Mar 25, 2010

ಇದು ಕಥೆಯಲ್ಲ ....ಜೀವನವೂ ಆಗದಿರಲಿ.......!

ಆಗಷ್ಟೇ ಸ್ನಾನ ಮಾಡಲು ಶುರು ಮಾಡಿದ್ದೆ... ಶೆಕೆಗಾಲದ ತಂಪು ನೀರು ಸ್ನಾನ ಮೈಗೆ, ಮನಸ್ಸಿಗೆ ಮುದ ನೀಡುತ್ತಿತ್ತು.... ಒಂದೇ ಸಮನೆ ಮನೆಯ ಕರೆಗಂಟೆ ಬಡಿದುಕೊಳ್ಳಲು ಶುರು ಮಾಡಿತು..... ಹೆಂಡತಿ ಊರಿಗೆ ಹೋಗಿದ್ದಳು..... ನಾನೇ ಹೋಗಿ ಬಾಗಿಲು ತೆರೆಯಬೇಕಿತ್ತು..... ನನ್ನ ಸ್ನಾನ ಅರ್ಧವಾಗಿತ್ತಷ್ಟೇ..... ಬೇಗ ಸ್ನಾನ ಮುಗಿಸೋಣ ಎಂದು ಸ್ನಾನ ಮುಂದುವರಿಸಿದೆ.... ಒಂದೇ ಸಮನೆ ಬೆಲ್ ಹೊಡೆದುಕೊಳ್ತಾ ಇತ್ತು..... ಯಾರಿರಬಹುದು ರೀತಿ ಬೆಲ್ ಮಾಡ್ತಾ ಇರೋರು ಅಂತ ಯೋಚನೆ ಮಾಡಿದೆ...... ಯಾರೆಂದು ಹೊಳೆಯಲಿಲ್ಲ..... ನನ್ನ ಗೆಳೆಯ ಮತ್ತು ಆತನ ಹೆಂಡತಿ ಮಾತ್ರ ರೀತಿ ಬೆಲ್ ಹೊಡೆಯುತ್ತಿದ್ದರು..... ಆದರೆ ಈಗೀಗ ಅವರಿಬ್ಬರ ನಡುವೆ ತುಂಬಾ ಜಗಳ ನಡೆಯುತ್ತಿತ್ತು.... ಇಬ್ಬರೂ ವಿದ್ಯಾವಂತರು... ಗಂಡ ಒಳ್ಳೆಯ ಕೆಲಸದಲ್ಲಿದ್ದ.... ಚಿಕ್ಕ ಚಿಕ್ಕ ವಿಷಯವನ್ನೇ ದೊಡ್ಡದು ಮಾಡಿಕೊಂಡು ಜಗಳವಾಡುತ್ತಿದ್ದರು..... ಸಂಸಾರದಲ್ಲಿ ಗಂಡಾಂತರ ಮಾಡಿಕೊಂಡಿದ್ದರು..... ನನ್ನನ್ನು ಅವರ ಜಗಳದಿಂದ ದೂರ ಇಟ್ಟಿದ್ದರು..... ಗೆಳೆಯನ ಹೆಂಡತಿ ಅವರ ಜಗಳದ ಬಗ್ಗೆ ಹೇಳುತ್ತಿದ್ದರೂ, ಆತನ ಬಗ್ಗೆ ಪೂರಾ ದೂರುಗಳೇ ಇರುತ್ತಿದ್ದವು..... ಯಾರನ್ನು ನಂಬೋದು ಅಂತ ಗೊತ್ತಿರಲಿಲ್ಲ..... ಅವನ ಸಮಸ್ಯೆ ಅವನೇ ಪರಿಹರಿಕೊಳ್ಳುತ್ತೇನೆ ಎಂದು ನನ್ನ ಗೆಳೆಯ ನನ್ನನ್ನು ದೂರ ಇಟ್ಟಿದ್ದ...... ವಿಶ್ವಾಸಿಯಾಗಿದ್ದ.... ಆತ್ಮಾಭಿಮಾನಿಯಾಗಿದ್ದ..... ಈಗೀಗಲಂತೂ ಅವರ ಜಗಳ ಅತಿರೇಕಕ್ಕೆ ಬಂದಿತ್ತು..... ಡೈವೋರ್ಸ್ ತನಕ ಬಂದಿದೆ ಎಂದು ಕೇಳಿದ್ದೆ..... ಅವರಿಬ್ಬರಲ್ಲಿ ಯಾರಾದರೂ ಆಗಿರಬಹುದಾ ಅಂತ ಜೀವ ಹೆದರಿತು..... ತಂಪು ಸ್ನಾನದ ನಡುವೆಯೂ ದೇಹ ಬೆವರಿತು..... ಬೆಲ್ ಶಬ್ದ ತಡೆಯಲಾರದೆ ಮೈಗೆ ಟವೆಲ್ ಸುತ್ತಿಕೊಂಡು ಬಂದು ಬಾಗಿಲು ತೆರೆದೆ......


