Dec 6, 2009

'' ಹೀಗೂ ಉಂಟೆ.........'' !

''ನನ್ನ ಅಣ್ಣ ಸತ್ತು ಇವತ್ತಿಗೆ ಹತ್ತು ವರ್ಷ ಸರ್'' ..... ಎಂದಿಗೂ ಮಾತಾಡದ ನನ್ನ ಡ್ರೈವರ್ ಇವತ್ತು ಮಾತಾಡುತ್ತಿದ್ದ.... .....'' ಏನಾಗಿತ್ತು ಅವರಿಗೆ'' ಎಂದೆ...... '' ಯಾರೋ ಮಾಟ ಮಾಡಿಸಿದ್ದರು ಸರ್'' ಅಂದ......... ನಾನು ಬೆಚ್ಚಿದೆ..... ಅವನು ಹೇಳುತ್ತಾ ಹೋದ..... ಆಗಷ್ಟೇ ಆಫೀಸಿನಿಂದ ಸೈಟಗೆ ಹೊರಟಿದ್ದೆ..... ಎಂದಿಗೂ ಏನೂ ಕೇಳದ, ಹೇಳದ ಡ್ರೈವರ್ ಮಾತಾಡುತ್ತಿದ್ದ...... ನಾನು ಕೇಳಿಸಿಕೊಳ್ಳಲು ತಯಾರಾದೆ.... ..... ಅವನು ಹೇಳುತ್ತಾ ಹೋದ.......... '' ನಮ್ಮದು ತುಂಬಾ ಬಡ ಕುಟುಂಬ ಸರ್, ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ.. ಹಿರಿಯ ಅಣ್ಣ , ಅವನ ಗೆಳೆಯರ ಸಂಗಡ ಮುಂಬೈ ಗೆ ಹೋಗಿ ಹೋಟೆಲ್ ಕೆಲಸ ಸೇರಿಕೊಂಡ.... ಹೋದ ಸ್ವಲ್ಪ ಸಮಯದಲ್ಲೇ ಅವನೇ ಒಂದು ಹೋಟೆಲ್ ನಡೆಸಲು ಶುರು ಮಾಡಿದ........ ಒಳ್ಳೆಯ ಸಂಪಾದನೆಯೂ ಬರ್ತಾ ಇತ್ತು..... ಬಂದ ಹಣದಲ್ಲಿ, ಇಲ್ಲಿ ಒಂದು ತೋಟ, ಮನೆ ಎಲ್ಲಾ ತೆಗೆದುಕೊಂಡ..... ನಮ್ಮನ್ನೆಲ್ಲ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.... ಅಲ್ಲಿಂದ ಊರಿಗೆ ಬರುವಾಗಲೆಲ್ಲಾ ಹೊಸದಾಗಿ ಕೊಂಡ ಕಾರಿನಲ್ಲೇ ಬರುತ್ತಿದ್ದ.... ನಾನು ಕಾಲೇಜ್ ಗೆ ಹೋಗ್ತಾ ಇದ್ದೆ....... ಅಣ್ಣನ ಏಳಿಗೆ ನೋಡಿ ನಮ್ಮ ಸಂಭಂದಿಕರಿಗೆಲ್ಲಾ ಹೊಟ್ಟೆಯುರಿ ಶುರು ಆಯ್ತು..... ತೀರಾ ಬಡವರಾಗಿದ್ದ ನಾವು, ಶ್ರೀಮಂತರಾಗಿದ್ದನ್ನ ನೋಡಲು ಅವರಿಗೆ ಸಹಿಸಲು ಆಗಲಿಲ್ಲ....... ಅವರಲ್ಲಿ ಯಾರೋ ಕೇರಳಕ್ಕೆ ಹೋಗಿ ಮಾಟ ಮಾಡಿಸಿ ಬಂದಿದ್ದಾರೆ.... ಮುಂಬೈ ಯಲ್ಲಿ ಅಣ್ಣನ ವ್ಯಾಪಾರ ನೋಡಿ ಅವನ ಪಕ್ಕದ ಹೋಟೆಲಿನವರೂ ಸಹ ಮಾಟ ಮಾಡಿಸಿದ್ದಾರೆ........... ಅವನಿಗೆ ಮಲಗಿದಾಗ ಕನಸು ಬೀಳುವುದಂತೆ.........'ಮನೆಗೆ ಬಾ, ನಾನು ಕಾಯ್ತಾ ಇದ್ದೇನೆ' ಎಂದು ಯಾರೋ ಕರೆದ ಹಾಗೆ.......ಹೀಗೆಲ್ಲಾ ನಡೀತಾ ಇದೆ ಎಂದು ನಂಗೆ ಫೋನ್ ಮಾಡಿ ಹೇಳಿದ..... ನಾನು ನಂಬಲಿಲ್ಲ ಸರ್, ...... ನನ್ನ ಹುಡುಗು ಬುದ್ದಿ, ಬಿಸಿ ರಕ್ತ.... ಯಾವುದನ್ನೂ ನಂಬಲಿಲ್ಲ...... ಅಮ್ಮ ಮಾತ್ರ ಹೆದರಿದರು...... ಅಣ್ಣನ ಜಾತಕ ತೆಗೆದುಕೊಂಡು, 'ಬಟ್ಟ' ರಲ್ಲಿ ಹೋದರು..... ' ತುಂಬಾ ಕೆಟ್ಟ ದೋಷವಿದೆ, ಜಾಗ್ರತೆಯಾಗಿರಲು ಹೇಳಿ' ಎಂದಿದ್ದಾರೆ ಭಟ್ಟರು....... ಅಮ್ಮ ಇದನ್ನೆಲ್ಲಾ ಅಣ್ಣನಿಗೆ ಹೇಳಿದರೂ, ಅಣ್ಣ ಹಣದ ಗತ್ತು, ಹುಂಬತನದಿಂದ ಇದನ್ನೆಲ್ಲಾ ಕಿವಿಗೆ ಹಾಕಿಕೊಳ್ಳಲೇ ಇಲ್ಲ.......... ಅಮ್ಮನ ಹೆದರಿಕೆ ಮುಂದುವರಿದೆ ಇತ್ತು....... ಸ್ವಲ್ಪ ದಿನದ ನಂತರ ಅಣ್ಣ ಮನೆಗೆ ಬಂದ....... ಅವನಿಗೆ ಅಮ್ಮ ಹುಡುಗಿ ನೋಡಿದ್ದರು........ ಮರುದಿನ ನೋಡಲು ಹೊಗುವವರಿದ್ದೆವು...... ಅಂದು ರಾತ್ರಿ ನನಗಿನ್ನೂ ನೆನಪಿದೆ....... ಕೋಳಿ ಸಾರು ಮಾಡಿದ್ದೆವು..... ಅಣ್ಣ ತುಂಬಾ ಪ್ರೀತಿಯಿಂದ ಊಟ ಮಾಡಿದ್ದ..... ತುಂಬಾ ಹೊತ್ತಿನ ತನಕ ಮಾತನಾಡಿ ಮಲಗೋದು, ಹನ್ನೆರಡಾಗಿತ್ತು...... ಮಲಗಿದ ಸ್ವಲ್ಪ ಹೊತ್ತಿನಲ್ಲೇ, ಅಣ್ಣ ' ಯಾರೋ ಕರೆಯುತ್ತಿದ್ದಾರಲ್ಲ' ಎನ್ನುತ್ತಾ ಹೊರಗೆ ಹೋದ....... ಇಷ್ಟು ಹೊತ್ತಾದರೂ ಅಣ್ಣ ಬರಲಿಲ್ಲವಲ್ಲ ಎಂದು ನಾನು ಹೊರಗೆ ಹೋಗಿ ನೋಡಿದರೆ, ಅಣ್ಣ ಮುಖ ಕೆಳಗಾಗಿ ಬಿದ್ದಿದ್ದ...... ನಾನು ಜೋರಾಗಿ ಕೂಗಿದೆ...... '' ಅಪ್ಪಾ...... ಹೊರಗೆ ಬನ್ನಿ, ಅಣ್ಣ ಬಿದ್ದಿದ್ದಾನೆ'' ..... ಅಪ್ಪ ಓಡೋಡಿ ಬಂದು ಅಣ್ಣನನ್ನ ಎತ್ತಿದರು..... ಬಾಯಲ್ಲಿ ರಕ್ತ ಸುರಿಯುತ್ತಿತ್ತು...... ಕೊಡಲೇ ಆಸ್ಪತ್ರೆಗೆ ಕರೆದುಕೊಂಡು ಹೊದೆವಾದರೂ ಪ್ರಯೋಜನವಾಗಲಿಲ್ಲ..... ಅಣ್ಣ ಆಗಲೇ ಸತ್ತು ಹೋಗಿದ್ದ..........

