Aug 1, 2015

ನಿನಗಾಗಿ....!!!


ಈ ಕಥೆಯನ್ನ ಬಾಲು ಸರ್ ಬರೆದ ಕಥೆಯ ಮುಂದುವರಿಕೆಯಾಗಿ ಬರೆದಿದ್ದೇನೆ... ಅವರು ಬರೆದ ಕಥೆಯ ಲಿಂಕ್ ಇಲ್ಲಿದೆ...http://nimmolagobba.blogspot.in/2015/07/blog-post_18.html

   ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು... ಎದುರುಗಡೆ ಕುಳಿತ ಆಕೆಯ ಮುಖ ನೋಡಿದೆ... " ನಾನು ಹೇಳುವುದನ್ನು ಗಮನವಿಟ್ಟು ಕೇಳು.. ನಿನ್ನ ಮಗಳು ಸೊಸೆಯಾಗಿ ಬಂದರೂ ಸಹ ನನಗೆ ಮಗಳಾಗಿಯೇ ಇರುತ್ತಾಳೆ.. ನನ್ನ ಮಗನೂ ಸಹ ನಿನಗೆ ಅಳಿಯನಾಗಿ ಅಲ್ಲ ಮಗನಾಗಿಯೇ ಇರಲಿ... ಅವರಿಬ್ಬರ ಸಂಬಂಧ ಅವರಿಗಿಷ್ಟ ಬಂದ ಹಾಗಿರಲಿ... ಅದನ್ನೂ ನಾವೇ ನಿರ್ಧಾರ ಮಾಡುವುದು ಬೇಡ.. ನಾವು ಒಪ್ಪಿಗೆ ಕೊಡೋಣ.. ಅದ್ಯಾವ ಕೆಟ್ಟ ಗಳಿಗೆಯಲ್ಲಿ ದೇವರು ನಿನ್ನನ್ನು ನನ್ನಿಂದ ದೂರ ಮಾಡಿದನೋ, ಅದೇ ದೇವರು ಆದ ತಪ್ಪನ್ನು ತಿದ್ದಿಕೊಂಡು ನಿನ್ನನ್ನು ನನ್ನ ಹತ್ತಿರ ಕಳಿಸಿದ್ದಾನೆ ಎಂದುಕೋ... ಮಕ್ಕಳ ಖುಶಿಯಲ್ಲಿ ನಮ್ಮ ಖುಶಿ ಕಾಣೋಣ... ಈ ನೆವದಿಂದಾದರೂ ನಾವು ಹತ್ತಿರವಾಗೋಣ.." ಎಂದೆ ಸ್ವಲ್ಪ ರಸಿಕತನದಿಂದ... ಅವಳಿಗೂ ಸಹ ಇದೇ ಬೇಕಿತ್ತು ಎನಿಸುವ ಹಾಗೆ " ಹೂಂ.." ಎಂದಳು ತಲೆ ಕೆಳಗೆ ಹಾಕಿ... ಅವಳ ನಾಚಿಕೆ ನನಗೆ ಖುಶಿ ತಂದಿತ್ತು... ರೂಮ್ ಬಾಯ್ ತಂದಿಟ್ಟಿದ್ದ ಈರುಳ್ಳಿ ಬಜೆಯನ್ನು ಅವಳಿಗೆ ಕೊಟ್ಟೆ.. ಅವಳ ಇಷ್ಟದ ತಿಂಡಿ ಅದು... ನನಗೂ ಒಂದು ತುಂಡು ಕೊಟ್ಟಳು... ಟೀ ಕುಡಿದು ಅಲ್ಲಿಂದ ಬೀಳ್ಕೊಟ್ಟೆ...


   ಮನೆಗೆ ಬಂದಾಗ ನನ್ನ ಮೂಡೇ ಬದಲಾಗಿತ್ತು... ನನ್ನ ಹೆಂಡತಿಯ ಊಹೆಗೆ ಸಿಗದ ನನ್ನ ನಡವಳಿಕೆ ಅವಳಿಗೆ ಅಚ್ಚರಿ ಮೂಡಿಸಿತ್ತು... " ಏನು ಮಗನ ಮದುವೆಯ ದಿನ ಹತ್ತಿರ ಬಂದ ಹಾಗೆ ನೀವೂ ಸಿಂಗಾರಗೊಳ್ಳುತ್ತಿರುವ ಹಾಗಿದೆ... " ಎಂದು ಕಿಚಾಯಿಸಿದಳು... ನಾನೂ ಸುಮ್ಮನಿರಬೇಕಲ್ಲ..." ನನ್ನ ಮಗನ ಮದುವೆ ನಡೆದ ಚಪ್ಪರದಲ್ಲೇ ನನ್ನ ಮರುಮದುವೆಯೂ ನಡೆಯುವುದಿದೆ.." ಎಂದೆ ಮಾರ್ಮಿಕವಾಗಿ.... " ಏನೊಪ್ಪ, ನಿಮ್ಮನ್ನ ನೋಡಿದ್ರೆ ಅದಕ್ಕೂ ರೆಡಿ ಇರುವ ಹಾಗಿದೆ " ಎಂದಳು.. ನಾನು ಅನಂತ್ ನಾಗ್ ನಗೆ ನಕ್ಕು ಒಳ ಹೋದೆ... ರೂಮಿನ ಚಿಲಕ ಸಿಕ್ಕಿಸಿ, ನನ್ನ ಹಳೆಯ ಸೂಟ್ ಕೇಸಿನ ಚಾವಿ ಹುಡುಕಿದೆ... ಅದರಲ್ಲಿನ ನನ್ನ ಹಳೆಯ ಡೈರಿ ಓದಬೇಕಿತ್ತು ನನಗೆ... ನನ್ನ ಹೆಂಡತಿಯಿಂದ ಮುಚ್ಚಿಟ್ಟ ಏಕೈಕ ವಸ್ತು ಅದು.. ಅವಳೂ ಸಹ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ... ಸೂಟಕೇಸಿನ ಚಾವಿ ಸಿಕ್ಕಿತ್ತು... ರೂಮಿನ ಬಾಗಿಲು ತಟ್ಟುತ್ತಿದ್ದ ಮಗರಾಯ... ಚಾವಿ ಕಿಸೆಯಲ್ಲಿ ಹಾಕಿಕೊಂಡು ಬಾಗಿಲು ತೆರೆದೆ... ” ಅಪ್ಪ , ಮದುವೆ ದಿನ ಗೊತ್ತುಮಾಡಬೇಕು, ಪುರೋಹಿತರ ಹತ್ತಿರ ಹೋಗೋಣ ಬನ್ನಿ. ತಯಾರಾಗಿ.." ಎಂದವನೇ ಅಮ್ಮನ ಹತ್ತಿರ ಹೊರಟ.. ನನ್ನ ಕಾಲಿಗೆ ರೆಕ್ಕೆ ಬಂದಂತಾಗಿತ್ತು... ಲಗುಬಗೆಯಲಿ ನಾನೂ ರೆಡಿಯಾದೆ... ಹಳೆಯ ಸೂಟ್ ಕೇಸಿನ ಚಾವಿ ನನ್ನ ಕಿಸೆಯಲ್ಲೇ ಉಳಿಯಿತು...


