬಂದೆ ಬರುವಿಯೆಂದು,
ಕಾಯುವುದೇ ಒಂದು ಪುಳಕ.........
ಬಾಚಿಕೊಂಡ ಬೆಳಕು ಸರಿದು ಹೋದಾಗ,
ಕಣ್ಣೀರಾಗುವುದೇ ಈಗಿನ ಕಾಯಕ........

ನೀನು ಬರುವವರೆಗೆ ಕಾಯುವುದು ನಿಲ್ಲೋದಿಲ್ಲ............
ನೀನು ಬರುವ ನಂಬಿಕೆಯೇ ನನಗಿಲ್ಲವಲ್ಲ ...........!



Dec 15, 2009

'' ಜೈ ಮಹಾರಾಷ್ಟ್ರ''.................

''ಜೈ ಮಹಾರಾಷ್ಟ್ರ'' ....... ಮೈಯೆಲ್ಲಾ ಉರಿದು ಹೋಯ್ತು ....... ನಾನಾಗ ಮುಂಬೈಯಲ್ಲಿ ಕೆಲಸ ಮಾಡ್ತಾ ಇದ್ದೆ...... ದಿನಾ ಬೆಳಿಗ್ಗೆ ಆಫೀಸಿಗೆ ಹೋದಾಗ ಎಲ್ಲಾ ಸ್ಟಾಫ್ 'ಗುಡ್ ಮಾರ್ನಿಂಗ್' ಎಂದರೆ ಒಬ್ಬ ಹುಡುಗ ಮಾತ್ರ ' ಜೈ ಮಹಾರಾಷ್ಟ್ರ' ಎನ್ನುತ್ತಿದ್ದ..... .... ಮೊದ ಮೊದಲಿಗೆ ಏನೂ ಅನ್ನಿಸದಿದ್ದರೂ , ನಂತರದ ದಿನಗಳಲ್ಲಿನಾನು ಕರ್ನಾಟಕದವನು ಎನ್ನುವ ಕಾರಣಕ್ಕೆ ಅವನು ' ಜೈ ಮಹಾರಾಷ್ಟ್ರ' ಎನ್ನುತ್ತಿದ್ದ ಎಂದು ಗೊತ್ತಾಯಿತು.... ಇದು ಸಹಜವಾಗಿ ನನಗೆ ಸಿಟ್ಟು ತರಿಸಿತ್ತು.... ... ನಾನೂ ಸಹ ಏಟಿಗೆ ಎದಿರೇಟು ಎನ್ನುವ ಹಾಗೆ ಅವನು ಎದುರಿಗೆ ಬಂದಾಗಲೆಲ್ಲ ನಾನು 'ಜೈ ಕರ್ನಾಟಕ' ಎನ್ನಲು ಶುರು ಮಾಡಿದೆ..... ನಾನು ಹೀಗೆ ಹೇಳಿದಾಗಲೆಲ್ಲ, ಅವನು ನಗುತ್ತಿದ್ದನಾದರೂ ಒಳಗೊಳಗೇ ಸಿಟ್ಟು ಮಾಡಿಕೊಳ್ಳುತ್ತಿದ್ದ ಮತ್ತೆ ಬೇರೆಯವರ ಎದುರು ಹೇಳುತ್ತಿದ್ದ ಕೂಡ..... ....
