Nov 13, 2013

ಸರಿ-ತಪ್ಪು....???      ಫೋನ್ ರಿಂಗಾಗುತ್ತಿತ್ತು.... ಮುಖ್ಯಮಂತ್ರಿಗಳ ಖಾಸಗಿ ನಂಬರಿನಿಂದ ಬರುತ್ತಿತ್ತು ಕಾಲ್.... ಸಾಹೇಬರು ಸ್ನಾನಕ್ಕೆ ಹೋಗಿದ್ದರಿಂದ ನಾನೇ ಉತ್ತರಿಸಿದೆ..." ನಮಸ್ಕಾರ ಸರ್, ನಾನು ಸಾಹೇಬರ ಪಿ.ಎ. ಮಾತಾಡ್ತಾ ಇರೋದು... ಸಾಹೇಬರು ಸ್ನಾನಕ್ಕೆ ಹೋಗಿದ್ದಾರೆ... ಇಗೋ, ಬಂದರು ಸಾರ್ ಈಗ... ಈಗಲೇ ಕೊಟ್ಟೆ.... " ಎಂದು ಫೋನ್ ಬಾಯಿಗೆ ಕೈ ಅಡ್ಡ ಇಟ್ಟು " ಸಿ.ಎಮ್. ಸಾಹೇಬ್ರ ಫೋನ್ " ಎಂದು ನಮ್ಮ ಸಾಹೇಬರಿಗೆ ಕೊಟ್ಟೆ... ಅವರು ಶಾಂತವಾಗಿಯೇ ಫೋನ್ ತೆಗೆದುಕೊಂಡು ಒಳಗೆ ಹೋದರು... ಈಗಷ್ಟೇ ಸ್ನಾನವಾಗಿದ್ದ ಕಾರಣ ನಮ್ಮ ಸಾಹೇಬರು ಪ್ರಶಾಂತವಾಗಿ ಕಾಣುತ್ತಿದ್ದರು... ನಾನು ಅವರ ಬಳಿ ಸುಮಾರು ಮೂರು ವರ್ಷದಿಂದ ಕೆಲ್ಸ ಮಾಡ್ತಾ ಇದ್ದೇನೆ... ಅವರು ನಗರಾಭಿವ್ರದ್ಧಿ ಸಚಿವರಾಗಿದ್ದರಿಂದಲೂ ನಾನೇ ಅವರ ಪಿ.ಎ.....

        ನಗರವನ್ನಷ್ಟೆ ಅಭಿವ್ರದ್ಧಿ ಮಾಡಿದರೇ ಹೊರತು ಅವರ ಅಭಿವ್ರದ್ಧಿಯೂ ಆಗಲಿಲ್ಲ, ನನ್ನ ಅಭಿವ್ರದ್ಧಿಯೂ ಆಗಲಿಲ್ಲ... ಅವರ ಪ್ರಾಮಾಣಿಕತೆ ರಾಜ್ಯಕ್ಕೇ ಮಾದರಿಯಾಗಿತ್ತು....  "ತಗೊಳ್ಳಿ ಫೋನ್... ಒಬ್ಬರು ಎಮ್.ಎಲ್.ಎ. ಬರ್ತಾರೆ... ಅವರಿಗೇನೋ ಜಿಲ್ಲಾಧಿಕಾರಿಯಿಂದ ಸಮಸ್ಯೆ ಇದೆಯಂತೆ... ಅದರ ಬಗ್ಗೆ ವರದಿ ತರಿಸಿಕೊಳ್ಳಿ... ಮುಖ್ಯಮಂತ್ರಿಗಳೇ ವಶೀಲಿ ಮಾಡ್ತಾ ಇದ್ದಾರೆ ಅಂದರೆ ನಿಜ ಇರಬಹುದು.... ಅರ್ಧ ಘಂಟೆಯಲ್ಲಿ ಬರ್ತಾರೆ ಅವರು... ಅಷ್ಟರಲ್ಲಿ ವರದಿ ತರಿಸಿಕೊಳ್ಳಿ..." ಎಂದವರೇ ಒಳಗೆ ಹೋಗಲು ರೆಡಿಯಾದರು... ನಾನು ಅಳುಕುತ್ತಲೇ " ಸಾರ್.." ಎಂದೆ..... ತಿರುಗಿ ನೋಡಿ " ಏನು ಹೇಳಿ ..? " ಕೇಳಿದರು... ನಾನು ಅಳುಕುತ್ತಲೇ " ಹದಿನೈದು ದಿನದ ಹಿಂದೆ ನಿಮ್ಮ ಊರಿನ ವ್ರದ್ದಾಶ್ರಮದವರು ಬಂದಿದ್ದರಲ್ಲಾ... ಅವರಿಗೆ ಐದು ಲಕ್ಷ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೀರಿ.. " ಎಂದೆ.... " ಒಹ್...ಹೌದಲ್ವಾ..? ಮರೆತಿದ್ದೆ... ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೊಡಲು ಆಗಲ್ಲಾ ಅಂತ ಇದ್ದಾರೆ... ಹೇಗೆ ಅಡ್ಜಸ್ಟ್ ಮಾಡೋದೋ ಗೊತ್ತಾಗ್ತಾ ಇಲ್ಲ... ಆದರೂ ಕೊಡೋಣ... ಯಾರಾದರು ದಾನಿಗಳು ಸಿಗ್ತಾರಾ ನೋಡೋಣ.... ಹೇಗಾದರು ಮಾಡಿ ಕೋಡಲೇ ಬೇಕು.... ನೆನಪಿಸಿ ಒಳ್ಳೆ ಕೆಲ್ಸ ಮಾಡಿದ್ರಿ " ಎನ್ನುತ್ತಲೇ ಒಳಗೆ ಹೋದರು...

