May 20, 2020

ದೂರ ‘ತೀರದ ‘ ಯಾನ!!!

ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್ ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ ಮೊದಲಷ್ಟೇ ಫೋನ್ ಮಾಡಿದ್ರೀ... ಆಗ್ಲೇ ಮತ್ತೆ ನೆನಪಾಯ್ತಾ?” ಎನ್ನುತ್ತಾಳೆ ಕಿಚಾಯಿಸುವ ಧ್ವನಿಯಲ್ಲಿ...

ಅನುಜ್ ನ  ಸೋತ ಮುಖ ನೋಡಿ “ ಏನಾಯ್ತ್ರೀ... ಯಾಕೆ ಪದೇ ಪದೇ ಅದನ್ನೇ ಯೋಚಿಸ್ತಾ ಇರ್ತೀರಾ.... ಏನೂ ಆಗಲ್ಲ.. ಎಲ್ಲ ಸರಿಯಾಗತ್ತೆ... ಚಿಂತಿಸಬೇಡಿ” ಎನ್ನುತ್ತಾಳೆ.... ಅನುಜ್ ಕಣ್ಣಲ್ಲಿ ನೀರು ಬರತ್ತೆ... “ ಜಾನ್ಹವಿ ಎಲ್ಲಿ?” ಎಂದು ಕೇಳುತ್ತಾನೆ... ಜಾನ್ಹವಿ , ಅಕ್ಷತಾ ಅನುಜ್ ರ ಐದು ವರ್ಷದ ಮಗಳು.... “ಜಾನ್ಹವಿ ಮಲಗಿದ್ದಾಳೆ, “ ಎನ್ನುತ್ತಾ ಫೋನ್ ತೆಗೆದುಕೊಂಡು ಮಗಳನ್ನು ಮಲಗಿಸಿದ್ದ ರೂಮಿಗೆ ಹೋಗಿ ಮಗಳನ್ನು ತೋರಿಸುತ್ತಾಳೆ...

ಮಗಳು ಮಲಗಿದ್ದ ರೀತಿ ನೋಡಿ ಅನುಜ್ ಗೆ ಕಂಟ್ರೋಲ್ ಮಾಡಲು ಆಗುವುದಿಲ್ಲ... ಜೋರಾಗಿ ಬಿಕ್ಕಲು ಆರಂಭಿಸುತ್ತಾನೆ... ಆತ ಅಳುವುದನ್ನು ನೋಡಿ ಅಕ್ಷತಾ “ ರೀ.. ಜ್ವರ ಈಗ ಬಿಟ್ಟಿದೆ.... ನೀವೇನೂ ಹೆದರಬೇಡಿ... ನಮ್ಮ ಮಗಳು ಸ್ಟ್ರಾಂಗ್ ಇದಾಳೆ... ನಿಮ್ಮ ಹಾಗೆ” ಎನ್ನುತ್ತಾ ಅನುಜ್ ಮೂಡ್ ಸರಿ ಮಾಡಲು ನೋಡುತ್ತಾಳೆ....
“ಹಾಗಲ್ಲ ಅಕ್ಷತಾ, ಈಗಿನ ಪರಿಸ್ಥಿತಿಯಲ್ಲಿ .......” ಎಂದೇನೋ ಹೇಳಲು ಹೊರಟಿದ್ದ..... ಮಧ್ಯದಲ್ಲಿ ಅಕ್ಷತಾ ಬಾಯಿ ಹಾಕಿ “ ರೀ.... ಕೊರೋನಾ, ಗಿರೋನಾ ಏನೂ ಇಲ್ಲ... ಸುಮ್ ಸುಮ್ನೆ ಇಲ್ಲದ್ದನ್ನೆಲ್ಲ ಯೋಚಿಸ್ಬೇಡಿ... ಅವಳು ನಿನ್ನೆ ಸ್ನಾನ ಮಾಡುವಾಗ ಟ್ಯಾಪ್  ನೀರು ಕುಡಿದಿದ್ದಾಳೆ.... ಅಷ್ಟೆ... ಹಾಗೆ ಮಾಡಿದಾಗಲೆಲ್ಲ ಅವಳಿಗೆ ಜ್ವರ ಬರತ್ತೆ.....ಸಿರಪ್ ಹಾಕಿದ್ದೇನೆ....ಕಡಿಮೆ ಆಗತ್ತೆ ಬಿಡಿ” ಎಂದು ಸಮಾಧಾನದ ಧ್ವನಿಯಲ್ಲಿ.... ಅನುಜ್ ಕಣ್ಣಲ್ಲಿ ಧಾರಾಕಾರವಾಗಿ ನೀರು ಬರಲು ಶುರು ಆಗತ್ತೆ....

“ಇಲ್ಲ ಅಕ್ಷತಾ, ದೇವರಿಂದ ಬೇಡಿ ಪಡೆದ ಮಗಳು ಇವಳು... ಮಗಳಿಗಾಗಿ ಬೇಡದ ದೇವರಿರಲಿಲ್ಲ... ಅಂಥ ಮಗಳನ್ನೂ ಬಿಟ್ಟು ಹೊಟ್ಟೆಪಾಡಿಗಾಗಿ ವಿದೇಶಕ್ಕೆ ಬಂದು ದುಡಿಯಬೇಕಾಯ್ತು... ಇದಕ್ಕಿಂತ ದೌರ್ಬಾಗ್ಯ ಇದೆಯಾ ಜೀವನದಲ್ಲಿ...?? ಯಾರಿಗಾಗಿ ದುಡಿಯುತ್ತೇವೋ ಅವರಿಂದಲೇ ದೂರ ಇದ್ದು ಜೀವ ತೇಯ್ದು ಜೀವನ ನಡೆಸೋದು?? “ ಅಕ್ಷತಾ ಅವನ ಮಾತಿಗೆ ಅಡ್ಡ ಬರಲಿಲ್ಲ... ಮಾತಾಡಿಯಾದರೂ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಲಿ ಎನಿಸಿತು ಆಕೆಗೆ...

ಅನುಜ್ ಮುಂದುವರಿಸಿದ್ದ “ ಅವಳ ಪ್ರತೀ ಚಲನವನ್ನೂ ನಾನು ಗಮನಿಸಬೇಕು, ಅನುಭವಿಸಬೇಕು ಅಂತ ಪ್ರಾರ್ಥಿಸಿದ್ದವನಿಗೆ ಫೋನ್ ಮೂಲಕ ಅವಳೊಂದಿಗೆ ಮಾತನಾಡುವುದೊಂದೆ ಉಳಿದಿತ್ತು... ಅವಳು ಮೊಬೈಲ್ ಮುತ್ತು ಕೊಟ್ಟಾಗಲೂ ಅವಳ ಕೆನ್ನೆಯ ಮೆದು ಅನುಭವಿಸಿದ್ದೆ ನಾನು...  ಅವಳು ಬಿದ್ದಾಗಳೂ ಗೆದ್ದಾಗಲೂ ಅವಳ ವಿಡಿಯೋ ನೋಡಿ ಆನಂದಿಸಿದೆ.... “ ಮುಂದಕ್ಕೆ ಮಾತು ಬರದೇ ಗಂಟಲು ಕಟ್ಟಿತು ಅನುಜ್ ಗೆ....

“ ರೀ .. ಬಿಸಿ ನೀರು ಕುಡೀರಿ... ಏನೂ ಆಗಲ್ಲ... ಸ್ವಲ್ಪ ದಿನ ಅಷ್ಟೆ.... ಮತ್ತೆ ಜೊತೆಯಾಗಿ ಬದುಕೋಣ...ಇಲ್ಲೇ ಏನಾದರೂ ಸಣ್ಣ ಕೆಲಸ ಮಾಡಿಕೊಂಡು ಇರೋಣ... ಮತ್ತೆ ದೂರ ಹೋಗುವ ಮಾತಾನಾಡಬಾರದು ಅಷ್ಟೆ...” ಎಂದಳು ಅಕ್ಷತಾ..

ಅನುಜ್ ಪ್ಲಾಸ್ಕಿನಲ್ಲಿದ್ದ ಬಿಸಿ ನೀರು ಕುಡಿದು ಕಣ್ಣೊರಿಸಿಕೊಳ್ಳುತ್ತಾನೆ....

“ಅದಲ್ಲ ಅಕ್ಷತಾ, ಪ್ರೀತಿಸಿ ಮದುವೆಯಾದ ನಿನ್ನನ್ನೂ , ದೇವರನ್ನು ಬೇಡಿ ಬೇಡಿ ಪಡೆದ ಮಗಳನ್ನೂ ಬಿಟ್ಟು ಇರಲಾಗದೇ ಚಡಪಡಿಸಿದ್ದೆ ನಾನು... ದುಬೈ ಲಿ ಕಳೆದ ಮೂರು ವರ್ಷ ಮೂವತ್ತು ವರ್ಷಕ್ಕೆ ಸಮನಾಗಿತ್ತು... ಈ ಕೊರೋನಾ ಬಂದ ಕೊಡಲೇ ಯಾಕೋ ........ “ ಅನುಜ್ ಕಣ್ಣೀರು ಇನ್ನೂ ಜೋರಾಯಿತು...

ಅಕ್ಷತಾ ಸಹ ಕುಸಿದು ಕೂತಳು...

ಅನುಜ್ ಮುಂದುವರಿಸಿದ “ ಕೊರೋನಾ ಹಾವಳಿ ಅಲ್ಲೂ ಜಾಸ್ತಿಯಾದಾಗ ನಿಮ್ಮದೆಲ್ಲಾ ತುಂಬಾ ನೆನಪಾಯ್ತು ಅಕ್ಷತಾ.... ದೂರದೇಶದಲ್ಲೆಲ್ಲೋ ಪಾಪಿ ಪರದೇಶಿ ಯಾಗಿ ಸತ್ತು ಅನಾಥ ಶವವಾಗಿ ಮಣ್ಣಾಗಲು ಮನಸ್ಸಾಗಲೇ ಇಲ್ಲ.... ನನ್ನ ಜೊತೆಗೇ ಕೆಲಸ ಮಾಡುತ್ತಿದ್ದ ಸಹಪಾಠಿಯೊಬ್ಬ ಕೊರೋನಾ ದಿಂದ ಆಸ್ಪತ್ರೆ ಸೇರಿದ್ದ.... ತದನಂತರ ಆತನ ಬಗ್ಗೆ ಸುದ್ದಿಯೇ ಸಿಗಲಿಲ್ಲ... ಒತ್ತಾಯಪೂರ್ವಕವಾಗಿ ಕಂಪನಿಗೆ ಕೇಳಿದರೆ ವಿಪರೀತ ಜ್ವರ ಬಂದು ಸತ್ತು ಹೋದನಂತೆ  ವೈದ್ಯಕೀಯ ವಿಧಿ ವಿಧಾನದಂತೆ ದಫನ್ ಮಾಡಿದರಂತೆ... ಯಾಕೋ ಈ ಸುದ್ದಿ ಕೇಳಿ ಅಲ್ಲಿ ಇರಲು ಮನಸ್ಸಾಗಲಿಲ್ಲ ಅಕ್ಷತಾ... ಕಣ್ಣು ಮುಚ್ಚಿದರೆ ನಿನ್ನ ಮತ್ತು ಜಾನ್ಹವಿ ಮುಖವೇ ಕಣ್ಣೆದುರು ಬರುತ್ತಿತ್ತು... “ ಕೆನ್ನೆ ಮೇಲಿಳಿಯುತ್ತಿದ್ದ ಕಣ್ಣೀರನ್ನೊಮ್ಮೆ ಒರೆಸಿಕೊಂಡು ಧೀರ್ಘ ಉಸಿರೆಳೆಯುತ್ತಾನೆ ಅನುಜ್....

ಕತ್ತೆತ್ತಿ ಮೇಲೆ ನೋಡುತ್ತಾ “ ನಿಮ್ಮನ್ನೆಲ್ಲಾ ಮತ್ತೆ ನೋಡುತ್ತೇನೆ ಎನ್ನುವ ಬರವಸೆಯೇ ಇರಲಿಲ್ಲ ಅಕ್ಷು.... ಪುಣ್ಯಕ್ಕೆ ಸಿಕ್ಕ ಫ್ಲೈಟ್ ಬುಕ್ ಮಾಡಿ ಬಂದೇ ಬಿಟ್ಟೆ.... ಉಳಿದ ಸಮಯದಲ್ಲೆಲ್ಲ ಬರುವಾಗ ಸರ್ ಪ್ರೈಜ್ ಅಂತ ಬರ್ತಿದ್ದೆ.... ಆದ್ರೆ ಈ ಸಾರಿ ಜೀವಕ್ಕೆ ಹೆದರಿ ಓಡಿ ಬಂದೆ....
ಏರ್ ಪೋರ್ಟಲ್ಲಿ  ಟೆಂಪರೇಚರ್ ಇರದ ಕಾರಣ ಕ್ವಾರಂಟೈನ್ ಆಗಲಷ್ಟೇ ಹೇಳಿದರು.... “

ಜಾನ್ಹವಿ ಮಗ್ಗಲು ಬದಲಾಯಿಸುವ ಧ್ವನಿ ಕೇಳಿ ಅವಳ ಬಳಿ ಹೋಗುತ್ತಾಳೆ....

“ಈಗೆಲ್ಲಾ ಸರಿ ಆಯ್ತಲ್ವಾ ಮತ್ತೇನು ಸಮಸ್ಯೆ ಈಗ? ಸ್ವಲ್ಪ ದಿನ ದ ನಂತರ ಮತ್ತೆ ಮೊದಲಿಂತೆಯೇ ಆಗುತ್ತದೆ... ಗಾಬರಿ ಬೇಡ” ಎಂದಳು ಅಕ್ಷತಾ...

ಅನುಜ್ “ ಹೆದರಿಕೆ ಇರೋದು ಇಲ್ಲೇ ಅಕ್ಷತಾ.... ಸಾವಿರಾರು ಮೈಲು ದೂರದಲ್ಲಿದ್ದರೂ ವಿಡಿಯೋ ಕಾಲ್ ಮಾಡಿದಾಗ ಮಗಳು ಮಡದಿ ಪಕ್ಕದಲ್ಲೇ ಇದ್ದ ಅನುಭವ ಕೊಡುತ್ತಿತ್ತು... ಈಗ ನೋಡು ಒಂದೇ ಮನೆಯಲ್ಲದ್ದೂ ಗೊಡೆಯೊಂದರ ಆ ಕಡೆ ನೀವಿದ್ದರೂ ಸಾವಿರಾರು ಮೈಲು ದೂರವಿದ್ದ ಅನುಭವ...  “” ಅನುಜ್ ಕಣ್ಣಲ್ಲಿ ಧಾರಾಕಾರ ನೀರು ಬರುತ್ತಿತ್ತು...

“ಅದಕ್ಕಿಂತ ದೊಡ್ಡ ಅಪರಾಧಿ ಪ್ರಜ್ಞೆ  ಅಂದ್ರೆ ನನ್ನಿಂದಲೇ ನನ್ನ ಮಗಳಿಗೂ ಜ್ವರ ಬಂದಿದ್ದರೇ ಎನ್ನುವ ಭಾವ.... ಈ ಭಾವನೆಯೇ ನನ್ನ ಜೀವ ತಿನ್ನುತ್ತಿದೆ ಅಕ್ಷತಾ “” ಎನ್ನುತ್ತಾ ಮುಖ ಮುಚ್ಚಿಕೊಳ್ಳುತ್ತಾನೆ...
ಈಗ ಅಕ್ಷತಾ “ ರ್ರೀ... ಅದೇನ್ ನಿನ್ನೆಯಿಂದ ಅದನ್ನೇ ಹೇಳಿಕೊಂಡು ಅಳ್ತಾ ಇದೀರಾ.... ಏನೂ ಆಗಲ್ಲ ಅಂದ್ರೂ ಕೇಳಲ್ಲ ನೀವು.... ಬೇಡ ಬಿಡೀ ಈ ಕ್ವಾರಂಟೈನ್.... ಬಂದು ಬಿಡಿ ರೂಂ ಹೊರಗಡೆ... ಎಲ್ಲರೂ ಒಟ್ಟಿಗೇ ಇರೋಣ... ಏನಾದರೂ ಆದರೆ  ಎಲ್ಲರಿಗೂ ಆಗಲಿ... ಬನ್ನಿ ಹೊರಗಡೆ “ ಎನ್ನುತ್ತಾ ಕೋಣೆಯ ಬಾಗಿಲಿನ ಕಡೆ ಹೋಗುತ್ತಾಳೆ....

ಅನುಜ್ ಛಂಗನೇ ಸೋಫಾದಿಂದ ಎದ್ದು ಬಾಗಿಲಿನ ಬಳಿ ಓಡುತ್ತಾನೆ...
ಬೋಲ್ಟ್ ಹಾಕಿಕೊಳ್ಳುತ್ತಾನೆ......

Dec 18, 2019

ನಿಷ್ಠೆ..!!!!

ಸುಮಾರುಇಪ್ಪತ್ತುವರ್ಷದಹಿಂದಿನಕಥೆಇದು..ನನಗಾಗವಯಸ್ಸುಇಪ್ಪತ್ತೆರಡೋ-ಇಪ್ಪತ್ಮುರೊ.... ಆಗಷ್ಟೆಕೆಲಸಸೇರಿದ್ದೆ... ನಮ್ಮಜೊತೆಪಿಳ್ಳೈಅಂತಹಿರಿಯಸಹೊದ್ಯೋಗಿಯೊಬ್ಬರಿದ್ದರು... ಅವರವಯಸ್ಸುಆವಾಗಲೇಅರವತ್ತೈದಾಗಿತ್ತು...ಕೇರಳದವರು... ಟಿಪ್ಟಾಪಾಗಿಇರುತ್ತಿದ್ದರು... ಕೃತಕಹಲ್ಲುಸೆಟ್ಸಹಹಾಕಿದ್ದರು... ಇಸ್ತ್ರಿಮಾಡಿದಶರ್ಟ್ಬ್ರಾಂಡೆಡ್ಶೂಪರ್ಫ್ಯೂಮ್.... ಅವರನೋಡೋಕೆಖುಷಿ.... 


ನನ್ನಜೊತೆರೂಮಲ್ಲಿಸುರೇಶಅಂತಸ್ನೇಹಿತನೊಬ್ಬನಿದ್ದ...ಅವನುಚಿತ್ರದುರ್ಗದವನು... ಸದಾಬೇರೆಯವರಕಾಲೆಳೆಯೋದೇಅವನಕೆಲಸ...    ಕಾಲೇಜಿನಿಂದಹೊರಬಂದುಕೆಲಸಕ್ಕೆಸೇರಿದಹೊಸತಾದಕಾರಣನಮ್ಮದುಹರುಕುಮುರುಕುಹಿಂದಿ... ಪಿಳ್ಳೈಯವರದ್ದುಕೇರಳಹಿಂದಿ... ರಾಗವಾಗಿಮೂಗಲ್ಲಿಹಿಂದಿಮಾತಾಡುತ್ತಿದ್ದರು... ಕೆಲವೊಮ್ಮೆಟಿಕ್ಟಾಕ್ಇಂಗ್ಲೀಷ್..... ಅವರುತಮ್ಮಹಿಂದಿನಕೆಲಸಗಳಬಗ್ಗೆಹೇಳುತ್ತಿದ್ದರೆನಾವುಬಾಯಿತೆರೆದುಕೇಳುತ್ತಿದ್ದೆವು.... ತಮ್ಮಗೋವಾಕಂಪನಿಕೆಲಸಕಾರವಾರಬಾಂಬೆತಿರುಗಾಟವನ್ನುಮಸಾಲೆಜೊತೆರಸವತ್ತಾಗಿಹೇಳುತ್ತಿದ್ದರು... 

