Sep 8, 2013

ವಿನಾ- ಕಾರಣ...!!!   ಮನಸ್ಸು ಅಳುಕುತ್ತಾ ಇತ್ತು.... ಎಷ್ಟೇ ಸಮಾಧಾನ ತಂದುಕೊಂಡರೂ ಯಾಕೋ ಹೆದರಿಸುತ್ತಾ ಇತ್ತು.... ಮಾಡುತ್ತಿದ್ದುದು ತಪ್ಪು ಎಂದು ಗೊತ್ತಿದ್ದರೂ ಸಹ, ಬುದ್ದಿ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.... ಇವತ್ತು ಅವಳ ಉತ್ತರ ಸಿಗುತ್ತಿತ್ತು... ನಿನ್ನೆಯ ಭೇಟಿಯ ನಂತರ ಅವಳ ಉತ್ತರದ ಬಗ್ಗೆ ಅನುಮಾನ ಇರಲಿಲ್ಲವಾದರೂ ಮನಸ್ಸು ಯಾಕೋ ಅಳುಕುತ್ತಾ ಇತ್ತು.... ಕೆಲವೊಮ್ಮೆ ’ ಇದೆಲ್ಲಾ ಬೇಕಿತ್ತಾ ನನಗೆ ’ ಅಂತಾನೂ ಅನಿಸತ್ತೆ....

ಇದು ಶುರು ಆಗಿದ್ದು ಒಂದು ವರ್ಷದ ಹಿಂದೆ...

    ನನ್ನ ಮನೆಯ ಪಕ್ಕದ ಹುಡುಗಿಯೊಂದು ಅಚಾನಕ್ಕಾಗಿ ನನ್ನ ಕಾರಿನಲ್ಲಿ ಲಿಫ಼್ಟ್ ಕೇಳಿದಾಗ... ಆ ಸಂಜೆ ವಿಪರೀತ ಮಳೆ ಬರ್ತಾ ಇತ್ತು... ಆಫೀಸು ಕೆಲಸ ಮುಗಿಸಿ ಹೊರಟವನಿಗೆ ಸಂಜೆ ಆರಾದರೂ ಕತ್ತಲೆಯಾದ ಹಾಗೆ ಕಾಣಿಸಿತ್ತು.... ಜೋರಾಗಿ ಮಳೆ ಸುರಿಯುತ್ತಿದ್ದರಿಂದ ಕತ್ತಲಾದ ಹಾಗೆ ಕಾಣಿಸುತ್ತಿತ್ತು... ಜನರ ಓಡಾಟವೂ ಕಡಿಮೆ ಇತ್ತು... ಈ ಹುಡುಗಿ ಎದುರಿಗೆ ಬಂದು ಕೈ ತೋರಿಸಿದಳು... ನಾನು ಕಾರು ನಿಲ್ಲಿಸಿದೆ.... ಒಳಗೆ ಕುಳಿತವಳೇ " ಥಾಂಕ್ಯೂ ಸರ್. ಮನೆ ಕಡೆ ಹೋಗುವ ಬಸ್ ನಿಲ್ಲಿಸಿದ್ದಾರೆ.. ತುಂಬಾ ಮಳೆಯಲ್ವಾ ಅದಕ್ಕೆ .. ನಿಮ್ಮನ್ನು ದಿನಾಲೂ ನೋಡುತ್ತೇನೆ... ನಿಮ್ಮ ಮನೆಯ ಪಕ್ಕವೇ ನಮ್ಮ ಮನೆ ಇರುವುದು ಸರ್.." ಎಂದಳು ಆಕೆ... ನಾನು ಈ ಮೊದಲು ಅವಳನ್ನು ಎಲ್ಲಿಯೂ ನೋಡಿರಲಿಲ್ಲ... ನಾನು ಅವಳ ಹೆಸರು ಕೇಳುವ ಮೊದಲೇ ಆಕೆ ಹೇಳಿಕೊಂಡಳು... " ನಿಮ್ಮ ಮಗನನ್ನು ಸ್ಕೂಲಿಗೆ ಬಿಡುವಾಗ ನಾನು ಆಫೀಸಿಗೆ ಹೊರಡೋದು ಸರ್... ನಿಮ್ಮ ಹೆಂಡತಿಯ ಜೊತೆಗೂ ನಾನು ಮಾತನಾಡಿದ್ದೇನೆ ಸರ್... ನಿಮ್ಮನ್ನು ಭೇಟಿ ಆಗ್ತಾ ಇರೋದು ಇದೇ ಮೊದಲು.... "

