Oct 31, 2009

ನಿನ್ನ ಮರೆತ ನೆನಪಿಲ್ಲ............!

ಒಬ್ಬಂಟಿಯಾಗಿ ನಡೆಯುತ್ತಿದ್ದೇನೆ,
ಬೆನ್ಹತ್ತುತ್ತಿವೆ ನನ್ನ ನೆರಳುಗಳು.....
ಸಂಜೆಯಾಗಿ ಕತ್ತಲಾಗುತ್ತಿದೆ,
ಕಾದುತ್ತಿವೆ ನಿನ್ನ ನೆನಪುಗಳು.....

ಸಂಬಂಧಗಳು ಕಡಿದಿವೆ ನಿಜ,
ನೆನಪನ್ನು ಹೇಗೆ ಮರೆಯಲಿ ಹೇಳು.....
ಮನಸ್ಸು ಮುರಿದಿದೆ ನಿಜ,
ಮನ ಹಿಗ್ಗುವ ಬಗೆ ಹೇಳು ......

ನಿನ್ನ ನೆನಪು ಮಾಡೋಣ ಎಂದರೆ ,
ಮರೆತೇ ಹೋಗುತ್ತಿಲ್ಲವಲ್ಲ....
ನನಗೆ ಅಂಥಾ ದುಃಖವಿಲ್ಲ ಎಂದರೂ,
ಸುಖದ ಸುಳಿವೇ ಇಲ್ಲವಲ್ಲ.....!

Oct 25, 2009

'' ಅವನೇಕೆ ನಿಮ್ಮಂತೆ?''


"ಅರೆರೆ, ಇವನು ನಿನ್ನ ಮಗನೇನು?
ಮುಖದಲ್ಲೇಕೆ ಇವನು ನನ್ನನ್ನೇ ಹೋಲುವನು?''
ಕೇಳಿದರೆ ನೀನು ನಗುತ್ತಾ ಮುನ್ನೆಡೆದೆ...
ತುಂಟ ಮಗ ನನ್ನನ್ನು ''ಅಪ್ಪಾ'' ಎಂದೇ ಕರೆದ...

ನೀನೇಕೆ ಕಾಯಲಿಲ್ಲ ನನಗಾಗಿ ಇನ್ನೂ,
ಅಲ್ಲೇನು ನೋಡುವೆ ದೇವರಿಲ್ಲ ಮೇಲೆ,
ನಿನಗಾಗಿ ನಾನು ಕಾದು ಕುಳಿತಿರಲು ಇಲ್ಲಿ,
ನಿನ್ನದೇ ಸುಳಿವಿಲ್ಲ ಕನಸು ಮನಸಲ್ಲೂ.....

ನೆನಪಿದೆಯಾ ಆ ರಾತ್ರಿ ನನ್ನಲ್ಲಿ ನೀನು,
ಕೇಳುತ್ತಾ ಕಾಣಿಕೆಯ, ಬೇಡುತ್ತಾ ಸುಖವಾ....
ನಸುಕಲ್ಲೇ ಎದ್ದು ನೀ ನಕ್ಕು ನಡೆದೆ,
ಮರುದಿನವೇ ಅಲ್ಲವೇ ನಿನ್ನ ಅವನ ಮದುವೆ....?

ನನ್ನಾಕೆಗೆ ಸಂಶಯ, ನಿನ್ನ ಮಗನ ನೋಡಿ,
ತಡೆಯಲಾರದೆ ಕೇಳಿದಳು, 'ಅವನೇಕೆ ನಿಮ್ಮಂತೆ'?
ನಾ ನಕ್ಕು ನುಡಿದೆ, 'ಅವನನ್ನೇ ಕೇಳು'
ನಿನ್ನ ಮಗ ಜಾಣ, ಕಣ್ಣ್ ಹೊಡೆದು ಮುನ್ನಡೆದ.........

Oct 12, 2009

ನಾನಾ..........?



