Apr 27, 2011

ಸಿಡಿಲು......!

ತುಂಬಾ ದಿನದಿಂದ ಕೆಟ್ಟುಹೋಗಿದ್ದ ಫೋನು ರಿಂಗಾಗುತ್ತಿತ್ತು..... ಬೇಗನೆ ಬಂದು " ಹಲೋ...." ಎಂದೆ....ಅತ್ತಲಿಂದ " ಅಮ್ಮಾ , ನಾನಮ್ಮಾ.... ರಾಜು " ಅಂದಿತು ಧ್ವನಿ..... ’ ನನ್ನ ಮಗ ರಾಜು... ಸುಮಾರು ದಿನದ ನಂತರ ಫೋನ್ ಮಾಡಿದ್ದ...... " ರಾಜು, ಎಲ್ಲಿದ್ದೀಯಾ...? ಹೇಗಿದ್ದೀಯಾ....? ಯಾಕೆ ಫೋನ್ ಮಾಡಲಿಲ್ಲ ಇಷ್ಟು ದಿನ...? ನೀನು ಆರಾಮಿದ್ದೀಯಾ ತಾನೆ.... ? ಯಾವಾಗ ಮನೆಗೆ ಬರೋದು...?" ನನ್ನ ಪ್ರಶ್ನೆ ಮುಗಿದಿರಲಿಲ್ಲ..... ರಾಜು ಮಧ್ಯದಲ್ಲೇ ಬಾಯಿ ಹಾಕಿದ....." ಅಮ್ಮ, ನಾನು ಚೆನ್ನಾಗಿದ್ದೇನೆ..... ಒಂದು ವಿಷಯ ಹೇಳುತ್ತೇನೆ.. ಗಮನ ಇಟ್ಟು ಕೇಳು.... ನೀನು ಯಾರನ್ನು ಜನ್ಮಪೂರ್ತಿ ದ್ವೇಷ ಮಾಡ್ತೀಯೋ, ನಾನು ಆತನಿಗೆ ಹುಟ್ಟಿದ್ದು ಅಂತ ನನ್ನನ್ನು ದೂರ ಇಟ್ಟಿದ್ದೆಯೋ, ಆತನ ವಿಳಾಸ ಪತ್ತೆ ಮಾಡಿದ್ದೇನೆ....." ನನ್ನ ಮೈ ನರಗಳೆಲ್ಲಾ ಬಿಗಿಯಾದವು.... ಕೆನ್ನೆಯ ಬಳಿ ಬೆವರೊಂದು ಜಾರಿದಂತಾಯಿತು...... " ಅಮ್ಮಾ, ನೀನು ಇಂದೇ ಹೊರಟು ಬಾ.... ನಿನಗಾಗಿಯೇ ಒಂದು ರಿವಾಲ್ವರ್ ಖರೀದಿ ಮಾಡಿದ್ದೇನೆ..... ಆತ ನಾಳೆ ಸಿಕ್ಕೇ ಸಿಗುತ್ತಾನೆ....ಅಲ್ಲೇ ಆತನನ್ನು ಸಾಯಿಸೋಣ.... ಇವತ್ತು ರಾತ್ರಿಯ ಬಸ್ ಗೆ ಬಾ.... ನಾನೇ ನಿನ್ನನ್ನು ಬಸ್ ಸ್ಟಾಂಡ್ ಗೆ ಬಂದು ಕರೆದುಕೊಂಡು ಹೋಗುತ್ತೇನೆ....ನನ್ನ ನಿನ್ನ ನೋವಿನ ದಿನಗಳು, ನಿನ್ನ ಅವಮಾನ, ಹತಾಶೆಗೊಂದು ಕೊನೆಗಾಣಿಸೋಣ.... ಬಾರಮ್ಮಾ..." ಎಂದ ಮಗ ನಡುಗುವ ದನಿಯಿಂದ..... ನನ್ನ ದನಿ ಸಿಟ್ಟಿನಿಂದ ಬುಸುಗುಡುತ್ತಿತ್ತು........... " ಆಯ್ತು" ಎಂದಷ್ಟೆ ಹೇಳಿ ಫೋನ್ ಕಟ್ ಮಾಡಿದೆ.... ಮನಸ್ಸು ಮೂವತ್ತು ವರ್ಷ ಹಿಂದಕ್ಕೆ ಓಡಿತು.........

