Nov 27, 2011

ಎಂಥಾ ಪಜೀತಿಯಯ್ಯಾ......!!!ಸುಮ್ಮನೆ ನಿಂತಾಗ, ಸುಮ್ ಸುಮ್ನೆ ಕುಳಿತಾಗ..
ಎಕ್ಶಿಲರೇಟರ್ ಮೇಲೆ ಕೈಯಿದ್ದಾಗ....
ಟ್ರಾಫಿಕ್ ನಲ್ಲಿ ನಿಲ್ಲಿಸಿದ್ದಾಗ...
ಪೋಲಿಸಿಗೆ ದುಡ್ಡು ಕೊಡುತ್ತಿದ್ದಾಗ, 
ಬಾಸ್ ಹತ್ತಿರ ಬೈಸಿಕೊಳ್ಳುತ್ತಿದ್ದಾಗ...
ಹುಟ್ಟಿ ಬರತ್ತೆ ಕತ್ತೆ ಕವಿತೆ......


ಅವಳ ನೆನಪು ಮತ್ತೆ ಮತ್ತೆ ಮತ್ತೇರಿದಾಗ.
ಇವಳ ಇಹದಲ್ಲಿ ಭೂತವನ್ನು ಮರೆತಾಗ.....
ಲೇಟಾಗಿ ಎದ್ದು ಗಡಿಬಿಡಿಯ ಸ್ನಾನದಲ್ಲಿ...
ತೊಳೆಯದೇ ಇದ್ದ  ಸಾಕ್ಸ್ ವಾಸನೆಯಲ್ಲಿ...
ಸ್ಟಾರ್ಟ್ ಆಗದೇ ಕೈ ಕೊಡುವ ಬೈಕಲ್ಲಿ....
ಹಾಳಾದ್ದು ಆಗ್ಲೇ ಹೊಳೆಯತ್ತೆ ಕವಿತೆ......


ಇಸ್ತ್ರಿ ಪೆಟ್ಟಿಗೆ ಬಿಸಿಯೇರಿದಾಗ....
ಇಂಟರ್ನೆಟ್ಟಿನ ದುಡ್ಡು ಕಟ್ಟದಿದ್ದಾಗ...
ಸಕ್ಕರೆ ನಿದ್ದೆಯ ಕನಸಿನಲ್ಲಿ...
ಉರಿಯುತ್ತಿರುವ ಮೊಂಬತ್ತಿಯ ಕೊನೆಯ ಗುಟುಕಿನಲ್ಲಿ....
ಸಿಗರೇಟಿನ ಕೊನೆಯ ಪಫ್ ನ ಕಿಕ್ಕಿನಲ್ಲಿ....
ಕೈ ತುದಿಗೇ ಬರತ್ತೆ ಕಳ್ಳ ಕವಿತೆ.....

Sep 25, 2011

ಈ ರೀತಿ.....!!!

ಈ ಕಥೆಯನ್ನು ಪ್ರಕಾಶಣ್ಣ ಬರೆದ ಕಥೆ(  http://ittigecement.blogspot.com/  )ಯನ್ನು ಮುಂದುವರೆಸಿ ಬರೆಯುವ ಪ್ರಯತ್ನ ಮಾಡಿದ್ದೇನೆ.... ನಾನ್ಯಾಕೆ ಹಾಗೆ ಮಾಡಿದೆ ಎಂದು ತಿಳಿಯಲಿಲ್ಲ..........
 ಮನುಷ್ಯ ಸಹಜವಾಗಿ ಎಲ್ಲರ ಜೊತೆ ಬೆರೆಯುತ್ತಾನೆ......
 ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಜೊತೆ ಬೆರೆಯದಿದ್ದರೆ ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ...
ಸಂಬಂಧಿಕರ ಜೊತೆ ಸೇರದಿದ್ದರೆ ಅವರೆಲ್ಲ ದೂರ ಹೋಗುತ್ತಾರೆ....

ಛೆ...ತಪ್ಪು ಮಾಡಿದೆ ಎನಿಸಿತು....  ಬೆನ್ನು ತಿರುಗಿಸಿ ನೋಡಿದೆ....
 ಆತ ಮೊಬೈಲ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಎನಿಸುತ್ತದೆ.... ನಾನು ತಿರುಗಿದ್ದನ್ನು ನೋಡಿಯೂ ಸಹ ಆತ ಮೆಸೇಜ್ ಕುಟ್ಟುವುದು ಮುಂದುವರಿಸಿದ........
 ನನ್ನ ಕೋಪ ಇಳಿದಿತ್ತಾದರೂ ತೋರಿಸಲು ಹೋಗಲಿಲ್ಲ..... ಹೆಣ್ಣು ಯಾವಾಗಲೂ ಗಂಡೇ ಸೋಲಲಿ ಎಂದು ಬಯಸುತ್ತಾಳೆ....
 ಆತ ಏನೂ ಪ್ರತಿಕ್ರೀಯಿಸದೇ ಇರಲು ನಾನೂ ಸೋಲಲು ಬಯಸಲಿಲ್ಲ.... ಬೆನ್ನು ತಿರುಗಿಸಿ ಮಲಗಿದೆ....
 ಮಲಗೇ ಇದ್ದರೂ ನಿದ್ದೆ ಬರಲಿಲ್ಲ.... 
ಮನಸ್ಸು ನನ್ನನ್ನು ನನ್ನ ಕಾಲೇಜಿನ ದಿನಗಳತ್ತ ಕೊಂಡೊಯ್ದಿತು....

ಪದವಿಯ ಕೊನೆಯ ವರ್ಷದಲ್ಲಿದ್ದೆ...........
ಇದೇ ನನ್ನ ಕಾಲೇಜಿನ ಅಂತಿಮ ವರ್ಷವೆಂದೇ ಇರಬೇಕು...
ಎಲ್ಲರ ಜೊತೆಯೂ ಖುಷಿ ಖುಷಿಯಿಂದ ಇರುತ್ತಿದ್ದೆ.....
ಅದರಲ್ಲೂ ಒಬ್ಬ ಹುಡುಗನ ಜೊತೆ ನನಗೆ ತುಂಬಾ ಖುಶಿ ಕೊಡುತ್ತಿತ್ತು.... ನನಗೆ ಒಳ್ಳೆಯ ಗೆಳೆಯನಾಗಿದ್ದ....

ನನ್ನ ಧುಖ್ಹಕ್ಕೆ ಹೆಗಲಾಗುತ್ತಿದ್ದ... ಖುಷಿಗೆ ಕಿವಿಯಾಗುತ್ತಿದ್ದ....
ಆದರೂ ನಾನು ಅವನನ್ನು ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ......
ಗಂಟೆಗಟ್ಟಲೆ ಹರಟಿದರೂ ಸಹ ನನ್ನ ಮನೆಯ ವಿಳಾಸ ಅವನಿಗೆ ಹೇಳಿರಲಿಲ್ಲ... ಅವನೂ ಕೇಳಿರಲಿಲ್ಲ.....

ಒಮ್ಮೆ ಕಾಲೇಜಿನ ಪ್ರವಾಸವಿತ್ತು....... ಆತನೂ ಬಂದಿದ್ದ....
ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆತ ಪದೇ ಪದೇ  ಬಂದು ನನ್ನ ಬಳಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದ..... ನಾನು ಅದನ್ನು ಒಪ್ಪಿರಲಿಲ್ಲ.....
ಗೋವಾದ ಪ್ರವಾಸವಾಗಿತ್ತು... ಒಂದು ದಿನ ಅಲ್ಲೇ ಉಳಿಯುವ ವ್ಯವಸ್ಥೆ ಸಹ ಇತ್ತು....... 
ಎಲ್ಲರೂ ಬೀಚ್ ನಲ್ಲಿ ಕುಣಿಯುತ್ತಿದ್ದೆವು.... ಆತ ನನ್ನನ್ನು ಸಮೀಪಿಸಲು ಪ್ರಯತ್ನಿಸುತ್ತಿದ್ದಾನೆ ಅನಿಸುತ್ತಿತ್ತು......

ಯಾಕೋ ಆತನನ್ನು ದೂರವಿಡಬೇಕು ಎನಿಸುತ್ತಿತ್ತು.... ಹಾಗೆ ಮಾಡಿದೆ....
 ಕುಣಿದು ಕುಣಿದು ಸುಸ್ತಾಗಿತ್ತು.... ರೂಮಿಗೆ ಬಂದು ಸ್ನಾನ ಮಾಡಿ ಊಟ ಮಾಡಿದೆವು....
  ಮಲಗುವವರಿದ್ದೆವು... ನನ್ನ ರೂಮ್ ನಲ್ಲಿ ನನ್ನ ಗೆಳತಿ ಒಬ್ಬಳಿದ್ದಳು...
ಅಷ್ಟರಲ್ಲಿ ಆತ ಅಲ್ಲಿಗೇ ಬಂದ...

ಆತ ತನ್ನ ಗೆಳೆಯರ ಜೊತೆ ಬಿಯರ್ ಕುಡಿದು ಬಂದಿದ್ದ ಎನಿಸುತ್ತಿತ್ತು...... ಬೀಯರ್ ವಾಸನೆಯೇ ವಾಕರಿಕೆ ತರಿಸುತ್ತಿತ್ತು....
ಬಂದವನೇ ನನ್ನ ಬೆಡ್ ಮೇಲೆ ಕುಳಿತ.... ನನ್ನ ಗೆಳತಿ ಬಾತ್ ರೂಮಿಗೆ ಹೋದಳು...
ಅದೇ ಸಮಯದಲ್ಲಿ ಆತ ನನ್ನ ಕೈ ಹಿಡಿದ.....
ನನಗೆ ಶಾಕ್ ಹೊಡೆದ ಹಾಗಾಯಿತು.....

ಇದು ನನ್ನ ಗೆಳೆತನಕ್ಕೆ ಮಾಡಿದ ಅಪಮಾನವಾಗಿತ್ತು..... ನಂಬಿಕೆಗೆ ಮಾಡಿದ ದ್ರೋಹವಾಗಿತ್ತು.....
ಯಾವ ನಿರೀಕ್ಷೆಯೂ ಇಲ್ಲದೆ ಸ್ನೇಹ ಮಾಡಿದ್ದೆ.....

ಈತನ ವರ್ತನೆ ನನ್ನನ್ನು ಕೆಣಕಿತ್ತು..... ಸಿಟ್ಟು ಬಂತು...
ಫಟೀರೆಂದು  ಎರಡು ಕೆನ್ನೆಗೆ  ಬಿಟ್ಟೆ......

ಆತನ ನಷೆ ಇಳಿದಿರಬೇಕು ಎನಿಸತ್ತೆ....
ಮಾತನಾಡದೆ ಹೊರಗೆ ಹೋದ....

ಬಾತ್ ರೂಮಿಗೆ ಹೋದ ಗೆಳತಿ ಹೊರಗೆ ಓಡಿ ಬಂದಳು" ಏನದು ಸದ್ದು.." ಎಂದಳು...
"ಸೊಳ್ಳೆ ಹೊಡೆದೆ" ಎಂದೆ... ನನ್ನ ಸಿಟ್ಟು ಹಿಡಿತಕ್ಕೆ ಬಂದಿತ್ತು.....

ಎಂದಿಗೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳದ ಆತ ಇಂದೇಕೆ ಹೀಗಾದ ಎನಿಸುತ್ತಿತ್ತು.... ನಾಳೆ ಕೇಳಿದರಾಯಿತು ಎಂದುಕೊಂಡು ಮಲಗಿದೆ....

ಬೆಳಿಗ್ಗೆ ಬೇಗನೇ ಎದ್ದೆ....
ಆತನಲ್ಲಿ ಹೋಗಿ ಕೇಳಬೇಕು ಎಂದಿಕೊಂಡು ಆತನ ರೂಮ್ ಹುಡುಕಿಕೊಂಡು ಹೋದೆ....

ಒಂದು ರೂಮಿನ ಬಾಗಿಲು ಅರ್ಧ ತೆರೆದಿತ್ತು....
ಇಣುಕಿದೆ...
ನನ್ನದೇ ಕಾಲೀಜಿನ ಹುಡುಗರು ಎಲ್ಲರೂ ಇದ್ದರು....
ಇದೇನಿದು ಎಲ್ಲರೂ ಇಷ್ಟು ಬೇಗ ಸೇರಿದ್ದಾರೆ ಎಂದುಕೊಂಡು ಒಳಗೆ ಹೋದೆ....  ಬೆಡ್ ಮೇಲೆ ಆತ ಕುಳಿತಿದ್ದ.... ಆತನ ಸುತ್ತಲು ಎಲ್ಲರೂ ನಿಂತಿದ್ದರು... ಅವರ ಹಿಂದೆ ನಾನು ನಿಂತಿದ್ದೆಯಾದ್ದರಿಂದ ನನ್ನನ್ನು ಯಾರೂ ಗಮನಿಸಲಿಲ್ಲ.....
ಆತ ಮೆಲ್ಲಗೆ ಮಾತನಾಡುತ್ತಿದ್ದ...... ನಾನು ಕಿವಿಗೊಟ್ಟು ಕೇಳಿದೆ..." ನನಗೆ ಎನೂ ಮನಸ್ಸಿರಲಿಲ್ಲ...ಅವಳೇ ನನ್ನನ್ನು ರೂಮಿಗೆ ಕರೆದಿದ್ದಳು.... ನನಗೆ ನಮ್ಮ ಸ್ನೇಹವನ್ನು ಹಾಳು ಮಾಡುವ ಮನಸಾಗಲಿಲ್ಲ..... ನೀವೇ ನೋಡಿದ್ದಿರಲ್ಲ, ಡಾನ್ಸ್ ಮಾಡುವಾಗ ಸಹ ನನ್ನ ಹತ್ತಿರವೇ ಬರುತ್ತಾ ಇದ್ದಳು.... ರಾತ್ರಿ ರೂಮಿಗೆ ಬರಲು ಹೇಳಿದ್ದಳು..... ಎನೋ ವಿಷಯ ಇರಬೇಕೆಂದುಕೊಂಡು ಹೋದೆ.... ಅವಳ ಗೆಳತಿ ಬಾತ್ ರೂಮಿಗೆ ಹೋಗಿದ್ದಾಗ ನನ್ನ ಕೈ ಹಿಡಿದು ಬಾ ಎಂದಳು.... ಕೆನ್ನೆಗೆ ಎರಡು ಬಿಗಿದು ಬಂದೆ... ಸ್ನೇಹವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ....." ಎಂದು ಇನ್ನೆನೋ ಹೇಳುವವನಿದ್ದ......
ನಾನು ಆತನ ಗೆಳೆಯರ ಮಧ್ಯದಲ್ಲೇ ನುಸುಳಿಕೊಂಡು ಆತನ ಎದುರಿಗೆ ನಿಂತೆ...
 ಆತನ ಬಾಯಿಗೆ ಬೀಗ ಬಿದ್ದಿತ್ತು.......
ನನ್ನ ಮೈ ಕಂಪಿಸುತ್ತಿತ್ತು.... ನನ್ನ ನಡುಕ ನನಗೇ ಕೇಳಿಸುತ್ತಿತ್ತು.... 

ಏನು ಹೇಳಬೇಕೋ ತಿಳಿದಿರಲಿಲ್ಲ...
ಥೂ..... ಎಂದು ಮುಖಕ್ಕೆ ಉಗಿದೆ.....
ಹೊರಗೆ ಬಂದೆ.....
ಬೇರೆಯದೇ ಬಸ್ ಹಿಡಿದು ಊರಿಗೆ ಬಂದಿದ್ದೆ....
ನಂತರ ಕಾಲೇಜಿನ ಕಡೆ ತಲೆ ಹಾಕಿರಲಿಲ್ಲ....

ಎಲ್ಲಾ ನೆನಪಾಯಿತು....... ಇದೆಲ್ಲವನ್ನು ನಾನೂ ಸಹ ಗಂಡನಿಗೆ ಹೇಳಿರಲಿಲ್ಲ....
ನನ್ನದೇನೂ ತಪ್ಪಿಲ್ಲ ಎಂದರೂ ಆತ ನಂಬಬಹುದು ಎನಿಸಿರಲಿಲ್ಲ..... ಮತ್ತೆಲ್ಲಾ ವಿಷಯದ ಬಗ್ಗೆ ಹೇಳಿಕೊಂಡರೂ ಈ ವಿಷಯ ಮುಚ್ಚಿಟ್ಟಿದ್ದೆ.....
ಯಾಕೊ ಹೇಳಬೇಕು ಎನಿಸಿರಲಿಲ್ಲ........ 

ಫೋನ್ ರಿಂಗ್ ಆದ ಹಾಗಾಯಿತು....
ನನ್ನ ಯೋಚನಾ ಸರಣಿಗೆ ಕತ್ತರಿ ಬಿತ್ತು......

ಕಿರುಗಣ್ಣಲ್ಲೇ ನೋಡಿದೆ...
ಆತ ಫೋನ್ ಕಿವಿಗಿಟ್ಟು ಪಿಸುಗುಟ್ಟಿದ... ಮತ್ತೆ ಕಟ್ ಮಾಡಿ.... ಮೆಸೇಜ್ ಕುಟ್ಟತೊಡಗಿದ...

ನಾನು ಸುಮ್ಮನೇ ಮಲಗಿದೆ.....