ಒಂದು ಕೆಟ್ಟ ದಿನ ಕೇಳೆ ಬಿಟ್ಟ..... '' ಕ್ಯಾ ಆಪ್ ಲೋಗ್ ಕರ್ನಾಟಕ ಸೆ ಇದರ್ ಆಕೆ ಜೈ ಮಹಾರಾಷ್ಟ್ರ ನಹಿ ಬೋಲ್ತೆ ಹೈ, ಬದಲೇ ಮೇ ಜೈ ಕರ್ನಾಟಕ ಬೋಲ್ತೆ ಹೈನ್...'' ಅಂದ..... ನಾನು '' ಮುಜೆ ಜೈ ಮಹಾರಾಷ್ಟ್ರ ಬೋಲ್ನೆ ಮೇ ಕುಚ್ ಭೀ ಪ್ರಾಬ್ಲಮ್ ನಹಿ ಹೈ, ಮಗರ್ ತುಂ ತೋ ಮೇರಾ ಮಜಾಕ್ ಉಡಾ ರಹೇ ಥೆ ನ, ಇಸ್ ಲಿಯೇ ಮೈ ಜೈ ಕರ್ನಾಟಕ ಬೋಲನಾ ಶುರು ಕಿಯಾ ''...... ಅಂದೇ...... ಅವನು ನಗು ನಗುತ್ತಲೇ,'ಏ ಗಲತ್ ಹೈ, ಆಪ್ ಅಇಸಾ ನಹಿ ಕೆಹ್ ಸಕತೆ.... ಬಂದ್ ಕರೋ ಏ ಸಬ್'' ಅಂದ...... ನಂಗೂ ಏರಿತು ಪಿತ್ತ.......... ' ದೇಖೋ, ಮೈ ಜಬ್ ತುಮಾರ ಮುಹ್ ಸೆ 'ಜೈ ಕರ್ನಾಟಕ' ಸುನತಾ ಹ್ಞೂ ನ, ತಬ್ ಸೆ ಮೈ 'ಜೈ ಮಹಾರಾಷ್ಟ್ರ' ಬೋಲನಾ ಚಾಲೂ ಕರತಾ ಹ್ಞೂ '' ಅಂದೆ..... '' ಐಇಸಾ ಮೈ ಕಭಿ ನಹಿ ಬೋಲೂಂಗಾ'' ಅಂದ...... ನಿನ್ನ ಕೈಲಿ ' ಜೈ ಕರ್ನಾಟಕ' ಹೇಳಿಸಿಯೇ ತೀರುತ್ತೇನೆ ಎಂದು ಚಾಲೆಂಜ್ ಮಾಡಿದೆ..... ಅವನೂ ಸಹ ಚಾಲೆಂಜ್ ಸ್ವೀಕರಿಸಿದ.......

ಹೀಗೆ ನಮ್ಮ 'ಜೈ ಕರ್ನಾಟಕ' ' ಜೈ ಮಹಾರಾಷ್ಟ್ರ' ನಡೆದೇ ಇತ್ತು........ ನಾನು ನನ್ನ ಚಾಲೆಂಜ್ ಮರೆತಿರಲಿಲ್ಲ.............

ಒಂದು ದಿನ ಮದ್ಯಾನ್ಹ ಆಫೀಸಿನಲ್ಲಿ ಊಟ ಮಾಡ್ತಾ ಇದ್ದೆವು.... ಅದೇ ಹುಡುಗ ಎಂದಿನಂತೆ ನನ್ನ ನೋಡಿ ' ಜೈ ಮಹಾರಾಷ್ಟ್ರ' ಹೇಳುತ್ತಾ ಟಾಯ್ಲೆಟ್ ಹೋದ.... ಆಗ ನನ್ನ ತಲೆಯಲ್ಲಿ ಒಂದು ಕ್ರಿಮಿನಲ್ ಐಡಿಯಾ ಹೊಳೆಯಿತು..... ಆ ಹುಡುಗ
