Nov 13, 2013

ಸರಿ-ತಪ್ಪು....???      ಫೋನ್ ರಿಂಗಾಗುತ್ತಿತ್ತು.... ಮುಖ್ಯಮಂತ್ರಿಗಳ ಖಾಸಗಿ ನಂಬರಿನಿಂದ ಬರುತ್ತಿತ್ತು ಕಾಲ್.... ಸಾಹೇಬರು ಸ್ನಾನಕ್ಕೆ ಹೋಗಿದ್ದರಿಂದ ನಾನೇ ಉತ್ತರಿಸಿದೆ..." ನಮಸ್ಕಾರ ಸರ್, ನಾನು ಸಾಹೇಬರ ಪಿ.ಎ. ಮಾತಾಡ್ತಾ ಇರೋದು... ಸಾಹೇಬರು ಸ್ನಾನಕ್ಕೆ ಹೋಗಿದ್ದಾರೆ... ಇಗೋ, ಬಂದರು ಸಾರ್ ಈಗ... ಈಗಲೇ ಕೊಟ್ಟೆ.... " ಎಂದು ಫೋನ್ ಬಾಯಿಗೆ ಕೈ ಅಡ್ಡ ಇಟ್ಟು " ಸಿ.ಎಮ್. ಸಾಹೇಬ್ರ ಫೋನ್ " ಎಂದು ನಮ್ಮ ಸಾಹೇಬರಿಗೆ ಕೊಟ್ಟೆ... ಅವರು ಶಾಂತವಾಗಿಯೇ ಫೋನ್ ತೆಗೆದುಕೊಂಡು ಒಳಗೆ ಹೋದರು... ಈಗಷ್ಟೇ ಸ್ನಾನವಾಗಿದ್ದ ಕಾರಣ ನಮ್ಮ ಸಾಹೇಬರು ಪ್ರಶಾಂತವಾಗಿ ಕಾಣುತ್ತಿದ್ದರು... ನಾನು ಅವರ ಬಳಿ ಸುಮಾರು ಮೂರು ವರ್ಷದಿಂದ ಕೆಲ್ಸ ಮಾಡ್ತಾ ಇದ್ದೇನೆ... ಅವರು ನಗರಾಭಿವ್ರದ್ಧಿ ಸಚಿವರಾಗಿದ್ದರಿಂದಲೂ ನಾನೇ ಅವರ ಪಿ.ಎ.....

        ನಗರವನ್ನಷ್ಟೆ ಅಭಿವ್ರದ್ಧಿ ಮಾಡಿದರೇ ಹೊರತು ಅವರ ಅಭಿವ್ರದ್ಧಿಯೂ ಆಗಲಿಲ್ಲ, ನನ್ನ ಅಭಿವ್ರದ್ಧಿಯೂ ಆಗಲಿಲ್ಲ... ಅವರ ಪ್ರಾಮಾಣಿಕತೆ ರಾಜ್ಯಕ್ಕೇ ಮಾದರಿಯಾಗಿತ್ತು....  "ತಗೊಳ್ಳಿ ಫೋನ್... ಒಬ್ಬರು ಎಮ್.ಎಲ್.ಎ. ಬರ್ತಾರೆ... ಅವರಿಗೇನೋ ಜಿಲ್ಲಾಧಿಕಾರಿಯಿಂದ ಸಮಸ್ಯೆ ಇದೆಯಂತೆ... ಅದರ ಬಗ್ಗೆ ವರದಿ ತರಿಸಿಕೊಳ್ಳಿ... ಮುಖ್ಯಮಂತ್ರಿಗಳೇ ವಶೀಲಿ ಮಾಡ್ತಾ ಇದ್ದಾರೆ ಅಂದರೆ ನಿಜ ಇರಬಹುದು.... ಅರ್ಧ ಘಂಟೆಯಲ್ಲಿ ಬರ್ತಾರೆ ಅವರು... ಅಷ್ಟರಲ್ಲಿ ವರದಿ ತರಿಸಿಕೊಳ್ಳಿ..." ಎಂದವರೇ ಒಳಗೆ ಹೋಗಲು ರೆಡಿಯಾದರು... ನಾನು ಅಳುಕುತ್ತಲೇ " ಸಾರ್.." ಎಂದೆ..... ತಿರುಗಿ ನೋಡಿ " ಏನು ಹೇಳಿ ..? " ಕೇಳಿದರು... ನಾನು ಅಳುಕುತ್ತಲೇ " ಹದಿನೈದು ದಿನದ ಹಿಂದೆ ನಿಮ್ಮ ಊರಿನ ವ್ರದ್ದಾಶ್ರಮದವರು ಬಂದಿದ್ದರಲ್ಲಾ... ಅವರಿಗೆ ಐದು ಲಕ್ಷ ಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದೀರಿ.. " ಎಂದೆ.... " ಒಹ್...ಹೌದಲ್ವಾ..? ಮರೆತಿದ್ದೆ... ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಕೊಡಲು ಆಗಲ್ಲಾ ಅಂತ ಇದ್ದಾರೆ... ಹೇಗೆ ಅಡ್ಜಸ್ಟ್ ಮಾಡೋದೋ ಗೊತ್ತಾಗ್ತಾ ಇಲ್ಲ... ಆದರೂ ಕೊಡೋಣ... ಯಾರಾದರು ದಾನಿಗಳು ಸಿಗ್ತಾರಾ ನೋಡೋಣ.... ಹೇಗಾದರು ಮಾಡಿ ಕೋಡಲೇ ಬೇಕು.... ನೆನಪಿಸಿ ಒಳ್ಳೆ ಕೆಲ್ಸ ಮಾಡಿದ್ರಿ " ಎನ್ನುತ್ತಲೇ ಒಳಗೆ ಹೋದರು...

