Feb 1, 2011

ಇದೂ ಒಂದು ಬದುಕು....!

ಸಂಜೆಯಾಗಿತ್ತು..... ಇವತ್ತಾದರೂ ಬೇಗ ಮನೆಗೆ ಹೋಗೋಣ ಎಂದುಕೊಂಡು ಮನೆಯತ್ತ ಹೊರಟಿದ್ದೆ..... ಯಾವತ್ತಿನಂತೆ ಎರಡು ಸಿಗ್ನಲ್ ದಾಟಿ ಹೋಗಬೇಕಿತ್ತು.... ಮೊದಲ ಸಿಗ್ನಲ್ ದಾಟಿ ಬಂದಿದ್ದೆ.... ಎರಡನೇ ಸಿಗ್ನಲ್ ಪಾಸ್ ಆಗೊದರಲ್ಲಿದ್ದೆ..... ಬಿದ್ದೇ ಬಿಟ್ಟಿದ್ದು ಕೆಂಪು ಬಣ್ಣ..... ಮೂರು ನಿಮಿಷದ ಪಾಸ್ ಆಗಿತ್ತು ಅದು..... ಬೈಕ್ ಬಂದ್ ಮಾಡಿ ಹೆಲ್ಮೆಟ್ ತೆಗೆದೆ...... ಎಲ್ಲಾ ಸಿಗ್ನಲ್ನಲ್ಲಿ ಇರುವ ಹಾಗೆ, ಅಲ್ಲೂ ಭಿಕ್ಷುಕರ ತಂಡ ಇತ್ತು..... ಅದರಲ್ಲಿ ಒಬ್ಬ ಸಣ್ಣ ಹುಡುಗ, ಪುಟ್ಟ ಹುಡುಗಿಯನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ..... ಹುಡುಗನ ವಯಸ್ಸು ಹೆಚ್ಚೆಂದರೆ ಆರಿರಬಹುದು, ಆತನ ತೋಳಲ್ಲಿದ್ದ ಮಗುವಿಗೆ ಒಂದು ವರ್ಷವೂ ಆಗಿರೋ ಹಾಗೆ ಕಾಣಲಿಲ್ಲ...  ಆತ ನನ್ನ ಕಡೆಗೇ ಬರುತ್ತಿದ್ದ..... ಬಂದವನೇ ನನ್ನ ಪಕ್ಕದ ಬೈಕ್ನಲ್ಲಿದ್ದ ಒಬ್ಬನಿಗೆ ’ ಸರ್, ಎನಾದ್ರೂ ಕೊಡಿ ಸರ್..." ಎಂದ.... ಆತ " ಯಾಕೆ ...? ಶಾಲೆಗೆ ಹೋಗಲ್ವಾ...? ಎಲ್ಲಿ ನಿನ್ನ ಮನೆಯವರೆಲ್ಲಾ....? ಅವರೂ ಇಲ್ಲೇ ಭಿಕ್ಷೆ ಬೇಡ್ತಾ ಇದಾರಾ?... ಎಲ್ಲಿಂದ ಬರ್ತೀರಪ್ಪಾ ನೀವೆಲ್ಲ ..? ’ ಎಂದೆಲ್ಲಾ ಕೊರೆಯುತ್ತಿದ್ದ.... ನನಗೆ ಆ ಹುಡುಗ ಮತ್ತು ಆತ ಎತ್ತಿಕೊಂಡ ಪುಟ್ಟ ಮಗು, ನನ್ನನ್ನು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿತ್ತು......