  ಪುರೋಹಿತರ ಬಳಿ ಕೂಡ ತುಂಬಾ ಹತ್ತಿರದ ದಿನಾಂಕ ಗೊತ್ತು ಮಾಡಲು ಹೇಳಿದೆ... ಮಗ, ನನ್ನ ಆತುರ ನೋಡುತ್ತಾ ಬೆರಗಾಗಿದ್ದ... ಹತ್ತೇ ದಿನದಲ್ಲಿ ಆಗುವ ಮದುವೆಯನ್ನು ಆತನೂ ಎಣಿಸಿರಲಿಕ್ಕಿಲ್ಲ.... ಆತನೂ ಖುಶಿಯಾದ, ನಾನು ಖುಶಿಯಾದ ಕಾರಣ ಆತನಿಗೆ ತಿಳಿಯಲಿಲ್ಲ... ಮನೆಗೆ ಬಂದಾಗ ಊಟದ ಹೊತ್ತು.... ಊಟ ಮಾಡಿ ನನಗೆ ಹಳೆಯ ಡೈರಿ ಓದಲಿಕ್ಕಿತ್ತು... "ನನಗೆ ಗಡದ್ದಾಗಿ ನಿದ್ದೆ ಬರ್ತಾ ಇದೆ, ಸ್ವಲ್ಪ ಹೊತ್ತು ನಂಗೆ ಡಿಸ್ಟರ್ಬ್ ಮಾಡಬೇಡ" ಎಂದು ನನ್ನಾಕೆಗೆ ಹೇಳಿ ರೂಮಿನ ಬಾಗಿಲು ಜಡಿದೆ... ಸೂಟ್ ಕೇಸಿನಲ್ಲಿದ್ದ ಹಳೆಯ ಡೈರಿ ತೆರೆಯುವಾಗ ಎದೆ ಡವ ಡವ... ಈ ವಯಸ್ಸಲ್ಲೂ ಈ ರೀತಿ ಆಗತ್ತೆಂತ ಕನಸ್ಸಲ್ಲೂ ಎಣಿಸಿರಲಿಲ್ಲ.... ನಮ್ಮ ಪ್ರೀತಿ ಉತ್ತುಂಗದ ದಿನಗಳಲ್ಲಿನ ದಿನಗಳ ಬಗ್ಗೆ ಓದಬೇಕೆನಿಸಿತು... ಎಲ್ಲರ ಹಾಗೆ ದಿನಾ ಡೈರಿ ಬರೆದಿರಲಿಲ್ಲ ನಾನು... ಉತ್ತಮ ದಿನಗಳ ಮತ್ತು ಕೆಟ್ಟ ದಿನಗಳ ಬಗ್ಗೆ ತಾರೀಖು ನಮೂದಿಸಿ ಬರೆಯುತ್ತಿದ್ದೆ.... ಅದೂ ಸಹ ಯಾರದೇ ಹೆಸರು ನಮೂದಿಸದೇ... ಬೇರೆಯವರು ಯಾರೇ ಓದಿದರೂ ಸಹ ಕಥೆ, ಲೇಖನದ ರೀತಿ ಇರುತ್ತಿತ್ತು... ಹಾಳೆ ತಿರುವುತ್ತಿದ್ದವನಿಗೆ ಫೆಬ್ರುವರಿ ಹದಿನಾಲ್ಕರ ದಿನ ಬರವಣಿಗೆ ಓದಬೇಕೆನಿಸಿತು... ಪುಟ ತಿರುವಿ ಓದಿದೆ....


    " ಅವಳಿಗಾಗಿ ಕೊಂಡು ಬಂದಿದ್ದ ಚಿನ್ನದ ಬಳೆಯನ್ನು ನೋಡಿ ಅವಳ ಸಂತೋಷವನ್ನು ಊಹಿಸಿಯೇ ಮನ ಮಿಡಿಯುತ್ತಿದೆ... ಬಳೆಯ ನಡುವಿನಲ್ಲಿದ್ದ ಲವ್ ಮಾರ್ಕ್ ನೋಡಿಯೇ ಅದನ್ನು ಖರೀದಿಸಿದ್ದೆ... ಸರಿಯಾದ ಸಮಯಕ್ಕೆ ಬಂದ ಆಕೆ ನನ್ನ ಪಕ್ಕವೇ ಕುಳಿತಳು . ಪರಸ್ಪರ ಪ್ರೀತಿಸುವ  ಬಗ್ಗೆ ಹೇಳಿಕೊಂಡು ತುಂಬಾ ಸಮಯವಾಗಿದ್ದರೂ ನಮ್ಮ ಪ್ರತೀ ಭೇಟಿಯೂ ಮೊದಲ ಭೇಟಿಯ ಹಾಗೆ ಇರುತ್ತಿದೆ... ಪಾರ್ಕ್ ನಲ್ಲಿ ತುಂಬಾ ಜನ ಇದ್ದರೂ ಸಹ ನನಗೆ ಕಾಣುತ್ತಿದ್ದುದು ಇವಳೇ ಆಗಿದ್ದಳು... ನನ್ನವಳ ಗಲ್ಲ  ಗುಲಾಬಿಯಾಗಿದ್ದು ಅವಳು ಧರಿಸಿದ್ದ ಗುಲಾಬಿ ಬಣ್ಣದ ಚುಡಿದಾರದಿಂದಲಾ ಅಥವಾ ನನ್ನನ್ನು ನೋಡಿಯಾ ತಿಳಿಯಲಿಲ್ಲ... ತಡ ಮಾಡದೇ " ಹ್ಯಾಪಿ ವೆಲಂಟೈನ್ಸ್ ಡೇ ಡಿಯರ್.. ಐ ಲವ್ ಯು..." ಎಂದವನೇ ಕೈಯಲ್ಲಿದ್ದ ಚಿನ್ನದ ಬಳೆ ಕೊಟ್ಟೆ... ಅವಳ ಕಣ್ಣಲ್ಲಿ ಬಣ್ಣದ ಚಿಟ್ಟೆಗಳು.. ಅವಳೂ ಸಹ ದುಡಿಯುತ್ತಿದ್ದರೂ ಕೈತುಂಬಾ ಸಂಬಳ ಎಣಿಸುತ್ತಿದ್ದರೂ ನಾನು ಕೊಟ್ಟ ಉಡುಗೊರೆ ಅವಳಿಗೆ ಖುಷಿ ನೀಡಿದ್ದು ಅವಳ ಕಣ್ಣಲ್ಲೇ ತಿಳಿಯುತ್ತಿತ್ತು... " ಐ ಲವ್ ಯು ಟೂ.." ಎಂದವಳೇ ಸುತ್ತಮುತ್ತಲಿದ್ದವನ್ನೂ ಕಡೆಗಣಿಸಿ ತಬ್ಬಿಕೊಂಡಳು... ಈ ಮುಂಚೆ ತಬ್ಬಿಕೊಂಡಿದ್ದರೂ ಇವತ್ತಿನ ಖುಶಿಯ ಪರಿ ಬೇರೆಯದಿತ್ತು... ”