ಬೆಳಿಗ್ಗೆ ಬೇಗ ಎದ್ದು ತುಳಸಿಕಟ್ಟೆ ತೊಳೆದು ದೀಪ ಹಚ್ಚಿದೆ....
ಎಲ್ಲರಲ್ಲೂ ತಪ್ಪಿರತ್ತೆ.... ಕೆಲವೊಂದು ಹುಳುಕುಗಳು ಇರುತ್ತವೆ....
ಅದರ ಜೊತೆ ಹೊಂದಿಕೊಂಡು ಹೋದರೆ ಜೀವನ ಎಂದು ಅಮ್ಮ ಹೇಳುತ್ತಿದ್ದುದು ನೆನಪಾಯಿತು....

ನಿನ್ನೆ ಆತನ ಜೊತೆ ನಡೆದ ಜಗಳ ಮರೆತು ಸರಿಯಾಗೋಣ ಎನಿಸಿತು....
ಒಳ್ಳೆಯ ಕಾಫಿ ಮಾಡಿಕೊಂಡು ಬೆಡ್ ರೂಮಿಗೆ ಹೋದೆ....

ಆತ ಬೇಗನೇ ಎದ್ದಿದ್ದ... ಯಾರದೋ ಜೊತೆ ಮೆಲ್ಲ ದನಿಯಲ್ಲಿ ಮಾತನಾಡುತ್ತಿದ್ದ..... ನಾನು ಒಳಗೆ ಬಂದ ನಂತರ ಫೋನ್ ಕಟ್ ಮಾಡಿದ.....
ನಾನು " ಕಾಫಿ ಕುಡಿಯಿರಿ" ಎಂದೆ.....

"ಇದೇನು ಜಗಳ ಎಲ್ಲಾ ಮುಗೀತಾ..? ನಿನ್ನೆ ತುಂಬಾ ಸಿಟ್ಟಲ್ಲಿದ್ದೆ..... " ಎಂದರು.....

" ಅದೆಲ್ಲಾ ಬಿಟ್ಟುಬಿಡಿ... ಜಗಳ ಮರೆತು, ಜತೆಯಾಗಿ ಬಾಳೋಣ... ಮೊದಲು  ಕಾಫಿ ಕುಡಿಯಿರಿ" ಎಂದೆ......

"ನಿನ್ನದೂ ಸಹ ತಪ್ಪಿಲ್ಲ , ಎಲ್ಲಾ ಕಡೆಯಲ್ಲೂ ಸಂಬಂಧ ಕೆಟ್ಟು ಹೋಗಿದೆ... ಯಾರನ್ನೂ ನಂಬುವ ಹಾಗಿಲ್ಲ... ಇದನ್ನೆಲ್ಲಾ ಸರಿ ಮಾಡೊದು ಹೇಗಂದ್ರೆ, ಏನನ್ನು ಮುಚ್ಚಿಡದೇ ಎಲ್ಲವನ್ನೂ ಹಂಚಿಕೊಳ್ಳೋದು.... ನನ್ನ ಜೀವನ ತೆರೆದ ಪುಸ್ತಕದ ಹಾಗೆ.... ನಿನ್ನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದೇನೆ....  ಇಷ್ಟೆಲ್ಲಾ ಮಾಡಿದರೂ ನೀನು ನನ್ನ ಮೇಲೆ ತಪ್ಪು ತಿಳಿದೆ...... ಇರಲಿ, ಈಗ್ಲಾದ್ರೂ  ಎಲ್ಲಾ ಅರ್ಥ ಆಯ್ತಲ್ಲಾ.... ಸರಿ..... ಇದೇ ರೀತಿ ಇರು.... ಎರಡೇ ನಿಮಿಷ ಬಂದೆ.." ಎಂದವರೇ ಬಾತ್ ರೂಮಿಗೆ ಓಡಿದರು..... ಬಾಗಿಲು ಹಾಕಿಕೊಳ್ಳುವವರಿದ್ದರು.....

ಅಷ್ಟರಲ್ಲೇ ವಾಪಸ್ ಬಂದು ಮೊಬೈಲ್ ತೆಗೆದುಕೊಂಡು ಏನೋ ಕುಟ್ಟಿದರು...... ಮತ್ತೆ ಮೊಬೈಲ್ ನ್ನು ಬೆಡ್ ಮೇಲಿಟ್ಟು ಬಾತ್ ರೂಮಿಗೆ ಹೋದರು.....

ನನಗೆ ಮತ್ತೆ ತಲೆಯಲ್ಲಿ ಹುಳ.......
ಇದ್ಯಾಕೆ ಇಷ್ಟೊಂದು ಮೊಬೈಲ್ ಹುಚ್ಚು ಎನಿಸಿತು.....

ಮೊಬೈಲ್ ಕೈಯಲ್ಲಿ ತೆಗೆದುಕೊಂಡೆ....
ನೊಕಿಯಾ ಮೊಬೈಲ್ ಆಗಿತ್ತು.....
ದುಬಾರಿಯದೇ ಆಗಿತ್ತು.....

ನಿನ್ನೆ ರಾತ್ರಿ ಮೊಬೈಲ್ ನಲ್ಲಿ ಮಾತನಾಡಿದ್ದು ಮತ್ತು ಮೆಸೇಜ್  ನೆನಪಾಯಿತು.....
ಯಾರ ಜೊತೆ ಎನಿಸಿ....INBOX ನೋಡಿದೆ....... EMPTY... 
ಎಂದಿತ್ತು..!! ಅರೆ... ಇದೇನಿದು.... ನಿನ್ನೆ ರಾತ್ರಿಯಿಡಿ ಮೆಸೇಜ್  ಮಾಡಿದ್ದರಲ್ಲ.....
 SENT MESSAGE ನೋಡಿದೆ.......... ಅದೂ EMPTY
ಎಂದಿತ್ತು......!!
ಅದ್ಸರಿ.....
ನಾನು ಬೆಳಿಗ್ಗೆ ಕಾಫಿ ತರುವ ಮೊದಲು ಯಾರದೋ ಜೊತೆ ಮಾತನಾಡುತ್ತಿದ್ದರಲ್ಲ ಎನಿಸಿ Dialed call list ನೋಡಿದೆ......
 Empty ಎಂದಿತ್ತು.......!!
Received call list ನೋಡಿದೆ..............
Empty ಎಂದಿತ್ತು..... !!


ಫೋನ್ ತೆಗೆದು ಪಕ್ಕದಲ್ಲಿಟ್ಟೆ....
"ಟಿವ್...ಟಿವ್" ಎಂದು ಮೆಸೇಜ್ ಅಲರ್ಟ್ ಆಯ್ತು.....

ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!

Aug 15, 2011

ಕೇಸರಿ..... ಬಿಳಿ... ಹಸಿರು.......

           ಕೆಲಸದ ನಿಮಿತ್ತ ಕಾರಿನಲ್ಲಿ ಹೊರಟಿದ್ದೆ..... ಪ್ರಯಾಣದ ಸುಸ್ತಿನಿಂದಾಗಿ ನಿದ್ದೆ ಬಂದುಬಿಟ್ಟಿತ್ತು.... ಎಚ್ಚರವಾದಾಗ ಕಾರು ಒಂದು ಶಾಲೆಯ ಪಕ್ಕದಲ್ಲಿ ಹೋಗುತ್ತಿತ್ತು.... ಶಾಲೆಯ ಎದುರಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಸಾಲಾಗಿ ನಿಂತು ಡಾನ್ಸ್ ಮಾಡುತ್ತಿದ್ದರು..... ಅವರು ತೊಟ್ಟಿದ್ದ ಬಟ್ಟೆಯಿಂದ ಅವರೆಲ್ಲಾ ಸ್ವಾತಂತ್ರ್ಯ ದಿನಕ್ಕಾಗಿ ತಯಾರಿ ನಡೆಸಿದ ಹಾಗಿತ್ತು......... ಸ್ವಾತಂತ್ರ್ಯ ದಿನಕ್ಕಾಗಿ ಭಾಷಣ ಬರೆದುಕೊಡಲು  ಮೂರನೆಯ ತರಗತಿ ಓದುತ್ತಿದ್ದ ಮಗಳು ಹೇಳಿದ್ದು ನೆನಪಾಯ್ತು........ ನಾನು ಶಾಲೆಗೆ ಹೋಗುತ್ತಿದ್ದ ದಿನದಲ್ಲೂ ನನಗೆ ಅಪ್ಪನೇ ಭಾಷಣ ಬರೆದುಕೊಡುತ್ತಿದ್ದರು.... ಅದನ್ನು ಬಾಯಿಪಾಠ ಮಾಡಿಕೊಂಡು ಮೂರು ಮೂರು ಸಾರಿ ಅಪ್ಪನೆದುರು ಅಮ್ಮನೆದುರು ಪ್ರಾಕ್ಟೀಸ್ ಮಾಡಿಕೊಂಡು ಹೋಗಿ ಹೇಳುತ್ತಿದ್ದೆವು..... ಮಧ್ಯದಲ್ಲೇ ಮರೆತು ಹೋಗಿ ಮುಜುಗರವಾಗದಿರಲಿ ಅಂತ ಕಾಗದದಲ್ಲಿ ಬರೆದು ಕೈಯಲ್ಲಿ ಮುದ್ದೆ ಮಾಡಿ ಹಿಡಿದುಕೊಳ್ಳುತ್ತಿದ್ದೆ... ಹೆದರಿಕೆಯಿಂದ ಕೈಯಲ್ಲಿನ ಬೆವರಿನಿಂದಾಗಿ ಕಾಗದ ಒದ್ದೆಯಾಗುತ್ತಿತ್ತು...... ಅದೆಲ್ಲಾ ನೆನಪಾಗಿ ನಗು ಬಂತು..... ಸ್ವಲ್ಪ ಹೊತ್ತು ಇಲ್ಲೇ ಇರೋಣ ಎನಿಸಿ ಕಾರು ನಿಲ್ಲಿಸಲು ಹೇಳಿದೆ.... ಪಕ್ಕದಲ್ಲಿನ ಅಂಗಡಿಯ ಬೇಂಚ್ ಮೇಲೆ ಒಬ್ಬರು ವಯಸ್ಸಾದವರು ಕುಳಿತಿದ್ದರು.......  ಮುಖದ ತುಂಬಾ ಗಡ್ಡ, ಮೀಸೆ ತುಂಬಿ ಹೋಗಿತ್ತು.... ಬಟ್ಟೆ ತೇಪೆ ಹಾಕಿತ್ತು...... ನೋಡಿದ ಕೂಡಲೇ ಗೌರವ ಬರುವ ಹಾಗಿರಲಿಲ್ಲ....ಬೇರೆ ಎಲ್ಲೂ ಕುಳಿತುಕೊಳ್ಳಲು ಜಾಗ ಇರದೇ ಇದ್ದುದರಿಂದ ಆ ಹಿರಿಯರ ಪಕ್ಕದಲ್ಲೇ ಕುಳಿತೆ..........ನಾಳೆಯೇ ಸ್ವತಂತ್ರ ದಿನವಾದ್ದರಿಂದ ಎಲ್ಲಾ ಅಂಗಡಿಯಲ್ಲೂ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟಧ್ವಜ ತುಂಬಿ ಹೋಗಿತ್ತು.......  ಗಾಳಿ ಜೋರಾಗಿ ಬೀಸುತ್ತಿತ್ತು......  ಮಳೆ ಬರುವ ಹಾಗೆ ಇತ್ತು.....  ಮಕ್ಕಳೆಲ್ಲಾ ಇನ್ನೂ ಡಾನ್ಸ್ ಮಾಡುತ್ತಲೇ ಇದ್ದರು........

            ಜೋರಾಗಿ ಗಾಳಿ ಬೀಸಿದಾಗ ಕಾಗದದ ಒಂದು ರಾಷ್ಟಧ್ವಜ ಹಾರಿಬಂದು ನನ್ನ ಕಾಲ ಬಳಿ ಬಂದು ಬಿತ್ತು...... ಯಾಕೋ ರಾಷ್ಟ್ರಧ್ವಜ ಕಾಲ ಬಳಿ ಬಿದ್ದಿರುವುದು ಸರಿ ಎನಿಸದೇ ಎತ್ತಿಕೊಳ್ಳಲು ಮುಂದಾದೆ..... ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರು ರಾಷ್ಟ್ರಧ್ವಜವನ್ನು ಎತ್ತಿಕೊಂಡರು.... ಇದನ್ನು ತೆಗೆದುಕೊಂಡು ಇವರೇನು ಮಾಡುತ್ತಾರೆ ಎಂದುಕೊಂಡು ಅವರತ್ತ ನೋಡಿದೆ............ಅವಾಕ್ಕಾದೆ.......ರಾಷ್ಟ್ರಧ್ವಜವನ್ನು ಅವರು ತಮ್ಮ ಎದೆಗೆ ಒತ್ತಿ ಹಿಡಿದಿದ್ದರು....... ನನಗೆ ಎನೂ ಅರ್ಥ ಆಗಲಿಲ್ಲ.... ಮಾತನಾಡಿಸೋಣ ಎನಿಸಿ ಅವರ ಭುಜ ಮುಟ್ಟಿದೆ...... ಆತನ ಕಣ್ಣಲ್ಲಿ ನೀರಿತ್ತು......ನನಗೆ ಎನೂ ಅರ್ಥ ಆಗಲಿಲ್ಲ.... "ಏನಾಯ್ತು ಸಾರ್.....? ಯಾಕೆ ಕಣ್ಣಲ್ಲಿ ನೀರು....? ಯಾರು ನೀವು....? " ನನ್ನ ಪ್ರಶ್ನೆ  ಸರ ಸರನೆ ಬಂದಿದ್ದರಿಂದ  ಅವರು ತಿರುಗಿ ಕುಳಿತು ನನ್ನನ್ನೇ ನೋಡಿದರು....... " ಈ ಮೂರು ಬಣ್ಣದ ಕಾಗದಕ್ಕಾಗಿ ಎಷ್ಟೋ ಜನ ತಮ್ಮ ಪ್ರಾಣ ಬಿಟ್ಟಿದ್ದಾರೆ ಗೊತ್ತಾ...? ತಮ್ಮ ಮನೆ, ಮಠ, ಕುಟುಂಬ ಬಿಟ್ಟು ಈ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ್ದಾರೆ ಗೊತ್ತಾ...?" ಎಂದರು .... ನನಗೆ ಕುತೂಹಲ...... " ತಾವು ಯಾರು ಸರ್....? ನೀವೂ ಸ್ವಾತಂತ್ರ್ಯ ಹೋರಾಟಗಾರರಾ...? "ಎಂದೆ....ಆವರು ತಮ್ಮ ನೋಟವನ್ನು ಬೇರೆಡೆ ತಿರುಗಿಸಿದರು..... ತಮ್ಮಷ್ಟಕ್ಕೆ ಎನ್ನುವ ಹಾಗೆ ಮಾತನಾಡತೊಡಗಿದರು............

             "ಗಾಂಧೀಜಿ ಆಗಷ್ಟೇ ಅಸಹಕಾರ ಚಳುವಳಿ ಆರಂಭಿಸಿದ್ದರು...... ನನಗಾಗ ಇಪ್ಪತ್ತು ವರ್ಷ ವಯಸ್ಸು..... ಹತ್ತನೇ ಕ್ಲಾಸ್ ತನಕ ಓದಿ ಮನೆಯಲ್ಲೇ ಇದ್ದೆ....ಅಪ್ಪ ಅಮ್ಮ ಇಬ್ಬರೂ ನೌಕರಿ ಮಾಡುತ್ತಿದ್ದರು.... ನಾನೇನು ಮಾಡಿದರೂ ನಡೆಯುತ್ತಿತ್ತು....ಮಾಡದೇ ಇದ್ದರೂ ನಡೆಯುತ್ತಿತ್ತು.... ಸುಮ್ಮನೇ ಒಡಾಡಿಕೊಂಡು ಇದ್ದೆ....  ಗೆಳೆಯರ ಬಳಗ ದೊಡ್ಡದಿತ್ತು..... ಆದರೆ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ನಮ್ಮಿಂದ ದೂರವೇ ಇತ್ತು....... ಸಂಜೆಯಾದರೆ ಸಾಕು ಕಬಡ್ಡಿ ಆಡುತ್ತಿದ್ದೆವು... ನನ್ನ ಇಬ್ಬರು ಆತ್ಮೀಯ ಸ್ನೇಹಿತರಲ್ಲಿ ಒಬ್ಬನಿಗೆ ಗಾಂಧೀಜಿಯ ಹೋರಾಟದ ಬಗ್ಗೆ ಒಲವಿತ್ತು... ಅವರ ಬಗ್ಗೆ ನಮಗೆಲ್ಲಾ ಹೇಳುತ್ತಿದ್ದ.... ದಿನದ ಆಟ ಮುಗಿಯುತ್ತಿದ್ದಂತೆ ಗಾಂಧಿಜಿಯ ವಿಚಾರಗಳ ಬಗ್ಗೆ ಹೇಳುತ್ತಿದ್ದ.... ನನಗೆ ಅದರ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ....." ಎಂದು ಹೇಳಿ ದೀರ್ಘವಾದ ಉಸಿರು ತೆಗೆದುಕೊಂಡರು ಆತ........ ನಾನು ಅವರಿಗೆ ನೀರು ತಂದು ಕೊಟ್ಟೆ...... ನೀರನ್ನು ಕುಡಿದ ಅವರು ಮುಂದುವರಿಸಿದರು....