ರಸ್ತೆ ಕಾಮಗಾರಿ ಸಲುವಾಗಿ ಸರ್ವೆ ಮಾಡುತ್ತಿದ್ದೆವು......  ಸುಮಾರು ಹತ್ತು ಘಂಟೆಯ ಸಮಯವಾಗಿತ್ತು..... ನನ್ನ್ ಜೊತೆ ಸುಮಾರು ಹತ್ತು ಜನ ಕೆಲಸಗಾರರಿದ್ದರು.... ಒಬ್ಬ ಹುಡುಗ , ಸಣ್ಣ ಹುಡುಗಿಯನ್ನು ಎತ್ತಿಕೊಂಡು ಬಂದ.... " ಸರ್, ಏನಾದರು ಕೆಲ್ಸ ಇದ್ರೆ ಕೊಡಿ.." ಎಂದ... ಹುಡುಗನಿಗೆ ಹತ್ತು ವರ್ಷವಿರಬಹುದು...ಆತನ ಕೈಯಲ್ಲಿ ನಾಲ್ಕೈದು ತಿಂಗಳ ಮಗುವಿತ್ತು...... ಮಗುವಿಗೆ ಹಸಿವೆಯಾಗಿತ್ತು ಎನಿಸುತ್ತದೆ...... ಅಳಲು ಶುರು ಮಾಡಿತ್ತು..... ನನ್ನ ಸಂಗಡ ಇದ್ದ ಕೆಲಸಗಾರರು ಆತನನ್ನು ಓಡಿಸಲು ಬಂದರು..... ನಾನು " ಹೇಯ್, ನೀನ್ಯಾಕೆ ಇಲ್ಲಿದ್ದೀಯಾ...? ನೀನು ಶಾಲೆಗೆ ಹೋಗಲ್ವಾ...? ನಿನಗೆಲ್ಲಾ ಕೆಲಸ ಕೊಡಕ್ಕೆ ಆಗಲ್ವಪ್ಪಾ.... " ಎಂದೆ.... ಹುಡುಗ " ಸರ್, ನನ್ ತಂಗಿ ಅಳ್ತಾ ಇದ್ದಾಳೇರಿ.... ಅವಳಿಗೆ ಎನಾದರೂ ತಿನ್ನಿಸಬೇಕು, ಕೆಲ್ಸ ಎನಾದರೂ ಕೊಡ್ರೀ.... ಸ್ವಲ್ಪ ಹಣ ಕೊಡಿ... ಅದರಲ್ಲಿ ನನ್ ತಂಗೀಗೆ ತಿನ್ಲಿಕ್ಕೆ ತೆಗೆದು ಕೊಡುತ್ತೇನೆ" ಅಂದ.... ’ ಹಾಗೆಲ್ಲಾ ಕೆಲಸ ಕೊಡಲು ಆಗಲ್ಲಪ್ಪಾ... ನಿನ್ನ ಅಪ್ಪ ಅಮ್ಮ ಎಲ್ಲಿ..? ಎಂದೆ...... ಜೊತೆಯಲ್ಲಿದ್ದ ಕೆಲಸಗಾರರು ನಗಲು ಶುರು ಮಾಡಿದರು..... ಆ ಹುಡುಗನ ಕಣ್ಣಲ್ಲಿ ನೀರು ..... ಆತ ಮುಖ ಕೆಳಗೆ ಹಾಕಿದ..... ಜೊತೆಯಲ್ಲಿದ್ದ ಕೆಲಸಗಾರನೊಬ್ಬ " ಎಯ್ ಬಿಡ್ರೀ ಸರ್.... ಅಲ್ಲಿ ನೋಡ್ರಿ ಇವರನ್ನು ಭಿಕ್ಷೆ ಬೇಡಲು ಬಿಟ್ಟು , ಇವರ ತಾಯಿ ಅಲ್ಲಿ ನೋಡ್ತಾ ಇದಾಳೆ ನೋಡಿ" ಎಂದು ದೂರದ ಕಡೆ ಕೈ ತೋರಿಸಿದ.... ಆ ಹುಡುಗ ’ ನಿಮ್ಮ ದುಡ್ಡೂ ಬೇಡ, ನಿಮ್ಮ ಕೆಲಸಾನೂ ಬೇಡ’ ಎನ್ನುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋದ.... ಆ ಪುಟ್ಟ ಮಗು ಜೋರಾಗಿ ಅಳಲು ಶುರು ಮಾಡಿದ್ದಳು.... ನಾನು ಎನಾದರು ದುಡ್ಡು ಕೊಡೋಣ ಎಂದು ಕಿಸೆಗೆ ಕೈ ಹಾಕಿದೆ..... ಜೊತೆಯಲ್ಲಿನ ಕೆಲಸಗಾರನೊಬ್ಬ " ಅವನಿಗೆ ಅಪ್ಪ ಯಾರಂದೇ ಗೊತ್ತಿಲ್ಲ.... ಹೆತ್ತು ರಸ್ತೆ ಮೇಲೆ ಬಿಡುತ್ತಾರೆ... ಮಕ್ಕಳು ಹೀಗೆ ಭಿಕ್ಷೆ ಬೇಡುತ್ತಾ ಜೀವನ ಮಾಡ್ತಾರೆ.... " ಎಂದ.... ನನಗೆ ಅರ್ಥ ಆಗಲಿಲ್ಲ..... " ಎನಾಯ್ತಪ್ಪ." ಎಂದೆ..... " ನಿಮಗೆ ಗೊತ್ತಿಲ್ಲ ಸರ್, ಅಲ್ಲಿ ನೋಡಿ, ಅಲ್ಲಿ ಆ ಹುಡುಗನ ಅಮ್ಮ ನಿಂತಿರ್ತಾಳೆ... ಸುಮಾರು ಜನ ಲಾರಿ ಡ್ರೈವರ್ ಗಳು  ಅವಳ ಜೊತೆ ಮಜಾ ಮಾಡಿ ದುಡ್ಡು ಕೊಟ್ಟು ಹೋಗ್ತಾರೆ... ಅದರಲ್ಲೇ ಅವರ ಜೀವನ.... ಇವರು ಮಾಡೊ ಪಾಪದ ಕೆಲಸಕ್ಕೆ ತಪ್ಪೇ ಮಾಡದ ಈ ಮಕ್ಕಳು  ಭೂಮಿಗೆ ಬಂದು ಕಷ್ಟ ಅನುಭವಿಸುತ್ತವೆ....ಎಲ್ಲರ ನಿಷ್ಟುರ ಬಾಯಿಗೆ ಆಹಾರವಾಗುತ್ತಾರೆ" ಎಂದ..... ನನಗೆ ಅಯ್ಯೋ ಎನಿಸಿತು..... ಆ ಹುಡುಗ ತನ್ನ ಅಮ್ಮನ ಕಡೆಗೆ ಓಡುತ್ತಿದ್ದ... ಆ ಹೆಂಗಸು ಹರಕಲು ಸೀರೆ ಉಟ್ಟಿದ್ದಳು... ಹತ್ತಿರ ಬಂದ ಮಗನಿಂದ ಅಳುತ್ತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದಳು.... ಆ ಹುಡುಗ ಅವಳ ಕೈಯನ್ನು ದೂರ ತಳ್ಳಿ ಮುಂದಕ್ಕೆ ಹೋದ..... 