ಮನವೆಂಬ ಮರ್ಕಟವ ಕೇಳೇ ಗೆಳತಿ,
ಯಾರು ನಿನ್ನೆದೆಯ ವೀಣೆ ಮೀಟಿದವರು?
ಬೆನ್ನ ಹಿಂದಿನ ನೆರಳಂತೆಯೇ ಇದ್ದು,
ದಿನವಿಡೀ ನೆನಪಾಗಿ ಕಾಡುವವನು....

ಸುಖ ಕೂಡಿಸಿ, ದುಃಖ ವ್ಯವಕಲಿಸಿ,
ಧೈರ್ಯ ಗುಣಿಸಿ, ನೋವು ಭಾಗಿಸುವವನು...
ಹಾಸ್ಯ ಮಾತು, ನಗೆ ಚಟಾಕಿಗಳಲಿ,
ದಿನದ ಆಯಾಸ ಮರೆಸುವವನು....

ನಿನ್ನ ಉಜ್ವಲ ಭವಿಷ್ಯಕ್ಕಾಗಿ,
ತನ್ನ ವರ್ತಮಾನ ಮರೆಯುವವನು....
ಚಿತ್ರ ವಿಚಿತ್ರ ಮಾತನಾಡುತ್ತಾ,
ತಲೆಚಿಟ್ಟು ಹಿಡಿಸುವವನು.....

ಅಮ್ಮನ ಕೈಯ ಕಾಫಿಗಿಂತ,
ಮುಂಚೆಯೇ ನೆನಪಾಗುವವನು...
ಒಮ್ಮೊಮ್ಮೆ ಅತಿಯಾಯಿತೆನಿಸಿದರೂ,
ಮತ್ತೆ ಬೇಕೇ ಬೇಕೆನಿಸುವವನು........

ಯಾರೇ ..........?

Oct 5, 2009

ನನ್ನದೊಂದು.........!

ನಿನ್ನ ಕಣ್ಣ ತುದಿಯಲ್ಲಿ,

ನನ್ನದೊಂದು ಚಿತ್ರವಿರಲಿ ಗೆಳತಿ....

ಯಾವತ್ತಾದರೂ ಕಣ್ಣೀರು ಕದಲಿದರೆ,

ಅವು ಕೆನ್ನೆಗೆ ಧುಮುಕಿ,

ನಿನ್ನ ಸೌಂಧರ್ಯ ಹಾಳು ಮಾಡದಂತೆ,

ನನ್ನ ಚಿತ್ರವಾದರೂ ತಡೆದೀತು......



ನಿನ್ನ ಮೆದು ಮನಸ್ಸಿನಲ್ಲಾದರೂ,

ನನ್ನದೊಂದು ತುಂಟ ನೆನಪಿರಲಿ ಗೆಳತಿ......

ಎಂದಾದರೂ ನಿನ್ನ ಮನ ಮುದುಡಿದರೆ,

ನನ್ನ ತುಂಟತನ ನೆನಪಾಗಿ,

ನೋವು ನಿನ್ನ ಮನ ಘಾಸಿ ಮಾಡದಂತೆ,

ನನ್ನ ನೆನಪಾದರೂ ತಡೆದೀತು........



Sep 30, 2009

ನಾನೂ...... ನನ್ನಪ್ಪ......

ಅಸಹಾಯಕತೆ ಇದೆ...
ಆರೋಗ್ಯವೂ ಕೈಕೊಡುತ್ತಿದೆ...
ಅಸಹನೆ ಮೂಡುತ್ತಿದೆ...
ಹೇಳಿದ್ದನ್ನೇ ಪದೇ ಪದೇ ಹೇಳುತ್ತಾರೆ....

ಹೌದು, ಅಪ್ಪನಿಗೆ ವಯಸ್ಸಾಗುತ್ತಿದೆ.....

ಎಲ್ಲವನ್ನೂ ಸಹಿಸಿಕೊಳ್ಳಬೇಕು....
ಅವರಿಗೆ ನಾನೇ ಹೆಗಲಾಗಬೇಕು...
ನಾನೇ ಸಹನೆ ಬೆಳೆಸಿಕೊಳ್ಳಬೇಕು....
ಅವರಿಗೆ ನಾನೇ ಕಿವಿಯಾಗಬೇಕು.....

