Mar 21, 2011

"ಮನೆ ಊಟ ದೊರೆಯುತ್ತದೆ.."

"ದೋಸ್ತಾ.... ಹೋಟೆಲ್ ಊಟ ಮಾಡಿ ಮಾಡಿ ಸಾಕಾಗಿದೆ... ಎಲ್ಲಾದರೂ ಮೆಸ್ ಊಟ ಅಥವಾ ಮನೆ ಊಟ ಕರ್ಕೋಂಡು ಹೋಗೊ" ಎಂದೆ ನನ್ನ ಗೆಳೆಯನಿಗೆ...... ಉದ್ಯೋಗ ನಿಮಿತ್ತ ಬೇರೆ ಊರಿಗೆ ಬಂದು ತುಂಬಾ ದಿನಗಳಾಗಿತ್ತು..... ಹೋಟೆಲ್ ಊಟ ಮಾಡಿ ನಾಲಿಗೆ ಕೆಟ್ಟು ಹೋಗಿತ್ತು..... ನನ್ನ ಗೆಳೆಯನೂ ಸಹ ಅದೇ ಊರಲ್ಲಿ ಕೆಲಸ ಮಾಡುತ್ತಿದ್ದನಾದ್ದರಿಂದ ಆತನನ್ನು ಭೇಟಿ ಮಾಡಲು ಬಂದಿದ್ದೆ..... " ಓಹೋ, ನಿನಗೆ ಮನೆ ಊಟ ಬೇಕೋ...." ಎಂದ... "ಹೌದೋ, ಮನೆ ಊಟ ಹಾಕಿಸಿದರೆ ದೊಡ್ಡ ಉಪಕಾರ ಆಗುತ್ತದೆ ಮಾರಾಯ....." ಎಂದೆ..... "ಹಾಗಾದರೆ, ನಿನಗೆ ನಿಜವಾದ ಮನೆ ಊಟದ ಪರಿಚಯ ಮಾಡಿಸುತ್ತೇನೆ... ಬಾ.." ಎಂದವನೇ ಬೈಕಿನಲ್ಲಿ ಕರೆದುಕೊಂಡು ಹೋದ......

ಸುಮಾರು ದೂರ ಬಂದ ನಂತರ ಒಂದು ಸಣ್ಣ ಮನೆಯ ಮುಂದೆ ನಿಲ್ಲಿಸಿದ... ಮನೆಯ ಮುಂದೆ ಒಂದು ಸಣ್ಣ ಬೋರ್ಡ್ ಇತ್ತು, ಅದರಲ್ಲಿ ’ಮನೆ ಊಟ ದೊರೆಯುತ್ತದೆ ’ ಎಂದು ಬರೆದಿತ್ತು..... ನನಗಂತೂ ಅದನ್ನು ಓದಿಯೇ, ಹಸಿವೆ ಹೆಚ್ಚಾಯಿತು...... ಗೆಳೆಯನ ಕೈ ಹಿಡಿದು ಒಳಗೆ ಹೋದೆ..... ಒಂದು ಟೇಬಲ್ ನಾಲ್ಕು ಕುರ್ಚಿ ಇತ್ತು.... ನಾಲ್ಕೂ ಕುರ್ಚಿ ಖಾಲಿ ಇತ್ತು..... ಬೇಗ ಬೇಗನೆ ಕೈ ತೊಳೆದು ಕುಳಿತುಕೊಂಡೆ..... ನನ್ನ ಗೆಳೆಯ ಪಕ್ಕ ಕುಳಿತುಕೊಂಡ... ಒಬ್ಬರು ಹಿರಿಯ  ವಯಸ್ಸಿನ ಗಂಡಸು ಬಂದು ಊಟದ ಪ್ಲೇಟ್ ಕೊಟ್ಟು ನಮ್ಮ ಪಕ್ಕವೇ ಕುಳಿತರು...... " ಊಟಕ್ಕೆ ಬರೋದು ಯಾಕೆ ಲೇಟ್ ಆಯ್ತು...? ಎಂದರು ಆ ಹಿರಿಯರು.... ನನ್ನ ಗೆಳೆಯ " ಸ್ವಲ್ಪ ಕೆಲಸವಿತ್ತು, ಅದಕ್ಕೇ ಲೇಟ್ ಆಯ್ತು ’ ಎಂದ...