   ಅರಳು ಹುರಿದಂತೆ ಮಾತನಾಡುತ್ತಾ ಇದ್ದಳು ಆಕೆ... ನಾನು ಅವಳನ್ನು ಗಮನಿಸಿದೆ... ಮಳೆಯಲ್ಲಿ ನೆನೆದಿದ್ದಳು... ಸಾಧಾರಣವೆನಿಸುವ ಚೂಡಿ ದಾರ್ ನಲ್ಲಿದ್ದ ಆಕೆ ಸಾಧಾರಣ ರೂಪದವಳಾಗಿದ್ದಳು... ಸ್ವಲ್ಪ ಕಪ್ಪಗಿದ್ದರೂ ಮುಖದಲ್ಲಿ ಲಕ್ಷಣವಿತ್ತು, ಮುಗ್ಧತೆಯಿತ್ತು.... ಈ ಹುಡುಗಿಯಲ್ಲಿ ಏನೋ ಸೆಳೆತವಿತ್ತು.... ಮದುವೆಯಾಗಿ ಆರು ವರ್ಷವಾಗಿದ್ದರೂ ಹುಡುಗಿಯರ ಗಮನ ಸೆಳೆಯುವ ಮೈಕಟ್ಟು ನನ್ನದಾಗಿತ್ತು... ಇಷ್ಟಪಟ್ಟು ಮದುವೆಯಾದ ಹೆಂಡತಿ, ಮುದ್ದಿನಂಥ ಮಗ ಇದ್ದರೂ ಆಫೀಸಿನ ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದು ಬಿಟ್ಟಿರಲಿಲ್ಲ ನಾನು.... ಆದರೂ ನನ್ನ ಮಿತಿ ಮೀರಿರಲಿಲ್ಲ.... ಹೆಂಡತಿಗೆ ಮೋಸ ಮಾಡಿರಲಿಲ್ಲ... ಮಾಡುವ ಉದ್ದೇಶವೂ ಇರಲಿಲ್ಲ ಎನ್ನಿ... ಅಥವಾ ಮೋಸ ಮಾಡುವ ಅವಕಾಶ ಸಿಕ್ಕಿರಲಿಲ್ಲ ಅಂಥಲೂ ಅನ್ನಬಹುದು....

ಈ ಹುಡುಗಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಾ ಬಂದೆ ನಾನು... ಅವಳ ತಮ್ಮನೊಬ್ಬನಿಗೆ ಕೆಲಸವಿರದೇ ಮನೆಯಲ್ಲೇ ಇದ್ದಾನಂತೆ... ಅಮ್ಮನಿಗೆ ಕಾಯಿಲೆ ಇದೆಯಂತೆ... ಅಪ್ಪನೂ ಮನೆಯಲ್ಲೇ ಇದ್ದಾರಂತೆ , ಏನೂ ಕೆಲ್ಸ ಮಾಡದೆ... ನಾನು ಇವಳ ಹಳೆಯ ಗೆಳೆಯನಂತೆ ಎಲ್ಲವನ್ನೂ ಹೇಳಿಕೊಂಡಳು ಆಕೆ... ಅವಳ ಎಲ್ಲಾ ಮಾತಿಗೂ ಕಿವಿಯಾದ ನನಗೆ ಮನೆ ಬಂದಿದ್ದೇ ತಿಳಿಯಲಿಲ್ಲ.... " ತುಂಬಾ ಥ್ಯಾಂಕ್ಸ್ ಸರ್... ಸಿಗುತ್ತೇನೆ ಇನ್ನೊಮ್ಮೆ " ಎಂದವಳೇ ಕಾರು ನಿಲ್ಲಿಸಿದೊಡನೆಯೇ ಓಡಿ ಹೋದಳು... ಹುಡುಗಿ ತುಂಬಾ ಚೂಟಿ ಎನಿಸಿತು... ಮುದ್ದಾಗಿಯೂ ಕಂಡಳು... ಅವಳ ನಗು ಅಪ್ಯಾಯಮಾನವಾಗಿ ಕಂಡಿತು ನನಗೆ ಈ ಚಳಿಯಲ್ಲಿ.... ಮನೆಯ ಗೇಟ್ ತೆಗೆದು ಹೆಂಡತಿ ಹೊರ ಬರದೇ ಇದ್ದರೆ, ಅಲ್ಲೇ ನಿಂತಿರುತ್ತಿದ್ದೆನೋ ಏನೋ.... ಮನೆಯ ಒಳಗೆ ಬಂದರೂ ಮನಸ್ಸೆಂಬ ಕೆರೆಗೆ ಕಲ್ಲು ಬಿದ್ದಂಗಾಗಿತ್ತು....

ಊಟದ ಶಾಸ್ತ್ರ ಮಾಡಿ ಮುಗಿಸಿದರೂ ಹೆಂಡತಿಯ ಅಡುಗೆ ಮನೆ ಕೆಲಸ ಮುಗಿದಿರಲಿಲ್ಲ... 5 ವರ್ಷ ಬೆನ್ನ ಹಿಂದೆ ಬಿದ್ದು ಪ್ರೀತಿಸಿ ಒಲಿಸಿಕೊಂಡ ಹುಡುಗಿ, ಹೆಂಡತಿಯಾದ ಮೇಲೆ ಪ್ರೀತಿ ಕಡಿಮೆಯಾಯಿತಾ....?? ಇನ್ನೂ ತಿಳಿದಿರಲಿಲ್ಲ... ಮಗುವಾದ ಮೇಲಂತೂ ಅವಳ ಪ್ರಪಂಚವೇ ಬೇರೆಯಾಗಿತ್ತು.... ಮಗ, ಮನೆ, ತವರು ಮನೆ, ಅವಳ ತೋಟದ ಸುತ್ತಲೇ ಅವಳ ಪ್ರಪಂಚ ಸುತ್ತುತ್ತಿತ್ತು... ನನಗೆ ಇದರಿಂದ ಸಮಸ್ಯೆ ಇರದಿದ್ದರೂ ಸಂತೋಷವಂತೂ ಇರಲಿಲ್ಲ... ಇದನ್ನೆಲ್ಲಾ ಯೋಚಿಸುತ್ತಿದ್ದವನಿಗೆ ಯಾವಾಗ ನಿದ್ದೆ ಬಂದಿತ್ತೋ ತಿಳಿಯಲಿಲ್ಲ...