ನಾನು ಗಮನಿಸುತ್ತಲೇ ಇದ್ದೆ.... ಆ ಹುಡುಗ ತನ್ನ ಅಮ್ಮನ ಹತ್ತಿರ ಮಾತನಾಡುತ್ತಿರಲಿಲ್ಲ.....ಪುಟ್ಟ ಕೂಸಿನ ಅಳು ಜೋರಾಗಿತ್ತು..... ಅದನ್ನು ನೋಡಿ ಆ ಅಮ್ಮನಿಗೂ ಅಳು ಬಂದಿತ್ತು ಎನಿಸುತ್ತದೆ..... ಅವಳೂ ಮರದ ಕೆಳಗೆ ಹೋಗಿ ಕುಳಿತು ಮುಖ ಮುಚ್ಚಿಕೊಂಡಳು.... ಅಷ್ಟರಲ್ಲಿ ಒಂದು ಲಾರಿ ಅವರ ಪಕ್ಕದಲ್ಲಿ ನಿಂತಿತು....ಆ ಹುಡುಗ ಓಡಿ ಹೋಗಿ ಡ್ರೈವರ್ ಹತ್ತಿರ ದುಡ್ಡು ಕೇಳಿದ.... ಆತನ ಧ್ಯಾನವೆಲ್ಲಾ ಮರದ ಕೆಳಗೆ ಕುಳಿತ ಹೆಂಗಸಿನ ಮೇಲಿತ್ತು...... ಆತನಿಗೆ ಅಳುತ್ತಿದ್ದ ಮಗುವಾಗಲಿ, ಅವಳ ಹಸಿವೆಯಾಗಲಿ ಕಾಣಿಸಲೇ ಇಲ್ಲ.... ಹುಡುಗ ಕೈಯೊಡ್ಡಿ ನಿಂತಿದ್ದ..... ಡ್ರೈವರ್ ಅವರ ಕಡೆ ನೋಡದೇ ಸೀದಾ ಹೆಂಗಸಿನ ಹತ್ತಿರ ಹೋದ..... ಆ ಹುಡುಗ ತನ್ನ ಹಣೆಬರಹಕ್ಕೆ ಸೋತು ನಮ್ಮೆಡೆಗೆ ನಡೆದು ಬಂದ..... ನಾನು ನಮ್ಮ ಕೆಲಸಗಾರರ ಕೈಲಿ ಹಣ ಕೊಟ್ಟು ಹಾಲು ಮತ್ತು ಬಿಸ್ಕಟ್ ತರಲು ಹೇಳಿ ಕಳಿಸಿದೆ....

ಆ ಹೆಂಗಸು ಬಂದ ಡ್ರೈವರ್ ಹತ್ತಿರ ಹಣ ಕೇಳುತ್ತಿದ್ದಳು.... ಆಕೆ ತನ್ನ ಮಗನ ಕಡೆ ಕೈ ತೋರಿಸಿ ಎನೋ ಹೇಳುತ್ತಿದ್ದಳು..... ಆತ ಅವಳ ಮಾತಿಗೆ ಒಪ್ಪುವ ಹಾಗೆ ಕಾಣುತ್ತಿರಲಿಲ್ಲ..... ಆಕೆ ತನ್ನ ದೇಹ ಮಾರಾಟಕ್ಕೂ ಮೊದಲೇ ಹಣ ಕೇಳುತ್ತಿದ್ದಳು ಎನಿಸುತ್ತದೆ.... ಆದರೆ ಆತ ಒಪ್ಪುತ್ತಿರಲಿಲ್ಲ..... ಆಕೆ ಅಳುತ್ತಲೇ ಗಿಡಗಳ ಮರೆಯಲ್ಲಿನ ಡೇರೆಗೆ ಆತನನ್ನು ಕರೆದುಕೊಂಡು ಹೋದಳು.... ಇಲ್ಲಿ, ಹುಡುಗ ನಿಧಾನವಾಗಿ ತನ್ನ ತಂಗಿಗೆ ಬಾಟಲಿಯಲ್ಲಿ ತಂದಿದ್ದ ಹಾಲನ್ನು ಕುಡಿಸುತ್ತಿದ್ದ.... ಬಿಸ್ಕೇಟ್ ತಿನ್ನಿಸುತ್ತಿದ್ದ..... ಮದ್ಯೆ, ಮದ್ಯೆ ನನ್ನ ಕಡೆ ನೋಡಿ ನಗು ತೋರಿಸುತ್ತಿದ್ದ.... ಆ ಮಗು ನಗು ನಗುತ್ತಾ ಹಾಲು ಕುಡಿಯುತ್ತಿತ್ತು...... ಇದೇ , ಇದೇ ...