              " ಎಂದಿನಂತೆ ಅವತ್ತೂ ಕಬಡ್ಡಿ ಆಡಿ ಕುಳಿತಿದ್ದೆವು..... ನನ್ನ ಆತ್ಮೀಯ ಗೆಳೆಯ ನನ್ನ ಕಾಲ ಮೇಲೆ ಮಲಗಿದ್ದ.....ಆಗಲೇ ಕಿವಿಗೆ ನೂರಾರು ಕುದುರೆ ಓಡಿಬರುತ್ತಿರುವ ಸದ್ದು ಬಿತ್ತು....  ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಕುದುರೆಯಲ್ಲಿ ಬಂದ ಆಂಗ್ಲರ ಬಂದೂಕು ನನ್ನ ಗೆಳೆಯರ ಪ್ರಾಣ ತೆಗೆದುಕೊಂಡಿತ್ತು.... ನನ್ನ ಗೆಳೆಯ ನನ್ನ ಕಾಲ ಮೇಲೆಯೆ ಸತ್ತಿದ್ದ..... ನನ್ನ ಮೈಮೇಲೆ ಬಿದ್ದಿದ್ದ ಆತ ನನ್ನನ್ನು ಬಚಾವ್ ಮಾಡಿದ್ದ... ನಿಮಿಷದಲ್ಲಿ ಅಲ್ಲಿದ್ದ ನನ್ನ ಹದಿನೈದು ಸ್ನೇಹಿತರನ್ನು ಕೊಂದು ಹಾಕಿದ್ದರು... ನನ್ನ ಮೇಲೆ ನನ್ನ ಸ್ನೇಹಿತನ ದೇಹ ಬಿದ್ದಿದ್ದರಿಂದ, ಕೆಳಗಿದ್ದ ನನ್ನನ್ನು ಯಾರೂ ನೋಡಲಿಲ್ಲ..... ಆಂಗ್ಲರು ಹೊರಟುಹೋಗಿದ್ದರು..... ಮೇಲೆದ್ದು ನಿಂತೆ....ಸುತ್ತಲೂ ಹೆಣಗಳ ರಾಶಿ..... ಯಾವುದೇ ಶಡ್ಯಂತ್ರ ಮಾಡದೇ ನಮ್ಮಷ್ಟಕ್ಕೆ ನಾವಿದ್ದರೂ ಈ ಅಧಿಕಾರಧಾಹಿಗಳು ನನ್ನ ಸ್ನೇಹಿತರನ್ನು ಕೊಂದಿದ್ದರು....ಹಾಗಿದ್ದ ಮೇಲೆ ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವ ಎಷ್ಟೋ ಭಾರತೀಯರನ್ನು ಹೇಗೆ ಕಾಡುತ್ತಿರಬೇಡ ಎನ್ನಿಸಿತು....ಜೊತೆ ಜೊತೆಯಲ್ಲಿ ಆಡಿದ ಗೆಳೆಯರನ್ನು ರಕ್ತದ ಮಡುವಿನಲ್ಲಿ ನೋಡಲು ಆಗಲಿಲ್ಲ..... ಅಲ್ಲಿಂದ ಹೊರಟುಬಿಟ್ಟೆ...... ಮುಂದಿನ ನನ್ನ ಜೀವನ ಸ್ವಾತಂತ್ರಕ್ಕಾಗಿ ಮುಡಿಪಿಟ್ಟೆ.... ಮೈಸೂರಿನಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಜೊತೆಯೇ ಉಳಿದೆ..... ನಾನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ತಪ್ಪಿಗೆ ನನ್ನ ಅಪ್ಪ ಅಮ್ಮನನ್ನೂ ಕೊಂದು ಹಾಕಿದ್ದಾರೆ ಎಂಬ ಸುದ್ದಿ ಸಿಕ್ಕಿತ್ತು....  ಅವತ್ತೇ ನಾನು ಮತ್ತು ನನ್ನ ಸಹಪಾಠಿಗಳೆಲ್ಲಾ ಸೇರಿ ಒಂದು ರೈಲನ್ನು ನಿಲ್ಲಿಸಿ ಅದರಲ್ಲಿನ ಯುದ್ಧ ಸಾಮಗ್ರಿಯನ್ನು ದೋಚುವವರಿದ್ದೆವು...."

         " ಎಲ್ಲಾ ಯೋಜನೆಯ ಹಾಗೆ ನಡೆದಿತ್ತು..... ಎಲ್ಲಾ ದೋಚಿದ ನಂತರ ರೈಲಿನಿಂದ ಕೆಳಗಿಳಿಯುವಾಗ ಕಾಲು ಜಾರಿ ಬಿದ್ದಿದ್ದೆ..... ನನ್ನ ತಲೆ ರೈಲುಹಳಿಗೆ ತಾಗಿತ್ತು....ಪ್ರಜ್ನೆ ತಪ್ಪಿತ್ತು.... ನನ್ನ ಸಹಪಾಠಿಗಳು ನನ್ನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು... ಎರಡು ತಿಂಗಳ ನಂತರ ನನಗೆ ಪ್ರಜ್ನೆ ಬಂದಾಗ ನಮ್ಮ ದೇಶ ಸ್ವತಂತ್ರವಾಗಿತ್ತು....ನಮ್ಮ ದೇಶದ ಧ್ವಜ ನನ್ನ ದಿಂಬಿನ ಮೇಲಿತ್ತು.... ಅದನ್ನೆತ್ತಿಕೊಂಡು ನಾನು ಹೊರಟೆ..... ನನ್ನ ಊರ ಕಡೆಗೆ..... ನನ್ನ ಹೋರಾಟ ಗುರುತಿಸಿದ ನನ್ನ ಊರು, ಸರಕಾರ ನನಗೆ ಪಿಂಚಣಿ ಕೊಡುತ್ತಿತ್ತು..... ತದ ನಂತರ ಬಂದ ಸರಕಾರದ ಭ್ರಷ್ಟತನ ಎಲ್ಲೆ ಮೀರಿತ್ತು....  ನಾವೆಲ್ಲಾ ಹೋರಾಡಿದ್ದು ಇದಕ್ಕೇನಾ ಎನ್ನುವ ಹಾಗಿತ್ತು.... ನನಗೆ  ಕೊಡುತ್ತಿದ್ದ ಪಿಂಚಣಿಯನ್ನು ತೆಗೆದುಕೊಳ್ಳಲು ಮನಸ್ಸು ಬರುತ್ತಿರಲಿಲ್ಲ.... ಊರನ್ನೇ ಬಿಟ್ಟು ಇಲ್ಲಿ ಬಂದೆ.... ಎಲ್ಲಾದರೂ ಕೇಸರಿ , ಬಿಳಿ, ಹಸಿರು ಬಣ್ಣ ಕಂಡರೆ ಹಿಂದಿನದೆಲ್ಲಾ ನೆನಪಾಗುತ್ತದೆ.... ಎದೆಯುಬ್ಬಿ ಬರುತ್ತದೆ..... ಹುತಾತ್ಮರ ಬಲಿದಾನ ನೆನಪು ಬರುತ್ತದೆ..... ರಾಷ್ಟ್ರಧ್ವಜ ಎದೆಗೊತ್ತಿಕೊಳ್ಳುತ್ತೆನೆ ಅಷ್ಟೆ" ಅಂದವರೆ ಮತ್ತೇನೂ ಹೇಳದೇ ನಡೆದುಬಿಟ್ಟರು ಹಿರಿಯರು...... ನಾನು ಅವರ ಹಿಂದೆ ಹೋಗುವ ಪ್ರಯತ್ನ ಮಾಡಲಿಲ್ಲ ಯಾಕೆಂದರೆ ಅವರ ನಡಿಗೆಯಲ್ಲಿ ಧ್ರಡತೆಯಿತ್ತು....

        ಮನೆಗೆ ಬಂದವನೇ ಇದನ್ನೆಲ್ಲಾ ಭಾಷಣ ರೂಪದಲ್ಲಿ ಬರೆದು ಮಗಳಿಗೆ ಕೊಟ್ಟೆ...  ಎರಡೆರಡು ಸಾರಿ ಬಾಯಿಪಾಠ ಮಾಡಿದ ಮಗಳು ಮಧ್ಯದಲ್ಲೇ ಒಳಗೋಡಿ ಹೋದಳು.... ನನಗೆ ಅರ್ಥ ಅಗಲಿಲ್ಲ.... ವಾಪಸ್ ಬರುವಾಗ ಅವಳ ಕೈಯಲ್ಲಿ  ಬಣ್ಣ ಬಣ್ಣದ ಪೆನ್ಸಿಲ್  ಇತ್ತು..... ಅದನ್ನು ನನ್ನ ಕೈಯಲ್ಲಿ ಇಟ್ಟಳು.... " ಅಪ್ಪಾ, ನೀವು ಹೇಳಿದ ಅಜ್ಜನಿಗೆ ಈ ಬಣ್ಣ ಅಂದ್ರೆ ಇಷ್ಟ ಅಲ್ವಾ....? ನಾಳೆ ಇದನ್ನು ಅವರಿಗೆ ಕೊಡಿ ಆಯ್ತಾ...?" ಎಂದು ಮತ್ತೆ ಸಾವಧಾನ ಸ್ಥಿತಿಯಲ್ಲಿ ನಿಂತು ಭಾಷಣದ ಬಾಯಿಪಾಠ ಮುಂದುವರಿಸಿದಳು....

ನಾನು ಕೈ ನೋಡಿಕೊಂಡೆ.... ಕೈಯಲ್ಲಿ ಮೂರು ಬಣ್ಣದ ಪೆನ್ಸಿಲ್ ಇತ್ತು.....

ಕೇಸರಿ..... ಬಿಳಿ... ಹಸಿರು....... 

Apr 27, 2011

ಸಿಡಿಲು......!

ತುಂಬಾ ದಿನದಿಂದ ಕೆಟ್ಟುಹೋಗಿದ್ದ ಫೋನು ರಿಂಗಾಗುತ್ತಿತ್ತು..... ಬೇಗನೆ ಬಂದು " ಹಲೋ...." ಎಂದೆ....ಅತ್ತಲಿಂದ " ಅಮ್ಮಾ , ನಾನಮ್ಮಾ.... ರಾಜು " ಅಂದಿತು ಧ್ವನಿ..... ’ ನನ್ನ ಮಗ ರಾಜು... ಸುಮಾರು ದಿನದ ನಂತರ ಫೋನ್ ಮಾಡಿದ್ದ...... " ರಾಜು, ಎಲ್ಲಿದ್ದೀಯಾ...? ಹೇಗಿದ್ದೀಯಾ....? ಯಾಕೆ ಫೋನ್ ಮಾಡಲಿಲ್ಲ ಇಷ್ಟು ದಿನ...? ನೀನು ಆರಾಮಿದ್ದೀಯಾ ತಾನೆ.... ? ಯಾವಾಗ ಮನೆಗೆ ಬರೋದು...?" ನನ್ನ ಪ್ರಶ್ನೆ ಮುಗಿದಿರಲಿಲ್ಲ..... ರಾಜು ಮಧ್ಯದಲ್ಲೇ ಬಾಯಿ ಹಾಕಿದ....." ಅಮ್ಮ, ನಾನು ಚೆನ್ನಾಗಿದ್ದೇನೆ..... ಒಂದು ವಿಷಯ ಹೇಳುತ್ತೇನೆ.. ಗಮನ ಇಟ್ಟು ಕೇಳು.... ನೀನು ಯಾರನ್ನು ಜನ್ಮಪೂರ್ತಿ ದ್ವೇಷ ಮಾಡ್ತೀಯೋ, ನಾನು ಆತನಿಗೆ ಹುಟ್ಟಿದ್ದು ಅಂತ ನನ್ನನ್ನು ದೂರ ಇಟ್ಟಿದ್ದೆಯೋ, ಆತನ ವಿಳಾಸ ಪತ್ತೆ ಮಾಡಿದ್ದೇನೆ....." ನನ್ನ ಮೈ ನರಗಳೆಲ್ಲಾ ಬಿಗಿಯಾದವು.... ಕೆನ್ನೆಯ ಬಳಿ ಬೆವರೊಂದು ಜಾರಿದಂತಾಯಿತು...... " ಅಮ್ಮಾ, ನೀನು ಇಂದೇ ಹೊರಟು ಬಾ.... ನಿನಗಾಗಿಯೇ ಒಂದು ರಿವಾಲ್ವರ್ ಖರೀದಿ ಮಾಡಿದ್ದೇನೆ..... ಆತ ನಾಳೆ ಸಿಕ್ಕೇ ಸಿಗುತ್ತಾನೆ....ಅಲ್ಲೇ ಆತನನ್ನು ಸಾಯಿಸೋಣ.... ಇವತ್ತು ರಾತ್ರಿಯ ಬಸ್ ಗೆ ಬಾ.... ನಾನೇ ನಿನ್ನನ್ನು ಬಸ್ ಸ್ಟಾಂಡ್ ಗೆ ಬಂದು ಕರೆದುಕೊಂಡು ಹೋಗುತ್ತೇನೆ....ನನ್ನ ನಿನ್ನ ನೋವಿನ ದಿನಗಳು, ನಿನ್ನ ಅವಮಾನ, ಹತಾಶೆಗೊಂದು ಕೊನೆಗಾಣಿಸೋಣ.... ಬಾರಮ್ಮಾ..." ಎಂದ ಮಗ ನಡುಗುವ ದನಿಯಿಂದ..... ನನ್ನ ದನಿ ಸಿಟ್ಟಿನಿಂದ ಬುಸುಗುಡುತ್ತಿತ್ತು........... " ಆಯ್ತು" ಎಂದಷ್ಟೆ ಹೇಳಿ ಫೋನ್ ಕಟ್ ಮಾಡಿದೆ.... ಮನಸ್ಸು ಮೂವತ್ತು ವರ್ಷ ಹಿಂದಕ್ಕೆ ಓಡಿತು.........

         ಬಡತನದಲ್ಲಿ ಹುಟ್ಟಿದ ನನಗೆ ಯಾರ ಆಸರೆಯೂ ಇರಲಿಲ್ಲ.... ಹುಟ್ತುತ್ತಲೇ ಅಮ್ಮ ಸತ್ತಿದ್ದಳು... ಅಪ್ಪ ಬೇರೆ ಮದುವೆಯಾಗಿದ್ದ.... ಮಲತಾಯಿಯ ಕಾಟ ತಾಳದೆ ಬೇರೆ ವಿಧಿ ಇರಲಿಲ್ಲ.... ಆಟ ಊಟದಲ್ಲಿ ಮುಂದಿದ್ದೆನೆ ಹೊರತು ಓದು ತಲೆಗೆ ಹತ್ತಲೇಇಲ್ಲ..... ಹದಿನೆಂಟು ತುಂಬುವ ಮೊದಲೇ ಮದುವೆಗೆ ತಯಾರಿ ನಡೆದಿತ್ತು..... ಮದುವೆ ಎಂದರೆ ಏನು ಎಂದು ಅರ್ಥವಾಗುವ ಮೊದಲೇ ಮದುವೆ ಮುಗಿದಿತ್ತು.......ಪರಿಚಯದವರೊಬ್ಬರ ಮೂಲಕ ಮದುವೆ ನಡೆದಿತ್ತು... ಮದುವೆಯಾದ  ಮನುಷ್ಯನಿಗೆ ನನಗಿಂತ ಎರಡು ಪಟ್ಟು ವಯಸ್ಸಾಗಿತ್ತು.... ಮದುವೆಯಾದ ದಿನವೇ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೊರಟಿದ್ದ....
ಮಲತಾಯಿಯ ಮುಷ್ಟಿಯಿಂದ ತಪ್ಪಿಸಿಕೊಂಡರೆ ಸಾಕೆಂದು ನಾನೂ ಖುಶಿಯಿಂದಲೇ ಹೊರಟಿದ್ದೆ...... ಪ್ರಯಾಣದ ಮಧ್ಯೆ ರಾತ್ರಿಯಾಯಿತೆಂದು ಒಂದು ಹೊಟೆಲ್ ನಲ್ಲಿ ಉಳಿದುಕೊಂಡೆವು.... ಕಟ್ಟಿಸಿಕೊಂಡು ತಂದಿದ್ದ ಊಟ ಮುಗಿಸಿದವಳಿಗೆ ನಿದ್ರೆ ಬರುತ್ತಿತ್ತು..... ಎಲ್ಲಿಂದಲೋ ತಂದ ಮಲ್ಲಿಗೆಯನ್ನು ಮುಡಿಯಲು ಕೊಟ್ಟ...
ಮೊದಲ ಬಾರಿಗೆ ಮಲ್ಲಿಗೆ ಮುಡಿದಿದ್ದೆ.....  ಮಲ್ಲಿಗೆಯ ಸುಮಧುರ ಪರಿಮಳಕ್ಕೆ ಮನಸ್ಸು ಅರಳಿತ್ತು..... ಮದುವೆ ಎನ್ನೋದನ್ನ ಆದ ಮನುಷ್ಯ ’ ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ’ ಎಂದು ಹೊರಗೆ ಹೋದ.... ಹೋಗುವಾಗ ಕೊಠಡಿಯಲ್ಲಿದ್ದ ಬೆಳಕನ್ನು ಆರಿಸಿ, ಹೊರಗಿನಿಂದ ಚಿಲಕ ಹಾಕಿಯೇ ಹೋದ..... ನನಗೂ ಸುಸ್ತಾಗಿತ್ತು... ಜೊಂಪು ಹತ್ತಿತು....


      
  ಮಧ್ಯರಾತ್ರಿಯಾಗಿರಬಹುದು..... ಮೈ ಮೇಲೆ ಏನೋ ಹರಿದಂತಾಗಿ ಎಚ್ಚರವಾಯಿತು.... ಪಕ್ಕದಲ್ಲಿ ಯಾರೋ ಮಲಗಿದ್ದರು... "ಯಾರದು " ಎಂದೆ ಗಾಬರಿಯಿಂದ... ಆತ ಮಾತನಾಡಲಿಲ್ಲ..... ನನ್ನನ್ನು ಮದುವೆಯಾದವನೇ ಇರಬೇಕು ಎಂದುಕೊಂಡೆ..... ನಾನು ಮಗ್ಗಲು ಬದಲಿಸಿ ಮಲಗಿದೆ.... ಸ್ವಲ್ಪ ಹೊತ್ತಿನಲ್ಲೇ ಆತ ನನ್ನ ಮೈ ಮೇಲೆ ಕೈ ಹಾಕಿದ..... ನಾನು ಎದ್ದು ಕುಳಿತೆ.... ಯಾವ ಗಂಡಸಿನ ಕೈ ಸೋಕಿರದೇ ಇದ್ದ ನನ್ನ ಮೈ, ಇಂದು ಈತನ ಸ್ಪರ್ಶಕ್ಕೆ   ತುಂಬಾ ಹೆದರಿತ್ತು.... ಹಾಸಿಗೆಯಿಂದ ಕೆಳಗಿಳಿಯಲು ಹೋದೆ..... ಆತ ಎದ್ದವನೇ ನನ್ನನ್ನು ಬಿಗಿಯಾಗಿ ಹಿಡಿದ....ಬಲಿಷ್ಟವಾದ ಮೈ ಕಟ್ಟು ಆತನದು..... ನನಗೆ ಅನುಮಾನ ಆಯಿತು..... ನರಪೇತಲನಾಗಿದ್ದ ನನ್ನ ಮದುವೆಯಾದವನೆಲ್ಲಿ...? ಬಲಿಷ್ಟನಾದ ಈತನೆಲ್ಲಿ...? ಬಿಡಿಕೊಳ್ಳಲು ಪ್ರಯತ್ನ ಪಟ್ಟೆ.... ಕೂಗಿಕೊಂಡೆ..." ಯಾರು ನೀನು.... ಬಿಟ್ಟು ಬಿಡು ನನ್ನ... ನನ್ನ ಗಂಡನನ್ನು ಕರೆಯುತ್ತೇನೆ...." ಎಂದೆ.... ಆತ ದೊಡ್ದದಾಗಿ ನಗೆಯಾಡುತ್ತಾ " ಎಲ್ಲಿ ನಿನ್ನ ಗಂಡ.... ನಿನ್ನನ್ನು ಐದು ಸಾವಿರಕ್ಕೆ ನನಗೆ ಮಾರಿ ಹೋಗಿದ್ದಾನೆ ಆತ... ಮತ್ತೆಲ್ಲಿ ಬರುತ್ತಾನೆ ಅವ.....ಮೂಗಿನ ಮಟ್ಟ ಕುಡಿದು ಮಲಗಿರುತ್ತಾನೆ.." ಎಂದ..... ನನಗೆ ಸಿಡಿಲು ಬಡಿದ ಹಾಗಾಯಿತು.... ಮದುವೆ ಎಂದರೇನು ಎಂದು ತಿಳಿಯದ ವಯಸ್ಸಿಗೆ ಮದುವೆಯಾಗಿ, ಗಂಡನೆಂಬ ಮನುಷ್ಯನ ಸ್ಪರ್ಶ ಅನುಭವಿಸದೇ , ಪರಿಚಯವೇ ಇರದ ಮುಖವಿಲ್ಲದ ಗಂಡಸಿಗೆ ಆಹಾರವಾಗುತ್ತಿದ್ದೆ.... ತಪ್ಪಿಸಿಕೊಳ್ಳುವ ನನ್ನ ಪ್ರಯತ್ನ ಪ್ರತಿ ನಿಮಿಷದಲ್ಲೂ ವಿಫಲವಾಗುತ್ತಿತ್ತು..... ನನ್ನನ್ನು ಬಳಸಿಕೊಳ್ಳುತ್ತಿದ್ದ ಮನುಷ್ಯನ ಮುಖವನ್ನು ಕೊಠಡಿಯಲ್ಲಿನ ಕತ್ತಲು ಮರೆ ಮಾಚಿತ್ತು.... ಚಿಕ್ಕ ಹುಡುಗಿಯೆಂಬ ಸಣ್ಣ ಕನಿಕರವೂ ಇಲ್ಲದೇ, ನನ್ನ ಬಾಯಿಯನ್ನು ತನ್ನ ಕೈಯಿಂದ ಬಿಗಿಯಾಗಿ ಹಿಡಿದು , ನನ್ನನ್ನು ತನ್ನಿಷ್ಟ ಬಂದ ಹಾಗೆ ಹುರಿದು ತಿಂದ ಮನುಷ್ಯನ ಮೇಲೆ ಕೊಂದು ಹಾಕುವ ಸಿಟ್ಟು ಬರುತ್ತಿತ್ತು..... ಆತನ ಬಲಿಷ್ಟ ದೇಹದ ಎದುರು ನನ್ನದು ಗುಬ್ಬಿ ಪಾಡಾಗಿತ್ತು.... ಬಂದ ಕೆಲಸ ಮುಗಿಸಿ ಆತ ಹೊರಡಲು ಎದ್ದು ನಿಂತ.... ಹೊರಗಡೆ ಜೋರಾಗಿ ಸಿಡಿಲು ಹೊಡೆಯಿತು.... ಸಿಡಿಲಿನ ಬೆಳಕಿಗೆ ಆತನ ಮುಖ ಕಂಡಿತು...... ಅದೇ ಮುಖ ನನ್ನಲ್ಲಿ ಅಚ್ಚಳಿಯದೇ ಉಳಿಯಿತು....... ಬಿಟ್ಟುಬಿಡೆಂದು ಕೈಮುಗಿದರೂ, ಕೂಗಿದರೂ ಬಿಡದೆ, ಕೊಟ್ಟ ಜುಜುಬಿ ಹಣಕ್ಕಾಗಿ ನನ್ನ ಮೈ ಮನಸ್ಸಿನ ಮೇಲೆ ಗಾಯ ಮಾಡಿದ ಆತನ ಮುಖ ನನ್ನ ಕಣ್ಣಲ್ಲೇ ನಿಂತಿತ್ತು..... ಅಷ್ಟರಲ್ಲೇ ನನ್ನ ಪ್ರಜ್ನೆ ತಪ್ಪಿತ್ತು............

        ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದು ಅಪ್ಪನ ಮನೆಗೆ ಬಂದೆ..... ನನ್ನ ಪರಿಸ್ಥಿತಿ ಮಲತಾಯಿಗೂ ಕನಿಕರ ತಂದಿತ್ತು.... ಆಕೆ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು..... ನಿದ್ರೆಯಲ್ಲೂ ಆತನ ಮುಖ ನೆನಪಿಗೆ ಬಂದು ಎದ್ದು ಬಿಡುತ್ತಿದ್ದೆ.... ಆತ ನೆನಪಿಗೆ ಬಂದಷ್ಟೂ ನನ್ನ ಸಿಟ್ಟು ಹೆಚ್ಚಾಗುತ್ತಿತ್ತು..... ಆತನ ಕರ್ಮದ ಫಲ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಗೊತ್ತಾಗಿ, ಬೇಡವಾದ ಗರ್ಭವನ್ನು ಸಾಯಿಸಲು ಎನೆಲ್ಲಾ ತಿಂದೆ.... ಗಟ್ಟಿ ಪಿಂಡ ಬದುಕಿಬಿಟ್ಟ... ಹೆರಿಗೆಯಾದ ದಿನ ಮಗುವನ್ನು ನನ್ನ ಬಳಿ ತಂದು " ಗಂಡು" ಎಂದರು ಅಪ್ಪ.... ನಾನು ತಲೆಯೆತ್ತಿ ನೋಡಿದೆ.... ಮತ್ತೆದೇ ಸಿಡಿಲು ಬಡಿದ ಅನುಭವ..... ಅದೇ ಮೂಗು, ಅದೇ ಬಾಯಿ, ಅದೇ ಕಣ್ಣು..... ಯಾವ ಮನುಷ್ಯ ನನ್ನ ಮೈ, ಮನಸ್ಸನ್ನು ಅರೆಗಳಿಗೆಯ ಸುಖಕ್ಕೆ ದುಡ್ಡು ಕೊಟ್ಟು ಖರೀದಿಸಿ ತನ್ನ ತೀಟೆ ತೀರಿಸಿಕೊಂಡು ಹೋಗಿದ್ದನೋ ಆತನದೇ ಎಲ್ಲಾ ಪಡಿಯಚ್ಚು.....  ಆತನನ್ನೇ ಹೋಲುವ ಮಗನನ್ನೂ ನಾನು ದ್ವೇಷಿಸಲು ಶುರು ಮಾಡಿದರೂ ಆತ ನನ್ನದೇ ರಕ್ತ ಹಂಚಿಕೊಂಡು ಹುಟ್ಟಿದ್ದಾನೆ ಎನಿಸುತ್ತಿತ್ತು....... ನಾನು ಆತನನ್ನು ಎಷ್ಟೇ ಪ್ರೀತಿಯಿಂದ ನೋಡಿಕೊಂಡರೂ ಆತನ ಹುಟ್ಟಿಗೆ ಕಾರಣನಾದವ ನೆನಪಿಗೆ ಬಂದರೆ ನಾನು ಕಾಳಿಯಾಗುತ್ತಿದ್ದೆ.......... ಅದಕ್ಕೇ ಅಪ್ಪ, ನನ್ನ ಮಗನನ್ನು   ವಸತಿ ಸೌಲಭ್ಯ ಇರುವ ಶಾಲೆಗೆ ಕಳಿಸಿಕೊಟ್ಟಿದ್ದರು....


                          
         ಎಷ್ಟಾದರೂ ನನ್ನ ಹೊಟ್ಟೆಯಲ್ಲಿ ಬೆಳೆದವ, ನನ್ನ ರಕ್ತ ಹಂಚಿಕೊಂಡವ.... ಮಗ ದೂರ ಇದ್ದಾಗ ಅವನನ್ನು ನೋಡಲು ಕಾತರಿಸಿದ್ದೆ.... ರಜೆಗೆಂದು ಮನೆಗೆ ಬರುವನೆಂದು ಕೇಳಿದಾಗ ಯಾವಾಗ ನೋಡುವೆನೆಂದು ಕಾದೆ.... ಹತ್ತನೆಯ ತರಗತಿ ಮುಗಿಸಿ ಬರುವವನಿದ್ದ..... ಸಂಜೆಯಾಗಿತ್ತು...... ನನ್ನ ಅಪ್ಪನ ಜೊತೆ ನಡೆದು ಬರುತ್ತಿದ್ದ..... ನಾನೂ ಖುಷಿಯಿಂದಲೇ ಅವನತ್ತ ಹೋದೆ..... ಅವನಿಗೂ ಇದು ಆಶ್ಚರ್ಯ ತಂದಿರಬೇಕು.... ಸಂತೋಷದಿಂದ ನಕ್ಕ..... ಅದೇ ಸಿಡಿಲು ಹೊಡೆದ ಅನುಭವ..... ತನ್ನ ಕ್ಷಣಿಕ ಸುಖ ಉಂಡು , ನನ್ನನ್ನು ಹುರಿದು ಮುಕ್ಕಿ ನಕ್ಕ ಆತನ ಮುಖ ನೆನಪಿಗೆ ಬಂತು......ಮಗನನ್ನು ದೂರತಳ್ಳಿಬಿಟ್ಟೆ...... ಅತ ಬಿದ್ದುಬಿಟ್ಟ..... ಅಪ್ಪನಿಗೆ ಎಲ್ಲಿತ್ತೋ ಸಿಟ್ಟು..... ಚಟಾರೆಂದು ಬಿಟ್ಟರು ನನ್ನ ಕೆನ್ನೆಗೆ..... ನಾನು ಅತ್ತುಬಿಟ್ಟೆ..... ನನಗೆ ಮಗ ಬೇಕಾಗಿದ್ದ.... ಆದರೆ ಮಗನ ಮುಖ ಆತನನ್ನು ನೆನಪಿಸುತ್ತಿತ್ತು..... ಇದರಲ್ಲಿ ನನ್ನ ಮಗನ ತಪ್ಪೇನೂ ಇರಲಿಲ್ಲ..... ಅಪ್ಪ " ನೀನೊಂದು ಹೆಣ್ಣಾ..? ಹೆತ್ತ ಮಗನನ್ನು ಕಂಡರೆ ಈ ರೀತಿ ಮಾಡುತ್ತಾರಾ...? ಜೀವನ ಪೂರ್ತಿ ಹೀಗೆ ಅವನನ್ನು ನಡೆಸಿಕೊಂಡರೆ ಅವನ ಗತಿ ಏನಾಗಬೇಡ...? ಅವನ ತಪ್ಪೇನಿದೆ ಇದರಲ್ಲಿ...? ಅದೆಲ್ಲಾ ಬಿಡು..... ಯಾರೋ ಮಾಡಿದ ತಪ್ಪಿಗೆ ನಿನ್ನ ಮಗ ಏನು ಮಾಡಬೇಕು...?" ಅಪ್ಪ ಕೂಗಾಡುತ್ತಿದ್ದರು..... ನನಗೆ ಅದೆಲ್ಲಿತ್ತೋ ಕೋಪ..." ಈತನ ಹುಟ್ಟಿಗೆ ಕಾರಣನಾದ ಆ ಪಿಶಾಚಿಯನ್ನು ಕೊಂದ ದಿನದಿಂದ ನಾನು ಇವನನ್ನು ಪ್ರೀತಿಸುತ್ತೇನೆ.... ಆತನನ್ನು ಸಾಯಿಸಿಯೇ ನಾನು ಇವನನ್ನು ಮುಟ್ಟುತ್ತೇನೆ..." ಎಂದೆ.... ಇದನ್ನು ಕೇಳಿದ ಮಗ  ತನ್ನ ಸೂಟ್ ಕೇಸ್ ಹಿಡಿದು ಹೊರಗೆ ಹೋದವನು ಇವತ್ತೇ ಫೋನ್ ಮಾಡಿದ್ದ.... ಮಗ ದೂರದಲ್ಲಿಷ್ಟೂ ನಾನು ಅವನನ್ನು ಪ್ರೀತಿಸುತ್ತಿದ್ದೆ.... ಆತ ನನ್ನ ಮಗನೇ, ಅವನನ್ನು ಮುದ್ದಿಸಬೇಕು, ಆಟ ಆಡಬೇಕು ಎಂಬ ಆಶೆ ಹೆಚ್ಚಾಗುತ್ತಿತ್ತು.... ಆದರೂ ಆ ಪಿಶಾಚಿಯನ್ನು ಕೊಲ್ಲದೇ ನನ್ನ ಮನಸ್ಸು  ಮಗನನ್ನು ಒಪ್ಪಲು ತಯಾರಿರಲಿಲ್ಲ...ಈಗ ಆ ಸದವಕಾಶ ಒದಗಿ ಬಂದಿದೆ.... ವರ್ಷಗಳಿಂದ ಕಾಯುತ್ತಿದ್ದ ಘಳಿಗೆ ಕೂಡಿ ಬಂದಿತ್ತು... ಮಗನಲ್ಲಿದ್ದಲ್ಲಿಗೆ ಹೊರಡಲು ತಯಾರಾಗಿ ಬಸ್ ಹತ್ತಿದೆ... ಮನಸ್ಸು ಸ್ವಲ್ಪ ಶಾಂತವಾಗಿದ್ದರಿಂದ ನಿದ್ದೆ ಬೇಗ ಬಂದಿತ್ತು.....
        
          ಕಣ್ಣು ಬಿಟ್ಟಾಗ ಮಗ ನನ್ನ ಎದುರು ನಿಂತಿದ್ದ..... ನಾನು ಅವನನ್ನು ಕಂಡು ತುಂಬಾ ದಿನಗಳಾಗಿತ್ತು..... ನನ್ನದೇ ರಕ್ತವಾದ್ದರಿಂದ ಎಷ್ಟು ದಿನ ಅಂತ ದೂರವಿಡಲಿ....? ಈಗೀಗಲಂತೂ ಮಗನ ಮುಖವೇ ನೆನಪಿಗೆ ಬರುತ್ತಿತ್ತು.... ಆ ಪಿಶಾಚಿಯ ಮುಖ ಸ್ವಲ್ಪ ಮರೆತೇ ಹೋಗಿತ್ತು..... ಮಗನನ್ನು ದೂರದಿಂದಲೇ ಪ್ರೀತಿಸಲು ಶುರು ಮಾಡಿದ್ದೆ.... ನನ್ನ ಸೂಟ್ ಕೇಸ್ ಹಿಡಿದು ಮಗ ಮುಂದೆ ನಡೆದ....." ಇಲ್ಲಿಂದ ಸ್ವಲ್ಪವೇ ದೂರ ಅಮ್ಮ.... ಸೀದಾ ಅಲ್ಲಿಗೇ ಹೋಗೋಣ.." ಎಂದ... " ಸ್ಸರಿ.." ಎಂದು ನಾನು ಅವನನ್ನು ಅನುಸರಿಸಿದೆ.... ಸ್ವಲ್ಪ ದೂರ ಹೋದ ನಂತರ ಒಂದು ಪಾಳುಮನೆಯ ಮುಂದೆ ನಿಂತೆವು.... ತನ್ನ ಚೀಲದಿಂದ ಒಂದು ಪಿಸ್ತೂಲ್ ತೆಗೆದು ನನ್ನ ಕೈಗಿತ್ತ... ನನ್ನ ಕೈ ನಡುಗುತ್ತಿತ್ತು...