ಮಧ್ಯೆ ನಾನು ಬಾಯಿ ಹಾಕಿದೆ............'' ಪೋಸ್ಟ್ ಮಾರ್ಟಂ ಏನಾದರೂ ಮಾಡಿದ್ರಾ, ಡಾಕ್ಟರ ಏನಂದ್ರು'' ಎಂದೆ........ ' ಅದೆಲ್ಲಾ ಹಳ್ಳಿಯಲ್ಲಿ ಎಲ್ಲಿ ಮಾಡ್ತಾರೆ ಸಾರ್...... ನಂಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ..... ಅಣ್ಣನನ್ನು ಸುಟ್ಟು ಮನೆಗೆ ಬಂದೆವು...... ಅಮ್ಮ ಮಂಕಾಗಿದ್ದಳು..... ಇನ್ನೂ ಏನೋ ಕೆಟ್ಟದಾಗಲಿದೆ ಎಂದು ಬಡಬಡಿಸುತ್ತಿದ್ದಳು.... ನಾನು ಏನೂ ಅರ್ಥವಾಗದೆ, ಏನೂ ಮಾಡದೆ ಸುಮ್ಮನಿದ್ದೆ.... ಇನ್ನೊಬ್ಬ ಅಣ್ಣ, ತೋಟದ ಮನೆಯ ಕೆಲಸದಲ್ಲಿ ಅಪ್ಪನ ಜೊತೆಯಾದ..... ನಾನು ಬಾಂಬೆಯಲ್ಲಿ ಅಣ್ಣನ ಹೋಟೆಲ್ ನೋಡಿಕೊಳ್ಳುತ್ತೇನೆ ಎಂದೆ...... ' ಬೇಡ, ಆ ಹೋಟೆಲ್ ನನ್ನ ಮಗನ ಪ್ರಾಣ ತಿಂತು... ನೀವ್ಯಾರಾದರೂ ಅಲ್ಲಿಗೆ ಹೋದರೆ ನನ್ನ ಮೇಲಾಣೆ' ಅಮ್ಮ ಅಬ್ಬರಿಸುತ್ತಿದ್ದರು.....ನಾನು ಉಪಾಯ ಇಲ್ಲದೆ ಕಾಲೇಜ್ ಗೆ ಹೋದೆ ಸರ್..........