   ಓದುತ್ತಾ ಹೋದಂತೆಲ್ಲಾ  ಇಂಥಹದೇ ಬಿಡಿ ಬಿಡಿ ಬರಹಗಳು.. ಒಂದೊಂದು ಸಹ ಮೈ ಪುಳಕಿತಗೊಳ್ಳುವ ಘಟನೆಗಳೇ ಆಗಿದ್ದವು... ಅಷ್ಟರಲ್ಲಿ ಮೊಬೈಲ್ ರಿಂಗಾಯಿತು... " ಅಬ್ಭಾ ನಿನ್ನದೇ ನೆನಪಿನಲ್ಲಿದ್ದೆ, ನಿನ್ನದೇ ಫೋನ್... ಹೇಗಿದ್ದೀಯಾ... ತಯಾರಿ ಜೋರಾಗಿ ನಡೆಯುತ್ತಿದೆಯಾ...? ಬೇಗನೇ ಬಂದು ಬಿಡು ನನ್ನ ಮನೆಗೆ... ಮನೆ ತುಂಬಿಸಿಕೊಳ್ಳುತ್ತೇನೆ.." ಆ ಕಡೆಯಿಂದ ಮುಸಿ ಮುಸಿ ನಗು..." ಮನೆ ತುಂಬಿಸಿಕೊಳ್ಳುವುದು ನನ್ನನ್ನಲ್ಲ, ನನ್ನ ಮಗಳನ್ನ" ಎಂದಳು ಮುಗುಮ್ಮಾಗಿ... ದನಿಯಲ್ಲಿನ ಸಿಹಿ ಇನ್ನೂ ಕಡಿಮೆಯಾಗಿರಲಿಲ್ಲ... " ಈಗ ನಿಮ್ಮ ಮನೆಗೆ ಬರುತ್ತಾ ಇದ್ದೇವೆ ನನ್ನ ಯಜಮಾನರೂ ಬರುತ್ತಾರೆ.. ಕೆಲವೊಂದು ವಸ್ತುಗಳ ಖರಿದಿ ಬಗ್ಗೆ ಮಾತನಾಡಬೇಕು ಅದಕ್ಕೆ " ಎಂದಳು... " ನಾನೇನೋ ನನ್ನನ್ನ ನೋಡಲಿಕ್ಕೆ ಬರ್ತಾ ಇದೀಯಾ ಅಂದುಕೊಂಡೆ" ಅಂದೆ ರಸಿಕತೆಯಿಂದ... " ಯಾವುದೋ ಒಂದು ನೆವ ಅಷ್ಟೇ.." ಅಂದು ಫೋನ್ ಕಟ್ ಮಾಡಿದಳು.. ನನ್ನನ್ನು ನೋಡೋದು ನೆವವೋ, ಇಲ್ಲಿಗೆ ಬರೋದು ನೆವವೋ ಹೇಳಲಿಲ್ಲ.. ಅವಳು ಯಾವಾಗಲೂ ಹಾಗೇನೇ... ಅವಳು ಬರುವ ಮೊದಲೇ ನಾನು ರೆಡಿಯಾಗಿ ಬಾಗಿಲಲ್ಲೇ ಕಾದೆ... ಮನೆಯಾಕೆಗೂ ವಿಷ್ಯ ತಿಳಿಸಿದ್ದರಿಂದ ಸಂಜೆಯ ಚಾ ತಿಂಡಿ ರೆಡಿ ಮಾಡುತ್ತಿದ್ದಳು...