ಯಾವುದು ಆಗಬಾರದೆಂದು ಹರಸುತ್ತಿದ್ದೇನೋ ಅದೇ ಆಗಿತ್ತು.......ಬಾಗಿಲಲ್ಲಿ ಗೆಳೆಯನ ಹೆಂಡತಿ ನಿಂತಿದ್ದಳು...... ತುಂಬಾ ಗಾಬರಿಯಾಗಿದ್ದಳು..... ನಾನು ಬಾಗಿಲು ತೆರೆಯುತ್ತಿದ್ದಂತೆಯೇ ನನ್ನನ್ನು ದೂಡಿಕೊಂಡೆ ಒಳಗೆ ಬಂದಳು ..... ಬಾಗಿಲು ಮುಚ್ಚಿದಳು....ಕೈಯಲ್ಲಿ ಚಪ್ಪಲಿ ಇತ್ತು......ನನಗೆ ಏನೂ ಅರ್ಥ ಆಗಲಿಲ್ಲ.... '' ಮುರಳಿ ಬಂದರೆ , ನಾನು ಇಲ್ಲಿ ಇಲ್ಲ ಅಂತ ಹೇಳು..... ನಿನ್ನ ಹೆಂಡತಿ ಎಲ್ಲಿ '' ಅಂದಳು......ಮುರಳಿ ಅವಳ ಗಂಡನ ಹೆಸರು.... ನಾನು'' ಯಾಕೆ ...? ಏನಾಯ್ತು..? ನೀನು ಹೀಗೆ ನಮ್ಮ ಮನೆಗೆ ಬಂದರೆ ಸರಿಯಾಗಲ್ಲ... ಅದರಲ್ಲೋ ನನ್ನ ಹೆಂಡತಿ ಊರಿಗೆ ಹೋಗಿದ್ದಾಳೆ... ಮುರಳಿಗೆ ಗೊತ್ತಾದರೆ ನನ್ನನ್ನು ಕೊಂದೇ ಹಾಕ್ತಾನೆ... ಇನ್ನೊಬ್ಬರ ಹೆಂಡತಿಯನ್ನು ಮನೆಯಲ್ಲಿ ಇರಿಸಿಕೊಂಡು ,ಅವನು ಬಂದು ಕೇಳಿದಾಗ ಇಲ್ಲ ಎನ್ನೋದು ಸರಿ ಅಲ್ಲ'' ಎಂದೇ........ ..ಆಗಲೇ ಅವಳ ಕಣ್ಣಲ್ಲಿ ನೀರು ತುಂಬಿತ್ತು.... '' ಇದೊಂದು ದಿನ ನನ್ನನ್ನು ಬಚಾವು ಮಾಡಿ..... ನನ್ನ ಗಂಡ ನನ್ನನ್ನು ಇವತ್ತು ಸಾಯಿಸಿಯೇ ಬಿಡ್ತಾನೆ..... ಹೇಗಾದರೂ ಮಾಡಿ ನನ್ನನ್ನು ಉಳಿಸು'' ಎಂದಳು..... '' ನಿನ್ನನ್ನು ಸಾಯಿಸುವಷ್ಟು ಕಟುಕ ಅಲ್ಲ ಅವನು..... ನಿನ್ನನ್ನು ಸಾಯಿಸುವಷ್ಟು ಸಿಟ್ಟು ಬರೋ ಹಾಗೆ ಏನು ಮಾಡಿದ್ದೀಯಾ ನೀನು '' ಎಂದೆ.......... ಅವಳು ಅಳುಕುತ್ತಲೇ '' ಅದನ್ನೆಲ್ಲ ಈಗ ಕೇಳಬೇಡ, ನಂತರ ಹೇಳ್ತೇನೆ... ಈಗ ನನ್ನನ್ನು ಕಾಪಾಡು'' ಎಂದಳು...... ನನಗೋ ಧರ್ಮಸಂಕಟ...... ಇವಳನ್ನು ಹೊರಗೆ ಕಳಿಸೋಣ ಎಂದರೆ ನಿಜವಾಗಿಯೂ ಅವನು ಇವಳನ್ನು ಸಾಯಿಸಿದರೆ....... ಒಳಗೆ ಕರೆದುಕೊಂಡು ಕಾಪಾಡೋಣ ಎಂದರೆ ಗೆಳೆಯ ಬಂದು , ಇವಳನ್ನು ನೋಡಿ, ಸಿಕ್ಕಿಹಾಕಿಕೊಂಡರೆ ನನ್ನ ಗತಿ ಅಷ್ಟೇ....'' ನನ್ನನ್ನು ನಿಮ್ಮ ರಗಳೆಯಿಂದ ದೂರ ಇಡುತ್ತೀಯಾ ಎಂದು ಹೇಳ್ತಾ ಹೇಳ್ತಾ ಈಗ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಸ್ತಾ ಇದೀಯಾ'' ಎಂದೆ..... ..... '' ಇವತ್ತೊಂದು ದಿನ ನನ್ನನ್ನು ಕಾಪಾಡು, ನಾಳೆ ನಾನೇ ಹೊರತು ಹೋಗ್ತೇನೆ... ನಿನ್ನ ಕಾಲಿಗೆ ಬೀಳ್ತೇನೆ ಇಲ್ಲ ಎನ್ನಬೇಡ... ನನ್ನನ್ನು ಹುಡುಕುತ್ತಾ ಇಲ್ಲಿಗೆ ಬರಬಹುದು ಅವನು '' ಎನ್ನುತ್ತಾ ಒಳಗೆ ಓಡಿದಳು..... ..... ಅವಳನ್ನು ಒಳಗೆ ಕೂಡಿಹಾಕಿ ನಾನು ದೇವರನ್ನು ನೆನೆದೆ......



ನಾನು ಸ್ನಾನ ಮಾಡಲು ಪುನಃ ಬಾತ್ ರೂಮಿಗೆ ಓಡಿದೆ....... ಸ್ನಾನ ಮುಗಿಸಿ ಹೊರಬರುತ್ತಿದ್ದಂತೆ ಗೇಟಿನ ಶಬ್ದ ಆಯಿತು..... ಮನೆಯ ಕಿಟಕಿ ತೆಗೆದೇ ಇಟ್ಟಿದ್ದೆ.... ಬಂದವನು ನನ್ನ ಗೆಳೆಯನೆ ಆಗಿದ್ದ..... ನನ್ನ ಎದೆ ಬಡಿತ ನನಗೇ ಕೇಳಿಸುತ್ತಿತ್ತು...... ಇವನ ಹೆಂಡತಿ ಇಲ್ಲಿಗೆ ಬಂದಿದ್ದನ್ನ ಈತ ನೋಡಿರಬಹುದಾ....? ಈತನಿಗೆ ಏನು ಹೇಳಲಿ....? ಇಲ್ಲೇ ಇದ್ದಾಳೆ ಎಂದು ಹೇಳಿ ಇವಳಿಗೆ ಮೋಸ ಮಾಡಲಾ....? 'ಇಲ್ಲಿ ಬಂದಿಲ್ಲಾ' ಎಂದು ಹೇಳಿ ಗೆಳೆಯನಿಗೆ ಮೋಸ ಮಾಡಲಾ....? ಎಂದು ದ್ವಂದದಿಂದಿದ್ದೆ...... ಗೆಳೆಯನ ಕೆಟ್ಟ ಗುಣಗಳ ಬಗ್ಗೆ ಹೇಳುತ್ತಿದ್ದ ಆತನ ಹೆಂಡತಿಯ ಮಾತೆಲ್ಲ ನೆನಪಿಗೆ ಬಂತು....... ಈತನೇ ಎಲ್ಲಾ ತಪ್ಪು ಮಾಡಿದ್ದಾನೆ.... ಇವಳನ್ನುಈತನಿಂದ ಬಚಾವು ಮಾಡುವುದೇ ಸರಿ ಎನಿಸಿಕೊಂಡು ಬಾಗಿಲು ತೆರೆದೆ.......


ಗೆಳೆಯ ತುಂಬಾ ಗಾಬರಿಯಲ್ಲಿದ್ದ...... '' ಚಿನ್ನಾ ಇಲ್ಲಿಗೆ ಬಂದಿದ್ದಾಳಾ'' ಎಂದ ಗಂಭೀರವಾಗಿ...... ನಾನು' ಇಲ್ಲಾ' ಎಂದೇ
ಷ್ಟೇ ಚುಟುಕಾಗಿ..... ... ''ಯಾಕೆ, ಏನಾಯ್ತು...'' ಎಂದೇ ಅಮಾಯಕನ ಹಾಗೆ ನಾಟಕವಾಡುತ್ತಾ..... ಗೆಳೆಯನ ಕಣ್ಣು ಆಗಲೇ, ನನ್ನ ಮನೆಯನ್ನೆಲ್ಲಾ ಹುಡುಕುತ್ತಿತ್ತು....'' ಪಾಪುನ ಶಾಲೆಗೇ ಕಳಿಸಿ ಬರ್ತೀನಿ ಅಂತ ಬಂದಿದ್ದಳು... ಇಷ್ಟು ಹೊತ್ತಾದರೂ ವಾಪಸ್ ಬಂದಿಲ್ಲ...ಇಲ್ಲಿಗೆನಾದರೂ ಬಂದಿಂದಾಳ ಅಂತ ನೋಡೋಕೆ ಬಂದೆ..... ಇಲ್ಲಿಗೆ ಬಂದಿಲ್ಲಾ ತಾನೇ ...ಸುಳ್ಳು ಹೇಳಬೇಡ" ಅಂದ ಗಡುಸಾಗಿ.... ..... '' ಇಲ್ಲ, ಇಲ್ಲಿಗೆ ಬಂದಿಲ್ಲ... ಇತ್ತೀಚಿಗೆ ಅವಳು ಇಲ್ಲಿಗೆ ಬರೋದನ್ನ ನಿಲ್ಲಿಸಿದ್ದಾಳೆ'' ಎಂದೇ ಅಷ್ಟೇ ಸಾವಧಾನವಾಗಿ..... ನನ್ನ ಮುಖದಲ್ಲಿನ ಸುಳ್ಳನ್ನು ಆತ ಗಮನಿಸಿದನೋ ಇಲ್ಲವೋ ಗೊತ್ತಿಲ್ಲ.... ಸುಮ್ಮನೆ ಹೋದ..... ಹೋದ ಸ್ವಲ್ಪ ಹೊತ್ತಿನಲ್ಲಿಯೇ ವಾಪಸ್ ಬಂದು ನನ್ನ ಬೈಕ್ ತೆಗೆದುಕೊಂಡು ಹೋದ.... ಆತನ ಮುಖ ಕಪ್ಪಿಟ್ಟಿತ್ತು...... '' ಫ್ರೆಂಡ್.... ನಿನ್ನ ಹೆಂಡತಿ ನನ್ನ ಮನೆಯಲ್ಲೇ ಇದ್ದಾಳೆ... ಚಿಂತೆ ಮಾಡಬೇಡ, ಆದರೆ ಸ್ವಲ್ಪ ಹೊತ್ತಿನ ನಂತರ ನಾನೇ ಅವಳನ್ನು ನಿನ್ನ ಮನೆಗೆ ಕರೆದುಕೊಂಡು ಬರುತ್ತೇನೆ'' ಅಂದು ಹೇಳೋಣ ಎಂದುಕೊಂಡೆ..... ಆದರೆ ಹೇಳಲಾಗಲಿಲ್ಲ....


