Feb 1, 2011

ಇದೂ ಒಂದು ಬದುಕು....!

ಸಂಜೆಯಾಗಿತ್ತು..... ಇವತ್ತಾದರೂ ಬೇಗ ಮನೆಗೆ ಹೋಗೋಣ ಎಂದುಕೊಂಡು ಮನೆಯತ್ತ ಹೊರಟಿದ್ದೆ..... ಯಾವತ್ತಿನಂತೆ ಎರಡು ಸಿಗ್ನಲ್ ದಾಟಿ ಹೋಗಬೇಕಿತ್ತು.... ಮೊದಲ ಸಿಗ್ನಲ್ ದಾಟಿ ಬಂದಿದ್ದೆ.... ಎರಡನೇ ಸಿಗ್ನಲ್ ಪಾಸ್ ಆಗೊದರಲ್ಲಿದ್ದೆ..... ಬಿದ್ದೇ ಬಿಟ್ಟಿದ್ದು ಕೆಂಪು ಬಣ್ಣ..... ಮೂರು ನಿಮಿಷದ ಪಾಸ್ ಆಗಿತ್ತು ಅದು..... ಬೈಕ್ ಬಂದ್ ಮಾಡಿ ಹೆಲ್ಮೆಟ್ ತೆಗೆದೆ...... ಎಲ್ಲಾ ಸಿಗ್ನಲ್ನಲ್ಲಿ ಇರುವ ಹಾಗೆ, ಅಲ್ಲೂ ಭಿಕ್ಷುಕರ ತಂಡ ಇತ್ತು..... ಅದರಲ್ಲಿ ಒಬ್ಬ ಸಣ್ಣ ಹುಡುಗ, ಪುಟ್ಟ ಹುಡುಗಿಯನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ..... ಹುಡುಗನ ವಯಸ್ಸು ಹೆಚ್ಚೆಂದರೆ ಆರಿರಬಹುದು, ಆತನ ತೋಳಲ್ಲಿದ್ದ ಮಗುವಿಗೆ ಒಂದು ವರ್ಷವೂ ಆಗಿರೋ ಹಾಗೆ ಕಾಣಲಿಲ್ಲ...  ಆತ ನನ್ನ ಕಡೆಗೇ ಬರುತ್ತಿದ್ದ..... ಬಂದವನೇ ನನ್ನ ಪಕ್ಕದ ಬೈಕ್ನಲ್ಲಿದ್ದ ಒಬ್ಬನಿಗೆ ’ ಸರ್, ಎನಾದ್ರೂ ಕೊಡಿ ಸರ್..." ಎಂದ.... ಆತ " ಯಾಕೆ ...? ಶಾಲೆಗೆ ಹೋಗಲ್ವಾ...? ಎಲ್ಲಿ ನಿನ್ನ ಮನೆಯವರೆಲ್ಲಾ....? ಅವರೂ ಇಲ್ಲೇ ಭಿಕ್ಷೆ ಬೇಡ್ತಾ ಇದಾರಾ?... ಎಲ್ಲಿಂದ ಬರ್ತೀರಪ್ಪಾ ನೀವೆಲ್ಲ ..? ’ ಎಂದೆಲ್ಲಾ ಕೊರೆಯುತ್ತಿದ್ದ.... ನನಗೆ ಆ ಹುಡುಗ ಮತ್ತು ಆತ ಎತ್ತಿಕೊಂಡ ಪುಟ್ಟ ಮಗು, ನನ್ನನ್ನು ಸುಮಾರು ಹತ್ತು ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿತ್ತು......