    ನನಗೆ ಮನಸ್ಸು ಹಗುರವಾಯಿತು... ಆ ದಿನ ವ್ರದ್ಧಾಶ್ರಮದ ಮುಖ್ಯರು ಬಂದಿದ್ದಾಗ ನಮ್ಮ ಸಾಹೇಬರು ಅದು ಹೇಗೆ ವಾಗ್ದಾನ ಮಾಡಿದರೋ ತಿಳಿಯದು.... ಯಾರಿಂದಲೂ ಲಂಚ ಮುಟ್ಟದ ಇವರು ಇಷ್ಟೊಂದು ಹಣ ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದು ನನ್ನ ಅಚ್ಚರಿಯಾಗಿತ್ತು.... ಒಮ್ಮೆ ಗಣಿ ಧಣಿಗಳ ಟೌನ್ ಶಿಪ್ ವಿಚಾರದಲ್ಲಿ ಇಲಾಖಾ ಮಂಜೂರಾತಿಗಾಗಿ ಒಂದು ಕೋಟಿ ಕೊಡಲು ಬಂದಿದ್ದರು... ಹಣದೊಂದಿಗೆ ಬಂದಿದ್ದ ಅವರನ್ನು ನಮ್ಮ ಸಾಹೇಬರು ಸಾಗಹಾಕಿದ್ದರು... ಪೂರ್ತಿ ಕಾನೂನು ಪ್ರಕಾರವೇ ಇರುವ ಹಾಗೆ ನೋಡಿಕೊಂಡಿದ್ದರು.... ತಮ್ಮ ಕುಟುಂಬವನ್ನು ಅಧಿಕಾರದ ಹತ್ತಿರವೂ ಸುಳಿಯಲು ಬಿಡುತ್ತಿರಲಿಲ್ಲ.... ಒಮ್ಮೆ ಅವರ ಮಗನ ಬೈಕ್ ನ್ನ ಪೋಲಿಸರು ಹಿಡಿದಿದ್ದಾಗ ಫೈನ್ ಕಳುಹಿಸಿ ಕೊಟ್ಟಿದ್ದರು ನನ್ನ ಕೈಲಿ... 

    ಇದೆಲ್ಲಾ ಯೋಚಿಸುತ್ತಿರುವಾಗಲೇ  ನನಗೆ ಸಾಹೇಬರು ತರಿಸಿಕೊಳ್ಳಲು ಹೇಳಿದ್ದ ವರದಿ ಬಂದಿತ್ತು... ಅದರಲ್ಲಿ ಜಿಲ್ಲಾಧಿಕಾರಿಗಳ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ... ಅವರ ಎಲ್ಲಾ ಕೆಲಸಗಳೂ ಕಾನೂನಿನ ಪ್ರಕಾರ ಸರಿಯಾಗಿಯೇ ಇದ್ದವು... ಆದರೂ ಎಮ್.ಎಲ್.ಎ. ಅವರಿಗೆ ಎನು ಸಮಸ್ಯೆಯೆಂದು ತಿಳಿಯಲಿಲ್ಲ.... ಅಷ್ಟರಲ್ಲೇ ಅವರೇ ಬಂದರು... ಅವರಿಗೆ ಕುಳ್ಳಿರಿಸಿ ಸಾಹೇಬರಿಗೆ ಸುದ್ದಿ ಮುಟ್ಟಿಸಿದೆ.... ಕೂಡಲೇ ಹೊರಬಂದರು ನಮ್ಮ ಸಾಹೇಬರು... ನಾನು ಹೊರ ಹೋಗಲು ತಯಾರಾದೆ... " ಎಲ್ಲಿ ಹೋಗ್ತೀರಾ..? ಇಲ್ಲೇ ಇರಿ ..ಪರ್ವಾಗಿಲ್ಲ...." ಎಂದರು ನಮ್ಮ ಸಾಹೇಬರು... ನಾನು ಅಲ್ಲೇ ಕುಳಿತೆ.... " ಹೇಳಿ, ಹೇಗೆ ನಡಿತಾ ಇದೆ ನಿಮ್ಮ ಕ್ಷೇತ್ರದ ಕಾರ್ಯಗಳು... ಅನುದಾನ ಮಂಜುರಾಗಿದೆ ತಾನೆ..? ಏನಾದರು ತೊಂದರೆ ಇದೆಯಾ..? ನಿಮ್ಮ ಜಿಲ್ಲೆಯ ಉಸ್ತುವಾರಿ ನನ್ನದೇ ಆದ್ದರಿಂದ ಏನೇ ಕಷ್ಟ ಇದ್ದರೂ ನನಗೆ ಹೇಳಿ... " ಕೇಳಿದರು ಮಂತ್ರಿಗಳು... 

     ಎಮ್. ಎಲ್.ಎ. ಸಾಹೇಬರು ಆ ಕಡೆ, ಈ ಕಡೆ ನೋಡುತ್ತಾ ” ತುಂಬಾ ತೊಂದರೆ ಇದೆ ಸರ್, ಮುಖ್ಯ ತೊಂದರೆ ಇರೋದು ನಮ್ಮ ಜಿಲ್ಲಾಧಿಕಾರಿಗಳಿಂದ ... ಅವರನ್ನು ಬದಲಾಯಿಸಿ... " ಎಂದರು.... ನಮ್ಮ ಸಾಹೇಬರು ನನ್ನ ಕಡೆ ನೊಡಿದರು.... ನನಗೆ ಅರ್ಥ ಆಯ್ತು.... ಅವರು ಕೇಳಿದ್ದ ವರದಿಯನ್ನ ಅವರ ಕೈಯಲ್ಲಿಟ್ಟೆ... ಅದರ ಮೇಲೆ ಕಣ್ಣಾಡಿಸಿದರು... " ಹೌದಾ... ಸ್ವಲ್ಪ ವಿವರವಾಗಿ ಹೇಳ್ತೀರಾ... ಏನು ತೊಂದರೆ ಅಂತ..? " ಕೇಳಿದರು ಮಂತ್ರಿಗಳು.... " ಅವರ ಕಿರುಕುಳ ತುಂಬಾ ಇದೆ ಸರ್, ಭೂಮಿ ಪರಿವರ್ತನೆ ಮಾಡೋದರಲ್ಲಿ, ಕಟ್ಟಡ ಪರವಾನಗೆ ಕೊಡೋದೇ ಇಲ್ಲಾ ಸಾರ್... ನಾವು ಆಡಳಿತ ಪಕ್ಷದವರಲ್ವಾ ಸರ್, ನಮ್ಮ ಕಾರ್ಯಕರ್ತರಿಗೆ ಕೆಲಸ ಮಾಡಿಕೊಡದೇ ಇದ್ರೆ ಮತ್ತೆ ನಮಗೆ ಓಟು ಹಾಕ್ತಾರಾ ಸಾರ್...? ಚಿಕ್ಕ ಪುಟ್ಟ ಗಲಾಟೆಯಾದರೂ ನಮ್ಮ ಜನರನ್ನ ಜೈಲಿಗೆ ಹಾಕಲು ಹೇಳ್ತಾರೆ.. ಗೂಂಡಾ ಕಾಯ್ದೆ ಹೇರಲು ಹೇಳ್ತಾರಂತೆ.... ಮರಳು ಉದ್ದಿಮೆದಾರರಂತೂ ಕಂಗಾಲಾಗಿ ಹೋಗಿದ್ದಾರೆ... ವಾಹನಗಳಿಗೆ ಜಿ.ಪಿ.ಎಸ್ ಹಾಕಬೇಕಂತೆ... ಇಲ್ಲದಿದ್ದರೆ ಸೀಜ್ ಮಾಡ್ತಾರಂತೆ... ಮರಳು ಉದ್ದಿಮೆಯವರು ಪಕ್ಕದ ರಾಜ್ಯಕ್ಕೆ ಮರಳು ಮಾರೋ ಹಾಗಿಲ್ಲವಂತೆ... ಅವರಿಂದಲೇ ನಮ್ಮ ಪಕ್ಷಕ್ಕೆ ಕೋಟಿಗಟ್ಟಲೆ ಫಂಡ್ ಸಿಗೋದು ಸರ್... ಅವರಿಗೇ ತೊಂದರೆ ಕೊಟ್ಟರೆ ಉಳಿಗಾಲ ಇದೆಯಾ ಸರ್..? " ಒಂದೇ ಉಸಿರಿಗೆ ಎಲ್ಲಾ ಹೇಳಿದರು ಎಮ್.ಎಲ್.ಎ.... 