ಯಾಕೆಂದರೆ, ನಾನೂ ಅಪ್ಪನಾಗುತ್ತೇನೆ..
ನಾಳೆ, ನನಗೂ ವಯಸ್ಸಾಗುತ್ತದೆ......

Sep 26, 2009

ಮಂಗಳೂರು ದಸರಾ...೨













ಭಗವಂತನ ಶಕ್ತಿ ರೂಪದ ಆರಾಧನೆಯ ಪರ್ವಕಾಲವೇ ನವರಾತ್ರಿ. ಒಂಬತ್ತು ದಿನಗಳ ಕಾಲ ನಮ್ಮ ದೇಹ , ಮನಸ್ಸು ಮತ್ತು ಆತ್ಮಗಳಿಗೆ ವಿಶ್ರಾಂತಿ ಕೊಟ್ಟು ಹೊಸ ಉಲ್ಲಾಸ , ಚೈತನ್ಯದೊಂದಿಗೆ ಹೊರಬರುವುದೇ ಆಚರಣೆಯ ಉದ್ದೇಶ ಆಗಿದೆ.....









ಭಗವಂತನ ಶಕ್ತಿ ರೂಪದ ಆರಾಧನೆಯ ಮೂರು ಶಕ್ತಿಗಳಾದ ಮಧುಕೈಟಭನನ್ನು ಕೊಂದ ಮಹಾಕಾಳಿ, ಮಹಿಷಾಸುರನನ್ನು ಕೊಂದ ಮಹಿಷಮರ್ಧಿನಿ ಮಹಾಲಕ್ಷ್ಮಿ , ಶುಂಭ ನಿಶುಮ್ಬರನ್ನು ಕೊಂದ ಸರಸ್ವತಿ ಶಕ್ತಿಯನ್ನು ವಿಶೇಷವಾಗಿ ಆಚರಿಸುತ್ತಾ, ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ......


ಶಾರದಮುರ್ತಿಯ ಮುಗ್ಧ ಮುಖ , ಪ್ರಶಾಂತತೆಯನ್ನ ನೋಡಿ, ಭಕ್ತಿ ಉಕ್ಕಿ ಬರದೆ ಇರಲು ಸಾದ್ಯವೇ ಇಲ್ಲ.......












ತಮೊಗುಣಗಳನ್ನು ಮಹಾಕಾಳಿ, ರಜೋಗುಣವನ್ನು ಮಹಾಲಕ್ಷ್ಮಿ, ಸತ್ವಗುಣವನ್ನು ಮಹಾಸರಸ್ವತಿ ಪ್ರತಿನಿಧಿಸುತ್ತಿದ್ದಾರೆ..........












ಮೊದಲ ೩ ದಿನ ಮಹಾಕಾಳಿಯ ಪೂಜೆ ಮಾಡುತ್ತಾ ನಮ್ಮ ದುರ್ಗುಣಗಳನ್ನು ಹೋಗಲಾದಿಸಿಕೊಳ್ಳಬೇಕು......












ಮದ್ಯಮ ಮೂರೂ ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾ, ನಮ್ಮ ಸದ್ಗುಣ ಸಂಪತ್ತನ್ನು ಅವಳ ಅನುಗ್ರಹದಿಂದ ಹೆಚ್ಚಿಸಿಕೊಳ್ಳಬೇಕು.....











ಕೊನೆಯ ಮೂರು ದಿನಗಳಲ್ಲಿ, ಜ್ನಾನದೇವತೆಯಾದ ಸರಸ್ವತಿಯನ್ನು ಆರಾಧಿಸುತ್ತಾ ನಮ್ಮಲ್ಲಿರುವ ಎಲ್ಲಾ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಆ ಜಾಗದಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿ ಜ್ಞಾನವನ್ನು ಗಳಿಸಿ ಬಾಳಬೇಕೆಂಬುದು ನವರಾತ್ರಿ ಆಚರಣೆಯ ಮುಖ್ಯ ಉದ್ದೇಶವಾಗಿದೆ........