ರಸ್ತೆ ಕಾಮಗಾರಿ ಸಲುವಾಗಿ ಸರ್ವೆ ಮಾಡುತ್ತಿದ್ದೆವು......  ಸುಮಾರು ಹತ್ತು ಘಂಟೆಯ ಸಮಯವಾಗಿತ್ತು..... ನನ್ನ್ ಜೊತೆ ಸುಮಾರು ಹತ್ತು ಜನ ಕೆಲಸಗಾರರಿದ್ದರು.... ಒಬ್ಬ ಹುಡುಗ , ಸಣ್ಣ ಹುಡುಗಿಯನ್ನು ಎತ್ತಿಕೊಂಡು ಬಂದ.... " ಸರ್, ಏನಾದರು ಕೆಲ್ಸ ಇದ್ರೆ ಕೊಡಿ.." ಎಂದ... ಹುಡುಗನಿಗೆ ಹತ್ತು ವರ್ಷವಿರಬಹುದು...ಆತನ ಕೈಯಲ್ಲಿ ನಾಲ್ಕೈದು ತಿಂಗಳ ಮಗುವಿತ್ತು...... ಮಗುವಿಗೆ ಹಸಿವೆಯಾಗಿತ್ತು ಎನಿಸುತ್ತದೆ...... ಅಳಲು ಶುರು ಮಾಡಿತ್ತು..... ನನ್ನ ಸಂಗಡ ಇದ್ದ ಕೆಲಸಗಾರರು ಆತನನ್ನು ಓಡಿಸಲು ಬಂದರು..... ನಾನು " ಹೇಯ್, ನೀನ್ಯಾಕೆ ಇಲ್ಲಿದ್ದೀಯಾ...? ನೀನು ಶಾಲೆಗೆ ಹೋಗಲ್ವಾ...? ನಿನಗೆಲ್ಲಾ ಕೆಲಸ ಕೊಡಕ್ಕೆ ಆಗಲ್ವಪ್ಪಾ.... " ಎಂದೆ.... ಹುಡುಗ " ಸರ್, ನನ್ ತಂಗಿ ಅಳ್ತಾ ಇದ್ದಾಳೇರಿ.... ಅವಳಿಗೆ ಎನಾದರೂ ತಿನ್ನಿಸಬೇಕು, ಕೆಲ್ಸ ಎನಾದರೂ ಕೊಡ್ರೀ.... ಸ್ವಲ್ಪ ಹಣ ಕೊಡಿ... ಅದರಲ್ಲಿ ನನ್ ತಂಗೀಗೆ ತಿನ್ಲಿಕ್ಕೆ ತೆಗೆದು ಕೊಡುತ್ತೇನೆ" ಅಂದ.... ’ ಹಾಗೆಲ್ಲಾ ಕೆಲಸ ಕೊಡಲು ಆಗಲ್ಲಪ್ಪಾ... ನಿನ್ನ ಅಪ್ಪ ಅಮ್ಮ ಎಲ್ಲಿ..? ಎಂದೆ...... ಜೊತೆಯಲ್ಲಿದ್ದ ಕೆಲಸಗಾರರು ನಗಲು ಶುರು ಮಾಡಿದರು..... ಆ ಹುಡುಗನ ಕಣ್ಣಲ್ಲಿ ನೀರು ..... ಆತ ಮುಖ ಕೆಳಗೆ ಹಾಕಿದ..... ಜೊತೆಯಲ್ಲಿದ್ದ ಕೆಲಸಗಾರನೊಬ್ಬ " ಎಯ್ ಬಿಡ್ರೀ ಸರ್.... ಅಲ್ಲಿ ನೋಡ್ರಿ ಇವರನ್ನು ಭಿಕ್ಷೆ ಬೇಡಲು ಬಿಟ್ಟು , ಇವರ ತಾಯಿ ಅಲ್ಲಿ ನೋಡ್ತಾ ಇದಾಳೆ ನೋಡಿ" ಎಂದು ದೂರದ ಕಡೆ ಕೈ ತೋರಿಸಿದ.... ಆ ಹುಡುಗ ’ ನಿಮ್ಮ ದುಡ್ಡೂ ಬೇಡ, ನಿಮ್ಮ ಕೆಲಸಾನೂ ಬೇಡ’ ಎನ್ನುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋದ.... ಆ ಪುಟ್ಟ ಮಗು ಜೋರಾಗಿ ಅಳಲು ಶುರು ಮಾಡಿದ್ದಳು.... ನಾನು ಎನಾದರು ದುಡ್ಡು ಕೊಡೋಣ ಎಂದು ಕಿಸೆಗೆ ಕೈ ಹಾಕಿದೆ..... ಜೊತೆಯಲ್ಲಿನ ಕೆಲಸಗಾರನೊಬ್ಬ " ಅವನಿಗೆ ಅಪ್ಪ ಯಾರಂದೇ ಗೊತ್ತಿಲ್ಲ.... ಹೆತ್ತು ರಸ್ತೆ ಮೇಲೆ ಬಿಡುತ್ತಾರೆ... ಮಕ್ಕಳು ಹೀಗೆ ಭಿಕ್ಷೆ ಬೇಡುತ್ತಾ ಜೀವನ ಮಾಡ್ತಾರೆ.... " ಎಂದ.... ನನಗೆ ಅರ್ಥ ಆಗಲಿಲ್ಲ..... " ಎನಾಯ್ತಪ್ಪ." ಎಂದೆ..... " ನಿಮಗೆ ಗೊತ್ತಿಲ್ಲ ಸರ್, ಅಲ್ಲಿ ನೋಡಿ, ಅಲ್ಲಿ ಆ ಹುಡುಗನ ಅಮ್ಮ ನಿಂತಿರ್ತಾಳೆ... ಸುಮಾರು ಜನ ಲಾರಿ ಡ್ರೈವರ್ ಗಳು  ಅವಳ ಜೊತೆ ಮಜಾ ಮಾಡಿ ದುಡ್ಡು ಕೊಟ್ಟು ಹೋಗ್ತಾರೆ... ಅದರಲ್ಲೇ ಅವರ ಜೀವನ.... ಇವರು ಮಾಡೊ ಪಾಪದ ಕೆಲಸಕ್ಕೆ ತಪ್ಪೇ ಮಾಡದ ಈ ಮಕ್ಕಳು  ಭೂಮಿಗೆ ಬಂದು ಕಷ್ಟ ಅನುಭವಿಸುತ್ತವೆ....ಎಲ್ಲರ ನಿಷ್ಟುರ ಬಾಯಿಗೆ ಆಹಾರವಾಗುತ್ತಾರೆ" ಎಂದ..... ನನಗೆ ಅಯ್ಯೋ ಎನಿಸಿತು..... ಆ ಹುಡುಗ ತನ್ನ ಅಮ್ಮನ ಕಡೆಗೆ ಓಡುತ್ತಿದ್ದ... ಆ ಹೆಂಗಸು ಹರಕಲು ಸೀರೆ ಉಟ್ಟಿದ್ದಳು... ಹತ್ತಿರ ಬಂದ ಮಗನಿಂದ ಅಳುತ್ತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದಳು.... ಆ ಹುಡುಗ ಅವಳ ಕೈಯನ್ನು ದೂರ ತಳ್ಳಿ ಮುಂದಕ್ಕೆ ಹೋದ..... 