   ಮನೆ ಮುಂದೆ ನಿಂತ ಕಾರಿಂದ ಆಕೆ ನಡೆದು ಬರುತ್ತಿದ್ದರೆ ಈ ವಯಸ್ಸಲ್ಲೂ ಓಡಿ ಹೋಗಿ ತಬ್ಬಿ ಬಿಡಲೆ ಎನಿಸುತ್ತಿತ್ತು.. ಅವಳೇ ಮುಂದೆ ಬಂದು ’ ನಮಸ್ತೆ’ ಎಂದಳು... ಪ್ರತಿಯಾಗಿ ನಾನು ’ನಮಸ್ತೆ’ ಎಂದೆ.. ಅವಳ ಗಂಡನ ಕೈ ಕುಲುಕಿ ಒಳ ಕರೆದುಕೊಂಡು ಬಂದೆ... ಅವರ ಕೈ ತಣ್ನಗಿತ್ತು... ಸ್ವಲ್ಪ ಡಲ್ ಇದ್ದರು... ’ ಇವರಿಗೇನಾದರೂ ಗೊತ್ತಿದೆಯಾ ನಮ್ಮ ವಿಷ್ಯ’ ಎನಿಸಿತು...  ವಿಷ್ಯ ಗೊತ್ತಾದರೂ ಏನಾಗತ್ತೆ,? ನಮ್ಮದೇನೂ ಓಡಿ ಹೋಗುವ ವಯಸ್ಸಲ್ಲಾ ಇದು.." ಎಂದಿತು ಹುಂಬ ಮನಸ್ಸು... ಮಗನಿಗೆ ಚಿನ್ನದ ಸರ ಮತ್ತು ಬ್ರಾಸ್ ಲೆಟ್ ಮಾಡಿಸುವ ಮಾತಾದಾಗ " ನನಗಾಗಿ ಏನೂ ಇಲ್ಲವಾ,? ಎಲ್ಲಾ ಅಳಿಯ ದೇವರಿಗೆ ಮಾತ್ರವಾ..? " ಎಂದೆ ಹುಡುಗಾಟದ ದನಿಯಲ್ಲಿ... "ನನ್ನ ಮಗಳನ್ನು ನಿಮ್ಮ ಮಗಳಾಗಿ ಕೊಡ್ತಾ ಇದೀನಿ.." ಎಂದಳು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆಕೆ... " ಏನೂ ಹೆದರಬೇಡಿ, ನಿಮ್ಮ ಮಗಳಲ್ಲ ಅವಳು , ನಮ್ಮ ಮಗಳೇ... ನನಗೂ ಹೆಣ್ಣು ಮಕ್ಕಳಿಲ್ಲ, ನಿಮಗೂ ಗಂಡು ಮಗುವಿಲ್ಲ... ಇಬ್ಬರ ಕೊರತೆಯೂ ನೀಗಿದ ಹಾಗಾಯಿತು ಒಂದೇ ಸಂಬಂಧದಲ್ಲಿ " ಎಂದಳು ನನ್ನ ಪತ್ನಿ... ನಾನು ಆಕೆಯ ಮುಖ ನೋಡಿದೆ... ತುಂಟತನದಲಿ ಕಣ್ಣು ಹೊಡೆದೆ.. ಆಕೆಯ ಕೆನ್ನೆ ಕೆಂಪಗಾಯ್ತು ಈ ವಯಸ್ಸಲ್ಲೂ.... ಅವರನ್ನು ಬೀಳ್ಕೊಟ್ಟು ಸ್ವಲ್ಪ ಹೊತ್ತಲ್ಲೇ ಮಗ ಬಂದ.. ಆತನೂ ಸಹ ಮದುವೆಯ ಖರೀದಿ ಮುಗಿಸಿ ಬಂದಿದ್ದ..   ಮದುವೆಯಂತೂ ನನ್ನಲ್ಲಿ ಹೊಸ ಹುಮ್ಮಸ್ಸು ತಂದಿತ್ತು... ಮದುವೆಯ ದಿನ ನಾನು ಆಕೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆ... ಅವಳೂ ಸಹ ತುಂಬಾ ಖುಶಿಯಿಂದಿದ್ದಳು... ಮದುವೆಯ ಫೋಟೊ ತೆಗೆದುಕೊಳ್ಳುವಾಗ ಸಹ ಅವಳ ಸಾಮಿಪ್ಯ ಸಿಗುವ ಹಾಗೆ ನೋಡಿಕೊಂಡೆ... ನನ್ನಲ್ಲಿ ಇಪ್ಪತ್ತರ ಯುವಕನ ತಾರುಣ್ಯ ತುಂಬಿತ್ತು... ಮದುವೆ ಮುಗಿದು ಮಗಳನ್ನು ಬೀಳ್ಕೊಡುವಾಗ ಅವಳು ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ರೀತಿ ನೋಡಿ ನನ್ನ ಕಣ್ಣಲ್ಲೂ ನೀರು ಜಿನುಗಿತ್ತು... ಅವಳ ಕೈಹಿಡಿದು ಸಮಧಾನ ಮಾಡಿದ್ದೆ... " ನಿನ್ನ ಮಗಳನ್ನು ನಿನಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತೇನೆ.. ನಿನ್ನ ನೆನಪೇ ಬಾರದ ಹಾಗೆ ನಡೆಸಿಕೊಳ್ಳುತ್ತೇನೆ" ಎಂದಾಗ ಆಕೆ ಹಗುರಾಗಿದ್ದಳು... ನನ್ನ ಹೆಂಡತಿ ’ಹೌದು’ ಎಂದು ದನಿಗೂಡಿಸಿದ್ದರೂ ಅವಳಿಗೆ ಮುಂದೆ ಬರುವ ಬಿರುಗಾಳಿಯ ಸುಳಿವು ಇರಲಿಲ್ಲ...


    ಮದುವೆ ಮುಗಿದು ಮಗ ಸೊಸೆ ಮಧುಚಂದ್ರಕ್ಕೆ ಹೊರಟಿದ್ದೂ ಆಯ್ತು... ಹದಿನೈದು ದಿನದ ಅವರ ಪ್ರವಾಸವನ್ನು  ವಾರಕ್ಕೇ ಮೊಟಕುಗೊಳಿಸಿ ಬಂದಿದ್ದರು... ಸೊಸೆಯ ಅಪ್ಪನ ಆರೋಗ್ಯ ತುಂಬಾ ಬಿಗಡಾಯಿಸಿ ಆತನನ್ನ ಆಸ್ಪತ್ರೆಗೆ ಸೇರಿಸಿದ್ದರು.. ನನ್ನ ಮಗ ಹೇಳುವವರೆಗೂ ನನಗೆ ತಿಳಿದಿರಲಿಲ್ಲ... ಅವರಿಗೆ ಬ್ಲಡ್ ಕ್ಯಾನ್ಸರ್ ಇತ್ತೆಂದು.... ಮಗಳನ್ನು ನೋಡಿದ ಆತ ಘಂಟೆಯಲ್ಲೇ ತೀರಿಕೊಂಡಿದ್ದರು... ಅವರ ಅಂತ್ಯ ಸಂಸ್ಕಾರಕ್ಕೆ ನಾನು ಹೋಗಿದ್ದೆನಾದರೂ ಆಕೆಯನ್ನು ನೋಡುವ ಧೈರ್ಯವಾಗಲಿಲ್ಲ... ನಮ್ಮದೇನೂ ಅಕ್ರಮ ಸಂಬಂಧವಲ್ಲವಾದರೂ , ಆಕೆಯ ಗಂಡನ ಅಗಲಿಕೆಯ ಬೆಲೆ ತೆತ್ತು, ಆಕೆಯ ಸನಿಹ ಕೋರಿರಲಿಲ್ಲ... ಯಾಕೋ, ಆಕೆಯನ್ನು ಖಾಲೀ ಹಣೆಯಲ್ಲಿ ನೋಡುವ ಧೈರ್ಯ, ಮನಸ್ಸು ಎರಡೂ ಇರಲಿಲ್ಲ... ಮಗ-ಸೊಸೆ ಒಂದು ವಾರ ಅಲ್ಲೇ ಉಳಿದು ಬಂದಿದ್ದರು.. ಕೆಲಸಕ್ಕೆ ಹಾಕಿದ್ದ ರಜೆ ಮುಗಿದ ಕಾರಣ ಅವರು ಇಲ್ಲಿಗೆ ಬಂದಿದ್ದರು... ಆಕೆಯ ಮನೆಯಲ್ಲಿ ಕೆಲಸದಾಕೆ ಬಿಟ್ಟರೆ ಬೇರೆ ಯಾರೂ ಇರಲಿಲ್ಲ... ಆಕೆಯ ನೋವು ನಾನು ಹಂಚಿಕೊಳ್ಳುವ ಆಸೆ ಇದ್ದರೂ ಪರಿಸ್ಥಿತಿ ಹಾಗಿರಲಿಲ್ಲ... ನನ್ನ ಮನೆಗೂ ಅವಳ ಮನೆಗೂ ಒಂದು ರಾತ್ರಿ ಪ್ರಯಾಣದ ದೂರ... ಒಮ್ಮೆ ಫೋನ್ ಮಾಡಿ ನಮ್ಮ ಮನೆಗೆ ಬಂದು ಇರಲು ಹೇಳಿದೆ...