  ಯಾವಾಗಲೂ ಮಗನನ್ನು ಕಳುಹಿಸಲು ಬೈಕ್ ನಲ್ಲಿ ಹೋಗುವ ನಾನು ಆ ದಿನ ಕಾರ್ ಹೊರ ತೆಗೆದೆ... ಆ ಹುಡುಗಿ ಸಿಕ್ಕರೆ ಆಫೀಸಿಗೆ ಡ್ರಾಪ್ ಕೊಡುವಾ ಅಂತಲೂ ಇರಬಹುದು... ನಾನೆನಿಸಿದಂತೆಯೇ ಆ ಹುಡುಗಿ ಸಿಕ್ಕಳು,  ನಾನು ಅವಳಿಗೆ ಡ್ರಾಪ್ ಕೊಟ್ಟೆ ಸಹ..... ದಿನಗಳೆದಂತೆಯೇ ನಾನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸಿದೆ... ಆ ಕ್ಷಣಗಳಲ್ಲಿ ಏನೂ ಕೆಟ್ಟ ಉದ್ದೇಶವಿರದೇ ಇದ್ದರೂ ಅವಕಾಶ ಸಿಕ್ಕರೆ ಬಿಡುವ ಮಹಾನ್ ಬುದ್ದಿಯೂ ಇರಲಿಲ್ಲ.... ಅವಳನ್ನು ಸಮೀಪ ಮಾಡಿಕೊಳ್ಳುವ ಆತುರದಲ್ಲಿ ನಾನು ಮಾಡಿದ ಒಂದು ತಪ್ಪೆಂದರೆ ” ನನ್ನ ಮತ್ತು ನನ್ನ ಹೆಂಡತಿಯ ಮಧ್ಯೆ ಬಿನ್ನಾಭಿಪ್ರಾಯ ಇದೆ, ದಿನಾಲು ಜಗಳ ನಡೆಯುತ್ತದೆ, ಅವಳಿಂದ ನನಗೆ ಏನೂ ಸಂತೋಷ, ಖುಷಿ ಸಿಗ್ತಾ ಇಲ್ಲಾ, ತುಂಬಾ ಅನುಮಾನದ ಪ್ರಾಣಿ ಆಕೆ ” ಅಂತ ಸುಳ್ಳು ಹೇಳಿದ್ದೆ... ಅದನ್ನು ಈ ಹುಡುಗಿ ನಂಬಿದ್ದಳು ಕೂಡ.... ಅಲ್ಲದೇ  ಅವಳು ಇದನ್ನು ನಂಬುವ ಹಾಗೆ ಮಾಡಿದ್ದೆ...

  ದಿನ ಕಳೆದಂತೆ ಇವಳ ಮೇಲೆ ಆಸಕ್ತಿ ಹೆಚ್ಚಾಗುತ್ತಾ ಬಂದಂತೆ ಹೆಂಡತಿಯ ಮೇಲೆ ಪ್ರೀತಿ ಕಡಿಮೆಯಾಗುತ್ತಾ ಬಂತು... ನನ್ನ ಹೆಂಡತಿಗೆ ನನ್ನ ಮೇಲೆ ಇದ್ದ ಅತೀವ ನಂಬಿಕೆಯ ಪರಿಣಾಮವೋ ಅಥವಾ ಅವಳ ಆಧ್ಯತೆ ಬದಲಾದ ಪರಿಣಾಮವೋ ಇದೆಲ್ಲದರ ಬಗ್ಗೆ ಗಮನ ಹರಿಯಲಿಲ್ಲ... ನಾನೂ ಸುಮ್ಮನಿದ್ದೆ.... ಈ ಹುಡುಗಿಯ ಸಾಂಗತ್ಯ ಬಯಸಿದರೂ ನನಗೆ ಹೆಂಡತಿಯನ್ನು ದೂರ ಮಾಡುವ ಉದ್ದೇಶ ಇರಲಿಲ್ಲ.... ಈ ನಡುವೆ ಈ ಹುಡುಗಿ ನನ್ನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿತ್ತು... ನನ್ನಂಥಹ ಉತ್ತಮ ಮನುಷ್ಯನಿಗೆ ಹೆಂಡತಿಯಿಂದ ಮೋಸವಾಗಬಾರದು ಮತ್ತು ನನ್ನ ಜೀವನ ಸುಖಮಯವಾಗಿರಬೇಕು ಎಂಬುದು ಆಕೆಯ ಅಭಿಲಾಶೆಯಾಗಿತ್ತು....