ನಾನು ಗಮನಿಸುತ್ತಲೇ ಇದ್ದೆ.... ಆ ಹುಡುಗ ತನ್ನ ಅಮ್ಮನ ಹತ್ತಿರ ಮಾತನಾಡುತ್ತಿರಲಿಲ್ಲ.....ಪುಟ್ಟ ಕೂಸಿನ ಅಳು ಜೋರಾಗಿತ್ತು..... ಅದನ್ನು ನೋಡಿ ಆ ಅಮ್ಮನಿಗೂ ಅಳು ಬಂದಿತ್ತು ಎನಿಸುತ್ತದೆ..... ಅವಳೂ ಮರದ ಕೆಳಗೆ ಹೋಗಿ ಕುಳಿತು ಮುಖ ಮುಚ್ಚಿಕೊಂಡಳು.... ಅಷ್ಟರಲ್ಲಿ ಒಂದು ಲಾರಿ ಅವರ ಪಕ್ಕದಲ್ಲಿ ನಿಂತಿತು....ಆ ಹುಡುಗ ಓಡಿ ಹೋಗಿ ಡ್ರೈವರ್ ಹತ್ತಿರ ದುಡ್ಡು ಕೇಳಿದ.... ಆತನ ಧ್ಯಾನವೆಲ್ಲಾ ಮರದ ಕೆಳಗೆ ಕುಳಿತ ಹೆಂಗಸಿನ ಮೇಲಿತ್ತು...... ಆತನಿಗೆ ಅಳುತ್ತಿದ್ದ ಮಗುವಾಗಲಿ, ಅವಳ ಹಸಿವೆಯಾಗಲಿ ಕಾಣಿಸಲೇ ಇಲ್ಲ.... ಹುಡುಗ ಕೈಯೊಡ್ಡಿ ನಿಂತಿದ್ದ..... ಡ್ರೈವರ್ ಅವರ ಕಡೆ ನೋಡದೇ ಸೀದಾ ಹೆಂಗಸಿನ ಹತ್ತಿರ ಹೋದ..... ಆ ಹುಡುಗ ತನ್ನ ಹಣೆಬರಹಕ್ಕೆ ಸೋತು ನಮ್ಮೆಡೆಗೆ ನಡೆದು ಬಂದ..... ನಾನು ನಮ್ಮ ಕೆಲಸಗಾರರ ಕೈಲಿ ಹಣ ಕೊಟ್ಟು ಹಾಲು ಮತ್ತು ಬಿಸ್ಕಟ್ ತರಲು ಹೇಳಿ ಕಳಿಸಿದೆ....

ಆ ಹೆಂಗಸು ಬಂದ ಡ್ರೈವರ್ ಹತ್ತಿರ ಹಣ ಕೇಳುತ್ತಿದ್ದಳು.... ಆಕೆ ತನ್ನ ಮಗನ ಕಡೆ ಕೈ ತೋರಿಸಿ ಎನೋ ಹೇಳುತ್ತಿದ್ದಳು..... ಆತ ಅವಳ ಮಾತಿಗೆ ಒಪ್ಪುವ ಹಾಗೆ ಕಾಣುತ್ತಿರಲಿಲ್ಲ..... ಆಕೆ ತನ್ನ ದೇಹ ಮಾರಾಟಕ್ಕೂ ಮೊದಲೇ ಹಣ ಕೇಳುತ್ತಿದ್ದಳು ಎನಿಸುತ್ತದೆ.... ಆದರೆ ಆತ ಒಪ್ಪುತ್ತಿರಲಿಲ್ಲ..... ಆಕೆ ಅಳುತ್ತಲೇ ಗಿಡಗಳ ಮರೆಯಲ್ಲಿನ ಡೇರೆಗೆ ಆತನನ್ನು ಕರೆದುಕೊಂಡು ಹೋದಳು.... ಇಲ್ಲಿ, ಹುಡುಗ ನಿಧಾನವಾಗಿ ತನ್ನ ತಂಗಿಗೆ ಬಾಟಲಿಯಲ್ಲಿ ತಂದಿದ್ದ ಹಾಲನ್ನು ಕುಡಿಸುತ್ತಿದ್ದ.... ಬಿಸ್ಕೇಟ್ ತಿನ್ನಿಸುತ್ತಿದ್ದ..... ಮದ್ಯೆ, ಮದ್ಯೆ ನನ್ನ ಕಡೆ ನೋಡಿ ನಗು ತೋರಿಸುತ್ತಿದ್ದ.... ಆ ಮಗು ನಗು ನಗುತ್ತಾ ಹಾಲು ಕುಡಿಯುತ್ತಿತ್ತು...... ಇದೇ , ಇದೇ ...ಇದೇ  ಒಂದು ಮಗುವಿನ ನಗುವಿಗಾಗಿ ಆ ತಾಯಿ ತನ್ನ ದೇಹ ಮಾರಾಟಕ್ಕಿಳಿದ್ದಾಳೆ...... ಇದನ್ನ ಬಿಟ್ಟು ಅವಳಿಗೆ ಬೇರೆ ದಾರಿಯೇ ಇರಲಿಲ್ಲ ಅನಿಸುತ್ತದೆ..... ಆಕೆ ಎಲ್ಲಿ, ಏನೇ ಕೆಲಸ ಮಾಡಲು ಹೋದರೂ ಜನ ಆಕೆಯನ್ನು ಕೆಟ್ಟ ದ್ರಷ್ಟಿಯಿಂದಲೇ ನೋಡುತ್ತಾರೆ..... ಆಕೆ ಒಂದು ಗುಟುಕು ಜೀವಕ್ಕಾಗಿ, ಹಾಳು ಹೊಟ್ಟೆಯ ಹಸಿವೆಗಾಗಿ, ಯಾವನದೋ ಎರಡು ತೊಟ್ಟು ಕೆಟ್ಟ ಹನಿಯಿಂದ ಭೂಮಿಗೆ ಬಂದ ಜೀವದ ಖುಶಿಗಾಗಿ..... ಮತ್ತದೇ ದೇಹವನ್ನು ಇನ್ನೊಬ್ಬನಿಗೆ ಹಾಸಬೇಕು....