ಟಾಯ್ಲೆಟ್ ಒಳಗೆ ಹೋದ ನಂತರ ನಾನು ಹೊರಗಿನಿಂದ ಲಾಕ್ ಮಾಡಿ ಬಂದು ಕುಳಿತೆ........ ಅವನಿಗೆ ಫೋನ್ ಮಾಡಿ ಹೇಳಿದೆ..... ನೀನು ' ಜೈ ಕರ್ನಾಟಕ' ಎಂದರೆ ಮಾತ್ರ ಲಾಕ್ ತೆಗೆಯುತ್ತೇನೆ ಅಂದೆ..... ' ಬೇಡ, ನಾನು ಬೇರೆಯವರಿಂದ ತೆಗೆಸುತ್ತೇನೆ' ಅಂದ....... ಎಲ್ಲರ ಮೊಬೈಲ್ ನಾನೇ ತೆಗೆದುಕೊಂಡು ನನ್ನ ಟೇಬಲ್ ಮೇಲೆ ಇಟ್ಟುಕೊಂಡೆ.... ಎಲ್ಲರ ಮೊಬೈಲ್ ಗೆ ಫೋನ್ ಮಾಡಿದರೂ ನಾನೇ ಮಾತಾಡಿ' ಜೈ ಕರ್ನಾಟಕ' ಎನ್ನುತ್ತಿದ್ದೆ.... ಅವನಿಗೂ ಸಹನೆ ಮೀರಿತ್ತು.... ಕೊನೆಗೆ, ಜೈ ಕರ್ನಾಟಕ ಎನ್ನಲು ಒಪ್ಪಿದ....... ಫೋನಿನಲ್ಲೇ ' ಜೈ ಕರ್ನಾಟಕ' ಎಂದ...... ನಾನು ಒಪ್ಪಬೇಕಲ್ಲಾ...... '' ಫೋನಿನಲ್ಲಿ ಬೇಡ.... ಎದುರಿಗೆ ಹೇಳು'' ಎಂದೇ...... ಅವನಿಗೋ ಮುಜುಗರ...... '' ಸರ್, ಮೈ ಆಗೇ ಸೆ 'ಜೈ ಮಹಾರಾಷ್ಟ್ರ' ಬೋಲ್ನ ಚೋಡ್ ದೂಂಗಾ..... ಅಭಿ ಮುಜೆ ಚೋಡ್ ದೋ..... ಸಿರ್ಫ್ ಮೈ ಆಪ್ಕೆ ಸಾಮನೇ 'ಜೈ ಕರ್ನಾಟಕ' ಬೋಲೊಂಗಾ .... ಸಬಕೇ ಸಾಮನೇ ನಹಿ ಪ್ಲೀಸ್ '' ಅಂದ........ ಸರೀಪ್ಪಾ...... ಎಂದು ನಾನು ಒಪ್ಪಿಕೊಂಡೆ...... ಆದರೆ ನನಗೆ ಇವನಿಗೆ ಇನ್ನೂ ಸ್ವಲ್ಪ ಸತಾಯಿಸೋಣ ಎನಿಸಿತು..... ಟಾಯ್ಲೆಟ್ ಎದುರಿಗೆ ನಿಂತು ''ಅಬ್ ಬೋಲೋ '' ಅಂದೆ...... ಪಾಪ ಹುಡುಗ...... '' ಜೈ ಕರ್ನಾಟಕ'' ಎಂದ...... ಕೇಳಲು ತುಂಬಾ ಸಿಹಿಯಾಗಿತ್ತು..... ಅವನ ಬಾಯಿಂದ ಮೂರು ಸಾರಿ ಹಾಗೆ ಹೇಳಿಸಿ..... ಬಾಗಿಲು ತೆರೆದೇ....... ಬಾಗಿಲು ತೆರೆಗೂ ಹೊರಗೆ ಬಂದವನಿಗೆ ಕಂಡಿದ್ದು..... ನನ್ನನ್ನೂ ಸೇರಿ, ಎಲ್ಲಾ ಜನರೂ ನಗುತ್ತಾ ಟಾಯ್ಲೆಟ್ ಹೊರಗೆ ಬಾಗಿಲಲ್ಲೇ ನಿಂತಿದ್ದೆವು ..... ಅವರಿಗೆಲ್ಲಾ ನಾನು, 'ಏನೋ ತಮಾಷೆ ತೋರಿಸುತ್ತೇನೆ ಬನ್ನಿ' ಎಂದು ಟಾಯ್ಲೆಟ್ ಬಾಗಿಲಿಗೆ ಕರೆ ತಂದಿದ್ದೆ.... ಅವತ್ತಿನಿಂದ ಅವನು 'ಜೈ ಮಹಾರಾಷ್ಟ್ರ' ಹೇಳೋದು ನಿಲ್ಲಿಸಿದ್ದ.....


Dec 6, 2009

'' ಹೀಗೂ ಉಂಟೆ.........'' !