    
    " ನನಗೆ ಒಬ್ಬಳೇ ಇರಬೇಕು ಅನಿಸುತ್ತಿದೆ.. ನಿನ್ನನ್ನ ಕಳೆದುಕೊಂಡ ನಂತರವೂ ನಾನು ಒಬ್ಬಳೇ ಇರಲು ನಿರ್ಧಾರ ಮಾಡಿದ್ದೆ.. ಅಮ್ಮನ ಒತ್ತಾಯಕ್ಕೆ ಮದುವೆ ಆಗಿದ್ದೆ... ನನ್ನ ಗಂಡನಿಗೂ ಸಹ ನನ್ನ ಪ್ರೇಮದ ಬಗ್ಗೆ ಗೊತ್ತಿತ್ತು... ಅದಕ್ಕೆ ಅವರೂ ಸಹ ನನ್ನ ಏಕಾಂತಕ್ಕೆ ಭಂಗ ತರುತ್ತಿರಲಿಲ್ಲ... ಮದುವೆಯಾಗಿ ಐದು ವರ್ಷದ ವರೆಗೂ ನಾನು ಅವರ ಸಾಮಿಪ್ಯ ಬೇಡಿರಲಿಲ್ಲ... ಯಾವಾಗ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಗೊತ್ತಾಯಿತೋ ಮತ್ತು ಅವರ ಆಯುಷ್ಯದ ಅವಧಿ ಗೊತ್ತಾಯಿತೋ ನಾನು ಅಧೀರಳಾದೆ... ಗಂಡನ ನಂತರ ನನ್ನ ಜೊತೆಗೆ ಯಾರು ಎನ್ನುವ ಪ್ರಶ್ನೆ ನನ್ನನ್ನ ಕಾಡುತ್ತಿತ್ತು... ಅದೊಂದೇ ಕಾರಣಕ್ಕೆ ಅವರ ಸಾಮಿಪ್ಯ ಬಯಸಿ ಅವರಿಂದ ಒಂದು ಮಗು ಪಡೆದೆ... ಎಲ್ಲಾ ಕಾಲದಲ್ಲೂ ನಿನ್ನ ನೆನಪಿಸುತ್ತಲೇ ಇದ್ದೆ... ನೀನು ಮಾತ್ರ ಆರಾಮಾಗಿ ಇದ್ದೆ... ಡೆಲಿವರಿಯ ಸಮಯದಲ್ಲಿ   ಮಾತ್ರ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ ಕಣೋ.. ನೀನೇ ಬೇಕಾಗಿತ್ತು ನನಗೆ ಆ ಟೈಮ್ ನಲ್ಲಿ... ಆದ್ರೆ ನೀನೆಲ್ಲಿದ್ದೆಯೋ ನನಗೆ ತಿಳಿದಿರಲಿಲ್ಲ... ಕ್ರಮೇಣ ನಿನ್ನ ಬಿಟ್ಟು ಇರೋದು, ದೈಹಿಕವಾಗಿ ನನ್ನ ಗಂಡನಿಂದ ದೂರ ಇರೋದು ಎಲ್ಲಾ ರೂಡಿಯಾಯಿತು... ನನ್ನ ಗಂಡ ಅಗಲಿದಾಗಲೂ ನನಗೆ ಅಂಥಹ ನೋವಾಗುತ್ತಿಲ್ಲ ..ಯಾಕೆ ಗೊತ್ತಾ..? ನನ್ನ ಜೀವವಾಗಿರುವ ನನ್ನ ಮಗಳು ನಿನ್ನ ಮಡಿಲಿಗೆ ಹಾಕಿದ್ದೇನೆ ಅದಕ್ಕೆ... ಇನ್ನು ಮುಂದೆ ನೀನೇ ಅವಳನ್ನು ನೋಡಿಕೊಳ್ಳಬೇಕು..." ನನ್ನ ಕಣ್ಣಲ್ಲಿ ನೀರು ಬರ್ತಾ ಇತ್ತು... ಅವಳೂ ಸಹ ಅಳುತ್ತಿದ್ದಳು...ಅಷ್ಟರಲ್ಲಿ ’ ಕಳಕ್ " ಎನ್ನುವ ಶಬ್ಧ... ನಾನು ನನ್ನ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದೆ... ಹಾಲ್ ನಲ್ಲಿರುವ ಇನ್ನೊಂದು ಫೋನ್ ನಿಂದ ಯಾರೋ ಕೇಳಿಸಿಕೊಳ್ಳುತ್ತಿದ್ದರು ಎನಿಸತ್ತೆ... ಎದೆ ಬಡಿತ ಜೋರಾಯಿತು....