''ಸ್ವಲ್ಪ ಕಾರ್ ನಿಲ್ಸು'' ಎಂದೆ..... ಕೆಳಗಿಳಿದು ಹೋಗಿ, ಕೆಲಸಗಾರರಿಗೆ ಮುಂದಿನ ಕೆಲಸಗಳ ಬಗ್ಗೆ ಹೇಳಿ, ಮತ್ತೆ ಬಂದು ಕುಳಿತೆ...... ''ಸರಿ, ಮನೆಗೆ ಹೋಗೋಣ'' ಎಂದೆ........ ನನ್ನ ಡ್ರೈವರ್ ಅದೇ ಲಹರಿಯಲ್ಲಿದ್ದ..... ನಾನೂ ಸಹ ಅವನಿಗೆ ಕಿವಿಯಾದೆ............... '' ನಂತರ ನನ್ನ ಎರಡನೇ ಅಣ್ಣನೂ ವಿಚಿತ್ರವಾಗಿ ಆಡಲು ಶುರು ಮಾಡಿದ ಸರ್, ಇದ್ದಕ್ಕಿದ್ದಂತೆ ' ನಾನು ಮುಂಬೈ ಗೆ ಹೋಗಬೇಕು, ನನ್ನ ಹಣ ಇದೆ ಅಲ್ಲಿ' ಎಂದೆಲ್ಲಾ ಕೂಗುತ್ತಿದ್ದ ..... ಅಮ್ಮ ಮತ್ತೆ ಜಾತಕ ತೆಗೆದುಕೊಂಡು ಹೋದರು, ಈ ಬಾರಿ ನಾನೂ ಅವರ ಜೊತೆ ಹೋದೆ.... ಭಟ್ಟರು ಮಾತ್ರ ' ತುಂಬಾ ದೊಡ್ಡದಾಗಿ ಮಾಟ ಮಾಡಿಸಿದ್ದಾರೆ, ನಾವು ತಿರುಗುಮಾಟ ಮಾಡಬಹುದು, ಆದ್ರೆ ತುಂಬಾ ಖರ್ಚಾಗತ್ತೆ' ಅಂದ್ರು...... ಅಮ್ಮ 'ಎಷ್ಟಾದರೂ ಅಡ್ಡಿಯಿಲ್ಲ..... ಮನೆ , ತೋಟ ಮಾರಿ ಹಣ ತರುತ್ತೇನೆ.... ನನ್ನ ಮಕ್ಕಳು ಸುಖವಾಗಿ ಇರಬೇಕು ಅಷ್ಟೇ ಅಂದಳು..... ನಂಗೆ ಏನೂ ಅರ್ಥವಾಗದೆ ಇದ್ದರೂ ಏನೋ ತುಂಬಾ ಅಪಾಯವಿದೆ ಎಂದೆನಿಸಿತ್ತು.....ಹಾಗೆಯೇ ಅಮ್ಮ, ತೋಟದ ಸ್ವಲ್ಪ ಭಾಗ ಮಾರಿ, ಹಣ ತಂದು ಭಟ್ಟರು ಹೇಳಿದ ಹಾಗೆ ಮಾಡಿ ಮುಗಿಸಿದಳು..... ಅಣ್ಣ ಸುಧಾರಿಸುತ್ತಾ ಬಂದ....... ಅವತ್ತು, ದೊಡ್ಡಣ್ಣ ಸತ್ತು ಐದು ವರ್ಷವಾಗಿತ್ತು ಸರ್.... ತೋಟದ ಕೆಲಸಕ್ಕೆ ಹೋದ ಎರಡನೇ ಅಣ್ಣ ಉಳಿದ ಕೆಲಸಗಾರರಿಗೆ, ' ನಾನು ಈಗ ಸಾಯುತ್ತೇನೆ, ನನ್ನ ಹೆಣವನ್ನು ಇಲ್ಲೇ , ಇದೆ ಜಾಗದಲ್ಲಿ ಹುಗಿಯಬೇಕು' ಎಂದಿದ್ದಾನೆ.... ಕೆಲಸಗಾರರೆಲ್ಲ ನಗಾಡುತ್ತಾ ಕೆಲಸ ಮುಂದುವರಿಸಿದ್ದಾರೆ.... ಅಣ್ಣ ಸೀದಾ ಹೋಗಿ, ತೋಟದ ಮನೆಯ ಒಳಗೆ ಹೋಗಿ ನೇಣು ಹಾಕಿಕೊಂಡ............ ಅವತ್ತು ಗ್ರಹಣವಾಗಿತ್ತು ಸರ್.....

ನನ್ನಿಂದ ಮಾತೆ ಹೊರಡಲಿಲ್ಲ.... ಇದೆಲ್ಲಾ ಸತ್ಯಾನಾ..... ಯಾರೋ ಮಾಟ ಮಾಡಿಸೋದು.... ಯಾರೋ ಸಾಯೋದು.... ಇದೆಲ್ಲಾ ಸತ್ಯ ಆಗಿಬಿಟ್ಟರೆ, ಜಗತ್ತಿನ ಜನಸಂಖ್ಯೆ ಇಷ್ಟು ಇರುತ್ತಿರಲಿಲ್ಲ.... ಎಲ್ಲರೂ ಹಣ ಕೊಟ್ಟು, ಕಂಡವರಾಗದವರನ್ನು ಸುಲಭವಾಗಿ ಸಾಯಿಸಬಹುದಿತ್ತು ಎಂದುಕೊಂಡೆ......