ಈ ಎಲ್ಲ ಮೂರ್ತಿಗಳನ್ನು ದಸರಾದ ಸಮಯದಲ್ಲಿ ಪ್ರತಿಷ್ಟಾಪಿಸುತ್ತಾರೆ.....












ಈ ಮೂರ್ತಿಗಳನ್ನು ಇಟ್ಟ ಹಾಲ್ ಯಾವ ಸಿನೆಮ್ಮಾದ ಸೆಟ್ಟನ್ನು ನಾಚಿಸುವಂತಿದೆ, ನಿಜವಾಗಿಯು ಅದ್ಭುತ....










ಇಲ್ಲಿಯ ಮುಖ್ಯ ಆಕರ್ಷಣೆ, ೨೫-೩೦ ಮೀಟರ್ ಮೇಲೆ ಚಿಮ್ಮುವ ಕಾರಂಜಿ, ಇದನ್ನ ಶಿವನ ಜಡೆಯಿಂದ ಚಿಮ್ಮುವ ಹಾಗೆ ಮಾಡಿದ್ದಾರೆ... ಕೊಳದ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಶಿವನ ಮೂರ್ತಿಯನ್ನ ನಿಲ್ಲಿಸಿ ಅದರ ತಲೆಯಿಂದ ಆಕಾಶಕ್ಕೆ ಚಿಮ್ಮುವ ಕಾರಂಜಿಯನ್ನ ನೋಡೇ ಆನಂದಿಸಬೇಕು.......

















ಕೊನೆಯದಾಗಿ ತಾಳ್ಮೆಯ, ಬ್ರಹ್ಮಚರ್ಯದ ಪ್ರತಿರೂಪದಂತಿರುವ ಆಂಜನೇಯನ ಮೂರ್ತಿ ಗಮನ ಸೆಳೆಯುತ್ತದೆ......
!! ಸರ್ವ ಸ್ವರೂಪೆ ಸರ್ವೆಷೆ ಸರ್ವಶಕ್ತಿ ಸಮನ್ವಿತೆ
ಭಾಯೇಭ್ಯಾ ಸ್ರಾಹಿನೋ ದೇವಿ ದುರ್ಗೇ ದೇವಿ ನಮೋಸ್ತುತೆ !!

ಏನೇ ನಿನ್ನೆಸರು..........?


ನೆರಳಾಗಿ ಹಿಂದೆ ಬಿದ್ದಿದ್ದು......
ಉಸಿರಾಗಿ ಇರುತ್ತೇನೆ ಎಂದಿದ್ದು...
ಕೊನೆಯರೆಗೂ ಬಾಳುತ್ತೇನೆ ಅಂದಿದ್ದು...
ಬಣ್ಣ ಬಣ್ಣದ ಕನಸು ತೋರಿಸಿದ್ದು.......

ಬರಿಯ ಮೋಸಾನ ........?


ಕನಸಲ್ಲಿ ಬಂದು ಕಾಡಿದ್ದು....
ತುಸು ಪ್ರೀತಿಗಾಗಿ ಬೇಡಿದ್ದು.....
ನೋವಿನಲ್ಲೂ ಜೊತೆ ಕೇಳಿದ್ದು.....
ನಲಿವಿನಲ್ಲೂ ಪಾಲು ನೀಡಿದ್ದು....

ಬರಿಯ ಮೋಸಾನ........?


ಆತ್ಮೀಯತೆಯ ಸೋಗು ಹಾಕಿದ್ದು.....
ಸ್ನೇಹಕ್ಕೆ ಪ್ರೀತಿಯ ಹೆಸರು ನೀಡಿದ್ದು.....
ಪ್ರೀತಿಗೆ ಕೆಟ್ಟ ಅರ್ಥ ಕೊಟ್ಟಿದ್ದು.......
ವಿರಸಕ್ಕೆ ಹೊಸ ಕಾರಣ ಹುಡುಕಿದ್ದು.....