ಇದೇ  ಒಂದು ಮಗುವಿನ ನಗುವಿಗಾಗಿ ಆ ತಾಯಿ ತನ್ನ ದೇಹ ಮಾರಾಟಕ್ಕಿಳಿದ್ದಾಳೆ...... ಇದನ್ನ ಬಿಟ್ಟು ಅವಳಿಗೆ ಬೇರೆ ದಾರಿಯೇ ಇರಲಿಲ್ಲ ಅನಿಸುತ್ತದೆ..... ಆಕೆ ಎಲ್ಲಿ, ಏನೇ ಕೆಲಸ ಮಾಡಲು ಹೋದರೂ ಜನ ಆಕೆಯನ್ನು ಕೆಟ್ಟ ದ್ರಷ್ಟಿಯಿಂದಲೇ ನೋಡುತ್ತಾರೆ..... ಆಕೆ ಒಂದು ಗುಟುಕು ಜೀವಕ್ಕಾಗಿ, ಹಾಳು ಹೊಟ್ಟೆಯ ಹಸಿವೆಗಾಗಿ, ಯಾವನದೋ ಎರಡು ತೊಟ್ಟು ಕೆಟ್ಟ ಹನಿಯಿಂದ ಭೂಮಿಗೆ ಬಂದ ಜೀವದ ಖುಶಿಗಾಗಿ..... ಮತ್ತದೇ ದೇಹವನ್ನು ಇನ್ನೊಬ್ಬನಿಗೆ ಹಾಸಬೇಕು....

ಡ್ರೈವರ್, ತನ್ನ ಚಟ ತೀರಿಸಿಕೊಂಡು ಹೊರಟು ಹೋದ... ಆ ಹೆಂಗಸು, ಓಡುತ್ತಾ ಹೋಗಿ ಕೈಯಲ್ಲಿದ್ದ ಹಣದಿಂದ ಬಿಸ್ಕೇಟ್ ,ಹಾಲು ತೆಗೆದುಕೊಂಡು ಬಂದಳು..... ಬಂದವಳೇ..... ಮಗನ ಕಾಲ ಮೇಲೆ ಮಲಗಿ ನಿದ್ದೆ ಹೋದ ಪುಟ್ಟ ಮಗಳನ್ನು ನೋಡಿ ಅವಳ ಮುಖದಲ್ಲಿ ಸಂತ್ರಪ್ತಿ ಮೂಡಿತು..... ತನ್ನ ಕೈಯಲ್ಲಿದ್ದ ಬಿಸ್ಕೇಟ್ ಮತ್ತು ಹಾಲನ್ನು ಮಗನಿಗೆ ಕೊಡಲು ಹೋದಳು..... ಆ ಹುಡುಗ ಅಮ್ಮನ ಕೈಯಲ್ಲಿನ ಬಿಸ್ಕೆಟ್, ಹಾಲನ್ನು ಮತ್ತು ಅವಳ ಮುಖವನ್ನು ನೋಡಿದ..... ರಸ್ತೆಯಲ್ಲಿ ನಿಂತಿದ್ದ ಲಾರಿಯನ್ನು ಒಮ್ಮೆ ನೋಡಿ, ಅಮ್ಮನ ಕೈಯಲ್ಲಿದ್ದ ತಿಂಡಿ ತೆಗೆದುಕೊಂಡು ಬಿಸಾಡಿಬಿಟ್ಟ......

"ಕೀಯ್... ಪೀಯ್......" ಎಂಬ ಶಬ್ಧದಿಂದ ವಾಸ್ತವಕ್ಕೆ ಬಂದಿದ್ದೆ...... ಇನ್ನೂ ರೆಡ್  ಸಿಗ್ನಲ್ ಇತ್ತು...ನಾನು ಈ ಎಲ್ಲಾ ವಿಚಾರದಲ್ಲಿ ಸಿಗ್ನಲ್ ಜಂಪ್ ಮಾಡಿಬಿಟ್ಟಿದ್ದೆ...