    ನನಗೆ ಮನಸ್ಸು ಹಗುರವಾಯಿತು... ಆ ದಿನ ವ್ರದ್ಧಾಶ್ರಮದ ಮುಖ್ಯರು ಬಂದಿದ್ದಾಗ ನಮ್ಮ ಸಾಹೇಬರು ಅದು ಹೇಗೆ ವಾಗ್ದಾನ ಮಾಡಿದರೋ ತಿಳಿಯದು.... ಯಾರಿಂದಲೂ ಲಂಚ ಮುಟ್ಟದ ಇವರು ಇಷ್ಟೊಂದು ಹಣ ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದು ನನ್ನ ಅಚ್ಚರಿಯಾಗಿತ್ತು.... ಒಮ್ಮೆ ಗಣಿ ಧಣಿಗಳ ಟೌನ್ ಶಿಪ್ ವಿಚಾರದಲ್ಲಿ ಇಲಾಖಾ ಮಂಜೂರಾತಿಗಾಗಿ ಒಂದು ಕೋಟಿ ಕೊಡಲು ಬಂದಿದ್ದರು... ಹಣದೊಂದಿಗೆ ಬಂದಿದ್ದ ಅವರನ್ನು ನಮ್ಮ ಸಾಹೇಬರು ಸಾಗಹಾಕಿದ್ದರು... ಪೂರ್ತಿ ಕಾನೂನು ಪ್ರಕಾರವೇ ಇರುವ ಹಾಗೆ ನೋಡಿಕೊಂಡಿದ್ದರು.... ತಮ್ಮ ಕುಟುಂಬವನ್ನು ಅಧಿಕಾರದ ಹತ್ತಿರವೂ ಸುಳಿಯಲು ಬಿಡುತ್ತಿರಲಿಲ್ಲ.... ಒಮ್ಮೆ ಅವರ ಮಗನ ಬೈಕ್ ನ್ನ ಪೋಲಿಸರು ಹಿಡಿದಿದ್ದಾಗ ಫೈನ್ ಕಳುಹಿಸಿ ಕೊಟ್ಟಿದ್ದರು ನನ್ನ ಕೈಲಿ... 

    ಇದೆಲ್ಲಾ ಯೋಚಿಸುತ್ತಿರುವಾಗಲೇ  ನನಗೆ ಸಾಹೇಬರು ತರಿಸಿಕೊಳ್ಳಲು ಹೇಳಿದ್ದ ವರದಿ ಬಂದಿತ್ತು... ಅದರಲ್ಲಿ ಜಿಲ್ಲಾಧಿಕಾರಿಗಳ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ... ಅವರ ಎಲ್ಲಾ ಕೆಲಸಗಳೂ ಕಾನೂನಿನ ಪ್ರಕಾರ ಸರಿಯಾಗಿಯೇ ಇದ್ದವು... ಆದರೂ ಎಮ್.ಎಲ್.ಎ. ಅವರಿಗೆ ಎನು ಸಮಸ್ಯೆಯೆಂದು ತಿಳಿಯಲಿಲ್ಲ.... ಅಷ್ಟರಲ್ಲೇ ಅವರೇ ಬಂದರು... ಅವರಿಗೆ ಕುಳ್ಳಿರಿಸಿ ಸಾಹೇಬರಿಗೆ ಸುದ್ದಿ ಮುಟ್ಟಿಸಿದೆ.... ಕೂಡಲೇ ಹೊರಬಂದರು ನಮ್ಮ ಸಾಹೇಬರು... ನಾನು ಹೊರ ಹೋಗಲು ತಯಾರಾದೆ... " ಎಲ್ಲಿ ಹೋಗ್ತೀರಾ..? ಇಲ್ಲೇ ಇರಿ ..ಪರ್ವಾಗಿಲ್ಲ...." ಎಂದರು ನಮ್ಮ ಸಾಹೇಬರು... ನಾನು ಅಲ್ಲೇ ಕುಳಿತೆ.... " ಹೇಳಿ, ಹೇಗೆ ನಡಿತಾ ಇದೆ ನಿಮ್ಮ ಕ್ಷೇತ್ರದ ಕಾರ್ಯಗಳು... ಅನುದಾನ ಮಂಜುರಾಗಿದೆ ತಾನೆ..? ಏನಾದರು ತೊಂದರೆ ಇದೆಯಾ..? ನಿಮ್ಮ ಜಿಲ್ಲೆಯ ಉಸ್ತುವಾರಿ ನನ್ನದೇ ಆದ್ದರಿಂದ ಏನೇ ಕಷ್ಟ ಇದ್ದರೂ ನನಗೆ ಹೇಳಿ... " ಕೇಳಿದರು ಮಂತ್ರಿಗಳು... 

     ಎಮ್. ಎಲ್.ಎ. ಸಾಹೇಬರು ಆ ಕಡೆ, ಈ ಕಡೆ ನೋಡುತ್ತಾ ” ತುಂಬಾ ತೊಂದರೆ ಇದೆ ಸರ್, ಮುಖ್ಯ ತೊಂದರೆ ಇರೋದು ನಮ್ಮ ಜಿಲ್ಲಾಧಿಕಾರಿಗಳಿಂದ ... ಅವರನ್ನು ಬದಲಾಯಿಸಿ... " ಎಂದರು.... ನಮ್ಮ ಸಾಹೇಬರು ನನ್ನ ಕಡೆ ನೊಡಿದರು.... ನನಗೆ ಅರ್ಥ ಆಯ್ತು.... ಅವರು ಕೇಳಿದ್ದ ವರದಿಯನ್ನ ಅವರ ಕೈಯಲ್ಲಿಟ್ಟೆ... ಅದರ ಮೇಲೆ ಕಣ್ಣಾಡಿಸಿದರು... " ಹೌದಾ... ಸ್ವಲ್ಪ ವಿವರವಾಗಿ ಹೇಳ್ತೀರಾ... ಏನು ತೊಂದರೆ ಅಂತ..? " ಕೇಳಿದರು ಮಂತ್ರಿಗಳು.... " ಅವರ ಕಿರುಕುಳ ತುಂಬಾ ಇದೆ ಸರ್, ಭೂಮಿ ಪರಿವರ್ತನೆ ಮಾಡೋದರಲ್ಲಿ, ಕಟ್ಟಡ ಪರವಾನಗೆ ಕೊಡೋದೇ ಇಲ್ಲಾ ಸಾರ್... ನಾವು ಆಡಳಿತ ಪಕ್ಷದವರಲ್ವಾ ಸರ್, ನಮ್ಮ ಕಾರ್ಯಕರ್ತರಿಗೆ ಕೆಲಸ ಮಾಡಿಕೊಡದೇ ಇದ್ರೆ ಮತ್ತೆ ನಮಗೆ ಓಟು ಹಾಕ್ತಾರಾ ಸಾರ್...? ಚಿಕ್ಕ ಪುಟ್ಟ ಗಲಾಟೆಯಾದರೂ ನಮ್ಮ ಜನರನ್ನ ಜೈಲಿಗೆ ಹಾಕಲು ಹೇಳ್ತಾರೆ.. ಗೂಂಡಾ ಕಾಯ್ದೆ ಹೇರಲು ಹೇಳ್ತಾರಂತೆ.... ಮರಳು ಉದ್ದಿಮೆದಾರರಂತೂ ಕಂಗಾಲಾಗಿ ಹೋಗಿದ್ದಾರೆ... ವಾಹನಗಳಿಗೆ ಜಿ.ಪಿ.ಎಸ್ ಹಾಕಬೇಕಂತೆ... ಇಲ್ಲದಿದ್ದರೆ ಸೀಜ್ ಮಾಡ್ತಾರಂತೆ... ಮರಳು ಉದ್ದಿಮೆಯವರು ಪಕ್ಕದ ರಾಜ್ಯಕ್ಕೆ ಮರಳು ಮಾರೋ ಹಾಗಿಲ್ಲವಂತೆ... ಅವರಿಂದಲೇ ನಮ್ಮ ಪಕ್ಷಕ್ಕೆ ಕೋಟಿಗಟ್ಟಲೆ ಫಂಡ್ ಸಿಗೋದು ಸರ್... ಅವರಿಗೇ ತೊಂದರೆ ಕೊಟ್ಟರೆ ಉಳಿಗಾಲ ಇದೆಯಾ ಸರ್..? " ಒಂದೇ ಉಸಿರಿಗೆ ಎಲ್ಲಾ ಹೇಳಿದರು ಎಮ್.ಎಲ್.ಎ.... 