ಬರಿಯ ಮೋಸಾನ......?


ನಿನ್ನ ಹೆಸರೇ ಮೋಸಾನ......?


Sep 23, 2009

ಮಂಗಳೂರು ದಸರಾ.......

ಹಾಯ್ ಫ್ರೆಂಡ್ಸ್.

ನಾನು ಮಂಗಳೂರಿನವನಾಗಿ ಇಲ್ಲಿ ನಡೆಯುವ ದಸರಾಕ್ಕೆ ನಿಮ್ಮನ್ನೆಲ್ಲಾ ಕರೆಯಲು ಆಗದೆ ಇದ್ದರು , ನಿಮಗೆ ಇಲ್ಲಿಯ ಜ್ಹಲಕ್ ತೋರಿಸದೇ ಇದ್ದರೆ ಹ್ಯಾಗೆ ಅಲ್ಲವೇ.......
ಇಲ್ಲಿಯ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುವ ದಸರಾದ ಕೆಲವು ಫೋಟೋಗಳನ್ನು ನಿಮಗಾಗಿ ಇರಿಸಿದ್ದೀನೆ.... ಮುಂದಿನ ದಸರಾಕ್ಕೆ ನಿಮಗೆಲ್ಲ ಆಹ್ವಾನ ನೀಡುತ್ತೇನೆ....... ಈ ಸಲಕ್ಕೆ ಇದರಲ್ಲೇ ತ್ರಪ್ತಿಪಡಿಸುತ್ತಿದ್ದೇನೆ.....
ಇದು ದೇವಸ್ಥಾನ ಒಳಹೊಕ್ಕಂತೆಯೇ ಕಾಣುವ ದ್ರಶ್ಯ....


ನವದೇವಿಯರನ್ನು ಪ್ರತಿಷ್ಟಾಪಿಸಿದ ಹಾಲ್ .........




ಮೊದಲಿಗೆ ಗಣರಾಜನಿಗೆ ವಂದಿಸಿರಿ.........













ದೇವಿಯ ಮುಖದಲ್ಲಿನ ಸಿಟ್ಟು, ಪ್ರಶಾಂತತೆಯನ್ನು ನೋಡಿರಿ......




















ಈ ದೇವಸ್ಥಾನದಲ್ಲಿ ಇತ್ತೀಚಿಗಸ್ಥೆ ದಸರಾ ಆಚರಿಸಲು ಶುರು ಮಾಡಿದ್ದಾರೆ.... ಆದರೆ, ಇದು ಮುಂದುವರೆದ ರೀತಿ ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ....


















ಮಂಗಳೂರಿನ ಜನ ತುಂಬಾ ವ್ರತ್ತಿಪರರು, ಅವರಿಗೆ ಮನರಂಜನೆ ಬೇಕು, ಲಾಭ ಬೇಕು, ಸುಮ್ಮನೆ ಕಾಲಹರಣ ಮಾಡುವವರಲ್ಲ....ಆದ್ರೆ ದೇವರಿಗೆ ತುಂಬಾ ಹೆದರುತ್ತಾರೆ..... ದೇವರನ್ನು ತುಂಬಾ ನಂಬುತ್ತಾರೆ....





















ಇನ್ನೂ ಚಿತ್ರಗಳಿವೆ......ಅದನ್ನ ನಾಳೆಗಾಗಿ ಉಳಿಸಿಕೊಂಡಿದ್ದೇನೆ......ಕಾಯುತ್ತಿರಿ ತಾನೇ.....

Sep 21, 2009

ಹೀಗೊಂದು ಲವ್ ಸ್ತೋರಿಗಳ ಎಂಡ್.........

೧. ಹುಡುಗ ಎಂದ..... ಐ ಲವ್ ಯು......
ಹುಡುಗಿ ಅಂದಳು...... ಐ ಆಮ್ ಸಾರೀ ......
( ಅಲ್ಲಿಗೆ......ಹುಡುಗ ಸುಖವಾಗಿದ್ದ...........)