ನಾನು ಸುಮ್ಮನೇ ಕುಳಿತೆ.... ಒಳಗಿನಿಂದ ಒಳ್ಳೆಯ ದಾಲ್ ಪರಿಮಳ ಬರುತ್ತಾ ಇತ್ತು..... ಒಂದು ಕೈಯಲ್ಲಿ ದಾಲ್ ಪ್ಲೇಟ್, ಇನ್ನೊಂದು ಕೈಯಲ್ಲಿ ಅನ್ನದ ಪ್ಲೇಟ್ ಹಿಡಿದು ಹಿರಿಯ ವಯಸ್ಸಿನ ಹೆಂಗಸೊಬ್ಬರು ಬಂದರು..... ಸಿಟ್ಟಿನಿಂದಲೇ ಪಾತ್ರೆಯನ್ನು ಟೇಬಲ್  ಮೇಲೆ ಕುಕ್ಕಿ ಇಟ್ಟರು.... ನನಗೆ ಮುಜುಗರವಾಯಿತು..... " ಸರಿಯಾದ ಟೈಮ್ ಗೆ ಊಟಕ್ಕೆ ಬರುತ್ತೀರಾ.....  ಮನೆಯಲ್ಲಿ ಇಬ್ಬರು ವಯಸ್ಸಾದ ಇಬ್ಬರಿದ್ದಾರೆ, ಅವರ ಬಗ್ಗೆ ಸ್ವಲ್ಪವಾದರೂ ನೆನಪಿದ್ದರೆ ತಾನೆ....?"   ನನಗೆ ಎನೂ ಅರ್ಥ ಆಗಲಿಲ್ಲ...... ಗೆಳೆಯನ ಕಡೆ ನೋಡಿದೆ.... ಆತ ತನ್ನ ಪ್ಲೇಟ್ ಕಡೆ ನೋಡುತ್ತಿದ್ದ...... ನಾನೂ ಸುಮ್ಮನಾದೆ..... " ಎಲ್ಲರೂ ತಮ್ಮ ತಮ್ಮ ಬಗ್ಗೆಯೇ ಯೋಚಿಸುತ್ತಾರೆ, ಮಳೆಗಾಲ ಹತ್ತಿರದಲ್ಲೇ ಇದೆ, ಹಂಚಿನ ಮೇಲೆ ತೆಂಗಿನಕಾಯಿ ಬಿದ್ದು ಸುಮಾರು ಹೆಂಚು ಒಡೆದು ಹೋಗಿದೆ.... ಅದನ್ನ ರಿಪೇರಿ ಮಾಡಬೇಕೆಂಬ ಯೋಚನೆ ಇಲ್ಲ... ತೆಂಗಿನ ಮರಕ್ಕೆ ಒಂದು ವಾರದಿಂದ ನೀರು ಹಾಯಿಸಿಲ್ಲ..... ಯಾರಿಗೂ ಇದರ ಬಗ್ಗೆ ಕಾಳಜಿ ಇಲ್ಲ..... ಪಂಪ್ ರಿಪೇರಿ ಇದೆಯಂತೆ.... "


ಆಕೆ ನನಗೆ ಊಟ ಬಡಿಸುತ್ತಾ, ಇದನ್ನೆಲ್ಲಾ ಹೇಳುತ್ತಿದ್ದಳು..... ನನಗೆ ತಲೆ ಬುಡ ಅರ್ಥ ಆಗ್ತಾ ಇರಲಿಲ್ಲ..... ನನ್ನ ಮನೆಯಲ್ಲೂ ಸಹ ಮನೆಯ ಮೇಲೆ ತೆಂಗಿನಕಾಯಿ ಬಿದ್ದು ಹೆಂಚು ಒಡೆದಿತ್ತು..... ಸರಿ ಮಾಡಿಸಲು ಸಮಯ ಸಿಕ್ಕಿರಲಿಲ್ಲ.... ಅದು ಇವರಿಗೆ ಹೇಗೆ ಗೊತ್ತಾಯ್ತು....? ಇವರ ಮನೆ ವಿಷಯ ಇದು, ಇದನ್ನೆಲ್ಲಾ ನನಗೆ ಯಾಕೆ ಹೇಳ್ತಾ ಇದಾರೆ ಅಂತ ತಿಳಿಯಲಿಲ್ಲ........ ಗೆಳೆಯ ಸುಮ್ಮನೆ ತಲೆ ಕೆಳಗೆ ಹಾಕಿ ಊಟ ಮಾಡುತ್ತಿದ್ದ..... ನನ್ನ ಪಕ್ಕ ಕುಳಿತ ಹಿರಿಯರು," ಊಟ ಮಾಡುವಾಗಲಾದರೂ ಸ್ವಲ್ಪ ಸುಮ್ಮನಿರಬಾರದಾ...? ಯಾವಾಗ ನೋಡಿದರೂ ವಟ ವಟ ಅಂತ ಇರ್ತೀಯಾ..... ನಿನ್ನದು ಏನೇ ಮಾತಿದ್ದರೂ ಊಟ ಮುಗಿದ ನಂತರ ಇಟ್ಟುಕೋ " ಎಂದರು..... ನಾನು ಸುತ್ತ ಮುತ್ತ ನೋಡಿದೆ.... ನನ್ನ ಹಾಗೆ ಇವರ ಮಗ ಇರಬಹುದು, ನನ್ನನ್ನೇ ಇವರ ಮಗ ಎಂದುಕೊಂಡು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದುಕೊಂಡೆ... " ನೀವು ಸುಮ್ಮನಿರಿ, ನಿಮಗೇನೋ ಅರ್ಥ ಆಗಲ್ಲ, ನೀವು ಹೀಗೇ ಸದ್ರ ಬಿಟ್ಟೇ ಇವನು ಹೀಗೆ ಆಡ್ತಾ ಇದಾನೆ..... ಇವನಿಗೊಂದು ಮದುವೆ ಮಾಡಿದ್ರೆ ಮುಗಿದೇ ಹೋಯ್ತು.... ನಮ್ಮ ಕೈಗೆ ಚಿಪ್ಪೇ ಕೊಡ್ತಾನೆ....." ನನಗೆ ಗಂಟಲಲ್ಲಿ ಅನ್ನವೇ ಇಳಿಯಲಿಲ್ಲ..... ಊಟ ರುಚಿ ರುಚಿಯಾಗಿತ್ತು..... ಉಪ್ಪಿನಕಾಯಿಯಂತೂ ತುಂಬಾ ಚೆನ್ನಾಗಿತ್ತು..... ಗೆಳೆಯನ ಮೇಲೆ ಸಂದೇಹವೂ ಬಂತು..... ಆತ ನನ್ನ ಗೆಳೆಯನೇ ಆದರೂ, ಆತನ ಅಪ್ಪ ಅಮ್ಮನನ್ನು ನಾನು ಭೇಟಿ ಆಗಿರಲಿಲ್ಲ..... ತನ್ನ ಮನೆಗೆ ಕರೆದು ತಂದು ಊಟಕ್ಕೆ ಹಾಕುತ್ತಿದ್ದಾನಾ ಎನಿಸಿತು... ಆದರೆ ಒಂದು ಮಾತು ಅರ್ಥ ಆಗಲಿಲ್ಲ..... ನನ್ನ ಗೆಳೆಯನೇ ಇವರ ಮಗನಾದರೆ ಇದನ್ನೆಲ್ಲಾ ನನಗೆ ಯಾಕೆ ಹೇಳುತ್ತಿದ್ದಾರೆ ಎಂದು...