ಅವನು ಹಾಗೆ ಮುಂದುವರಿಸಿದ...... '' ಅಮ್ಮ ಇದೆ ಕೊರಗಿನಲ್ಲಿ ಸತ್ತು ಹೋದರು, ಅಪ್ಪ ಮಾತ್ರ ದಿನಾ ಅಮ್ಮನ , ಅಣ್ಣನ ಫೋಟೋಗೆ ಹೂವು ಹಾಕುತ್ತಾ ದಿನ ಕಳೆಯುತ್ತಿದ್ದಾರೆ.... ನಾನು ಈ ಕಾರು ಬಾಡಿಗೆಗೆ ಬಿಟ್ಟಿದ್ದೇನೆ, ತಮ್ಮ ಕಾಲೇಜ್ ಗೆ ಹೋಗ್ತಾ ಇದ್ದಾನೆ ಸರ್..... ಹೇಗೋ ದಿನ ದೂಡುತ್ತಿದ್ದೇವೆ ಸರ್..... '' ಎಂದ........... ನನಗೆ ತುಂಬಾ ಕುತೂಹಲ.... '' ನಿಂಗೆ ಯಾವತ್ತಾದರೂ ಅಂಥಾ ಅನುಭವ ಆಗಿತ್ತಾ '' ಎಂದು ಕೇಳಿದೆ..... '' ಆಗ್ತಾ ಇರತ್ತೆ ಸರ್, ಏನ್ ಮಾಡೋದು, ಹಣೆಬರಹ .... ಅನುಭವಿಸಬೇಕು'' ಅಂದ ನಿಟ್ಟುಸಿರು ಬಿಟ್ಟು.........

''ಇಲ್ಲೇ ನಿಲ್ಸೂ, ಮನೆ ಬಂತಲ್ಲ..... ಎಲ್ಲಿಗೆ ಹೋಗ್ತಾ ಇದೀಯಾ.... '' ಎಂದು ಕೂಗಿದೆ ನಾನು......ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದ......... ಶನಿವಾರವಾಗಿದ್ದರಿಂದ ನಾಳೆ ರಜೆಯಿತ್ತು..... ಅವನಿಗೆ ಏನಾದರೂ ಹಣ ಕೊಡೋದು ನನ್ನ ರೂಡಿ....ನೂರು ರುಪಾಯಿ ಕೊಡೋಕೆ ಹೋದೆ.... ಅವನ ಕಣ್ಣು ಮುಚ್ಚಿತ್ತು...... ... '' ಏನಾಯ್ತೂ'' ಎಂದೆ.... ಮಾತಾಡಲಿಲ್ಲ..... 'ಏಯ್ .... ಏನೋ ಇದು.... ಕಣ್ ಬಿಡೋ, ಹಣ ತೆಗೋ'' ಎಂದೆ..... ಅವನ ಕಣ್ಣು ಮುಚ್ಚೆ ಇತ್ತು...... ನಂಗೆ ಗಾಬರಿಯಾಯಿತು....... ಕೈಯಲ್ಲಿದ್ದ ನೀರಿನ ಬಾಟಲಿಯಿಂದ ನೀರು ತೆಗೆದು ಮುಖಕ್ಕೆ ಹೊಡೆದೆ..... ಥಟ್ಟನೆ ಕಣ್ಣು ಬಿಟ್ಟ...... '' ಸಾರೀ ಸರ್..... ನಿದ್ದೆ ಬಂದು ಬಿಟ್ಟಿತ್ತು..... ಯಾವಾಗ ಬಂದ್ರೀ ಸರ್..... ಎಲ್ಲಿಗೆ ಹೋಗೋಣ ಸರ್......'' ಎಂದ ಕಣ್ಣುಜ್ಜಿಕೊಳ್ಳುತ್ತಾ ..... '' ಇದೇನ್ ಸಾರ್, ನಿಮ್ಮನೆಗೆ ಬಂದು ಬಿಟ್ವಾ.... ಆಫೀಸ್ ಎದುರಿಗೆ ಗಾಡಿ ನಿಲ್ಲಿಸಿ. ಗಾಡಿಯಲ್ಲಿ ಮಲಗಿದ್ದೊಂದೇ ನೆನಪು ನಂಗೆ.... ಇಲ್ಲಿಗೆ ಹೇಗೆ ಬಂದ್ವೀ ಸರ್''........... ಎಂದ ಗಾಬರಿಯಲ್ಲಿ....... ಬಾಟಲಿಯಲ್ಲಿ ಉಳಿದ ನೀರು ಕುಡಿಯಲು ಕುಡಿಯಲು ಹೋದೆ..... ನೀರು ಗಂಟಲಲ್ಲಿ ಇಳಿಯಲಿಲ್ಲ........