         ವರ್ಷಗಟ್ಟಲೆ ಮೌನವಾಗಿ ಅನುಭವಿಸಿದ್ದ ಸಿಟ್ಟು, ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಮಯ ಬಂದಿತ್ತು.... ಸಿಡಿಲಿನ ಬೆಳಕಿಗೆ ನೋಡಿದ ಮುಖವನ್ನು ನನ್ನ ಬದುಕಿನಿಂದಲೇ ಅಳಿಸಿ ಹಾಕುವ ಕಾಲ ಬಂದಿತ್ತು... ಈ ಅವಕಾಶ ಕಲ್ಪಿಸಿದ ಮಗ ನನ್ನೆಡೆಗೆ ನೋಡುತ್ತಿದ್ದ.... ಕಣ್ಣಲ್ಲಿ ನೀರಿತ್ತು.... " ಅಮ್ಮಾ, ಅವನನ್ನು ನಾನೇ ಕೊಲ್ಲುವವನಿದ್ದೆ.... ನಾನೇ ಕೊಂದರೆ ನಿನ್ನ ಕೋಪ, ತಾಪ ಕಡಿಮೆಯಾಗುವುದಿಲ್ಲ... ಅದಕ್ಕೆ ನಿನ್ನನ್ನೇ ಕರೆದೆ.... ಒಂದೇ ಒಂದು ಗುಂಡು ಹಾರಿಸಿ ನೀನು ಇಲ್ಲಿಂದ ಹೊರಟುಬಿಡಬೇಕು.... ಮುಂದಿನದೆಲ್ಲಾ ನಾನೇ ನೋಡಿಕೊಳ್ಳುತ್ತೇನೆ.." ಎಂದ... ನನ್ನ ಕಿವಿಗೆ ಎನೂ ಕೇಳಿಸುತ್ತಿರಲಿಲ್ಲ... ನನ್ನ ಕಣ್ಣು ಆ ಪಿಶಾಚಿಯನ್ನು ಹುಡುಕುತ್ತಿತ್ತು.....

ಆಗಲೇ ಆತ ಹೊರಕ್ಕೆ ಬಂದ... ರಾಜು ನನ್ನನ್ನು ಮರದ ಹಿಂದಕ್ಕೆ ಎಳೆದುಕೊಂಡ.... ಮರೆಯಿಂದಲೇ ನಾನು ಗುರಿಯಿಟ್ಟಿದ್ದೆ.... ಗುರಿ ಸರಿಯಾಗಿ ಎದೆಗೆ ಇಟ್ಟಿದ್ದೆ.... ಕೈ ನಡುಗುತ್ತಿತ್ತು.... ಕ್ರಮೇಣ ನನ್ನ ಗುರಿ ಹಣೆಯ ಕಡೆ ಹೋಯಿತು....
ವಿಶಾಲವಾದ ಹಣೆ....
ಕೂದಲನ್ನು ಎಡಗಡೆ ಬಾಚಿದ್ದ...
ಕಣ್ಣು ಬೆಕ್ಕಿನ ಕಣ್ಣ ಹಾಗಿತ್ತು....
ಉದ್ದವಾದ ಮೂಗು...
ಅಗಲವಾದ ಕಿವಿ...

ಈ ಪಿಶಾಚಿಯನ್ನ ಸಾಯಿಸಿ ನನ್ನ ಪ್ರತಿಕಾರ, ನೋವು, ಅವಮಾನ ಎಲ್ಲದಕ್ಕೂ ಅಂತ್ಯ ಹಾಡಬೇಕು......
 ಪಿಸ್ತೂಲ್ ಒತ್ತಲು ತಯಾರಾದೆ...
ಒಮ್ಮೆ ಕಣ್ಣು ಮುಚ್ಚಿದೆ...... ಆತನ ಮುಖವನ್ನು ನೆನಪಿಸಿಕೊಂಡೆ.....
ಬೆಚ್ಚಿಬಿದ್ದೆ.....
ಕಣ್ಣು ತೆರೆದೆ.... ಆತನ ಮುಖ ನನಗೆ ನನ್ನ ಮಗನ ಹಾಗೆ ಕಾಣಿಸ್ತಾ ಇತ್ತು....
ಅಗಲವಾದ ಹಣೆ,.....
ಕೂದಲು ಬಾಚುವ ರೀತಿ..
ಕಣ್ಣ ಬಣ್ಣ....
ಮೂಗು...
ಕಿವಿ....
ಎಲ್ಲಾ ನನ್ನ ಮಗನ ಹಾಗೆಯೆ.....ಆತನ ಮುಖ ನನಗೆ ನನ್ನ ಮಗನ ಹಾಗೆ ಕಾಣಿಸ್ತಾ ಇತ್ತು....

ಪಿಸ್ತೂಲ್ ಬಿಸಾಡಿ ಓಡಿಬಿಟ್ಟೆ....
ಮಗ ನನ್ನ ಹಿಂದೇನೇ ಓಡಿ ಬಂದ.... " ಅಮ್ಮಾ ಏನಾಯ್ತಮ್ಮ.... ನೀನು ಈಗ ಅವನನ್ನು ಸಾಯಿಸದೇ ಇದ್ದರೆ, ನಿನ್ನ ಅಂತರಾತ್ಮ ಶಾಂತವಾಗಲ್ಲಮ್ಮಾ.... ನೀನು ಶಾಂತಿಯಿಂದ ಬದುಕಲು ಆಗಲ್ಲಮ್ಮಾ... ..ನೀನಿಲ್ಲೇ ಇರು... ಅವನನ್ನು ನಾನೇ ಕೊಲ್ಲುತ್ತೇನೆ.." ಎಂದು ಹೊರಟ...

ನಾನು ಬಿಕ್ಕಳಿಸುತ್ತಿದ್ದೆ.... ಮಗ ಬಂದು ನನ್ನ ಕೈ ಹಿಡಿದ...

" ನಿನ್ನ ಮುಖ ಯಾರನ್ನೋ ಹೋಲುತ್ತದೆ ಎಂದು ನಿನ್ನನ್ನು ದೂರವಿಟ್ಟೆ....
ಈಗ ನಿನ್ನದೇ ಮುಖ ಅವನನ್ನು ಹೋಲುತ್ತದೆ ಎಂದು , ಆತನನ್ನು ಬಿಟ್ಟುಬಿಟ್ಟೆ ಕಣೋ.... ಆ ಪಿಶಾಚಿ ತಾನು ಮಾಡಿದ ಕರ್ಮಕ್ಕೆ ಅನುಭವಿಸಿಯೇ ಇರುತ್ತಾನೆ.... ಹಾಳಾಗಿ ಹೋಗಲಿ ಅವನು.... ಅವನ ಮೇಲಿನ ದ್ವೇಷಕ್ಕೆ ನಿನ್ನನ್ನು ಕಳೆದುಕೊಳ್ಳಲಾರೆ ನಾನು.."ಎಂದೆ... ಮಗನ ಕಣ್ಣಲ್ಲೂ ನೀರು ಸುರಿಯುತ್ತಿತ್ತು....

ದೂರದಲ್ಲೆಲ್ಲೋ ಸಿಡಿಲು ಬಿದ್ದ ಶಬ್ಧ....

Apr 16, 2011

ಪ್ರೀತಿಯಿಂದ....... ಪ್ರೀತಿಯಿಂದ......

ಅಂದು ಅಗಷ್ಟ್ ೨೨ ೨೦೧೦......
 
ಎಲ್ಲೆಲ್ಲೋ ಕಂಪ್ಯೂಟರ್ ಮುಂದೆ ಕುಳಿತು ಕಥೆ, ಕವನ, ನಮಗನಿಸಿದ್ದನ್ನ ಕುಟ್ಟುತ್ತಾ ಕುಳಿತಿದ್ದ ನಾವೆಲ್ಲಾ ಮೊದಲ ಬಾರಿಗೆ ಸೇರಿದ ದಿನ.....

 ತಮ್ಮ ತಮ್ಮ ಸಮಸ್ಯೆ ಜಂಜಾಟದಲ್ಲೂ ಮತ್ತೊಬ್ಬರ ಮುಖ ನೋಡದೇ ಇದ್ದರೂ, ಅವರ ಖುಶಿಗೆ ನಕ್ಕು... ನೋವಿಗೆ ಮದ್ದಾಗಿದ್ದೆವು.... 


ಎಲ್ಲರೂ ಒಮ್ಮೆ ಸೇರೋಣ ಎಂದು ಮಾತಾಡುತ್ತಿರುವಾಗಲೇ ಅವಕಾಶ ಹುಡುಕಿಕೊಂಡು ಬಂದಿತ್ತು.....


 ಅದು............


 ಆಜಾದ್ ಸರ್ ಬರೆದ " ಜಲನಯನ " ಶಿವು ಸರ್ ಬರೆದ " ಗುಬ್ಬಿ ಎಂಜಲು'' ಪುಸ್ತಕ ಬಿಡುಗಡೆ ಕಾರ್ಯಕ್ರಮ....

 
ತುಂಬಾ ದೂರದಿಂದ ಬಂದವರೂ ನಗು ನಗುತ್ತಲೇ ಬಂದಿದ್ದೆವು.....
ಮೊದಲ ಸಾರಿ ಭೇಟಿ ಆದರೂ ಜನ್ಮಾಂತರದ ಸಂಭಂದವೇನೋ ಎಂಬಂತೆ ಖುಷಿಪಟ್ಟೆವು..... 


ಕಾಲೆಳೆದವರೂ.... ಕಾಲೆಳೆಸಿಕೊಂಡವರೂ ಎಲ್ಲರೂ ಮುಜುಗರ ಪಡದೇ ತಮ್ಮ ತಮ್ಮ ಸ್ಥಾನಮಾನ ಮರೆತು ಬೆರೆತೆವು.... 


ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾ, ಹೇಳಿಕೊಳ್ಳುತ್ತಾ ಇದ್ದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದೆ...... 


ಎಲ್ಲರೂ ನಮ್ಮದೇ ಮನೆಯ ಕಾರ್ಯಕ್ರಮ ಎಂಬಂತೆ ಸೇರಿ ನಡೆಸಿ ಕೊಟ್ಟೆವು.......
ತಮಾಶೆಯ ಬಹುಮಾನಕ್ಕೂ ಬೇಸರಿಸದೇ ಎಲ್ಲರೂ ಸೇರಿ ಖುಶಿಪಟ್ಟಿದ್ದೆವು......

ಈಗ ಅಂಥಹುದೇ ಒಂದು ಅವಕಾಶ ಬಂದಿದೆ....


ಇದೇ ತಿಂಗಳ ೨೪ ಕ್ಕೆ.....


''ಬ್ಲಾಗ್ ಲೋಕದ ನಗುವಿನ ಮನೆಯ ಗುತ್ತಿಗೆಗಾರ '' ಪ್ರಕಾಶ್ ಹೆಗಡೆ ಅವರ ಎರಡನೇ ಪುಸ್ತಕ " ಇದೇ ಇದರ ಹೆಸರು " ಬಿಡುಗಡೆಯಾಗುತ್ತಿದೆ.....


ಅವರ ಮೊದಲನೆಯ ಪುಸ್ತಕ ಬಿಡುಗಡೆಯ ಸಮಯದಲ್ಲಿ ನಾನು ಬ್ಲಾಗ್ ಬರೆಯಲು ಶುರು ಮಾಡಿರಲಿಲ್ಲ.... 


ಈಗ ಎರಡನೇ ಪುಸ್ತಕ ಬಿಡುಗಡೆ ಮಾಡುತ್ತಾ ಇದ್ದಾರೆ.... ಮಿಸ್ ಮಾಡೋ ಚಾನ್ಸೇ ಇಲ್ಲ....


ಪ್ರಕಾಶಣ್ಣನ ಮುನ್ನೂರು ವ್ಯಾಟ್ ನಗುವನ್ನು, ನಮ್ಮ ಉಪಸ್ಥಿತಿಯಿಂದ  ನಾಲ್ಕು ನೂರು ವ್ಯಾಟ್ ಮಾಡೋಣ....
ನೀವೂ ಬನ್ನಿ.... ಇನ್ನೊಮ್ಮೆ ಸೇರಿ ನಗುವಿನಲ್ಲಿ ಮುಳುಗೋಣ.....

                    ಬ್ಲಾಗ್ ಬಂಧವನ್ನು ಗಟ್ಟಿ ಮಾಡೊಣ...   

                "ಎಲ್ಲ ಬ್ಲಾಗಿಗರು ಸೇರಿ  ಸಂಭ್ರಮಿಸೋಣ ''


Mar 21, 2011

"ಮನೆ ಊಟ ದೊರೆಯುತ್ತದೆ.."

"ದೋಸ್ತಾ.... ಹೋಟೆಲ್ ಊಟ ಮಾಡಿ ಮಾಡಿ ಸಾಕಾಗಿದೆ... ಎಲ್ಲಾದರೂ ಮೆಸ್ ಊಟ ಅಥವಾ ಮನೆ ಊಟ ಕರ್ಕೋಂಡು ಹೋಗೊ" ಎಂದೆ ನನ್ನ ಗೆಳೆಯನಿಗೆ...... ಉದ್ಯೋಗ ನಿಮಿತ್ತ ಬೇರೆ ಊರಿಗೆ ಬಂದು ತುಂಬಾ ದಿನಗಳಾಗಿತ್ತು..... ಹೋಟೆಲ್ ಊಟ ಮಾಡಿ ನಾಲಿಗೆ ಕೆಟ್ಟು ಹೋಗಿತ್ತು..... ನನ್ನ ಗೆಳೆಯನೂ ಸಹ ಅದೇ ಊರಲ್ಲಿ ಕೆಲಸ ಮಾಡುತ್ತಿದ್ದನಾದ್ದರಿಂದ ಆತನನ್ನು ಭೇಟಿ ಮಾಡಲು ಬಂದಿದ್ದೆ..... " ಓಹೋ, ನಿನಗೆ ಮನೆ ಊಟ ಬೇಕೋ...." ಎಂದ... "ಹೌದೋ, ಮನೆ ಊಟ ಹಾಕಿಸಿದರೆ ದೊಡ್ಡ ಉಪಕಾರ ಆಗುತ್ತದೆ ಮಾರಾಯ....." ಎಂದೆ..... "ಹಾಗಾದರೆ, ನಿನಗೆ ನಿಜವಾದ ಮನೆ ಊಟದ ಪರಿಚಯ ಮಾಡಿಸುತ್ತೇನೆ... ಬಾ.." ಎಂದವನೇ ಬೈಕಿನಲ್ಲಿ ಕರೆದುಕೊಂಡು ಹೋದ......