೨. ಹುಡುಗ ಅಂದ .. ಐ ಲವ್ ಯು......
ಹುಡುಗಿ ಅಂದಳು.........ಓಕೆ , ಮದುವೆಯಾಗೋಣ.......
( ಇನ್ನೇನು ಸ್ಟೋರಿ ಇರತ್ತೆ, ಅವನ ಹಣೆಬರಹ ಬಿಡಿ )


೩. ಹುಡುಗ ಹುಡುಗಿ ತುಂಬಾ ಪ್ರೀತಿಸಿ ಯಾರಿಗೂ ಹೇಳದೆ ಕೇಳದೆ ಬೈಕಿನಲ್ಲಿ ಊರು ಬಿಟ್ಟು
ಹೊರಡುತ್ತಾರೆ.....ಕಾಡ ರಸ್ತೆ.......ದೂರ ದೂರದವರೆಗೂ ಬೆಳಕಿಲ್ಲಾ......ಕದ್ದು ತಂದ ಬೈಕ್ ಸಹ ' ಡುರ್...
...ಡುರ್ ' ಎನ್ನುತ್ತಾ ನಿಂತು ಬಿಡತ್ತೆ....ಇಬ್ಬರು ಗಾಬರಿಯಾಗುತ್ತಾರೆ....ಹುಡುಗನಿಗೆ ಪೆಟ್ರೋಲ್
ಖಾಲಿಯಾಗಿರಬೇಕು ಅನಿಸತ್ತೆ......ಆ ಕಡೆ , ಈ ಕಡೆ ನೋಡುತ್ತಾನೆ..... ಏನೂ ಸಿಗಲ್ಲ.... ಜೇಬಿನಲ್ಲಿ
ಸಿಗರೇಟು ಸೇದಲು ತಂದಿದ್ದ ಲೈಟರ್ ನೆನಪಾಗುತ್ತದೆ..... .. ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ
ಲೈಟರ್ ಹತ್ತಿಸಿ ಪೆಟ್ರೋಲ್ ಖಾಲಿಯಾಗಿದೆಯಾ ಅಂತ ನೋಡುತ್ತಾನೆ..............................
..........................................................................................................................

..................................................
( ಮುಂದೆನಿರತ್ತೆ ಸ್ಟೋರಿ.....ಬರಿ ಬೂದಿ ಸಿಗಬಹುದು ಅಷ್ಟೆ ............)

---ಎಲ್ಲಿಂದಲೋ ಕದ್ದ ಕಥೆಗೆ ಉಪ್ಪು ಖಾರ ಹಚ್ಚಿ ಹೇಳಿದ್ದೇನೆ

Sep 16, 2009

'ಕಾಂಜೀವರಂ' ಕಥೆ.......!

ಇವತ್ತು ನಾನು ಕೇಳಿದ ಒಂದು ಸಿನಿಮಾದ ಬಗ್ಗೆ ಬರೆಯುತ್ತಿದ್ದೇನೆ.. ಸಿನಿಮಾದ ಹೆಸರು 'ಕಾಂಜೀವರಂ' . ಇದರಲ್ಲಿ ಮಾಡಿದ ಅಪ್ಪನ ಪಾತ್ರಕ್ಕೆ ನಮ್ಮವರೇ ಆದ ಪ್ರಕಾಶ್ ರೈ ಅವರಿಗೆ ಬೆಸ್ಟ್ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕದೆ... ಆ ಚಿತ್ರದ ಕಥೆ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ.... ಕಥೆ ಹೀಗಿದೆ..... ಕೇಳಿ...... .