''ನನ್ನ ಅಣ್ಣ ಸತ್ತು ಇವತ್ತಿಗೆ ಹತ್ತು ವರ್ಷ ಸರ್'' ..... ಎಂದಿಗೂ ಮಾತಾಡದ ನನ್ನ ಡ್ರೈವರ್ ಇವತ್ತು ಮಾತಾಡುತ್ತಿದ್ದ.... .....'' ಏನಾಗಿತ್ತು ಅವರಿಗೆ'' ಎಂದೆ...... '' ಯಾರೋ ಮಾಟ ಮಾಡಿಸಿದ್ದರು ಸರ್'' ಅಂದ......... ನಾನು ಬೆಚ್ಚಿದೆ..... ಅವನು ಹೇಳುತ್ತಾ ಹೋದ..... ಆಗಷ್ಟೇ ಆಫೀಸಿನಿಂದ ಸೈಟಗೆ ಹೊರಟಿದ್ದೆ..... ಎಂದಿಗೂ ಏನೂ ಕೇಳದ, ಹೇಳದ ಡ್ರೈವರ್ ಮಾತಾಡುತ್ತಿದ್ದ...... ನಾನು ಕೇಳಿಸಿಕೊಳ್ಳಲು ತಯಾರಾದೆ.... ..... ಅವನು ಹೇಳುತ್ತಾ ಹೋದ.......... '' ನಮ್ಮದು ತುಂಬಾ ಬಡ ಕುಟುಂಬ ಸರ್, ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ.. ಹಿರಿಯ ಅಣ್ಣ , ಅವನ ಗೆಳೆಯರ ಸಂಗಡ ಮುಂಬೈ ಗೆ ಹೋಗಿ ಹೋಟೆಲ್ ಕೆಲಸ ಸೇರಿಕೊಂಡ.... ಹೋದ ಸ್ವಲ್ಪ ಸಮಯದಲ್ಲೇ ಅವನೇ ಒಂದು ಹೋಟೆಲ್ ನಡೆಸಲು ಶುರು ಮಾಡಿದ........ ಒಳ್ಳೆಯ ಸಂಪಾದನೆಯೂ ಬರ್ತಾ ಇತ್ತು..... ಬಂದ ಹಣದಲ್ಲಿ, ಇಲ್ಲಿ ಒಂದು ತೋಟ, ಮನೆ ಎಲ್ಲಾ ತೆಗೆದುಕೊಂಡ..... ನಮ್ಮನ್ನೆಲ್ಲ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.... ಅಲ್ಲಿಂದ ಊರಿಗೆ ಬರುವಾಗಲೆಲ್ಲಾ ಹೊಸದಾಗಿ ಕೊಂಡ ಕಾರಿನಲ್ಲೇ ಬರುತ್ತಿದ್ದ.... ನಾನು ಕಾಲೇಜ್ ಗೆ ಹೋಗ್ತಾ ಇದ್ದೆ....... ಅಣ್ಣನ ಏಳಿಗೆ ನೋಡಿ ನಮ್ಮ ಸಂಭಂದಿಕರಿಗೆಲ್ಲಾ ಹೊಟ್ಟೆಯುರಿ ಶುರು ಆಯ್ತು..... ತೀರಾ ಬಡವರಾಗಿದ್ದ ನಾವು, ಶ್ರೀಮಂತರಾಗಿದ್ದನ್ನ ನೋಡಲು ಅವರಿಗೆ ಸಹಿಸಲು ಆಗಲಿಲ್ಲ....... ಅವರಲ್ಲಿ ಯಾರೋ ಕೇರಳಕ್ಕೆ ಹೋಗಿ ಮಾಟ ಮಾಡಿಸಿ ಬಂದಿದ್ದಾರೆ.... ಮುಂಬೈ ಯಲ್ಲಿ ಅಣ್ಣನ ವ್ಯಾಪಾರ ನೋಡಿ ಅವನ ಪಕ್ಕದ ಹೋಟೆಲಿನವರೂ ಸಹ ಮಾಟ ಮಾಡಿಸಿದ್ದಾರೆ........... ಅವನಿಗೆ ಮಲಗಿದಾಗ ಕನಸು ಬೀಳುವುದಂತೆ.........'