Nov 27, 2009

'' ಪಾರಿವಾಳಗಳು''

'' ಆಹಾ, ಎಷ್ಟು ಪ್ರಶಾಂತವಾದ ಪರಿಸರ ಆಲ್ವಾ'' ಎನಿಸಿತು ಬಸ್ಸಿಳಿದ ಕೂಡಲೇ..... ಬಸ್ಸಿನಿಂದ ಇಳಿದು ನನ್ನ ಫ್ರೆಂಡ್ ಮನೆಗೆ ಹೊರಟಿದ್ದೆವು ನಾನು ಮತ್ತು ನನ್ನ ಸೀನಿಯರ್...... ಹಳ್ಳಿ ನೋಡದೆ ಇರದಿದ್ದರಿಂದ ತಾನೂ ಬರುತ್ತೇನೆ ಅಂದ..... ಸರಿ ಬಾ ಅಂತ ಕರೆದುಕೊಂಡು ಹೊರಟಿದ್ದೆ..... ಕಾಲೇಜಿನಲ್ಲಿ ತುಂಬಾ show off ಮಾಡ್ತಿದ್ದ..... ಬೆಂಗಳೂರಿವನಾದ್ದರಿಂದ ಸ್ವಲ್ಪ ಫಾಸ್ಟ್, ಸ್ವಲ್ಪ take it easy fellow ..... ಅವನಿಗೆ ಹಳ್ಳಿಯ ಪರಿಸರ ನೋಡಿ ತುಂಬಾ ಖುಷಿಯಾಗಿತ್ತು....ವಟ ವಟ ಮಾತಾಡುತ್ತಿದ್ದ.... ' ಏನ್ ಗಾಳಿ ಗುರೂ, ಸಕತ್ತಾಗಿದೆ..... ಎಲ್ ನೋಡಿದರೂ ಹಸಿರು.... ತಂಪು.... ತಂಪು.... ನಮ್ ಬೆಂಗಳೂರಿನಲ್ಲಿ ಇದೆಲ್ಲಾ ಇಲ್ಲ.... ' ಎನ್ನುತ್ತಲೇ ಇದ್ದವನು ಪ್ಲೇಟ್ ಬದಲಾಯಿಸಿದ ' ಆದರೂ ನಮ್ಮ ಬೆಂಗಳೂರೇ ಬೆಸ್ಟ್, ಸಂಜೆಯಾದರೆ ಪಾರಿವಾಳ ( ಹುಡುಗಿಯರು) ಬರತ್ತೆ, ಹೋಗಿ ನಿಂತರೆ ಕಣ್ಣೆಲ್ಲಾ ತಂಪಾಗತ್ತೆ '' ಎಂದೆಲ್ಲಾ ಬಡಬಡಿಸುತ್ತಿದ್ದ..... ನಾನು ಮಾತ್ರ ನಮ್ಮನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಫ್ರೆಂಡ್ ಹುಡುಕುತ್ತಿದ್ದೆ..... ನಿರ್ಜನ ಹಳ್ಳಿ ರಸ್ತೆಯಾಗಿತ್ತು.... ಕೆಲವೊಂದು ಹೈ ಸ್ಕೂಲ್ ಹುಡುಗಿಯರು ಬಸ್ಸಿಳಿದು ನಮ್ಮೆದುರಿಗೆ ಹೋದರು.... ಅವರನ್ನು ಕೇಳೋಣವೆಂದರೆ ಮನಸ್ಸಾಗಲಿಲ್ಲ.... ಹಳ್ಳಿ ಹುಡುಗಿಯರು ಬೇರೆ, ತುಂಬಾ ಸೂಕ್ಷ್ಮ ಆಲ್ವಾ... ತಪ್ಪು ತಿಳಿದಾರು ಎಂದು ಸುಮ್ಮನಿದ್ದೆ.... ನನ್ನ ಜೊತೆ ಬಂದ ಬಡ ಬಡ ಪೆಟ್ಟಿಗೆ ಸುಮ್ಮನಿರಬೇಕಲ್ಲ.....'' ಏನ್ ಪಾರಿವಾಳ ಲೇ'' ಅಂದ.... ಆ ಹುಡುಗಿಯರಿಗೆ ಅದರ ಅರ್ಥ ತಿಳಿಯದೆ ಸುಮ್ಮನೆ ಹೊರಟು ಹೋದರು.... ಮನಸ್ಸಲ್ಲೇ ನಾನು ' ಇವ ಯಾರಿಗಾದರು ಹೊಡೆಸುತ್ತಾನೆ' ಎಂದುಕೊಂಡೆ.... ಎದುರಿಗೆ ಹೇಳುವ ಹಾಗಿರಲಿಲ್ಲ , ಎಷ್ಟಾದರೂ ನನ್ನ ಸೀನಿಯರ್ ಆಲ್ವಾ ಸಹಿಸಿಕೊಂಡೆ....