ಅವತ್ತುತುಂಬಾಹುರುಪಿನಲ್ಲಿತಮ್ಮಕಥೆಹೇಳಲುಶುರುಮಾಡಿದರು... ಯಥಾಪ್ರಕಾರನಾನೂಸುರೇಶಬಾಯಿತೆರೆದುಕೇಳುತ್ತಿದ್ದೆವು... ಗೋವಾಕೆಲಸದಬಗ್ಗೆಕೆಲಸಮುಗಿಸಿರೂಮಿಗೆಬಂದರೆಅಕ್ಕಪಕ್ಕದಮನೆಯಹುಡುಗಿಯರಬಗ್ಗೆಹೇಳುತ್ತಿದ್ದರು... ಸುರೇಶಸುಮ್ಮನಿರಬೇಕಲ್ಲ... “ ಸರ್ನಿಮ್ಮಹೆಂಡತಿಆವಾಗಎಲ್ಲಿದ್ದರು” ಪಿಳ್ಳೈಸರ್ನಾಚುತ್ತಾ“ ಅವರುಕೇರಳದಲ್ಲೇಇದ್ದರುಕಂಪನಿನನಗೆಬ್ಯಾಚುಲರ್ಆಕಮಡೇಶನ್ಮಾತ್ರಕೊಟ್ಟಿತ್ತು” ಅಂದ್ರು.... ಅದನ್ನುಅವರುಖುಷಿಯಿಂದಅಂದ್ರಾ... ಬೇಸರದಿಂದಹೇಳಿದ್ರಾಕಂಡುಹಿಡಿಯಲುಆಗಲಿಲ್ಲ...  ಅವರಮಸಾಲೆಭರಿತಮಾತುಗಳೆಲ್ಲಮುಗಿದುಊಟಕ್ಕೆಹೊಗೋಣಅಂತಎದ್ದೆವು... ಸುರೇಶನನಾಲಿಗೆತುರಿಸುತ್ತಿತ್ತುಏನೋಕೇಳಲು.... ಕೇಳೇಬಿಟ್ಟ.....  “ ಸರ್ನೀವುಇಷ್ಟೆಲ್ಲಾಊರುದೇಶಸುತ್ತಿದ್ದೀರಾ... ತುಂಬಾಹುಡುಗಿಯರಜೊತೆಕೆಲಸಮಾಡಿದ್ದೀರಾ... ನೀವ್ಯಾವಹುಡುಗಿಯನ್ನೂಪಟಾಯಿಸಲಿಲ್ಲವಾ’?? “ ವಯಸ್ಸಿಗೆಹೊಳೆದಮಾತನ್ನೇಕೇಳಿದ್ದಅವ... 

ನನಗೆಗಾಬರಿ.... ನಮಗಿಂತ40 ವರ್ಷಹಿರಿಯರಹತ್ತಿರ  ಕೇಳಬಾರದಿತ್ತುಅಂತ.... ಅವರತುಂಟನಗುಇನ್ನೂನನಗೆನೆನಪಿದೆನನ್ನಹೆಗಲಮೇಲೆಕೈಯಿಟ್ಟು“ ದಿನಕರನ್, ( ನನ್ನನ್ನುಹಾಗೇಕರೆಯುತ್ತಿದ್ದರುಮದುವೆಆಗಿನಾಲ್ವತ್ತುವರ್ಷಆಯ್ತು... I never cheated my wife... I am very honest to my wife” ಅಂದ್ರುತುಂಬಾಸ್ಫುಟವಾದಇಂಗ್ಲೀಷಲ್ಲಿ.... ಆವತ್ತಿಗೆಅರ್ಥವಾಗಿದ್ದುಅಷ್ಟೇಇತ್ತು...  ಅಷ್ಟುಹೇಳಿರೂಮಿಂದಹೊರಹೋಗಿನಿಂತರು... ಮತ್ತೊಮ್ಮೆನಮ್ಮಕಡೆತಿರುಗಿಹೊಡೆದಡೈಲಾಗ್ಇನ್ನೂತನಕನೆನಪಿದೆ... “  it doesn’t mean that I am very good man Ok... I didn’t get any OPPORTUNITIES to cheat her. THAT’S IT” ಅಂದ್ರು..... 

ಅದರಸರಿಯಾದಅರ್ಥಆಗಲುಸುಮಾರುವರ್ಷವೇಹಿಡೀತು... 

ಇದೆಲ್ಲಾಈಗಯಾಕೆನೆನಪಾಯ್ತುಅಂದ್ರೆಮೊನ್ನೆಒಂದುಸಮಾರಂಭದಲ್ಲಿನನ್ನಕಿರಿಯಗೆಳೆಯನೊಬ್ಬಸಿಕ್ಕಿದ್ದ... 
ಹೆಂಡತಿಮಕ್ಕಳಜೊತೆಬಂದಿದ್ದ... ತುಂಬಾಓದಿದಸ್ಮಾರ್ಟಹುಡುಗಅವನು.... ಅವನಮದುವೆಗೆಹೋಗಿರಲಿಲ್ಲನಾನು... ಹೀಗೇಸುಮ್ಮನೆಮಾತಿಗಂತಕೇಳ್ದೆ.. “ ಏನಪ್ಪಾಲವ್ಮ್ಯಾರೇಜಾ...”?? 
ಅವನಉತ್ತರಮೇಲಿನಎಲ್ಲಾಘಟನೆನೆನಪಿಸಿತುಮತ್ತೆಬರೆಯುವಹಾಗೆಮಾಡಿತು... 
ಅವನಉತ್ತರಹೀಗಿತ್ತು... “ ಇಲ್ರೀಯಪ್ಪಾ... ನನ್ನಮದುವೆಪಕ್ಕಾಅಪ್ಪಅಮ್ಮಹುಡುಕಿಜಾತಕಮ್ಯಾಚ್ಆಗಿಪಕ್ಕಾಪ್ರಾಪರ್ಸಂಪ್ರದಾಯಪ್ರಕಾರವಾಗಿಮದುವೆಆದೆ” ಅಂದ.... ಸಣ್ಣಗ್ಯಾಪ್ಕೊಟ್ಟುಮುಂದುವರಿಸಿದ“ ಹಂಗಂತಲವ್ಮ್ಯಾರೇಜ್ಆಗೋಮನಸ್ಸಿರಲಿಲ್ಲಅಂತಲ್ಲ.... ಯಾರೂಸಿಕ್ಕಿರಲಿಲ್ಲಅಷ್ಟೆ” ಅಂದ.. ಮುಖನೋಡಿದೆ...
ಬೇಸರದಿಂದಹೇಳಿದ್ನಾಹೆಮ್ಮೆಯಿಂದಹೇಳಿದ್ನಾಗೊತ್ತಾಗಲಿಲ್ಲ.... ಬೆಳಕುಕಡಿಮೆಯಿತ್ತು.....

Dec 20, 2018

ಬಿದ್ದ ಹಲ್ಲು- ಗೆದ್ದ ಮಗಳು..!!!


ಬಿದ್ದೋಯ್ತಲ್ಲೇ ಅಮ್ಮ ನನ್ ಹಲ್ಲು...
ಮತ್ತೆ ಬರಲ್ವಾ..?
ಹೀಗೇ ಬೊಚ್ ಬಾಯಾ ಹೇಗೆ?
ಕಚ್ಚಲಿ ಹೇಗೇ ಸೇಬು
ಕಡಿಯಲಾಗದು ಕಬಾಬೂ!
ಬೇಕೇ ಬೇಕು ಈಗ್ಲೇ ನನ್ ಹಲ್ಲು

ಓ ಅಂತ ಅತ್ತಳು ಮಗಳು
ಅಮ್ಮನಿಗೋ ದಿಗಿಲು

ಮಗಳೇ... ಈ ಹಲ್ಲು ಹಳತು..
ಇದು ಬಿದ್ದರೆ, ಬರತ್ತೆ ಹೊಸತು..
ದೇವಲೋಕದ ‘ಪರಿ’ ಬಂದು ಕೊಡ್ತಾಳೆ ಹೊಸತು

ತರಕಾರಿ ತಿಂದರೆ ಮಗಳೇ
ಬಿಟ್ಟರೆ ತಂಟೆಯು ರಗಳೇ
ಬರುತಾಳೆ ಕನಸಲಿ  ‘ಪರಿ’
ಬಿದ್ದ ಹಲ್ಲಿನ ಬದಲು ಕೊಡ್ತಾಳೆ ಚಿನ್ನದ ಹಲ್ಲು...

ಯೋಚನೆಗೆ ಬಿದ್ದಳು‌ ಪೋರಿ,
ನಾಲಿಗೆ ಹೊರಳಿಸಿ ಹಲ್ಲ ಸಂದಿಗಳಲಿ

ಅಮ್ಮಾ ನನ್ನ ಹಲ್ಲು ನನಗೇ ಬರಲಿ
ಚಿನ್ನದ ಹಲ್ಲು ಅವಳಲ್ಲಿರಲಿ
ದಿನಾ ಹೋಂವರ್ಕನ್ನ ಮಾತ್ರ
ಪ್ಲೀಸ್ ಪ್ಲೀಸ್ ಅವಳೇ ಬರ್ಕೊಡಲಿ...

( ನಾನು ಬರೆದ ಸಾಧಾರಣ ಕವನಕ್ಕೆ ಬಂಗಾರದ ರಂಗು ಕೊಟ್ಟವರು ಬದರಿನಾಥ್ ಪಲವಳ್ಳಿಯವರು..)

Dec 16, 2018

ಆಸೆ....!!!

3K ಚಿತ್ರ-ಕವನ ಸ್ಪರ್ಧೆಗಾಗಿ ಬರೆದ ಕವನ...

ಮುನಿಸಿ ಹೇಳದೇ ಹೋದ
ಗೆಳೆಯನ ನೆನಪಿಗೆ ಬರವಿಲ್ಲ..
ಅವನ  ಇರುವಿಕೆಗಾಗಿ
ಕುರುಹು ಇರಲೇ ಬೇಕಿಲ್ಲ....

ಕಾಡುವ ಕನಸಿನ ನಡುವೆ
ನೆನಪಿನ ನೆರಳಿಗೆ ಸಾವಿಲ್ಲ...
ಬರಿದಾದ ಕಣ್ಣೀರಿಗೆ
ಕಾರಣವ ಹುಡುಕುವ ಮನಸಿಲ್ಲ...

ಮನದ ಮುನಿಸಿಗೆ ಮುಲಾಮು
ಸವರಿದರೂ ಮಾಯುವ ಗಾಯ ಇದಲ್ಲ...
ಅಳಿಸಿಹೋದ ಹೆಜ್ಜೆ ಗುರುತ
ಹುಡುಕುವ ಬಯಕೆಯಂತೂ ಇಲ್ಲ...

ಇರುವುದೊಂದೆ ಆಸೆ ನನಗೆ....

ಮನೆಯ ಮುಚ್ಚಿದ ಬಾಗಿಲಿಗೆ
ಪತ್ತೆಯಾಗದ ಸಾಕ್ಷ್ಯವಿರಿಸು...
ಮನಸ ಮುರಿದ ಕಾರಣ ತಿಳಿಸಿ
ವಿಳಾಸವಿರದ ಪತ್ರವಿರಿಸು...

Aug 1, 2015

ನಿನಗಾಗಿ....!!!


ಈ ಕಥೆಯನ್ನ ಬಾಲು ಸರ್ ಬರೆದ ಕಥೆಯ ಮುಂದುವರಿಕೆಯಾಗಿ ಬರೆದಿದ್ದೇನೆ... ಅವರು ಬರೆದ ಕಥೆಯ ಲಿಂಕ್ ಇಲ್ಲಿದೆ...http://nimmolagobba.blogspot.in/2015/07/blog-post_18.html

   ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು... ಎದುರುಗಡೆ ಕುಳಿತ ಆಕೆಯ ಮುಖ ನೋಡಿದೆ... " ನಾನು ಹೇಳುವುದನ್ನು ಗಮನವಿಟ್ಟು ಕೇಳು.. ನಿನ್ನ ಮಗಳು ಸೊಸೆಯಾಗಿ ಬಂದರೂ ಸಹ ನನಗೆ ಮಗಳಾಗಿಯೇ ಇರುತ್ತಾಳೆ.. ನನ್ನ ಮಗನೂ ಸಹ ನಿನಗೆ ಅಳಿಯನಾಗಿ ಅಲ್ಲ ಮಗನಾಗಿಯೇ ಇರಲಿ... ಅವರಿಬ್ಬರ ಸಂಬಂಧ ಅವರಿಗಿಷ್ಟ ಬಂದ ಹಾಗಿರಲಿ... ಅದನ್ನೂ ನಾವೇ ನಿರ್ಧಾರ ಮಾಡುವುದು ಬೇಡ.. ನಾವು ಒಪ್ಪಿಗೆ ಕೊಡೋಣ.. ಅದ್ಯಾವ ಕೆಟ್ಟ ಗಳಿಗೆಯಲ್ಲಿ ದೇವರು ನಿನ್ನನ್ನು ನನ್ನಿಂದ ದೂರ ಮಾಡಿದನೋ, ಅದೇ ದೇವರು ಆದ ತಪ್ಪನ್ನು ತಿದ್ದಿಕೊಂಡು ನಿನ್ನನ್ನು ನನ್ನ ಹತ್ತಿರ ಕಳಿಸಿದ್ದಾನೆ ಎಂದುಕೋ... ಮಕ್ಕಳ ಖುಶಿಯಲ್ಲಿ ನಮ್ಮ ಖುಶಿ ಕಾಣೋಣ... ಈ ನೆವದಿಂದಾದರೂ ನಾವು ಹತ್ತಿರವಾಗೋಣ.." ಎಂದೆ ಸ್ವಲ್ಪ ರಸಿಕತನದಿಂದ... ಅವಳಿಗೂ ಸಹ ಇದೇ ಬೇಕಿತ್ತು ಎನಿಸುವ ಹಾಗೆ " ಹೂಂ.." ಎಂದಳು ತಲೆ ಕೆಳಗೆ ಹಾಕಿ... ಅವಳ ನಾಚಿಕೆ ನನಗೆ ಖುಶಿ ತಂದಿತ್ತು... ರೂಮ್ ಬಾಯ್ ತಂದಿಟ್ಟಿದ್ದ ಈರುಳ್ಳಿ ಬಜೆಯನ್ನು ಅವಳಿಗೆ ಕೊಟ್ಟೆ.. ಅವಳ ಇಷ್ಟದ ತಿಂಡಿ ಅದು... ನನಗೂ ಒಂದು ತುಂಡು ಕೊಟ್ಟಳು... ಟೀ ಕುಡಿದು ಅಲ್ಲಿಂದ ಬೀಳ್ಕೊಟ್ಟೆ...


   ಮನೆಗೆ ಬಂದಾಗ ನನ್ನ ಮೂಡೇ ಬದಲಾಗಿತ್ತು... ನನ್ನ ಹೆಂಡತಿಯ ಊಹೆಗೆ ಸಿಗದ ನನ್ನ ನಡವಳಿಕೆ ಅವಳಿಗೆ ಅಚ್ಚರಿ ಮೂಡಿಸಿತ್ತು... " ಏನು ಮಗನ ಮದುವೆಯ ದಿನ ಹತ್ತಿರ ಬಂದ ಹಾಗೆ ನೀವೂ ಸಿಂಗಾರಗೊಳ್ಳುತ್ತಿರುವ ಹಾಗಿದೆ... " ಎಂದು ಕಿಚಾಯಿಸಿದಳು... ನಾನೂ ಸುಮ್ಮನಿರಬೇಕಲ್ಲ..." ನನ್ನ ಮಗನ ಮದುವೆ ನಡೆದ ಚಪ್ಪರದಲ್ಲೇ ನನ್ನ ಮರುಮದುವೆಯೂ ನಡೆಯುವುದಿದೆ.." ಎಂದೆ ಮಾರ್ಮಿಕವಾಗಿ.... " ಏನೊಪ್ಪ, ನಿಮ್ಮನ್ನ ನೋಡಿದ್ರೆ ಅದಕ್ಕೂ ರೆಡಿ ಇರುವ ಹಾಗಿದೆ " ಎಂದಳು.. ನಾನು ಅನಂತ್ ನಾಗ್ ನಗೆ ನಕ್ಕು ಒಳ ಹೋದೆ... ರೂಮಿನ ಚಿಲಕ ಸಿಕ್ಕಿಸಿ, ನನ್ನ ಹಳೆಯ ಸೂಟ್ ಕೇಸಿನ ಚಾವಿ ಹುಡುಕಿದೆ... ಅದರಲ್ಲಿನ ನನ್ನ ಹಳೆಯ ಡೈರಿ ಓದಬೇಕಿತ್ತು ನನಗೆ... ನನ್ನ ಹೆಂಡತಿಯಿಂದ ಮುಚ್ಚಿಟ್ಟ ಏಕೈಕ ವಸ್ತು ಅದು.. ಅವಳೂ ಸಹ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ... ಸೂಟಕೇಸಿನ ಚಾವಿ ಸಿಕ್ಕಿತ್ತು... ರೂಮಿನ ಬಾಗಿಲು ತಟ್ಟುತ್ತಿದ್ದ ಮಗರಾಯ... ಚಾವಿ ಕಿಸೆಯಲ್ಲಿ ಹಾಕಿಕೊಂಡು ಬಾಗಿಲು ತೆರೆದೆ... ” ಅಪ್ಪ , ಮದುವೆ ದಿನ ಗೊತ್ತುಮಾಡಬೇಕು, ಪುರೋಹಿತರ ಹತ್ತಿರ ಹೋಗೋಣ ಬನ್ನಿ. ತಯಾರಾಗಿ.." ಎಂದವನೇ ಅಮ್ಮನ ಹತ್ತಿರ ಹೊರಟ.. ನನ್ನ ಕಾಲಿಗೆ ರೆಕ್ಕೆ ಬಂದಂತಾಗಿತ್ತು... ಲಗುಬಗೆಯಲಿ ನಾನೂ ರೆಡಿಯಾದೆ... ಹಳೆಯ ಸೂಟ್ ಕೇಸಿನ ಚಾವಿ ನನ್ನ ಕಿಸೆಯಲ್ಲೇ ಉಳಿಯಿತು...