ನಾನು ಇವಳಿಗೆ ಎಷ್ಟೇ ಬುದ್ದಿ ಹೇಳಿದರೂ , ಇವಳ ತಲೆಯ ಒಳಗೆ ಹೋಗಲೇ ಇಲ್ಲ..... ನಾನು ಇವಳನ್ನು ಹೊರಗಡೆಯಿಂದ ಲಾಕ್ ಮಾಡಿ ಆಫೀಸಿಗೆ ಹೋದೆ..... ಆಫೀಸಿಗೆ ಹೋದರು ನನಗೆ ಇವನದೇ ಧ್ಯಾನ... ಊರಿಗೆ ಕೆಲಸಕ್ಕೆ ಸೇರಲು ಹೊಸದಾಗಿ ಬಂದಾಗ, ನನ್ನನ್ನು ತುಂಬಾ ಪ್ರೀತಿಯಿಂದ ನೋಡಿದ ಗೆಳೆಯ...., ಎಷ್ಟೋ ದಿನ ಆತನ ಮನೆಯಲ್ಲಿ ನನಗೆ ಊಟಕ್ಕೆ ಹಾಕಿದ್ದ .... ತುಂಬಾ ಗಿಜಿ ಗಿಜಿಗುಡುವ ಟ್ರಾಫಿಕ್ ನಲ್ಲಿ ತನ್ನ ಹೆಂಡತಿಯ ಕೈ ಬಿಟ್ಟು , ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಿದ್ದ ಗೆಳೆಯ...... ನನ್ನ ತೊಂದರೆಗಳಿಗೆ ಸಾಂತ್ವನ ಹೇಳುತ್ತಿದ್ದ ಗೆಳೆಯ ನೆನಪಿಗೆ ಬಂದ........ ತುಂಬಾ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂಬ ಭಾವ ಕಾಡಲು ಶುರು ಮಾಡಿತು....


ಒಂದು ಗಟ್ಟಿ ನಿರ್ಧಾರ ಮಾಡಿ ಗೆಳೆಯನಿಗೆ ಫೋನ್ ಮಾಡಿದೆ..... '' ದೋಸ್ತ್, ನಾನು ತಪ್ಪು ಈಗಾಗಲೇ ಮಾಡಿದ್ದೇನೋ ಅಥವಾ ಈಗ ನಿನಗೆ ಫೋನ್ ಮಾಡಿ ತಪ್ಪು ಮಾಡುತ್ತಿದ್ದೆನೋ ಗೊತ್ತಿಲ್ಲ.. ನಿನ್ನ ಹೆಂಡತಿ ನನ್ನ ಮನೆಯಲ್ಲೇ ಇದ್ದಾಳೆ....ನಿನಗೆ ಹೇಳಬೇಡ ಎಂದಿದ್ದಳು... ಆದರೂ ನಿನಗೆ ಹೇಳುತ್ತಿದ್ದೇನೆ..... ಕ್ಷಮಿಸಿಬಿಡು..... ನೀನು ಮನೆಗೆ ಬರುವ ಮೊದಲೇ ಅವಳನ್ನು ನಿನ್ನ ಮನೆಗೆ ಕಳಿಸಿ ಬರುತ್ತೇನೆ '' ಎಂದೇ ಅಳುಕುತ್ತಲೇ...... ಗೆಳೆಯ ತುಂಬಾ ಸಿಟ್ಟಾಗಿದ್ದ..... '' ರವೀ, ನೀನು ನನಗೆ ಮೋಸ ಮಾಡಿದ್ದೀಯಾ..... ನಿನ್ನ ಮುಖ ಎಂದಿಗೂ ನನಗೆ ತೋರಿಸಬೇಡ.... ನಿನ್ನ ಮೇಲೆ ಪೋಲಿಸ್ ಕಂಪ್ಲೈಂಟ್ ಕೊಡ್ತೇನೆ, ನೋಡ್ತಾ ಇರು...'' ಎಂದು ಫೋನ್ ಕಟ್ ಮಾಡಿದ..... ಫೋನ್ ನಲ್ಲಿ ಮಾತನಾಡಿದ್ದನಾದರೂ ಮಾತಿನ ಬಿಸಿ ನನ್ನ ಕಿವಿಗೆ ತಾಗಿತ್ತು..... ಆಫೀಸಿಂದ ಕೂಡಲೇ ವಾಪಸ್ ಬಂದು ಇವಳಿಗೆ ಸುಳ್ಳು ಹೇಳಿದೆ...... '' ನಿನ್ನ ಗಂಡನಿಗೆ ನೀನು ಇಲ್ಲಿರೋದು ಗೊತ್ತಾಗಿದೆ.... ನೀನು ಕೂಡಲೇ ಹೊರಟುಬಿಡು .... ನಿನ್ನನ್ನು ಮನೆಗೆ ಬಿಟ್ಟು ಬರುತ್ತೇನೆ ಬಾ'' ಎಂದು ಅವಳನ್ನು ಕರೆದುಕೊಂಡು ಅವಳ ಮನೆ ಕಡೆ ಹೊರಟೆ...... ಅವಳ ಮನೆ ಮೆಟ್ಟಿಲು ಹತ್ತುತ್ತಾ ಇದ್ದೆ.... ಆಗ ಅವಳ ಕಣ್ಣಿರ ಕಟ್ಟೆ ಒಡೆದಿತ್ತು...... '' ರವೀ, ಆಗಲ್ಲ ಕಣೋ, ಇವನ ಜೊತೆ ಸಂಸಾರ ಮಾಡೋದು ಆಗೋದೇ ಇಲ್ಲ.... ಸಂಶಯ ಪಿಶಾಚಿ ಆಗಿದ್ದಾನೆ ಇವನು ಈಗೀಗ..... ನನ್ನ ಅಮ್ಮ, ತಮ್ಮನ ಜೊತೆ ಮಾತನಾಡಿದರೂ ಸಿಟ್ಟು ಮಾಡ್ತಾನೆ..... ...ಹೀಗಿರೋಕೆ ಹೇಗೆ ಸಾದ್ಯ ಹೇಳು.... ಅವ ಬಂದರೆ ನಾನು ಬಾಗಿಲೆ ತೆರೆಯೋಲ್ಲ..... ನನ್ನನ್ನು ಸಾಯಿಸಿಯೇ ಬಿಡುತ್ತಾನೆ ಇವತ್ತು.... ಅವನು ನಾನ್ನು ಸಾಯಿಸುವ ಮೊದಲು, ನಾನೇ ಸತ್ತು ಬಿಡುತ್ತೇನೆ ರವೀ.... ಇದೆ ಕೊನೆ ಬಾರಿ ನಾನು ನಿನ್ನನ್ನು ನೋಡ್ತಾ ಇರೋದು.....'' ಎಂದು ನನ್ನ ಕೈ ಹಿಡಿದು ಅತ್ತೆ ಬಿಟ್ಟಳು....... ನನಗೂ ಕಣ್ಣಲ್ಲಿ ನೀರು ಬಂತು..... '' ನೋಡಮ್ಮಾ , ಇಷ್ಟೆಲ್ಲಾ ನೋವು ಅನುಭವಿಸುವುದು ಬೇಡ..... ನಿನ್ನ ಅಮ್ಮ, ತಮ್ಮನನ್ನು ಕರೆದು ಮಾತಾಡಿ, ಸಮಸ್ಯೆ ಬಗೆಹರಿಸಿಕೊ...... '' ಎಂದೇ...... ಅವಳು ನನ್ನನ್ನು ಕೇಳುವ ಸ್ತಿತಿಯಲ್ಲಿ ಇರಲಿಲ್ಲ..... '' ಇಲ್ಲ ಕಣೋ, ಬದುಕಿರೋದು ಕಷ್ಟ... ಸತ್ತೆ ಬಿಡ್ತೇನೆ..'' ಎಂದು ಹೇಳಿ ಮೆಟ್ಟಿಲು ಹತ್ತಲು ಶುರು ಮಾಡಿದಳು.... '' ನೋಡು ಮರಿ, ಸತ್ತು ಏನೂ ಸಾಧಿಸಲು ಆಗೋಲ್ಲ.... ಬದುಕಿದ್ದು ಸಾಧಿಸು.... ಇವನ ಜೊತೆ ಬದುಕೋಕೆ ಆಗೋದೇ ಇಲ್ಲ ಎಂದರೆ ಡೈವೋರ್ಸ್ ಪಡೆ..... ನೀನೂ ಕಲಿತಿದ್ದೀಯಾ..... ಕೆಲಸ ಮಾಡಿ ನೀನು ಮತ್ತು ನಿನ್ನ ಮಗ ಬದುಕಬಹುದು.... '' ಎಂದೆಲ್ಲಾ ಬಡಬಡಿ ಸುತ್ತಿದ್ದೆ ..... ಅವಳು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಲೇ ಮನೆಯ ಬಾಗಿಲು ಹಾಕಿಕೊಂಡಳು..... ... ನನಗೆ ಒಂದಂತೂ ಧೈರ್ಯವಿತ್ತು.... ಹೆಂಗಸು ಆತ್ಮಹತ್ಯೆ ಮಾಡಿಕೊಳ್ಳುವ ಹೆಂಗಸಲ್ಲ ಎಂದು.......