ಸುಮಾರು ದೂರ ಬಂದ ನಂತರ ಒಂದು ಸಣ್ಣ ಮನೆಯ ಮುಂದೆ ನಿಲ್ಲಿಸಿದ... ಮನೆಯ ಮುಂದೆ ಒಂದು ಸಣ್ಣ ಬೋರ್ಡ್ ಇತ್ತು, ಅದರಲ್ಲಿ ’ಮನೆ ಊಟ ದೊರೆಯುತ್ತದೆ ’ ಎಂದು ಬರೆದಿತ್ತು..... ನನಗಂತೂ ಅದನ್ನು ಓದಿಯೇ, ಹಸಿವೆ ಹೆಚ್ಚಾಯಿತು...... ಗೆಳೆಯನ ಕೈ ಹಿಡಿದು ಒಳಗೆ ಹೋದೆ..... ಒಂದು ಟೇಬಲ್ ನಾಲ್ಕು ಕುರ್ಚಿ ಇತ್ತು.... ನಾಲ್ಕೂ ಕುರ್ಚಿ ಖಾಲಿ ಇತ್ತು..... ಬೇಗ ಬೇಗನೆ ಕೈ ತೊಳೆದು ಕುಳಿತುಕೊಂಡೆ..... ನನ್ನ ಗೆಳೆಯ ಪಕ್ಕ ಕುಳಿತುಕೊಂಡ... ಒಬ್ಬರು ಹಿರಿಯ  ವಯಸ್ಸಿನ ಗಂಡಸು ಬಂದು ಊಟದ ಪ್ಲೇಟ್ ಕೊಟ್ಟು ನಮ್ಮ ಪಕ್ಕವೇ ಕುಳಿತರು...... " ಊಟಕ್ಕೆ ಬರೋದು ಯಾಕೆ ಲೇಟ್ ಆಯ್ತು...? ಎಂದರು ಆ ಹಿರಿಯರು.... ನನ್ನ ಗೆಳೆಯ " ಸ್ವಲ್ಪ ಕೆಲಸವಿತ್ತು, ಅದಕ್ಕೇ ಲೇಟ್ ಆಯ್ತು ’ ಎಂದ...ನಾನು ಸುಮ್ಮನೇ ಕುಳಿತೆ.... ಒಳಗಿನಿಂದ ಒಳ್ಳೆಯ ದಾಲ್ ಪರಿಮಳ ಬರುತ್ತಾ ಇತ್ತು..... ಒಂದು ಕೈಯಲ್ಲಿ ದಾಲ್ ಪ್ಲೇಟ್, ಇನ್ನೊಂದು ಕೈಯಲ್ಲಿ ಅನ್ನದ ಪ್ಲೇಟ್ ಹಿಡಿದು ಹಿರಿಯ ವಯಸ್ಸಿನ ಹೆಂಗಸೊಬ್ಬರು ಬಂದರು..... ಸಿಟ್ಟಿನಿಂದಲೇ ಪಾತ್ರೆಯನ್ನು ಟೇಬಲ್  ಮೇಲೆ ಕುಕ್ಕಿ ಇಟ್ಟರು.... ನನಗೆ ಮುಜುಗರವಾಯಿತು..... " ಸರಿಯಾದ ಟೈಮ್ ಗೆ ಊಟಕ್ಕೆ ಬರುತ್ತೀರಾ.....  ಮನೆಯಲ್ಲಿ ಇಬ್ಬರು ವಯಸ್ಸಾದ ಇಬ್ಬರಿದ್ದಾರೆ, ಅವರ ಬಗ್ಗೆ ಸ್ವಲ್ಪವಾದರೂ ನೆನಪಿದ್ದರೆ ತಾನೆ....?"   ನನಗೆ ಎನೂ ಅರ್ಥ ಆಗಲಿಲ್ಲ...... ಗೆಳೆಯನ ಕಡೆ ನೋಡಿದೆ.... ಆತ ತನ್ನ ಪ್ಲೇಟ್ ಕಡೆ ನೋಡುತ್ತಿದ್ದ...... ನಾನೂ ಸುಮ್ಮನಾದೆ..... " ಎಲ್ಲರೂ ತಮ್ಮ ತಮ್ಮ ಬಗ್ಗೆಯೇ ಯೋಚಿಸುತ್ತಾರೆ, ಮಳೆಗಾಲ ಹತ್ತಿರದಲ್ಲೇ ಇದೆ, ಹಂಚಿನ ಮೇಲೆ ತೆಂಗಿನಕಾಯಿ ಬಿದ್ದು ಸುಮಾರು ಹೆಂಚು ಒಡೆದು ಹೋಗಿದೆ.... ಅದನ್ನ ರಿಪೇರಿ ಮಾಡಬೇಕೆಂಬ ಯೋಚನೆ ಇಲ್ಲ... ತೆಂಗಿನ ಮರಕ್ಕೆ ಒಂದು ವಾರದಿಂದ ನೀರು ಹಾಯಿಸಿಲ್ಲ..... ಯಾರಿಗೂ ಇದರ ಬಗ್ಗೆ ಕಾಳಜಿ ಇಲ್ಲ..... ಪಂಪ್ ರಿಪೇರಿ ಇದೆಯಂತೆ.... "


ಆಕೆ ನನಗೆ ಊಟ ಬಡಿಸುತ್ತಾ, ಇದನ್ನೆಲ್ಲಾ ಹೇಳುತ್ತಿದ್ದಳು..... ನನಗೆ ತಲೆ ಬುಡ ಅರ್ಥ ಆಗ್ತಾ ಇರಲಿಲ್ಲ..... ನನ್ನ ಮನೆಯಲ್ಲೂ ಸಹ ಮನೆಯ ಮೇಲೆ ತೆಂಗಿನಕಾಯಿ ಬಿದ್ದು ಹೆಂಚು ಒಡೆದಿತ್ತು..... ಸರಿ ಮಾಡಿಸಲು ಸಮಯ ಸಿಕ್ಕಿರಲಿಲ್ಲ.... ಅದು ಇವರಿಗೆ ಹೇಗೆ ಗೊತ್ತಾಯ್ತು....? ಇವರ ಮನೆ ವಿಷಯ ಇದು, ಇದನ್ನೆಲ್ಲಾ ನನಗೆ ಯಾಕೆ ಹೇಳ್ತಾ ಇದಾರೆ ಅಂತ ತಿಳಿಯಲಿಲ್ಲ........ ಗೆಳೆಯ ಸುಮ್ಮನೆ ತಲೆ ಕೆಳಗೆ ಹಾಕಿ ಊಟ ಮಾಡುತ್ತಿದ್ದ..... ನನ್ನ ಪಕ್ಕ ಕುಳಿತ ಹಿರಿಯರು," ಊಟ ಮಾಡುವಾಗಲಾದರೂ ಸ್ವಲ್ಪ ಸುಮ್ಮನಿರಬಾರದಾ...? ಯಾವಾಗ ನೋಡಿದರೂ ವಟ ವಟ ಅಂತ ಇರ್ತೀಯಾ..... ನಿನ್ನದು ಏನೇ ಮಾತಿದ್ದರೂ ಊಟ ಮುಗಿದ ನಂತರ ಇಟ್ಟುಕೋ " ಎಂದರು..... ನಾನು ಸುತ್ತ ಮುತ್ತ ನೋಡಿದೆ.... ನನ್ನ ಹಾಗೆ ಇವರ ಮಗ ಇರಬಹುದು, ನನ್ನನ್ನೇ ಇವರ ಮಗ ಎಂದುಕೊಂಡು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದುಕೊಂಡೆ... " ನೀವು ಸುಮ್ಮನಿರಿ, ನಿಮಗೇನೋ ಅರ್ಥ ಆಗಲ್ಲ, ನೀವು ಹೀಗೇ ಸದ್ರ ಬಿಟ್ಟೇ ಇವನು ಹೀಗೆ ಆಡ್ತಾ ಇದಾನೆ..... ಇವನಿಗೊಂದು ಮದುವೆ ಮಾಡಿದ್ರೆ ಮುಗಿದೇ ಹೋಯ್ತು.... ನಮ್ಮ ಕೈಗೆ ಚಿಪ್ಪೇ ಕೊಡ್ತಾನೆ....." ನನಗೆ ಗಂಟಲಲ್ಲಿ ಅನ್ನವೇ ಇಳಿಯಲಿಲ್ಲ..... ಊಟ ರುಚಿ ರುಚಿಯಾಗಿತ್ತು..... ಉಪ್ಪಿನಕಾಯಿಯಂತೂ ತುಂಬಾ ಚೆನ್ನಾಗಿತ್ತು..... ಗೆಳೆಯನ ಮೇಲೆ ಸಂದೇಹವೂ ಬಂತು..... ಆತ ನನ್ನ ಗೆಳೆಯನೇ ಆದರೂ, ಆತನ ಅಪ್ಪ ಅಮ್ಮನನ್ನು ನಾನು ಭೇಟಿ ಆಗಿರಲಿಲ್ಲ..... ತನ್ನ ಮನೆಗೆ ಕರೆದು ತಂದು ಊಟಕ್ಕೆ ಹಾಕುತ್ತಿದ್ದಾನಾ ಎನಿಸಿತು... ಆದರೆ ಒಂದು ಮಾತು ಅರ್ಥ ಆಗಲಿಲ್ಲ..... ನನ್ನ ಗೆಳೆಯನೇ ಇವರ ಮಗನಾದರೆ ಇದನ್ನೆಲ್ಲಾ ನನಗೆ ಯಾಕೆ ಹೇಳುತ್ತಿದ್ದಾರೆ ಎಂದು...

      
         ನನ್ನ ಗೆಳೆಯ ಗಡದ್ದಾಗಿ ಊಟ ಮಾಡುತ್ತಿದ್ದ...... ಊಟ ರುಚಿ ರುಚಿಯಾಗಿದ್ದ ಕಾರಣ ನನಗೂ ಹೊಟ್ಟೆ ತುಂಬಿತ್ತು..... ಕೈ ತೊಳೆಯಬೇಕು ಎಂದುಕೊಂಡು ಎದ್ದೆ.... ಅಜ್ಜಿ ಬಂದವರೇ " ಕರೆಂಟ್ ಬಿಲ್ ತುಂಬಿದ್ದೀಯೋ ಇಲ್ಲವೋ..?, ಹಣಾನೂ ನಾನೇ ಕೊಡಲೋ....? ಹೇಗಾದರೂ ಮಾಡಿ ತುಂಬಪ್ಪಾ.... ಮುಂದಿನ ವಾರ ನಿನ್ನ ಅಕ್ಕ ಬರ್ತಾ ಇದ್ದಾಳಂತೆ, ಅವಳ ಮಗಳಿಗೆ ಒಂದು ಚಿನ್ನದ ಸರ ಮಾಡಿಸಬೇಕು ಕಣೊ...... ನಾನೂ ಸ್ವಲ್ಪ ಹಣ ಕೂಡಿಸಿಟ್ಟಿದ್ದೇನೆ .... ಅದನ್ನೂ ನಿನಗೆ ಕೊಡುತ್ತೇನೆ.... ಸರ ಮಾಡಿಸದೇ ಇದ್ದರೆ ನಿನ್ನ ಬಾವ ಅವಳನ್ನು ಸುಮ್ಮನೇ ಬಿಡಲ್ಲಪ್ಪಾ.... " ಕಣ್ನಲ್ಲಿ ನೀರು ತುಂಬಿತ್ತು..... ನನಗೆ ಇವರಿಗೇನಾದರೂ ಹುಚ್ಚು ಹಿಡಿದಿರಬಹುದಾ ಅಂತ ಅನುಮಾನ ಶುರುವಾಯಿತು.... ನನ್ನಂತೆಯೆ ಇರುವ ಮಗ ಸತ್ತು ಹೋಗಿರಬಹುದು.... ಅವನ ನೆನಪಲ್ಲೇ ಇರುವ ಇವರಿಗೆ ಮಾನಸಿಕ ಆಘಾತವಾಗಿ ಹೀಗೆ ಮಾತನಾಡುತ್ತಾ ಇರಬಹುದು ಎಂದುಕೊಂಡೆ..... ತಲೆ ಕೆಟ್ಟಂತಾಗಿ, ನನ್ನ ಗೆಳೆಯನ ಕಡೆ ನೋಡಿದೆ..... ಆತನ ಕಿವಿಗೆ ಏನೂ ಕೇಳಿಸಲೇ ಇಲ್ಲವೆನೋ ಎನ್ನುವ ಹಾಗೆ ಇದ್ದ.... ನಾನು ಕೈ ತೊಳೆದುಕೊಂಡು  ಬಂದು ಕುಳಿತೆ.... ಅಜ್ಜ ಬಂದು ಎಲೆ ಅಡಿಕೆ ಕೊಟ್ಟರು..... ನನಗೆ ಅವರ ಮೇಲೆ ಅನುಕಂಪ ಬಂತು..... ಅಜ್ಜ ಹೇಗೆ ಇವರನ್ನು ಸಹಿಸಿಕೊಂಡಿದ್ದಾರೊ ಎನಿಸಿತು.... " ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬೇಡಪ್ಪಾ.... ಅವಳು ಯಾವಾಗಲೂ ಹಾಗೆನೆ..... " ಎಂದರು... ’ಅಬ್ಬಾ.. ಇವರಾದರೂ ಸರಿಯಾಗಿದ್ದಾರೆ ’ಎನಿಸಿತು...... ಅವರು ಮುಂದುವರಿಸುತ್ತಾ....." ಮನೆಯ ತೊಂದರೆ ಎಲ್ಲಾ ಇದ್ದಿದ್ದೇ ಕಣಪ್ಪಾ.... ನೀನು ಹೀಗೇಲ್ಲಾ ಬೇರೆಯವರ ಬೈಕ್ನಲ್ಲಿ ತಿರುಗಾಡಬೇಡಪ್ಪಾ.... ಸ್ವಲ್ಪ ಸಾಲ ಮಾಡಿ ನೀನೇ ಬೈಕ್ ತೆಗೆದುಕೋ" ಎಂದರು..... ನನಗೆ ತಲೆ ತಿರುಗೋದೊಂದು ಬಾಕಿ...... ನಾನು ತಲೆ ಹಿಡಿದುಕೊಂಡು ಹೊರಗೆ ಬಂದೆ.......


  ಗೆಳೆಯ ಊಟದ ಹಣ ಕೊಟ್ಟು ಹೊರ ಬಂದ, ಗೆಳೆಯನ  ಮುಖದಲ್ಲಿ ಒಂಥರಾ ನಗುವಿತ್ತು....... ನಾನು ತಲೆ ಕೆಟ್ಟು ನಿಂತಿದ್ದೇನೆ.... ಇವಾ ಹೀಗೆ ನಗಾಡುತ್ತಾ ಇದ್ದಾನಲ್ಲಾ ಎಂದು ಸಿಟ್ಟೂ ಬಂತು...... ಆತ ನಗುತ್ತಲೇ ಕೇಳಿದ " ಹೇಗಿತ್ತು ಮನೆ ಊಟ...?”....... ನನ್ನ ಪಿತ್ತ ನೆತ್ತಿಗೇರಿತು......” ನಿನ್ನ ತಲೆ, ಮನೆ ಊಟವಂತೆ..... ಊಟವೇನೋ ಚೆನ್ನಾಗಿತ್ತು...... ಆದ್ರೆ ಆ ಜನ ನನ್ನನ್ನು ಅವರ ಮಗನೆಂದು ತಿಳಿದು ಜಾಡಿಸುತ್ತಿದ್ದರಲ್ಲ..... ನೀನೇಕೆ ಸುಮ್ಮನಿದ್ದೆ.....? ನಿನಗೆ ಗೊತ್ತಿತ್ತಾ ಅವರ ತಲೆ ಸರಿ ಇಲ್ಲ ಎಂದು...? ಒಳ್ಳೆ ಕಡೆ ಕರೆದುಕೊಂಡು ಊಟ ಹಾಕಿಸಿದೆಯಪ್ಪ...... " ಎಂದೆ...... ಗೆಳೆಯ ನಗುತ್ತಾ...." ಈಗ ಹೇಳು, ನೀನೇನು ಕೆಳ್ದೆ ನನ್ ಹತ್ರ...? ಮನೆ ಊಟ ತಾನೆ....? ಯಾರ ಮನೆಯಲ್ಲಿ ಊಟದ ಜೊತೆ ಮನೆ ಸಮಸ್ಯೆ, ಮಕ್ಕಳಿಗೆ ಬೈಗುಳ ಇರಲ್ಲ ಹೇಳು....? ಊಟದ ಜೊತೆ ಇದೆಲ್ಲಾ ಇದ್ದಿದ್ದಕ್ಕೆ ನಾನು ಮನೆ ಊಟ ಎಂದಿದ್ದು..." ಎಂದ.......

ಬೆಪ್ಪಾಗುವ ಸರದಿ ನನ್ನದಾಗಿತ್ತು..... ಆದರೂ ಅನುಮಾನ ಕಾಡುತ್ತಿತ್ತು..... "ಅದೆಲ್ಲಾ ಸರಿ, ಅವರು ನನಗೆ ಮಾತ್ರ ಯಾಕೆ ಬಯ್ಯುತ್ತಿದ್ದರು...? ನಿನಗೆ ಮಾತ್ರ ಎನೂ ಹೇಳಲಿಲ್ಲ" ಎಂದೆ..... ಗೆಳೆಯ ನಗುತ್ತಾ...." ನಾನು ಪದೇ ಪದೆ ಹೋಗುತ್ತೆನೆ ಅಲ್ಲಿ, ಖಾಯ್ಂ ಗಿರಾಕಿಗಳಿಗೆ ಅವರು ಹಾಗೆ ಮಾಡಲ್ಲ.... ಮೊದಲಿಗೆ ಬಂದವರಿಗೆ ಮಾತ್ರ ಈ ಟ್ರೀಟ್ ಮೆಂಟು.." ಎಂದ.....

ನನಗೆ ಮಾತ್ರ ನಿಜವಾದ ಮನೆ ಊಟ ಸಿಕ್ಕಿತ್ತು......

Feb 1, 2011

ಇದೂ ಒಂದು ಬದುಕು....!