ಡ್ರೈವರ್, ತನ್ನ ಚಟ ತೀರಿಸಿಕೊಂಡು ಹೊರಟು ಹೋದ... ಆ ಹೆಂಗಸು, ಓಡುತ್ತಾ ಹೋಗಿ ಕೈಯಲ್ಲಿದ್ದ ಹಣದಿಂದ ಬಿಸ್ಕೇಟ್ ,ಹಾಲು ತೆಗೆದುಕೊಂಡು ಬಂದಳು..... ಬಂದವಳೇ..... ಮಗನ ಕಾಲ ಮೇಲೆ ಮಲಗಿ ನಿದ್ದೆ ಹೋದ ಪುಟ್ಟ ಮಗಳನ್ನು ನೋಡಿ ಅವಳ ಮುಖದಲ್ಲಿ ಸಂತ್ರಪ್ತಿ ಮೂಡಿತು..... ತನ್ನ ಕೈಯಲ್ಲಿದ್ದ ಬಿಸ್ಕೇಟ್ ಮತ್ತು ಹಾಲನ್ನು ಮಗನಿಗೆ ಕೊಡಲು ಹೋದಳು..... ಆ ಹುಡುಗ ಅಮ್ಮನ ಕೈಯಲ್ಲಿನ ಬಿಸ್ಕೆಟ್, ಹಾಲನ್ನು ಮತ್ತು ಅವಳ ಮುಖವನ್ನು ನೋಡಿದ..... ರಸ್ತೆಯಲ್ಲಿ ನಿಂತಿದ್ದ ಲಾರಿಯನ್ನು ಒಮ್ಮೆ ನೋಡಿ, ಅಮ್ಮನ ಕೈಯಲ್ಲಿದ್ದ ತಿಂಡಿ ತೆಗೆದುಕೊಂಡು ಬಿಸಾಡಿಬಿಟ್ಟ......

"ಕೀಯ್... ಪೀಯ್......" ಎಂಬ ಶಬ್ಧದಿಂದ ವಾಸ್ತವಕ್ಕೆ ಬಂದಿದ್ದೆ...... ಇನ್ನೂ ರೆಡ್  ಸಿಗ್ನಲ್ ಇತ್ತು...ನಾನು ಈ ಎಲ್ಲಾ ವಿಚಾರದಲ್ಲಿ ಸಿಗ್ನಲ್ ಜಂಪ್ ಮಾಡಿಬಿಟ್ಟಿದ್ದೆ...
ಮುಂದೆ ಬಂದಾಗ ನಿಸ್ತೇಜ ಕಣ್ಣಿನ  ಹುಡುಗ ....!...."ಅಣ್ಣಾ... ಬೆಳಗಿನಿಂದ ಏನೂ ತಿಂದಿಲ್ಲ...ಹತ್ತು ರುಪಾಯಿ ಕೊಡು ಅಣ್ಣಾ..."

ನಾನು ಪರ್ಸ್ ತೆಗೆದೆ.. .....ಅದರಲ್ಲಿ ಇದ್ದದ್ದು ಎಲ್ಲಾ ನೂರರ ನೋಟು......ನನಗೆ ನೆನಪಾಗಿದ್ದು..... ಹತ್ತು ವರ್ಷದ ಹಿಂದಿನ ಆ ಹುಡುಗನ ಅಮ್ಮನ ಅಸಹಾಯಕತೆ........ಐವತ್ತು ರುಪಾಯಿ ಕೊಟ್ಟುಬಿಡೋಣ ಅಂದುಕೊಂಡೆ.......ಪರ್ಸ್ ಹುಡುಕಿದೆ....ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಬಂದ......"ನೋಡಿ ಸರ್... ಏನೋ ಅರ್ಜಂಟ್ ಇತ್ತು......ಸ್ವಲ್ಪ ಅಡ್ಜಸ್ಟ್ ಮಾಡಿ.."...ನಾನು ಗೋಗರೆದೆ..."ಅಲ್ಲಾರೀ...ವಿದ್ಯಾವಂತರಾದ ನಿಮಗೇ ಅರ್ಥ ಆಗಲ್ವಾ ಸಿಗ್ನಲ್ ಇದ್ದದ್ದು...? ಕೇಸ್ ಹಾಕ್ಲಾ...? ಇಲ್ಲಾ... ಐವತ್ತು ಕೊಡಿ....ಇನ್ನು ಮುಂದೆ ಹೀಗೆಲ್ಲ ಮಾಡ ಬೇಡಿ..."ನಾನು ತಲೆ ಅಲ್ಲಾಡಿಸಿ... ಮತ್ತೆ ಪರ್ಸ್ ಹುಡುಕಿದೆ...... ಐವತ್ತರ ನೋಟು ಸಿಕ್ಕಿತು.. ಪೊಲೀಸನಿಗೆ ಕೊಟ್ಟೆ...
ಹುಡುಗ ಮತ್ತೆ ನನ್ನ ಕಾಲು ಮುಟ್ಟಿದ..
ನನಗಿನ್ನೂ ಐವತ್ತು ರುಪಾಯಿಕೊಟ್ಟ ತಲೆಬಿಸಿ ಇತ್ತು......

ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಒಂದು ರುಪಾಯಿಯ ನಾಣ್ಯ ಸಿಕ್ಕಿತು... ... ಹುಡುಗನಿಗೆ ಕೊಟ್ಟೆ...
"ನೋಡು.... ಬಿಕ್ಷೆ ಬೇಡಬೇಡ.......ಎಲ್ಲಾದರು ಕೆಲಸ ಹುಡುಕಿ ದುಡಿದು ತಿನ್ನು.." ಅಂದೆ....
ಹುಡುಗ ನನ್ನ ಮುಖವನ್ನೂ, ಪೋಲಿಸಿನ ಕೈಯಲ್ಲಿದ್ದ ಐವತ್ತು ರುಪಾಯಿಯನ್ನೂ ನೋಡುತ್ತಿದ್ದ....

ನಾನು ಸಿಟ್ಟಿನಿಂದ ಬೈಕ್ ಸ್ಟಾರ್ಟ್ ಮಾಡಲು ಕಿಕ್ ಹೊಡೆದೆ..... ಸಿಟ್ಟು ಯಾರ ಮೇಲೋ ತಿಳಿಯಲಿಲ್ಲ.......

34 comments:

  1. ಪ್ರೀತಿಯ ದಿನಕರ್...

    ಕಥೆಯಲ್ಲ ಇದು ಜೀವನ ....
    ಇದೇ ಬದುಕಿನ ಕಟು ವಾಸ್ತವದ ಚಿತ್ರಣ.....