ಕೆಲವು ದಿನಗಳಲ್ಲಿ ಇವರ ಜಗಳ ಮುಂದುವರಿದೆ ಇತ್ತು...... ಅಪ್ಪ ಅಮ್ಮನ ಊರಿಗೆ ಹೋಗಿ ಸಮಸ್ಯೆ ಬಗಹರಿಸಲು ಪ್ರಯತ್ನ ಪಟ್ಟರೂ ಫಲಕಾರಿಯಾಗಲಿಲ್ಲ ಎಂದು ಸುದ್ದಿ ಸಿಕ್ಕಿತ್ತು...... ಹೀಗಿರಲು... ಒಂದು ದಿನ ರಾತ್ರಿ ಗೆಳೆಯನ ಫೋನ್ ನಿಂದ ಕಾಲ್ ಬಂತು.... '' ರವೀ , ಸ್ವಲ್ಪ ನನ್ನ ಮನೆಗೆ ಬರೀಯಾ'' ಎಂದವ ನನ್ನ ಗೆಳೆಯನೆ ಆಗಿದ್ದ...... ಕೂಡಲೇ ಆತನ ಮನೆಗೆ ಓಡಿದೆ...... ಆಟ ಮತ್ತು ಆತನ ಹೆಂಡತಿ ಆರಾಮಾಗಿ ಕುಳಿತಿದ್ದರು.... ಸಮಸ್ಯೆ ಬಗೆ ಹರಿದ ಲಕ್ಷಣ ಕಾಣ್ತಾ ಇತ್ತು....... ಗೆಳೆಯ ಏನೋ ಹೇಳಲು ಹೊರಟ ..... ಮದ್ಯದಲ್ಲಿ ಅವನ ಹೆಂಡತಿ ಬಾಯಿ ಹಾಕಿದಳು....... '' ರವೀ , ನಾನು ನಿನ್ನನ್ನು ತುಂಬಾ ನಂಬಿದ್ದೆ..... ನನ್ನ ಗಂಡನಿಗಿಂತಲೂ ಹೆಚ್ಚು.....ಆದರೆ ನೀನು ನನಗೆ ಮೋಸ ಮಾಡಿದೆ..... '' ನನಗೆ ತಲೆ ಬುಡ ಅರ್ಥ ಆಗಲಿಲ್ಲ....... '' ಏನು ಹೇಳ್ತಾ ಇದೀಯಾ ನೀನು'' ಎಂದೇ ನಾನು ಗಾಬರಿಯಿಂದ..... ಮುರಳಿ ಮಾತು ಮುಂದುವರಿಸಿದ......'' ರವೀ , ನಿನಗೆ ನಾವಿಬ್ಬರೂ ಜೊತೆಯಾಗಿ ಇರೋದು ಇಷ್ಟ ಇಲ್ಲವಾ ''ಎಂದ...... ನನಗಂತೂ ಶಾಕ್...... '' ನಿಮ್ಮಿಬ್ಬರ ಒಳಿತಿಗಾಗಿ ನಾನು ಏನೆಲ್ಲಾ ಪ್ರಾರ್ಥನೆ ಮಾಡಿದ್ದೆ ಎಂದು ನಿಮಗೆ ತಿಳಿದಿಲ್ಲ.....ಅಷ್ಟಕ್ಕೋ ನೀವಿಬ್ಬರು ಬೇರೆಯಾದರೆ ನನಗೇನು ಸಿಗತ್ತೆ'' ಎಂದೇ ಸ್ವಲ್ಪ ಗಡುಸಾಗಿಯೇ..... '' ಹಾಗಿದ್ದರೆ ನೀನೇಕೆ ಅವಳಿಗೆ ನನ್ನಿಂದ ಡೈವೋರ್ಸ್ ಪಡೆಯಲು ಹೇಳಿದೆ'' ಎಂದ ಮುರಳಿ...... '' ನಾನ್ಯಾವಾಗ ಅವಳಿಗೆ ಹಾಗೆ ಹೇಳಿದೆ '' ನನ್ನ ಉತ್ತರ ತುಂಬಾ ಅಮಾಯಕವಾಗಿತ್ತು........ ಆಕೆ.....'' ನೀನು ಹೇಳಲಿಲ್ಲವಾ..... ನನ್ನನ್ನು ಮನೆಗೆ ವಾಪಸ್ ಕಳಿಸಿಕೊಡುವಾಗ , 'ನೀನು ಡೈವೋರ್ಸ್ ಕೊಡು ಅವನಿಗೆ , ಬದುಕಿ ತೋರಿಸು' ಅಂತ..... ಅದಕ್ಕೆ ನಾನು ಇವನಿಗೆ ಡೈವೋರ್ಸ್ ಕೊಡೊ ಯೋಚನೆ ಮಾಡಿದೆ..... ನೀನು ಹಾಗೆ ಹೇಳದೆ ಇದ್ದರೆ ನಾನು ಖಂಡಿತ ಡೈವೋರ್ಸ್ ಬಗ್ಗೆ ಖಂಡಿತ ಯೋಚನೆ ಮಾಡ್ತಾನೆ ಇರಲಿಲ್ಲ'' ಎಂದಳು...... ಇನ್ನೂ ಮುಂದುವರಿದಿತ್ತು ಅವಳ ಮಾತಿನ ಝರಿ......