ಈ ಚಿತ್ರ ಅಪ್ಪ ಮತ್ತು ಮಗಳ ನಡುವಿನ ಪ್ರೀತಿಯ ಬಗ್ಗೆ ಇದೆ... ಅಪ್ಪ ಕಾಂಜೀವರಂ ರೇಷ್ಮೆ ಸೀರೆಗಳನ್ನು ನೇಯುವ ಬಡ ನೇಕಾರ. ಅವನಿಗೆ ಸ್ವಂತ ಮಗ್ಗವಿಲ್ಲ... ಅಲ್ಲಿ ನೇಕಾರರನ್ನು ದಿನಗೂಲಿಯ ಮೇಲಿಟ್ಟು ಸೀರೆ ನೆಯಿಸಿಕೊಳ್ಳುವ, ಬಹಳ ಕಠಿಣವಾದ ಜಮೀನ್ದಾರಿ ಪದ್ಧತಿ ಇದೆ. ಮಗಳು ದೊಡ್ಡವಳಾದಾಗ ಅವಳ ಮದುವೆಗೆ ಏನೇನು ಕೊಡುತ್ತೇನೋ ಅದನ್ನ ಎಲ್ಲರ ಎದುರಿಗೂ ಹೋಳೋದು ಅಲ್ಲಿನ ರಿವಾಜು.... ಒಂದು ಅರ್ಥದಲ್ಲಿ ಅದು ಆಣೆ ಮಾಡಿದಂತೆ. ಬಡ ಅಪ್ಪನಿಗೆ ಮಗಳ ಮೇಲೆ ತುಂಬಾ ತುಂಬಾ ಪ್ರೀತಿ. ದೊಡ್ಡವಳಾದ ಮಗಳನ್ನು ಕೂಡಿಸಿ ಆರತಿ ಮಾಡುವಾಗ ಈ ಬಡ ಅಪ್ಪ ಎಲ್ಲರ ಎದುರಿಗೆ ' ಮಗಳೇ, ನಿನ್ನ ಮದುವೆಯಲಿ ನಿನಗೆ ಕಾಂಜೀವರಂ ಸೀರೆ ಉಡಿಸಿ ಕಳಿಸುತ್ತೇನೆ' ಎಂದು ಬಿಡುತ್ತಾನೆ... ಇವನ ನೆಂಟರಿಷ್ಟರು ಇವನನ್ನು ತುಂಬ ಬೈಯುತ್ತಾರೆ, ಇಷ್ಟು ಬಡತನದಲ್ಲಿ ರೇಷ್ಮೆ ಸೀರೆ ಕೊಡಿಸುವುದು ಸಾದ್ಯದ ಮಾತಾ ಎಂದು ಇವನನ್ನು ಕೇಳುತ್ತಾರೆ.... ಬಡ ಅಪ್ಪ, ಮಗಳ ಮೇಲಿನ ಪ್ರೀತಿಯಿಂದ ಅದನ್ನ ಮಾಡಿ ತೋರಿಸುವ ಹಠ ತೊಡುತ್ತಾನೆ.... ಅವನಿಗೂ ಗೊತ್ತಿರುತ್ತೆ, ಜೀವಮಾನವಿಡಿ ದುಡಿದರೂ ತನ್ನಿಂದ ಮಗಳಿಗೆ ಕಾಂಜೀವರಂ ರೇಷ್ಮೆ ಸೀರೆ ಕೊಡಿಸೋಕ್ಕೆ ಆಗಲ್ಲ ಅಂತ.....ಆದರೂ ಅವನು ಹಣ ಕೂದಿಡೋಕೆ ಶುರು ಮಾಡುತ್ತಾನೆ. ಅದು ಸಾಕಾಗದೆ ಇದ್ದಾಗ ಕಳ್ಳತನ ಮಾಡಲು ಯೋಚಿಸುತ್ತಾನೆ..... ರಹಸ್ಯವಾಗಿ ಒಬ್ಬ ಕಾರ್ಪೆಂಟರ್ ಹಿಡಿದು ಒಂದು ಕೈಮಗ್ಗ ಮಾಡಿಸಿ ಅದನ್ನ ಯಾರಿಗೂ ತೋರಿಸದೇ ಇರುತ್ತಾನೆ....... ಜಮೀನ್ದಾರನಲ್ಲಿ ಪ್ರತಿದಿನ ಕೆಲಸ ಮಾಡಿ ಬರುವಾಗ ಸ್ವಲ್ಪ ರೇಷ್ಮೆಯನ್ನು ಕದ್ದು ಬಾಯಿಯಲ್ಲಿ ಇಟ್ಟುಕೊಂಡು ಬರುತ್ತಾನೆ...