  ಈಗೀಗಂತೂ ನಾನು ಅವಳಿಗಾಗಿಯೇ ಆಫೀಸಿಗೆ ಹೋಗುತ್ತೀನಾ ಅನ್ನುವಷ್ಟು ಹಚ್ಚಿಕೊಂಡು ಬಿಟ್ಟಿದ್ದೆ... ಅವಳಿಗೆ ನನ್ನದೇ ಆಫೀಸಿನಲ್ಲಿ ಕೆಲಸ ಕೊಡಲು ಸಹ ರೆಡಿಯಾಗಿದ್ದೆ...ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ... ಈ ನಡುವೆ ನನ್ನ ಮಗನ ಜೊತೆ ಅವಳ ಗೆಳೆತನವೂ ಆಗಿತ್ತು... ನನ್ನಾಕೆಗೆ ಇದರ ಸುಳಿವೇ ಇರಲಿಲ್ಲ....

   ನಾನು ಪೀಕಲಾಟಕ್ಕೆ ಸಿಕ್ಕಿದ್ದು...  ಒಮ್ಮೆ ಆ ಹುಡುಗಿ ನನ್ನನ್ನು ಮದುವೆಯಾಗಲು ಕೇಳಿಕೊಂಡಿದ್ದಕ್ಕೆ.... ನನ್ನಾಕೆಗೆ ಮೋಸ ಮಾಡಿ ಇವಳನ್ನು ಮದುವೆಯಾಗಲು ನಾನು ರೆಡಿಯಾಗಿದ್ದೆ ಸಹ.... ಮಗನಿಗೆ ರಜೆ ಇದ್ದುದರಿಂದ ನನ್ನಾಕೆಯನ್ನೂ ತವರು ಮನೆಗೆ ಕಳಿಸಿದ್ದೆ.... ಅವಳ ಮದುವೆಯ ಆಹ್ವಾನಕ್ಕೆ ನಾನು ಒಪ್ಪಿಗೆ ಕೊಡಲು ಸ್ವಲ್ಪ ಸಮಯ ಕೇಳಿದ್ದೆ... ನನ್ನ ಹೆಂಡತಿಗೆ ಡೈವೋರ್ಸ್ ಕೊಡಲು ಸಮಯ ಬೇಕು ಅಂತ ಇವಳಿಗೆ ಸುಳ್ಳು ಹೇಳಿದ್ದೆ... ಇವಳ ಮೇಲಿನ ಮೋಹ ನನ್ನನ್ನು ಏನು ಬೇಕಾದರು ಮಾಡಿಸುತ್ತಿತ್ತು...

ಒಂದು ದಿನ ಧೈರ್ಯ ಮಾಡಿ ಹೆಂಡತಿಗೂ ಹೇಳಿ ಬಿಟ್ಟೆ... ನನಗೆ ಅವಳಿಂದ ಡೈವೋರ್ಸ್ ಬೇಕೆಂದು... ನನ್ನ ಮಾತಿನಿಂದ ಅವಳಿಗೆ ತುಂಬಾ ಶಾಕ್ ಆಯಿತು... ಮಗನ ಮುಖವೂ ನೆನಪಿಗೆ ಬರಲಿಲ್ಲ... ನನ್ನಾಕೆ ಮನೆಯವರ ವಿರೋದಕ್ಕೆ ಹೆದರಿ ನಾನು ಅವಳಿಗೆ ಜೀವನಕ್ಕಾಗುವ ಮೊತ್ತ ಕೊಟ್ಟೆ... ಚೆನ್ನಾಗಿಯೇ ದುಡಿದಿದ್ದರಿಂದ ಹಣಕ್ಕೆನೂ ಕೊರತೆ ಇರಲಿಲ್ಲ... ನನ್ನ ಜೀವನದ ದುಡಿತದ ಅರ್ಧ ಪಾಲನ್ನು ಅವಳಿಗೆ ಕೊಟ್ಟಿದ್ದೆ... ಡೈವೋರ್ಸ್ ಅನ್ನೂ ಪಡೆದೆ... ಈ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೆ... ಇದನ್ನು ಕೇಳಿಯಂತೂ ಈ ಹುಡುಗಿ ಮುಖ ಊರಗಲವಾಗಿತ್ತು... ಅವಳ ಮನೆಯವರೂ ಒಪ್ಪಿದ್ದರು... ಈ ಹುಡುಗಿಯ ಖುಶಿಗೆ ಪಾರವೇ ಇರಲಿಲ್ಲ... ಆದರೆ ಅವಳಿಗೆ ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೀನಾ ಎನ್ನುವ ಅಪರಾಧಿ ಭಾವ ಕಾಡಲು ಶುರು ಆಗಿತ್ತಂತೆ... ಅವಳಿಗೆ ಸಮಾಧಾನ ಮಾಡಲು ನನಗೆ ಹೆಚ್ಚು ಹೊತ್ತು ಹಿಡಿಯಲಿಲ್ಲವಾದರೂ ಅವಳು ಮದುವೆಗೆ ಸ್ವಲ್ಪ ಸಮಯ ಕೇಳಿ ನನ್ನನ್ನು ಇನ್ನೂ ಹೆಚ್ಚಿನ ಹೆದರಿಕೆಗೆ ದೂಡಿದ್ದಳು...