   ಟೇಬಲ್ ಮೇಲೆ ಇಟ್ಟಿದ್ದ ನೀರನ್ನು ಕುಡಿದ ನಮ್ಮ ಸಾಹೇಬರು, " ಓಹ್...ಹೌದಾ... ಇಷ್ಟೆಲ್ಲಾ ತೊಂದರೆ ಇದ್ದರೂ ಯಾಕೆ ನನ್ನ ಗಮನಕ್ಕೆ ಬಂದಿಲ್ಲ ಇನ್ನೂ... ಬಿಡಿ.. ನಾನು ಮಾತಾಡುತ್ತೇನೆ ಅವರಲ್ಲಿ...ಎಲ್ಲಾ ಸರಿಯಾಗತ್ತೆ.... ನೀವೇನು ಚಿಂತೆ ಮಾಡಬೇಡಿ.... ನಿಮ್ಮ ಪಕ್ಕದ ಕ್ಷೇತ್ರದ ಚುನಾವಣೆಯ ಮೇಲೆ ಗಮನ ಹರಿಸಿ.... ನಾನೆಲ್ಲಾ ಸರಿ ಮಾಡ್ತೇನೆ.." ಎಂದರು.... ಎಮ್. ಎಲ್.ಎ. ಸಾಹೇಬರು ಇನ್ನೂ ಹತ್ತಿರ ಬಂದು " ಸರ್, ಹಾಗೆನ್ನಬೇಡಿ, ಅವರನ್ನ ಬದಲಾಯಿಸಿ... ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ... ನಮ್ಮದೇ ಜನ ನನ್ನನ್ನು ಕೆಳಗಿಳಿಸುತ್ತಾರೆ.... ಸರ್, ಮರಳು ಉದ್ದಿಮೆದಾರರೆಲ್ಲಾ ಸೇರಿ ಐದು ಲಕ್ಷ ಕೊಟ್ಟಿದ್ದಾರೆ... ಅದನ್ನ ತೆಗೆದುಕೊಳ್ಳಿ... ಜಿಲ್ಲಾಧಿಕಾರಿಗಳ ಬದಲಾವಣೆ ಮಾಡಿ... ನನ್ನ ಕಷ್ಟ ಅರ್ಥ ಮಾಡಿಕೊಳ್ಳಿ ಸರ್... ಅವರ ಸಮಸ್ಯೆ ನಾನು ಬಗೆಹರಿಸದಿದ್ದರೆ ಅವರು ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಲ್ಲ ಸರ್... " ಎನ್ನುತ್ತಾ ಕೈ ಮುಗಿದರು.... ನಮ್ಮ ಸಾಹೇಬರಿಗೆ ಅಯೋಮಯ ಪರಿಸ್ಥಿತಿ.... 

   ತಮ್ಮದೇ ಪಕ್ಷದ ಶಾಸಕರನ್ನು ಖುಶಿಯಿಂದ ಇಡುವುದು ಸರಕಾರದ ಮತ್ತು ಮಂತ್ರಿಗಳ ಕರ್ತವ್ಯವಾಗಿತ್ತು....  ಇವರನ್ನು ಖುಶಿ ಇಡದೇ ಹೋದರೆ ಭಿನ್ನಮತೀಯ ಚಟುವಟಿಕೆ ಮಾಡುತ್ತಾರೆ... ವಿರೋಧಪಕ್ಷದವರ ಜೊತೆ ರೆಸೊರ್ಟ್ ರಾಜಕೀಯ ಮಾಡುತ್ತಾರೆ... ಒಂದು ಸರಕಾರವನ್ನೇ ಬುಡಮೇಲು ಮಾಡುತ್ತಾರೆ... ಇವರ ಸಮಸ್ಯೆ ಸರಿ ಮಾಡದಿದ್ದರೆ ಎಲ್ಲರಿಗೂ ಸಮಸ್ಯೆ ತಂದಿಡುತ್ತಾರೆ..... ನಮ್ಮ ಸಾಹೇಬರು ಈ ಎಮ್.ಎಲ್.ಎ.ಸಾಹೇಬರ ಕೆಲಸ ಮಾಡಿಕೊಟ್ಟು ಕೈ ತೊಳೆದುಕೊಂಡರೆ ಒಳ್ಳೆಯದಿತ್ತು ಅಂತ ನನಗನಿಸುತ್ತಿತ್ತು... ಆದರೆ ನಮ್ಮ ಸಾಹೇಬರು ಏನು ಯೋಚಿಸುತ್ತಾರೆ ಅನ್ನೋದು ಮುಖ್ಯವಾಗಿತ್ತು... " ಓ.ಕೆ. ನಿಮ್ಮ ಕೆಲಸ ಆಗತ್ತೆ.... ಒಂದು ಸಾರಿ ಮುಖ್ಯ ಮಂತ್ರಿಗಳ ಹತ್ತಿರ ಮಾತಾಡಿ ನಿಮ್ಮ ಕೆಲ್ಸ ಮಾಡ್ತೇನೆ, ನಿಮ್ಮನ್ನೆಲ್ಲಾ ಜೊತೆ ಕರೆದುಕೊಂಡು ಹೋಗಬೇಕಾಗತ್ತೆ.. ನೀವಿದ್ದರೆ ನಾವೆಲ್ಲಾ ಮಂತ್ರಿಗಳಾಗೋದು...ಒಂದು ನಿಮಿಷ ಇಲ್ಲೇ ಇರಿ..ಈಗ್ಲೇ ಮುಖ್ಯ ಮಂತ್ರಿಗಳ ಜೊತೆ ಮಾತಾಡಿ ಬರುತ್ತೇನೆ " ಎಂದವರೇ ನನ್ನ ಕೈಲಿದ್ದ ಫೋನ್ ತೆಗೆದುಕೊಂಡು ಒಳಗೆ ಹೋದರು...