    ದಿನಾಲೂ ನಾವು ನೋಡುವ ರಸ್ತೆ ಬದಿಯಲ್ಲಿ ಇಂಥಹ ಅದೆಷ್ಟು ಮಕ್ಕಳಿರುತ್ತಾರೆ.!
    ತಾಯಿಂದಿರ ಅಸಹಾಯಕತೆ ಇದ್ದಿರುತ್ತದೆ!

    ಓದಿ ಮನಸ್ಸೆಲ್ಲ ಭಾರವಾಯಿತು...

    ReplyDelete
  2. ಸರ್

    ಹೊಟ್ಟೆಯ ಹಸಿವು ಎಲ್ಲವನ್ನೂ ಮಾಡಿಸುತ್ತದೆ,
    ಗಾಂಧೀಜಿಯವರ ಮಾತೊಂದು ನೆನಪಿಗೆ ಬರುತ್ತದೆ,
    ''ಮೊದಲು ತಿನ್ನಲು ಕೊಡಿ, ನಂತರ ಧರ್ಮದ ಭೋಧನೆ ಮಾಡಿ'' ಎಂದು
    ನಮ್ಮ ದೇಶದಲ್ಲಿ ಬಡತನದ ರೇಖೆಯ ಕೆಳಗಿನವರ ಸಂಖ್ಯೆ ಏರುತ್ತಲೇ ಇದೆ
    ಎಲ್ಲಿದೆ ದೇಶದ ಪ್ರಗತಿ,
    ದೇಶದ ಪ್ರಗತಿ ಎಂದರೆ ಟಾಟಾ , ಬಿರ್ಲಾ, ಅಂಬಾನಿ ದುಡ್ಡು ಮಾಡಿಕೊಳ್ಳುವುದಲ್ಲ ಎಂಬ ಸತ್ಯ ನಮಗೆ ತಿಳಿಯುವುದು ಯಾವಾಗ?
    ನಾವು ಎಚ್ಚೆತ್ತುಕೊಳ್ಳುವುದು ಯಾವಾಗ?
    ರಸ್ತೆಯ ಬದಿಯ ಹೆಂಗಸಿನ ಅಸಹಾಯಕತೆಗೆ ನಾವೆಲ್ಲಾ ಕಾರಣ
    ನಾವ್ಯಾಕೆ ಆಳುವ ಸರ್ಕಾರವನ್ನು ಕೇಳುತ್ತಿಲ್ಲ ಇದರ ಬಗೆಗೆ?
    ಕೇವಲ ವೋಟು ಹಾಕಿದರೆ ನಮ್ಮ ಕರ್ತವ್ಯ ಮುಗಿಯಿತೇ?

    ನನಗೆ ಆ ಹೆಂಗಸಿನ ಬಗೆಗೆ ಕನಿಕರ ಮೂಡುತ್ತಿಲ್ಲ, ಆದರೆ ಆ ಹೆಂಗಸನ್ನು ಅಂಥಹ ಸ್ಥಿತಿಗೆ ತಂದ ನಮ್ಮ ಸರ್ಕಾರ,
    ಅದನ್ನು ಮೌನವಾಗಿ ನೋಡುವ ನಮ್ಮಂತ ''ಪ್ರಜ್ಞಾವಂತ'' ಅನ್ನಿಸಿಕೊಂಡ ಮೂರ್ಖರ ಬಗೆಗೆ ಸಿಟ್ಟು ಬರುತ್ತಿದೆ

    ನಿಮ್ಮ ಬರಹ ಬಹಳಷ್ಟು ಚಿಂತನೆಗೆ ಎಡೆ ಮಾಡಿತು

    ReplyDelete
  3. ದಿನಕರ್;ಮನ ಮಿಡಿಯುವ ಕಥೆ!ಇದು ಕಥೆಯಲ್ಲ,ಬಹಳಷ್ಟು ಜನರ ವ್ಯಥೆ.ಈ ನಮ್ಮ ಸಮಾಜದ ಅನಿಷ್ಟ ಅವ್ಯವಸ್ಥೆಯ ಬಗ್ಗೆ ಮನಸ್ಸು ವ್ಯಾಕುಲಗೊಳ್ಳುತ್ತದೆ.

    ReplyDelete
  4. ಸಮಾಜದ ಒಂದು ಕ್ರೂರ ಮುಖ ದರ್ಶನ ಮಾಡಿಸಿದ್ದೀರಿ. ಓದಿದ ಮನಸ್ಸು ಸಂಕಟದಿಂದ ಭಾರವಾಯಿತು.ಇವರೂ ಭಾರತೀಯ ಪ್ರಜೆಗಳೇ ಅಲ್ವೇ ??? ಅನ್ನಿಸಲು ಶುರುವಾಯಿತು. ಉತ್ತಮ ನಿರೂಪಣೆ.ಇದು ನಮ್ಮ ಸಮಾಜದಲ್ಲಿರುವ ಕೊಳಕುತನ ತೊಳೆಯುವವರು ಯಾರು??? ಎಲ್ಲರೂ ಅವರವರ ಪ್ರಪಂಚದಲ್ಲಿ ಬ್ಯುಸಿ.!!! ಇಂತಹ ಮಕ್ಕಳ /ಮಹಿಳೆಯರ ಕಲ್ಯಾಣಕ್ಕಾಗಿ ಯಾವ ಸಮಾಜ ಸೇವಾ ಸಂಸ್ಥೆಗಳು ಮನಸ್ಸು ಮಾಡದಿರುವುದು ಶೋಚನೀಯ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  5. ದಿನಕರ್ ಸರ್,

    ಇದು ನಿತ್ಯದ ಬದುಕಲ್ಲಿ ನಮಗೆ ಆಗಾಗ ಎಡತಾಕುತ್ತಿದ್ದರೂ ಅದರ ಬಗ್ಗೆ ಗಮನಿಸುವುದಿಲ್ಲ. ಒಮ್ಮೆ ಅದರ ಆಳಕ್ಕೆ ಇಳಿದು ನೋಡಿದಾಗ ಅಲ್ಲಿ ಬದುಕಿರುತ್ತದೆ ಅನ್ನುವುದನ್ನು ಮನತಟ್ಟುವಂತೆ ಬರೆದಿದ್ದೀರಿ...ಓದಿ ಮನಸ್ಸಿಗೆ ಖೇದವಾಯಿತು..