  ಪುರೋಹಿತರ ಬಳಿ ಕೂಡ ತುಂಬಾ ಹತ್ತಿರದ ದಿನಾಂಕ ಗೊತ್ತು ಮಾಡಲು ಹೇಳಿದೆ... ಮಗ, ನನ್ನ ಆತುರ ನೋಡುತ್ತಾ ಬೆರಗಾಗಿದ್ದ... ಹತ್ತೇ ದಿನದಲ್ಲಿ ಆಗುವ ಮದುವೆಯನ್ನು ಆತನೂ ಎಣಿಸಿರಲಿಕ್ಕಿಲ್ಲ.... ಆತನೂ ಖುಶಿಯಾದ, ನಾನು ಖುಶಿಯಾದ ಕಾರಣ ಆತನಿಗೆ ತಿಳಿಯಲಿಲ್ಲ... ಮನೆಗೆ ಬಂದಾಗ ಊಟದ ಹೊತ್ತು.... ಊಟ ಮಾಡಿ ನನಗೆ ಹಳೆಯ ಡೈರಿ ಓದಲಿಕ್ಕಿತ್ತು... "ನನಗೆ ಗಡದ್ದಾಗಿ ನಿದ್ದೆ ಬರ್ತಾ ಇದೆ, ಸ್ವಲ್ಪ ಹೊತ್ತು ನಂಗೆ ಡಿಸ್ಟರ್ಬ್ ಮಾಡಬೇಡ" ಎಂದು ನನ್ನಾಕೆಗೆ ಹೇಳಿ ರೂಮಿನ ಬಾಗಿಲು ಜಡಿದೆ... ಸೂಟ್ ಕೇಸಿನಲ್ಲಿದ್ದ ಹಳೆಯ ಡೈರಿ ತೆರೆಯುವಾಗ ಎದೆ ಡವ ಡವ... ಈ ವಯಸ್ಸಲ್ಲೂ ಈ ರೀತಿ ಆಗತ್ತೆಂತ ಕನಸ್ಸಲ್ಲೂ ಎಣಿಸಿರಲಿಲ್ಲ.... ನಮ್ಮ ಪ್ರೀತಿ ಉತ್ತುಂಗದ ದಿನಗಳಲ್ಲಿನ ದಿನಗಳ ಬಗ್ಗೆ ಓದಬೇಕೆನಿಸಿತು... ಎಲ್ಲರ ಹಾಗೆ ದಿನಾ ಡೈರಿ ಬರೆದಿರಲಿಲ್ಲ ನಾನು... ಉತ್ತಮ ದಿನಗಳ ಮತ್ತು ಕೆಟ್ಟ ದಿನಗಳ ಬಗ್ಗೆ ತಾರೀಖು ನಮೂದಿಸಿ ಬರೆಯುತ್ತಿದ್ದೆ.... ಅದೂ ಸಹ ಯಾರದೇ ಹೆಸರು ನಮೂದಿಸದೇ... ಬೇರೆಯವರು ಯಾರೇ ಓದಿದರೂ ಸಹ ಕಥೆ, ಲೇಖನದ ರೀತಿ ಇರುತ್ತಿತ್ತು... ಹಾಳೆ ತಿರುವುತ್ತಿದ್ದವನಿಗೆ ಫೆಬ್ರುವರಿ ಹದಿನಾಲ್ಕರ ದಿನ ಬರವಣಿಗೆ ಓದಬೇಕೆನಿಸಿತು... ಪುಟ ತಿರುವಿ ಓದಿದೆ....


    " ಅವಳಿಗಾಗಿ ಕೊಂಡು ಬಂದಿದ್ದ ಚಿನ್ನದ ಬಳೆಯನ್ನು ನೋಡಿ ಅವಳ ಸಂತೋಷವನ್ನು ಊಹಿಸಿಯೇ ಮನ ಮಿಡಿಯುತ್ತಿದೆ... ಬಳೆಯ ನಡುವಿನಲ್ಲಿದ್ದ ಲವ್ ಮಾರ್ಕ್ ನೋಡಿಯೇ ಅದನ್ನು ಖರೀದಿಸಿದ್ದೆ... ಸರಿಯಾದ ಸಮಯಕ್ಕೆ ಬಂದ ಆಕೆ ನನ್ನ ಪಕ್ಕವೇ ಕುಳಿತಳು . ಪರಸ್ಪರ ಪ್ರೀತಿಸುವ  ಬಗ್ಗೆ ಹೇಳಿಕೊಂಡು ತುಂಬಾ ಸಮಯವಾಗಿದ್ದರೂ ನಮ್ಮ ಪ್ರತೀ ಭೇಟಿಯೂ ಮೊದಲ ಭೇಟಿಯ ಹಾಗೆ ಇರುತ್ತಿದೆ... ಪಾರ್ಕ್ ನಲ್ಲಿ ತುಂಬಾ ಜನ ಇದ್ದರೂ ಸಹ ನನಗೆ ಕಾಣುತ್ತಿದ್ದುದು ಇವಳೇ ಆಗಿದ್ದಳು... ನನ್ನವಳ ಗಲ್ಲ  ಗುಲಾಬಿಯಾಗಿದ್ದು ಅವಳು ಧರಿಸಿದ್ದ ಗುಲಾಬಿ ಬಣ್ಣದ ಚುಡಿದಾರದಿಂದಲಾ ಅಥವಾ ನನ್ನನ್ನು ನೋಡಿಯಾ ತಿಳಿಯಲಿಲ್ಲ... ತಡ ಮಾಡದೇ " ಹ್ಯಾಪಿ ವೆಲಂಟೈನ್ಸ್ ಡೇ ಡಿಯರ್.. ಐ ಲವ್ ಯು..." ಎಂದವನೇ ಕೈಯಲ್ಲಿದ್ದ ಚಿನ್ನದ ಬಳೆ ಕೊಟ್ಟೆ... ಅವಳ ಕಣ್ಣಲ್ಲಿ ಬಣ್ಣದ ಚಿಟ್ಟೆಗಳು.. ಅವಳೂ ಸಹ ದುಡಿಯುತ್ತಿದ್ದರೂ ಕೈತುಂಬಾ ಸಂಬಳ ಎಣಿಸುತ್ತಿದ್ದರೂ ನಾನು ಕೊಟ್ಟ ಉಡುಗೊರೆ ಅವಳಿಗೆ ಖುಷಿ ನೀಡಿದ್ದು ಅವಳ ಕಣ್ಣಲ್ಲೇ ತಿಳಿಯುತ್ತಿತ್ತು... " ಐ ಲವ್ ಯು ಟೂ.." ಎಂದವಳೇ ಸುತ್ತಮುತ್ತಲಿದ್ದವನ್ನೂ ಕಡೆಗಣಿಸಿ ತಬ್ಬಿಕೊಂಡಳು... ಈ ಮುಂಚೆ ತಬ್ಬಿಕೊಂಡಿದ್ದರೂ ಇವತ್ತಿನ ಖುಶಿಯ ಪರಿ ಬೇರೆಯದಿತ್ತು... ”

   ಓದುತ್ತಾ ಹೋದಂತೆಲ್ಲಾ  ಇಂಥಹದೇ ಬಿಡಿ ಬಿಡಿ ಬರಹಗಳು.. ಒಂದೊಂದು ಸಹ ಮೈ ಪುಳಕಿತಗೊಳ್ಳುವ ಘಟನೆಗಳೇ ಆಗಿದ್ದವು... ಅಷ್ಟರಲ್ಲಿ ಮೊಬೈಲ್ ರಿಂಗಾಯಿತು... " ಅಬ್ಭಾ ನಿನ್ನದೇ ನೆನಪಿನಲ್ಲಿದ್ದೆ, ನಿನ್ನದೇ ಫೋನ್... ಹೇಗಿದ್ದೀಯಾ... ತಯಾರಿ ಜೋರಾಗಿ ನಡೆಯುತ್ತಿದೆಯಾ...? ಬೇಗನೇ ಬಂದು ಬಿಡು ನನ್ನ ಮನೆಗೆ... ಮನೆ ತುಂಬಿಸಿಕೊಳ್ಳುತ್ತೇನೆ.." ಆ ಕಡೆಯಿಂದ ಮುಸಿ ಮುಸಿ ನಗು..." ಮನೆ ತುಂಬಿಸಿಕೊಳ್ಳುವುದು ನನ್ನನ್ನಲ್ಲ, ನನ್ನ ಮಗಳನ್ನ" ಎಂದಳು ಮುಗುಮ್ಮಾಗಿ... ದನಿಯಲ್ಲಿನ ಸಿಹಿ ಇನ್ನೂ ಕಡಿಮೆಯಾಗಿರಲಿಲ್ಲ... " ಈಗ ನಿಮ್ಮ ಮನೆಗೆ ಬರುತ್ತಾ ಇದ್ದೇವೆ ನನ್ನ ಯಜಮಾನರೂ ಬರುತ್ತಾರೆ.. ಕೆಲವೊಂದು ವಸ್ತುಗಳ ಖರಿದಿ ಬಗ್ಗೆ ಮಾತನಾಡಬೇಕು ಅದಕ್ಕೆ " ಎಂದಳು... " ನಾನೇನೋ ನನ್ನನ್ನ ನೋಡಲಿಕ್ಕೆ ಬರ್ತಾ ಇದೀಯಾ ಅಂದುಕೊಂಡೆ" ಅಂದೆ ರಸಿಕತೆಯಿಂದ... " ಯಾವುದೋ ಒಂದು ನೆವ ಅಷ್ಟೇ.." ಅಂದು ಫೋನ್ ಕಟ್ ಮಾಡಿದಳು.. ನನ್ನನ್ನು ನೋಡೋದು ನೆವವೋ, ಇಲ್ಲಿಗೆ ಬರೋದು ನೆವವೋ ಹೇಳಲಿಲ್ಲ.. ಅವಳು ಯಾವಾಗಲೂ ಹಾಗೇನೇ... ಅವಳು ಬರುವ ಮೊದಲೇ ನಾನು ರೆಡಿಯಾಗಿ ಬಾಗಿಲಲ್ಲೇ ಕಾದೆ... ಮನೆಯಾಕೆಗೂ ವಿಷ್ಯ ತಿಳಿಸಿದ್ದರಿಂದ ಸಂಜೆಯ ಚಾ ತಿಂಡಿ ರೆಡಿ ಮಾಡುತ್ತಿದ್ದಳು...


   ಮನೆ ಮುಂದೆ ನಿಂತ ಕಾರಿಂದ ಆಕೆ ನಡೆದು ಬರುತ್ತಿದ್ದರೆ ಈ ವಯಸ್ಸಲ್ಲೂ ಓಡಿ ಹೋಗಿ ತಬ್ಬಿ ಬಿಡಲೆ ಎನಿಸುತ್ತಿತ್ತು.. ಅವಳೇ ಮುಂದೆ ಬಂದು ’ ನಮಸ್ತೆ’ ಎಂದಳು... ಪ್ರತಿಯಾಗಿ ನಾನು ’ನಮಸ್ತೆ’ ಎಂದೆ.. ಅವಳ ಗಂಡನ ಕೈ ಕುಲುಕಿ ಒಳ ಕರೆದುಕೊಂಡು ಬಂದೆ... ಅವರ ಕೈ ತಣ್ನಗಿತ್ತು... ಸ್ವಲ್ಪ ಡಲ್ ಇದ್ದರು... ’ ಇವರಿಗೇನಾದರೂ ಗೊತ್ತಿದೆಯಾ ನಮ್ಮ ವಿಷ್ಯ’ ಎನಿಸಿತು...  ವಿಷ್ಯ ಗೊತ್ತಾದರೂ ಏನಾಗತ್ತೆ,? ನಮ್ಮದೇನೂ ಓಡಿ ಹೋಗುವ ವಯಸ್ಸಲ್ಲಾ ಇದು.." ಎಂದಿತು ಹುಂಬ ಮನಸ್ಸು... ಮಗನಿಗೆ ಚಿನ್ನದ ಸರ ಮತ್ತು ಬ್ರಾಸ್ ಲೆಟ್ ಮಾಡಿಸುವ ಮಾತಾದಾಗ " ನನಗಾಗಿ ಏನೂ ಇಲ್ಲವಾ,? ಎಲ್ಲಾ ಅಳಿಯ ದೇವರಿಗೆ ಮಾತ್ರವಾ..? " ಎಂದೆ ಹುಡುಗಾಟದ ದನಿಯಲ್ಲಿ... "ನನ್ನ ಮಗಳನ್ನು ನಿಮ್ಮ ಮಗಳಾಗಿ ಕೊಡ್ತಾ ಇದೀನಿ.." ಎಂದಳು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆಕೆ... " ಏನೂ ಹೆದರಬೇಡಿ, ನಿಮ್ಮ ಮಗಳಲ್ಲ ಅವಳು , ನಮ್ಮ ಮಗಳೇ... ನನಗೂ ಹೆಣ್ಣು ಮಕ್ಕಳಿಲ್ಲ, ನಿಮಗೂ ಗಂಡು ಮಗುವಿಲ್ಲ... ಇಬ್ಬರ ಕೊರತೆಯೂ ನೀಗಿದ ಹಾಗಾಯಿತು ಒಂದೇ ಸಂಬಂಧದಲ್ಲಿ " ಎಂದಳು ನನ್ನ ಪತ್ನಿ... ನಾನು ಆಕೆಯ ಮುಖ ನೋಡಿದೆ... ತುಂಟತನದಲಿ ಕಣ್ಣು ಹೊಡೆದೆ.. ಆಕೆಯ ಕೆನ್ನೆ ಕೆಂಪಗಾಯ್ತು ಈ ವಯಸ್ಸಲ್ಲೂ.... ಅವರನ್ನು ಬೀಳ್ಕೊಟ್ಟು ಸ್ವಲ್ಪ ಹೊತ್ತಲ್ಲೇ ಮಗ ಬಂದ.. ಆತನೂ ಸಹ ಮದುವೆಯ ಖರೀದಿ ಮುಗಿಸಿ ಬಂದಿದ್ದ..   ಮದುವೆಯಂತೂ ನನ್ನಲ್ಲಿ ಹೊಸ ಹುಮ್ಮಸ್ಸು ತಂದಿತ್ತು... ಮದುವೆಯ ದಿನ ನಾನು ಆಕೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆ... ಅವಳೂ ಸಹ ತುಂಬಾ ಖುಶಿಯಿಂದಿದ್ದಳು... ಮದುವೆಯ ಫೋಟೊ ತೆಗೆದುಕೊಳ್ಳುವಾಗ ಸಹ ಅವಳ ಸಾಮಿಪ್ಯ ಸಿಗುವ ಹಾಗೆ ನೋಡಿಕೊಂಡೆ... ನನ್ನಲ್ಲಿ ಇಪ್ಪತ್ತರ ಯುವಕನ ತಾರುಣ್ಯ ತುಂಬಿತ್ತು... ಮದುವೆ ಮುಗಿದು ಮಗಳನ್ನು ಬೀಳ್ಕೊಡುವಾಗ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ರೀತಿ ನೋಡಿ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು... ಅವಳ ಕೈಹಿಡಿದು ಸಮಧಾನ ಮಾಡಿದ್ದೆ... " ನಿನ್ನ ಮಗಳನ್ನು ನಿನಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತೇನೆ.. ನಿನ್ನ ನೆನಪೇ ಬಾರದ ಹಾಗೆ ನಡೆಸಿಕೊಳ್ಳುತ್ತೇನೆ" ಎಂದಾಗ ಆಕೆ ಹಗುರಾಗಿದ್ದಳು... ನನ್ನ ಹೆಂಡತಿ ’ಹೌದು’ ಎಂದು ದನಿಗೂಡಿಸಿದ್ದರೂ ಅವಳಿಗೆ ಮುಂದೆ ಬರುವ ಬಿರುಗಾಳಿಯ ಸುಳಿವು ಇರಲಿಲ್ಲ...


    ಮದುವೆ ಮುಗಿದು ಮಗ ಸೊಸೆ ಮಧುಚಂದ್ರಕ್ಕೆ ಹೊರಟಿದ್ದೂ ಆಯ್ತು... ಹದಿನೈದು ದಿನದ ಅವರ ಪ್ರವಾಸವನ್ನು  ವಾರಕ್ಕೇ ಮೊಟಕುಗೊಳಿಸಿ ಬಂದಿದ್ದರು... ಸೊಸೆಯ ಅಪ್ಪನ ಆರೋಗ್ಯ ತುಂಬಾ ಬಿಗಡಾಯಿಸಿ ಆತನನ್ನ ಆಸ್ಪತ್ರೆಗೆ ಸೇರಿಸಿದ್ದರು.. ನನ್ನ ಮಗ ಹೇಳುವವರೆಗೂ ನನಗೆ ತಿಳಿದಿರಲಿಲ್ಲ... ಅವರಿಗೆ ಬ್ಲಡ್ ಕ್ಯಾನ್ಸರ್ ಇತ್ತೆಂದು.... ಮಗಳನ್ನು ನೋಡಿದ ಆತ ಘಂಟೆಯಲ್ಲೇ ತೀರಿಕೊಂಡಿದ್ದರು... ಅವರ ಅಂತ್ಯ ಸಂಸ್ಕಾರಕ್ಕೆ ನಾನು ಹೋಗಿದ್ದೆನಾದರೂ ಆಕೆಯನ್ನು ನೋಡುವ ಧೈರ್ಯವಾಗಲಿಲ್ಲ... ನಮ್ಮದೇನೂ ಅಕ್ರಮ ಸಂಬಂಧವಲ್ಲವಾದರೂ , ಆಕೆಯ ಗಂಡನ ಅಗಲಿಕೆಯ ಬೆಲೆ ತೆತ್ತು, ಆಕೆಯ ಸನಿಹ ಕೋರಿರಲಿಲ್ಲ... ಯಾಕೋ, ಆಕೆಯನ್ನು ಖಾಲೀ ಹಣೆಯಲ್ಲಿ ನೋಡುವ ಧೈರ್ಯ, ಮನಸ್ಸು ಎರಡೂ ಇರಲಿಲ್ಲ... ಮಗ-ಸೊಸೆ ಒಂದು ವಾರ ಅಲ್ಲೇ ಉಳಿದು ಬಂದಿದ್ದರು.. ಕೆಲಸಕ್ಕೆ ಹಾಕಿದ್ದ ರಜೆ ಮುಗಿದ ಕಾರಣ ಅವರು ಇಲ್ಲಿಗೆ ಬಂದಿದ್ದರು... ಆಕೆಯ ಮನೆಯಲ್ಲಿ ಕೆಲಸದಾಕೆ ಬಿಟ್ಟರೆ ಬೇರೆ ಯಾರೂ ಇರಲಿಲ್ಲ... ಆಕೆಯ ನೋವು ನಾನು ಹಂಚಿಕೊಳ್ಳುವ ಆಸೆ ಇದ್ದರೂ ಪರಿಸ್ಥಿತಿ ಹಾಗಿರಲಿಲ್ಲ... ನನ್ನ ಮನೆಗೂ ಅವಳ ಮನೆಗೂ ಒಂದು ರಾತ್ರಿ ಪ್ರಯಾಣದ ದೂರ... ಒಮ್ಮೆ ಫೋನ್ ಮಾಡಿ ನಮ್ಮ ಮನೆಗೆ ಬಂದು ಇರಲು ಹೇಳಿದೆ...