     " ಸರಿ , ನೀವಿನ್ನು ಹೊರಡಿ... ನಾಳೇನೆ ಜಿಲ್ಲಾಧಿಕಾರಿ ವರ್ಗ ಆಗತ್ತೆ ಬಿಡಿ... "... ನನ್ನತ್ತ ತಿರುಗಿ.. " ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಹೇಳಿ, ಅವರ ವರ್ಗಾವಣೆ ಬಗ್ಗೆ..." ಎಂದರು... ಎಮ್.ಎಲ್.ಎ ಸಾಹೇಬರ ಮುಖ ಊರಗಲ ಆಯ್ತು... " ಧನ್ಯವಾದ ಸರ್, ನಾನಿನ್ನು ಹೊರಟೆ " ಎಂದವರೇ ಹೊರಡಲು ಅನುವಾದರು.... ಇನ್ನೇನು ಬಾಗಿಲ ಬಳಿ ಹೋಗಿಲ್ಲ ... ಮಂತ್ರಿಗಳು " ಅದೇನು ಎಮ್.ಎಲ್.ಎ. ಸಾಹೇಬ್ರೆ... ಆಡಿದ ಮಾತು ಮರೆತು ಹೋಯ್ತಾ..? ಅದೇ ಐದು ಲಕ್ಷ ಕೊಡ್ತೇನೆ ಅಂದಿದ್ರಲ್ಲಾ...? ಅದನ್ನ ಕಳಿಸಿ ಕೊಡಿ..." ಎಂದರು... ಎಮ್.ಎಲ್.ಎ. ಸಾಹೇಬರು ನಗು ನಗುತ್ತಾ " ಈಗಲೇ ಕಳಿಸುತ್ತೇನೆ.. ಕಾರಿನಲ್ಲಿದೆ ಸರ್.." ಎನ್ನುತ್ತಾ ಹೊರ ಹೋದರು....ನನಗೆ ಶಾಕ್... ಎಂದೂ ಹಣಕ್ಕಾಗಿ ಏನೂ ಮಾಡದ ನಮ್ಮ ಸಾಹೇಬರು ಹಣಕ್ಕಾಗಿ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿಯನ್ನು ವರ್ಗ ಮಾಡಿದರಾ..? ಹಣದ ಮುಂದೆ ತಮ್ಮ ಪಕ್ಷದ ಭವಿಷ್ಯ, ತಮ್ಮ ಭವಿಷ್ಯದ ಸಲುವಾಗಿ ತಮ್ಮತನವನ್ನೇ ಮಾರಿಕೊಂಡರಾ...? ಉತ್ತರವಿರದ ತುಂಬಾ ಪ್ರಶ್ನೆಗಳಿದ್ದವು... 

    ಎಮ್.ಎಲ್.ಎ ಸಾಹೇಬರ ಡ್ರೈವರ್ ಸೂಟ್ ಕೇಸ್ ನೊಂದಿಗೆ ಒಳಗೆ ಬಂದ... ಮಂತ್ರಿ ಸಾಹೇಬರ ಟೇಬಲ್ ಹತ್ತಿರ ಇಟ್ಟು ಹೊರಟು ಹೋದ ಆತ... ನನ್ನತ್ತ ತಿರುಗಿದ ಮಂತ್ರಿಗಳು " ಏನ್ ಹಾಗೆ ನೋಡ್ತಾ ಇದೀರಾ...? ಇವರ್ಯಾಕೆ ಹಣ ತೆಗೆದುಕೊಂಡರು ಅಂತಾನಾ...? ನೋಡಿ, ನಾನು ಇವರ ಕೆಲಸ ಮಾಡದೇ ಇದ್ದರೆ , ಮುಖ್ಯ ಮಂತ್ರಿಗಳ ಹತ್ತಿರ ಹೋಗ್ತಾರೆ.. ಇನ್ನೂ ಹೆಚ್ಚಿನ ಹಣ ಕೊಟ್ಟು ಅವರ ಕೆಲ್ಸ ಮಾಡಿಸಿಕೊಳ್ಳುತ್ತಾರೆ... ಹಣ ಮುಖ್ಯ ಅಲ್ಲ ಇಲ್ಲಿ... ಅವರ ಕೆಲಸ ಮಾಡದೇ ಇದ್ರೆ , ನಮ್ಮನ್ನೆಲ್ಲಾ ಸಪೋರ್ಟ್ ಮಾಡೊದಿಲ್ಲ... ಅಧಿಕಾರ ಇಲ್ಲದೇ ಜನರ ಕೆಲಸ ಮಾಡೋದು ಕಷ್ಟ ...ಇಷ್ಟಕ್ಕು ನಾವು ಜಿಲ್ಲಾಧಿಕಾರಿ ಬದಲು ಮಾಡುತ್ತಿದ್ದೇವೋ ಹೊರತು ಕಾನೂನಿನ ವಿರುದ್ಧ ನಡೆಯಿರಿ ಅಂತ ಜಿಲ್ಲಾಧಿಕಾರಿಗೆ ಹೇಳಿಲ್ಲವಲ್ಲ... ಇನ್ನೊಂದು ವಿಷ್ಯ ಈ ಹಣವನ್ನು ಆ ವ್ರದ್ಧಾಶ್ರಮಕ್ಕೆ ಕೊಟ್ಟು ಬಿಡಿ... ಅವರಿಗೆ ಕೊಡಬೇಕು ಅಂತಾನೆ ನಾನು ಇವರಿಂದ ಹಣ ಪಡೆದದ್ದು...ಅದೂ ಅಲ್ಲದೆ ನಾವೇನು ಅವರ ಹತ್ತಿರ ಹಣ ಡಿಮಾಂಡ್ ಮಾಡಿಲ್ಲವಲ್ಲ...? ಹಾವೂ ಸಾಯದೇ ಕೋಲೂ ಮುರಿಯದೇ ಕೆಲ್ಸ ಆಯಿತಲ್ಲ... ಅದೇ ಮುಖ್ಯ.... " ಎಂದರು.... ನನಗೆ ಹಿಡಿಸಲಿಲ್ಲ.... " ಸರ್, ಇದು ಪಾಪದ ಹಣ ಸರ್... " ಎಂದೆ ಅಳುಕುತ್ತಲೆ... " ನೋಡಿ, ಪಾಪದ ಹಣ, ಪುಣ್ಯದ ಹಣ ಅಂತ ಇರಲ್ಲ... ಹಣ ಎಲ್ಲರಿಗೂ ಒಂದೇ.... ಆದ್ರೆ ನಾವು ಅದನ್ನ ಹೇಗೆ ಉಪಯೋಗಿಸುತ್ತೀವಿ ಅನ್ನೋದರ ಮೇಲೆ ಇರತ್ತೆ ಅಷ್ಟೆ... ಬೇಗನೇ ಹಣ ಕಳಿಸಿ ಕೊಡಿ ಅವರಿಗೆ... " ಎಂದರು ಮಂತ್ರಿಗಳು...