ಸ್ವಲ್ಪ ಹೊತ್ತಿನಲ್ಲೇ ನನ್ನ ಫ್ರೆಂಡ್ ಬಂದ.... ಲೇಟ್ ಆಗಿ ಬಂದ ತಪ್ಪಿಗೆ ಅರ್ಚನೆಯನ್ನೂ ಮಾಡಿಸಿಕೊಂಡ.... ನನ್ನ ಸೀನಿಯರ್ ಮಾತ್ರ 'ಏನ್ ಗುರೂ, taxi ಏನು ಸಿಗಲ್ವಾ ಇಲ್ಲಿ,' ಅಂದ..... '' ಇಲ್ಲಾ , ಇಲ್ಲಿ ಕಾರ್ ಬದಲಿಗೆ ಕಾಲೇ ಗತಿ'' ಎಂದ ನನ್ ಫ್ರೆಂಡ್.......... ಸುಮಾರು ದೂರ ನಡೆದು ನನ್ನ ಕಾಲು ನೋಯುತ್ತಿತ್ತು.... ' ಎಲ್ಲೋ ನಿನ್ನ ಮನೆ ' ಎಂದೇ.... ' ಅಲ್ನೋಡು ಒಂದು ಬಾವಿ ಕಾಣ್ತಾ ಇದೆಯಲ್ಲ, ಅದರ ಹಿಂದೇನೆ ನನ್ನ ಮನೆ' ಎಂದ...... ' ಅಂತೂ ಬಂತಲ್ಲಾ ಮನೆ ಎಂದುಕೊಳ್ಳುತ್ತಿರುವಾಗಲೇ.... ಬಾವಿಯಲ್ಲಿ ನೀರು ಸೇದುತ್ತಿರುವ ಹುಡುಗಿ ಕಂಡಳು.... ಎಲ್ಲಾ ಹಳ್ಳಿ ಹುಡುಗಿಯರ ಹಾಗೆ ಮುದ್ದಾಗಿ ಇದ್ದಳು..... ನನ್ನ ಫ್ರೆಂಡ್ ಏನೋ ಹೇಳಲು ಬಾಯಿ ತೆರೆಯೋದಕ್ಕೂ..... ನನ್ನ ಸೀನಿಯರ್ '' ಏನ್ ಗುರೂ, ಪಾರಿವಾಳ ಸಕತ್ತಾಗಿದೆ'' ಎನ್ನುವುದಕ್ಕೂ ಸರಿ ಹೋಯ್ತು..... ಏನೋ ಹೇಳಲು ಹೊರಟ ನನ್ ಫ್ರೆಂಡ್ ಹಾಗೆ ಬಾಯಿ ಮುಚ್ಚಿದ ..... ಈ ಪುಣ್ಯಾತ್ಮ ಮಾತ್ರ '' ನಿಮ್ಮೂರಲ್ಲೂ ಪಾರಿವಾಗಳು ಸಕತ್ತಾಗಿದೆಯಮ್ಮಾ , ಹಳ್ಳಿಯ ಗಾಳಿ ನೀರು ಕುಡಿದು ಪೊಗರು ಬಂದಿರತ್ತೆ ಆಲ್ವಾ …. ಯಾವಾಗಲಾದರು ಕಾಳು ಹಾಕಲು try ಮಾಡಿದ್ದೆಯಾ ’’ ಅಂದ ….. ನನ್ನ ಫ್ರೆಂಡ್ ನಗಾಡಲು ಶುರು ಮಾಡಿದ …. ನನಗೆ ಅರ್ಥ ಆಗಲಿಲ್ಲ ….ನಾನು ಅವನನ್ನ ಯಾಕೆ ಎಂದು ಸಂಜ್ಞೆ ಮಾಡಿ ಕೇಳಿದೆ ….. ಅವನು ನನ್ನನ್ನು ಬಡಿದೆ ಕರೆದು ‘’ ಆ ಹುಡುಗಿಯನ್ನು ಸರಿಯಾಗಿ ನೋಡಿಕೋ , ಮುಂದಿದೆ ಮಜಾ ’ ಎಂದ ….. ನನಗೆ ತಲೆ ಬುಡ ಅರ್ಥ ಆಗ್ಲಿಲ್ಲ.....ಆದರೂ ಆ ಹುಡುಗಿಯನ್ನು ನೋಡುತ್ತಾ ಗೆಳೆಯನ ಮನೆ ಒಳಗೆ ಹೋದೆ..... ನನ್ನ ಸೀನಿಯರ್ ಆಗಲೇ '' ಏನು fan ಇಲ್ವಾ , T. V . ಇಲ್ವಾ '' ಅಂತೆಲ್ಲಾ ಶುರು ಮಾಡಿದ್ದ..... ' ತುಂಬಾ ಸುಸ್ತಾಗಿದೆ ಏನಾದರು ಕುಡಿಯಲು ತಾರೋ' ಎಂದೆ...... '' ಪಾನೀಯ ಮಾಡಿಸಿದ್ದೇನೆ ತರಿಸುತ್ತೇನೆ ತಡಿ' ಎಂದು ''ರೂಪಾ '' ಎಂದು ಯಾರನ್ನೋ ಕರೆದ..... ಒಳಗಡೆಯಿಂದ ಕೈಯಲ್ಲಿ ಪ್ಲೇಟ್ ಹಿಡಿದು, ಮೂರು ಲೋಟ ಪಾನೀಯ ತರುತಿದ್ದಳು ಒಬ್ಬಳು ಹುಡುಗಿ...... ನಾನು ಸರಿಯಾಗಿ ಗಮನಿಸಿದೆ, ನಾವು ಬರುವಾಗ ಬಾವಿಯಲ್ಲಿ ನೀರು ಸೇದುತ್ತಿದ್ದ ಹುಡುಗಿ ಇವಳೇ ಆಗಿದ್ದಳು..... ನನ್ನ ಸೀನಿಯರ್ ಆಗಲೇ ನನ್ನ ತಿವಿಯಲು ಶುರು ಮಾಡಿದ್ದ...... ಏನೋ ಹೇಳುವವನೂ ಇದ್ದ..... ಅಷ್ಟರಲ್ಲಿ ನನ್ನ ಫ್ರೆಂಡ್ '' ಇವಳು ರೂಪಾ , ನನ್ನ ಒಬ್ಬಳೇ ತಂಗಿ'' ಎಂದ...... ನನ್ನ ಸೀನಿಯರ್ ಮುಖ ನೋಡುವ ಹಾಗಿತ್ತು...........