    
    " ನನಗೆ ಒಬ್ಬಳೇ ಇರಬೇಕು ಅನಿಸುತ್ತಿದೆ.. ನಿನ್ನನ್ನ ಕಳೆದುಕೊಂಡ ನಂತರವೂ ನಾನು ಒಬ್ಬಳೇ ಇರಲು ನಿರ್ಧಾರ ಮಾಡಿದ್ದೆ.. ಅಮ್ಮನ ಒತ್ತಾಯಕ್ಕೆ ಮದುವೆ ಆಗಿದ್ದೆ... ನನ್ನ ಗಂಡನಿಗೂ ಸಹ ನನ್ನ ಪ್ರೇಮದ ಬಗ್ಗೆ ಗೊತ್ತಿತ್ತು... ಅದಕ್ಕೆ ಅವರೂ ಸಹ ನನ್ನ ಏಕಾಂತಕ್ಕೆ ಭಂಗ ತರುತ್ತಿರಲಿಲ್ಲ... ಮದುವೆಯಾಗಿ ಐದು ವರ್ಷದ ವರೆಗೂ ನಾನು ಅವರ ಸಾಮಿಪ್ಯ ಬೇಡಿರಲಿಲ್ಲ... ಯಾವಾಗ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತೋ ಮತ್ತು ಅವರ ಆಯುಷ್ಯದ ಅವಧಿ ಗೊತ್ತಾಯಿತೋ ನಾನು ಅಧೀರಳಾದೆ... ಗಂಡನ ನಂತರ ನನ್ನ ಜೊತೆಗೆ ಯಾರು ಎನ್ನುವ ಪ್ರಶ್ನೆ ನನ್ನನ್ನ ಕಾಡುತ್ತಿತ್ತು... ಅದೊಂದೇ ಕಾರಣಕ್ಕೆ ಅವರ ಸಾಮಿಪ್ಯ ಬಯಸಿ ಅವರಿಂದ ಒಂದು ಮಗು ಪಡೆದೆ... ಎಲ್ಲಾ ಕಾಲದಲ್ಲೂ ನಿನ್ನ ನೆನಪಿಸುತ್ತಲೇ ಇದ್ದೆ... ನೀನು ಮಾತ್ರ ಆರಾಮಾಗಿ ಇದ್ದೆ... ಡೆಲಿವರಿಯ ಸಮಯದಲ್ಲಿ   ಮಾತ್ರ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಕಣೋ.. ನೀನೇ ಬೇಕಾಗಿತ್ತು ನನಗೆ ಆ ಟೈಮ್ ನಲ್ಲಿ... ಆದ್ರೆ ನೀನೆಲ್ಲಿದ್ದೆಯೋ ನನಗೆ ತಿಳಿದಿರಲಿಲ್ಲ... ಕ್ರಮೇಣ ನಿನ್ನ ಬಿಟ್ಟು ಇರೋದು, ದೈಹಿಕವಾಗಿ ನನ್ನ ಗಂಡನಿಂದ ದೂರ ಇರೋದು ಎಲ್ಲಾ ರೂಡಿಯಾಯಿತು... ನನ್ನ ಗಂಡ ಅಗಲಿದಾಗಲೂ ನನಗೆ ಅಂಥಹ ನೋವಾಗುತ್ತಿಲ್ಲ ..ಯಾಕೆ ಗೊತ್ತಾ..? ನನ್ನ ಜೀವವಾಗಿರುವ ನನ್ನ ಮಗಳು ನಿನ್ನ ಮಡಿಲಿಗೆ ಹಾಕಿದ್ದೇನೆ ಅದಕ್ಕೆ... ಇನ್ನು ಮುಂದೆ ನೀನೇ ಅವಳನ್ನು ನೋಡಿಕೊಳ್ಳಬೇಕು..." ನನ್ನ ಕಣ್ಣಲ್ಲಿ ನೀರು ಬರ್ತಾ ಇತ್ತು... ಅವಳೂ ಸಹ ಅಳುತ್ತಿದ್ದಳು...ಅಷ್ಟರಲ್ಲಿ ’ ಕಳಕ್ " ಎನ್ನುವ ಶಬ್ಧ... ನಾನು ನನ್ನ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದೆ... ಹಾಲ್ ನಲ್ಲಿರುವ ಇನ್ನೊಂದು ಫೋನ್ ನಿಂದ ಯಾರೋ ಕೇಳಿಸಿಕೊಳ್ಳುತ್ತಿದ್ದರು ಎನಿಸತ್ತೆ... ಎದೆ ಬಡಿತ ಜೋರಾಯಿತು....


    ಸ್ವಲ್ಪ ಹೊತ್ತಲ್ಲೇ ಬಾಗಿಲು ಬಡಿದ ಶಬ್ಧ... " ಕಮ್ ಇನ್" ಎಂದೆ.. ಸೊಸೆ ಇದ್ದಳು.. " ಮಾವಾ, ನಾನು ಈಗ ಕೇಳಿಸಿಕೊಂಡಿದ್ದೆಲ್ಲಾ ಸತ್ಯವಾ...?  ಅಮ್ಮನಿಗೆ ಫೋನ್ ಮಾಡೋಣ ಅಂತ ಫೋನ್ ತೆಗೆದುಕೊಂಡವಳಿಗೆ ಅಮ್ಮನದೇ ಧ್ವನಿ ಕೆಳಿಸಿಕೊಂಡಾಗ ಜೊತೆಗೆ ನಿಮ್ಮ ದನಿ ಕೇಳಿದೆ... ಇದೆಲ್ಲಾ ನಿಜವಾ ಮಾವಾ..? ನಿಮ್ಮ ಸಲುವಾಗಿ ಅಮ್ಮ ಜೀವನವಿಡೀ ಕಾದಳಾ..? ಎಂದೂ ಅಮ್ಮನನ್ನು ಕಾರಣ ಕೇಳದ ನಾನು ಇವತ್ತಿಗೂ ಕೇಳಲ್ಲ... ಆದ್ರೆ..??? " ಸೊಸೆಯ ಮಾತಿನ್ನೂ ಮುಗಿದಿರಲಿಲ್ಲ... " ಹೌದಮ್ಮಾ, ನೀನು ಕೇಳಿಸಿಕೊಂಡಿದ್ದು ನಿಜ.. ನಾನು ನಿಮ್ಮಮ್ಮ ಪ್ರೀತಿಸಿದ್ದೂ ನಿಜ.. ಕಾರಣಾಂತರದಲ್ಲಿ ಬೇರೆ ಆದದ್ದೂ ನಿಜ... ಪರಸ್ಪರ ಎಲ್ಲಿದ್ದೇವೆ ಅಂತ ಗೊತ್ತಿಲ್ಲದೇ ಬದುಕಿದೆವು... ಬಾಳಿದೆವು ಬೇರೆ ಬೇರೆ.. ಈಗ ನಿನ್ನ ಮೂಲಕ ಭೇಟಿಯಾಗಿದ್ದೇವೆ... ಇದೆಲ್ಲ ಮುಗಿದು ಹೋದ ಕಥೆ... ಈಗ ಇದನ್ನು ಬೆಳೆಸುವ ಇರಾದೆ ನಿಮ್ಮಮ್ಮನಿಗೂ ಇಲ್ಲ... ನನಗೂ ಇಲ್ಲ.. ಆದರೆ ನಾನು ಅವಳ ಖುಶಿ ಆಶಿಸುತ್ತೇನೆ.. ಮತ್ತೆ ಅವಳೂ ಕೂಡ ನನ್ನ ಖುಶಿ ಹಾರೈಸುತ್ತಾಳೆ... ” ಇನ್ನೂ ಮಾತನಾಡುತ್ತಲೇ ಇದ್ದೇ..... ಅಷ್ಟರಲ್ಲೇ ಬಾಗಿಲು ಹಾಕಿ ಹೊರಟು ಹೋದಳು... ’ ಅಯ್ಯೋ ದೇವರೇ, ನಾನು ಯಾವತ್ತೂ ಮೊಬೈಲ್ ನಲ್ಲಿ ಮಾತನಾಡುವವನು , ಇವತ್ಯಾಕೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಿದೆ " ಎಂದು ಹಳಹಳಿಸಿದೆ..  ’ದೇವ್ರೇ, ಈ ವಿಷ್ಯ ನನ ಹೆಂಡತಿ ಮತ್ತು ಮಗನಿಗೆ ಹೇಳದೇ ಇರಲಿ... ಅವರಿಬ್ಬರ ದ್ರಷ್ಟಿಯಲ್ಲಿ ನಾನು ಕುಬ್ಜನಾಗುವುದು ಇಶ್ಟವಿರಲಿಲ್ಲ... ಇದೆಲ್ಲದರಿಂದ ಸ್ವಲ್ಪ ಶಾಂತಿ ಸಿಗಲಿ ಎಂದು ನಾನು ರೆಡಿಯಾಗಿ ದೇವಸ್ಥಾನದ ಕಡೆ ಹೊರಟೆ..

   
     ವಾಪಸ್ ಮನೆಗೆ ಬರುವುದು ಕತ್ತಲಾಗಿತ್ತು... ಹೆಂಡತಿ ಬಾಗಿಲಲ್ಲೇ ಕುಳಿತಿದ್ದಳು... ಏನೂ ತಿಳಿಯದ , ತಿಳಿಯಲು ಆಶೆಯೂ ಪಡದ ಮುಗ್ಧ ಜೀವಿಗೆ ನಾನು ಮೋಸ ಮಾಡ್ತಾ ಇದೀನಾ ಎನ್ನುವ ಭಾವ ಕೂಡ ಕಾಡಿತು... ಮುಖ ತೊಳೆದು ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಮಗ ಸೊಸೆ ಕೂಡ ಬಂದರು... ” ಊಟಕ್ಕೆ ನಾನೇ ಬಡಿಸುತ್ತೇನೆ " ಎಂದು ಸೊಸೆ ಹೇಳಿದಾಗ ನಾನು ಸ್ವಲ್ಪ ಗೆಲುವಾದೆ... ಸೊಸೆಗೆ ಕಣ್ಣಲ್ಲೇ ಧನ್ಯವಾದ ಹೇಳಿದೆ... ಮಗ, ಸೊಸೆ, ಹೆಂಡತಿ ಜೊತೆ ಕುಳಿತು ಊಟ ಮಾಡಿ ಸಂತ್ರಪ್ತಿಯಿಂದ ಮಲಗಲು ಹೋದೆ... ಹೆಂಡತಿ ಸಹ ಹಿಂದೆ ಹಿಂದೆ ಬಂದಳು... " ರೀ, ನನಗೆ ಈವತ್ತು ತುಂಬಾ ಸಂತೋಷ ಆಗ್ತಾ ಇದೆ... ಮಗ, ಸೊಸೆ ಎಲ್ಲರ ಜೊತೆ ಖುಶಿ ಖುಷಿಯಾಗಿರುವ ಎಷ್ಟು ಕುಟುಂಬ ಇದೆ ಜಗತ್ತಲ್ಲಿ..? ನಮಗೆ ಸಿಕ್ಕಿದೆಯಲ್ವಾ.. ಅದೇ ಖುಷಿ... ನಿಲ್ಲಿ ತಾಂಬೂಲ ತರ್ತೇನೆ" ಅಂತ ಗ್ರೌಂಡ್ ಫ್ಲೋರನಲ್ಲಿದ್ದ ಅಡಿಗೆ ಮನೆಗೆ ಹೋಗುತ್ತಿದ್ದವಳನ್ನು ನಿಲ್ಲಿಸಿ " ಇವತ್ತು ನಾನು ತರ್ತೇನೆ... ನೀನು ರೂಮಿಗೆ ಹೋಗು.. " ಎಂದು ಹೇಳಿ ತಾಂಬೂಲ ತರಲು ಹೋದೆ... ಒಳ್ಳೆಯದೊಂದು ಊಟ ಮಾಡಿದ ದಿನ ಪಾನ್ ಹಾಕುವ ಅಭ್ಯಾಸ ನನಗೂ ಇದೆ, ನನ್ನ ಹೆಂಡತಿಗೂ ಇದೆ.. ಫ್ರಿಡ್ಜ್ ತೆರೆದರೆ ಅಲ್ಲೇ ಇತ್ತು ಕಟ್ಟಿ ಇಟ್ಟ ಪಾನ್... 


  "ತಗೋ ಪಾನ್, ಹೆಚ್ಚಿಗೇನೂ ಮಾತಾಡದೆ ಸುಮ್ಮನೇ ತಿನ್ನು... ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬೇಕು.. ಬೇಗ ರೆಡಿಯಾಗು " ಎಂದು ಹೇಳಿ ನಾನು ಮಲಗಿದೆ... ಮಲಗುವ ಮೊದಲು ಆಕೆಯನ್ನೊಮ್ಮೆ ನೆನಸಿದೆ... ಪಾಪ, ಏನು ಮಾಡ್ತಾ ಇದ್ದಾಳೋ ಏನೋ... ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು... ಎನಿಸಿ ಪಿಚ್ಚೆನಿಸಿತು.... ಹೆಂಡತಿಯೂ ಸಹ ಪಾನ್ ತಿಂದು ಸ್ವಲ್ಪ ಹೊತ್ತಲ್ಲೇ ಮಲಗಿದಳು.... ನಾನು ನಿಸಾರ್ ಅಹಮ್ಮದರ ಎರಡು ಕವನ ಓದಿ ಮಲಗಿದೆ....


   ಎಂದಿನಂತೆ ಬೆಳಿಗ್ಗೆ ಆರಕ್ಕೆ ಎದ್ದು ಪಾರ್ಕ್ ಹೋಗಿ ಎರಡು ಸುತ್ತು ನಡೆದೆ... ಸೂರ್ಯ ನಮಸ್ಕಾರ, ಒಂದೆರಡು ಯೋಗ ಮುಗಿಸಿ ಮನೆಗೆ ಬರುವಾಗ ಎಂಟು ಗಂಟೆ... ಮನೆಯ ಮುಂದೆ ಅಂಬುಲನ್ಸ್... ಗಾಬರಿ ಆಯ್ತು... ಮಗ ಓಡುತ್ತಾ ಬಂದ... " ಅಪ್ಪಾ , ನಿಮ್ಮ ಮೊಬೈಲ್ ಯಾಕೆ ತೆಗೆದುಕೊಂಡೂ ಹೋಗಿಲ್ಲ..? ಅಮ್ಮ ಮಾತನಾಡುತ್ತಿಲ್ಲ... ಬೆಳಿಗ್ಗೆಯಿಂದ ಏಳದ ಅಮ್ಮನ ಸಲುವಾಗಿ ನಾನೇ ರೂಮಿಗೆ ಹೋಗಿ ಏಳಿಸಲು ಹೋದೆ... ಅಮ್ಮ ಮಾತನಾಡಲಿಲ್ಲ.. ಮೂಗಲ್ಲಿ ಸ್ವಲ್ಪ ರಕ್ತ ಬಂದಿತ್ತಪ್ಪಾ.. ಡಾಕ್ಟರ್ ಬಂದಿದ್ದಾರೆ... ನೋಡ್ತಾ ಇದ್ದಾರೆ... " ಎನ್ನುತ್ತಾ ಇರುವಾಗಲೇ ಡಾಕ್ಟರ್ ಹೊರಗೆ ಬಂದರು.. " ಐ ಆಮ್ ಸಾರಿ ಸೂರ್ಯ... ಅಮ್ಮನಿಗೆ ಸೀವಿಯರ್ ಹಾರ್ಟ್ ಆಟ್ಯಾಕ್ ಆಗಿದೆ... ಬಹುಷಃ ಪ್ರಾಣ ಹೋಗಿ ನಾಲ್ಕೈದು ಘಂಟೆಗಳಾಗಿದೆ... " ಎಂದರು.. ನನ್ನೆದೆ ಝಲ್ ಎಂದಿತು... ನನ್ನ ಕಿವಿ ನಾನೆ ನಂಬದಾದೆ... ಕುಸಿದು ಅಲ್ಲೇ ಕುಳಿತೆ....  ಮಗ ಅಂಬುಲನ್ಸ್ನಲ್ಲಿ ಹೋದ...


   ಪೋಸ್ಟ್ ಮಾರ್ಟಮ್ ಮಾಡಿದ ಡಾಕ್ಟರ್ ದೇಹವನ್ನು ನಮಗೆ ಒಪ್ಪಿಸಿದ್ದು ಸುಮಾರು ಮಧ್ಯಾನ್ಹದ ಹೊತ್ತಿಗೆ... ಅಂತಿಮ ಕಾರ್ಯ ಮುಗಿಸಿ ಮನೆಗೆ ಬಂದವನಿಗೆ ಮಗ ಕೇಳಿದ್ದು.. " ಅಪ್ಪಾ, ಅಮ್ಮ ಕೊನೆಯ ಬಾರಿ ಏನು ತಿಂದಿದ್ದರು...? ನೀವು ಮತ್ತೆ ಅಮ್ಮ ಜಗಳವಾಡಿದ್ರಾ..?"ನಾನು ಅವಾಕ್ಕಾದೆ.. ಸೊಸೆ ಅವನ ಹಿಂದೆಯೇ ನಿಂತಿದ್ದಳು... ಅವಳ ಕಣ್ನಲ್ಲೂ ಪ್ರಶ್ನೆಗಳಿದ್ದವು... ನಾನು ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ...


    ಯಾರೇ ಸಾಯಲಿ, ಯಾರೇ ಬದುಕಲಿ ಜೀವನ ಸಾಗಲೇ ಬೇಕು... ಉಸಿರು ಬಿಡಲೇ ಬೇಕು... ಹೊಟ್ಟೆ ತುಂಬಲೇ ಬೇಕು... ಹೆಂಡತಿ ತೀರಿ ಹೋದ ಮೇಲೆ ನನ್ನನ್ನು ನಿಜಕ್ಕೂ ಸಮಾಧಾನ ಪಡಿಸಿದವಳು ಆಕೆಯೇ ಆಗಿದ್ದಳು... ಅಮ್ಮನ ಕೆಲಸಕ್ಕೆ ಸೊಸೆಯ ತಕರಾರೂ ಇರಲಿಲ್ಲ... ಆಕೆಗೆ ಅವಳ ಮನೆಯಲ್ಲಿ ಒಬ್ಬಳೇ ಇರಬೇಕಾಗಿತ್ತು... ಕೆಲಸವಳೂ ಸಹ ಅನಾರೋಗ್ಯದ ಕಾರಣ ಹೇಳಿ ಊರಿಗೆ ಹೋಗಿದ್ದಳು... ಹೊತ್ತು ಹೋಗದ ಕಾರಣ ಆಕೆ ನನ್ನ ನೋಡುವ ಸಲುವಾಗಿ ಇಲ್ಲಿಗೆ ಬರುತ್ತಾ ಇದ್ದಳು...  ಈಗೀಗ ಅವಳ ಆರೋಗ್ಯ ಕೈ ಕೊಡುತ್ತಿತ್ತು... ಸ್ವಲ್ಪ ದಿನ ಇಲ್ಲಿದ್ದು ನಂತರ ತನ್ನ ಮನೆಗೆ ಹೋಗುತ್ತಿದ್ದಳು..

   ಬದುಕು ಸಾಗಿತ್ತು... ಯಾರ ನಿರ್ಧಾರಕ್ಕೂ ಕಾಯದೇ... ಯಾರ ಮರ್ಜಿಗೂ ಕೇಳದೇ... ಹೀಗಿರಲು ಒಂದು ದಿನ ಮಗನಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು.. ಸೊಸೆಗೂ ಸಹ ಅಲ್ಲೇ ಕೆಲಸ ಸಿಗುವ ಹಾಗಿತ್ತು.... ಹಾಗಾಗಿ ಮಗ ಹೊರ ದೇಶಕ್ಕೆ ಹೋಗಲು ತಯಾರಾಗುತ್ತಿದ್ದ... ನಾನು ಅವರ ಭವಿಷ್ಯದ ಬಗ್ಗೆ ನಿರ್ಧಾರ ತಾಳದಾಗಿದ್ದೆ... ಅವರವರ ಭವಿಷ್ಯ ಅವರೇ ತಾನೇ ರೂಪಿಸಿಕೊಳ್ಳುವುದು..? ಅದಕ್ಕೆ ನನ್ನ ಅನುಮತಿ ಯಾಕೆ ಬೇಕು ಎಂದು ನಾನೇ ಸಮಾಧಾನ ಮಾಡಿಕೊಂಡೆ... ನನ್ನ ಬದುಕು ಇನ್ನು ಎಷ್ಟು ದಿನ...? ಅದಕ್ಯಾಕೆ ಇವರು ಒಳ್ಳೆಯ ಅವಕಾಶ ಹಾಳು ಮಾಡಿಕೊಳ್ಳಬೇಕು...? ಹೀಗೆಲ್ಲಾ ಯೋಚಿಸಿ ನಾನು ಅವರನ್ನು ಬೀಳ್ಕೊಡಲು ತಯಾರಾದೆ... ನನ್ನ ಮನಸ್ಸನ್ನು ಓದಿಯೋ ಏನೋ ಮಗ ನನ್ನನ್ನು ಒಂದೂ ಮಾತು ಕೇಳಲಿಲ್ಲ... ಅವರು ಹೊರಡುವ ಮೊದಲ ದಿನ ನನ್ನಲ್ಲಿ ಒಂದು ಯೋಚನೆ ಬಂತು... ಸಮಾಧಾನವಾಗಿ ಯೋಚಿಸಿದಂತೆಲ್ಲಾ ಅದು ಸರಿ ಎನಿಸಿತು.... ಸಮಯ ಕಳೆದಂತೆ ಗಟ್ಟಿಯಾಯ್ತು ಕೂಡ...