      
         ನನ್ನ ಗೆಳೆಯ ಗಡದ್ದಾಗಿ ಊಟ ಮಾಡುತ್ತಿದ್ದ...... ಊಟ ರುಚಿ ರುಚಿಯಾಗಿದ್ದ ಕಾರಣ ನನಗೂ ಹೊಟ್ಟೆ ತುಂಬಿತ್ತು..... ಕೈ ತೊಳೆಯಬೇಕು ಎಂದುಕೊಂಡು ಎದ್ದೆ.... ಅಜ್ಜಿ ಬಂದವರೇ " ಕರೆಂಟ್ ಬಿಲ್ ತುಂಬಿದ್ದೀಯೋ ಇಲ್ಲವೋ..?, ಹಣಾನೂ ನಾನೇ ಕೊಡಲೋ....? ಹೇಗಾದರೂ ಮಾಡಿ ತುಂಬಪ್ಪಾ.... ಮುಂದಿನ ವಾರ ನಿನ್ನ ಅಕ್ಕ ಬರ್ತಾ ಇದ್ದಾಳಂತೆ, ಅವಳ ಮಗಳಿಗೆ ಒಂದು ಚಿನ್ನದ ಸರ ಮಾಡಿಸಬೇಕು ಕಣೊ...... ನಾನೂ ಸ್ವಲ್ಪ ಹಣ ಕೂಡಿಸಿಟ್ಟಿದ್ದೇನೆ .... ಅದನ್ನೂ ನಿನಗೆ ಕೊಡುತ್ತೇನೆ.... ಸರ ಮಾಡಿಸದೇ ಇದ್ದರೆ ನಿನ್ನ ಬಾವ ಅವಳನ್ನು ಸುಮ್ಮನೇ ಬಿಡಲ್ಲಪ್ಪಾ.... " ಕಣ್ನಲ್ಲಿ ನೀರು ತುಂಬಿತ್ತು..... ನನಗೆ ಇವರಿಗೇನಾದರೂ ಹುಚ್ಚು ಹಿಡಿದಿರಬಹುದಾ ಅಂತ ಅನುಮಾನ ಶುರುವಾಯಿತು.... ನನ್ನಂತೆಯೆ ಇರುವ ಮಗ ಸತ್ತು ಹೋಗಿರಬಹುದು.... ಅವನ ನೆನಪಲ್ಲೇ ಇರುವ ಇವರಿಗೆ ಮಾನಸಿಕ ಆಘಾತವಾಗಿ ಹೀಗೆ ಮಾತನಾಡುತ್ತಾ ಇರಬಹುದು ಎಂದುಕೊಂಡೆ..... ತಲೆ ಕೆಟ್ಟಂತಾಗಿ, ನನ್ನ ಗೆಳೆಯನ ಕಡೆ ನೋಡಿದೆ..... ಆತನ ಕಿವಿಗೆ ಏನೂ ಕೇಳಿಸಲೇ ಇಲ್ಲವೆನೋ ಎನ್ನುವ ಹಾಗೆ ಇದ್ದ.... ನಾನು ಕೈ ತೊಳೆದುಕೊಂಡು  ಬಂದು ಕುಳಿತೆ.... ಅಜ್ಜ ಬಂದು ಎಲೆ ಅಡಿಕೆ ಕೊಟ್ಟರು..... ನನಗೆ ಅವರ ಮೇಲೆ ಅನುಕಂಪ ಬಂತು..... ಅಜ್ಜ ಹೇಗೆ ಇವರನ್ನು ಸಹಿಸಿಕೊಂಡಿದ್ದಾರೊ ಎನಿಸಿತು.... " ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬೇಡಪ್ಪಾ.... ಅವಳು ಯಾವಾಗಲೂ ಹಾಗೆನೆ..... " ಎಂದರು... ’ಅಬ್ಬಾ.. ಇವರಾದರೂ ಸರಿಯಾಗಿದ್ದಾರೆ ’ಎನಿಸಿತು...... ಅವರು ಮುಂದುವರಿಸುತ್ತಾ....." ಮನೆಯ ತೊಂದರೆ ಎಲ್ಲಾ ಇದ್ದಿದ್ದೇ ಕಣಪ್ಪಾ.... ನೀನು ಹೀಗೇಲ್ಲಾ ಬೇರೆಯವರ ಬೈಕ್ನಲ್ಲಿ ತಿರುಗಾಡಬೇಡಪ್ಪಾ.... ಸ್ವಲ್ಪ ಸಾಲ ಮಾಡಿ ನೀನೇ ಬೈಕ್ ತೆಗೆದುಕೋ" ಎಂದರು..... ನನಗೆ ತಲೆ ತಿರುಗೋದೊಂದು ಬಾಕಿ...... ನಾನು ತಲೆ ಹಿಡಿದುಕೊಂಡು ಹೊರಗೆ ಬಂದೆ.......