   ಟೇಬಲ್ ಮೇಲೆ ಇಟ್ಟಿದ್ದ ನೀರನ್ನು ಕುಡಿದ ನಮ್ಮ ಸಾಹೇಬರು, " ಓಹ್...ಹೌದಾ... ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕೆ ನನ್ನ ಗಮನಕ್ಕೆ ಬಂದಿಲ್ಲ ಇನ್ನೂ... ಬಿಡಿ.. ನಾನು ಮಾತಾಡುತ್ತೇನೆ ಅವರಲ್ಲಿ...ಎಲ್ಲಾ ಸರಿಯಾಗತ್ತೆ.... ನೀವೇನು ಚಿಂತೆ ಮಾಡಬೇಡಿ.... ನಿಮ್ಮ ಪಕ್ಕದ ಕ್ಷೇತ್ರದ ಚುನಾವಣೆಯ ಮೇಲೆ ಗಮನ ಹರಿಸಿ.... ನಾನೆಲ್ಲಾ ಸರಿ ಮಾಡ್ತೇನೆ.." ಎಂದರು.... ಎಮ್. ಎಲ್.ಎ. ಸಾಹೇಬರು ಇನ್ನೂ ಹತ್ತಿರ ಬಂದು " ಸರ್, ಹಾಗೆನ್ನಬೇಡಿ, ಅವರನ್ನ ಬದಲಾಯಿಸಿ... ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ... ನಮ್ಮದೇ ಜನ ನನ್ನನ್ನು ಕೆಳಗಿಳಿಸುತ್ತಾರೆ.... ಸರ್, ಮರಳು ಉದ್ದಿಮೆದಾರರೆಲ್ಲಾ ಸೇರಿ ಐದು ಲಕ್ಷ ಕೊಟ್ಟಿದ್ದಾರೆ... ಅದನ್ನ ತೆಗೆದುಕೊಳ್ಳಿ... ಜಿಲ್ಲಾಧಿಕಾರಿಗಳ ಬದಲಾವಣೆ ಮಾಡಿ... ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ಸರ್... ಅವರ ಸಮಸ್ಯೆ ನಾನು ಬಗೆಹರಿಸದಿದ್ದರೆ ಅವರು ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಲ್ಲ ಸರ್... " ಎನ್ನುತ್ತಾ ಕೈ ಮುಗಿದರು.... ನಮ್ಮ ಸಾಹೇಬರಿಗೆ ಅಯೋಮಯ ಪರಿಸ್ಥಿತಿ.... 

   ತಮ್ಮದೇ ಪಕ್ಷದ ಶಾಸಕರನ್ನು ಖುಶಿಯಿಂದ ಇಡುವುದು ಸರಕಾರದ ಮತ್ತು ಮಂತ್ರಿಗಳ ಕರ್ತವ್ಯವಾಗಿತ್ತು....  ಇವರನ್ನು ಖುಶಿ ಇಡದೇ ಹೋದರೆ ಭಿನ್ನಮತೀಯ ಚಟುವಟಿಕೆ ಮಾಡುತ್ತಾರೆ... ವಿರೋಧಪಕ್ಷದವರ ಜೊತೆ ರೆಸೊರ್ಟ್ ರಾಜಕೀಯ ಮಾಡುತ್ತಾರೆ... ಒಂದು ಸರಕಾರವನ್ನೇ ಬುಡಮೇಲು ಮಾಡುತ್ತಾರೆ... ಇವರ ಸಮಸ್ಯೆ ಸರಿ ಮಾಡದಿದ್ದರೆ ಎಲ್ಲರಿಗೂ ಸಮಸ್ಯೆ ತಂದಿಡುತ್ತಾರೆ..... ನಮ್ಮ ಸಾಹೇಬರು ಈ ಎಮ್.ಎಲ್.ಎ.ಸಾಹೇಬರ ಕೆಲಸ ಮಾಡಿಕೊಟ್ಟು ಕೈ ತೊಳೆದುಕೊಂಡರೆ ಒಳ್ಳೆಯದಿತ್ತು ಅಂತ ನನಗನಿಸುತ್ತಿತ್ತು... ಆದರೆ ನಮ್ಮ ಸಾಹೇಬರು ಏನು ಯೋಚಿಸುತ್ತಾರೆ ಅನ್ನೋದು ಮುಖ್ಯವಾಗಿತ್ತು... " ಓ.ಕೆ. ನಿಮ್ಮ ಕೆಲಸ ಆಗತ್ತೆ.... ಒಂದು ಸಾರಿ ಮುಖ್ಯ ಮಂತ್ರಿಗಳ ಹತ್ತಿರ ಮಾತಾಡಿ ನಿಮ್ಮ ಕೆಲ್ಸ ಮಾಡ್ತೇನೆ, ನಿಮ್ಮನ್ನೆಲ್ಲಾ ಜೊತೆ ಕರೆದುಕೊಂಡು ಹೋಗಬೇಕಾಗತ್ತೆ.. ನೀವಿದ್ದರೆ ನಾವೆಲ್ಲಾ ಮಂತ್ರಿಗಳಾಗೋದು...ಒಂದು ನಿಮಿಷ ಇಲ್ಲೇ ಇರಿ..ಈಗ್ಲೇ ಮುಖ್ಯ ಮಂತ್ರಿಗಳ ಜೊತೆ ಮಾತಾಡಿ ಬರುತ್ತೇನೆ " ಎಂದವರೇ ನನ್ನ ಕೈಲಿದ್ದ ಫೋನ್ ತೆಗೆದುಕೊಂಡು ಒಳಗೆ ಹೋದರು...