         ಬಡತನದಲ್ಲಿ ಹುಟ್ಟಿದ ನನಗೆ ಯಾರ ಆಸರೆಯೂ ಇರಲಿಲ್ಲ.... ಹುಟ್ತುತ್ತಲೇ ಅಮ್ಮ ಸತ್ತಿದ್ದಳು... ಅಪ್ಪ ಬೇರೆ ಮದುವೆಯಾಗಿದ್ದ.... ಮಲತಾಯಿಯ ಕಾಟ ತಾಳದೆ ಬೇರೆ ವಿಧಿ ಇರಲಿಲ್ಲ.... ಆಟ ಊಟದಲ್ಲಿ ಮುಂದಿದ್ದೆನೆ ಹೊರತು ಓದು ತಲೆಗೆ ಹತ್ತಲೇಇಲ್ಲ..... ಹದಿನೆಂಟು ತುಂಬುವ ಮೊದಲೇ ಮದುವೆಗೆ ತಯಾರಿ ನಡೆದಿತ್ತು..... ಮದುವೆ ಎಂದರೆ ಏನು ಎಂದು ಅರ್ಥವಾಗುವ ಮೊದಲೇ ಮದುವೆ ಮುಗಿದಿತ್ತು.......ಪರಿಚಯದವರೊಬ್ಬರ ಮೂಲಕ ಮದುವೆ ನಡೆದಿತ್ತು... ಮದುವೆಯಾದ  ಮನುಷ್ಯನಿಗೆ ನನಗಿಂತ ಎರಡು ಪಟ್ಟು ವಯಸ್ಸಾಗಿತ್ತು.... ಮದುವೆಯಾದ ದಿನವೇ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೊರಟಿದ್ದ....
ಮಲತಾಯಿಯ ಮುಷ್ಟಿಯಿಂದ ತಪ್ಪಿಸಿಕೊಂಡರೆ ಸಾಕೆಂದು ನಾನೂ ಖುಶಿಯಿಂದಲೇ ಹೊರಟಿದ್ದೆ...... ಪ್ರಯಾಣದ ಮಧ್ಯೆ ರಾತ್ರಿಯಾಯಿತೆಂದು ಒಂದು ಹೊಟೆಲ್ ನಲ್ಲಿ ಉಳಿದುಕೊಂಡೆವು.... ಕಟ್ಟಿಸಿಕೊಂಡು ತಂದಿದ್ದ ಊಟ ಮುಗಿಸಿದವಳಿಗೆ ನಿದ್ರೆ ಬರುತ್ತಿತ್ತು..... ಎಲ್ಲಿಂದಲೋ ತಂದ ಮಲ್ಲಿಗೆಯನ್ನು ಮುಡಿಯಲು ಕೊಟ್ಟ...
ಮೊದಲ ಬಾರಿಗೆ ಮಲ್ಲಿಗೆ ಮುಡಿದಿದ್ದೆ.....  ಮಲ್ಲಿಗೆಯ ಸುಮಧುರ ಪರಿಮಳಕ್ಕೆ ಮನಸ್ಸು ಅರಳಿತ್ತು..... ಮದುವೆ ಎನ್ನೋದನ್ನ ಆದ ಮನುಷ್ಯ ’ ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ’ ಎಂದು ಹೊರಗೆ ಹೋದ.... ಹೋಗುವಾಗ ಕೊಠಡಿಯಲ್ಲಿದ್ದ ಬೆಳಕನ್ನು ಆರಿಸಿ, ಹೊರಗಿನಿಂದ ಚಿಲಕ ಹಾಕಿಯೇ ಹೋದ..... ನನಗೂ ಸುಸ್ತಾಗಿತ್ತು... ಜೊಂಪು ಹತ್ತಿತು....