Nov 20, 2009

ಮತ್ತೆ ನಿನ್ನದೇ ಸುದ್ದಿ......


ಎಲ್ಲಿದ್ದೀಯಾ........?

ಮುಂಜಾನೆಯ ಮಂಜು ಕೂಡ,
ನಿನ್ನ ದಾರಿ ಕಾಯುತ್ತದೆ....
ನಿನ್ನ ಪಾದ ಸೋಕಿ,
ಧರೆಗುರುಳಿ ಇಂಗುತ್ತದೆ.....

ಕಾಯುತ್ತದೆ ಕನಸು ಕೂಡ,
ನೀ ಕೊಡುವ ಕಚಗುಳಿ .....
ನಿನ್ನ ಮನದ ಮನಸ ಕೂಡಿ,
ಉದಯರಾಗ ಹಾಡುತ್ತದೆ.....

ಹುಣ್ಣಿಮೆಯ ಚಂದ್ರ ಕೂಡ,
ನಿನ್ನ ಕ್ಷೇಮ ಬಯಸುತ್ತದೆ ......
ಬೆಳದಿಂಗಳೂ ಸಹ ಹಾಲಾಗಿ,
ನಿನ್ನ ನೆರಳಾಗುತ್ತದೆ.....

ನಿನ್ನ ಮೈಯ ಘಮವು ಕೂಡ ,
ನಿನ್ನ ಸುಳಿವು ಕೊಡುತ್ತದೆ.....
ಮನದ ಮೂಲೆಯನ್ನು ಕೆಣಕಿ,
ದಣಿದ ದೇಹ ತಣಿಸುತ್ತದೆ......




Nov 9, 2009

ನನ್ನ ಚಿತ್ತ.............!



ಅಲೆಗಳಿಗೇಕೆ
ತಿಳಿದಿಲ್ಲ ನೀ ನನ್ನುಸಿರು,
ಪದೇ ಪದೇ ಅಳಿಸುತ್ತವೆ ನಾ ಬರೆದ ಹೆಸರು.....
ಅವುಗಳು ಅಳಿಸುವುದು ನಿನ್ನ ಹೆಸರು ಮಾತ್ರ,
ಮುಟ್ಟಲಾರವು ಅವು ನನ್ನೆದೆಯೊಳಗಿನ
ಚಿತ್ರ.......


ನೀ ನನಗೆ ಪೌರ್ಣಮಿಯ ಬೆಳದಿಂಗಳಂತೆ,
ಕೈಚಾಚಿದರೂ ನಾ, ಸಿಗದೆನಗೆ ನಿನ್ನಯ ನೆರಳು....
ನೀ ನನಗೆ ಮುಗಿಲ ಮಲ್ಲಿಗೆಯಂತೆ,
ನೆನಪು ಘಮ್ಮೆಂದರೂ, ಸಿಗದೆನಗೆ ನಿನ್ನಯ ಬೆರಳೂ ......


ಮುನಿಸಿ ನಡೆದ ಒಡತಿ ಹೊರಟು ಬಾ ಬೇಗ,
ಕಾಯುವುದೇ ಕಾಯಕ ಆಗಿದೆ ನನಗೀಗ.....
ನೀ ಕೊಟ್ಟ ಈ ಪ್ರೀತಿ ಸಾಕು ಪೂರ್ತಿ ಜನ್ಮಕ್ಕೆ,
ನೀ ತಿರುಗಿ ಬಂದ ದಿನ ಮುಕ್ತಿ ಈ ಜೀವಕ್ಕೆ.......

Oct 31, 2009

ನಿನ್ನ ಮರೆತ ನೆನಪಿಲ್ಲ............!

ಒಬ್ಬಂಟಿಯಾಗಿ ನಡೆಯುತ್ತಿದ್ದೇನೆ,
ಬೆನ್ಹತ್ತುತ್ತಿವೆ ನನ್ನ ನೆರಳುಗಳು.....
ಸಂಜೆಯಾಗಿ ಕತ್ತಲಾಗುತ್ತಿದೆ,
ಕಾದುತ್ತಿವೆ ನಿನ್ನ ನೆನಪುಗಳು.....

ಸಂಬಂಧಗಳು ಕಡಿದಿವೆ ನಿಜ,
ನೆನಪನ್ನು ಹೇಗೆ ಮರೆಯಲಿ ಹೇಳು.....
ಮನಸ್ಸು ಮುರಿದಿದೆ ನಿಜ,
ಮನ ಹಿಗ್ಗುವ ಬಗೆ ಹೇಳು ......

ನಿನ್ನ ನೆನಪು ಮಾಡೋಣ ಎಂದರೆ ,
ಮರೆತೇ ಹೋಗುತ್ತಿಲ್ಲವಲ್ಲ....
ನನಗೆ ಅಂಥಾ ದುಃಖವಿಲ್ಲ ಎಂದರೂ,
ಸುಖದ ಸುಳಿವೇ ಇಲ್ಲವಲ್ಲ.....!

Oct 25, 2009

'' ಅವನೇಕೆ ನಿಮ್ಮಂತೆ?''