     " ಸರಿ , ನೀವಿನ್ನು ಹೊರಡಿ... ನಾಳೇನೆ ಜಿಲ್ಲಾಧಿಕಾರಿ ವರ್ಗ ಆಗತ್ತೆ ಬಿಡಿ... "... ನನ್ನತ್ತ ತಿರುಗಿ.. " ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಹೇಳಿ, ಅವರ ವರ್ಗಾವಣೆ ಬಗ್ಗೆ..." ಎಂದರು... ಎಮ್.ಎಲ್.ಎ ಸಾಹೇಬರ ಮುಖ ಊರಗಲ ಆಯ್ತು... " ಧನ್ಯವಾದ ಸರ್, ನಾನಿನ್ನು ಹೊರಟೆ " ಎಂದವರೇ ಹೊರಡಲು ಅನುವಾದರು.... ಇನ್ನೇನು ಬಾಗಿಲ ಬಳಿ ಹೋಗಿಲ್ಲ ... ಮಂತ್ರಿಗಳು " ಅದೇನು ಎಮ್.ಎಲ್.ಎ. ಸಾಹೇಬ್ರೆ... ಆಡಿದ ಮಾತು ಮರೆತು ಹೋಯ್ತಾ..? ಅದೇ ಐದು ಲಕ್ಷ ಕೊಡ್ತೇನೆ ಅಂದಿದ್ರಲ್ಲಾ...? ಅದನ್ನ ಕಳಿಸಿ ಕೊಡಿ..." ಎಂದರು... ಎಮ್.ಎಲ್.ಎ. ಸಾಹೇಬರು ನಗು ನಗುತ್ತಾ " ಈಗಲೇ ಕಳಿಸುತ್ತೇನೆ.. ಕಾರಿನಲ್ಲಿದೆ ಸರ್.." ಎನ್ನುತ್ತಾ ಹೊರ ಹೋದರು....ನನಗೆ ಶಾಕ್... ಎಂದೂ ಹಣಕ್ಕಾಗಿ ಏನೂ ಮಾಡದ ನಮ್ಮ ಸಾಹೇಬರು ಹಣಕ್ಕಾಗಿ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿಯನ್ನು ವರ್ಗ ಮಾಡಿದರಾ..? ಹಣದ ಮುಂದೆ ತಮ್ಮ ಪಕ್ಷದ ಭವಿಷ್ಯ, ತಮ್ಮ ಭವಿಷ್ಯದ ಸಲುವಾಗಿ ತಮ್ಮತನವನ್ನೇ ಮಾರಿಕೊಂಡರಾ...? ಉತ್ತರವಿರದ ತುಂಬಾ ಪ್ರಶ್ನೆಗಳಿದ್ದವು... 

    ಎಮ್.ಎಲ್.ಎ ಸಾಹೇಬರ ಡ್ರೈವರ್ ಸೂಟ್ ಕೇಸ್ ನೊಂದಿಗೆ ಒಳಗೆ ಬಂದ... ಮಂತ್ರಿ ಸಾಹೇಬರ ಟೇಬಲ್ ಹತ್ತಿರ ಇಟ್ಟು ಹೊರಟು ಹೋದ ಆತ... ನನ್ನತ್ತ ತಿರುಗಿದ ಮಂತ್ರಿಗಳು " ಏನ್ ಹಾಗೆ ನೋಡ್ತಾ ಇದೀರಾ...? ಇವರ್ಯಾಕೆ ಹಣ ತೆಗೆದುಕೊಂಡರು ಅಂತಾನಾ...? ನೋಡಿ, ನಾನು ಇವರ ಕೆಲಸ ಮಾಡದೇ ಇದ್ದರೆ , ಮುಖ್ಯ ಮಂತ್ರಿಗಳ ಹತ್ತಿರ ಹೋಗ್ತಾರೆ.. ಇನ್ನೂ ಹೆಚ್ಚಿನ ಹಣ ಕೊಟ್ಟು ಅವರ ಕೆಲ್ಸ ಮಾಡಿಸಿಕೊಳ್ಳುತ್ತಾರೆ... ಹಣ ಮುಖ್ಯ ಅಲ್ಲ ಇಲ್ಲಿ... ಅವರ ಕೆಲಸ ಮಾಡದೇ ಇದ್ರೆ , ನಮ್ಮನ್ನೆಲ್ಲಾ ಸಪೋರ್ಟ್ ಮಾಡೊದಿಲ್ಲ... ಅಧಿಕಾರ ಇಲ್ಲದೇ ಜನರ ಕೆಲಸ ಮಾಡೋದು ಕಷ್ಟ ...ಇಷ್ಟಕ್ಕು ನಾವು ಜಿಲ್ಲಾಧಿಕಾರಿ ಬದಲು ಮಾಡುತ್ತಿದ್ದೇವೋ ಹೊರತು ಕಾನೂನಿನ ವಿರುದ್ಧ ನಡೆಯಿರಿ ಅಂತ ಜಿಲ್ಲಾಧಿಕಾರಿಗೆ ಹೇಳಿಲ್ಲವಲ್ಲ... ಇನ್ನೊಂದು ವಿಷ್ಯ ಈ ಹಣವನ್ನು ಆ ವ್ರದ್ಧಾಶ್ರಮಕ್ಕೆ ಕೊಟ್ಟು ಬಿಡಿ... ಅವರಿಗೆ ಕೊಡಬೇಕು ಅಂತಾನೆ ನಾನು ಇವರಿಂದ ಹಣ ಪಡೆದದ್ದು...ಅದೂ ಅಲ್ಲದೆ ನಾವೇನು ಅವರ ಹತ್ತಿರ ಹಣ ಡಿಮಾಂಡ್ ಮಾಡಿಲ್ಲವಲ್ಲ...? ಹಾವೂ ಸಾಯದೇ ಕೋಲೂ ಮುರಿಯದೇ ಕೆಲ್ಸ ಆಯಿತಲ್ಲ... ಅದೇ ಮುಖ್ಯ.... " ಎಂದರು.... ನನಗೆ ಹಿಡಿಸಲಿಲ್ಲ.... " ಸರ್, ಇದು ಪಾಪದ ಹಣ ಸರ್... " ಎಂದೆ ಅಳುಕುತ್ತಲೆ... " ನೋಡಿ, ಪಾಪದ ಹಣ, ಪುಣ್ಯದ ಹಣ ಅಂತ ಇರಲ್ಲ... ಹಣ ಎಲ್ಲರಿಗೂ ಒಂದೇ.... ಆದ್ರೆ ನಾವು ಅದನ್ನ ಹೇಗೆ ಉಪಯೋಗಿಸುತ್ತೀವಿ ಅನ್ನೋದರ ಮೇಲೆ ಇರತ್ತೆ ಅಷ್ಟೆ... ಬೇಗನೇ ಹಣ ಕಳಿಸಿ ಕೊಡಿ ಅವರಿಗೆ... " ಎಂದರು ಮಂತ್ರಿಗಳು...