      
  ಮಧ್ಯರಾತ್ರಿಯಾಗಿರಬಹುದು..... ಮೈ ಮೇಲೆ ಏನೋ ಹರಿದಂತಾಗಿ ಎಚ್ಚರವಾಯಿತು.... ಪಕ್ಕದಲ್ಲಿ ಯಾರೋ ಮಲಗಿದ್ದರು... "ಯಾರದು " ಎಂದೆ ಗಾಬರಿಯಿಂದ... ಆತ ಮಾತನಾಡಲಿಲ್ಲ..... ನನ್ನನ್ನು ಮದುವೆಯಾದವನೇ ಇರಬೇಕು ಎಂದುಕೊಂಡೆ..... ನಾನು ಮಗ್ಗಲು ಬದಲಿಸಿ ಮಲಗಿದೆ.... ಸ್ವಲ್ಪ ಹೊತ್ತಿನಲ್ಲೇ ಆತ ನನ್ನ ಮೈ ಮೇಲೆ ಕೈ ಹಾಕಿದ..... ನಾನು ಎದ್ದು ಕುಳಿತೆ.... ಯಾವ ಗಂಡಸಿನ ಕೈ ಸೋಕಿರದೇ ಇದ್ದ ನನ್ನ ಮೈ, ಇಂದು ಈತನ ಸ್ಪರ್ಶಕ್ಕೆ   ತುಂಬಾ ಹೆದರಿತ್ತು.... ಹಾಸಿಗೆಯಿಂದ ಕೆಳಗಿಳಿಯಲು ಹೋದೆ..... ಆತ ಎದ್ದವನೇ ನನ್ನನ್ನು ಬಿಗಿಯಾಗಿ ಹಿಡಿದ....ಬಲಿಷ್ಟವಾದ ಮೈ ಕಟ್ಟು ಆತನದು..... ನನಗೆ ಅನುಮಾನ ಆಯಿತು..... ನರಪೇತಲನಾಗಿದ್ದ ನನ್ನ ಮದುವೆಯಾದವನೆಲ್ಲಿ...? ಬಲಿಷ್ಟನಾದ ಈತನೆಲ್ಲಿ...? ಬಿಡಿಕೊಳ್ಳಲು ಪ್ರಯತ್ನ ಪಟ್ಟೆ.... ಕೂಗಿಕೊಂಡೆ..." ಯಾರು ನೀನು.... ಬಿಟ್ಟು ಬಿಡು ನನ್ನ... ನನ್ನ ಗಂಡನನ್ನು ಕರೆಯುತ್ತೇನೆ...." ಎಂದೆ.... ಆತ ದೊಡ್ದದಾಗಿ ನಗೆಯಾಡುತ್ತಾ " ಎಲ್ಲಿ ನಿನ್ನ ಗಂಡ.... ನಿನ್ನನ್ನು ಐದು ಸಾವಿರಕ್ಕೆ ನನಗೆ ಮಾರಿ ಹೋಗಿದ್ದಾನೆ ಆತ... ಮತ್ತೆಲ್ಲಿ ಬರುತ್ತಾನೆ ಅವ.....ಮೂಗಿನ ಮಟ್ಟ ಕುಡಿದು ಮಲಗಿರುತ್ತಾನೆ.." ಎಂದ..... ನನಗೆ ಸಿಡಿಲು ಬಡಿದ ಹಾಗಾಯಿತು.... ಮದುವೆ ಎಂದರೇನು ಎಂದು ತಿಳಿಯದ ವಯಸ್ಸಿಗೆ ಮದುವೆಯಾಗಿ, ಗಂಡನೆಂಬ ಮನುಷ್ಯನ ಸ್ಪರ್ಶ ಅನುಭವಿಸದೇ , ಪರಿಚಯವೇ ಇರದ ಮುಖವಿಲ್ಲದ ಗಂಡಸಿಗೆ ಆಹಾರವಾಗುತ್ತಿದ್ದೆ.... ತಪ್ಪಿಸಿಕೊಳ್ಳುವ ನನ್ನ ಪ್ರಯತ್ನ ಪ್ರತಿ ನಿಮಿಷದಲ್ಲೂ ವಿಫಲವಾಗುತ್ತಿತ್ತು..... ನನ್ನನ್ನು ಬಳಸಿಕೊಳ್ಳುತ್ತಿದ್ದ ಮನುಷ್ಯನ ಮುಖವನ್ನು ಕೊಠಡಿಯಲ್ಲಿನ ಕತ್ತಲು ಮರೆ ಮಾಚಿತ್ತು.... ಚಿಕ್ಕ ಹುಡುಗಿಯೆಂಬ ಸಣ್ಣ ಕನಿಕರವೂ ಇಲ್ಲದೇ, ನನ್ನ ಬಾಯಿಯನ್ನು ತನ್ನ ಕೈಯಿಂದ ಬಿಗಿಯಾಗಿ ಹಿಡಿದು , ನನ್ನನ್ನು ತನ್ನಿಷ್ಟ ಬಂದ ಹಾಗೆ ಹುರಿದು ತಿಂದ ಮನುಷ್ಯನ ಮೇಲೆ ಕೊಂದು ಹಾಕುವ ಸಿಟ್ಟು ಬರುತ್ತಿತ್ತು..... ಆತನ ಬಲಿಷ್ಟ ದೇಹದ ಎದುರು ನನ್ನದು ಗುಬ್ಬಿ ಪಾಡಾಗಿತ್ತು.... ಬಂದ ಕೆಲಸ ಮುಗಿಸಿ ಆತ ಹೊರಡಲು ಎದ್ದು ನಿಂತ.... ಹೊರಗಡೆ ಜೋರಾಗಿ ಸಿಡಿಲು ಹೊಡೆಯಿತು.... ಸಿಡಿಲಿನ ಬೆಳಕಿಗೆ ಆತನ ಮುಖ ಕಂಡಿತು...... ಅದೇ ಮುಖ ನನ್ನಲ್ಲಿ ಅಚ್ಚಳಿಯದೇ ಉಳಿಯಿತು....... ಬಿಟ್ಟುಬಿಡೆಂದು ಕೈಮುಗಿದರೂ, ಕೂಗಿದರೂ ಬಿಡದೆ, ಕೊಟ್ಟ ಜುಜುಬಿ ಹಣಕ್ಕಾಗಿ ನನ್ನ ಮೈ ಮನಸ್ಸಿನ ಮೇಲೆ ಗಾಯ ಮಾಡಿದ ಆತನ ಮುಖ ನನ್ನ ಕಣ್ಣಲ್ಲೇ ನಿಂತಿತ್ತು..... ಅಷ್ಟರಲ್ಲೇ ನನ್ನ ಪ್ರಜ್ನೆ ತಪ್ಪಿತ್ತು............

        ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದು ಅಪ್ಪನ ಮನೆಗೆ ಬಂದೆ..... ನನ್ನ ಪರಿಸ್ಥಿತಿ ಮಲತಾಯಿಗೂ ಕನಿಕರ ತಂದಿತ್ತು.... ಆಕೆ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು..... ನಿದ್ರೆಯಲ್ಲೂ ಆತನ ಮುಖ ನೆನಪಿಗೆ ಬಂದು ಎದ್ದು ಬಿಡುತ್ತಿದ್ದೆ.... ಆತ ನೆನಪಿಗೆ ಬಂದಷ್ಟೂ ನನ್ನ ಸಿಟ್ಟು ಹೆಚ್ಚಾಗುತ್ತಿತ್ತು..... ಆತನ ಕರ್ಮದ ಫಲ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಗೊತ್ತಾಗಿ, ಬೇಡವಾದ ಗರ್ಭವನ್ನು ಸಾಯಿಸಲು ಎನೆಲ್ಲಾ ತಿಂದೆ.... ಗಟ್ಟಿ ಪಿಂಡ ಬದುಕಿಬಿಟ್ಟ... ಹೆರಿಗೆಯಾದ ದಿನ ಮಗುವನ್ನು ನನ್ನ ಬಳಿ ತಂದು " ಗಂಡು" ಎಂದರು ಅಪ್ಪ.... ನಾನು ತಲೆಯೆತ್ತಿ ನೋಡಿದೆ.... ಮತ್ತೆದೇ ಸಿಡಿಲು ಬಡಿದ ಅನುಭವ..... ಅದೇ ಮೂಗು, ಅದೇ ಬಾಯಿ, ಅದೇ ಕಣ್ಣು..... ಯಾವ ಮನುಷ್ಯ ನನ್ನ ಮೈ, ಮನಸ್ಸನ್ನು ಅರೆಗಳಿಗೆಯ ಸುಖಕ್ಕೆ ದುಡ್ಡು ಕೊಟ್ಟು ಖರೀದಿಸಿ ತನ್ನ ತೀಟೆ ತೀರಿಸಿಕೊಂಡು ಹೋಗಿದ್ದನೋ ಆತನದೇ ಎಲ್ಲಾ ಪಡಿಯಚ್ಚು.....  ಆತನನ್ನೇ ಹೋಲುವ ಮಗನನ್ನೂ ನಾನು ದ್ವೇಷಿಸಲು ಶುರು ಮಾಡಿದರೂ ಆತ ನನ್ನದೇ ರಕ್ತ ಹಂಚಿಕೊಂಡು ಹುಟ್ಟಿದ್ದಾನೆ ಎನಿಸುತ್ತಿತ್ತು....... ನಾನು ಆತನನ್ನು ಎಷ್ಟೇ ಪ್ರೀತಿಯಿಂದ ನೋಡಿಕೊಂಡರೂ ಆತನ ಹುಟ್ಟಿಗೆ ಕಾರಣನಾದವ ನೆನಪಿಗೆ ಬಂದರೆ ನಾನು ಕಾಳಿಯಾಗುತ್ತಿದ್ದೆ.......... ಅದಕ್ಕೇ ಅಪ್ಪ, ನನ್ನ ಮಗನನ್ನು   ವಸತಿ ಸೌಲಭ್ಯ ಇರುವ ಶಾಲೆಗೆ ಕಳಿಸಿಕೊಟ್ಟಿದ್ದರು....