    ReplyDelete
  6. ದಿನಕರರೆ,
    ನೀವು ಚಿತ್ರಿಸಿದ ಘಟನೆಯಿಂದ ಕಳವಳವಾಗುತ್ತದೆ. ತುತ್ತು ಕೂಳಿಗಾಗಿ ನಮ್ಮ ಅಬೋಧ ಬಾಲರು ಹಾಗು ಹೆಣ್ಣುಮಕ್ಕಳು ಪಡುವ ಯಾತನೆಯು ಯಾವಾಗ ಮಾಯವಾದೀತೊ ತಿಳಿಯದು.

    ReplyDelete
  7. ದಿನಕರ್ ಚಿಂತನಾಮಂಥನಕ್ಕೆ ದೂಡುವ ಲೇಖನ...ಒಂದೆಡೆ ಲಕ್ಷಾಂತರ ಕೋಟ್ಯಾಂತರ ರೂಪಾಯಿ ಹಗರಣಮಾಡುವ ತಿಂದುಂಡು ತಿನ್ನುವುದಕ್ಕಿಂತ ಚಲ್ಲಾಡುವ ಶ್ರೀಮಂತ ಅಂಧರೊಂದು ಕಡೆ...ಒಪ್ಪೊತ್ತಿನ ಕೂಳಿಗೆ ಪರದಾಡಿ ಎಂಜಲೆಲೆಯನ್ನು ಒರೆಸಿ ಅನ್ನಬಾಚುವರೊಂದು ಕಡೆ...ಹಿಮಾಲಯದ ಶಿಖರ ಅಗೆದ ನೆಲದ ಪ್ರಪಾತ ಎಲ್ಲಾ ನಮ್ಮಲ್ಲಿವೆ..ಚನ್ನಾಗಿದೆ ಲೇಖನ

    ReplyDelete
  8. ದಿನಾಕರ್ ಅಣ್ಣ.. ಬಹಳ ದಿನಗಳಾಗಿತ್ತು ನನ್ನ ಕಣ್ಣಲ್ಲಿ ನೀರನ್ನು ನೋಡಿ.. ಯಾಕೋ ಮನಸ್ಸು ಬಹಳ ಭಾರವೆನಿಸಿತ್ತು ಲೇಖನ ಓದಿ..
    ಬೆಂಗಳೂರಿನ ಸಿಗ್ನಲ್ಲುಗಳಲ್ಲಿ ಅಸಹಾಯಕರಾಗಿ ಬಿಕ್ಷೆ ಬೇಡುವ ಹದಿ ಹರೆಯದ ಹೆಂಗೆಳೆಯರನ್ನ ನೋಡಿದಾಗ, ಅವರ ಭವಿಷ್ಯವನ್ನ ನೆನೆಸಿಕೊಂಡಾಗ ನನಗೆ ಮೂಡುವುದು ಎರಡೇ ಪ್ರಶ್ನೆ.
    ದೇವರು ಇದ್ದಾನ?
    ಲೈಫು ಇಷ್ಟೇನಾ?

    ReplyDelete
  9. ದುಡ್ಡಿಗಾಗಿ ಮೈ ಮಾರಿಕೊಳ್ಳೋರಿಗೆ ಏನು ಹೇಳಬೇಕೋ ಗೊತ್ತಾಗಲ್ಲ. ಹಳ್ಳಿಗಳಲ್ಲಿ ಈಗ ಗದ್ದೆ, ತೋಟಗಳಲ್ಲಿ ಕೆಲಸ ಮಾಡಕ್ಕೆ ಜನ ಇಲ್ಲ. ದಿನಕ್ಕೆ ೧೦೦ ರಿಂದ ೧೫೦ ಸಂಬಳ. ಒಂದೇ ದುಡಿಯೋ ಕೈ ಆದ್ರು ಹಳ್ಳಿಗಳಲ್ಲಿ ಬದುಕ ಬಹುದು. ಅದು ಬಿಟ್ಟು ಭಿಕ್ಷೆ, ವೈಶ್ಯಾಟಿಕೆ ಯಾಕೆ ಮಾಡ್ತಾರೋ. ಮೈ ಬಗ್ಗಿಸದೆ ಸಿಗೋ ಬಿಟ್ಟಿ ದುಡ್ಡು ಬೇಕು.

    ReplyDelete
  10. ದಿನಕರ್..
    ಬದುಕು ತು೦ಬಾ ಕ್ರೂರ ಅನ್ನಿಸಿಬಿಡುತ್ತದೆ..ಇ೦ತವರನ್ನು ಕ೦ಡಾಗ..
    ಯಾರದ್ದೊ ತಪ್ಪಿಗೆ ಯಾರ್ಯಾರಿಗೊ ಶಿಕ್ಷೆ.
    ವೇದನೆಯಾಗುತ್ತದೆ..

    ReplyDelete
  11. Sir no words to say..we can't define any thing in life..we don't know what has happened n for what? AN d ultimately thats life.:(

    ReplyDelete
  12. ಪ್ರತಿಯೊಂದು ವ್ಯಕ್ತಿಯ ಜೀವನದಲ್ಲೂ ಒಂದೊಂದು ಘಟನೆ ಇರುತ್ತದೆ ಎಂಬುದಕ್ಕೆ ನಿಮ್ಮ ಲೇಖನವೇ ಸಾಕ್ಷಿ ..
    ನಿಜವಾಗಿಯೂ ಚಿಂತಿಸ ಬೇಕಾದ ವಿಷಯ ..