    ನಾನು ಸೂಟ್ ಕೇಸ್ ತೆಗೆದುಕೊಂಡೆ... ಫೋನ್ ಬಡಿದುಕೊಳ್ಳತೊಡಗಿತು... ದಿಲ್ಲಿಯ ನಂಬರಾಗಿತ್ತು ಅದು... ನಾನೇ ಉತ್ತರಿಸಿದೆ... ಪಕ್ಷದ ಹೈ ಕಮಾಂಡ್ ಮಾತನಾಡುತ್ತಿದ್ದರು... ನಾನು ಫೋನ್ ಮಂತ್ರಿಗಳ ಕೈಗಿಟ್ಟೆ... ಅವರು ಏನೂ ಮಾತನಾಡುತ್ತಿರಲಿಲ್ಲ... ಬರೀ ಹೂಂ... ಹೂಂ...ಎನ್ನುತ್ತಿದ್ದರು... ಎರಡು ನಿಮಿಷ ಮಾತನಾಡಿ ಫೋನಿಟ್ಟರು... “" ದಿಲ್ಲಿಯಿಂದ ಫೋನ್... ಚುನಾವಣೆ ಚರ್ಚಿಗಾಗಿ ಹಣ ಕಳಿಸಬೇಕಂತೆ... ಆ ಸೂಟ್ ಕೇಸ್ನಲ್ಲಿದ್ದ ಹಣ ಅಧ್ಯಕ್ಷರಿಗೆ ಕಳಿಸಿ.... ಪ್ರತೀ ಮಂತ್ರಿಗಳಿಂದ ಹಣ ಕೇಳ್ತಾ ಇದ್ದಾರೆ.... ಕಳಿಸಿ ಬಿಡಿ ಇದನ್ನ... " ಎಂದು ಬೇಸರ ಪಡುತ್ತಲೇ ಹೇಳಿದರು... " ಸರ್, ಆ ವ್ರದ್ಧಾಶ್ರಮದವರಿಗೆ ಏನು ಹೇಳಲಿ...? " ಅಳುಕುತ್ತಲೇ ಕೇಳಿದೆ.... " ನೋಡೋಣ.. ಸ್ವಲ್ಪ ಸಮಯ ಕೇಳಿ ಅವರ ಹತ್ತಿರ... " ಎಂದು ಒಳಗೆ ಹೋದರು... ನಾನು ವ್ರದ್ಧಾಶಮಕ್ಕೆ ಫೋನ್ ಮಾಡಲು ತಯಾರಾದೆ... 

   ಕೂಡಲೇ ಹೊರ ಬಂದ ಮಂತ್ರಿಗಳು...  " ಅವರಿಗೆ ಹೇಳಿ... ಎರಡು ತಿಂಗಳು ಬಿಟ್ಟು ಬರಲಿಕ್ಕೆ ಹೇಳಿ... ಐದು ಲಕ್ಷದ ಬದಲು ಹತ್ತು ಲಕ್ಷ ಕೊಡುತ್ತೇವೆ ಅಂತ..." ನಾನು ಅವಾಕ್ಕಾದೆ... ಐದು ಲಕ್ಷ ಕೊಡಲೇ ಆಕಾಶ ಭೂಮಿ ಒಂದು  ಮಾಡ್ತಾ ಇದ್ದೇವೆ... ಹತ್ತು ಲಕ್ಷ ಕೊಡೋದು ಹೇಗೆ ಅಂತ...? ಇವರಿಗೇನಾದರೂ ತಲೆ ಕೆಟ್ಟಿದೆಯಾ..? ಅನಿಸಿತು... ಫೋನ್ ಕಟ್ ಮಾಡಿದೆ.... " ಸರ್, ಹೇಗೆ... ಎಲ್ಲಿಂದ ತರ್ತೀರಾ ಸರ್.. ಸುಮ್ಮನೆ ಯಾಕೆ ಇಲ್ಲದ ತಲೆಬಿಸಿ... ಅವರಿಗೆ ಹೇಳಿಬಿಡೋಣ... ಹಣ ಕೊಡಲು ಆಗಲ್ಲ ಅಂತ.. " ಎಂದೆ ತಲೆ ತುರಿಸಿಕೊಳ್ಳುತ್ತಾ.... " ಇಲ್ಲ..ಇಲ್ಲ... ಅವರಿಗೆ ಕೊಡೋಣ.. ಹತ್ತು ಲಕ್ಷ..." ಎಂದರು ಧೈರ್ಯದಿಂದ... " ಸರ್, ಎಲ್ಲಿಂದ ತರ್ತೀರಾ ಅಷ್ಟೊಂದು ಹಣ..?" ಕೇಳಿಯೇಬಿಟ್ಟೆ..... " ಒಂದ್ ಕೆಲ್ಸ ಮಾಡಿ, ಆ ಎಮ್.ಎಲ್.ಎ. ಜಿಲ್ಲಾಧಿಕಾರಿಯನ್ನು ಬದಲು ಮಾಡಲು ಹೇಳಿದ್ದಾರಲ್ಲ... ಬದಲಿ ಮಾಡಿ, ಆದರೆ ಅಲ್ಲಿಗೆ ರಾಜ್ಯದ ತುಂಬಾ ಪ್ರಾಮಾಣಿಕ ಮತ್ತು ಕಠಿಣ ಜಿಲ್ಲಾಧಿಕಾರಿಯನ್ನು ಹಾಕಿ.... ಮುಂದಿನ ತಿಂಗಳು ಅವರನ್ನೂ ಬದಲು ಮಾಡಲು ಕೇಳಿಕೊಂಡು ಬರ್ತಾರೆ ಮತ್ತೆ ಇದೇ ಎಮ್.ಎಲ್.ಎ... ಆವಾಗ ಅವರಿಂದ ಹತ್ತು ಲಕ್ಷ ಪಡೆದರಾಯಿತು......ಅಲ್ಲಿಯ ತನಕವಾದರೂ ಕಾನೂನಿನ ಪ್ರಕಾರ ಕೆಲಸ ನಡೆಯಲಿ.... "ಎಂದರು ನಗು ನಗುತ್ತಲೇ.....