ನಾನು ಅವರಿಬ್ಬರನ್ನೂ ನೋಡಿದೆ.....ನನಗೆ ಅವರಿಬ್ಬರೂ ಸಮಸ್ಯೆ ಬಗೆಹರಿಸಿಕೊಂಡವರ ಹಾಗೆ ಕಂಡರು.....ಅವರ ಸಮಸ್ಯೆಗೆ ಮೂಲ ಕಾರಣ ಹುಡುಕುವ ಬದಲು, ನನ್ನ ಮೇಲೆ ಗೂಬೆ ಕೂರಿಸಲು ಕಂಡರು..... ನಾನು ಅವರ ತಿಕ್ಕಲುತನಕ್ಕೆ ದಾಳವಾಗಿದ್ದೆ..... ನಾನು ಮನಸ್ಸಿನಲ್ಲಿಯೇ ಯೋಚನೆ ಮಾಡಿದೆ.... ' ನನ್ನ ಹೆಸರುಹಾಳು ಮಾಡಿ, ಇವರು ತಮ್ಮ ಸಂಸಾರ ರಥ ಮುಂದುವರಿಯೋದಾದರೆ ನನ್ನ ಹೆಸರು ಹಾಳಾದರೂ ಪರವಾಗಿಲ್ಲ...ಇವರಿಬ್ಬರು ಚೆನ್ನಾಗಿರಲಿ...' ಎಂದು ತಲೆ ತಗ್ಗಿಸಿ ಕುಳಿತೆ.....



49 comments:

  1. ದಿನಕರ್... ಅವರೇ.
    ನಿಮ್ಮ ಚಿ೦ತನೆ ಸರಿಯಾಗಿದೆ...
    ಇವಾಗ ನಿಮ್ಮ ಮೇಲೆ ಗೂಬೆ ಕೂರಿಸಿದರೂ ಅವರ ಸ೦ಸಾರ ಸರಿಯಿರಲಿ...
    ಪ್ರತಿ ಸಾರಿನೀವೇ ಗೂಬೆ ಹೊರುವ ಪ್ರಸ೦ಗ ಬಾರದಿರಲಿ ....!!!!

    ReplyDelete
  2. ದಿನಕರ...

    ತುಂಬಾ ಸುಂದರವಾದ ಕಥೆ...
    ನೀವು ಹೇಳಿದ ಹಾಗೆ ಇದು ಕಥೆಯಾಗಿಯೇ ಇರಲಿ..

    ತಾವೇ ಶುರುಮಾಡಿಕೊಂಡ ಜಗಳ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ..
    ಸಂಧಾನ ಮಾಡಿಕೊಳ್ಳುವ ಇಂಥಹ ಜೋಡಿ ನಾನು ನೋಡಿದ್ದೇನೆ..

    ಒಂದು ಒಳ್ಳೆಯ ಮನಸ್ಸು ಇದನ್ನೇ ಬಯಸುತ್ತದೆ..
    "ಹೇಗಾದರೂ ಆ ಜೋಡಿ ಸಂತೋಷದಿಂದ ಇರಲಿ"

    ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿದೆ.....

    ಅಭಿನಂದನೆಗಳು ದಿನೂ.....

    ReplyDelete
  3. ದಿನಕರ್ ಅವರೇ..
    ಅವರಿಬ್ಬರೂ ಚೆನ್ನಾಗಿರಲಿ ಅಂತ ಹೇಳಿದಿರಲ್ಲ..ಸೂಪರ್...ಕಥೆ ಬರೆದ ರೀತಿ..ಏನಾಗುತ್ತೆ ಇದು ಎನ್ನೋ ಕುತೂಹಲ ಕೊನೆಯವರೆಗೂ ಇತ್ತು... :) !!
    ನಿಮ್ಮವ,
    ರಾಘು.

    ReplyDelete
  4. ಕತೆ ರೂಪಿಸಿದ ರೀತಿ ತುಂಬಾ ಚೆನ್ನಾಗಿದೆ ಸರ್ ..
    ಮತ್ತೊಬ್ಬರ ಒಳಿತಲ್ಲಿ ಖುಷಿ ಕಾಣೋದು ಅಂದ್ರೆ ಹೀಗೆ ಅಲ್ವ !

    ReplyDelete
  5. ದಿನಕರ್...
    ಕಥೆ ಚೆನ್ನಾಗಿದೆ...
    ನಿಜ ಜೀವನಕ್ಕೆ ಬಹಳ ಹತ್ತಿರವಾಗಿದೆ.....
    ಬರೀತಾ ಇರಿ....
    ಅಭಿನಂದನೆಗಳು ....

    ReplyDelete
  6. ವಿಜಯಶ್ರೀ ಮೇಡಂ,
    ಹ್ಹಾ ಹ್ಹಾ.. ಪ್ರತಿ ಸಾರಿ ಗೂಬೆ ಕೂರಿಸೋಕೆ..... ಆಗಲ್ಲಾ..... ಯಾಕೆಂದರೆ, ನನ್ನ ಮುಂದಿನ ಕಥೆ ಪಾತ್ರಗಳಲ್ಲಿ ಇವರು ಇರಲ್ಲ...... ಧನ್ಯವಾದ.... ನಿಮ್ಮ ಅನಿಸಿಕೆಗೆ....

    ReplyDelete
  7. ದಿನಕರ್..ಅವರೇ,

    ವಾಸ್ತವಕ್ಕೆ ತುಂಬ ಹತ್ತಿರವಾದ ಕತೆ. ಚೆನ್ನಾಗಿದೆ

    ReplyDelete
  8. ಉತ್ತಮ ಕತೆ. ನಿರೂಪಿಸಿದ ರೀತಿಯೂ ಚೆನ್ನಾಗಿದೆ.