    ನಾನು ಸೂಟ್ ಕೇಸ್ ತೆಗೆದುಕೊಂಡೆ... ಫೋನ್ ಬಡಿದುಕೊಳ್ಳತೊಡಗಿತು... ದಿಲ್ಲಿಯ ನಂಬರಾಗಿತ್ತು ಅದು... ನಾನೇ ಉತ್ತರಿಸಿದೆ... ಪಕ್ಷದ ಹೈ ಕಮಾಂಡ್ ಮಾತನಾಡುತ್ತಿದ್ದರು... ನಾನು ಫೋನ್ ಮಂತ್ರಿಗಳ ಕೈಗಿಟ್ಟೆ... ಅವರು ಏನೂ ಮಾತನಾಡುತ್ತಿರಲಿಲ್ಲ... ಬರೀ ಹೂಂ... ಹೂಂ...ಎನ್ನುತ್ತಿದ್ದರು... ಎರಡು ನಿಮಿಷ ಮಾತನಾಡಿ ಫೋನಿಟ್ಟರು... “" ದಿಲ್ಲಿಯಿಂದ ಫೋನ್... ಚುನಾವಣೆ ಚರ್ಚಿಗಾಗಿ ಹಣ ಕಳಿಸಬೇಕಂತೆ... ಆ ಸೂಟ್ ಕೇಸ್ನಲ್ಲಿದ್ದ ಹಣ ಅಧ್ಯಕ್ಷರಿಗೆ ಕಳಿಸಿ.... ಪ್ರತೀ ಮಂತ್ರಿಗಳಿಂದ ಹಣ ಕೇಳ್ತಾ ಇದ್ದಾರೆ.... ಕಳಿಸಿ ಬಿಡಿ ಇದನ್ನ... " ಎಂದು ಬೇಸರ ಪಡುತ್ತಲೇ ಹೇಳಿದರು... " ಸರ್, ಆ ವ್ರದ್ಧಾಶ್ರಮದವರಿಗೆ ಏನು ಹೇಳಲಿ...? " ಅಳುಕುತ್ತಲೇ ಕೇಳಿದೆ.... " ನೋಡೋಣ.. ಸ್ವಲ್ಪ ಸಮಯ ಕೇಳಿ ಅವರ ಹತ್ತಿರ... " ಎಂದು ಒಳಗೆ ಹೋದರು... ನಾನು ವ್ರದ್ಧಾಶಮಕ್ಕೆ ಫೋನ್ ಮಾಡಲು ತಯಾರಾದೆ... 