ನನಗೂ ನಗು ಬಂತು... ಇವರು ಪ್ರಾಮಾಣಿಕರಾ...? ಅಥವಾ ಅಪ್ರಾಮಾಣಿಕರಾ ..? ತಿಳಿಯಲಿಲ್ಲ....

Nov 7, 2013

ಶಿರಸಾ ನಮನ....

    ‘ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ’ ಎನ್ನುತ್ತಲೇ ಶುರು ಮಾಡಿದ ನನ್ನ ಬ್ಲಾಗ್ ’ಮೂಕ ಮನದ ಮಾತು’ನಲ್ಲಿ ಕವನ, ಲಘು ಬರಹ, ಕಥೆಗಳನ್ನು ಬರೆದೆ... ಹೀಗೆ ಬರೆಯಲು ಶುರು ಮಾಡಿದಾಗ ನನ್ನ ಕಥೆಗಳಿಗೆ ಮಾತ್ರ ತುಂಬಾ ಪ್ರೋತ್ಸಾಹ ಸಿಗುತ್ತಿತ್ತು... ಮನಸ್ಸಿನಲ್ಲಿ ಕಾಡುತ್ತಿದ್ದ ತುಂಬಾ ವಿಷಯಗಳಿಗೆ ಸುಣ್ಣ ಬಣ್ಣ ಬಳಿದು, ಮಸಾಲೆ ಹಚ್ಚಿ ಬರೆಯುತ್ತಿದ್ದೆ... ಕಥೆಯ ಪಾತ್ರ ನಾನಾಗಿ ಬರೆಯುತ್ತಿದ್ದೆ... ’ ಎದುರಿಗೆ ಕುಳಿತು ಕಥೆ ಹೇಳಿದ ಹಾಗೆ ಇರಬೇಕು, ಕಥೆ ಬರೆಯೋ ಶೈಲಿ ’ ಎನ್ನೋದು ನನ್ನ ಅಭಿಪ್ರಾಯವಾಗಿತ್ತು.... ಹಾಗೆ ಬರೆಯಲು ಪ್ರಯತ್ನಿಸಿದೆ ಕೂಡ.. ಎಷ್ಟು ಯಶಸ್ವಿಯಾಗಿದ್ದೇನೋ ನೀವೇ ಹೇಳಬೇಕು...

      ಈ ಸಂಕಲನ ಬರಲು ಕಾರಣರಾದವರನ್ನು ಈ ಸಮಯದಲ್ಲಿ ನೆನೆಯಲೇ ಬೇಕಾಗಿದೆ...
ಬ್ಲಾಗ್ ಬರೆಯಲು ಶುರು ಮಾಡಲು ಕಾರಣನಾದ ಗೆಳೆಯ ವಿನಯ್ ಭಟ್, ನನ್ನೆಲ್ಲಾ ಕೆಲಸಗಳಿಗೂ,ನೋವಿಗೂ, ನಲಿವಿಗೂ ಜೊತೆ ನಿಲ್ಲುವ ಆತ್ಮೀಯ ಸ್ನೇಹಿತ ವೆಂಕಟೇಶ್ ಮೊಗೇರ, ದಿನವೂ ನೆನಪಾಗುವ, ಅವನ ಅನುಪಸ್ಥಿತಿ ಕಾಡುವ ಹಾಗೆ ಮಾಡುವ ಗೆಳೆಯ ದಿ. ನಾಗರಾಜ್ ಮೊಗೇರ....  ಕಥೆಯಲ್ಲಿ ಇರಬೇಕಾದ ಮಸಾಲೆ, ಕೊನೆಯಲ್ಲಿ ಕೊಡಬಹುದಾದ ತಿರುವುಗಳ ಬಗ್ಗೆ ತಿಳಿಸುವ , ತಿದ್ದುವ ’ಇಟ್ಟಿಗೆ ಸಿಮೆಂಟು ಸೆಂಟಿಮೆಂಟು’ ಬ್ಲಾಗಿನ ಪ್ರಕಾಶಣ್ಣ ... ಅತ್ತಿಗೆ ಆಶಾ ಪ್ರಕಾಶ್,  ಕವರ್ ಪೇಜ್ ಗೆ ಅತ್ಯುತ್ತಮ ಫೋಟೋ ಕಳಿಸಿಕೊಟ್ಟವರು ಇವರೇ...... ನನ್ನ ಕಥೆಯ, ನನ್ನ ಜೀವನದ ತಪ್ಪುಗಳನ್ನು ಹುಡುಕಿ ಸರಿ ಮಾಡುವ ಮಡದಿ ವನಿತಾ... ನನ್ನ ಎಲ್ಲಾ ಕಥೆಗಳಿಗೆ ಉತ್ತಮ ಪ್ರೊತ್ಸಾಹ ಕೊಡುವ, ತಿದ್ದುವ ಸುನಾಥ್ ಕಾಕಾ ಅವರ ಪುಸ್ತಕದ ಜೊತೆ ನನ್ನ ಪುಸ್ತಕ ಬಿಡುಗಡೆ ಆಗಿದೆ.... ಹೂವಿನ ನಾರೂ ಸ್ವರ್ಗಕ್ಕೆ ಹೋದ ಅನುಭವ ನನ್ನದಾಗಿದೆ.... ಸುನಾಥ್ ಕಾಕಾ ಧನ್ಯವಾದ..., ’ಕೊಳಲು’ ಖ್ಯಾತಿಯ ಡಾಕ್ಟರ್ ಮೂರ್ತಿ ಸರ್, ಮೈಸೂರಿನ ’ನಮ್ಮೊಳಗೊಬ್ಬ’ ಬಾಲಸುಬ್ರಮಣ್ಯ ಸರ್, ಕುವೈತ್ ನ ವಿಜ್ನಾನಿ ’ ಜಲನಯನ’ ಆಜಾದ್ ಸರ್, ಮುಂಬೈ ಅಶೋಕ್ ಶೆಟ್ಟರು,   ಉಮೇಶ್ ದೇಸಾಯಿ ಸರ್, ಸೀತಾರಾಂ ಸರ್ . ತುಂಬಾ ಜನ ಸ್ನೇಹಿತರ ಹೆಸರು ಮರೆತಿದ್ದೇನೆ... ದಯವಿಟ್ಟು ಕ್ಷಮಿಸಿ... ತಪ್ಪು ಮಾಡಿದಾಗ ತಿದ್ದಿ, ಮಾಡದೇ ಇದ್ದಾಗ ತಪ್ಪು ತಿಳಿದು ಹೋದ ಗೆಳೆಯರಿಗೂ ತುಂಬು ಮನದ ಧನ್ಯವಾದಗಳು...