    ReplyDelete
  9. ಇದು ಕಥೆಯ? ನೈಜ ಘಟನೆಯಾ?
    ನಿಮ್ಮ ಬರವಣಿಗೆ ಎಂದಿನಂತೆ ಅದ್ಭುತ!
    ಏನೋ ಒಂದು ಅಪೂರ್ಣತೆಯ ಜೊತೆಗೆ ಈ ಬರಹ ಮುಗಿದಿದೆ
    ಇನ್ನಷ್ಟು ಕೆದಕಿ ತಿಳಿಯುವ ಕುತೂಹಲವನ್ನು ಉಳಿಸಿದೆ

    ReplyDelete
  10. ಕಥೆ ಚೆನ್ನಾಗಿದೆ... ನೈಜತೆಗೆ ಹತ್ತಿರವಾದ ಕಥೆಯಿದು...

    ಬರವಣಿಗೆಯಲ್ಲಿ ತುಂಬಾ ತಪ್ಪುಗಳಿದ್ದು ಓದಲು ಸ್ವಲ್ಪ ಕಷ್ಟವಾಗುತ್ತದೆ.. :-)

    (ಪರಿಹರಿಕೊಳ್ಳುತ್ತೇನೆ,ಕೊಂಡೆ ಹಾಕ್ತಾನೆ,ಕರೆದುಂದು,ಹೊರತು ಹೋಗ್ತೇನೆ,ಬಂದಿಂದಾಳ,ಆಟ,ಅಂದು ಹೇಳೋಣ,ದಾತಿಸುತ್ತಿದ್ದ,ಹೊರತುಬಿದೆ,ಮೆಯ್ಯಿಲು,ನಾನ್ನು...)

    ReplyDelete
  11. ದಿನಕರ್ ಸರ್,

    ಇಂಥವೂ ತುಂಬಾ ಆಗಿವೆ. ಒಳ್ಳೆಯದು ಮಾಡಲು ಹೋಗಿ ಅದೇ ತಿರುಗೇಟು ಆಗಿರುವುದು ತುಂಬಾ ನಡೆದಿದೆ. ಆದ್ರೆ ಇದು ಕತೆಯೇ ಆಗಿದ್ದರೇ ಚೆನ್ನ. ನಿಜ ಜೀವನದಲ್ಲಿ ಯಾರಲ್ಲೂ ನಡೆಯದಿರಲಿ ಅನ್ನುವುದು ನನ್ನ ಆಸೆ.

    ಕತೆಯಾಗಿದ್ದರೇ ನಿಜಕ್ಕೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ...

    ReplyDelete
  12. 'ದಿನಕರ ಮೊಗೇರ.. ' ಅವ್ರೆ..,

    ಹೌದು ಈ ಕತೆ ವಾಸ್ತವಕ್ಕೆ ತುಂಬಾ ಹತ್ತಿರವಾಗುವಂತೆ ಹೆಣೆದಿದ್ದೀರಿ..
    ಮತ್ತೊಂದು ವಿಷಯ ಹೇಳಬೇಕೆಂದಿದ್ದೆ,ಅದನ್ನು ರವಿಕಾಂತ ಗೋರೆ ಅವರೇ ಹೇಳಿದ್ದಾರೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com

    ReplyDelete
  13. ಈ ಕಥೆ ಜೀವನವೂ ಆಗದಿರಲಿ. ಆದರೆ ಎಷ್ಟೊ ಜನರ ಜೀವನದಲ್ಲಿ ಇದು ಕಥೆ ಆಗಿದೆ. ಕುತೂಹಲವನ್ನು ಕಾಯ್ದಿರಿಸಿಕೊಂಡ ಕತೆ. ಚನ್ನಾಗಿದೆ.

    ReplyDelete
  14. ಚೆನ್ನಾಗಿದೆ, ನೈಜತೆಗೆ ಸನಿಹದಲ್ಲಿದೆ.

    ReplyDelete
  15. ಚೆನ್ನಾಗಿದೆ, ನೈಜತೆಗೆ ಸನಿಹದಲ್ಲಿದೆ.

    ReplyDelete
  16. ಪ್ರಕಾಶಣ್ಣ,
    ನಿಮ್ಮ ಆಗಮನ , ಅನಿಸಿಕೆ ತುಂಬಾ ಖುಷಿ ಕೊಟ್ಟಿತು..... ಒಳ್ಳೆ ಮನಸ್ಸನ್ನು ಅರ್ಥ ಮಾಡಿಕೊಳ್ಳೋದು..... ಪ್ರೋತ್ಸಾಹ ಕೊಡೋರು ತುಂಬಾ ಕಮ್ಮಿ ಆಲ್ವಾ......

    ReplyDelete
  17. ರಘು,
    ತುಂಬಾ ಥ್ಯಾಂಕ್ಸ್ ನಿಮ್ಮ ಮೆಚ್ಚುಗೆಗೆ...... ಒಳ್ಳೆ ಕಥೆ ಬರೆಯೋಕೆ ಪ್ರಯತ್ನ ಮಾಡಿದೆ..... ಎಷ್ಟರ ಮಟ್ಟಿಗೆ ಯಶಸ್ವಿ ಆದೇನೋ ಗೊತ್ತಿಲ್ಲ.....

    ReplyDelete
  18. ರಂಜಿತಾ ಮೇಡಂ,
    ಒಬ್ಬರ ಒಳಿತನ್ನು ಕಂಡೂ ನಮಗೆ ಕೆಟ್ಟದ್ದು ಆದರೆ ತುಂಬಾ ಬೇಸರವಾಗತ್ತೆ ಮೇಡಂ...... ಧನ್ಯವಾದ ನಿಮ್ಮ ಕಾಮೆಂಟ್ ಗೆ......

    ReplyDelete
  19. ಮಹೇಶ್ ಸರ್,
    ನಿಜ ಜೀವನಕ್ಕೆ ತುಂಬಾ ತುಂಬಾ ಹತ್ತಿರವಾದ ಕಥೆ ಇದು..... ಅದಕ್ಕೆ ಬರೆದೆ...... ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ......

    ReplyDelete
  20. ಸುಬ್ರಮಣ್ಯ ಸರ್,
    ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...... ಹೀಗೆ ಪ್ರೋತ್ಸಾಹ ಕೊಡುತ್ತಾ ಇರಿ.....

    ReplyDelete
  21. ಸುಮಾ ಮೇಡಂ,
    ಇಷ್ಟ ಪಟ್ಟು ಓದಿ, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ........

    ReplyDelete
  22. ಸೀತಾರಾಂ ಸರ್,
    thank you .....

    ReplyDelete
  23. ಭಾಷೆ ಮೇಡಂ,
    ನೈಜ ಘಟನೆಗೆ tumbaaaaaaa ಹತ್ತಿರದ ಘಟನೆ ಇದು.... ಅಪೂರ್ಣ ಕಥೆ ಮೋಸ ಹೋದ ' ರವಿ' ಯದು....... ಧನ್ಯವಾದ ನಿಮ್ಮ ಅನಿಸಿಕೆಗೆ.....

    ReplyDelete
  24. ಮನಮುಕ್ತಾ ಮೇಡಂ,
    thank you ...thank you .....

    ReplyDelete
  25. ದಿನಕರ,
    ತುಂಬಾ ಚೆನ್ನಾಗಿ ಬರೆದಿದ್ದೀರಿ. ಇದು ಕತೆಯೋ ಅಥವಾ ವಾಸ್ತವ ಘಟನೆಯೊ ಎಂದು ಬೆರಗಾಗುವಂತಹ ಬರವಣಿಗೆ.