   ಕೂಡಲೇ ಹೊರ ಬಂದ ಮಂತ್ರಿಗಳು...  " ಅವರಿಗೆ ಹೇಳಿ... ಎರಡು ತಿಂಗಳು ಬಿಟ್ಟು ಬರಲಿಕ್ಕೆ ಹೇಳಿ... ಐದು ಲಕ್ಷದ ಬದಲು ಹತ್ತು ಲಕ್ಷ ಕೊಡುತ್ತೇವೆ ಅಂತ..." ನಾನು ಅವಾಕ್ಕಾದೆ... ಐದು ಲಕ್ಷ ಕೊಡಲೇ ಆಕಾಶ ಭೂಮಿ ಒಂದು  ಮಾಡ್ತಾ ಇದ್ದೇವೆ... ಹತ್ತು ಲಕ್ಷ ಕೊಡೋದು ಹೇಗೆ ಅಂತ...? ಇವರಿಗೇನಾದರೂ ತಲೆ ಕೆಟ್ಟಿದೆಯಾ..? ಅನಿಸಿತು... ಫೋನ್ ಕಟ್ ಮಾಡಿದೆ.... " ಸರ್, ಹೇಗೆ... ಎಲ್ಲಿಂದ ತರ್ತೀರಾ ಸರ್.. ಸುಮ್ಮನೆ ಯಾಕೆ ಇಲ್ಲದ ತಲೆಬಿಸಿ... ಅವರಿಗೆ ಹೇಳಿಬಿಡೋಣ... ಹಣ ಕೊಡಲು ಆಗಲ್ಲ ಅಂತ.. " ಎಂದೆ ತಲೆ ತುರಿಸಿಕೊಳ್ಳುತ್ತಾ.... " ಇಲ್ಲ..ಇಲ್ಲ... ಅವರಿಗೆ ಕೊಡೋಣ.. ಹತ್ತು ಲಕ್ಷ..." ಎಂದರು ಧೈರ್ಯದಿಂದ... " ಸರ್, ಎಲ್ಲಿಂದ ತರ್ತೀರಾ ಅಷ್ಟೊಂದು ಹಣ..?" ಕೇಳಿಯೇಬಿಟ್ಟೆ..... " ಒಂದ್ ಕೆಲ್ಸ ಮಾಡಿ, ಆ ಎಮ್.ಎಲ್.ಎ. ಜಿಲ್ಲಾಧಿಕಾರಿಯನ್ನು ಬದಲು ಮಾಡಲು ಹೇಳಿದ್ದಾರಲ್ಲ... ಬದಲಿ ಮಾಡಿ, ಆದರೆ ಅಲ್ಲಿಗೆ ರಾಜ್ಯದ ತುಂಬಾ ಪ್ರಾಮಾಣಿಕ ಮತ್ತು ಕಠಿಣ ಜಿಲ್ಲಾಧಿಕಾರಿಯನ್ನು ಹಾಕಿ.... ಮುಂದಿನ ತಿಂಗಳು ಅವರನ್ನೂ ಬದಲು ಮಾಡಲು ಕೇಳಿಕೊಂಡು ಬರ್ತಾರೆ ಮತ್ತೆ ಇದೇ ಎಮ್.ಎಲ್.ಎ... ಆವಾಗ ಅವರಿಂದ ಹತ್ತು ಲಕ್ಷ ಪಡೆದರಾಯಿತು......ಅಲ್ಲಿಯ ತನಕವಾದರೂ ಕಾನೂನಿನ ಪ್ರಕಾರ ಕೆಲಸ ನಡೆಯಲಿ.... "ಎಂದರು ನಗು ನಗುತ್ತಲೇ.....

ನನಗೂ ನಗು ಬಂತು... ಇವರು ಪ್ರಾಮಾಣಿಕರಾ...? ಅಥವಾ ಅಪ್ರಾಮಾಣಿಕರಾ ..? ತಿಳಿಯಲಿಲ್ಲ....

22 comments:

 1. "ನಾವು ಜಿಲ್ಲಾಧಿಕಾರಿ ಬದಲು ಮಾಡುತ್ತಿದ್ದೇವೋ ಹೊರತು ಕಾನೂನಿನ ವಿರುದ್ಧ ನಡೆಯಿರಿ ಅಂತ ಜಿಲ್ಲಾಧಿಕಾರಿಗೆ ಹೇಳಿಲ್ಲವಲ್ಲ"

  ಇಡಿ ಕಥೆಯ ಜೀವಾಳ ಸಂದೇಶ ಸಾರಾಂಶ ಮೇಲಿನ ಸಾಲುಗಳ ಮೇಲೆ ನಿಂತಿದೆ. ಹೊಟ್ಟೆ ಹಸಿದವರಿಬ್ಬರು.. ಅವರ ಮುಂದೆ ಎರಡು ಲಾಡುಗಳ ತಟ್ಟೆ ಇತ್ತು. ಒಂದು ತಿಂಗಳ ನಂತರ ಮೊದಲನೆಯವನ ತಟ್ಟೆಯಲ್ಲಿದ್ದ ಲಾಡು ಖಾಲಿಯಾಗಿತ್ತು.. ಎರಡನೆಯವನ ಲಾಡು ಹಾಗೆ ಇತ್ತು.. ಮೊದಲನೆಯವನ ಮುಖ ಲಾಡು ತಿಂದು ಖಾಲಿ ಮಾಡಿದ್ದರೂ ನಿಸ್ತೇಜವಾಗಿತ್ತು.. ಎರಡನೆಯವನ ಮುಖ ಗೆಲುವಾಗಿತ್ತು ಆದರೆ ತಟ್ಟೆಯಲ್ಲಿ ಲಾಡು ಹಾಗೆ ಇತ್ತು.. ಕಾರಣ ಕೇಳಿದರೆ ಮೊದಲನೆಯವ ಲಾಡು ತಿಂದು ನಂತರ ಉಪವಾಸದಿಂದ ಮತ್ತು ಹೆದರಿಕೆಯಿಂದ ಕಳಾಹೀನನಾಗಿದ್ದರೆ .. ಎರಡನೆಯವ ಲಾಡುವನ್ನು ಆ ಕೈಯಿಂದ ಈ ಕೈಗೆ ಈ ಕೈಯಿಂದ ಆ ಕೈಗೆ ಬದಲಿಸುತ್ತಾ ಕೆಳಗೆ ಬಿದ್ದ ಅದರ ಪುಡಿಯನ್ನು ತಿಂದು ಗೆಲುವಾಗಿದ್ದ.. ಈ ನೀತಿಕಥೆಯಂತೆಯೇ ಇಲ್ಲಿ ಸಾಹೇಬರು ಕಾನೂನಿನ ಚೌಕಟ್ಟಿನಲ್ಲಿಯೇ ಸಮಾಜ ಸೇವೆ ಮಾಡುತ್ತಾ ಹಾಗೆಯೇ ತಮ್ಮ ಹೈಕಮಾಂಡಿನವರನ್ನು ತೃಪ್ತಿ ಪಡಿಸುತ್ತಾ ಹಗ್ಗದ ನಡಿಗೆಯನ್ನು ಮಾಡುತ್ತಾ ಸರ್ವೇಜನ ಸುಖಿನೋಭವಂತು ಎನ್ನುವ ನೀತಿ ಪಾಲಿಸಿದ್ದಾರೆ.. ಮೇಲು ನೋಟಕ್ಕೆ ಅಪ್ರಾಮಾಣಿಕತೆ ಎನಿಸಿದರು ದಕ್ಷ ಜಿಲ್ಲಾಧಿಕಾರಿಯನ್ನು ಬೇರೆ ಕಡೆಗೆ ವರ್ಗಾಯಿಸಿ ಅಲ್ಲಿಯೂ ಕೂಡ ಕಾನೂನಿನ ಪರಿಪಾಲನೆ ಸರಿ ಮಾಡಲು ಅನು ಮಾಡಿಕೊಟ್ಟಿದ್ದಾರೆ.. ಹಾಗೆಯೇ ಆ ಜಿಲ್ಲಾಧಿಕಾರಿಯ ಜಾಗಕ್ಕೆ ಅವರಷ್ಟೇ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಕೂರಿಸಲು ಹೇಳಿದ್ದು ಅವರ ದೂರ ದೃಷ್ಟಿಯ ಪರಿಪಕ್ವತೆ ಎನ್ನಬಹುದು ಕಾರಣ ಒಂದು ವ್ಯವಸ್ಥೆ ಸ್ಥಿರವಾಗಿದ್ದಾಗ ಮುಂಬರುವ ಅಧಿಕಾರಿ ಕೂಡ ಅದೇ ದಾರಿಯಲ್ಲಿ ನಡೆಯುತ್ತಾನೆ.. ಇದು ನಿಸರ್ಗ ನಿಯಮ..