    ನಾಳೆ ಬೆಳಿಗ್ಗೆ ಮಗ ಸೊಸೆ ಹೋಗುವವರಿದ್ದರು... ಹಿಂದಿನ ದಿನ  ರಾತ್ರಿ ಊಟ ಕ್ಕೆ ಕುಳಿತಾಗ ನಾನೇ ಮಾತನಾಡಿದೆ... " ನೋಡು ಸೂರ್ಯ... ಬದುಕು ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗತ್ತೆ... ನಾವು ಏನು ಆಸೆ ಪಡುತ್ತೇವೋ ಅದು ದೊರಕಲ್ಲ... ಸಿಗದ ಪ್ರೀತಿಗೆ, ಹುದ್ದೆಗೆ ಅಲೆದಾಡುತ್ತೇವೆ... ಕೆಲವೊಮ್ಮೆ ಅದೇ ಪ್ರೀತಿ, ಹುದ್ದೆ ನಮ್ಮನ್ನು ಹುಡುಕುತ್ತಾ ಇರತ್ತೆ... ನೀವು ನಿಮ್ಮ ಅವಕಾಶ ಹಾಳುಮಾಡಿಕೊಳ್ಳದಿರಿ.. ನನ್ನ ಬಗ್ಗೆ ಬಿಡಿ .. ಎಷ್ಟು ದಿನ ಬದುಕಬಹುದು... ಹೆಚ್ಚೆಂದರೆ ಹತ್ತು ವರ್ಷ...?? ಹೇಗೋ ಬದುಕುತ್ತೇನೆ ಬಿಡು.. ಆದರೆ ನನಗೆ ಚಿಂತೆ ಇರೋದು ನಿನ್ನ ಹೆಂಡತಿಯ ಅಮ್ಮನದು... ಅದಕ್ಕೆ ನಾನೊಂದು ನಿರ್ಧಾರ ಮಾಡಿದ್ದೇನೆ... ನಾನು ಅವರನ್ನ ಮದುವೆಯಾಗುತ್ತೇನೆ... ಅವರ ಜೊತೆ ನಾನೇ ಮಾತನಾಡುತ್ತೇನೆ.. ಅದರ ಬಗ್ಗೆ ನಿಮಗೆ ತಲೆಬಿಸಿ ಬೇಡ... ನನಗೆ ನಿಮ್ಮ ಅಭಿಪ್ರಾಯ ಬೇಕು ಅಷ್ಟೆ..." ಎಂದೆ ... 

ಮಗ ನನ್ನ ಮುಖ ನೋಡಿದ......  


ಈ ಕಥೆಯನ್ನು ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ ಮುಂದುವರಿಸುತ್ತಾರೆ.... ಅವರ ಕಥೆಯ ಮೋಡಿಗಾಗಿ ಸ್ವಲ್ಪ ದಿನ ಕಾಯಿರಿ...

Apr 14, 2014

ಬೇಲಿ ಮತ್ತು ದಣಪೆ..!!!

 ಪ್ರಕಾಶಣ್ಣ ಬರೆದ  http://ittigecement.blogspot.in/2014/04/blog-post.html          ಈ ಕಥೆಯನ್ನು ಮುಂದುವರಿಸುವ ಪ್ರಯತ್ನ ಇದು...

  ದೇಹ ಜಾರುತ್ತಿತ್ತು... ಮನಸ್ಸು ಬೇಡ, ಬೇಡ ಎನ್ನುತ್ತಿತ್ತು... ಇಷ್ಟು ವರ್ಷ ಜತನದಿಂದ ಮನಸ್ಸಿಗೆ, ಬುದ್ದಿಗೆ ಹಾಕಿದ್ದ ಬೇಲಿ ಎಗ್ಗಿಲ್ಲದೇ ಬಿರುಗಾಳಿಗೆ ಸಿಕ್ಕಿತ್ತು... ಇಷ್ಟು ವರ್ಷದಿಂದ ಒಳ್ಳೆಯ ಗೆಳೆಯನಾಗಿದ್ದವ ಈಗ ಇನಿಯನಾಗುವ ಪರಿಸ್ಥಿತಿ ಹೇಗೆ ಬಂತು..? ಉತ್ತರ ಇರಲಿಲ್ಲ... ಆತನ ಉಸಿರು ನನ್ನ ತುಟಿ ಸೋಕುತ್ತಿತ್ತು.. ನನ್ನ ತುಟಿ ಅದುರುತ್ತಿತ್ತು.. ಬಯಸದೇ ಬಂದ ಸುಖಕ್ಕಾಗಿ ದೇಹ ಕಾದಿತ್ತಾ..? ಆತನ ಮೈ ಬಿಸಿ ನನ್ನನ್ನು ಕರಗಿಸುತ್ತಾ ಇತ್ತು... ನಾನು ಸೋಲಲು ಸರ್ವಥಾ ತಯಾರಾಗಿದ್ದೆ..

   ಅಷ್ಟರಲ್ಲೇ ಹೆಜ್ಜೆ ಸದ್ದು... ಕಿವಿ ನೆಟ್ಟಗಾಯಿತು.. ಪರಿಚಿತ ಹೆಜ್ಜೆ ಸದ್ದಾಗಿತ್ತು ಅದು...ತಕ್ಷಣ ಎಚ್ಚೆತ್ತೆ... ಆತನಿಂದ ದೂರ ಸರಿದೆ... ಸೆರಗೆಲ್ಲಾ ಕೆಳಗೆ ಬಿದ್ದಿತ್ತು... ಸರಿ ಮಾಡಿಕೊಂಡೆ... ಆತ ತಲೆ ತಗ್ಗಿಸಿದ.. ಇಬ್ಬರಲ್ಲೂ ಪಾಪ ಪ್ರಜ್ನೆ ಇತ್ತು... ಹೆಜ್ಜೆ ಸದ್ದು ಯಾರದೆಂದು ಗೊತ್ತಾಗಿತ್ತು ನನಗೆ.. ಓಡಿ ಹೋಗಿ ಬಾಗಿಲು ತೆಗೆದೆ.. ಎದುರಿಗೆ ನನ್ನ ಗಂಡ ನಿಂತಿದ್ದರು.. ನನ್ನವರು ತುಂಬಾ ಒಳ್ಳೆಯವರು.. ನನ್ನ ಗೆಳೆಯನನ್ನು ನೋಡಿ ಇನ್ನೂ ಖುಶಿಯಾದರು.. " ಸರ್, ನಿಮ್ಮ ಸಹಕಾರ ಮನೋಭಾವ ನಮ್ಮಂಥ ಉದ್ಯಮಿಗಳಿಗೆ ಅವಶ್ಯಕ.. ಅದ್ರಲ್ಲೂ ನೀವು ನನ್ನಾಕೆಯ ಗೆಳೆಯನಾಗಿದ್ದುದು ನನ್ನ ಭಾಗ್ಯ” ಎಂದರು..

ನನಗೆ ಮುಜುಗರವಾಯಿತು..ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ... " ನಾನು ಟೀ ಮಾಡಿಕೊಂಡು ಬರುತ್ತೇನೆ.." ಎನ್ನುತ್ತಾ ಒಳಗೆ ಹೋದೆ... ಬೇಗ ಬೇಗನೆ ಟಿ ಮಾಡಿಕೊಂಡು ಬಂದೆ.. ಟೀ ಕುಡಿದು ಗೆಳೆಯ ಬೇಗ ಹೋಗಲಿ ಎನ್ನುವುದಾ ನನ್ನ ಆಶಯ ..? ನನಗೇ ತಿಳಿದಿರಲಿಲ್ಲ.. ” ಟೀ ಎಂದರೆ ಇದು..ಅಮ್ರ‍ತ.. ದೇವತೆಗಳು ಮಾತ್ರ ಕುಡಿಯುವ ಟಿ ಇದು.. " ಎಂದ ಆತ ನನ್ನ ನೋಡುತ್ತಾ.. ನನಗೆ ನಾಚಿಕೆಯಾಯ್ತು... ಅಲ್ಲಿಂದ ಹೊರಟೆ.. ಒಳಗಡೆಗೆ... ನನ್ನವರು ಆತನಿಗೆ ಊಟ ಮಾಡಿಸಿಯೇ ಕಳಿಸುವ ಉದ್ದೇಶದಲ್ಲಿದ್ದರು... ನನಗೆ ಮನಸ್ಸಿರಲಿಲ್ಲ... ಇಷ್ಟೆಲ್ಲಾ ನಡೆದ ನಂತರ ಆತನನ್ನು ನನ್ನ ಗೆಳೆಯ ಎಂದು ಕರೆಯಲು ಮನಸ್ಸು ಒಪ್ಪುತ್ತಾ ಇರಲಿಲ್ಲ... ಆತನಿಗೂ ನನ್ನ ಮುಜುಗರ ಅರ್ಥವಾಗಿರಬೇಕು... ಊಟಕ್ಕೆ ಒಪ್ಪದೇ ಹೊರಟು ಹೋದ.. ನನಗೆ ಬೈ ಕೂಡ ಹೇಳದೆ... ನನಗೆ ಪಿಚ್ಚೆನಿಸಿತು...

ಗೆಳೆಯನ ಸನಿಹ ಕೂಡ ಬೇಕು.. ಆತ ದೂರವೂ ಇರಬೇಕು.. ನನ್ನ ಮನಸಿನ ಮರ್ಮ ನನಗೆ ಅರ್ಥವಾಗಲಿಲ್ಲ... ಒಮ್ಮೊಮ್ಮೆ ಹೀಗೆ ಮನಸಿನ ಮರಳುತನ ಅರ್ಥಕ್ಕೆ ಸಿಗೋದೆ ಇಲ್ಲ...
ನನ್ನವರು ನನ್ನ ಬಳಿ ಬಂದು ಸೊಂಟ ಬಳಸಿದರು... ಅವರ ಈ ಕಾರ್ಯಕ್ಕೆ ಯಾವಾಗಲೂ ಪುಳಕಿತಗೊಳ್ಳುವ ನನಗೆ ಈಗ ಮುಳ್ಳು ಚುಚ್ಚಿದ ಅನುಭವ.. ಮೆಲ್ಲಗೆ ಬಿಡಿಸಿಕೊಂಡೆ.... " ಯಾಕೆ..? ಏನಾಯ್ತು..? ಮೈ ಹುಶಾರಿಲ್ವಾ..? ಆವಾಗ್ಲಿಂದ ನೋಡ್ತಾ ಇದ್ದೇನೆ.. ಸಪ್ಪಗಿದ್ದೀಯಾ...ಏನಾಯ್ತು..? " ಎಂದರು ಗಾಬರಿಯಿಂದ.. ನನಗೆ ಏನಾದರೂ ಹೇಳಿ ನುಣುಚಿಕೊಳ್ಳುವ ಅವಸರ.. " ತಲೆ ನೋಯ್ತಾ ಇದೇರಿ..ಸ್ವಲ್ಪ ಹೊತ್ತು ಮಲಗುತ್ತೇನೆ " ಎಂದು ಹೇಳಿ ಅವರ ಉತ್ತರಕ್ಕೂ ಕಾಯದೇ ಬೆಡ್ ರೂಮಿಗೆ ಬಂದೆ...
ಮಲಗುವ ಮನಸ್ಸಿರದೇ ಇದ್ದರಿಂದ ಬಾತ್ ರೂಮಿಗೆ ಹೊಕ್ಕೆ... ಮೈ ತೊಳೆದುಕೊಂಡರೆ ಮನಸ್ಸು ಹಗುರಾಗಬಹುದು ಎನ್ನುವ ಆಶಯದಿಂದ.. ಶಾವರ್ ನಿಂದ ಬಂದ ತಂಪು ನೀರು ನನ್ನನ್ನು ಗತಕಾಲಕ್ಕೆ ಕೊಂಡೊಯ್ದಿತು...

  ಅದು ನಮ್ಮ ಕಾಲೇಜಿನ ಕೊನೆಯ ವರ್ಷ .. ಮಂಗಳೂರು, ಬೇಕಲ್ ಪೋರ್ಟ್ ಟೂರ್ ಇತ್ತು... ನಮ್ಮ ಸಂಖ್ಯೆ ತುಂಬಾ ಇದ್ದರಿಂದ ಎರಡು ಬಸ್ ಬೇಕಾಗಿತ್ತು... ಹುಡುಗ , ಹುಡುಗಿ ಎನ್ನುವ ಭೇದ ಇಲ್ಲದೆ, ಎಲ್ಲರೂ ಸೇರಿ ಕುಳಿತೆವು.. ನಾನು ನನ್ನ ಊರಿನ ಗೆಳತಿಯ ಜೊತೆ ಕುಳಿತರೆ, ನನ್ನ ಹಿಂದೆ ಇದೇ ಗೆಳೆಯ ಇನ್ನೊಂದು ಹುಡುಗಿಯ ಜೊತೆ ಕುಳಿತಿದ್ದ... ನನ್ನ ಮನಸ್ಸಲ್ಲೂ ಏನೂ ಭಾವವಿರಲಿಲ್ಲ.. ಆತನೂ ಸಹಜವಾಗಿಯೇ ಇದ್ದ.. ಅಂತಾಕ್ಷರಿ, ಡಾನ್ಸ್ ಎಲ್ಲಾ ಜೋರಾಗಿತ್ತು... ಅಂತಾಕ್ಷರಿ ತಂಡದಲ್ಲಿ ನಾವಿಬ್ಬರು ಒಂದು ತಂಡ.. ನಮ್ಮಿಬ್ಬರ ಸ್ನೇಹದ ಬಗ್ಗೆ ಎಲ್ಲರಿಗೂ ಗೌರವ ಇತ್ತು... ನನಗಿನ್ನೂ ನೆನಪಿದೆ.. ಅಂತಾಕ್ಷರಿ ಆಟದ ’ನ’ ಅಕ್ಷರಕ್ಕೆ ಆತ " ನಾನಿನ್ನ ಮರೆಯಲಾರೆ.. ” ಹಾಡಿದ್ದ.. ಆ ಪರಿಯ ಸ್ನೇಹದಲ್ಲೂ ನಾನು ನಾಚಿದ್ದೆ... " ಮೆಲ್ಲುಸಿರೆ ಸವಿಗಾನ” ಎನ್ನುತ್ತಾ ಮುಖ ಹತ್ತಿರಕ್ಕೆ ತಂದಿದ್ದ... ಮೈ ಜುಮ್ಮೆಂದರೂ, ಮನಸ್ಸು ತಿಳಿಯಾಗಿತ್ತು... ’ ಸ್ನೇಹ ಜಿಂದಾಬಾದ್, ಪ್ರೀತಿ ಜಿಂದಾಬಾದ್.. ನಾನೂ ಸ್ನೇಹಜೀವಿ, ನೀನೂ ಸ್ನೇಹಜೀವಿ’ ಹಾಡಿಗೆ ನಾನೂ ದನಿಗೂಡಿದ್ದೆ.. ನನ್ನ ದನಿಗೆ ಆತ ಕಣ್ಣಲ್ಲೇ ಮೆಚ್ಚುಗೆ ತೋರಿಸಿದ್ದ... ಹಾಡು, ಕೂಗು ಎಲ್ಲಾ ಮುಗಿದಾಗ ರಾತ್ರಿ ಎರಡು ಗಂಟೆ... ಸಿಕ್ಕ ಸಿಕ್ಕ ಸೀಟ್ ನಲ್ಲೇ ಒರಗಿದ್ದೆವು..

ಬೇಕಲ್ ಪೋರ್ಟ್ ತಲುಪಿದಾಗ ಬೆಳಿಗ್ಗೆ ಆರು ಗಂಟೆ...  ಕೋಟೆಯ ಮೇಲೆ ನಿಂತು ಬೆಳಗಿನ ಸೂರ್ಯನ ಆಗಮನ ನೋಡುವುದೇ ಚಂದ.. ಪಕ್ಕದಲ್ಲೇ ಇದ್ದ ಸಮುದ್ರದಲ್ಲಿ ಹೊಯ್ದಾಡಿದೆವು... ನೀರಾಟ, ಸಮುದ್ರದ ಮರಳಿನ ಹೊಡೆದಾಟ ಮುಗಿದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ... ಹೊರಡುವ ಮುನ್ನ ಎಲ್ಲರೂ ಸೇರಿ ಗ್ರೂಪ್ ಫೋಟೊ ತೆಗೆದುಕೊಂಡೆವು... ಆತ ನನ್ನತ್ತ ಓಡಿ ಬಂದು ನನ್ನ ಪಕ್ಕದಲ್ಲೇ ನಿಂತಿದ್ದ... ಗ್ರೂಪ್ ಫೋಟೊ ಆದ ನಂತರ ನಮ್ಮಿಬ್ಬರದೇ ಬೇರೆ ತೆಗೆದುಕೊಂಡೆವು.. ಆಗ ಆತನ ಕೈ ನನ್ನ ಹೆಗಲ ಮೇಲೆ ಇತ್ತು.. ಆತನ ಕೈ ಬೆಚ್ಚಗಿತ್ತು... ನಾನು ಗಮನಿಸಿದರೂ ಕೇಳಲಿಲ್ಲ... ಹತ್ತಿರದಲ್ಲೇ ಇದ್ದ ಹೊಟೆಲ್ ನಲ್ಲಿ ಸ್ನಾನ ಮಾಡಿ ಮಂಗಳೂರಿಗೆ ಹೊರಟೆವು..  ಮಂಗಳಾದೇವಿ, ಕದ್ರಿ, ಕುದ್ರೋಳಿ ದೇವರ ದರ್ಶನ ಪಡೆದು ಪಣಂಬೂರು ಬೀಚ್ ಗೆ ಹೋದೆವು...