ಸಂಜೆಯಾಗಿತ್ತು..... ಇವತ್ತಾದರೂ ಬೇಗ ಮನೆಗೆ ಹೋಗೋಣ ಎಂದುಕೊಂಡು ಮನೆಯತ್ತ ಹೊರಟಿದ್ದೆ..... ಯಾವತ್ತಿನಂತೆ ಎರಡು ಸಿಗ್ನಲ್ ದಾಟಿ ಹೋಗಬೇಕಿತ್ತು.... ಮೊದಲ ಸಿಗ್ನಲ್ ದಾಟಿ ಬಂದಿದ್ದೆ.... ಎರಡನೇ ಸಿಗ್ನಲ್ ಪಾಸ್ ಆಗೊದರಲ್ಲಿದ್ದೆ..... ಬಿದ್ದೇ ಬಿಟ್ಟಿದ್ದು ಕೆಂಪು ಬಣ್ಣ..... ಮೂರು ನಿಮಿಷದ ಪಾಸ್ ಆಗಿತ್ತು ಅದು..... ಬೈಕ್ ಬಂದ್ ಮಾಡಿ ಹೆಲ್ಮೆಟ್ ತೆಗೆದೆ...... ಎಲ್ಲಾ ಸಿಗ್ನಲ್ನಲ್ಲಿ ಇರುವ ಹಾಗೆ, ಅಲ್ಲೂ ಭಿಕ್ಷುಕರ ತಂಡ ಇತ್ತು..... ಅದರಲ್ಲಿ ಒಬ್ಬ ಸಣ್ಣ ಹುಡುಗ, ಪುಟ್ಟ ಹುಡುಗಿಯನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ..... ಹುಡುಗನ ವಯಸ್ಸು ಹೆಚ್ಚೆಂದರೆ ಆರಿರಬಹುದು, ಆತನ ತೋಳಲ್ಲಿದ್ದ ಮಗುವಿಗೆ ಒಂದು ವರ್ಷವೂ ಆಗಿರೋ ಹಾಗೆ ಕಾಣಲಿಲ್ಲ...  ಆತ ನನ್ನ ಕಡೆಗೇ ಬರುತ್ತಿದ್ದ..... ಬಂದವನೇ ನನ್ನ ಪಕ್ಕದ ಬೈಕ್ನಲ್ಲಿದ್ದ ಒಬ್ಬನಿಗೆ ’ ಸರ್, ಎನಾದ್ರೂ ಕೊಡಿ ಸರ್..." ಎಂದ.... ಆತ " ಯಾಕೆ ...? ಶಾಲೆಗೆ ಹೋಗಲ್ವಾ...? ಎಲ್ಲಿ ನಿನ್ನ ಮನೆಯವರೆಲ್ಲಾ....? ಅವರೂ ಇಲ್ಲೇ ಭಿಕ್ಷೆ ಬೇಡ್ತಾ ಇದಾರಾ?... ಎಲ್ಲಿಂದ ಬರ್ತೀರಪ್ಪಾ ನೀವೆಲ್ಲ ..? ’ ಎಂದೆಲ್ಲಾ ಕೊರೆಯುತ್ತಿದ್ದ.... ನನಗೆ ಆ ಹುಡುಗ ಮತ್ತು ಆತ ಎತ್ತಿಕೊಂಡ ಪುಟ್ಟ ಮಗು, ನನ್ನನ್ನು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿತ್ತು......


ರಸ್ತೆ ಕಾಮಗಾರಿ ಸಲುವಾಗಿ ಸರ್ವೆ ಮಾಡುತ್ತಿದ್ದೆವು......  ಸುಮಾರು ಹತ್ತು ಘಂಟೆಯ ಸಮಯವಾಗಿತ್ತು..... ನನ್ನ್ ಜೊತೆ ಸುಮಾರು ಹತ್ತು ಜನ ಕೆಲಸಗಾರರಿದ್ದರು.... ಒಬ್ಬ ಹುಡುಗ , ಸಣ್ಣ ಹುಡುಗಿಯನ್ನು ಎತ್ತಿಕೊಂಡು ಬಂದ.... " ಸರ್, ಏನಾದರು ಕೆಲ್ಸ ಇದ್ರೆ ಕೊಡಿ.." ಎಂದ... ಹುಡುಗನಿಗೆ ಹತ್ತು ವರ್ಷವಿರಬಹುದು...ಆತನ ಕೈಯಲ್ಲಿ ನಾಲ್ಕೈದು ತಿಂಗಳ ಮಗುವಿತ್ತು...... ಮಗುವಿಗೆ ಹಸಿವೆಯಾಗಿತ್ತು ಎನಿಸುತ್ತದೆ...... ಅಳಲು ಶುರು ಮಾಡಿತ್ತು..... ನನ್ನ ಸಂಗಡ ಇದ್ದ ಕೆಲಸಗಾರರು ಆತನನ್ನು ಓಡಿಸಲು ಬಂದರು..... ನಾನು " ಹೇಯ್, ನೀನ್ಯಾಕೆ ಇಲ್ಲಿದ್ದೀಯಾ...? ನೀನು ಶಾಲೆಗೆ ಹೋಗಲ್ವಾ...? ನಿನಗೆಲ್ಲಾ ಕೆಲಸ ಕೊಡಕ್ಕೆ ಆಗಲ್ವಪ್ಪಾ.... " ಎಂದೆ.... ಹುಡುಗ " ಸರ್, ನನ್ ತಂಗಿ ಅಳ್ತಾ ಇದ್ದಾಳೇರಿ.... ಅವಳಿಗೆ ಎನಾದರೂ ತಿನ್ನಿಸಬೇಕು, ಕೆಲ್ಸ ಎನಾದರೂ ಕೊಡ್ರೀ.... ಸ್ವಲ್ಪ ಹಣ ಕೊಡಿ... ಅದರಲ್ಲಿ ನನ್ ತಂಗೀಗೆ ತಿನ್ಲಿಕ್ಕೆ ತೆಗೆದು ಕೊಡುತ್ತೇನೆ" ಅಂದ.... ’ ಹಾಗೆಲ್ಲಾ ಕೆಲಸ ಕೊಡಲು ಆಗಲ್ಲಪ್ಪಾ... ನಿನ್ನ ಅಪ್ಪ ಅಮ್ಮ ಎಲ್ಲಿ..? ಎಂದೆ...... ಜೊತೆಯಲ್ಲಿದ್ದ ಕೆಲಸಗಾರರು ನಗಲು ಶುರು ಮಾಡಿದರು..... ಆ ಹುಡುಗನ ಕಣ್ಣಲ್ಲಿ ನೀರು ..... ಆತ ಮುಖ ಕೆಳಗೆ ಹಾಕಿದ..... ಜೊತೆಯಲ್ಲಿದ್ದ ಕೆಲಸಗಾರನೊಬ್ಬ " ಎಯ್ ಬಿಡ್ರೀ ಸರ್.... ಅಲ್ಲಿ ನೋಡ್ರಿ ಇವರನ್ನು ಭಿಕ್ಷೆ ಬೇಡಲು ಬಿಟ್ಟು , ಇವರ ತಾಯಿ ಅಲ್ಲಿ ನೋಡ್ತಾ ಇದಾಳೆ ನೋಡಿ" ಎಂದು ದೂರದ ಕಡೆ ಕೈ ತೋರಿಸಿದ.... ಆ ಹುಡುಗ ’ ನಿಮ್ಮ ದುಡ್ಡೂ ಬೇಡ, ನಿಮ್ಮ ಕೆಲಸಾನೂ ಬೇಡ’ ಎನ್ನುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋದ.... ಆ ಪುಟ್ಟ ಮಗು ಜೋರಾಗಿ ಅಳಲು ಶುರು ಮಾಡಿದ್ದಳು.... ನಾನು ಎನಾದರು ದುಡ್ಡು ಕೊಡೋಣ ಎಂದು ಕಿಸೆಗೆ ಕೈ ಹಾಕಿದೆ..... ಜೊತೆಯಲ್ಲಿನ ಕೆಲಸಗಾರನೊಬ್ಬ " ಅವನಿಗೆ ಅಪ್ಪ ಯಾರಂದೇ ಗೊತ್ತಿಲ್ಲ.... ಹೆತ್ತು ರಸ್ತೆ ಮೇಲೆ ಬಿಡುತ್ತಾರೆ... ಮಕ್ಕಳು ಹೀಗೆ ಭಿಕ್ಷೆ ಬೇಡುತ್ತಾ ಜೀವನ ಮಾಡ್ತಾರೆ.... " ಎಂದ.... ನನಗೆ ಅರ್ಥ ಆಗಲಿಲ್ಲ..... " ಎನಾಯ್ತಪ್ಪ." ಎಂದೆ..... " ನಿಮಗೆ ಗೊತ್ತಿಲ್ಲ ಸರ್, ಅಲ್ಲಿ ನೋಡಿ, ಅಲ್ಲಿ ಆ ಹುಡುಗನ ಅಮ್ಮ ನಿಂತಿರ್ತಾಳೆ... ಸುಮಾರು ಜನ ಲಾರಿ ಡ್ರೈವರ್ ಗಳು  ಅವಳ ಜೊತೆ ಮಜಾ ಮಾಡಿ ದುಡ್ಡು ಕೊಟ್ಟು ಹೋಗ್ತಾರೆ... ಅದರಲ್ಲೇ ಅವರ ಜೀವನ.... ಇವರು ಮಾಡೊ ಪಾಪದ ಕೆಲಸಕ್ಕೆ ತಪ್ಪೇ ಮಾಡದ ಈ ಮಕ್ಕಳು  ಭೂಮಿಗೆ ಬಂದು ಕಷ್ಟ ಅನುಭವಿಸುತ್ತವೆ....ಎಲ್ಲರ ನಿಷ್ಟುರ ಬಾಯಿಗೆ ಆಹಾರವಾಗುತ್ತಾರೆ" ಎಂದ..... ನನಗೆ ಅಯ್ಯೋ ಎನಿಸಿತು..... ಆ ಹುಡುಗ ತನ್ನ ಅಮ್ಮನ ಕಡೆಗೆ ಓಡುತ್ತಿದ್ದ... ಆ ಹೆಂಗಸು ಹರಕಲು ಸೀರೆ ಉಟ್ಟಿದ್ದಳು... ಹತ್ತಿರ ಬಂದ ಮಗನಿಂದ ಅಳುತ್ತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದಳು.... ಆ ಹುಡುಗ ಅವಳ ಕೈಯನ್ನು ದೂರ ತಳ್ಳಿ ಮುಂದಕ್ಕೆ ಹೋದ..... 

ನಾನು ಗಮನಿಸುತ್ತಲೇ ಇದ್ದೆ.... ಆ ಹುಡುಗ ತನ್ನ ಅಮ್ಮನ ಹತ್ತಿರ ಮಾತನಾಡುತ್ತಿರಲಿಲ್ಲ.....ಪುಟ್ಟ ಕೂಸಿನ ಅಳು ಜೋರಾಗಿತ್ತು..... ಅದನ್ನು ನೋಡಿ ಆ ಅಮ್ಮನಿಗೂ ಅಳು ಬಂದಿತ್ತು ಎನಿಸುತ್ತದೆ..... ಅವಳೂ ಮರದ ಕೆಳಗೆ ಹೋಗಿ ಕುಳಿತು ಮುಖ ಮುಚ್ಚಿಕೊಂಡಳು.... ಅಷ್ಟರಲ್ಲಿ ಒಂದು ಲಾರಿ ಅವರ ಪಕ್ಕದಲ್ಲಿ ನಿಂತಿತು....ಆ ಹುಡುಗ ಓಡಿ ಹೋಗಿ ಡ್ರೈವರ್ ಹತ್ತಿರ ದುಡ್ಡು ಕೇಳಿದ.... ಆತನ ಧ್ಯಾನವೆಲ್ಲಾ ಮರದ ಕೆಳಗೆ ಕುಳಿತ ಹೆಂಗಸಿನ ಮೇಲಿತ್ತು...... ಆತನಿಗೆ ಅಳುತ್ತಿದ್ದ ಮಗುವಾಗಲಿ, ಅವಳ ಹಸಿವೆಯಾಗಲಿ ಕಾಣಿಸಲೇ ಇಲ್ಲ.... ಹುಡುಗ ಕೈಯೊಡ್ಡಿ ನಿಂತಿದ್ದ..... ಡ್ರೈವರ್ ಅವರ ಕಡೆ ನೋಡದೇ ಸೀದಾ ಹೆಂಗಸಿನ ಹತ್ತಿರ ಹೋದ..... ಆ ಹುಡುಗ ತನ್ನ ಹಣೆಬರಹಕ್ಕೆ ಸೋತು ನಮ್ಮೆಡೆಗೆ ನಡೆದು ಬಂದ..... ನಾನು ನಮ್ಮ ಕೆಲಸಗಾರರ ಕೈಲಿ ಹಣ ಕೊಟ್ಟು ಹಾಲು ಮತ್ತು ಬಿಸ್ಕಟ್ ತರಲು ಹೇಳಿ ಕಳಿಸಿದೆ....

ಆ ಹೆಂಗಸು ಬಂದ ಡ್ರೈವರ್ ಹತ್ತಿರ ಹಣ ಕೇಳುತ್ತಿದ್ದಳು.... ಆಕೆ ತನ್ನ ಮಗನ ಕಡೆ ಕೈ ತೋರಿಸಿ ಎನೋ ಹೇಳುತ್ತಿದ್ದಳು..... ಆತ ಅವಳ ಮಾತಿಗೆ ಒಪ್ಪುವ ಹಾಗೆ ಕಾಣುತ್ತಿರಲಿಲ್ಲ..... ಆಕೆ ತನ್ನ ದೇಹ ಮಾರಾಟಕ್ಕೂ ಮೊದಲೇ ಹಣ ಕೇಳುತ್ತಿದ್ದಳು ಎನಿಸುತ್ತದೆ.... ಆದರೆ ಆತ ಒಪ್ಪುತ್ತಿರಲಿಲ್ಲ..... ಆಕೆ ಅಳುತ್ತಲೇ ಗಿಡಗಳ ಮರೆಯಲ್ಲಿನ ಡೇರೆಗೆ ಆತನನ್ನು ಕರೆದುಕೊಂಡು ಹೋದಳು.... ಇಲ್ಲಿ, ಹುಡುಗ ನಿಧಾನವಾಗಿ ತನ್ನ ತಂಗಿಗೆ ಬಾಟಲಿಯಲ್ಲಿ ತಂದಿದ್ದ ಹಾಲನ್ನು ಕುಡಿಸುತ್ತಿದ್ದ.... ಬಿಸ್ಕೇಟ್ ತಿನ್ನಿಸುತ್ತಿದ್ದ..... ಮದ್ಯೆ, ಮದ್ಯೆ ನನ್ನ ಕಡೆ ನೋಡಿ ನಗು ತೋರಿಸುತ್ತಿದ್ದ.... ಆ ಮಗು ನಗು ನಗುತ್ತಾ ಹಾಲು ಕುಡಿಯುತ್ತಿತ್ತು...... ಇದೇ , ಇದೇ ...ಇದೇ  ಒಂದು ಮಗುವಿನ ನಗುವಿಗಾಗಿ ಆ ತಾಯಿ ತನ್ನ ದೇಹ ಮಾರಾಟಕ್ಕಿಳಿದ್ದಾಳೆ...... ಇದನ್ನ ಬಿಟ್ಟು ಅವಳಿಗೆ ಬೇರೆ ದಾರಿಯೇ ಇರಲಿಲ್ಲ ಅನಿಸುತ್ತದೆ..... ಆಕೆ ಎಲ್ಲಿ, ಏನೇ ಕೆಲಸ ಮಾಡಲು ಹೋದರೂ ಜನ ಆಕೆಯನ್ನು ಕೆಟ್ಟ ದ್ರಷ್ಟಿಯಿಂದಲೇ ನೋಡುತ್ತಾರೆ..... ಆಕೆ ಒಂದು ಗುಟುಕು ಜೀವಕ್ಕಾಗಿ, ಹಾಳು ಹೊಟ್ಟೆಯ ಹಸಿವೆಗಾಗಿ, ಯಾವನದೋ ಎರಡು ತೊಟ್ಟು ಕೆಟ್ಟ ಹನಿಯಿಂದ ಭೂಮಿಗೆ ಬಂದ ಜೀವದ ಖುಶಿಗಾಗಿ..... ಮತ್ತದೇ ದೇಹವನ್ನು ಇನ್ನೊಬ್ಬನಿಗೆ ಹಾಸಬೇಕು....

ಡ್ರೈವರ್, ತನ್ನ ಚಟ ತೀರಿಸಿಕೊಂಡು ಹೊರಟು ಹೋದ... ಆ ಹೆಂಗಸು, ಓಡುತ್ತಾ ಹೋಗಿ ಕೈಯಲ್ಲಿದ್ದ ಹಣದಿಂದ ಬಿಸ್ಕೇಟ್ ,ಹಾಲು ತೆಗೆದುಕೊಂಡು ಬಂದಳು..... ಬಂದವಳೇ..... ಮಗನ ಕಾಲ ಮೇಲೆ ಮಲಗಿ ನಿದ್ದೆ ಹೋದ ಪುಟ್ಟ ಮಗಳನ್ನು ನೋಡಿ ಅವಳ ಮುಖದಲ್ಲಿ ಸಂತ್ರಪ್ತಿ ಮೂಡಿತು..... ತನ್ನ ಕೈಯಲ್ಲಿದ್ದ ಬಿಸ್ಕೇಟ್ ಮತ್ತು ಹಾಲನ್ನು ಮಗನಿಗೆ ಕೊಡಲು ಹೋದಳು..... ಆ ಹುಡುಗ ಅಮ್ಮನ ಕೈಯಲ್ಲಿನ ಬಿಸ್ಕೆಟ್, ಹಾಲನ್ನು ಮತ್ತು ಅವಳ ಮುಖವನ್ನು ನೋಡಿದ..... ರಸ್ತೆಯಲ್ಲಿ ನಿಂತಿದ್ದ ಲಾರಿಯನ್ನು ಒಮ್ಮೆ ನೋಡಿ, ಅಮ್ಮನ ಕೈಯಲ್ಲಿದ್ದ ತಿಂಡಿ ತೆಗೆದುಕೊಂಡು ಬಿಸಾಡಿಬಿಟ್ಟ......