  ಸೂಪರ್ ಕಥೆ ದಿನಕರ್ ಸರ್ ಇಷ್ಟವಾಯಿತು (ಉದ್ದನೆಯ ಪ್ರತಿಕ್ರಿಯೆ ದಯಮಾಡಿ ಕ್ಷಮೆ ಇರಲಿ)

  ReplyDelete
 2. too good, Dinakar !! tumba chennagi bandide !

  ReplyDelete
 3. ಈಗಿನ ರಾಜಕೀಯ ಪರಿಸ್ತಿತಿ ಮತ್ತು ಪ್ರಮಾತಿಕತೆ ಎರಡೂ ವಿರುದ್ಧ ಶಬ್ದವಾಗಬಹುದು!. ಪ್ರಾಮಾಣಿಕತೆ ಉಳಿಸಿಕೊಳ್ಳುತ್ತೇನೆ ಎಂದು ಹೊರಡುವ ರಾಜಕಾರಣಿ ಯಾರಾದರೂ ಇದ್ದರೆ ಅಂತವನನ್ನು ಹುಚ್ಚ ಎನ್ನಬಹುದು ! , ಇಂತಹ ಸನ್ನಿವೇಶದಲ್ಲಿ ಎಷ್ಟು ಚೆನ್ನಾಗಿ ಪಾತ್ರವನ್ನು ಸೃಷ್ಟಿಸಿದ್ದೀರಿ , ನಿಮ್ಮ ಕಲ್ಪನೆಯ ಪಾತ್ರ ಕಡೆ ಪಕ್ಷ ೧೦% ಅಷ್ಟಾದರೂ ನಮ್ಮ ರಾಜಕೀಯ ವ್ಯಕ್ತ್ಹಿಗಳಲ್ಲಿರಲಿ ಎನ್ನುವುದು ಮನದಾಳದ ಬಯಕೆ . ಕತೆ ತುಂಬಾ ಚೆನ್ನಾಗಿದೆ

  ReplyDelete
 4. ದಿನಕರ್ ಸರ್,

  ನಿಮ್ಮ ಕಥೆಗಳೆಲ್ಲ ಹೇಗೆ ಓದಿಸಿಕೊಂಡು ಹೋಗುತ್ತವೆಯೆಂದರೆ ಕಥೆ ಓದುವಷ್ಟು ಹೊತ್ತು ಆ ಕಡೆ ಈ ಕಡೆ ನೋಡುವಂತಿಲ್ಲ. ಎಲ್ಲೋ ಯಾರೂ ಇಲ್ಲದ ಜಾಗದಲ್ಲಿ ಒಬ್ಬಳೇ ಕುಳಿತು ಓದುತಿದ್ದೇನೆ ಎನ್ನುವಂತೆಯೇ ಓದುತ್ತೇನೆ ನಾನು..

  ಮೊದಲೋ ಮಧ್ಯದಲ್ಲೋ ಎಲ್ಲೋ ಏಳುವ ಗೋಜಲುಗಳನ್ನು ಕೊನೆಯಲ್ಲಿ ಬಿಡಿಸಿಕೊಡುತ್ತಿದ್ದ ಎಲ್ಲಾ ಕಥೆಗಳಂತೆ ಇಲ್ಲ ಇದು ... ನನಗೂ ಕಾಡುತ್ತಿದೆ ಕಥೆ.. ಅವರು ಪ್ರಾಮಾಣಿಕರಾ ಅಥವಾ ಅಪ್ರಮಾಣಿಕರಾ ?? ಅಂತ ..
  ತುಂಬಾನೇ ಚೆನ್ನಾಗಿದೆ..

  ReplyDelete
 5. ಕತೆ ಸಕಾಲಿಕವಾಗಿದೆ..ಪುಸ್ತಕ ಹೊರಬಂದನಂತರದ ಮೊದಲ ಕತೆ ಇದಲ್ಲವೇ,,?
  ಸರ್ ಸಾಧ್ಯವಾದರೆ .....ಇವನ್ನು ಅವಾಯ್ಡ ಮಾಡಿ ರಸಭಂಗಆಗುತ್ತದೆ..

  ReplyDelete
 6. Sari tappu avaravara bhavakke.... chanakshatanadinda olleyadu maduvude sari... pramanika duddu muttalla andiddare varga hegoo aguttittu .. ivaru adhikaara kaledukollo sandarbavoo ittu.... bereyavarige tondareyagadiddare adu nyavave .. adu sarine ... chandada kathe .... 5 lakshakke end agutte andkondidde 10 lakshadavaregoo kathe eledaddu kategondu meragu .. kathegaranigoo..

  ReplyDelete
 7. Sari tappu avaravara bhavakke.... chanakshatanadinda olleyadu maduvude sari... pramanika duddu muttalla andiddare varga hegoo aguttittu .. ivaru adhikaara kaledukollo sandarbavoo ittu.... bereyavarige tondareyagadiddare adu nyavave .. adu sarine ... chandada kathe .... 5 lakshakke end agutte andkondidde 10 lakshadavaregoo kathe eledaddu kategondu meragu .. kathegaranigoo..

  ReplyDelete
 8. Appreciate your thought Dinakar. Kathe tumbaa chennaagide. Srikantha avara maathannu opputene. Saahebaru nijakkoo smartaagi handle maaDthidaare situation-na. Avara buddhivantike mecchuvanthaddu...
  And, nimma kathe baredu, prashnisuva ee reethiyu mecchuvanthaddu...
  Gud1, Gud1........