    ReplyDelete
  26. ಗೆಳೆಯ ಮತ್ತು ಆತನ ಪತ್ನಿಗೆ ಒಳ್ಳೆಯದಾಗಲಿ..ಚೆನ್ನಾಗಿ ಕಥೆ ಬರೆದಿದ್ದೀರಿ..
    ಕೆಲವೊಂದು ಸಲ ನಿಮ್ಮ ಬ್ಲಾಗ್ ಓದಿದ್ದೆ ..ಆದರೆ ಕಾಮೆಂಟ್ ಹಾಕಿರಲಿಲ್ಲ..ನಾನು ನಿಮ್ಮೂರ ಪಕ್ಕದವಳು..'ದೇರಳಕಟ್ಟೆ'ಯಲ್ಲಿ ನಮ್ಮ ಮನೆ..

    ReplyDelete
  27. ರವಿಕಾಂತ್,
    ದಯವಿಟ್ಟು ಕ್ಸಮಿಸಿ, ತುಂಬಾ ತಪ್ಪಾಗಿದೆ ...... ತುಂಬಾ ಗಡಿಬಿಡಿಯಿಂದ ಬರೆದ ಕಥೆಯಿದು..... ಉದ್ದವಾಯಿತೇನೋ ಎನ್ನುತ್ತಲೇ ಬರೆದೆ...... ಮುಂದೆ ಹೀಗಾಗದ ಹಾಗೆ ನೋಡಿಕೊಳ್ತೇನೆ.....

    ReplyDelete
  28. ಶಿವೂ ಸರ್,
    ತುಂಬಾ ಧನ್ಯವಾದ..... ಹೌದು.... ತುಂಬಾ ಒಳ್ಳೆಯದು ಮಾಡಲು ಹೋಗಿ ಅವರೇ ಕೆಟ್ಟದ್ದೇ ಅನುಭವಿಸಿದ ಕಥೆ ಇದು..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಸರ್.....

    ReplyDelete
  29. ಗುರು ದೆಸೆ ಅವರೇ,
    ಮುಂದೆ ಇದೆ ತಪ್ಪಾಗದ ಹಾಗೆ ನೋಡಿಕೊಳ್ತೇನೆ..... ಧನ್ಯವಾದ.....

    ReplyDelete
  30. ಉದಯ್ ಸರ್,
    ತುಂಬಾ ಸತ್ಯದ ಮಾತು...... ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.... ಹೀಗೆ ಬರುತ್ತಾ ಇರಿ......

    ReplyDelete
  31. ಪರಾಂಜಪೆ ಸರ್,
    ಆಗಲೇ ಹೇಳಿದ ಹಾಗೆ .... ನೈಜತೆಗೆ tumbaaaaaa ಹತ್ತಿರದ ಕಥೆ ಇದು.....

    ReplyDelete
  32. ಸುನಾಥ್ ಸರ್,
    ತುಂಬಾ ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ್ಕೆ..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಸರ್.......

    ReplyDelete
  33. ವನಿತಾ ಮೇಡಂ,
    ಆ ಗೆಳೆಯ ಮತ್ತು ಆತನ ಹೆಂಡತಿ ಹೇಗಿದ್ದಾರೆ ಈಗ ಎಂದು ಯಾವಾಗಲಾದರು ಬರೆಯುತ್ತೇನೆ...... ಧನ್ಯವಾದ ನಿಮ್ಮ ಮೆಚ್ಚುಗೆಗೆ... ಹೀಗೆ ಬರುತ್ತಾ ಇರಿ....... ನನ್ನ ಊರು ಭಟ್ಕಳ.... ಈಗ ಕೆಲಸ ಮಾಡ್ತಾ ಇರೋದು ಮಂಗಳೂರಲ್ಲಿ..... ಇವತ್ತಷ್ಟೇ ನಿಮ್ಮ ಊರ ಕಡೆ ಬಂದಿದ್ದೆ...... ನಿಮ್ಮ ಊರ ಬದಿಯ ತೊಕ್ಕೊಟ್ಟು ವಿನಲ್ಲಿ flyover ಮಾಡೋಣ ಎಂದು ಪ್ಲಾನ್ ಇದೆ....... ನಿಮ್ಮ ಹೆಸರು ನನಗೆ ಇಷ್ಟ ಯಾಕಂದ್ರೆ ನನ್ನಾಕೆಯ ಹೆಸರೂ ಅದೇ........ ಹ್ಹಾ ಹ್ಹಾ....

    ReplyDelete
  34. ದಿನಕರ್, ಕಥೆ ಎಷ್ಟು ನೈಜತೆಗೆ ಹತ್ತಿರವೆನಿಸತೊಡಗಿತ್ತೆಂದರೆ...ಇಲ್ಲೇ ಘಟಿಸುತ್ತಿದೆಯೇ ನನ್ನ ಮುಂದೆ ಎಂದು ಭಾಸವಾಗುತ್ತಿತ್ತು....ಇದೇ ಕಾರಣ ನಿಮ್ಮ ಮನಸ್ಸು ಲೀನವಾಗಿತ್ತು ಅನ್ನಿಸುತ್ತೆ ಕಥೆ ಹೆಣೆವಲ್ಲಿ...ಇಲ್ಲಿ ಆದ ಕೆಲವು ಟೈಪಾಸುರನ ತಪ್ಪನ್ನು ನೀವು ಆ ಲೀನತೆಯಲ್ಲಿ ಗಮನಿಸಿರಲಿಕ್ಕಿಲ್ಲ...
    ಇಲ್ಲಿ..ನಿಮಗೆ TAW (thinking ahead of writing) ಆಗಿದೆ...ಹಹಹ...
    ಒಳ್ಳೆಯ ಕಥೆಗಾರರಾಗಬಹುದು...(ಈಗಲೂ ರವಿಕಾಂತರು ಹೇಳಿರೋ ಕಡೆಯೆಲ್ಲಾ ತಿದ್ದಿದ್ದರೆ ಮುಂದೆ ಓದುವವರಿಗೆ ಸ್ಪಷ್ಠವಾಗುತ್ತೆ)...

    ReplyDelete
  35. ಕಥೆ ನಿಜವಾಗಿಯು ಚೆನ್ನಾಗಿ ಮೂಡಿಬಂದಿದೆ.
    ಕುತೂಹಲವನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದೆ.
    ಹೀಗೆ ಬರೆಯುತ್ತಿರಿ.

    ReplyDelete
  36. ಆಜಾದ್ ಸರ್,
    ಹ್ಹಾ ಹ್ಹಾ..... ತುಂಬಾ ತಪ್ಪಾಗಿತ್ತು..... ಆದ್ರೆ , ರವಿಕಾಂತ್ ಹೇಳಿದ ನಂತರ ಸರಿ ಮಾಡಿದ್ದೆ...... ಆದ್ರೆ ಸೇವ್ ಆಗ್ತಾ ಇರಲಿಲ್ಲ...... ಈಗ ಮತ್ತೆ ಸರಿ ಮಾಡಿದ್ದೇನೆ..... ಮುಂದೆ ಇಂಥ ತಪ್ಪುಗಳು ಕಡಿಮೆ ಮಾಡುತ್ತೇನೆ..... ಧನ್ಯವಾದ ನಿಮ್ಮ ಸಲಹೆಗೆ, ಅನಿಸಿಕೆಗೆ.... ಹೀಗೆ ಪ್ರೋತ್ಸಾಹ ನೀಡುತ್ತಿರಿ ಸರ್....