    ಸ್ವಲ್ಪ ಹೊತ್ತಲ್ಲೇ ಬಾಗಿಲು ಬಡಿದ ಶಬ್ಧ... " ಕಮ್ ಇನ್" ಎಂದೆ.. ಸೊಸೆ ಇದ್ದಳು.. " ಮಾವಾ, ನಾನು ಈಗ ಕೇಳಿಸಿಕೊಂಡಿದ್ದೆಲ್ಲಾ ಸತ್ಯವಾ...?  ಅಮ್ಮನಿಗೆ ಫೋನ್ ಮಾಡೋಣ ಅಂತ ಫೋನ್ ತೆಗೆದುಕೊಂಡವಳಿಗೆ ಅಮ್ಮನದೇ ಧ್ವನಿ ಕೆಳಿಸಿಕೊಂಡಾಗ ಜೊತೆಗೆ ನಿಮ್ಮ ದನಿ ಕೇಳಿದೆ... ಇದೆಲ್ಲಾ ನಿಜವಾ ಮಾವಾ..? ನಿಮ್ಮ ಸಲುವಾಗಿ ಅಮ್ಮ ಜೀವನವಿಡೀ ಕಾದಳಾ..? ಎಂದೂ ಅಮ್ಮನನ್ನು ಕಾರಣ ಕೇಳದ ನಾನು ಇವತ್ತಿಗೂ ಕೇಳಲ್ಲ... ಆದ್ರೆ..??? " ಸೊಸೆಯ ಮಾತಿನ್ನೂ ಮುಗಿದಿರಲಿಲ್ಲ... " ಹೌದಮ್ಮಾ, ನೀನು ಕೇಳಿಸಿಕೊಂಡಿದ್ದು ನಿಜ.. ನಾನು ನಿಮ್ಮಮ್ಮ ಪ್ರೀತಿಸಿದ್ದೂ ನಿಜ.. ಕಾರಣಾಂತರದಲ್ಲಿ ಬೇರೆ ಆದದ್ದೂ ನಿಜ... ಪರಸ್ಪರ ಎಲ್ಲಿದ್ದೇವೆ ಅಂತ ಗೊತ್ತಿಲ್ಲದೇ ಬದುಕಿದೆವು... ಬಾಳಿದೆವು ಬೇರೆ ಬೇರೆ.. ಈಗ ನಿನ್ನ ಮೂಲಕ ಭೇಟಿಯಾಗಿದ್ದೇವೆ... ಇದೆಲ್ಲ ಮುಗಿದು ಹೋದ ಕಥೆ... ಈಗ ಇದನ್ನು ಬೆಳೆಸುವ ಇರಾದೆ ನಿಮ್ಮಮ್ಮನಿಗೂ ಇಲ್ಲ... ನನಗೂ ಇಲ್ಲ.. ಆದರೆ ನಾನು ಅವಳ ಖುಶಿ ಆಶಿಸುತ್ತೇನೆ.. ಮತ್ತೆ ಅವಳೂ ಕೂಡ ನನ್ನ ಖುಶಿ ಹಾರೈಸುತ್ತಾಳೆ... ” ಇನ್ನೂ ಮಾತನಾಡುತ್ತಲೇ ಇದ್ದೇ..... ಅಷ್ಟರಲ್ಲೇ ಬಾಗಿಲು ಹಾಕಿ ಹೊರಟು ಹೋದಳು... ’ ಅಯ್ಯೋ ದೇವರೇ, ನಾನು ಯಾವತ್ತೂ ಮೊಬೈಲ್ ನಲ್ಲಿ ಮಾತನಾಡುವವನು , ಇವತ್ಯಾಕೆ ಲ್ಯಾಂಡ್ ಲೈನ್ ನಿಂದ ಫೋನ್ ಮಾಡಿದೆ " ಎಂದು ಹಳಹಳಿಸಿದೆ..  ’ದೇವ್ರೇ, ಈ ವಿಷ್ಯ ನನ ಹೆಂಡತಿ ಮತ್ತು ಮಗನಿಗೆ ಹೇಳದೇ ಇರಲಿ... ಅವರಿಬ್ಬರ ದ್ರಷ್ಟಿಯಲ್ಲಿ ನಾನು ಕುಬ್ಜನಾಗುವುದು ಇಶ್ಟವಿರಲಿಲ್ಲ... ಇದೆಲ್ಲದರಿಂದ ಸ್ವಲ್ಪ ಶಾಂತಿ ಸಿಗಲಿ ಎಂದು ನಾನು ರೆಡಿಯಾಗಿ ದೇವಸ್ಥಾನದ ಕಡೆ ಹೊರಟೆ..

   
     ವಾಪಸ್ ಮನೆಗೆ ಬರುವುದು ಕತ್ತಲಾಗಿತ್ತು... ಹೆಂಡತಿ ಬಾಗಿಲಲ್ಲೇ ಕುಳಿತಿದ್ದಳು... ಏನೂ ತಿಳಿಯದ , ತಿಳಿಯಲು ಆಶೆಯೂ ಪಡದ ಮುಗ್ಧ ಜೀವಿಗೆ ನಾನು ಮೋಸ ಮಾಡ್ತಾ ಇದೀನಾ ಎನ್ನುವ ಭಾವ ಕೂಡ ಕಾಡಿತು... ಮುಖ ತೊಳೆದು ಡೈನಿಂಗ್ ಟೇಬಲ್ ಮೇಲೆ ಕುಳಿತಾಗ ಮಗ ಸೊಸೆ ಕೂಡ ಬಂದರು... ” ಊಟಕ್ಕೆ ನಾನೇ ಬಡಿಸುತ್ತೇನೆ " ಎಂದು ಸೊಸೆ ಹೇಳಿದಾಗ ನಾನು ಸ್ವಲ್ಪ ಗೆಲುವಾದೆ... ಸೊಸೆಗೆ ಕಣ್ಣಲ್ಲೇ ಧನ್ಯವಾದ ಹೇಳಿದೆ... ಮಗ, ಸೊಸೆ, ಹೆಂಡತಿ ಜೊತೆ ಕುಳಿತು ಊಟ ಮಾಡಿ ಸಂತ್ರಪ್ತಿಯಿಂದ ಮಲಗಲು ಹೋದೆ... ಹೆಂಡತಿ ಸಹ ಹಿಂದೆ ಹಿಂದೆ ಬಂದಳು... " ರೀ, ನನಗೆ ಈವತ್ತು ತುಂಬಾ ಸಂತೋಷ ಆಗ್ತಾ ಇದೆ... ಮಗ, ಸೊಸೆ ಎಲ್ಲರ ಜೊತೆ ಖುಶಿ ಖುಷಿಯಾಗಿರುವ ಎಷ್ಟು ಕುಟುಂಬ ಇದೆ ಜಗತ್ತಲ್ಲಿ..? ನಮಗೆ ಸಿಕ್ಕಿದೆಯಲ್ವಾ.. ಅದೇ ಖುಷಿ... ನಿಲ್ಲಿ ತಾಂಬೂಲ ತರ್ತೇನೆ" ಅಂತ ಗ್ರೌಂಡ್ ಫ್ಲೋರನಲ್ಲಿದ್ದ ಅಡಿಗೆ ಮನೆಗೆ ಹೋಗುತ್ತಿದ್ದವಳನ್ನು ನಿಲ್ಲಿಸಿ " ಇವತ್ತು ನಾನು ತರ್ತೇನೆ... ನೀನು ರೂಮಿಗೆ ಹೋಗು.. " ಎಂದು ಹೇಳಿ ತಾಂಬೂಲ ತರಲು ಹೋದೆ... ಒಳ್ಳೆಯದೊಂದು ಊಟ ಮಾಡಿದ ದಿನ ಪಾನ್ ಹಾಕುವ ಅಭ್ಯಾಸ ನನಗೂ ಇದೆ, ನನ್ನ ಹೆಂಡತಿಗೂ ಇದೆ.. ಫ್ರಿಡ್ಜ್ ತೆರೆದರೆ ಅಲ್ಲೇ ಇತ್ತು ಕಟ್ಟಿ ಇಟ್ಟ ಪಾನ್... 