"ಕೀಯ್... ಪೀಯ್......" ಎಂಬ ಶಬ್ಧದಿಂದ ವಾಸ್ತವಕ್ಕೆ ಬಂದಿದ್ದೆ...... ಇನ್ನೂ ರೆಡ್  ಸಿಗ್ನಲ್ ಇತ್ತು...ನಾನು ಈ ಎಲ್ಲಾ ವಿಚಾರದಲ್ಲಿ ಸಿಗ್ನಲ್ ಜಂಪ್ ಮಾಡಿಬಿಟ್ಟಿದ್ದೆ...
ಮುಂದೆ ಬಂದಾಗ ನಿಸ್ತೇಜ ಕಣ್ಣಿನ  ಹುಡುಗ ....!...."ಅಣ್ಣಾ... ಬೆಳಗಿನಿಂದ ಏನೂ ತಿಂದಿಲ್ಲ...ಹತ್ತು ರುಪಾಯಿ ಕೊಡು ಅಣ್ಣಾ..."

ನಾನು ಪರ್ಸ್ ತೆಗೆದೆ.. .....ಅದರಲ್ಲಿ ಇದ್ದದ್ದು ಎಲ್ಲಾ ನೂರರ ನೋಟು......ನನಗೆ ನೆನಪಾಗಿದ್ದು..... ಹತ್ತು ವರ್ಷದ ಹಿಂದಿನ ಆ ಹುಡುಗನ ಅಮ್ಮನ ಅಸಹಾಯಕತೆ........ಐವತ್ತು ರುಪಾಯಿ ಕೊಟ್ಟುಬಿಡೋಣ ಅಂದುಕೊಂಡೆ.......ಪರ್ಸ್ ಹುಡುಕಿದೆ....ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಬಂದ......"ನೋಡಿ ಸರ್... ಏನೋ ಅರ್ಜಂಟ್ ಇತ್ತು......ಸ್ವಲ್ಪ ಅಡ್ಜಸ್ಟ್ ಮಾಡಿ.."...ನಾನು ಗೋಗರೆದೆ..."ಅಲ್ಲಾರೀ...ವಿದ್ಯಾವಂತರಾದ ನಿಮಗೇ ಅರ್ಥ ಆಗಲ್ವಾ ಸಿಗ್ನಲ್ ಇದ್ದದ್ದು...? ಕೇಸ್ ಹಾಕ್ಲಾ...? ಇಲ್ಲಾ... ಐವತ್ತು ಕೊಡಿ....ಇನ್ನು ಮುಂದೆ ಹೀಗೆಲ್ಲ ಮಾಡ ಬೇಡಿ..."ನಾನು ತಲೆ ಅಲ್ಲಾಡಿಸಿ... ಮತ್ತೆ ಪರ್ಸ್ ಹುಡುಕಿದೆ...... ಐವತ್ತರ ನೋಟು ಸಿಕ್ಕಿತು.. ಪೊಲೀಸನಿಗೆ ಕೊಟ್ಟೆ...
ಹುಡುಗ ಮತ್ತೆ ನನ್ನ ಕಾಲು ಮುಟ್ಟಿದ..
ನನಗಿನ್ನೂ ಐವತ್ತು ರುಪಾಯಿಕೊಟ್ಟ ತಲೆಬಿಸಿ ಇತ್ತು......

ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಒಂದು ರುಪಾಯಿಯ ನಾಣ್ಯ ಸಿಕ್ಕಿತು... ... ಹುಡುಗನಿಗೆ ಕೊಟ್ಟೆ...
"ನೋಡು.... ಬಿಕ್ಷೆ ಬೇಡಬೇಡ.......ಎಲ್ಲಾದರು ಕೆಲಸ ಹುಡುಕಿ ದುಡಿದು ತಿನ್ನು.." ಅಂದೆ....
ಹುಡುಗ ನನ್ನ ಮುಖವನ್ನೂ, ಪೋಲಿಸಿನ ಕೈಯಲ್ಲಿದ್ದ ಐವತ್ತು ರುಪಾಯಿಯನ್ನೂ ನೋಡುತ್ತಿದ್ದ....

ನಾನು ಸಿಟ್ಟಿನಿಂದ ಬೈಕ್ ಸ್ಟಾರ್ಟ್ ಮಾಡಲು ಕಿಕ್ ಹೊಡೆದೆ..... ಸಿಟ್ಟು ಯಾರ ಮೇಲೋ ತಿಳಿಯಲಿಲ್ಲ.......

Jan 14, 2011

ಸಭೆಯ ಆಭಾಸ....!

ಸರಿಯಾಗಿ ನಾಲ್ಕು ವರ್ಷದ ಹಿಂದೆ ನಡೆದ ಘಟನೆಯಿದು....

ನಮ್ಮ ಊರಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣದ ಮಾರನೇ ದಿನ ಸಂಜೆ ನಮ್ಮೂರ ಯುವಕ ಮಂಡಲದ ಯುವಕರು , ಯುವತಿಯರು ಎಲ್ಲಾ ಸೇರಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ..... ಆ ದಿನ ರಾತ್ರಿ ಯಾವುದೇ ಊರಲ್ಲಿದ್ದರೂ , ಎಷ್ಟೇ ದೂರದಲ್ಲಿದ್ದರೂ ನಮ್ಮೂರ ಯುವಕರು ಬಂದೇ ಬರುತ್ತಾರೆ..... ಆ ಒಂದು ದಿನ ಎಲ್ಲಾ ಸೇರಿ ತಮ್ಮ ಸಂತಸ, ಕಲೆಗಾರಿಕೆ ತೋರಿಸಿಕೊಂಡು ಸಂತಸ ಪಡುತ್ತಾರೆ.... ಚಿಕ್ಕ ಚಿಕ್ಕ ಮಕ್ಕಳ ಡಾನ್ಸ್, ಯುವಕರ ಕಿರು ನಾಟಕ , ಕೊನೆಯದಾಗಿ ಪ್ರಸಿದ್ದ ನಾಟಕ ಕಂಪನಿಯಿಂದ ಬೆಳಗಿನ ತನಕ ನಡೆಯುವ ನಾಟಕ ಪ್ರದರ್ಶನ ಇರುತ್ತದೆ.....

ಆ ದಿನ ನನಗೆ ತುಂಬಾ ಖುಷಿಯಾಗಿತ್ತು...... ಯಾಕೆಂದರೆ ಆ ದಿನ ನಮ್ಮೂರ ಕ್ಷೌರಿಕನಿಗೆ ಸನ್ಮಾನ ನಡೆಯುವುದಿತ್ತು.... ಆತ ನಾನು ಹುಟ್ಟಿದಾಗಿನಿಂದ ನಮ್ಮೂರಲ್ಲೇ ಅಂಗಡಿ ಮಾಡಿಕೊಂಡು ಇದ್ದರು....  ನಮ್ಮ ಊರಿಗೆ ಮಾಡಿದ ಸೇವೆಗೆ ನಮ್ಮ ಸಣ್ಣದೊಂದು ಸನ್ಮಾನ ಮಾಡೋದು ನಿರ್ಧಾರವಾಗಿತ್ತು....ಇದು ನನ್ನ ಗೆಳೆಯನ ಯೋಚನೆಯಾಗಿತ್ತು..... ಆತನ ಯೋಚನೆ ಮತ್ತು ಯೋಜನೆ ವಿಭಿನ್ನವಾಗಿರುತ್ತಿತ್ತು..... ಉದಾಹರಣೆಗೆ..... ರಕ್ತದಾನ ಮಾಡಿದವರಿಗೆ ವೇದಿಕೆಗೆ ಕರೆದು ಸನ್ಮಾನ ಮಾಡಿ ಧನ್ಯವಾದ ಹೇಳೋದು, ನಮ್ಮೂರಿಗೆ ಹೊಸದಾಗಿ ಮದುವೆಯಾಗಿ  ಬಂದ ಮದುವಣಗಿತ್ತಿಗೆ ವೇದಿಕೆಗೆ ಕರೆದು ಹೂವು ಕೊಟ್ಟು ಸ್ವಾಗತ ಮಾಡೋದು, ಸರ್ಕಾರದ ಸವಲತ್ತು ಜನರಿಗೆ ಮುಟ್ಟಿಸೋದು, ರಂಜನೆಯ ಜೊತೆ ಸಣ್ಣಪುಟ್ಟ ಆಟ....

ನಾನು ಊರಿನ ಹುಡುಗರಿಂದ ಸ್ವಲ್ಪ ದೂರವೇ ಇರುತ್ತಿದ್ದೆ.......  ಇದ್ದ ಒಂದಿಬ್ಬರು ಗೆಳೆಯರ ಜೊತೆಯೇ ನನ್ನ ಒಡನಾಟ ಇರುತ್ತಿತ್ತು.... ಈ ಸಾರಿ ಮಾತ್ರ ನನ್ನ ಆ ಗೆಳೆಯನ ಒತ್ತಾಸೆಗೆ ಮಣಿದು ನಾನು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದೆ.... ಗೆಳೆಯ ನನಗಾಗಿ ಕೆಲವು ಪ್ರಮುಖ ಕೆಲಸ ವಹಿಸಿದ್ದ..... ಅದೇನೆಂದರೆ ..... ಕಾರ್ಯಕ್ರಮ ನಡೆಯುತ್ತಾ ಇರುವಾಗ ಅದಕ್ಕೊಪ್ಪುವ ಸಂಗೀತದ c . d play  ಮಾಡೋದು.... ಸನ್ಮಾನ ನಡೆಯುವಾಗ ತಬಲಾ, ವಾಯೋಲಿನ್ ಸಂಗೀತ play  ಮಾಡಬೇಕಿತ್ತು ....  ಆ ದಿನ ನಾಲ್ಕೈದು ಸ್ಕಿಟ್ ಸಹ ಇತ್ತು... ಅದರಲ್ಲಿ ಮಧ್ಯೆ ಮಧ್ಯೆ ಸಿನೆಮಾ ಹಾಡು ಪ್ಲೇ ಮಾಡಬೇಕಿತ್ತು....ಗೆಳೆಯ ಮತ್ತು ನಾನು ಮೊದಲೇ ಹಾಡನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೆವು.... ಆದರೆ... ಒಂದು ಎಡವಟ್ಟು ಆಗಿತ್ತು.......

ಆದದ್ದೇನೆಂದರೆ .... ಮೊದಲು ಪ್ಲೇ ಆಗಬೇಕಾದ ಹಾಡು ಹತ್ತನೆಯದಾಗಿತ್ತು... .... .... ಸಾಂಗ್ ಸೆಲೆಕ್ಟ್ ಮಾಡಿ ಪ್ಲೇ ಮಾಡಬೇಕಾಗಿತ್ತು.... ಲ್ಯಾಪ್ಟಾಪ್ ಇದ್ದರೆ ಸುಲಭ.... ಆದ್ರೆ ಬರಿಯ D . V .D  PLAYER display ನೋಡಿ ಪ್ಲೇ ಮಾಡಬೇಕಾಗಿತ್ತು..... ಒಂದರಿಂದ ಕೊನೆಯ ತನಕ ಇರುವ ಎಲ್ಲಾ ಹಾಡುಗಳ ಲಿಸ್ಟ್ ಬರೆದಿಟ್ಟುಕೊಂಡಿದ್ದೆ ಕೂಡ......ನನಗೆ ಇದು ಹೊಸ ಕೆಲಸವಾಗಿತ್ತು.... ಗಲಿಬಿಲಿಯಾಗಿದ್ದೆ..... ಗೆಳೆಯನ ಪ್ರೋತ್ಸ್ಹಾಹ ,ಧೈರ್ಯ ನನ್ನ ಜೊತೆ ಇತ್ತು....

ಕಾರ್ಯಕ್ರಮ ಶುರುವಾಗುವುದರಲ್ಲಿತ್ತು.... ಗೆಳೆಯನ ಸೊಗಸಾದ ನಿರೂಪಣೆ ಮಾಡುತ್ತಿದ್ದ.... ಹಿನ್ನೆಲೆ 
ಸಂಗೀತವಾಗಿ ಸಂತೂರ್ ವಾದನದ C .D ಮೆಲ್ಲನೆ ನುಡಿಸಿದ್ದೆ....ಮುಂದಿನ ಕಾರ್ಯಕ್ರಮ ಸನ್ಮಾನವಾಗಿತ್ತು.... ಅದರ ಸಂಗೀತದ C .D ರೆಡಿ ಮಾಡಿ ಇಟ್ಟಿದ್ದೆ.... ಸನ್ಮಾನ ಮಾಡಿಸಿಕೊಳ್ಳುವ , ಮಾಡುವ ಗಣ್ಯರು ವೇದಿಕೆ ಹತ್ತುತ್ತಿದ್ದರು... ಗೆಳೆಯ ನನ್ನ ಕಡೆ ಸನ್ನೆ ಮಾಡಿದ.... ನಾನು ರೆಡಿ ಮಾಡಿ ಇಟ್ಟಿದ್ದ ಸಂಗೀತ ಪ್ಲೇ ಮಾಡಿದೆ...... ... ಸಮಾರಂಭ ಎಂದರೆ ರಾಜಕೀಯದವರು ಇದ್ದೇ ಇರುತ್ತಾರೆ ಅಲ್ಲವೇ..... ? ಒಂದಿಬ್ಬರು ಅಲ್ಲೂ ಇದ್ದರು..... ನನಗೆ ಪರಿಚಯದವರೇ ಆಗಿದ್ದರು..... ಸನ್ಮಾನ ಅಭೂತಪೂರ್ಣವಾಗಿತ್ತು.... ಯಾರು ಗುರುತಿಸದಿದ್ದರೂ ತನ್ನ ಕೆಲಸ ತಾನು ಮಾಡುತ್ತಾ ಇದ್ದ ನನ್ನೂರಿನ ಕ್ಷೌರಿಕ ತನಗೆ ಸಿಕ್ಕ ಗೌರವಕ್ಕೆ  ಭಾವುಕನಾಗಿದ್ದ.... ನನ್ನ ಮನಸ್ಸು ಭಾರವಾಗಿತ್ತು......

ನನ್ನ ಮನಸ್ಸು
  ಆಗಲೇ ಮುಂದಿನ ಕಾರ್ಯಕ್ರಮಕ್ಕೆ ತಯಾರಾಗುತ್ತಿತ್ತು.... D .V .D player ನಲ್ಲಿ ಎರಡು C .D  ಒಮ್ಮೆಲೇ ಹಾಕಬಹುದಾಗಿತ್ತು....ಒಂದರಲ್ಲಿ ಮೆಲುವಾಗಿ ಸಂತೂರ ವಾದನ ಬರುತ್ತಿತ್ತು..... ಇನ್ನೊಂದು C .D ಹಾಕಿ ತಯಾರಾಗಿರೋಣ ಎಂದುಕೊಂಡು ಎರಡನೇ C .D ಹಾಕೋದಕ್ಕೂ ........ ವೇದಿಕೆಯ ಮೇಲೆ ರಾಜಕೀಯ ವ್ಯಕ್ತಿಯೊಬ್ಬರು ಅನಿಸಿಕೆ ಹಂಚಿಕೊಳ್ಳಲು ಮೈಕ್ ಹಿಡಿಯುವುದಕ್ಕೂ ಸರಿ ಹೋಯಿತು.... ನಾನು ವೇದಿಕೆಯ ಕಡೆ ಗಮನ ಕೊಡುತ್ತಾ ಇರುವಾಗಲೇ ಅಚಾನಕ್ಕಾಗಿ C .D ಪ್ಲೇ ಆಗಿ ಬಿಟ್ಟಿತ್ತು.....ಅದರಲ್ಲೂ ಮೊದಲಿನ ಸಾಂಗ್ full volumn ನೊಂದಿಗೆ...... ನನಗೆ ತುಂಬಾ ನಗು ಬಂದಿತ್ತು.....  ಆ ಹಾಡು ಸಂದರ್ಭಕ್ಕೆ   ಸರಿಹೊಂದುತ್ತಿತ್ತು.... ನನ್ನ ಗೆಳೆಯ ನನ್ನನ್ನೇ  ತಿನ್ನುವಂತೆ  ನೋಡುತ್ತಿದ್ದ....ಹಾಡನ್ನು ನಿಲ್ಲಿಸುವಂತೆ ಕೂಗುತ್ತಿದ್ದ...ಪಕ್ಕದಲ್ಲಿದ್ದ ಸೌಂಡ್ ಅರೆಂಜೆರ್ ಹಾಡನ್ನ ನಿಲ್ಲಿಸಿದ್ದ... ಅಷ್ಟಕ್ಕೂ ಪ್ಲೇ ಆದ ಹಾಡು ಯಾವುದು ಗೊತ್ತಾ....?      " WHO LET THE DOG OUT ...... ವೌ......ವೌ.... ವೌ...."

ಇಂದಿಗೂ ಆ ಹಾಡು ಕೇಳಿದರೆ ಇದೆಲ್ಲಾ ನೆನಪಾಗುತ್ತದೆ.....
  ಗೆಳೆಯ ನೆನಪಾಗುತ್ತಾನೆ... ನಗು ಬರುತ್ತದೆ.....