"ಅರೆರೆ, ಇವನು ನಿನ್ನ ಮಗನೇನು?
ಮುಖದಲ್ಲೇಕೆ ಇವನು ನನ್ನನ್ನೇ ಹೋಲುವನು?''
ಕೇಳಿದರೆ ನೀನು ನಗುತ್ತಾ ಮುನ್ನೆಡೆದೆ...
ತುಂಟ ಮಗ ನನ್ನನ್ನು ''ಅಪ್ಪಾ'' ಎಂದೇ ಕರೆದ...

ನೀನೇಕೆ ಕಾಯಲಿಲ್ಲ ನನಗಾಗಿ ಇನ್ನೂ,
ಅಲ್ಲೇನು ನೋಡುವೆ ದೇವರಿಲ್ಲ ಮೇಲೆ,
ನಿನಗಾಗಿ ನಾನು ಕಾದು ಕುಳಿತಿರಲು ಇಲ್ಲಿ,
ನಿನ್ನದೇ ಸುಳಿವಿಲ್ಲ ಕನಸು ಮನಸಲ್ಲೂ.....

ನೆನಪಿದೆಯಾ ಆ ರಾತ್ರಿ ನನ್ನಲ್ಲಿ ನೀನು,
ಕೇಳುತ್ತಾ ಕಾಣಿಕೆಯ, ಬೇಡುತ್ತಾ ಸುಖವಾ....
ನಸುಕಲ್ಲೇ ಎದ್ದು ನೀ ನಕ್ಕು ನಡೆದೆ,
ಮರುದಿನವೇ ಅಲ್ಲವೇ ನಿನ್ನ ಅವನ ಮದುವೆ....?

ನನ್ನಾಕೆಗೆ ಸಂಶಯ, ನಿನ್ನ ಮಗನ ನೋಡಿ,
ತಡೆಯಲಾರದೆ ಕೇಳಿದಳು, 'ಅವನೇಕೆ ನಿಮ್ಮಂತೆ'?
ನಾ ನಕ್ಕು ನುಡಿದೆ, 'ಅವನನ್ನೇ ಕೇಳು'
ನಿನ್ನ ಮಗ ಜಾಣ, ಕಣ್ಣ್ ಹೊಡೆದು ಮುನ್ನಡೆದ.........

Oct 12, 2009

ನಾನಾ..........?



ಮನವೆಂಬ ಮರ್ಕಟವ ಕೇಳೇ ಗೆಳತಿ,
ಯಾರು ನಿನ್ನೆದೆಯ ವೀಣೆ ಮೀಟಿದವರು?
ಬೆನ್ನ ಹಿಂದಿನ ನೆರಳಂತೆಯೇ ಇದ್ದು,
ದಿನವಿಡೀ ನೆನಪಾಗಿ ಕಾಡುವವನು....

ಸುಖ ಕೂಡಿಸಿ, ದುಃಖ ವ್ಯವಕಲಿಸಿ,
ಧೈರ್ಯ ಗುಣಿಸಿ, ನೋವು ಭಾಗಿಸುವವನು...
ಹಾಸ್ಯ ಮಾತು, ನಗೆ ಚಟಾಕಿಗಳಲಿ,
ದಿನದ ಆಯಾಸ ಮರೆಸುವವನು....

ನಿನ್ನ ಉಜ್ವಲ ಭವಿಷ್ಯಕ್ಕಾಗಿ,
ತನ್ನ ವರ್ತಮಾನ ಮರೆಯುವವನು....
ಚಿತ್ರ ವಿಚಿತ್ರ ಮಾತನಾಡುತ್ತಾ,
ತಲೆಚಿಟ್ಟು ಹಿಡಿಸುವವನು.....

ಅಮ್ಮನ ಕೈಯ ಕಾಫಿಗಿಂತ,
ಮುಂಚೆಯೇ ನೆನಪಾಗುವವನು...
ಒಮ್ಮೊಮ್ಮೆ ಅತಿಯಾಯಿತೆನಿಸಿದರೂ,
ಮತ್ತೆ ಬೇಕೇ ಬೇಕೆನಿಸುವವನು........

ಯಾರೇ ..........?

Oct 5, 2009

ನನ್ನದೊಂದು.........!

ನಿನ್ನ ಕಣ್ಣ ತುದಿಯಲ್ಲಿ,

ನನ್ನದೊಂದು ಚಿತ್ರವಿರಲಿ ಗೆಳತಿ....

ಯಾವತ್ತಾದರೂ ಕಣ್ಣೀರು ಕದಲಿದರೆ,

ಅವು ಕೆನ್ನೆಗೆ ಧುಮುಕಿ,

ನಿನ್ನ ಸೌಂಧರ್ಯ ಹಾಳು ಮಾಡದಂತೆ,

ನನ್ನ ಚಿತ್ರವಾದರೂ ತಡೆದೀತು......



ನಿನ್ನ ಮೆದು ಮನಸ್ಸಿನಲ್ಲಾದರೂ,

ನನ್ನದೊಂದು ತುಂಟ ನೆನಪಿರಲಿ ಗೆಳತಿ......

ಎಂದಾದರೂ ನಿನ್ನ ಮನ ಮುದುಡಿದರೆ,

ನನ್ನ ತುಂಟತನ ನೆನಪಾಗಿ,

ನೋವು ನಿನ್ನ ಮನ ಘಾಸಿ ಮಾಡದಂತೆ,

ನನ್ನ ನೆನಪಾದರೂ ತಡೆದೀತು........