  "ತಗೋ ಪಾನ್, ಹೆಚ್ಚಿಗೇನೂ ಮಾತಾಡದೆ ಸುಮ್ಮನೇ ತಿನ್ನು... ನಾಳೆ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಬೇಕು.. ಬೇಗ ರೆಡಿಯಾಗು " ಎಂದು ಹೇಳಿ ನಾನು ಮಲಗಿದೆ... ಮಲಗುವ ಮೊದಲು ಆಕೆಯನ್ನೊಮ್ಮೆ ನೆನಸಿದೆ... ಪಾಪ, ಏನು ಮಾಡ್ತಾ ಇದ್ದಾಳೋ ಏನೋ... ಇಲ್ಲೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು... ಎನಿಸಿ ಪಿಚ್ಚೆನಿಸಿತು.... ಹೆಂಡತಿಯೂ ಸಹ ಪಾನ್ ತಿಂದು ಸ್ವಲ್ಪ ಹೊತ್ತಲ್ಲೇ ಮಲಗಿದಳು.... ನಾನು ನಿಸಾರ್ ಅಹಮ್ಮದರ ಎರಡು ಕವನ ಓದಿ ಮಲಗಿದೆ....


   ಎಂದಿನಂತೆ ಬೆಳಿಗ್ಗೆ ಆರಕ್ಕೆ ಎದ್ದು ಪಾರ್ಕ್ ಹೋಗಿ ಎರಡು ಸುತ್ತು ನಡೆದೆ... ಸೂರ್ಯ ನಮಸ್ಕಾರ, ಒಂದೆರಡು ಯೋಗ ಮುಗಿಸಿ ಮನೆಗೆ ಬರುವಾಗ ಎಂಟು ಗಂಟೆ... ಮನೆಯ ಮುಂದೆ ಅಂಬುಲನ್ಸ್... ಗಾಬರಿ ಆಯ್ತು... ಮಗ ಓಡುತ್ತಾ ಬಂದ... " ಅಪ್ಪಾ , ನಿಮ್ಮ ಮೊಬೈಲ್ ಯಾಕೆ ತೆಗೆದುಕೊಂಡೂ ಹೋಗಿಲ್ಲ..? ಅಮ್ಮ ಮಾತನಾಡುತ್ತಿಲ್ಲ... ಬೆಳಿಗ್ಗೆಯಿಂದ ಏಳದ ಅಮ್ಮನ ಸಲುವಾಗಿ ನಾನೇ ರೂಮಿಗೆ ಹೋಗಿ ಏಳಿಸಲು ಹೋದೆ... ಅಮ್ಮ ಮಾತನಾಡಲಿಲ್ಲ.. ಮೂಗಲ್ಲಿ ಸ್ವಲ್ಪ ರಕ್ತ ಬಂದಿತ್ತಪ್ಪಾ.. ಡಾಕ್ಟರ್ ಬಂದಿದ್ದಾರೆ... ನೋಡ್ತಾ ಇದ್ದಾರೆ... " ಎನ್ನುತ್ತಾ ಇರುವಾಗಲೇ ಡಾಕ್ಟರ್ ಹೊರಗೆ ಬಂದರು.. " ಐ ಆಮ್ ಸಾರಿ ಸೂರ್ಯ... ಅಮ್ಮನಿಗೆ ಸೀವಿಯರ್ ಹಾರ್ಟ್ ಆಟ್ಯಾಕ್ ಆಗಿದೆ... ಬಹುಷಃ ಪ್ರಾಣ ಹೋಗಿ ನಾಲ್ಕೈದು ಘಂಟೆಗಳಾಗಿದೆ... " ಎಂದರು.. ನನ್ನೆದೆ ಝಲ್ ಎಂದಿತು... ನನ್ನ ಕಿವಿ ನಾನೆ ನಂಬದಾದೆ... ಕುಸಿದು ಅಲ್ಲೇ ಕುಳಿತೆ....  ಮಗ ಅಂಬುಲನ್ಸ್ನಲ್ಲಿ ಹೋದ...


   ಪೋಸ್ಟ್ ಮಾರ್ಟಮ್ ಮಾಡಿದ ಡಾಕ್ಟರ್ ದೇಹವನ್ನು ನಮಗೆ ಒಪ್ಪಿಸಿದ್ದು ಸುಮಾರು ಮಧ್ಯಾನ್ಹದ ಹೊತ್ತಿಗೆ... ಅಂತಿಮ ಕಾರ್ಯ ಮುಗಿಸಿ ಮನೆಗೆ ಬಂದವನಿಗೆ ಮಗ ಕೇಳಿದ್ದು.. " ಅಪ್ಪಾ, ಅಮ್ಮ ಕೊನೆಯ ಬಾರಿ ಏನು ತಿಂದಿದ್ದರು...? ನೀವು ಮತ್ತೆ ಅಮ್ಮ ಜಗಳವಾಡಿದ್ರಾ..?"ನಾನು ಅವಾಕ್ಕಾದೆ.. ಸೊಸೆ ಅವನ ಹಿಂದೆಯೇ ನಿಂತಿದ್ದಳು... ಅವಳ ಕಣ್ನಲ್ಲೂ ಪ್ರಶ್ನೆಗಳಿದ್ದವು... ನಾನು ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ...