ಮುಂದೆ ಬಂದಾಗ ನಿಸ್ತೇಜ ಕಣ್ಣಿನ  ಹುಡುಗ ....!...."ಅಣ್ಣಾ... ಬೆಳಗಿನಿಂದ ಏನೂ ತಿಂದಿಲ್ಲ...ಹತ್ತು ರುಪಾಯಿ ಕೊಡು ಅಣ್ಣಾ..."

ನಾನು ಪರ್ಸ್ ತೆಗೆದೆ.. .....ಅದರಲ್ಲಿ ಇದ್ದದ್ದು ಎಲ್ಲಾ ನೂರರ ನೋಟು......ನನಗೆ ನೆನಪಾಗಿದ್ದು..... ಹತ್ತು ವರ್ಷದ ಹಿಂದಿನ ಆ ಹುಡುಗನ ಅಮ್ಮನ ಅಸಹಾಯಕತೆ........ಐವತ್ತು ರುಪಾಯಿ ಕೊಟ್ಟುಬಿಡೋಣ ಅಂದುಕೊಂಡೆ.......ಪರ್ಸ್ ಹುಡುಕಿದೆ....ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಬಂದ......"ನೋಡಿ ಸರ್... ಏನೋ ಅರ್ಜಂಟ್ ಇತ್ತು......ಸ್ವಲ್ಪ ಅಡ್ಜಸ್ಟ್ ಮಾಡಿ.."...ನಾನು ಗೋಗರೆದೆ..."ಅಲ್ಲಾರೀ...ವಿದ್ಯಾವಂತರಾದ ನಿಮಗೇ ಅರ್ಥ ಆಗಲ್ವಾ ಸಿಗ್ನಲ್ ಇದ್ದದ್ದು...? ಕೇಸ್ ಹಾಕ್ಲಾ...? ಇಲ್ಲಾ... ಐವತ್ತು ಕೊಡಿ....ಇನ್ನು ಮುಂದೆ ಹೀಗೆಲ್ಲ ಮಾಡ ಬೇಡಿ..."ನಾನು ತಲೆ ಅಲ್ಲಾಡಿಸಿ... ಮತ್ತೆ ಪರ್ಸ್ ಹುಡುಕಿದೆ...... ಐವತ್ತರ ನೋಟು ಸಿಕ್ಕಿತು.. ಪೊಲೀಸನಿಗೆ ಕೊಟ್ಟೆ...
ಹುಡುಗ ಮತ್ತೆ ನನ್ನ ಕಾಲು ಮುಟ್ಟಿದ..
ನನಗಿನ್ನೂ ಐವತ್ತು ರುಪಾಯಿಕೊಟ್ಟ ತಲೆಬಿಸಿ ಇತ್ತು......

ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಒಂದು ರುಪಾಯಿಯ ನಾಣ್ಯ ಸಿಕ್ಕಿತು... ... ಹುಡುಗನಿಗೆ ಕೊಟ್ಟೆ...
"ನೋಡು.... ಬಿಕ್ಷೆ ಬೇಡಬೇಡ.......ಎಲ್ಲಾದರು ಕೆಲಸ ಹುಡುಕಿ ದುಡಿದು ತಿನ್ನು.." ಅಂದೆ....
ಹುಡುಗ ನನ್ನ ಮುಖವನ್ನೂ, ಪೋಲಿಸಿನ ಕೈಯಲ್ಲಿದ್ದ ಐವತ್ತು ರುಪಾಯಿಯನ್ನೂ ನೋಡುತ್ತಿದ್ದ....

ನಾನು ಸಿಟ್ಟಿನಿಂದ ಬೈಕ್ ಸ್ಟಾರ್ಟ್ ಮಾಡಲು ಕಿಕ್ ಹೊಡೆದೆ..... ಸಿಟ್ಟು ಯಾರ ಮೇಲೋ ತಿಳಿಯಲಿಲ್ಲ.......