ನಾನೂ ಸಹ ನನ್ನ ತಳಪಾಯ ಭದ್ರ ಮಾಡಿಕೊಂಡಿದ್ದೆ.... ಅವಳ ಅಮ್ಮನನ್ನು ಬುಟ್ಟಿಗೆ ಹಾಕಿಕೊಂಡಿದ್ದೆ...ಅಂದರೆ ಅವಳ ಅಮ್ಮನಿಗೆ ನನ್ನೆಲ್ಲಾ ಆಸ್ತಿಯ ಪರಿಚಯ ಮಾಡಿಸಿದ್ದೆ ಮತ್ತು  ಮನೆಯಲ್ಲೇ ಇದ್ದ ಮಗನಿಗೆ ದೊಡ್ಡದೊಂದು ಹುದ್ದೆಯ ಆಮಿಷ ತೋರಿಸಿದ್ದೆ.... ಯಾವ ಕಾರಣಕ್ಕೂ ನನ್ನ ಮದುವೆ ಆಗಲು ಒಪ್ಪದಿರಲು ಕಾರಣವೇ ಇರದ ಹಾಗೆ ಮಾಡಿದ್ದೆ.... ನಾನು ಮಾಡಿದ ದೊಡ್ದ ತಪ್ಪೆಂದರೆ ಈ ನಡುವೆ ನನ್ನ ಹೆಂಡತಿಯನ್ನು ಮರೆತಿದ್ದು... ಅವಳ ಬಗ್ಗೆ ನಾನು ಗಮನವೇ ಹರಿಸಿರಲಿಲ್ಲ... ಅವಳ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು... ಈ ಹುಡುಗಿ ತೆಗೆದುಕೊಂಡ ದಿನವೂ ಇವತ್ತೇ ಇತ್ತು....

ಆಫೀಸಿನ ಹತ್ತಿರವೇ ಇದ್ದ ಪಾರ್ಕಿನಲ್ಲಿ ಕಾಯುತ್ತಾ ಕುಳಿತಿದ್ದೆ ಅವಳಿಗಾಗಿ... ಸಿಗರೇಟ್ ಪ್ಯಾಕ್ ಮುಗಿಯುವುದಕ್ಕೂ ಅವಳು ಒಳಗೆ ಬರುವುದಕ್ಕೂ ಸರಿಯಾಯ್ತು....   ಅವಳ ಮುಖದಲ್ಲಿ ನಗುವಿತ್ತು... ನನಗಿಷ್ಟವಾದ ಹಳದಿ ಬಣ್ಣದ ಟಿ ಶರ್ಟ್ ತೊಟ್ಟಿದ್ದಳು... ನನಗೆ ಗೆಲುವೆನಿಸಿತು... ಎಂದೂ ಬಾರದ ಹೆಂಡತಿಯ ನೆನಪಾಯಿತು... ತಲೆ ಕೊಡವಿಕೊಂಡೆ... ಹಿಂದಿನದನ್ನು ಮರೆತು ಮುಂದಿನದರ ಬಗ್ಗೆ ಯೋಚಿಸಿ ಮುನ್ನಡೆಯೋಣ ಎನಿಸಿಕೊಂಡೆ... ನನ್ನ ಪಕ್ಕದಲ್ಲೇ ಕುಳಿತಳು ಆಕೆ... " ಯಾಕೆ ತುಂಬಾ ಟೆನ್ಸನ್ ನಲ್ಲಿದ್ದೀರಾ..? " ಕೇಳಿದಳು... ಇವಳಿಗೇನು ಗೊತ್ತು ನನ್ನ ಪಾಡು....? ಮದುವೆಯ ದಿನ ಗೊತ್ತುಪಡಿಸೋದೊಂದೆ ಬಾಕಿ ಇದ್ದು ಈ ಹುಡುಗಿ ಸತಾಯಿಸುತ್ತಿದ್ದಾಳೆ... " ಇಲ್ಲಪ್ಪಾ... ಆರಾಮಿದ್ದೇನೆ ನಾನು... ಸರಿ.. ಎಲ್ಲವೂ ಕ್ಲೀಯರ್ ಆಯ್ತಾ... ಒಂದು ವಿಷಯ ನೆನಪಿಟ್ಟುಕೊ... ನಿನ್ನ ಮೇಲೆ ನನಗೆ ಮನಸ್ಸಿದ್ದುದೂ ಹೌದು... ಆದರೆ ನೀನೇ ಮೊದಲು ಅದನ್ನು ಹೇಳಿಕೊಂಡೆ... ನನ್ನ ಹೆಂಡತಿಯ ಜೊತೆಯೂ ನನ್ನ ಸಂಬಂಧ ಸರಿ ಇರಲಿಲ್ಲ... ಈಗ ಅದಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ಬಂದಿದೆ... ಅವಳಿಂದ ನನಗೆ ಡೈವೋರ್ಸ್ ಸಹ ಸಿಕ್ಕಿದೆ... ಈಗ ನಿನ್ನ ಮದುವೆಯಾಗಲು ನಾನು ರೆಡಿ ಇದ್ದೇನೆ... ನೀನು ಮದುವೆಯ ಆಹ್ವಾನ ಕೊಟ್ಟ ನಂತರವೇ ಇದೆಲ್ಲಾ ಆಗಿದ್ದು... ಈಗ ಹೇಳು ಮದುವೆ ಯಾವಾಗ ಇಟ್ಟುಕೊಳ್ಳೋಣ..."? ನನ್ನ ಗಡಿಬಿಡಿ ನನಗಾಗಿತ್ತು...