    ReplyDelete
  13. uttama kata niroopaNa shaili. maguvina svaabhimana mattu taayiya asahayakate chennaagi nirupisiddeera good.
    manamuTTuva kate... Bhesh.

    ReplyDelete
  14. ಕಟುವಾಸ್ತವ ಚಿತ್ರಣ ಸರ್. ಒಂದೆಡೆ ಐಶಾರಾಮದಲ್ಲಿ ಮುಳುಗೇಳುವ ಶ್ರೀಮಂತರು ಇನ್ನೊಂದೆಡೆ ಹೊಟ್ಟೆಗಿಲ್ಲದೆ ಕಷ್ಟಪಡುವ ಕಂದಮ್ಮಗಳು....ಇದ್ಯಾಕೆ ಹೀಗೊ?

    ReplyDelete
  15. ದಿನಕರ್,
    ಓದಿ ತುಂಬಾ ವ್ಯಥೆ ಆಯ್ತು..
    ಹೊಟ್ಟೆಗಾಗಿ ಏನೆಲ್ಲಾ ಮಾಡಬೇಕು ಅನ್ನೋದೇ ಬೇಸರ ತರುವ ವಿಷ್ಯ..

    ReplyDelete
  16. ದಿನಕರ್ ಸರ್, ಮನ ಕರಗುವಂಥ ಲೇಖನ. ಇದು ಬರೀ ಇವತ್ತು ನಿನ್ನೆಯ ಕಥೆಯಲ್ಲ. ಇದಕ್ಕೇನು ಪರಿಹಾರ ಅನ್ನುವುದು ಮಾತ್ರ ಮುಂದಿರುವ ಪ್ರಶ್ನೆ..

    ReplyDelete
  17. flashback story was hurting sir... :(

    sir, time sikre telugu nalli "VEDAM" anta ondu movie bandittu... nodi...

    ReplyDelete
  18. ಕರುಳು ಕಣ್ಣೀರನ್ನೇ ಟಾರ್ಗೆಟ್ ಮಾಡ್ತೀರಲ್ಲ ದಿನಕರ ಸಾರ್,
    ನಾವು ಅಂಥವರನ್ನ ಎಲ್ಲೋ ಒಮ್ಮೆ ನೋಡಿ ಆ ದಿನವೆಲ್ಲ ಕೊರಗುತ್ತೇವೆ .. ಆದ್ರೆ ಅವರಿಗೆ ಅದು ದಿನನಿತ್ಯದ ಪರಿಪಾಠ... ಇದಕ್ಕೆಲ್ಲ ನಮ್ಮ ದೇಶದಲ್ಲಿ ಕೊನೆಯೂ ಇಲ್ಲ ಪರಿಹಾರವು ಇಲ್ಲವಾಗಿಬಿಟ್ಟಿದೆ..:(

    ReplyDelete
  19. ಚೆನ್ನಾಗಿದೆ ಸಾರ್!

    ReplyDelete
  20. ದಿನಕರ್,
    ಮನ ಮಿಡಿಯುವ ಲೇಖನ...
    ಬಹಳಷ್ಟು ಜನರ ವ್ಯಥೆ ಇದು....

    ReplyDelete
  21. ಓದಿ ಮನಸ್ಸು ಭಾರವಾಯ್ತು..

    ReplyDelete
  22. ಇದೇನ್ ಸರ್..
    ಇನ್ನೂ ವೆರೈಟಿ ವೆರೈಟಿ ಬದುಕು ನಡೆಸ್ತಿರೋ ಜನ ಇದಾರೆ..
    ಹೊಟ್ಟೆ ತುಂಬಾ ಉಂಡು ಅದನ್ನು ಕರಗಿಸೋಕೆ ಶೋಕಿಗೆ ಎದೆಹಾಸೋ ಕೆಲವರಿಗೆ ಹೋಲಿಸಿದರೆ ಹೊಟ್ಟೆಪಾಡಿಗಾಗಿ ಎದೆಚೆಲ್ಲುವ ಇವರೇ ಪರವಾಗಿಲ್ಲವೇ..??!!
    ಇನ್ನೊಂದ್ ಮಾತು ಭಾಶೆ ಅವರ ಮಾತಿಗೆ..:ಹಳ್ಳಿಗಳಲ್ಲಿ ಕೂಲಿಗೆ ಹೋದರೂ ಅಲ್ಲಿ ಸಾಹುಕಾರರಿಗೂ ಕೆಲವೊಮ್ಮೆ ಸೇವೆ ಮಾಡಬೇಕಾಗುತ್ತೆ..

    ReplyDelete
  23. ಸಿಗ್ನಾಲ್ ನಲ್ಲಿ ಅಲೆಯುವ ಎಳೆಯ ಹುಡುಗರ ಮತ್ತು ಮಗುವನ್ನು ಹೊತ್ತ ಮಹಿಳೆಯರ ಮುಖನೋಡಿದಾಗ ಅಯ್ಯೋ ಎನಿಸುತ್ತದೆ. ದೇವರು ಅವರಿಗೆ ಈ ಸ್ಥಿತಿಯನ್ನೊ ಬೇಡುವ ಮನಸ್ಸನ್ನೂ ಕೊಟ್ಟನಲ್ಲಾ ಎನಿಸುತ್ತದೆ. ಆದರೆ ಏನುಮಾಡೋಣ? ನಿಮ್ಮ ಕಥೆಯಲ್ಲಿ ನೀವು ಹೇಳಿದ ಅನುಭವವೇ ಹಲವರದ್ದು. ಅದು ನನ್ನನ್ನೂ ಬಿಟ್ಟಿಲ್ಲ! ಅನಿವಾರ್ಯತೆಯಲ್ಲಿ ಟ್ರಾಫಿಕ್ ಪೋಲೀಸರಿಗೆ ನೂರಿನ್ನೂರು ಕೊಡುವ ನಾವು ಅಂತಹ ಹುಡುಗರಿಗೆ ಕೊಡಲು ಮುಂದಾಗುವುದಿಲ್ಲ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಲೂ ಆಗದ ಸ್ಥಿತಿ ನಮ್ಮದು. ಲೇಖನ ಕಣ್ಣೆವೆ ತೋಯಿಸುತ್ತದೆ,ಧನ್ಯವಾದ

    ReplyDelete
  24. kathe swalpa disturbing anisithu... aadre idhooo kooda namma suththamutta iruva badukina ondu mukha...