ಮನೆಗೆ ಬಾ, ನಾನು ಕಾಯ್ತಾ ಇದ್ದೇನೆ' ಎಂದು ಯಾರೋ ಕರೆದ ಹಾಗೆ.......ಹೀಗೆಲ್ಲಾ ನಡೀತಾ ಇದೆ ಎಂದು ನಂಗೆ ಫೋನ್ ಮಾಡಿ ಹೇಳಿದ..... ನಾನು ನಂಬಲಿಲ್ಲ ಸರ್, ...... ನನ್ನ ಹುಡುಗು ಬುದ್ದಿ, ಬಿಸಿ ರಕ್ತ.... ಯಾವುದನ್ನೂ ನಂಬಲಿಲ್ಲ...... ಅಮ್ಮ ಮಾತ್ರ ಹೆದರಿದರು...... ಅಣ್ಣನ ಜಾತಕ ತೆಗೆದುಕೊಂಡು, 'ಬಟ್ಟ' ರಲ್ಲಿ ಹೋದರು..... ' ತುಂಬಾ ಕೆಟ್ಟ ದೋಷವಿದೆ, ಜಾಗ್ರತೆಯಾಗಿರಲು ಹೇಳಿ' ಎಂದಿದ್ದಾರೆ ಭಟ್ಟರು....... ಅಮ್ಮ ಇದನ್ನೆಲ್ಲಾ ಅಣ್ಣನಿಗೆ ಹೇಳಿದರೂ, ಅಣ್ಣ ಹಣದ ಗತ್ತು, ಹುಂಬತನದಿಂದ ಇದನ್ನೆಲ್ಲಾ ಕಿವಿಗೆ ಹಾಕಿಕೊಳ್ಳಲೇ ಇಲ್ಲ.......... ಅಮ್ಮನ ಹೆದರಿಕೆ ಮುಂದುವರಿದೆ ಇತ್ತು....... ಸ್ವಲ್ಪ ದಿನದ ನಂತರ ಅಣ್ಣ ಮನೆಗೆ ಬಂದ....... ಅವನಿಗೆ ಅಮ್ಮ ಹುಡುಗಿ ನೋಡಿದ್ದರು........ ಮರುದಿನ ನೋಡಲು ಹೊಗುವವರಿದ್ದೆವು...... ಅಂದು ರಾತ್ರಿ ನನಗಿನ್ನೂ ನೆನಪಿದೆ....... ಕೋಳಿ ಸಾರು ಮಾಡಿದ್ದೆವು..... ಅಣ್ಣ ತುಂಬಾ ಪ್ರೀತಿಯಿಂದ ಊಟ ಮಾಡಿದ್ದ..... ತುಂಬಾ ಹೊತ್ತಿನ ತನಕ ಮಾತನಾಡಿ ಮಲಗೋದು, ಹನ್ನೆರಡಾಗಿತ್ತು...... ಮಲಗಿದ ಸ್ವಲ್ಪ ಹೊತ್ತಿನಲ್ಲೇ, ಅಣ್ಣ ' ಯಾರೋ ಕರೆಯುತ್ತಿದ್ದಾರಲ್ಲ' ಎನ್ನುತ್ತಾ ಹೊರಗೆ ಹೋದ....... ಇಷ್ಟು ಹೊತ್ತಾದರೂ ಅಣ್ಣ ಬರಲಿಲ್ಲವಲ್ಲ ಎಂದು ನಾನು ಹೊರಗೆ ಹೋಗಿ ನೋಡಿದರೆ, ಅಣ್ಣ ಮುಖ ಕೆಳಗಾಗಿ ಬಿದ್ದಿದ್ದ...... ನಾನು ಜೋರಾಗಿ ಕೂಗಿದೆ...... '' ಅಪ್ಪಾ...... ಹೊರಗೆ ಬನ್ನಿ, ಅಣ್ಣ ಬಿದ್ದಿದ್ದಾನೆ'' ..... ಅಪ್ಪ ಓಡೋಡಿ ಬಂದು ಅಣ್ಣನನ್ನ ಎತ್ತಿದರು..... ಬಾಯಲ್ಲಿ ರಕ್ತ ಸುರಿಯುತ್ತಿತ್ತು...... ಕೊಡಲೇ ಆಸ್ಪತ್ರೆಗೆ ಕರೆದುಕೊಂಡು ಹೊದೆವಾದರೂ ಪ್ರಯೋಜನವಾಗಲಿಲ್ಲ..... ಅಣ್ಣ ಆಗಲೇ ಸತ್ತು ಹೋಗಿದ್ದ..........