ಆಕೆ ನನ್ನ ಕೈ ತೆಗೆದುಕೊಂಡಳು... " ನಿಮ್ಮದು ಲವ್ ಮ್ಯಾರೇಜ್ ಆಗಿತ್ತಾ ...? "ಕೇಳಿದಳು... " ಹೌದು...ಅದೆಲ್ಲಾ ಯಾಕೀಗ..?  ಅವಳನ್ನು 5 ವರ್ಷ ಬೆನ್ನಿಗೆ ಬಿದ್ದು ಪ್ರೀತಿಸಿ ಮದುವೆಯಾಗಿದ್ದೆ.... ಅದು ಮುಗಿದ ಅಧ್ಯಾಯ ಈಗ... " ಎಂದೆ ನಾನು.... " ನನ್ನನ್ನ ಅಷ್ಟು ಇಷ್ಟ ಪಡ್ತೀರಾ ನೀವು...? ನನ್ನನ್ನ ಯಾಕೆ ಮದುವೆಯಾಗಲು ಮನಸ್ಸು ಮಾಡಿದ್ರೀ ನೀವು...? " ಪ್ರಶ್ನೆ ಕೇಳುವ ಪರಿಗೆ ನಾನು ಮನಸೋತೆ... ಅವಳ ಈ ಪ್ರಶ್ನೆ ನನಗೆ ಕಿರಿಕಿರಿ ಎನಿಸಿದರೂ ಅವಳ ಮೇಲಿನ ಪ್ರೀತಿ ಹೇಳಿಕೊಳ್ಳಬೇಕಿತ್ತು.... " ನೋಡು ಹುಡುಗಿ, ನಿನ್ನ ಮೇಲೆ ನನ್ನ ಪ್ರೀತಿಗಿಂತಲೂ , ನೀನು ನನ್ನ ಮೇಲೆ ತೋರಿಸಿದ ಪ್ರೀತಿಗೆ ಸಾಟಿಯಿಲ್ಲ... ಈ ರೀತಿ ಪ್ರೀತಿಯನ್ನೂ ಯಾರೂ ತೋರಿಸಿರಲಿಲ್ಲ.. ಅದೇ ನನ್ನನ್ನು ಮದುವೆಯಾಗಲು ಪ್ರೆರೇಪಿಸಿತು... ನೀನು ನನ್ನ ಹೆಂಡತಿಗಿಂತಲೂ ತುಂಬಾ ಸುಂದರವಾಗಿದ್ದೀಯಾ... ಅದರ ಬಗ್ಗೆ ಮಾತೇ ಇಲ್ಲ.... ಅದು ಜಗತ್ತನ್ನೇ ಮರೆತು ನಿನ್ನ ಹಿಂದೆ ಸುತ್ತುವ ಹಾಗೆ ಮಾಡಿದೆ... ಅದೆಲ್ಲಾ ಬಿಡು... ಮದುವೆ ಹಾಲ್ ಎಲ್ಲಿ ಬುಕ್ ಮಾಡಲಿ, ಆಮಂತ್ರಣ ಪತ್ರಿಕೆ ರೆಡಿ ಆಗ್ತಾ ಇದೆ... ದಿನಾಂಕ ಪ್ರಿಂಟ್ ಮಾಡೊದೊಂದೇ ಬಾಕಿ..." ಎಂದೆ ಅವಳ ಕೈ ಮೇಲೆ ಹೂ ಮುತ್ತನಿಟ್ಟೆ...

ನನ್ನ ಕೈಗೂ ಒಂದು ಮುತ್ತನಿಟ್ಟ ಆಕೆ ಎದ್ದು ನಿಂತಳು..." ನಿಮ್ಮನ್ನು ನಾನು ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುತ್ತೇನೆ... ಅದ್ಯಾವ ಮಾಯೆಯಿಂದ ನಾನು ನಿಮ್ಮನ್ನು ಇಷ್ಟು ಪ್ರೀತಿಸಿದೆನೋ ನನಗೇ ತಿಳಿಯದು... ನಿಮ್ಮನ್ನು ಮದುವೆಯಾಗಲು ನನ್ನ ಮನಸ್ಸು ಒಪ್ಪುತ್ತಿಲ್ಲ.... ನನ್ನನ್ನು ಮರೆತುಬಿಡಿ..." ಪಕ್ಕದಲ್ಲೇ ಬಾಂಬ್ ಬಿದ್ದಹಾಗಾಯಿತು.... ಅದುರಿಬಿದ್ದೆ....
ಅವಳ ರಟ್ಟೆ ಹಿಡಿದು ನನ್ನ ಕಡೆ ತಿರುಗಿಸಿದೆ... ಸ್ವಲ್ಪ ರಫ್ ಆಗಿಯೇ ಕೈ ಹಿಡಿದಿದ್ದೆ.... ಅದರ ಬಗ್ಗೆ ಯೋಚಿಸುವ ಪ್ರಜ್ನೆ ಇರಲಿಲ್ಲ... " ಏನ್ ಹೇಳ್ತಾ ಇದ್ದೀಯಾ...? ತಮಾಶೆ ಮಾಡಬೇಡ್ವೇ...? ಪ್ರಾಣಾನೇ ಇಟ್ಕೊಂಡಿದೀನಿ ನಿನ್ನ ಮೇಲೆ... " ಆಲ್ಮೋಸ್ಟ್ ಕೂಗಿದೆ....