ಆ ಕದ್ದು ತಂದ ನೂಲಿನಿಂದ ಮಗಳಿಗಾಗಿ ಸೀರೆ ನೇಯಲು ಶುರು ಮಾಡುತ್ತಾನೆ... ಊರಲ್ಲಿ ಶುರುವಾದ ಕಾರ್ಮಿಕ ಸಂಘದ ನಾಯಕ ಇವನೇ ಆಗಿ ಧಣಿಗಳ ವಿರುದ್ದ ಹೋರಾಟಕ್ಕೆ ಇಳಿಯುತ್ತಾನೆ... ಈ ಮದ್ಯೆ ಯಾರದೋ ಕೊಲೆ ನಡೆದು ಇವನು ಜೈಲಿಗೆ ಹೋಗುತ್ತಾನೆ... ಅರ್ಧ ನೇಯ್ದ ಸೀರೆ ಹಾಗೆ ಉಳಿಯುತ್ತದೆ... ಮುಂದೆ ಮಗಳು ಕಾಯಿಲೆಗೆ ಬೀಳುತ್ತಾಳೆ, ಅಪ್ಪನಿಗೆ ಜೀವಾವದಿ ಶಿಕ್ಷೆ. ಕೊನೆಗೆ ಅಪ್ಪ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬರುವ ಹೊತ್ತಿಗೆ ಮಗಳು ಸತ್ತು ಹೋಗುತ್ತಾಳೆ....ಆದರೆ ಮನೆಯ ಒಳಗೆ ರಹಸ್ಯವಾಗೆ ನೇಯ್ದು ಇಟ್ಟಿದ್ದ ಅರ್ಧ ರೇಷ್ಮೆ ಸೀರೆ ಹಾಗೆ ಇರುತ್ತದೆ.....ಅದನ್ನು ತಂದು ಮಗಳ ಶವದ ಮೇಲೆ ಹೊದೆಸಲು ಪ್ರಯತ್ನ ಮಾಡುತ್ತಾನೆ....ಮುಖ ಮುಚ್ಕಾಲಿಕ್ಕೆ ಹೋದರೆ ಕಾಲಿಗೆ ಸಾಕಾಗ್ತಾ ಇರಲಿಲ್ಲ ....ಕಾಲು ಮುಚ್ಕಾಲಿಕ್ಕೆ ಹೋದರೆ ಶವದ ಮುಖ ತೆರೆದುಕೊಳ್ಳುತ್ತಿತ್ತು....ಮಗಳಿಗೆ ಕಾಂಜೀವರಂ ಸೀರೆ ಉಡಿಸಿ ಕಲಿಸುವ ಅಪ್ಪನ ಕನಸು ಹಾಗೆ ಉಳಿದು ಹೋಗುತ್ತದೆ...


ಅಪ್ಪನ ಪಾತ್ರದಲ್ಲಿ ನಮ್ಮ ಪ್ರಕಾಶ್ ರೈ ಇದ್ದಾರೆ.... ಪ್ರಿಯದರ್ಶನ್ ನಿರ್ದೇಶನ ಇದೆ..... ಇಷ್ಟು ಒಳ್ಳೆ ಕಥೆ ಇರುವ ಸಿನೆಮಾಗಳು ನಮ್ಮ ಊರಲ್ಲಿ ಬರೋದೇ ಇಲ್ಲ... ಬಂದರೂ ನೋಡೋರು ಇರಲ್ಲ.... ನಿಮಗೇನಾದರೂ ನೋಡುವ ಅವಕಾಶ ಸಿಕ್ಕರೆ, ನನಗೆ ದಯವಿಟ್ಟು ತಿಳಿಸಿ...... ಇದೆ ಸಿನೆಮಾದ ಮಾಡಿದ ಪಾತ್ರಕ್ಕಾಗಿ ಪ್ರಕಾಶ್ ರೈ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.... ಅಭಿನಂದನೆಗಳು ಪ್ರಕಾಶ್.....