ಮಧ್ಯೆ ನಾನು ಬಾಯಿ ಹಾಕಿದೆ............'' ಪೋಸ್ಟ್ ಮಾರ್ಟಂ ಏನಾದರೂ ಮಾಡಿದ್ರಾ, ಡಾಕ್ಟರ ಏನಂದ್ರು'' ಎಂದೆ........ ' ಅದೆಲ್ಲಾ ಹಳ್ಳಿಯಲ್ಲಿ ಎಲ್ಲಿ ಮಾಡ್ತಾರೆ ಸಾರ್...... ನಂಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ..... ಅಣ್ಣನನ್ನು ಸುಟ್ಟು ಮನೆಗೆ ಬಂದೆವು...... ಅಮ್ಮ ಮಂಕಾಗಿದ್ದಳು..... ಇನ್ನೂ ಏನೋ ಕೆಟ್ಟದಾಗಲಿದೆ ಎಂದು ಬಡಬಡಿಸುತ್ತಿದ್ದಳು.... ನಾನು ಏನೂ ಅರ್ಥವಾಗದೆ, ಏನೂ ಮಾಡದೆ ಸುಮ್ಮನಿದ್ದೆ.... ಇನ್ನೊಬ್ಬ ಅಣ್ಣ, ತೋಟದ ಮನೆಯ ಕೆಲಸದಲ್ಲಿ ಅಪ್ಪನ ಜೊತೆಯಾದ..... ನಾನು ಬಾಂಬೆಯಲ್ಲಿ ಅಣ್ಣನ ಹೋಟೆಲ್ ನೋಡಿಕೊಳ್ಳುತ್ತೇನೆ ಎಂದೆ...... ' ಬೇಡ, ಹೋಟೆಲ್ ನನ್ನ ಮಗನ ಪ್ರಾಣ ತಿಂತು... ನೀವ್ಯಾರಾದರೂ ಅಲ್ಲಿಗೆ ಹೋದರೆ ನನ್ನ ಮೇಲಾಣೆ' ಅಮ್ಮ ಅಬ್ಬರಿಸುತ್ತಿದ್ದರು.....ನಾನು ಉಪಾಯ ಇಲ್ಲದೆ ಕಾಲೇಜ್ ಗೆ ಹೋದೆ ಸರ್..........

''ಸ್ವಲ್ಪ ಕಾರ್ ನಿಲ್ಸು'' ಎಂದೆ..... ಕೆಳಗಿಳಿದು ಹೋಗಿ, ಕೆಲಸಗಾರರಿಗೆ ಮುಂದಿನ ಕೆಲಸಗಳ ಬಗ್ಗೆ ಹೇಳಿ, ಮತ್ತೆ ಬಂದು ಕುಳಿತೆ...... ''ಸರಿ, ಮನೆಗೆ ಹೋಗೋಣ'' ಎಂದೆ........ ನನ್ನ ಡ್ರೈವರ್ ಅದೇ ಲಹರಿಯಲ್ಲಿದ್ದ..... ನಾನೂ ಸಹ ಅವನಿಗೆ ಕಿವಿಯಾದೆ............... '' ನಂತರ ನನ್ನ ಎರಡನೇ ಅಣ್ಣನೂ ವಿಚಿತ್ರವಾಗಿ ಆಡಲು ಶುರು ಮಾಡಿದ ಸರ್, ಇದ್ದಕ್ಕಿದ್ದಂತೆ ' ನಾನು ಮುಂಬೈ ಗೆ ಹೋಗಬೇಕು, ನನ್ನ ಹಣ ಇದೆ ಅಲ್ಲಿ' ಎಂದೆಲ್ಲಾ ಕೂಗುತ್ತಿದ್ದ ..... ಅಮ್ಮ ಮತ್ತೆ ಜಾತಕ ತೆಗೆದುಕೊಂಡು ಹೋದರು, ಬಾರಿ ನಾನೂ ಅವರ ಜೊತೆ ಹೋದೆ.... ಭಟ್ಟರು ಮಾತ್ರ ' ತುಂಬಾ ದೊಡ್ಡದಾಗಿ ಮಾಟ ಮಾಡಿಸಿದ್ದಾರೆ, ನಾವು ತಿರುಗುಮಾಟ ಮಾಡಬಹುದು, ಆದ್ರೆ ತುಂಬಾ ಖರ್ಚಾಗತ್ತೆ' ಅಂದ್ರು...... ಅಮ್ಮ 'ಎಷ್ಟಾದರೂ ಅಡ್ಡಿಯಿಲ್ಲ..... ಮನೆ , ತೋಟ ಮಾರಿ ಹಣ ತರುತ್ತೇನೆ.... ನನ್ನ ಮಕ್ಕಳು ಸುಖವಾಗಿ ಇರಬೇಕು ಅಷ್ಟೇ ಅಂದಳು..... ನಂಗೆ ಏನೂ ಅರ್ಥವಾಗದೆ ಇದ್ದರೂ ಏನೋ ತುಂಬಾ ಅಪಾಯವಿದೆ ಎಂದೆನಿಸಿತ್ತು.....ಹಾಗೆಯೇ ಅಮ್ಮ, ತೋಟದ ಸ್ವಲ್ಪ ಭಾಗ ಮಾರಿ, ಹಣ ತಂದು ಭಟ್ಟರು ಹೇಳಿದ ಹಾಗೆ ಮಾಡಿ ಮುಗಿಸಿದಳು..... ಅಣ್ಣ ಸುಧಾರಿಸುತ್ತಾ ಬಂದ....... ಅವತ್ತು, ದೊಡ್ಡಣ್ಣ ಸತ್ತು ಐದು ವರ್ಷವಾಗಿತ್ತು ಸರ್.... ತೋಟದ ಕೆಲಸಕ್ಕೆ ಹೋದ ಎರಡನೇ ಅಣ್ಣ ಉಳಿದ ಕೆಲಸಗಾರರಿಗೆ, ' ನಾನು ಈಗ ಸಾಯುತ್ತೇನೆ, ನನ್ನ ಹೆಣವನ್ನು ಇಲ್ಲೇ , ಇದೆ ಜಾಗದಲ್ಲಿ ಹುಗಿಯಬೇಕು' ಎಂದಿದ್ದಾನೆ.... ಕೆಲಸಗಾರರೆಲ್ಲ ನಗಾಡುತ್ತಾ ಕೆಲಸ ಮುಂದುವರಿಸಿದ್ದಾರೆ.... ಅಣ್ಣ ಸೀದಾ ಹೋಗಿ, ತೋಟದ ಮನೆಯ ಒಳಗೆ ಹೋಗಿ ನೇಣು ಹಾಕಿಕೊಂಡ............ ಅವತ್ತು ಗ್ರಹಣವಾಗಿತ್ತು ಸರ್.....

ನನ್ನಿಂದ ಮಾತೆ ಹೊರಡಲಿಲ್ಲ.... ಇದೆಲ್ಲಾ ಸತ್ಯಾನಾ..... ಯಾರೋ ಮಾಟ ಮಾಡಿಸೋದು.... ಯಾರೋ ಸಾಯೋದು.... ಇದೆಲ್ಲಾ ಸತ್ಯ ಆಗಿಬಿಟ್ಟರೆ, ಜಗತ್ತಿನ ಜನಸಂಖ್ಯೆ ಇಷ್ಟು ಇರುತ್ತಿರಲಿಲ್ಲ.... ಎಲ್ಲರೂ ಹಣ ಕೊಟ್ಟು, ಕಂಡವರಾಗದವರನ್ನು ಸುಲಭವಾಗಿ ಸಾಯಿಸಬಹುದಿತ್ತು ಎಂದುಕೊಂಡೆ......