ಅಲ್ಲಿ ಕೆಲವು ಹುಡುಗರು ಬಿಯರ್ ಕದ್ದು ಮುಚ್ಚಿ ಕುಡಿಯಲು ಶುರು ಮಾಡಿದರು.. ಇದು ನಮಗೆ ತಿಳಿದು ಹುಡುಗಿಯರು ಒಂದು ಗುಂಪಾದೆವು.. ನನ್ನ ಗಮನ ಆತನ ಮೇಲಿತ್ತು, ಈತ ಕುಡಿಯುತ್ತಾನಾ ಎನ್ನುವ ಕುತೂಹಲಕ್ಕಾಗಿ ಅಷ್ಟೆ.. ಕತ್ತಲೆಯಾಗುತ್ತಾ ಬಂದಿತ್ತು.. ನಾವು ಹೊರಡಲು ರೆಡಿಯಾದೆವು..   ಹೇಗೂ ವಾಪಸ್ ಊರಿಗೇ ಹೋಗುವುದಾದ್ದರಿಂದ ಸ್ವಲ್ಪ ಹೊತ್ತು ಇಲ್ಲೇ ಕಳೆದು ಪ್ರಯಾಣ ಬೆಳೆಸಿದರಾಯಿತು ಎನ್ನುವುದು ನಮ್ಮ ಜೊತೆ ಬಂದಿದ್ದ ಅಧ್ಯಾಪಕರದ್ದು... ಹಾಗೆಯೇ ಊಟವನ್ನೂ ಅಲ್ಲೇ ಇದ್ದ ಢಾಬಾದಲ್ಲಿ ಮುಗಿಸಿದೆವು... ಊಟ ಮುಗಿಸಿದ ನಾನು   ಸ್ವಲ್ಪ ಹೊತ್ತು ಸಮುದ್ರದ ಕಡೆಗೆ ವಾಕ್ ಗೆ ಹೊರಟೆ, ಸ್ವಲ್ಪ ದೂರ ಹೋದ ನಂತರ ಆತ ಓಡುತ್ತಾ ನನ್ನ ಜೊತೆ ಬಂದ... " ಬೆಳದಿಂದಳ ರಾತ್ರಿಯಲ್ಲಿ ಇಷ್ಟು ಚಂದದ ಹುಡುಗಿಯರು ಸಮುದ್ರ ತಟದಲ್ಲಿ ವಿಹಾರ ಮಾಡಬಾರದಂತೆ " ಎಂದ ನಾಟಕೀಯವಾಗಿ.. ನಾನೂ " ಅಹುದೇ, ವಿಹರಿಸಿದರೆ ಏನಾಗತ್ತೆ  ಮಹಾಪ್ರಭು..? " ಕೇಳಿದೆ ನಗುತ್ತಲೇ.. ಆತ " ಇನ್ನೇನಿಲ್ಲ, ತಿಮಿಂಗಲ ಬಂದು ಕಚ್ಚೊಂಡು ಹೋಗತ್ತೆ ಅಷ್ಟೆ.. ಅವೌ.." ಅಂದ ಜಗ್ಗೇಶ್ ದನಿಯಲ್ಲಿ... ನಾನು ನಾಚಿದೆ.. ಆತ ಇನ್ನೂ ಹತ್ತಿರ ಬಂದ
" ಸುತ್ತಲೂ ಬೆಳದಿಂಗಳ ಬೆಳಕು, ಸಮುದ್ರದ ತೆರೆಗಳೂ ಉಕ್ಕೇರಿದೆ.. ಪೂರ್ಣಮೆಯ ಬೆಳದಿಂಗಳಿಗೆ ನಿನ್ನ ಸೌಂದರ್ಯ ಕರಗೋದಿಲ್ಲಾ ತಾನೆ..? ಅಂದ ಆತ ಕಣ್ಣಲ್ಲಿ ಪ್ರೀತಿ ತುಂಬಿಕೊಂಡು... "ಕರಗಿದ್ರೆ ನೀನು ಏನ್ಮಾಡ್ತೀಯಾ..?" ಎಂದೆ ನಾನು ನಿರ್ಭಾವುಕಳಾಗಿ...  " ಬೆಳದಿಂಗಳ ಬೆಳಕೇ ನಿನ್ನನ್ನು ಕರಗಿಸುವುದಾದರೆ ಇದೇ ಕೈಯಿಂದ ಚಂದಿರನನ್ನು ಮುಚ್ಚಿಡುತ್ತೇನೆ.." ಎಂದ ಆತನ ಮಾತಿಗೆ ನಾನು ಜೋರಾಗಿ ನಕ್ಕೆ...  ’ಬಾ , ಇಲ್ಲೇ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ..’ ಎಂದವನಿಗೆ  ಇಲ್ಲ ಎನ್ನದಾದೆ... ಸಮುದ್ರದ ಮರಳ ರಾಶಿಯಲ್ಲಿ ಕೈ ಯಾಡಿಸುತ್ತಾ ಆತನ ಮಾತಿಗೆ ತಲೆದೂಗುತ್ತಾ ಇದ್ದವಳಿಗೆ ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ... ದೂರದಲ್ಲಿ ಬಸ್ ಸ್ಟಾರ್ಟ್ ಆದ ಸದ್ದು ಕೇಳಿ ಎದ್ದು ಬಂದೆವು.. ನಾವು ಬರುವಷ್ಟರಲ್ಲಿ ಬಸ್ ಹೊರಟಾಗಿತ್ತು... ನಂತರ ಗೊತ್ತಾದ ವಿಷಯ ಏನೆಂದರೆ ಎರಡು ಬಸ್ ಇದ್ದ ಕಾರಣ, ಎರಡೂ ಬಸ್ ನವರು ಇನ್ನೊಂದು ಬಸ್ ನಲ್ಲಿ ಇರಬಹುದು ಎಂಬ ಊಹೆಯೊಂದಿಗೆ ನಮ್ಮನ್ನು ಬಿಟ್ಟು ಹೋಗಿದ್ದರು...  ಆ ತಂಪು ಗಾಳಿಯಲ್ಲೂ ಮೈ ಬೆವತು ಹೋಯಿತು...

ಏನೂ ತೋಚಲಿಲ್ಲ... ಆದರೂ ಈತ ಇದ್ದಾನಲ್ಲ ಎನ್ನುವ ಬರವಸೆ... ಆತ ತನ್ನ ಪರ್ಸ್ ನೋಡುತ್ತಿದ್ದ... ಸ್ವಲ್ಪ ಇತ್ತು ಹಣ.. ಕಣ್ಣಲ್ಲಿ ’ ನಾನಿದ್ದೇನೆ, ಹೆದರಬೇಡ ’ ಎನ್ನುವ ಭಾವಕ್ಕೆ ನಾನು ಸಮಾಧಾನದಿಂದಿದ್ದೆ.. ತಡರಾತ್ರಿಯಾದ್ದರಿಂದ ನಿದ್ರೆ ಬರುತ್ತಿತ್ತು.. ಇದ್ದ ಹಣದಲ್ಲಿ ಹೇಗಾದರೂ ಮಾಡಿ ಊರಿಗೆ ತಲುಪುವ ಬರವಸೆ ಇತ್ತು.. ಪಕ್ಕದಲ್ಲೇ ಇದ್ದ ಲಾಡ್ಜ್ ಗೆ ಹೋಗಿ ವಿಚಾರಿಸಿದರೆ ಒಂದೇ ರೂಮ್ ಇತ್ತು... ನನ್ನ ಮೇಲೆ ನನಗೆ ಬರವಸೆ ಇದ್ದ ಕಾರಣ ಜೊತೆಯಲ್ಲಿ ಇರಲು ಒಪ್ಪಿದೆ... ಗುಂಪಿನಲ್ಲಿ ಇದ್ದಾಗಿನ ತುಂಟ ಗೆಳೆಯ ಇಬ್ಬನೇ ಇದ್ದಾಗ ಮೌನಿಯಾಗಿ ಬಿಟ್ಟಿದ್ದ... ನನಗೆ ಬೆಡ್ ಮೇಲೆ ಮಲಗಲು ಹೇಳಿ ಆತ ಅಲ್ಲಿಯೇ ಇದ್ದ ಸೋಫ ಮೇಲೆ ಮಲಗಿದ.. ಆತನ ಕಡೆ ತಿರುಗಿ ಮಲಗಲು ಹೆದರುತ್ತಿತ್ತು ಮನಸ್ಸು.. ನಿಟ್ಟುಸಿರಳತೆಯ, ಕೈಯಳತೆಯ ದೂರದಲ್ಲಿ ಮಲಗಿದ್ದರೂ ನಮ್ಮ ನಮ್ಮ ಬೇಲಿ ನಮಗೆ ತಿಳಿದಿತ್ತು.. ಸ್ನೇಹಕ್ಕೆ ಒಂದು ಚೌಕಟ್ಟು ಇತ್ತು... ಒಂದೇ ರೂಮಿನಲ್ಲಿದ್ದರೂ ಮೈ ಮನಸ್ಸು ದೂರದಲ್ಲಿತ್ತು...

ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜಿ ಸ್ನಾನ ಮುಗಿಸಿದೆ... ಬೇರೆ ಬಟ್ಟೆ ಇರದ ಕಾರಣ ಅದೇ ಬಟ್ಟೆ ಧರಿಸಿದೆವು... ತಿಂಡಿ ತಿಂದು ಬಸ್ ನಲ್ಲಿ ಹೊರಟೆವು ಊರ ಕಡೆಗೆ.. ಅಕ್ಕಪಕ್ಕದಲ್ಲೇ ಕುಳಿತು ಸುಮಾರು ಹತ್ತು ತಾಸು ಪ್ರಯಾಣ ಬೆಳೆಸಿ ಊರು ಮುಟ್ಟಿದೆವು.. ಭುಜಕ್ಕೆ ಭುಜ ಒರಗಿಸಿಕೊಂಡು, ಆ ತಿರುವು ಮುರುವಿನ ದಾರಿಯ ತಿಕ್ಕಾಟದಲ್ಲೂ ಸಂಯಮದಿಂದ ಇದ್ದ ದೇಹ, ಮನಸ್ಸಿನ ಬಗ್ಗೆ ನನಗೆ ಹೆಮ್ಮೆ ಇತ್ತು... ಕಾಲೇಜ್ ಮುಗಿದು ನಮ್ಮ ಮದುವೆ ಆದರೂ ಆ ಚೌಕಟ್ಟಿಗೆ ಭಂಗ ಬಂದಿರಲಿಲ್ಲ.. ಬಾತ್ ರೂಮಿನ ಬಾಗಿಲು ಬಡಿದ ಹಾಗಾಗಿ ವಾಸ್ತವಕ್ಕೆ ಬಂದೆ.. ನನ್ನವರು ಕರೆಯುತ್ತಿದ್ದರು.. ನಾನು ಸ್ನಾನ ಮುಗಿಸಿ ಹೊರಬಂದೆ... ಬಟ್ಟೆ ಬದಲಿಸಿ ಬೆಡ್ ಮೇಲೆ ಒರಗಿದೆ..

ಈ  ಘಟನೆ ನಡೆದು ತುಂಬಾ ದಿನಗಳ ವರೆಗೆ ಆತನನ್ನು ನಾನು ಭೇಟಿಯಾಗಲಿಲ್ಲ.. ಫೊನ್ ಸಹ ಮಾಡಲಿಲ್ಲ..  ಆದರೆ ಮನ ಮಿಡಿಯುತ್ತಿತ್ತು.. ಹಾತೊರೆಯುತ್ತಿತ್ತು... ದೇಹ ಹದವಾಗಿತ್ತು... ನನ್ನವರ ಉದ್ಯಮಕ್ಕೆ ತುಂಬಾ ಸಹಾಯ ಮಾಡಿದ ಆತ ಎಂದೂ ಏನನ್ನೂ ಅಪೇಕ್ಷೆ ಪಟ್ಟಿರಲಿಲ್ಲ... ಸರಕಾರದ ಉನ್ನತ ಮಟ್ಟದಲ್ಲಿದ್ದ ಆತನ ಸಹಾಯಕ್ಕೆ ನನ್ನವರು ತುಂಬಾ ಚಿರರುಣಿಗಳಾಗಿದ್ದರು... ಹಾಗಿದ್ದ ಒಂದು ದಿನ, ನನ್ನವರ ಒಂದು ಪ್ರತಿಷ್ಟಿತ ಪ್ರಾಜೆಕ್ಟ್ ಗೆ ಆತನ ಅಂಕಿತ ಬೇಕಿತ್ತು... ಕಾನೂನು ರಿತ್ಯಾ ಎಲ್ಲಾ ಸರಿ ಇದ್ದ ಕಾರಣ ಆತನ ಸಹಿ ಬೀಳುವುದೂ ಸುಲಭವೂ ಆಗಿತ್ತು...

ಅವತ್ತು ಸಹಿ ಆಗಿ ಫೈಲ್ ತೆಗೆದುಕೊಂಡು ಬರಲು ಹೋದ ನನ್ನವರು, ಅರ್ಜಂಟ್ ಆಗಿ ಮುಂಬೈ ಗೆ ಹೋದರು.. ನನಗೆ ಫೈಲ್ ತೆಗೆದುಕೊಂಡು ಬರಲು ಹೇಳಿದ್ದರು... ಆತನ ಜೊತೆ ಮಾತನಾಡಿ ಸುಮಾರು ತಿಂಗಳುಗಳೇ ಕಳೆದಿದ್ದವು... ಎದೆ ಬಡಿತ ಜೋರಾಗಿತ್ತು.. ಮೊಬೈಲ್ ಸ್ಕ್ರೀನ್ ಮೇಲಿದ್ದ ಆತನ ಹೆಸರನ್ನು ಪ್ರೆಸ್ ಮಾಡುವಾಗ ಬೆರಳು ಅದುರಿತು.. " ಹಲೋ, ಏನಮ್ಮಾ... ಹ್ಯಾಗಿದೀಯಾ..?"ಅದೇ ದ್ವನಿ, ಅದೇ ತಂಪು.. ಮೈ ಜುಮ್ಮೆಂದಿತು.. ಸೆರಗು ಸರಿ ಮಾಡಿಕೊಂಡೆ... " ಅದೇ.. ನಮ್ಮವರು ಮುಂಬೈ ಗೆ ಹೋಗಿದ್ದಾರೆ.. ಫೈಲ್ ತೆಗೆದುಕೊಂಡು ಬರಲು ಹೇಳಿದ್ದಾರೆ... ಅದಕ್ಕೆ ಫೋನ್ ಮಾಡಿದೆ.." ಎಂದೆ ಸಾವಕಾಶವಾಗಿ.. " ಅರೆ.. ನೀನೇ ಬರ್ತೀಯಾ... ನಾನು ಆಗಲೇ ಆಫೀಸ್ ಬಿಟ್ಟಾಯ್ತು.. ಇವತ್ತೇ ಫೈಲ್ ಬೇಕು ಅನ್ನೋ ಹಾಗಿದ್ರೆ ಮನೆಗೆ ಬಂದು ಬಿಡು... ನಿನ್ನ ಕೈಯಿ ಟೀ ಕುಡಿದು ತುಂಬಾ ದಿನ ಆಯ್ತು .. ಮುಖ್ಯವಾಗಿ ನಿನ್ನ ನಾಚುವ ಮುಖ ನೋಡಿ. " ಅಂದ ಅದೇ ತುಂಟತನದಲಿ.. ಫೋನ್ ಗಟ್ಟಿಯಾಗಿ ಹಿಡಿದೆ... " ಅಬ್ಭಾ, ನಿಮ್ಮ ಮನೆಗೆ ಬಂದು ನಾನು ಟೀ ಮಾಡಬೇಕಾ..? ನಾನು ನಿಮ್ಮ ಮನೆಗೆ ಬರೋದು ಫೈಲ್ ಒಂದು ಕಾರಣವಾದರೆ, ಇನ್ನೊಂದು ಕಾರಣ ನಿನ್ನ ಮಗನ ಜೊತೆ ಆಟವಾಡಬೇಕು.. ಆತನ ಕಣ್ಣು ನಿನ್ನ ಹಾಗೇ ಇದೆ.. ಅದು ನನಗೆ ಇಷ್ಟ.." ಎಂದೆ.. " ಯಾಕೆ.. ನಾನು ಇಷ್ಟ ಇಲ್ವಾ..? " ಎಂದವನು ಹಾಗೇ ಮುಂದುವರಿದು" ಮನೆಯಾಕೆ ಮತ್ತು ಮಗ ಊರಿಗೆ ಹೋಗಿದ್ದಾರೆ.. ನಿಂಗೆ ತುಂಬಾ ಇಷ್ಟ ಅಂದ್ರೆ ನನ್ನ ಕಣ್ಣ ಜೊತೆ ಆಟ ಆಡಬಹುದು.. ಬೇಗ ಬಂದು ಬಿಡು " ಎಂದವನೇ ಫೋನ್ ಡಿಸ್ಕನೆಕ್ಟ್ ಮಾಡಿದ....

ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು... ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು... ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?

ಹೌದು ಎನಿಸಿ...ಇನ್ನಷ್ಟು ನಾಚಿದೆ...

Apr 2, 2014

ಸಾರ್ಥಕ ಭಾವ...!!!


  ಇದೊಂದು ಸಂತಸದ ವಿಷಯ ಹಂಚಿಕೊಳ್ಳುವ ಮನಸ್ಸು ಇತ್ತು... ಸ್ವಲ್ಪ ದಿನದ ಹಿಂದೆ ಅಷ್ಟೇ ನಡೆದ ಸಂಗತಿ ಇದು...  ನನ್ನ ಪುಸ್ತಕ ಬಿಡುಗಡೆ ನಡೆದು ಕೆಲವು ದಿನಗಳಾಗಿದ್ದವು... ಪುಸ್ತಕವನ್ನು ನನ್ನ ಊರಿನ ಕೆಲವು ಹಿರಿಯರಿಗೆ ಮತ್ತು ನನ್ನ ಹಿತೈಷಿಗಳಿಗೆ ಕಳುಹಿಸಿದ್ದೆ... ಪುಸ್ತಕ ಓದಿ ಅವರಿಂದ ಒಳ್ಳೆಯ ಅಭಿಪ್ರಾಯವೂ ದೊರೆತಿತ್ತು...

ಒಂದು ಶುಭ ದಿನ ಬೆಳಿಗ್ಗೆ ಫೋನ್ ರಿಂಗಾಯಿತು, ಅತ್ತಲಿಂದ ನಮ್ಮ ಸಮಾಜದ ಪದವೀಧರರ ಮತ್ತು ನೌಕರರ ಸಂಘದ ಅಧ್ಯಕ್ಷರು ಮಾತನಾಡುತ್ತಿದ್ದರು... ನನ್ನ ಕಥಾ ಸಂಕಲನಕ್ಕಾಗಿ ನನಗೆ ಸನ್ಮಾನ ಹಮ್ಮಿಕೊಂಡಿದ್ದರು... ನಮ್ಮದು ಹಿಂದುಳಿದ ಸಮಾಜ, ನಮ್ಮಲ್ಲಿ ಬರವಣಿಗೆ, ಪುಸ್ತಕ ಬರೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ... ನನ್ನ ಜೊತೆ ಇನ್ನೂ ಕೆಲವು ಸಾಧಕರಿಗೆ ಸನ್ಮಾನ ಇದೆ ಎಂದ ತಕ್ಷಣ ಒಪ್ಪಿಕೊಂಡೆ.. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದ ಹಾಗಾಗಲಿ ಎಂದುಕೊಂಡು..