    ReplyDelete
  37. ಶ್ರೀಧರ್ ಸರ್,
    ತುಂಬಾ ಧನ್ಯವಾದ ಸರ್ ನಿಮ್ಮ ಅನಿಸಿಕೆಗೆ... ಮೆಚ್ಚುಗೆಗೆ.... ಹೀಗೆ ಬರುತ್ತಾ ಇರಿ...

    ReplyDelete
  38. ದಿನಕರ್ ಸರ್,
    ನಿಮ್ಮ ಕಥೆ ಓದಿ ಬೇಸರವಾಯಿತು.. ಇಂಥ ಜನರು ಯಾವಾಗಲು ಸಂತೋಷದಿಂದ ಇರಲಾರರು ಅಂತ ನನಗನ್ನಿಸುತ್ತದೆ..
    ತಮ್ಮ ಸಮಸ್ಯೆ ತಾವು ಬಗೆ ಹರಿಸಿಕೊಲ್ಲದೆ ನಿಮ್ಮನ್ನು ದಾಳವಾಗಿ ಉಪಯೋಗಿಸಿದ್ದನ್ನು ಕಂಡು ಅಸಹ್ಯವಾಗುತ್ತದೆ..
    ಇಂಥವರನ್ನು ಕ್ಷಮಿಸಬೇಕು ಅಂದುಕೊಂಡರೂ ಕ್ಷಮಿಸುವುದಕ್ಕೆ ಆಗುವುದಿಲ್ಲ..

    ReplyDelete
  39. Dinakar - Idu nanna modala bheti nimma blog prapanchakke... Baruttiddanteye inthaha ondu kathe siktu.. nija.. naanu inthaha sneha-suLi ge siluki avamanitanagiddene... aadare nanna katheyali, nanna geLeya nannanna bahaLa nambiddarinda climax swalpa different aytu :)

    heege baritha iri sir.. haage samaya sikkaaga nanna blog ge omme bheti needi.. :)

    ReplyDelete
  40. ದಿವ್ಯ...
    ಇದೆ ನಡೀತಾ ಇರೋದಮ್ಮಾ..... ಜನರಿಗೆ ಯಾರಾದರೂ ಒಬ್ಬರು ಬೇಕು ಬಕ್ರಾ..... ನಮಗೆ ಗೊತ್ತಿಲ್ಲದೇ ತಲೆ ಕೊಡುತ್ತೇವೆ .............. ಧನ್ಯವಾದ ನಿಮ್ಮ ಅನಿಸಿಕೆಗೆ....

    ReplyDelete
  41. ರಮೇಶ್ ಸರ್,
    ಸ್ವಾಗತ ನಿಮಗೆ ನನ್ನ ಬ್ಲಾಗ್ ಮನೆಗೆ.......... ನಿಮ್ಮ ಗೆಳೆಯನ ಮನಸ್ತಿತಿ ಸರಿಯಾಗಿತ್ತು ಬಚಾವಾದ್ರಿ..... ಆದರೆ ಕೆಲವೊಮ್ಮೆ, ಸುಳ್ಳೇ ಹೆಂಡತಿಯನ್ನು ಡಿಪೆಂಡ್ ಮಾಡಿಕೊಂಡು ಮಾತಾಡಿದ್ರೂ ವರ್ಕ್ ಔಟ್ ಆಗತ್ತೆ..... ನನ್ನ ಗೆಳೆಯ ಅದನ್ನೇ ಮಾಡಿರಬಹುದು............ ಹೀಗೆ ಬರುತ್ತಿರಿ..... ಧನ್ಯವಾದ....

    ReplyDelete
  42. thumba chennagidhe kathe...koneya nirdhaara thumba sariyaagidhe....thumba ishta aayithu.... aadre idhu katheyaagiye irali...

    ReplyDelete
  43. ಸುಧೇಶ್,
    ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ...............

    ReplyDelete
  44. ದಿನಕರ್ ಅವರೇ
    ಇದು ಕಥೆನೋ ಅಥವಾ ನೀವು ಅನುಭವಿಸಿದ್ದೋ ಗೊತ್ತಿಲ್ಲ . ಆದರೆ ಇಂತ ಜೋಡಿಗಳನ್ನ ನಾನು ಕಣ್ಣಾರೆ ನೋಡಿದ್ದೀನಿ . ಅವರು ಸಂಧಾನ ಮಾಡಿಕೊಳ್ಳಲಿಕ್ಕೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಾರೆ . basically ಅವರಿಗೆ ಇದರಲ್ಲಿ ನಮ್ಮಿರದು ಏನು ತಪ್ಪಿಲ್ಲ ಆದದ್ದು ಮೂರನೆಯವರಿಂದಲೇ ಅನ್ನೋ ಒಂದು ತಪ್ಪು ಕಲ್ಪನೆ ಬೇಕಾಗಿರುತ್ತೆ . ಪರವಾಗಿಲ್ಲ ಬಿಡಿ ಅವರ ಸಂಸಾರ್ ಸರಿ ಹೋಯ್ತಲ್ಲ . ಆದ್ರೆ ಅದು ತುಂಬಾ ದಿನ ಹೋಗುತ್ತೆ ಅನ್ನೋದು ಹೇಳೋಕೆ ಆಗೋಲ್ಲ . ಅವರು ಮಾಡಿಕೊಂಡಿರೋದು ತತ್ಕಾಲ್ ಸಂದಾನ ಅಸ್ಟೆ.
    ನನ್ನ ಕ್ಲೋಸ್ ಫ್ರೆಂಡ್ ಹೀಗೆ ದಾಳ ಆಗಿದ್ದ , ಅವನ ಕೇಸ ನಲ್ಲಿ ಹುದಾಗ ಬಂದು ಇವನ ಮನೇಲಿ ಇದ್ದ . ಕೊನೆಗೆ ಗಂಡ ಹೆಂಡತಿ ಒಂದಾಗಿ ಅವನ ಮೇಲೆ ಗೂಬೆ ಕೂರಿಸಿದರು .
    ಕೆಲ ದಿನ ಚೆನ್ನಾಗಿದ್ದು , ಎವಗ್ ಡೈವೋರ್ಸ್ ಆದರು ಅಂತ ಸುದ್ದಿ .

    ಮನಸಾರೆ

    ReplyDelete
  45. ದಿನಕರ್ ಅವರೆ,
    ನೀವು ಬರೆದ ಹೊಸ ಕತೆ ನಿಮ್ಮ ಬ್ಲೊಗ್ ಪೇಜ್ ನಲ್ಲೂ ಕಾಣಿಸುತ್ತಿಲ್ಲ.

    ReplyDelete
  46. ಮನಸಾರೆ ಮೇಡಂ,
    ಹೌದು, ನೀವು ಹೇಳಿದ್ದು ಸರಿ....... ಈ ಕಥೆಯ ದಂಪತಿಗಳು ಏನಾದರು ಅಂತ ಯಾವಾಗಲಾದರೂ ತಿಳಿಸುತ್ತೇನೆ............ ಧನ್ಯವಾದ ನಿಮ್ಮ ಅನಿಸಿಕೆ , ಅನುಭವ ಹೇಳಿದ್ದಕ್ಕೆ....

    ReplyDelete
  47. ಮನಮುಕ್ತಾ ಮೇಡಂ,
    ನನಗೂ ಕಾರಣ ತಿಳಿದಿಲ್ಲ....

    ReplyDelete