    ReplyDelete
  25. ದಿನಕರಣ್ಣ,
    ಹೌದು ಇದು ಒಂದು ಬದುಕು..!
    ಆದರೇ ಇಂತಹ ಬದುಕು ಯಾಕೆ ಬೇಕು ಅನ್ನೋದು ದೊಡ್ಡ ಪ್ರಶ್ನೆ...??
    ಬೇರೆ ಕೆಲಸ ಮಾಡಬಹುದು, ಇಲ್ಲ ಅನಿವಾರ್ಯವೂ ಇರಬಹುದು..!!
    ಆದರೆ, ಮನಸ್ಸಿಗೆ ತುಂಬಾ ಸಂಕಟ ಆಗುವ ಕೆಲಸ..

    ಲೇಖನ ತುಂಬಾ ಇಷ್ಟ ಆಯ್ತು.

    ReplyDelete
  26. ಇದರಲ್ಲಿ ನೀವು ತುಂಬಾ ವಿಷ್ಯ ಹೇಳಿದ್ಹಾಗೆ ಇತ್ತು. ಕೆಂಪು ಸಿಗ್ನಲ್, ಬಿಕ್ಷೆ, ಟ್ರಾಫಿಕ್ ಪೋಲಿಸ್ ಎಲ್ಲವೂ ರೂಪಕದಂತೆ ಕಾಣುತ್ತಿದೆ. ಬರ್ಭರ ವಾಸ್ತವ ತೆರೆದಿಟ್ಟ ಸುಂದರ ಬರಹ

    ReplyDelete
  27. Dinakar sir..

    hmm kelvondu satya katoora.. baduku anivarya... onde ghataneyalli savira mukagalananna torsideera.. baduke heege..

    dhanyavaada
    pravi

    ReplyDelete
  28. ದಿನಕರ್,

    ಗೊತ್ತಾಗುತಿಲ್ಲ ಏನು ಹೇಳಬೇಕೆಂದು..
    ರೋಟಿ, ಕಪಡ ಮತ್ತು ಮಕಾನ್..ಇನ್ನೂ ಒಂದು ಮರೀಚಿಕೆ ಎನಿಸುವ ಈ ಸತ್ಯದಲ್ಲಿ, ಮೂಕ ಮನದ ರೋದನೆ

    ReplyDelete
  29. ಸಾರ್..ಇದು ನಮ್ಮ ಮುಂದಿರುವ ದುರಂತ ಸತ್ಯ....
    ಕೆಲವೊಮ್ಮೆ ಬೇಡಾ,ಬೇಡ ಎಂದರೂ ಹಣ ಚೆಲ್ಲುವ ನಾವು,ಒಮ್ಮೊಮ್ಮೆ ತೀರಾ ಜುಗ್ಗರಾಗುತ್ತೇವೆ...
    ಅದಾವುದೂ ಮಾಡಬೇಕು ಎಂದೇ ಮಾಡಿದ್ದಲ್ಲ, ಯಾರೋ ಕೆಲವರು ಮಾಡಿದ್ದಕ್ಕೆ ಉಳಿದವರೂ ಅನುಭವಿಸುತ್ತಾರೆ ಅಷ್ಟೆ...
    ಶ್ರೀಮತಿ ಸುಧಾಮೂರ್ತಿಯವರು ಹೇಳಿದಂತೆ"ಭಾರತದಲ್ಲಿ ದಾನಿಗಳಿಗೇನೂ ಕೊರತೆ ಇಲ್ಲ,ಆದರೆ ಭಯವಿರುವಿದು ಆ ಹಣದ ಸಮರ್ಪಕ ಉಪಯೋಗದ ಬಗ್ಗೆ ಅಷ್ಟೆ!!!

    ಮನ ಮುಟ್ಟಿತು ಸಾರ್,
    ಧನ್ಯವಾದಗಳು, ಈ ಗಳಿಗೆಯ ಭಾವಪೂರ್ಣವಾಗಿಸಿದ ಭಾವಪುಷ್ಪಗಳಿಗೆ!!!!
    ಬನ್ನಿ ನಮ್ಮನೆಗೂ,
    http://chinmaysbhat.blogspot.com

    ReplyDelete
  30. ದಿನಕರ್ ಕಟು ವಾಸ್ತವವನ್ನು ಚಿತ್ರಿಸಿದ್ದೀರಿ. ಈ ರೀತಿಯ ಜೀವನ ಅನಿವಾರ್ಯವೇನಲ್ಲ. ಮನಸ್ಸು ಮಾಡಿದರೆ ಆಕೆ ತನ್ನ ಹಾಗೂ ಮಕ್ಕಳ ಜೀವನವನ್ನು ಉತ್ತಮಪಡಿಸಿಕೊ೦ಡು ಒಳ್ಳೆಯರೀತಿಯಲ್ಲಿ ಜೀವನ ನಡೆಸಬಹುದು. ಆದರೆ ಸುತ್ತಿನವರ ಸಹಕಾರದ ಅಗತ್ಯವಿದೆ.

    ReplyDelete
  31. Dinakar sir,

    kaaranaantaragalinda Blog kade baroke aagalilla, late aagi comment maadta irodakke kshame irali....

    Very touching sir.....Ellaru maaduvudu hottegaagi, genu battegaagi idu nija sir....Ishta aitu

    ReplyDelete
  32. mana kalakitu govt bhikshuk police bagge en helodu

    ReplyDelete