    ಅವಳ ಮುಖದಲ್ಲಿ ಏನೂ ಬದಲಾವಣೆ ಏನೂ ಕಾಣಲಿಲ್ಲ... ನನಗೆ ಗಾಬರಿ ಯಾಯಿತು....  ಅವಳು ನಾನು ಬಿಗಿಯಾಗಿ ಹಿಡಿದ  ರಟ್ಟೆಯ ಕಡೆ ನೋಡುತ್ತಿದ್ದಳು... ನೋಯುತ್ತಿತ್ತು ಅನಿಸತ್ತೆ... ಬಿಟ್ಟು ಬಿಟ್ಟೆ.... " ಸಾರಿ ಹುಡುಗಿ, ಆವೇಶ ಕ್ಕೊಳಗಾದೆ... ಒಂದ್ ವಿಷಯ ಅರ್ಥ ಮಾಡ್ಕೊ... ನಾನು  ನಿನ್ನನ್ನು ಇಷ್ಟ ಪಟ್ಟಿದ್ದು, ನಿನ್ನ ಮೇಲೆ ಪ್ರೀತಿ ತೋರಿಸಿದ್ದು ಯಾವುದೂ ಸುಳ್ಳಲ್ಲ... ಹಾಗೆ ನೀನೂ ಸಹ... ನಿನಗೇನಾದರೂ ನಿನ್ನಿಂದಾಗಿ ನನ್ನ ಹೆಂಡತಿಗೆ ಮೋಸ ಆಯ್ತು ಎನ್ನುವ ಅಪರಾಧಿ ಭಾವನೆ ಇದ್ದರೆ ಬಿಟ್ಟು ಬಿಡು ಅದನ್ನ... ಅವಳಿಗೆ ಎನು ಬೇಕೋ ಅದನ್ನ ಕೊಟ್ಟಿದ್ದೇನೆ... ಮಗನ ಭವಿಷ್ಯಕ್ಕಾಗುವಷ್ಟನ್ನೂ ಕೊಟ್ಟಿದ್ದೇನೆ... ಅವಳ ಭವಿಷ್ಯಕ್ಕೆ ಏನೂ ತೊಂದರೆ ಆಗಲ್ಲ ಬಿಡು... ಅದರ ಬಗ್ಗೆ ಯೋಚನೆ ಮಾಡಬೇಡ..." ನಾನು ಬೇಡುವ ಸ್ಥಿತಿಗೆ ಬಂದಿದ್ದೆ... ನನ್ನ ಬಗ್ಗೆ ನನಗೇ  ಜಿಗುಪ್ಸೆಯಾಯಿತು... ಆದರೆ ಇದೆಲ್ಲಾ ಪ್ರೀತಿ ಒಲಿಸಿಕೊಳ್ಳಲು ಎಂದು ಸಮಾಧಾನಪಡಿಸಿಕೊಂಡೆ....

ಇಷ್ಟೆಲ್ಲಾ ಅಂದರೂ ಆಕೆ ಮುಖಭಾಷೆಯಲ್ಲಿ ಏನೂ ಬದಲಾವಣೆ ಕಾಣಲಿಲ್ಲ... " ನಿಮ್ಮ ಜೊತೆ ಮದುವೆಯಾಗದೇ ಇರಲು ಇವೆಲ್ಲಾ ಕಾರಣಗಳೇ ಅಲ್ಲ... ನನಗೆ ನನ್ನ ಭವಿಷ್ಯವೂ ಮುಖ್ಯ... " ಎಂದಳು ಆಕೆ.... ಸಿಟ್ಟು ಬಂತು ನನಗೆ... " ನಿನಗೇನು ಕಡಿಮೆ ಮಾಡಿದ್ದೇನೆ ನಾನು...? ನಿನ್ನ ತಮ್ಮನಿಗೆ ಉದ್ಯೋಗ ಕೊಡಿಸುತ್ತೇನೆ.... ನಿನ್ನ ಅಮ್ಮ ಸಹ ನ ಮ್ಮ ಜೊತೆಯೇ ಇರಬಹುದು... ನಿನ್ನ ಅಪ್ಪನಿಗೂ ನನ್ನ ಜೊತೆ ಕೆಲ್ಸ ಕೊಡುತ್ತೇನೆ... ಅವರೂ ನಮ್ಮ ಜೊತೆಯೇ ಇರಲಿ.... ನನ್ನ ಆಸ್ತಿಯಲ್ಲಿ ಸಮಪಾಲು ನಿನಗೆ ಕೊಡುತ್ತೇನೆ... ನನ್ನ ಆಸ್ತಿಯ ಬಗ್ಗೆ ನಿನಗೆ ಗೊತ್ತೇ ಇದೆ... ಆದರೂ ನಿನಗೇಕೆ ಭವಿಷ್ಯದ ಚಿಂತೆ..? " ಸಹನೆ ಕಳೆದುಕೊಂಡೆ ನಾನು.... ಅವಳ ಕಣ್ಣಲ್ಲಿ ನೀರಿತ್ತು....

" ನೀವು ನನ್ನನ್ನ ಮದುವೆಯಾಗ್ತಾ ಇರೋದು ಯಾಕೆ ಅಂತ ಹೇಳಿದ್ರೀ...? ನಾನು ನಿಮ್ಮನ್ನು ನಿಮ್ಮ ಹೆಂಡತಿಗಿಂತ ಚೆನ್ನಾಗಿ ಕಾಳಜಿ ತೋರಿಸಿದೆ ಮತ್ತು ಪ್ರೀತಿಸಿದೆ ಅಂತ ತಾನೆ..? ನಾನು ನಿಮ್ಮ ಹೆಂಡತಿಗಿಂತ ಚೆನ್ನಾಗಿದೀನಿ ಅಂತ ತಾನೆ...? ಈಗ ನಾನು ನಿಮ್ಮನ್ನು ಮದುವೆಯಾದ ನಂತರವೂ ನನಗಿಂತ ಸುಂದರ, ನನಗಿಂತ ನಿಮ್ಮನ್ನು ಪ್ರಿತಿಸುವ, ಕಾಳಜಿ ತೋರಿಸುವವರು ಸಿಕ್ಕಾಗ ನನ್ನನ್ನೂ ಮರೆಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ...? ಅಷ್ಟು ಪ್ರೀತಿಸಿ ಮದುವೆಯಾದ ನಿಮ್ಮ ಹೆಂಡತಿಯನ್ನು ನನ್ನ ಸಲುವಾಗಿ ಬಿಡಲು ತಯಾರಾದ ನೀವು , ಇನ್ಯಾರದೋ ಸಲುವಾಗಿ ನನ್ನನ್ನು ಬಿಡೋದಿಲ್ಲಾ ಅನ್ನೋದಕ್ಕೆ ಏನು ಗ್ಯಾರಂಟಿ..? .. ನನಗೆ ನಿಮ್ಮ ಮೇಲೆ ಪ್ರೀತಿ ಇದೆ.. ಆದ್ರೆ ಅದಕ್ಕೆ ನಂಬಿಕೆ ಎನ್ನುವ  ಭದ್ರ ಬುನಾದಿ ಇಲ್ಲ ಎಂದ ಮೇಲೆ ಪ್ರೀತಿ ಮೇಲೂ ಅನುಮಾನ ಬರಲು ಶುರು ಆಗತ್ತೆ... ನನ್ನನ್ನು ಮರೆತು ಬಿಡಿ... ನಿಮ್ಮ ಹೆಂಡತಿ ಜೊತೆ ಇರ್ತೀರೋ ಇಲ್ಲವೋ ನಿಮಗೆ ಬಿಟ್ಟಿದ್ದು..." ಎನ್ನುತ್ತಾ ಕುಸಿದು ಕುಳಿತಳು....ಅಳಲು ಶುರು ಮಾಡಿದಳು....


ಎದುರಿಗೇ ಪ್ರಪಾತ ಬಂದ ಅನುಭವ ನನಗೆ... ಹೆಂಡತಿಯ ಮುಗ್ಧ ಮುಖ, ಮಗನ ಅಮಾಯಕ ನಗೆ ಕಣ್ಣೆದುರಿಗೆ ಬಂತು... ಕೊನೆಯ ಸಾರಿ ಮಗನನ್ನು ಬಿಟ್ಟು ಬರುವಾಗ ನನ್ನ ಕೈ ಬಿಡಲೊಪ್ಪದ ಆತನ ಕೈ ಬಿಸಾಡಿ ಬಂದಿದ್ದೆ... ಅದೇ ಕೈ ನೋಡಿಕೊಂಡೆ.... ಈಗ ಈ ಹುಡುಗಿ ನನ್ನ ಎದೆ ಮೇಲೆ ಒದ್ದು ಹೋಗುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ..... ನನಗೆ ಏನೂ ತೋಚಲಿಲ್ಲ... ಅವಳು ಹೇಳಿದ್ದು ತಪ್ಪು ಅಂತಾನೂ ಅನಿಸಲಿಲ್ಲ.... ಅವಳು ಸಾವಕಾಶವಾಗಿ ಎದ್ದು ನಡೆಯಲು ಶುರು ಮಾಡಿದಳು... ಅವಳ ಕಡೆ ನೋಡಿದೆ... ಸಂಜೆಯ ಬಿಸಿಲಿತ್ತು... ಅನಿರೀಕ್ಷಿತವಾಗಿ ಧೋ ಅಂತ ಮಳೆ ಬಂತು.... ಮಳೆ ನೀರು ಮುಖದ ಮೇಲೆ ಹರಿದು ಬಾಯಿಗೆ ಬಂತು.... ಉಪ್ಪುಪ್ಪು.... ಮಳೆ ನೀರ ಜೊತೆ ಕಣ್ಣೀರೂ ಸೇರಿತ್ತಾ.....? ತಿಳಿಯಲಿಲ್ಲ.....