ಅವನು ಹಾಗೆ ಮುಂದುವರಿಸಿದ...... '' ಅಮ್ಮ ಇದೆ ಕೊರಗಿನಲ್ಲಿ ಸತ್ತು ಹೋದರು, ಅಪ್ಪ ಮಾತ್ರ ದಿನಾ ಅಮ್ಮನ , ಅಣ್ಣನ ಫೋಟೋಗೆ ಹೂವು ಹಾಕುತ್ತಾ ದಿನ ಕಳೆಯುತ್ತಿದ್ದಾರೆ.... ನಾನು ಕಾರು ಬಾಡಿಗೆಗೆ ಬಿಟ್ಟಿದ್ದೇನೆ, ತಮ್ಮ ಕಾಲೇಜ್ ಗೆ ಹೋಗ್ತಾ ಇದ್ದಾನೆ ಸರ್..... ಹೇಗೋ ದಿನ ದೂಡುತ್ತಿದ್ದೇವೆ ಸರ್..... '' ಎಂದ........... ನನಗೆ ತುಂಬಾ ಕುತೂಹಲ.... '' ನಿಂಗೆ ಯಾವತ್ತಾದರೂ ಅಂಥಾ ಅನುಭವ ಆಗಿತ್ತಾ '' ಎಂದು ಕೇಳಿದೆ..... '' ಆಗ್ತಾ ಇರತ್ತೆ ಸರ್, ಏನ್ ಮಾಡೋದು, ಹಣೆಬರಹ .... ಅನುಭವಿಸಬೇಕು'' ಅಂದ ನಿಟ್ಟುಸಿರು ಬಿಟ್ಟು.........

''ಇಲ್ಲೇ ನಿಲ್ಸೂ, ಮನೆ ಬಂತಲ್ಲ..... ಎಲ್ಲಿಗೆ ಹೋಗ್ತಾ ಇದೀಯಾ.... '' ಎಂದು ಕೂಗಿದೆ ನಾನು......ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದ......... ಶನಿವಾರವಾಗಿದ್ದರಿಂದ ನಾಳೆ ರಜೆಯಿತ್ತು..... ಅವನಿಗೆ ಏನಾದರೂ ಹಣ ಕೊಡೋದು ನನ್ನ ರೂಡಿ....ನೂರು ರುಪಾಯಿ ಕೊಡೋಕೆ ಹೋದೆ.... ಅವನ ಕಣ್ಣು ಮುಚ್ಚಿತ್ತು...... ... '' ಏನಾಯ್ತೂ'' ಎಂದೆ.... ಮಾತಾಡಲಿಲ್ಲ..... 'ಏಯ್ .... ಏನೋ ಇದು.... ಕಣ್ ಬಿಡೋ, ಹಣ ತೆಗೋ'' ಎಂದೆ..... ಅವನ ಕಣ್ಣು ಮುಚ್ಚೆ ಇತ್ತು...... ನಂಗೆ ಗಾಬರಿಯಾಯಿತು....... ಕೈಯಲ್ಲಿದ್ದ ನೀರಿನ ಬಾಟಲಿಯಿಂದ ನೀರು ತೆಗೆದು ಮುಖಕ್ಕೆ ಹೊಡೆದೆ..... ಥಟ್ಟನೆ ಕಣ್ಣು ಬಿಟ್ಟ...... '' ಸಾರೀ ಸರ್..... ನಿದ್ದೆ ಬಂದು ಬಿಟ್ಟಿತ್ತು..... ಯಾವಾಗ ಬಂದ್ರೀ ಸರ್..... ಎಲ್ಲಿಗೆ ಹೋಗೋಣ ಸರ್......'' ಎಂದ ಕಣ್ಣುಜ್ಜಿಕೊಳ್ಳುತ್ತಾ ..... '' ಇದೇನ್ ಸಾರ್, ನಿಮ್ಮನೆಗೆ ಬಂದು ಬಿಟ್ವಾ.... ಆಫೀಸ್ ಎದುರಿಗೆ ಗಾಡಿ ನಿಲ್ಲಿಸಿ. ಗಾಡಿಯಲ್ಲಿ ಮಲಗಿದ್ದೊಂದೇ ನೆನಪು ನಂಗೆ.... ಇಲ್ಲಿಗೆ ಹೇಗೆ ಬಂದ್ವೀ ಸರ್''........... ಎಂದ ಗಾಬರಿಯಲ್ಲಿ....... ಬಾಟಲಿಯಲ್ಲಿ ಉಳಿದ ನೀರು ಕುಡಿಯಲು ಕುಡಿಯಲು ಹೋದೆ..... ನೀರು ಗಂಟಲಲ್ಲಿ ಇಳಿಯಲಿಲ್ಲ........