                          
         ಎಷ್ಟಾದರೂ ನನ್ನ ಹೊಟ್ಟೆಯಲ್ಲಿ ಬೆಳೆದವ, ನನ್ನ ರಕ್ತ ಹಂಚಿಕೊಂಡವ.... ಮಗ ದೂರ ಇದ್ದಾಗ ಅವನನ್ನು ನೋಡಲು ಕಾತರಿಸಿದ್ದೆ.... ರಜೆಗೆಂದು ಮನೆಗೆ ಬರುವನೆಂದು ಕೇಳಿದಾಗ ಯಾವಾಗ ನೋಡುವೆನೆಂದು ಕಾದೆ.... ಹತ್ತನೆಯ ತರಗತಿ ಮುಗಿಸಿ ಬರುವವನಿದ್ದ..... ಸಂಜೆಯಾಗಿತ್ತು...... ನನ್ನ ಅಪ್ಪನ ಜೊತೆ ನಡೆದು ಬರುತ್ತಿದ್ದ..... ನಾನೂ ಖುಷಿಯಿಂದಲೇ ಅವನತ್ತ ಹೋದೆ..... ಅವನಿಗೂ ಇದು ಆಶ್ಚರ್ಯ ತಂದಿರಬೇಕು.... ಸಂತೋಷದಿಂದ ನಕ್ಕ..... ಅದೇ ಸಿಡಿಲು ಹೊಡೆದ ಅನುಭವ..... ತನ್ನ ಕ್ಷಣಿಕ ಸುಖ ಉಂಡು , ನನ್ನನ್ನು ಹುರಿದು ಮುಕ್ಕಿ ನಕ್ಕ ಆತನ ಮುಖ ನೆನಪಿಗೆ ಬಂತು......ಮಗನನ್ನು ದೂರತಳ್ಳಿಬಿಟ್ಟೆ...... ಅತ ಬಿದ್ದುಬಿಟ್ಟ..... ಅಪ್ಪನಿಗೆ ಎಲ್ಲಿತ್ತೋ ಸಿಟ್ಟು..... ಚಟಾರೆಂದು ಬಿಟ್ಟರು ನನ್ನ ಕೆನ್ನೆಗೆ..... ನಾನು ಅತ್ತುಬಿಟ್ಟೆ..... ನನಗೆ ಮಗ ಬೇಕಾಗಿದ್ದ.... ಆದರೆ ಮಗನ ಮುಖ ಆತನನ್ನು ನೆನಪಿಸುತ್ತಿತ್ತು..... ಇದರಲ್ಲಿ ನನ್ನ ಮಗನ ತಪ್ಪೇನೂ ಇರಲಿಲ್ಲ..... ಅಪ್ಪ " ನೀನೊಂದು ಹೆಣ್ಣಾ..? ಹೆತ್ತ ಮಗನನ್ನು ಕಂಡರೆ ಈ ರೀತಿ ಮಾಡುತ್ತಾರಾ...? ಜೀವನ ಪೂರ್ತಿ ಹೀಗೆ ಅವನನ್ನು ನಡೆಸಿಕೊಂಡರೆ ಅವನ ಗತಿ ಏನಾಗಬೇಡ...? ಅವನ ತಪ್ಪೇನಿದೆ ಇದರಲ್ಲಿ...? ಅದೆಲ್ಲಾ ಬಿಡು..... ಯಾರೋ ಮಾಡಿದ ತಪ್ಪಿಗೆ ನಿನ್ನ ಮಗ ಏನು ಮಾಡಬೇಕು...?" ಅಪ್ಪ ಕೂಗಾಡುತ್ತಿದ್ದರು..... ನನಗೆ ಅದೆಲ್ಲಿತ್ತೋ ಕೋಪ..." ಈತನ ಹುಟ್ಟಿಗೆ ಕಾರಣನಾದ ಆ ಪಿಶಾಚಿಯನ್ನು ಕೊಂದ ದಿನದಿಂದ ನಾನು ಇವನನ್ನು ಪ್ರೀತಿಸುತ್ತೇನೆ.... ಆತನನ್ನು ಸಾಯಿಸಿಯೇ ನಾನು ಇವನನ್ನು ಮುಟ್ಟುತ್ತೇನೆ..." ಎಂದೆ.... ಇದನ್ನು ಕೇಳಿದ ಮಗ  ತನ್ನ ಸೂಟ್ ಕೇಸ್ ಹಿಡಿದು ಹೊರಗೆ ಹೋದವನು ಇವತ್ತೇ ಫೋನ್ ಮಾಡಿದ್ದ.... ಮಗ ದೂರದಲ್ಲಿಷ್ಟೂ ನಾನು ಅವನನ್ನು ಪ್ರೀತಿಸುತ್ತಿದ್ದೆ.... ಆತ ನನ್ನ ಮಗನೇ, ಅವನನ್ನು ಮುದ್ದಿಸಬೇಕು, ಆಟ ಆಡಬೇಕು ಎಂಬ ಆಶೆ ಹೆಚ್ಚಾಗುತ್ತಿತ್ತು.... ಆದರೂ ಆ ಪಿಶಾಚಿಯನ್ನು ಕೊಲ್ಲದೇ ನನ್ನ ಮನಸ್ಸು  ಮಗನನ್ನು ಒಪ್ಪಲು ತಯಾರಿರಲಿಲ್ಲ...ಈಗ ಆ ಸದವಕಾಶ ಒದಗಿ ಬಂದಿದೆ.... ವರ್ಷಗಳಿಂದ ಕಾಯುತ್ತಿದ್ದ ಘಳಿಗೆ ಕೂಡಿ ಬಂದಿತ್ತು... ಮಗನಲ್ಲಿದ್ದಲ್ಲಿಗೆ ಹೊರಡಲು ತಯಾರಾಗಿ ಬಸ್ ಹತ್ತಿದೆ... ಮನಸ್ಸು ಸ್ವಲ್ಪ ಶಾಂತವಾಗಿದ್ದರಿಂದ ನಿದ್ದೆ ಬೇಗ ಬಂದಿತ್ತು.....
        