  ReplyDelete
 9. ದಿನಕರ್ ಸರ್ ರವರ ಕಥೆ ನನಗೆ ಓದಲು ಇಷ್ಟ ಯಾಕೆಂದರೆ, ಅದು ವಿಭಿನ್ನ, ವಿಶಿಷ್ಟವಾಗಿರುತ್ತದೆ. ನಿಮ್ಮ ಕಲ್ಪನೆಯಂತೆ ವಾಸ್ತವದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ವ..?

  ReplyDelete
 10. ಇವರು ಒಂಥರ ಇಂದಿನ Modern ಪ್ರಾಮಾಣಿಕರು... ತುಂಬಾ ಪ್ರಾಮಾಣಿಕರಾಗಿ ನೇರ ನಡೆ ನೇರ ನುಡಿಯಿಂದ ಬದುಕಲು ಸಾಧ್ಯವಾಗುವ ಕಾಲ ಅಲ್ಲ ಇದು ಅನ್ನೋದನ್ನು ಇದು ಎತ್ತಿ ಹಿಡಿದಿದೆ... ಕಥೆ ಇಷ್ಟ ಆಯ್ತು... ಪ್ರಾಮಾಣಿಕತೆ ಸಾಯಲಿಲ್ಲ ಸಧ್ಯ... ಪ್ರತೀ ಸಲದಂತೆ ನಿಮ್ಮ ಕಥೆ ಕೊನೆಯಲ್ಲಿ ತಿರುವು ಪಡೆದುಕೊಂಡು ಕುತೂಹಲ ಮೂಡಿಸಿದೆ!

  ReplyDelete
 11. ದಿನಕರ್ ನಿಮ್ಮ ಈ ಕಥೆ ಚೆನ್ನಾಗಿದೆ, ಪಾತ್ರ ಕಲ್ಪನೆ ಬೊಂಬಾಟ್ ಸಾರ್ ಇಷ್ಟಾ ಆಯ್ತು .

  ReplyDelete
 12. ಚಂದದ ಕಥಾ ಸಾರ ಸರ್.... ನಿಜವಾಗಿಯೂ ಅವರು ಪ್ರಾಮಾಣಿಕರಾ, ಅಪ್ರಾಮಾಣಿಕರಾ ಯೋಚಿಸುವಂತಾಯ್ತು ...!!

  ReplyDelete
 13. ಕೆಸರನ್ನ ಮೈಗೆ ಮೆತ್ತಿಸಿಕೊಂಡರಷ್ಟೇ ಕೆಸರನ್ನ ಶುಚಿಗೊಳಿಸೋಕೆ ಸಾಧ್ಯ. ಮುಳ್ಳನ್ನ ಮುಳ್ಳಿಂದ ತೆಗೆಯೋದೇ ನಿರಾಯುಧ ಪಾಣಿಗಳ ಬುದ್ಧಿವಂತಿಕೆ. ಪ್ರಸಕ್ತ ಸಮಾಜಕ್ಕೆ ಆ ಮಟ್ಟಿಗಿನ ಸ್ವಭಾವ ಇಲ್ಲದೆ ಹೋದ್ರೆ ಹೇಗೆ. ಅವನಿಚ್ಚಿಸಿದ ಲಾಭ ಕೂಡಾ ಸಮಾಜದ ಒಳಿತಿಗೇನೆ. ಅದು ಸಮಯಸಾಧಕ ತನವಲ್ಲ ಸಮಯ ಪ್ರಜ್ಞೆ ಅಷ್ಟೇ.

  ಬಹಳ ಒಳ್ಳೆಯ ಕಥೆ ದಿನಕರ್ ಸಾರ್.

  ReplyDelete
 14. I am all time fan of your writing sir..:) grt write up.. (y)

  ReplyDelete
 15. This comment has been removed by the author.

  ReplyDelete
 16. This comment has been removed by the author.

  ReplyDelete
 17. ಒಂದರ್ಥದಲ್ಲಿ ಅವರು ಖಂಡಿತ ಪ್ರಾಮಾಣಿಕರೇ...ರಾಜಕೀಯ ಪ್ರಾಮಾಣಿಕರು...!
  ಒಟ್ಟಾರೆಯಾಗಿ ಈ ಯುಗದಲ್ಲಿ ಪ್ರಾಮಾಣಿಕತೆಯ ವ್ಯಾಖ್ಯಾನವನ್ನು ನಾನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗುತ್ತದೆ. ರಾಜಕೀಯದಲ್ಲಂತೂ ಅದು ಖಂಡಿತ ಅನಿವಾರ್ಯ. ಹಣ ಪಡೆಯಲೇ ಬಾರದು ಎಂದು ನಿರ್ಧರಿಸುವುವವರು ಈಗಿನ ಕಾಲದಲ್ಲಿ ಉತ್ತಮ ರಾಜಕಾರಣಿಯಾಗಲಾರರು. ನಾವು ಬೇಡವೆಂದರೆ ನೀಡುವವರು ಸುಮ್ಮನಿರುತ್ತಾರಾ! ಅವರಿಗೆ ನಾವಿಲ್ಲದಿದ್ದರೆ ಮತ್ತೊಬ್ಬರಿರುತ್ತಾರೆ. ಈ ವಾಸ್ತವದ ಅರಿವಿರುವವರು ಹಣ ಪಡೆಯುವುದೇ ಲೇಸು. ಆದರೆ ಹೀಗೆ ಪಡೆದ ಹಣವನ್ನು ಹೇಗೆ ಸಮಾಜಕ್ಕಾಗಿ ಸದ್ವಿನಿಯೋಗಿಸುತ್ತಾರೆ ಎಂಬುದರ ಮೇಲೆ ಪ್ರಾಮಾಣಿಕತೆಯನ್ನು ವ್ಯಾಖ್ಯಾನಿಸಬಹುದು.

  ReplyDelete
 18. kate chennagide sir odisikondu hoguttade

  ReplyDelete
 19. ಕಥೆ ಚೆನ್ನಾಗಿದೆ ಸರ್

  ReplyDelete
 20. ತುಂಬಾ ಚೆನ್ನಾಗಿದೆ.

  ReplyDelete