ಅಪ್ಪ ಅಮ್ಮನಿಗೆ, ಅಣ್ಣನಿಗೆ ಖುಶಿಯಾಯಿತು... ಸನ್ಮಾನದ ದಿನದವರೆಗೂ ಏನೋ ಕೊರಗು.... ಈ ಸನ್ಮಾನಕ್ಕೆ ನಾನು ಅರ್ಹನಾ ಅಂತ.. ಯೋಚಿಸುತ್ತಾ ಯೋಚಿಸುತ್ತಾ ದಿನ ಬಂದೇ ಬಿಟ್ಟಿತು... ಸಮಾರಂಭಕ್ಕೆ ಅಣ್ಣ ಅಪ್ಪ ಮತ್ತು ಮಗಳು ಹೆಂಡತಿ ಬಂದಿದ್ದರು... ಕೊನೆಯ ಕ್ಷಣದವರಗೂ ಇದ್ದ ದುಗುಡಕ್ಕೆ ಕೊನೆ ಹಾಕಿ ಅಂತಿಮ ನಿರ್ಧಾರಕ್ಕೆ ಬಂದಿದ್ದೆ.

ನಾನು ಯಾವತ್ತೂ ವೇದಿಕೆಯಲ್ಲಿ ಮಾತನಾಡಿದವನಲ್ಲ.. ಅವತ್ತು ನನ್ನ ಹೆಸರು ಕರೆದಾಗ ಜೋರಾದ ಎದೆ ಬಡಿತದೊಂದಿಗೆ ವೇದಿಕೆ ಏರಿದೆ.. ವೇದಿಕೆಯಲ್ಲಿ ಕುಳಿತ ಎಲ್ಲರಿಗೂ ಜೊತೆಗೆ ಒಯ್ದಿದ್ದ ನನ್ನ ಕಥಾ ಸಂಕಲನ ಕೊಟ್ಟೆ.. ಸನ್ಮಾನಕ್ಕಾಗಿ ಕುಳಿತುಕೊಳ್ಳಲು ಇಟ್ಟ ಖುರ್ಚಿ ದಾಟಿ ಮೈಕ್ ಕೈಗೆತ್ತಿಕೊಂಡೆ.. " ಎಲ್ಲರಿಗೂ ನಮಸ್ಕಾರ" ಧ್ವನಿ ನಡುಗುತ್ತಿತ್ತು... ಬರೆಯುವುದು ಸುಲಭ , ಮಾತನಾಡುವುದಕ್ಕೆ ಗುಂಡಿಗೆ ಬೇಕು ಎನಿಸಿತು... " ಮೊದಲಿಗೆ ನನ್ನನ್ನು ಸನ್ಮಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ, ಇಲ್ಲಿ ನನ್ನದೊಂದು ವಿನಂತಿಯಿದೆ.. ನನ್ನ ಜೊತೆಗೆ ಸನ್ಮಾನಕ್ಕೆ ಆಯ್ಕೆಯಾದವರ ಪರಿಶ್ರಮದ ಜೊತೆಗೆ ನಮ್ಮ ಪಾಲಕರ ಪರಿಶ್ರಮವೂ ದೊಡ್ಡದು.. ಅವರ ಕರ್ತವ್ಯದ ಜೊತೆಗೆ ಅವರ ತ್ಯಾಗವೂ ಇರದಿದ್ದರೆ ನಾವೆಲ್ಲಾ ಇಲ್ಲಿ ಬಂದು ನಿಲ್ಲಲು ಸಾಧ್ಯವೇ ಇರಲಿಲ್ಲ... ನಾನೇನೋ ಪುಸ್ತಕ ಬರೆದೆ.. ಈ ಪುಸ್ತಕ ಬರೆಯಲು ಮೂಲ ಕಾರಣವಾದ ವಿಧ್ಯೆಯನ್ನೇ ನನಗೆ ಕಲಿಸದಿದ್ದರೆ ನಾನೆಲ್ಲಿ ಇರುತ್ತಿದ್ದೆ.. ಆದ ಕಾರಣ ನಿಮ್ಮೆಲ್ಲರ ಅನುಮತಿ ಕೋರಿ ನನ್ನ ಯಶಸ್ಸಿಗೆ ಕಾರಣರಾದ ನನ್ನ ತಂದೆಯವರಿಗೆ ಈ ಸನ್ಮಾನ ಮಾಡಬೇಕೆಂಬುದು ನನ್ನ ಆಶಯ.. ಇದು ಇನ್ನೂ ಎಷ್ಟೋ ಮಂದಿ ಪಾಲಕರಿಗೆ ಸ್ಪೂರ್ತಿಯಾಗಲಿ ಎನ್ನುವುದು ನನ್ನ ಬಯಕೆ" ಎಂದು ಸಂಘಟಕರ ಕಡೆ ತಿರುಗಿದೆ..

ಅವರ ಅನುಮತಿ ಮತ್ತು ವೇದಿಕೆ ಮೇಲಿದ್ದ ಅತಿಥಿಗಳ ಸಮ್ಮತಿ ಪಡೆದು ಅಪ್ಪನನ್ನು ವೇದಿಕೆಗೆ  ಕರೆ ತಂದೆ.. ಅಪ್ಪನ ಕಣ್ಣಲ್ಲಿ ನೀರಿತ್ತು... ಖುರ್ಚಿಯ ಮೇಲೆ ಕುಳ್ಳಿರಿಸಿ ಸನ್ಮಾನ ಮಾಡಿದರು.. ನನಗೆ ಸಾರ್ಥಕ ಭಾವ...

ನಾವು (ನಿಮ್ಮನ್ನೂ ಸೇರಿಸಿ) ಏನೇ ಸಾಧನೆ ಮಾಡಬಹುದು.. ಜಗತ್ತು, ಸಮಾಜ ನಮಗೆ ಸನ್ಮಾನ ಮಾಡಬಹುದು.. ನಮ್ಮ ಸಾಧನೆಗೆ ಮೂಲ ಕಾರಣರಾದ ನಮ್ಮ ಪಾಲಕರನ್ನು ಯಾರು ನೆನೆಯುತ್ತಾರೆ..? ಅವರಿಗೆ ಸಿಗಬೇಕಾದ ಗೌರವ ಸಿಗುವುದು ಯಾವಾಗ..? ಅವರ ತ್ಯಾಗಕ್ಕೆ ಬೆಲೆ ಮತ್ತು ಗೌರವ ಸಿಕ್ಕರೆ ನಮಗೂ ನೆಮ್ಮದಿ , ಅವರಿಗೂ ಸಂತ್ರಪ್ತಿ...
ವೇದಿಕೆಯಲ್ಲಿ ಹೆಚ್ಚಿಗೆ ಮಾತನಾಡಲು ಆಗಲಿಲ್ಲ... ಗಂಟಲುಬ್ಬಿ ಬಂದಿತ್ತು... ಅದಕ್ಕೆ ಇಲ್ಲಿ ಬರೆದೆ..
Nov 13, 2013

ಸರಿ-ತಪ್ಪು....???      ಫೋನ್ ರಿಂಗಾಗುತ್ತಿತ್ತು.... ಮುಖ್ಯಮಂತ್ರಿಗಳ ಖಾಸಗಿ ನಂಬರಿನಿಂದ ಬರುತ್ತಿತ್ತು ಕಾಲ್.... ಸಾಹೇಬರು ಸ್ನಾನಕ್ಕೆ ಹೋಗಿದ್ದರಿಂದ ನಾನೇ ಉತ್ತರಿಸಿದೆ..." ನಮಸ್ಕಾರ ಸರ್, ನಾನು ಸಾಹೇಬರ ಪಿ.ಎ. ಮಾತಾಡ್ತಾ ಇರೋದು... ಸಾಹೇಬರು ಸ್ನಾನಕ್ಕೆ ಹೋಗಿದ್ದಾರೆ... ಇಗೋ, ಬಂದರು ಸಾರ್ ಈಗ... ಈಗಲೇ ಕೊಟ್ಟೆ.... " ಎಂದು ಫೋನ್ ಬಾಯಿಗೆ ಕೈ ಅಡ್ಡ ಇಟ್ಟು " ಸಿ.ಎಮ್. ಸಾಹೇಬ್ರ ಫೋನ್ " ಎಂದು ನಮ್ಮ ಸಾಹೇಬರಿಗೆ ಕೊಟ್ಟೆ... ಅವರು ಶಾಂತವಾಗಿಯೇ ಫೋನ್ ತೆಗೆದುಕೊಂಡು ಒಳಗೆ ಹೋದರು... ಈಗಷ್ಟೇ ಸ್ನಾನವಾಗಿದ್ದ ಕಾರಣ ನಮ್ಮ ಸಾಹೇಬರು ಪ್ರಶಾಂತವಾಗಿ ಕಾಣುತ್ತಿದ್ದರು... ನಾನು ಅವರ ಬಳಿ ಸುಮಾರು ಮೂರು ವರ್ಷದಿಂದ ಕೆಲ್ಸ ಮಾಡ್ತಾ ಇದ್ದೇನೆ... ಅವರು ನಗರಾಭಿವ್ರದ್ಧಿ ಸಚಿವರಾಗಿದ್ದರಿಂದಲೂ ನಾನೇ ಅವರ ಪಿ.ಎ.....

        ನಗರವನ್ನಷ್ಟೆ ಅಭಿವ್ರದ್ಧಿ ಮಾಡಿದರೇ ಹೊರತು ಅವರ ಅಭಿವ್ರದ್ಧಿಯೂ ಆಗಲಿಲ್ಲ, ನನ್ನ ಅಭಿವ್ರದ್ಧಿಯೂ ಆಗಲಿಲ್ಲ... ಅವರ ಪ್ರಾಮಾಣಿಕತೆ ರಾಜ್ಯಕ್ಕೇ ಮಾದರಿಯಾಗಿತ್ತು....  "ತಗೊಳ್ಳಿ ಫೋನ್... ಒಬ್ಬರು ಎಮ್.ಎಲ್.ಎ. ಬರ್ತಾರೆ... ಅವರಿಗೇನೋ ಜಿಲ್ಲಾಧಿಕಾರಿಯಿಂದ ಸಮಸ್ಯೆ ಇದೆಯಂತೆ... ಅದರ ಬಗ್ಗೆ ವರದಿ ತರಿಸಿಕೊಳ್ಳಿ... ಮುಖ್ಯಮಂತ್ರಿಗಳೇ ವಶೀಲಿ ಮಾಡ್ತಾ ಇದ್ದಾರೆ ಅಂದರೆ ನಿಜ ಇರಬಹುದು.... ಅರ್ಧ ಘಂಟೆಯಲ್ಲಿ ಬರ್ತಾರೆ ಅವರು... ಅಷ್ಟರಲ್ಲಿ ವರದಿ ತರಿಸಿಕೊಳ್ಳಿ..." ಎಂದವರೇ ಒಳಗೆ ಹೋಗಲು ರೆಡಿಯಾದರು... ನಾನು ಅಳುಕುತ್ತಲೇ " ಸಾರ್.." ಎಂದೆ..... ತಿರುಗಿ ನೋಡಿ " ಏನು ಹೇಳಿ ..? " ಕೇಳಿದರು... ನಾನು ಅಳುಕುತ್ತಲೇ " ಹದಿನೈದು ದಿನದ ಹಿಂದೆ ನಿಮ್ಮ ಊರಿನ ವ್ರದ್ದಾಶ್ರಮದವರು ಬಂದಿದ್ದರಲ್ಲಾ... ಅವರಿಗೆ ಐದು ಲಕ್ಷ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೀರಿ.. " ಎಂದೆ.... " ಒಹ್...ಹೌದಲ್ವಾ..? ಮರೆತಿದ್ದೆ... ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೊಡಲು ಆಗಲ್ಲಾ ಅಂತ ಇದ್ದಾರೆ... ಹೇಗೆ ಅಡ್ಜಸ್ಟ್ ಮಾಡೋದೋ ಗೊತ್ತಾಗ್ತಾ ಇಲ್ಲ... ಆದರೂ ಕೊಡೋಣ... ಯಾರಾದರು ದಾನಿಗಳು ಸಿಗ್ತಾರಾ ನೋಡೋಣ.... ಹೇಗಾದರು ಮಾಡಿ ಕೋಡಲೇ ಬೇಕು.... ನೆನಪಿಸಿ ಒಳ್ಳೆ ಕೆಲ್ಸ ಮಾಡಿದ್ರಿ " ಎನ್ನುತ್ತಲೇ ಒಳಗೆ ಹೋದರು...

    ನನಗೆ ಮನಸ್ಸು ಹಗುರವಾಯಿತು... ಆ ದಿನ ವ್ರದ್ಧಾಶ್ರಮದ ಮುಖ್ಯರು ಬಂದಿದ್ದಾಗ ನಮ್ಮ ಸಾಹೇಬರು ಅದು ಹೇಗೆ ವಾಗ್ದಾನ ಮಾಡಿದರೋ ತಿಳಿಯದು.... ಯಾರಿಂದಲೂ ಲಂಚ ಮುಟ್ಟದ ಇವರು ಇಷ್ಟೊಂದು ಹಣ ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದು ನನ್ನ ಅಚ್ಚರಿಯಾಗಿತ್ತು.... ಒಮ್ಮೆ ಗಣಿ ಧಣಿಗಳ ಟೌನ್ ಶಿಪ್ ವಿಚಾರದಲ್ಲಿ ಇಲಾಖಾ ಮಂಜೂರಾತಿಗಾಗಿ ಒಂದು ಕೋಟಿ ಕೊಡಲು ಬಂದಿದ್ದರು... ಹಣದೊಂದಿಗೆ ಬಂದಿದ್ದ ಅವರನ್ನು ನಮ್ಮ ಸಾಹೇಬರು ಸಾಗಹಾಕಿದ್ದರು... ಪೂರ್ತಿ ಕಾನೂನು ಪ್ರಕಾರವೇ ಇರುವ ಹಾಗೆ ನೋಡಿಕೊಂಡಿದ್ದರು.... ತಮ್ಮ ಕುಟುಂಬವನ್ನು ಅಧಿಕಾರದ ಹತ್ತಿರವೂ ಸುಳಿಯಲು ಬಿಡುತ್ತಿರಲಿಲ್ಲ.... ಒಮ್ಮೆ ಅವರ ಮಗನ ಬೈಕ್ ನ್ನ ಪೋಲಿಸರು ಹಿಡಿದಿದ್ದಾಗ ಫೈನ್ ಕಳುಹಿಸಿ ಕೊಟ್ಟಿದ್ದರು ನನ್ನ ಕೈಲಿ... 

    ಇದೆಲ್ಲಾ ಯೋಚಿಸುತ್ತಿರುವಾಗಲೇ  ನನಗೆ ಸಾಹೇಬರು ತರಿಸಿಕೊಳ್ಳಲು ಹೇಳಿದ್ದ ವರದಿ ಬಂದಿತ್ತು... ಅದರಲ್ಲಿ ಜಿಲ್ಲಾಧಿಕಾರಿಗಳ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ... ಅವರ ಎಲ್ಲಾ ಕೆಲಸಗಳೂ ಕಾನೂನಿನ ಪ್ರಕಾರ ಸರಿಯಾಗಿಯೇ ಇದ್ದವು... ಆದರೂ ಎಮ್.ಎಲ್.ಎ. ಅವರಿಗೆ ಎನು ಸಮಸ್ಯೆಯೆಂದು ತಿಳಿಯಲಿಲ್ಲ.... ಅಷ್ಟರಲ್ಲೇ ಅವರೇ ಬಂದರು... ಅವರಿಗೆ ಕುಳ್ಳಿರಿಸಿ ಸಾಹೇಬರಿಗೆ ಸುದ್ದಿ ಮುಟ್ಟಿಸಿದೆ.... ಕೂಡಲೇ ಹೊರಬಂದರು ನಮ್ಮ ಸಾಹೇಬರು... ನಾನು ಹೊರ ಹೋಗಲು ತಯಾರಾದೆ... " ಎಲ್ಲಿ ಹೋಗ್ತೀರಾ..? ಇಲ್ಲೇ ಇರಿ ..ಪರ್ವಾಗಿಲ್ಲ...." ಎಂದರು ನಮ್ಮ ಸಾಹೇಬರು... ನಾನು ಅಲ್ಲೇ ಕುಳಿತೆ.... " ಹೇಳಿ, ಹೇಗೆ ನಡಿತಾ ಇದೆ ನಿಮ್ಮ ಕ್ಷೇತ್ರದ ಕಾರ್ಯಗಳು... ಅನುದಾನ ಮಂಜುರಾಗಿದೆ ತಾನೆ..? ಏನಾದರು ತೊಂದರೆ ಇದೆಯಾ..? ನಿಮ್ಮ ಜಿಲ್ಲೆಯ ಉಸ್ತುವಾರಿ ನನ್ನದೇ ಆದ್ದರಿಂದ ಏನೇ ಕಷ್ಟ ಇದ್ದರೂ ನನಗೆ ಹೇಳಿ... " ಕೇಳಿದರು ಮಂತ್ರಿಗಳು... 

     ಎಮ್. ಎಲ್.ಎ. ಸಾಹೇಬರು ಆ ಕಡೆ, ಈ ಕಡೆ ನೋಡುತ್ತಾ ” ತುಂಬಾ ತೊಂದರೆ ಇದೆ ಸರ್, ಮುಖ್ಯ ತೊಂದರೆ ಇರೋದು ನಮ್ಮ ಜಿಲ್ಲಾಧಿಕಾರಿಗಳಿಂದ ... ಅವರನ್ನು ಬದಲಾಯಿಸಿ... " ಎಂದರು.... ನಮ್ಮ ಸಾಹೇಬರು ನನ್ನ ಕಡೆ ನೊಡಿದರು.... ನನಗೆ ಅರ್ಥ ಆಯ್ತು.... ಅವರು ಕೇಳಿದ್ದ ವರದಿಯನ್ನ ಅವರ ಕೈಯಲ್ಲಿಟ್ಟೆ... ಅದರ ಮೇಲೆ ಕಣ್ಣಾಡಿಸಿದರು... " ಹೌದಾ... ಸ್ವಲ್ಪ ವಿವರವಾಗಿ ಹೇಳ್ತೀರಾ... ಏನು ತೊಂದರೆ ಅಂತ..? " ಕೇಳಿದರು ಮಂತ್ರಿಗಳು.... " ಅವರ ಕಿರುಕುಳ ತುಂಬಾ ಇದೆ ಸರ್, ಭೂಮಿ ಪರಿವರ್ತನೆ ಮಾಡೋದರಲ್ಲಿ, ಕಟ್ಟಡ ಪರವಾನಗೆ ಕೊಡೋದೇ ಇಲ್ಲಾ ಸಾರ್... ನಾವು ಆಡಳಿತ ಪಕ್ಷದವರಲ್ವಾ ಸರ್, ನಮ್ಮ ಕಾರ್ಯಕರ್ತರಿಗೆ ಕೆಲಸ ಮಾಡಿಕೊಡದೇ ಇದ್ರೆ ಮತ್ತೆ ನಮಗೆ ಓಟು ಹಾಕ್ತಾರಾ ಸಾರ್...? ಚಿಕ್ಕ ಪುಟ್ಟ ಗಲಾಟೆಯಾದರೂ ನಮ್ಮ ಜನರನ್ನ ಜೈಲಿಗೆ ಹಾಕಲು ಹೇಳ್ತಾರೆ.. ಗೂಂಡಾ ಕಾಯ್ದೆ ಹೇರಲು ಹೇಳ್ತಾರಂತೆ.... ಮರಳು ಉದ್ದಿಮೆದಾರರಂತೂ ಕಂಗಾಲಾಗಿ ಹೋಗಿದ್ದಾರೆ... ವಾಹನಗಳಿಗೆ ಜಿ.ಪಿ.ಎಸ್ ಹಾಕಬೇಕಂತೆ... ಇಲ್ಲದಿದ್ದರೆ ಸೀಜ್ ಮಾಡ್ತಾರಂತೆ... ಮರಳು ಉದ್ದಿಮೆಯವರು ಪಕ್ಕದ ರಾಜ್ಯಕ್ಕೆ ಮರಳು ಮಾರೋ ಹಾಗಿಲ್ಲವಂತೆ... ಅವರಿಂದಲೇ ನಮ್ಮ ಪಕ್ಷಕ್ಕೆ ಕೋಟಿಗಟ್ಟಲೆ ಫಂಡ್ ಸಿಗೋದು ಸರ್... ಅವರಿಗೇ ತೊಂದರೆ ಕೊಟ್ಟರೆ ಉಳಿಗಾಲ ಇದೆಯಾ ಸರ್..? " ಒಂದೇ ಉಸಿರಿಗೆ ಎಲ್ಲಾ ಹೇಳಿದರು ಎಮ್.ಎಲ್.ಎ.... 