          ಕಣ್ಣು ಬಿಟ್ಟಾಗ ಮಗ ನನ್ನ ಎದುರು ನಿಂತಿದ್ದ..... ನಾನು ಅವನನ್ನು ಕಂಡು ತುಂಬಾ ದಿನಗಳಾಗಿತ್ತು..... ನನ್ನದೇ ರಕ್ತವಾದ್ದರಿಂದ ಎಷ್ಟು ದಿನ ಅಂತ ದೂರವಿಡಲಿ....? ಈಗೀಗಲಂತೂ ಮಗನ ಮುಖವೇ ನೆನಪಿಗೆ ಬರುತ್ತಿತ್ತು.... ಆ ಪಿಶಾಚಿಯ ಮುಖ ಸ್ವಲ್ಪ ಮರೆತೇ ಹೋಗಿತ್ತು..... ಮಗನನ್ನು ದೂರದಿಂದಲೇ ಪ್ರೀತಿಸಲು ಶುರು ಮಾಡಿದ್ದೆ.... ನನ್ನ ಸೂಟ್ ಕೇಸ್ ಹಿಡಿದು ಮಗ ಮುಂದೆ ನಡೆದ....." ಇಲ್ಲಿಂದ ಸ್ವಲ್ಪವೇ ದೂರ ಅಮ್ಮ.... ಸೀದಾ ಅಲ್ಲಿಗೇ ಹೋಗೋಣ.." ಎಂದ... " ಸ್ಸರಿ.." ಎಂದು ನಾನು ಅವನನ್ನು ಅನುಸರಿಸಿದೆ.... ಸ್ವಲ್ಪ ದೂರ ಹೋದ ನಂತರ ಒಂದು ಪಾಳುಮನೆಯ ಮುಂದೆ ನಿಂತೆವು.... ತನ್ನ ಚೀಲದಿಂದ ಒಂದು ಪಿಸ್ತೂಲ್ ತೆಗೆದು ನನ್ನ ಕೈಗಿತ್ತ... ನನ್ನ ಕೈ ನಡುಗುತ್ತಿತ್ತು...

         ವರ್ಷಗಟ್ಟಲೆ ಮೌನವಾಗಿ ಅನುಭವಿಸಿದ್ದ ಸಿಟ್ಟು, ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಮಯ ಬಂದಿತ್ತು.... ಸಿಡಿಲಿನ ಬೆಳಕಿಗೆ ನೋಡಿದ ಮುಖವನ್ನು ನನ್ನ ಬದುಕಿನಿಂದಲೇ ಅಳಿಸಿ ಹಾಕುವ ಕಾಲ ಬಂದಿತ್ತು... ಈ ಅವಕಾಶ ಕಲ್ಪಿಸಿದ ಮಗ ನನ್ನೆಡೆಗೆ ನೋಡುತ್ತಿದ್ದ.... ಕಣ್ಣಲ್ಲಿ ನೀರಿತ್ತು.... " ಅಮ್ಮಾ, ಅವನನ್ನು ನಾನೇ ಕೊಲ್ಲುವವನಿದ್ದೆ.... ನಾನೇ ಕೊಂದರೆ ನಿನ್ನ ಕೋಪ, ತಾಪ ಕಡಿಮೆಯಾಗುವುದಿಲ್ಲ... ಅದಕ್ಕೆ ನಿನ್ನನ್ನೇ ಕರೆದೆ.... ಒಂದೇ ಒಂದು ಗುಂಡು ಹಾರಿಸಿ ನೀನು ಇಲ್ಲಿಂದ ಹೊರಟುಬಿಡಬೇಕು.... ಮುಂದಿನದೆಲ್ಲಾ ನಾನೇ ನೋಡಿಕೊಳ್ಳುತ್ತೇನೆ.." ಎಂದ... ನನ್ನ ಕಿವಿಗೆ ಎನೂ ಕೇಳಿಸುತ್ತಿರಲಿಲ್ಲ... ನನ್ನ ಕಣ್ಣು ಆ ಪಿಶಾಚಿಯನ್ನು ಹುಡುಕುತ್ತಿತ್ತು.....

ಆಗಲೇ ಆತ ಹೊರಕ್ಕೆ ಬಂದ... ರಾಜು ನನ್ನನ್ನು ಮರದ ಹಿಂದಕ್ಕೆ ಎಳೆದುಕೊಂಡ.... ಮರೆಯಿಂದಲೇ ನಾನು ಗುರಿಯಿಟ್ಟಿದ್ದೆ.... ಗುರಿ ಸರಿಯಾಗಿ ಎದೆಗೆ ಇಟ್ಟಿದ್ದೆ.... ಕೈ ನಡುಗುತ್ತಿತ್ತು.... ಕ್ರಮೇಣ ನನ್ನ ಗುರಿ ಹಣೆಯ ಕಡೆ ಹೋಯಿತು....
ವಿಶಾಲವಾದ ಹಣೆ....
ಕೂದಲನ್ನು ಎಡಗಡೆ ಬಾಚಿದ್ದ...
ಕಣ್ಣು ಬೆಕ್ಕಿನ ಕಣ್ಣ ಹಾಗಿತ್ತು....
ಉದ್ದವಾದ ಮೂಗು...
ಅಗಲವಾದ ಕಿವಿ...