    ಯಾರೇ ಸಾಯಲಿ, ಯಾರೇ ಬದುಕಲಿ ಜೀವನ ಸಾಗಲೇ ಬೇಕು... ಉಸಿರು ಬಿಡಲೇ ಬೇಕು... ಹೊಟ್ಟೆ ತುಂಬಲೇ ಬೇಕು... ಹೆಂಡತಿ ತೀರಿ ಹೋದ ಮೇಲೆ ನನ್ನನ್ನು ನಿಜಕ್ಕೂ ಸಮಾಧಾನ ಪಡಿಸಿದವಳು ಆಕೆಯೇ ಆಗಿದ್ದಳು... ಅಮ್ಮನ ಕೆಲಸಕ್ಕೆ ಸೊಸೆಯ ತಕರಾರೂ ಇರಲಿಲ್ಲ... ಆಕೆಗೆ ಅವಳ ಮನೆಯಲ್ಲಿ ಒಬ್ಬಳೇ ಇರಬೇಕಾಗಿತ್ತು... ಕೆಲಸವಳೂ ಸಹ ಅನಾರೋಗ್ಯದ ಕಾರಣ ಹೇಳಿ ಊರಿಗೆ ಹೋಗಿದ್ದಳು... ಹೊತ್ತು ಹೋಗದ ಕಾರಣ ಆಕೆ ನನ್ನ ನೋಡುವ ಸಲುವಾಗಿ ಇಲ್ಲಿಗೆ ಬರುತ್ತಾ ಇದ್ದಳು...  ಈಗೀಗ ಅವಳ ಆರೋಗ್ಯ ಕೈ ಕೊಡುತ್ತಿತ್ತು... ಸ್ವಲ್ಪ ದಿನ ಇಲ್ಲಿದ್ದು ನಂತರ ತನ್ನ ಮನೆಗೆ ಹೋಗುತ್ತಿದ್ದಳು..

   ಬದುಕು ಸಾಗಿತ್ತು... ಯಾರ ನಿರ್ಧಾರಕ್ಕೂ ಕಾಯದೇ... ಯಾರ ಮರ್ಜಿಗೂ ಕೇಳದೇ... ಹೀಗಿರಲು ಒಂದು ದಿನ ಮಗನಿಗೆ ಹೊರದೇಶದಲ್ಲಿ ಕೆಲಸ ಸಿಕ್ಕಿತು.. ಸೊಸೆಗೂ ಸಹ ಅಲ್ಲೇ ಕೆಲಸ ಸಿಗುವ ಹಾಗಿತ್ತು.... ಹಾಗಾಗಿ ಮಗ ಹೊರ ದೇಶಕ್ಕೆ ಹೋಗಲು ತಯಾರಾಗುತ್ತಿದ್ದ... ನಾನು ಅವರ ಭವಿಷ್ಯದ ಬಗ್ಗೆ ನಿರ್ಧಾರ ತಾಳದಾಗಿದ್ದೆ... ಅವರವರ ಭವಿಷ್ಯ ಅವರೇ ತಾನೇ ರೂಪಿಸಿಕೊಳ್ಳುವುದು..? ಅದಕ್ಕೆ ನನ್ನ ಅನುಮತಿ ಯಾಕೆ ಬೇಕು ಎಂದು ನಾನೇ ಸಮಾಧಾನ ಮಾಡಿಕೊಂಡೆ... ನನ್ನ ಬದುಕು ಇನ್ನು ಎಷ್ಟು ದಿನ...? ಅದಕ್ಯಾಕೆ ಇವರು ಒಳ್ಳೆಯ ಅವಕಾಶ ಹಾಳು ಮಾಡಿಕೊಳ್ಳಬೇಕು...? ಹೀಗೆಲ್ಲಾ ಯೋಚಿಸಿ ನಾನು ಅವರನ್ನು ಬೀಳ್ಕೊಡಲು ತಯಾರಾದೆ... ನನ್ನ ಮನಸ್ಸನ್ನು ಓದಿಯೋ ಏನೋ ಮಗ ನನ್ನನ್ನು ಒಂದೂ ಮಾತು ಕೇಳಲಿಲ್ಲ... ಅವರು ಹೊರಡುವ ಮೊದಲ ದಿನ ನನ್ನಲ್ಲಿ ಒಂದು ಯೋಚನೆ ಬಂತು... ಸಮಾಧಾನವಾಗಿ ಯೋಚಿಸಿದಂತೆಲ್ಲಾ ಅದು ಸರಿ ಎನಿಸಿತು.... ಸಮಯ ಕಳೆದಂತೆ ಗಟ್ಟಿಯಾಯ್ತು ಕೂಡ...


    ನಾಳೆ ಬೆಳಿಗ್ಗೆ ಮಗ ಸೊಸೆ ಹೋಗುವವರಿದ್ದರು... ಹಿಂದಿನ ದಿನ  ರಾತ್ರಿ ಊಟ ಕ್ಕೆ ಕುಳಿತಾಗ ನಾನೇ ಮಾತನಾಡಿದೆ... " ನೋಡು ಸೂರ್ಯ... ಬದುಕು ನಮ್ಮನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗತ್ತೆ... ನಾವು ಏನು ಆಸೆ ಪಡುತ್ತೇವೋ ಅದು ದೊರಕಲ್ಲ... ಸಿಗದ ಪ್ರೀತಿಗೆ, ಹುದ್ದೆಗೆ ಅಲೆದಾಡುತ್ತೇವೆ... ಕೆಲವೊಮ್ಮೆ ಅದೇ ಪ್ರೀತಿ, ಹುದ್ದೆ ನಮ್ಮನ್ನು ಹುಡುಕುತ್ತಾ ಇರತ್ತೆ... ನೀವು ನಿಮ್ಮ ಅವಕಾಶ ಹಾಳುಮಾಡಿಕೊಳ್ಳದಿರಿ.. ನನ್ನ ಬಗ್ಗೆ ಬಿಡಿ .. ಎಷ್ಟು ದಿನ ಬದುಕಬಹುದು... ಹೆಚ್ಚೆಂದರೆ ಹತ್ತು ವರ್ಷ...?? ಹೇಗೋ ಬದುಕುತ್ತೇನೆ ಬಿಡು.. ಆದರೆ ನನಗೆ ಚಿಂತೆ ಇರೋದು ನಿನ್ನ ಹೆಂಡತಿಯ ಅಮ್ಮನದು... ಅದಕ್ಕೆ ನಾನೊಂದು ನಿರ್ಧಾರ ಮಾಡಿದ್ದೇನೆ... ನಾನು ಅವರನ್ನ ಮದುವೆಯಾಗುತ್ತೇನೆ... ಅವರ ಜೊತೆ ನಾನೇ ಮಾತನಾಡುತ್ತೇನೆ.. ಅದರ ಬಗ್ಗೆ ನಿಮಗೆ ತಲೆಬಿಸಿ ಬೇಡ... ನನಗೆ ನಿಮ್ಮ ಅಭಿಪ್ರಾಯ ಬೇಕು ಅಷ್ಟೆ..." ಎಂದೆ ... 

ಮಗ ನನ್ನ ಮುಖ ನೋಡಿದ......  


ಈ ಕಥೆಯನ್ನು ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ ಮುಂದುವರಿಸುತ್ತಾರೆ.... ಅವರ ಕಥೆಯ ಮೋಡಿಗಾಗಿ ಸ್ವಲ್ಪ ದಿನ ಕಾಯಿರಿ...