      ಬ್ಲಾಗ್ ಲೋಕದ ಅತ್ಯುತ್ತಮ ಕವಿ ಬದರಿನಾಥ ಪಲವಳ್ಳಿಯವರು ನನ್ನ ಬೆನ್ನು ತಟ್ಟಿದ್ದಾರೆ... ನನ್ನ ಕಥೆಗಳಿಗೆ ಸೂಕ್ಷ್ಮತೆ ಯನ್ನು ಹೇಳಿದ್ದಾರೆ.. ಅವರಿಗೂ ಧನ್ಯವಾದ.... ಹಾಗೆಯೇ ನನ್ನ ಪುಸ್ತಕ ಮಾಡುವುದಾರೆ ಅದಕ್ಕೆ ನೀವೇ ಕವರ್ ಪೇಜ್ ಮಾಡಬೇಕು ಎಂದಾಗ ಖುಶಿಯಿಂದ ಒಪ್ಪಿದ ’ಮ್ರದು ಮನಸು’ ಸುಗುಣ ಮೇಡಮ್, ’ ಸವಿಗನಸು’ ಮಹೇಶ್ ಸರ್...  ಸುಗುಣ ಅವರಿಂದ ಪರಿಚಿತರಾಗಿ ಪುಸ್ತಕದ ಕವರ್ ಪೇಜ್ ಮಾಡಿಕೊಟ್ಟ ವೀರೇಶ್ ಹೊಗೆಸೊಪ್ಪಿನವರ್ ಅವರಿಗೆ ತುಂಬಾ ಧನ್ಯವಾದ... ನಾನು ಬರೆದ ಪ್ರತೀ ಕಥೆಯ ನಂತರ ’ನಿಮ್ಮ ಪುಸ್ತಕ ಯಾವಾಗ ಬರತ್ತೆ’ ಎಂದು ಕೇಳಿ ಪ್ರೋತ್ಸಾಹ ನೀಡುವ 3k ಬಳಗದ ರೂಪಾ ಸತೀಶ್... ಮಂಗಳೂರಿನಲ್ಲಿ ಸಾಹಿತ್ಯ ಸೇವೆ ಮಾಡುತ್ತಿರುವ ಅರೆಹೊಳೆ ಪ್ರತಿಷ್ಟಾನದ ಸದಾಶಿವ ರಾಯರು.... ನನ್ನ ಎಲ್ಲಾ ಕಥೆಗಳನ್ನು ಪುಸ್ತಕ ಯೋಗ್ಯವಾ ಅಂತ ಓದಿ ಅವರ ಟಿಪ್ಪಣಿ ನೀಡಿದ ಸುರತ್ಕಲ್ ಕಾಲೇಜಿನ ಅಧ್ಯಾಪಕರಾಗಿರುವ ಶ್ರೀ. ರಘು ಇಡ್ಕಿಡು ಸರ್...   ಇವರಿಗೆಲ್ಲಾ ನನ್ನ ಅನಂತ ಧನ್ಯವಾದಗಳು...      

ಒಂದು ಪುಸ್ತಕ ಪ್ರಕಟಗೊಳ್ಳಲು ಬರೆಯುವವ ಎಷ್ಟು ಮುಖ್ಯವೋ, ಪ್ರಕಾಶಕರೂ ಅಷ್ಟೇ ಮುಖ್ಯ... ಹಾಗೆಯೆ ನನ್ನ ಪುಸ್ತಕವನ್ನು ಪ್ರಕಟ ಮಾಡುತ್ತಿರುವ ಪ್ರಕಾಶಕರಾದ ’ಸ್ರಷ್ಟಿ ’ ನಾಗೇಶ್ ಅವರಿಗೆ ಅನಂತ ಧನ್ಯವಾದಗಳು..... ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಅಂತ ಅಳುಕುತ್ತಲೇ ಖ್ಯಾತ ಸಾಹಿತ್ಯಕಾರ, ಕವಿ ಗೋಪಾಲ್ ವಾಜಪೇಯಿ ಯವರನ್ನು ಕೇಳಿಕೊಂಡಿದ್ದೆ... " ಮುನ್ನುಡಿ ಅಂತ ಹೇಳಲ್ಲ... ಒಂದೆರಡು ಕಥೆ ಓದಿ ನನ್ನ ಟಿಪ್ಪಣಿ ಬರೆದುಕೊಡುತ್ತೇನೆ " ಎಂದು ಹೇಳಿ, ನನ್ನ ಎಲ್ಲಾ ಕಥೆಗಳನ್ನೂ ಓದಿ, ತುಂಬಾ ಖುಶಿಯಿಂದ ಅತ್ಯುತ್ತಮ ಮುನ್ನುಡಿ ಬರೆದುಕೊಟ್ಟ ಹಿರಿಯರಾದ ವಾಜಪೇಯಿ ಸರ್ ಗೆ ಅನಂತ ವಂದನೆಗಳು.... ಹಾಗೆಯೇ, ಮೊದಲು ಮುನ್ನುಡಿ ಬರೆಯಲು ಒಪ್ಪಿ, ಕೊನೆಗೆ ನನ್ನ ಕೋರಿಕೆಯ ಮೇಲೆ ಬೆನ್ನುಡಿ ಬರೆದ, ನನ್ನ ಕಥೆಗಳನ್ನು ಓದುತ್ತಾ ಬೆನ್ನು ತಟ್ಟುತ್ತಿದ್ದ ಖ್ಯಾತ ರಂಗಭೂಮಿ ಕಲಾವಿದೆ, ಕಿರುತೆರೆಯ ಮುಕ್ತ ಮುಕ್ತದ ’ ಮಂಗಳತ್ತೆ, ’ ಮಹಾಪರ್ವದ ’ಮಂದಾಕಿನಿ’ ಶ್ರೀಮತಿ. ಜಯಲಕ್ಷ್ಮಿ  ಪಾಟೀಲರಿಗೆ ನನ್ನ ಹಾರ್ಧಿಕ ಧನ್ಯವಾದಗಳು....