ಈ ಪಿಶಾಚಿಯನ್ನ ಸಾಯಿಸಿ ನನ್ನ ಪ್ರತಿಕಾರ, ನೋವು, ಅವಮಾನ ಎಲ್ಲದಕ್ಕೂ ಅಂತ್ಯ ಹಾಡಬೇಕು......
 ಪಿಸ್ತೂಲ್ ಒತ್ತಲು ತಯಾರಾದೆ...
ಒಮ್ಮೆ ಕಣ್ಣು ಮುಚ್ಚಿದೆ...... ಆತನ ಮುಖವನ್ನು ನೆನಪಿಸಿಕೊಂಡೆ.....
ಬೆಚ್ಚಿಬಿದ್ದೆ.....
ಕಣ್ಣು ತೆರೆದೆ.... ಆತನ ಮುಖ ನನಗೆ ನನ್ನ ಮಗನ ಹಾಗೆ ಕಾಣಿಸ್ತಾ ಇತ್ತು....
ಅಗಲವಾದ ಹಣೆ,.....
ಕೂದಲು ಬಾಚುವ ರೀತಿ..
ಕಣ್ಣ ಬಣ್ಣ....
ಮೂಗು...
ಕಿವಿ....
ಎಲ್ಲಾ ನನ್ನ ಮಗನ ಹಾಗೆಯೆ.....ಆತನ ಮುಖ ನನಗೆ ನನ್ನ ಮಗನ ಹಾಗೆ ಕಾಣಿಸ್ತಾ ಇತ್ತು....

ಪಿಸ್ತೂಲ್ ಬಿಸಾಡಿ ಓಡಿಬಿಟ್ಟೆ....
ಮಗ ನನ್ನ ಹಿಂದೇನೇ ಓಡಿ ಬಂದ.... " ಅಮ್ಮಾ ಏನಾಯ್ತಮ್ಮ.... ನೀನು ಈಗ ಅವನನ್ನು ಸಾಯಿಸದೇ ಇದ್ದರೆ, ನಿನ್ನ ಅಂತರಾತ್ಮ ಶಾಂತವಾಗಲ್ಲಮ್ಮಾ.... ನೀನು ಶಾಂತಿಯಿಂದ ಬದುಕಲು ಆಗಲ್ಲಮ್ಮಾ... ..ನೀನಿಲ್ಲೇ ಇರು... ಅವನನ್ನು ನಾನೇ ಕೊಲ್ಲುತ್ತೇನೆ.." ಎಂದು ಹೊರಟ...

ನಾನು ಬಿಕ್ಕಳಿಸುತ್ತಿದ್ದೆ.... ಮಗ ಬಂದು ನನ್ನ ಕೈ ಹಿಡಿದ...

" ನಿನ್ನ ಮುಖ ಯಾರನ್ನೋ ಹೋಲುತ್ತದೆ ಎಂದು ನಿನ್ನನ್ನು ದೂರವಿಟ್ಟೆ....
ಈಗ ನಿನ್ನದೇ ಮುಖ ಅವನನ್ನು ಹೋಲುತ್ತದೆ ಎಂದು , ಆತನನ್ನು ಬಿಟ್ಟುಬಿಟ್ಟೆ ಕಣೋ.... ಆ ಪಿಶಾಚಿ ತಾನು ಮಾಡಿದ ಕರ್ಮಕ್ಕೆ ಅನುಭವಿಸಿಯೇ ಇರುತ್ತಾನೆ.... ಹಾಳಾಗಿ ಹೋಗಲಿ ಅವನು.... ಅವನ ಮೇಲಿನ ದ್ವೇಷಕ್ಕೆ ನಿನ್ನನ್ನು ಕಳೆದುಕೊಳ್ಳಲಾರೆ ನಾನು.."ಎಂದೆ... ಮಗನ ಕಣ್ಣಲ್ಲೂ ನೀರು ಸುರಿಯುತ್ತಿತ್ತು....

ದೂರದಲ್ಲೆಲ್ಲೋ ಸಿಡಿಲು ಬಿದ್ದ ಶಬ್ಧ....

Apr 16, 2011

ಪ್ರೀತಿಯಿಂದ....... ಪ್ರೀತಿಯಿಂದ......

ಅಂದು ಅಗಷ್ಟ್ ೨೨ ೨೦೧೦......
 
ಎಲ್ಲೆಲ್ಲೋ ಕಂಪ್ಯೂಟರ್ ಮುಂದೆ ಕುಳಿತು ಕಥೆ, ಕವನ, ನಮಗನಿಸಿದ್ದನ್ನ ಕುಟ್ಟುತ್ತಾ ಕುಳಿತಿದ್ದ ನಾವೆಲ್ಲಾ ಮೊದಲ ಬಾರಿಗೆ ಸೇರಿದ ದಿನ.....