  ಗೆಳೆಯ ಊಟದ ಹಣ ಕೊಟ್ಟು ಹೊರ ಬಂದ, ಗೆಳೆಯನ  ಮುಖದಲ್ಲಿ ಒಂಥರಾ ನಗುವಿತ್ತು....... ನಾನು ತಲೆ ಕೆಟ್ಟು ನಿಂತಿದ್ದೇನೆ.... ಇವಾ ಹೀಗೆ ನಗಾಡುತ್ತಾ ಇದ್ದಾನಲ್ಲಾ ಎಂದು ಸಿಟ್ಟೂ ಬಂತು...... ಆತ ನಗುತ್ತಲೇ ಕೇಳಿದ " ಹೇಗಿತ್ತು ಮನೆ ಊಟ...?”....... ನನ್ನ ಪಿತ್ತ ನೆತ್ತಿಗೇರಿತು......” ನಿನ್ನ ತಲೆ, ಮನೆ ಊಟವಂತೆ..... ಊಟವೇನೋ ಚೆನ್ನಾಗಿತ್ತು...... ಆದ್ರೆ ಆ ಜನ ನನ್ನನ್ನು ಅವರ ಮಗನೆಂದು ತಿಳಿದು ಜಾಡಿಸುತ್ತಿದ್ದರಲ್ಲ..... ನೀನೇಕೆ ಸುಮ್ಮನಿದ್ದೆ.....? ನಿನಗೆ ಗೊತ್ತಿತ್ತಾ ಅವರ ತಲೆ ಸರಿ ಇಲ್ಲ ಎಂದು...? ಒಳ್ಳೆ ಕಡೆ ಕರೆದುಕೊಂಡು ಊಟ ಹಾಕಿಸಿದೆಯಪ್ಪ...... " ಎಂದೆ...... ಗೆಳೆಯ ನಗುತ್ತಾ...." ಈಗ ಹೇಳು, ನೀನೇನು ಕೆಳ್ದೆ ನನ್ ಹತ್ರ...? ಮನೆ ಊಟ ತಾನೆ....? ಯಾರ ಮನೆಯಲ್ಲಿ ಊಟದ ಜೊತೆ ಮನೆ ಸಮಸ್ಯೆ, ಮಕ್ಕಳಿಗೆ ಬೈಗುಳ ಇರಲ್ಲ ಹೇಳು....? ಊಟದ ಜೊತೆ ಇದೆಲ್ಲಾ ಇದ್ದಿದ್ದಕ್ಕೆ ನಾನು ಮನೆ ಊಟ ಎಂದಿದ್ದು..." ಎಂದ.......

ಬೆಪ್ಪಾಗುವ ಸರದಿ ನನ್ನದಾಗಿತ್ತು..... ಆದರೂ ಅನುಮಾನ ಕಾಡುತ್ತಿತ್ತು..... "ಅದೆಲ್ಲಾ ಸರಿ, ಅವರು ನನಗೆ ಮಾತ್ರ ಯಾಕೆ ಬಯ್ಯುತ್ತಿದ್ದರು...? ನಿನಗೆ ಮಾತ್ರ ಎನೂ ಹೇಳಲಿಲ್ಲ" ಎಂದೆ..... ಗೆಳೆಯ ನಗುತ್ತಾ...." ನಾನು ಪದೇ ಪದೆ ಹೋಗುತ್ತೆನೆ ಅಲ್ಲಿ, ಖಾಯ್ಂ ಗಿರಾಕಿಗಳಿಗೆ ಅವರು ಹಾಗೆ ಮಾಡಲ್ಲ.... ಮೊದಲಿಗೆ ಬಂದವರಿಗೆ ಮಾತ್ರ ಈ ಟ್ರೀಟ್ ಮೆಂಟು.." ಎಂದ.....

ನನಗೆ ಮಾತ್ರ ನಿಜವಾದ ಮನೆ ಊಟ ಸಿಕ್ಕಿತ್ತು......