ಇದೇ ಸಮಯದಲ್ಲಿ ಹಿತೈಷಿಗಳಾದ ವನಿತಾ, ವಿನೋದ್, ಅತ್ರಾಡಿ ಸುರೇಶ್ ಹೆಗ್ಡೆಯವರು, ನನ್ನ ಕಥೆಗಳನ್ನು ಮೆಚ್ಚುವ ವೆಂಕಟೇಶ್ ಮೂರ್ತಿಯವರು, ಕಥೆಗಳಿಗೆ ಸರಿಯಾದ ವಿಮರ್ಶೆ ನೀಡುವ ಶ್ರೀಕಾಂತ್ ಮಂಜುನಾಥ್,, ತಮ್ಮ ಚುಟುಕುಗಳಿಂದ ಗಮನ ಸೆಳೆಯುತ್ತಿರುವ ನಮ್ಮೂರಿನ ಪರೇಶ್ ಸರಾಫ್, ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಪುಷ್ಪರಾಜ್ ಚೌಟ, ’ ಕಾಲೇಜು ಡೈರಿ’ ಪತ್ರಿಕೆ ನಡೆಸುತ್ತಿರುವ ಗುಬ್ಬಚ್ಚಿ ಸತೀಶ್ ಅವರಿಗೆ ,  ಯಾವಾಗಲೂ ನನ್ನ ಕಥೆ ಓದಿ ತಿದ್ದುವ ಸುಮಾ ಸುಧಾಕಿರಣ್, ವಿಜಯಶ್ರೀ ನಟರಾಜ್,  ದಿಲೀಪ್ ಹೆಗ್ಡೆ, ಪ್ರಗತಿ ಹೆಗ್ಡೆ, ಅತ್ಯುತ್ತಮ ಬರಹಗಳಿಂದ ನಮ್ಮನ್ನು ಮುದಗೊಳಿಸುವ ವಿ.ಆರ್. ಭಟ್ ಸರ್, ಅತ್ಯುತ್ತಮ ಛಾಯಗ್ರಾಹಕ ಮಿತ್ರರಾದ ಕೆ. ಶಿವು, ದಿಗ್ವಾಸ್ ಹೆಗ್ಡೆ,  ಮಲ್ಲಿಕಾರ್ಜುನ್, ಉತ್ತಮ ಕಥೆಗಾರ್ತಿಯರಾದ ಅನಿತಾ ನರೇಶ್ ಮಂಚಿ, ತೇಜಸ್ವಿನಿ ಹೆಗ್ಡೆ, ಪ್ರಭಾಮಣಿ ನಾಗರಾಜ್, ಭಾಗ್ಯ ಭಟ್, ಶಮ್ಮಿ ಸಂಜೀವ್, ಪ್ರವೀಣ್ ಭಟ್ ಸಂಪ, ಶಶಿ ಜೋಯಿಸ್, ಗೌತಮ್ ಹೆಗ್ಡೆ,  ಉದಯೋನ್ಮುಖ ಬರಹಗಾರ್ತಿ ಕುಮಟಾದ ಸೌಮ್ಯ ಭಾಗ್ವತ್, ಸುಶ್ರುತ ದೊಡ್ಡೇರಿ, ದಿವ್ಯ ದೊಡ್ಡೇರಿ, ಸುಷ್ಮ ಮೂಡಬಿದ್ರಿ, ರಷ್ಮಿ ಕಾಸರಗೋಡು,  ತಮ್ಮಂದಿರಾದ ಅನಿಲ್ ಬೆಡಗೆ, ಪ್ರದೀಪ್, ಹಳ್ಳಿ ಹುಡುಗ ನವೀನ್, ಶಿವಪ್ರಸಾದ್, ಗಿರೀಶ್ ಸೋಮಶೇಖರ್, ಪ್ರವೀಣ್ ಗೌಡ, ನಾಗರಾಜ್ ಕೆ, ಚಿನ್ಮಯ್ ಭಟ್, ಸತೀಶ್ ನಾಯ್ಕ್ , ಸುಧೇಶ್ ಶೆಟ್ಟಿ,  ಅರುಣ್ ಶ್ರಂಗೇರಿ, ಉಮೇಶ್ ಬೆಳ್ನಿ, ಪ್ರದೀಪ್ ಬೆಳ್ಕೆ,  ಗುರುಪ್ರಸಾದ್ ಶ್ರಂಗೇರಿ,  ಇವರಿಗೆಲ್ಲಾ ನನ್ನ ತುಂಬು ಮನದ ಧನ್ಯವಾದ...

ಹಿರಿಯರಾದ ತಿರುಮಲೈ ರವಿ, ಶ್ರೀನಿವಾಸ್ ಹೆಬ್ಬಾರ್, ಮಂಜುನಾಥ ಕೊಳ್ಳೆಗಾಲ ಇವರೆಲ್ಲರಿಗೂ ಧನ್ಯವಾದ. ಗೆಳೆಯರಾದ ಶುಭಾ ಮಂಜುನಾಥ್, ರುದ್ರೇಶ್ ಗೌಡ, ತಂಗಿ ಪುಷ್ಪಲತಾ ಮಂಜುನಾಥ್, ಮಂಗಳೂರಿನ ವರದಿಗಾರ ಮಿತ್ರರಾದ ಆರಿಫ್ ಮೊಹಮ್ಮದ್ ಪಡುಬಿದ್ರಿ, ವೇಣು ವಿನೋದ್, ಇವರಿಗೂ ತುಂಬು ಮನದ ಧನ್ಯವಾದಗಳು....


ಕೊನೆಯದಾಗಿ, ನನ್ನೆಲ್ಲಾ ಕಥೆಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪೂರ್ತಿಯಾದ ವ್ಯಕ್ತಿಗಳಿಗೆ, ಘಟನೆಗಳಿಗೆ ಧನ್ಯವಾದಗಳು....
ಪುಸ್ತಕ ಬಿಡುಗಡೆಗೆ ಬಂದ ತುಂಬಾ ಜನ ಗೆಳೆಯರಿಗೆ ಹಿತೈಷಿಗಳಿಗೆ ತುಂಬುಮನದ ಧನ್ಯವಾದಗಳು...