 ತಮ್ಮ ತಮ್ಮ ಸಮಸ್ಯೆ ಜಂಜಾಟದಲ್ಲೂ ಮತ್ತೊಬ್ಬರ ಮುಖ ನೋಡದೇ ಇದ್ದರೂ, ಅವರ ಖುಶಿಗೆ ನಕ್ಕು... ನೋವಿಗೆ ಮದ್ದಾಗಿದ್ದೆವು.... 


ಎಲ್ಲರೂ ಒಮ್ಮೆ ಸೇರೋಣ ಎಂದು ಮಾತಾಡುತ್ತಿರುವಾಗಲೇ ಅವಕಾಶ ಹುಡುಕಿಕೊಂಡು ಬಂದಿತ್ತು.....


 ಅದು............


 ಆಜಾದ್ ಸರ್ ಬರೆದ " ಜಲನಯನ " ಶಿವು ಸರ್ ಬರೆದ " ಗುಬ್ಬಿ ಎಂಜಲು'' ಪುಸ್ತಕ ಬಿಡುಗಡೆ ಕಾರ್ಯಕ್ರಮ....

 
ತುಂಬಾ ದೂರದಿಂದ ಬಂದವರೂ ನಗು ನಗುತ್ತಲೇ ಬಂದಿದ್ದೆವು.....
ಮೊದಲ ಸಾರಿ ಭೇಟಿ ಆದರೂ ಜನ್ಮಾಂತರದ ಸಂಭಂದವೇನೋ ಎಂಬಂತೆ ಖುಷಿಪಟ್ಟೆವು..... 


ಕಾಲೆಳೆದವರೂ.... ಕಾಲೆಳೆಸಿಕೊಂಡವರೂ ಎಲ್ಲರೂ ಮುಜುಗರ ಪಡದೇ ತಮ್ಮ ತಮ್ಮ ಸ್ಥಾನಮಾನ ಮರೆತು ಬೆರೆತೆವು.... 


ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾ, ಹೇಳಿಕೊಳ್ಳುತ್ತಾ ಇದ್ದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದೆ...... 


ಎಲ್ಲರೂ ನಮ್ಮದೇ ಮನೆಯ ಕಾರ್ಯಕ್ರಮ ಎಂಬಂತೆ ಸೇರಿ ನಡೆಸಿ ಕೊಟ್ಟೆವು.......
ತಮಾಶೆಯ ಬಹುಮಾನಕ್ಕೂ ಬೇಸರಿಸದೇ ಎಲ್ಲರೂ ಸೇರಿ ಖುಶಿಪಟ್ಟಿದ್ದೆವು......

ಈಗ ಅಂಥಹುದೇ ಒಂದು ಅವಕಾಶ ಬಂದಿದೆ....


ಇದೇ ತಿಂಗಳ ೨೪ ಕ್ಕೆ.....


''ಬ್ಲಾಗ್ ಲೋಕದ ನಗುವಿನ ಮನೆಯ ಗುತ್ತಿಗೆಗಾರ '' ಪ್ರಕಾಶ್ ಹೆಗಡೆ ಅವರ ಎರಡನೇ ಪುಸ್ತಕ " ಇದೇ ಇದರ ಹೆಸರು " ಬಿಡುಗಡೆಯಾಗುತ್ತಿದೆ.....


ಅವರ ಮೊದಲನೆಯ ಪುಸ್ತಕ ಬಿಡುಗಡೆಯ ಸಮಯದಲ್ಲಿ ನಾನು ಬ್ಲಾಗ್ ಬರೆಯಲು ಶುರು ಮಾಡಿರಲಿಲ್ಲ.... 


ಈಗ ಎರಡನೇ ಪುಸ್ತಕ ಬಿಡುಗಡೆ ಮಾಡುತ್ತಾ ಇದ್ದಾರೆ.... ಮಿಸ್ ಮಾಡೋ ಚಾನ್ಸೇ ಇಲ್ಲ....


ಪ್ರಕಾಶಣ್ಣನ ಮುನ್ನೂರು ವ್ಯಾಟ್ ನಗುವನ್ನು, ನಮ್ಮ ಉಪಸ್ಥಿತಿಯಿಂದ  ನಾಲ್ಕು ನೂರು ವ್ಯಾಟ್ ಮಾಡೋಣ....
ನೀವೂ ಬನ್ನಿ.... ಇನ್ನೊಮ್ಮೆ ಸೇರಿ ನಗುವಿನಲ್ಲಿ ಮುಳುಗೋಣ.....

                    ಬ್ಲಾಗ್ ಬಂಧವನ್ನು ಗಟ್ಟಿ ಮಾಡೊಣ...   

                "ಎಲ್ಲ ಬ್ಲಾಗಿಗರು ಸೇರಿ  ಸಂಭ್ರಮಿಸೋಣ ''