   ಟೇಬಲ್ ಮೇಲೆ ಇಟ್ಟಿದ್ದ ನೀರನ್ನು ಕುಡಿದ ನಮ್ಮ ಸಾಹೇಬರು, " ಓಹ್...ಹೌದಾ... ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕೆ ನನ್ನ ಗಮನಕ್ಕೆ ಬಂದಿಲ್ಲ ಇನ್ನೂ... ಬಿಡಿ.. ನಾನು ಮಾತಾಡುತ್ತೇನೆ ಅವರಲ್ಲಿ...ಎಲ್ಲಾ ಸರಿಯಾಗತ್ತೆ.... ನೀವೇನು ಚಿಂತೆ ಮಾಡಬೇಡಿ.... ನಿಮ್ಮ ಪಕ್ಕದ ಕ್ಷೇತ್ರದ ಚುನಾವಣೆಯ ಮೇಲೆ ಗಮನ ಹರಿಸಿ.... ನಾನೆಲ್ಲಾ ಸರಿ ಮಾಡ್ತೇನೆ.." ಎಂದರು.... ಎಮ್. ಎಲ್.ಎ. ಸಾಹೇಬರು ಇನ್ನೂ ಹತ್ತಿರ ಬಂದು " ಸರ್, ಹಾಗೆನ್ನಬೇಡಿ, ಅವರನ್ನ ಬದಲಾಯಿಸಿ... ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ... ನಮ್ಮದೇ ಜನ ನನ್ನನ್ನು ಕೆಳಗಿಳಿಸುತ್ತಾರೆ.... ಸರ್, ಮರಳು ಉದ್ದಿಮೆದಾರರೆಲ್ಲಾ ಸೇರಿ ಐದು ಲಕ್ಷ ಕೊಟ್ಟಿದ್ದಾರೆ... ಅದನ್ನ ತೆಗೆದುಕೊಳ್ಳಿ... ಜಿಲ್ಲಾಧಿಕಾರಿಗಳ ಬದಲಾವಣೆ ಮಾಡಿ... ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ಸರ್... ಅವರ ಸಮಸ್ಯೆ ನಾನು ಬಗೆಹರಿಸದಿದ್ದರೆ ಅವರು ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಲ್ಲ ಸರ್... " ಎನ್ನುತ್ತಾ ಕೈ ಮುಗಿದರು.... ನಮ್ಮ ಸಾಹೇಬರಿಗೆ ಅಯೋಮಯ ಪರಿಸ್ಥಿತಿ.... 

   ತಮ್ಮದೇ ಪಕ್ಷದ ಶಾಸಕರನ್ನು ಖುಶಿಯಿಂದ ಇಡುವುದು ಸರಕಾರದ ಮತ್ತು ಮಂತ್ರಿಗಳ ಕರ್ತವ್ಯವಾಗಿತ್ತು....  ಇವರನ್ನು ಖುಶಿ ಇಡದೇ ಹೋದರೆ ಭಿನ್ನಮತೀಯ ಚಟುವಟಿಕೆ ಮಾಡುತ್ತಾರೆ... ವಿರೋಧಪಕ್ಷದವರ ಜೊತೆ ರೆಸೊರ್ಟ್ ರಾಜಕೀಯ ಮಾಡುತ್ತಾರೆ... ಒಂದು ಸರಕಾರವನ್ನೇ ಬುಡಮೇಲು ಮಾಡುತ್ತಾರೆ... ಇವರ ಸಮಸ್ಯೆ ಸರಿ ಮಾಡದಿದ್ದರೆ ಎಲ್ಲರಿಗೂ ಸಮಸ್ಯೆ ತಂದಿಡುತ್ತಾರೆ..... ನಮ್ಮ ಸಾಹೇಬರು ಈ ಎಮ್.ಎಲ್.ಎ.ಸಾಹೇಬರ ಕೆಲಸ ಮಾಡಿಕೊಟ್ಟು ಕೈ ತೊಳೆದುಕೊಂಡರೆ ಒಳ್ಳೆಯದಿತ್ತು ಅಂತ ನನಗನಿಸುತ್ತಿತ್ತು... ಆದರೆ ನಮ್ಮ ಸಾಹೇಬರು ಏನು ಯೋಚಿಸುತ್ತಾರೆ ಅನ್ನೋದು ಮುಖ್ಯವಾಗಿತ್ತು... " ಓ.ಕೆ. ನಿಮ್ಮ ಕೆಲಸ ಆಗತ್ತೆ.... ಒಂದು ಸಾರಿ ಮುಖ್ಯ ಮಂತ್ರಿಗಳ ಹತ್ತಿರ ಮಾತಾಡಿ ನಿಮ್ಮ ಕೆಲ್ಸ ಮಾಡ್ತೇನೆ, ನಿಮ್ಮನ್ನೆಲ್ಲಾ ಜೊತೆ ಕರೆದುಕೊಂಡು ಹೋಗಬೇಕಾಗತ್ತೆ.. ನೀವಿದ್ದರೆ ನಾವೆಲ್ಲಾ ಮಂತ್ರಿಗಳಾಗೋದು...ಒಂದು ನಿಮಿಷ ಇಲ್ಲೇ ಇರಿ..ಈಗ್ಲೇ ಮುಖ್ಯ ಮಂತ್ರಿಗಳ ಜೊತೆ ಮಾತಾಡಿ ಬರುತ್ತೇನೆ " ಎಂದವರೇ ನನ್ನ ಕೈಲಿದ್ದ ಫೋನ್ ತೆಗೆದುಕೊಂಡು ಒಳಗೆ ಹೋದರು...

     " ಸರಿ , ನೀವಿನ್ನು ಹೊರಡಿ... ನಾಳೇನೆ ಜಿಲ್ಲಾಧಿಕಾರಿ ವರ್ಗ ಆಗತ್ತೆ ಬಿಡಿ... "... ನನ್ನತ್ತ ತಿರುಗಿ.. " ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಹೇಳಿ, ಅವರ ವರ್ಗಾವಣೆ ಬಗ್ಗೆ..." ಎಂದರು... ಎಮ್.ಎಲ್.ಎ ಸಾಹೇಬರ ಮುಖ ಊರಗಲ ಆಯ್ತು... " ಧನ್ಯವಾದ ಸರ್, ನಾನಿನ್ನು ಹೊರಟೆ " ಎಂದವರೇ ಹೊರಡಲು ಅನುವಾದರು.... ಇನ್ನೇನು ಬಾಗಿಲ ಬಳಿ ಹೋಗಿಲ್ಲ ... ಮಂತ್ರಿಗಳು " ಅದೇನು ಎಮ್.ಎಲ್.ಎ. ಸಾಹೇಬ್ರೆ... ಆಡಿದ ಮಾತು ಮರೆತು ಹೋಯ್ತಾ..? ಅದೇ ಐದು ಲಕ್ಷ ಕೊಡ್ತೇನೆ ಅಂದಿದ್ರಲ್ಲಾ...? ಅದನ್ನ ಕಳಿಸಿ ಕೊಡಿ..." ಎಂದರು... ಎಮ್.ಎಲ್.ಎ. ಸಾಹೇಬರು ನಗು ನಗುತ್ತಾ " ಈಗಲೇ ಕಳಿಸುತ್ತೇನೆ.. ಕಾರಿನಲ್ಲಿದೆ ಸರ್.." ಎನ್ನುತ್ತಾ ಹೊರ ಹೋದರು....ನನಗೆ ಶಾಕ್... ಎಂದೂ ಹಣಕ್ಕಾಗಿ ಏನೂ ಮಾಡದ ನಮ್ಮ ಸಾಹೇಬರು ಹಣಕ್ಕಾಗಿ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿಯನ್ನು ವರ್ಗ ಮಾಡಿದರಾ..? ಹಣದ ಮುಂದೆ ತಮ್ಮ ಪಕ್ಷದ ಭವಿಷ್ಯ, ತಮ್ಮ ಭವಿಷ್ಯದ ಸಲುವಾಗಿ ತಮ್ಮತನವನ್ನೇ ಮಾರಿಕೊಂಡರಾ...? ಉತ್ತರವಿರದ ತುಂಬಾ ಪ್ರಶ್ನೆಗಳಿದ್ದವು... 

    ಎಮ್.ಎಲ್.ಎ ಸಾಹೇಬರ ಡ್ರೈವರ್ ಸೂಟ್ ಕೇಸ್ ನೊಂದಿಗೆ ಒಳಗೆ ಬಂದ... ಮಂತ್ರಿ ಸಾಹೇಬರ ಟೇಬಲ್ ಹತ್ತಿರ ಇಟ್ಟು ಹೊರಟು ಹೋದ ಆತ... ನನ್ನತ್ತ ತಿರುಗಿದ ಮಂತ್ರಿಗಳು " ಏನ್ ಹಾಗೆ ನೋಡ್ತಾ ಇದೀರಾ...? ಇವರ್ಯಾಕೆ ಹಣ ತೆಗೆದುಕೊಂಡರು ಅಂತಾನಾ...? ನೋಡಿ, ನಾನು ಇವರ ಕೆಲಸ ಮಾಡದೇ ಇದ್ದರೆ , ಮುಖ್ಯ ಮಂತ್ರಿಗಳ ಹತ್ತಿರ ಹೋಗ್ತಾರೆ.. ಇನ್ನೂ ಹೆಚ್ಚಿನ ಹಣ ಕೊಟ್ಟು ಅವರ ಕೆಲ್ಸ ಮಾಡಿಸಿಕೊಳ್ಳುತ್ತಾರೆ... ಹಣ ಮುಖ್ಯ ಅಲ್ಲ ಇಲ್ಲಿ... ಅವರ ಕೆಲಸ ಮಾಡದೇ ಇದ್ರೆ , ನಮ್ಮನ್ನೆಲ್ಲಾ ಸಪೋರ್ಟ್ ಮಾಡೊದಿಲ್ಲ... ಅಧಿಕಾರ ಇಲ್ಲದೇ ಜನರ ಕೆಲಸ ಮಾಡೋದು ಕಷ್ಟ ...ಇಷ್ಟಕ್ಕು ನಾವು ಜಿಲ್ಲಾಧಿಕಾರಿ ಬದಲು ಮಾಡುತ್ತಿದ್ದೇವೋ ಹೊರತು ಕಾನೂನಿನ ವಿರುದ್ಧ ನಡೆಯಿರಿ ಅಂತ ಜಿಲ್ಲಾಧಿಕಾರಿಗೆ ಹೇಳಿಲ್ಲವಲ್ಲ... ಇನ್ನೊಂದು ವಿಷ್ಯ ಈ ಹಣವನ್ನು ಆ ವ್ರದ್ಧಾಶ್ರಮಕ್ಕೆ ಕೊಟ್ಟು ಬಿಡಿ... ಅವರಿಗೆ ಕೊಡಬೇಕು ಅಂತಾನೆ ನಾನು ಇವರಿಂದ ಹಣ ಪಡೆದದ್ದು...ಅದೂ ಅಲ್ಲದೆ ನಾವೇನು ಅವರ ಹತ್ತಿರ ಹಣ ಡಿಮಾಂಡ್ ಮಾಡಿಲ್ಲವಲ್ಲ...? ಹಾವೂ ಸಾಯದೇ ಕೋಲೂ ಮುರಿಯದೇ ಕೆಲ್ಸ ಆಯಿತಲ್ಲ... ಅದೇ ಮುಖ್ಯ.... " ಎಂದರು.... ನನಗೆ ಹಿಡಿಸಲಿಲ್ಲ.... " ಸರ್, ಇದು ಪಾಪದ ಹಣ ಸರ್... " ಎಂದೆ ಅಳುಕುತ್ತಲೆ... " ನೋಡಿ, ಪಾಪದ ಹಣ, ಪುಣ್ಯದ ಹಣ ಅಂತ ಇರಲ್ಲ... ಹಣ ಎಲ್ಲರಿಗೂ ಒಂದೇ.... ಆದ್ರೆ ನಾವು ಅದನ್ನ ಹೇಗೆ ಉಪಯೋಗಿಸುತ್ತೀವಿ ಅನ್ನೋದರ ಮೇಲೆ ಇರತ್ತೆ ಅಷ್ಟೆ... ಬೇಗನೇ ಹಣ ಕಳಿಸಿ ಕೊಡಿ ಅವರಿಗೆ... " ಎಂದರು ಮಂತ್ರಿಗಳು...

    ನಾನು ಸೂಟ್ ಕೇಸ್ ತೆಗೆದುಕೊಂಡೆ... ಫೋನ್ ಬಡಿದುಕೊಳ್ಳತೊಡಗಿತು... ದಿಲ್ಲಿಯ ನಂಬರಾಗಿತ್ತು ಅದು... ನಾನೇ ಉತ್ತರಿಸಿದೆ... ಪಕ್ಷದ ಹೈ ಕಮಾಂಡ್ ಮಾತನಾಡುತ್ತಿದ್ದರು... ನಾನು ಫೋನ್ ಮಂತ್ರಿಗಳ ಕೈಗಿಟ್ಟೆ... ಅವರು ಏನೂ ಮಾತನಾಡುತ್ತಿರಲಿಲ್ಲ... ಬರೀ ಹೂಂ... ಹೂಂ...ಎನ್ನುತ್ತಿದ್ದರು... ಎರಡು ನಿಮಿಷ ಮಾತನಾಡಿ ಫೋನಿಟ್ಟರು... “" ದಿಲ್ಲಿಯಿಂದ ಫೋನ್... ಚುನಾವಣೆ ಚರ್ಚಿಗಾಗಿ ಹಣ ಕಳಿಸಬೇಕಂತೆ... ಆ ಸೂಟ್ ಕೇಸ್ನಲ್ಲಿದ್ದ ಹಣ ಅಧ್ಯಕ್ಷರಿಗೆ ಕಳಿಸಿ.... ಪ್ರತೀ ಮಂತ್ರಿಗಳಿಂದ ಹಣ ಕೇಳ್ತಾ ಇದ್ದಾರೆ.... ಕಳಿಸಿ ಬಿಡಿ ಇದನ್ನ... " ಎಂದು ಬೇಸರ ಪಡುತ್ತಲೇ ಹೇಳಿದರು... " ಸರ್, ಆ ವ್ರದ್ಧಾಶ್ರಮದವರಿಗೆ ಏನು ಹೇಳಲಿ...? " ಅಳುಕುತ್ತಲೇ ಕೇಳಿದೆ.... " ನೋಡೋಣ.. ಸ್ವಲ್ಪ ಸಮಯ ಕೇಳಿ ಅವರ ಹತ್ತಿರ... " ಎಂದು ಒಳಗೆ ಹೋದರು... ನಾನು ವ್ರದ್ಧಾಶಮಕ್ಕೆ ಫೋನ್ ಮಾಡಲು ತಯಾರಾದೆ... 

   ಕೂಡಲೇ ಹೊರ ಬಂದ ಮಂತ್ರಿಗಳು...  " ಅವರಿಗೆ ಹೇಳಿ... ಎರಡು ತಿಂಗಳು ಬಿಟ್ಟು ಬರಲಿಕ್ಕೆ ಹೇಳಿ... ಐದು ಲಕ್ಷದ ಬದಲು ಹತ್ತು ಲಕ್ಷ ಕೊಡುತ್ತೇವೆ ಅಂತ..." ನಾನು ಅವಾಕ್ಕಾದೆ... ಐದು ಲಕ್ಷ ಕೊಡಲೇ ಆಕಾಶ ಭೂಮಿ ಒಂದು  ಮಾಡ್ತಾ ಇದ್ದೇವೆ... ಹತ್ತು ಲಕ್ಷ ಕೊಡೋದು ಹೇಗೆ ಅಂತ...? ಇವರಿಗೇನಾದರೂ ತಲೆ ಕೆಟ್ಟಿದೆಯಾ..? ಅನಿಸಿತು... ಫೋನ್ ಕಟ್ ಮಾಡಿದೆ.... " ಸರ್, ಹೇಗೆ... ಎಲ್ಲಿಂದ ತರ್ತೀರಾ ಸರ್.. ಸುಮ್ಮನೆ ಯಾಕೆ ಇಲ್ಲದ ತಲೆಬಿಸಿ... ಅವರಿಗೆ ಹೇಳಿಬಿಡೋಣ... ಹಣ ಕೊಡಲು ಆಗಲ್ಲ ಅಂತ.. " ಎಂದೆ ತಲೆ ತುರಿಸಿಕೊಳ್ಳುತ್ತಾ.... " ಇಲ್ಲ..ಇಲ್ಲ... ಅವರಿಗೆ ಕೊಡೋಣ.. ಹತ್ತು ಲಕ್ಷ..." ಎಂದರು ಧೈರ್ಯದಿಂದ... " ಸರ್, ಎಲ್ಲಿಂದ ತರ್ತೀರಾ ಅಷ್ಟೊಂದು ಹಣ..?" ಕೇಳಿಯೇಬಿಟ್ಟೆ..... " ಒಂದ್ ಕೆಲ್ಸ ಮಾಡಿ, ಆ ಎಮ್.ಎಲ್.ಎ. ಜಿಲ್ಲಾಧಿಕಾರಿಯನ್ನು ಬದಲು ಮಾಡಲು ಹೇಳಿದ್ದಾರಲ್ಲ... ಬದಲಿ ಮಾಡಿ, ಆದರೆ ಅಲ್ಲಿಗೆ ರಾಜ್ಯದ ತುಂಬಾ ಪ್ರಾಮಾಣಿಕ ಮತ್ತು ಕಠಿಣ ಜಿಲ್ಲಾಧಿಕಾರಿಯನ್ನು ಹಾಕಿ.... ಮುಂದಿನ ತಿಂಗಳು ಅವರನ್ನೂ ಬದಲು ಮಾಡಲು ಕೇಳಿಕೊಂಡು ಬರ್ತಾರೆ ಮತ್ತೆ ಇದೇ ಎಮ್.ಎಲ್.ಎ... ಆವಾಗ ಅವರಿಂದ ಹತ್ತು ಲಕ್ಷ ಪಡೆದರಾಯಿತು......ಅಲ್ಲಿಯ ತನಕವಾದರೂ ಕಾನೂನಿನ ಪ್ರಕಾರ ಕೆಲಸ ನಡೆಯಲಿ.... "ಎಂದರು ನಗು ನಗುತ್ತಲೇ.....

ನನಗೂ ನಗು ಬಂತು... ಇವರು ಪ್ರಾಮಾಣಿಕರಾ...? ಅಥವಾ ಅಪ್ರಾಮಾಣಿಕರಾ ..? ತಿಳಿಯಲಿಲ್ಲ....