Dec 13, 2012

ಸಮಸ್ಯೆ.....!!!



    ತಲೆ ಕೆಟ್ಟು ಹೋಗಿತ್ತು. ಮದುವೆಯಾಗಿ ಇಪ್ಪತ್ತು ವರ್ಷವಾಗಿದ್ದರೂ ಇಂತಹ ಸಂಧಿಗ್ಧ ಪರಿಸ್ಥಿತಿ ಬಂದಿರಲಿಲ್ಲ. ಮನವರಿತು ನಡೆಯುವ ಪತಿ, ಮುದ್ದಾದ ಮಗಳು, ಮನೆ ಮನವನ್ನು ಹಿತವಾಗಿರಿಸಿತ್ತು. ಆದರೆ ಅದೇ ಮುದ್ದಿನ ಮಗಳು ತಲೆಗೆ ತಂದಿಟ್ಟಿದ್ದಳು. ಇನ್ನೂ ಹದಿನೆಂಟು ವಯಸ್ಸು, ಆಗಷ್ಟೇ ಎರಡನೇ ಪಿ.ಯು.ಸಿ ಮುಗಿಸಿದ್ದಳು, ಡಿಗ್ರಿ ಶುರುವಾಗುವ ಮೊದಲು ಕಂಪ್ಯೂಟರ್ ಕ್ಲಾಸ್ ಸೇರಿದ್ದಳು. ಅಲ್ಲಿ ಕಲಿಸುತ್ತಿದ್ದ ತರಬೇತುದಾರನನ್ನೇ ಪ್ರೀತಿಸಲು ಶುರು ಮಾಡಿದ್ದಳು. ಪುಣ್ಯಕ್ಕೆ ನನ್ನ ಹತ್ತಿರ ಹೇಳಿದ್ದಳು. ’’ಅಮ್ಮಾ, ನಂಗೆ ಆತನೆಂದರೆ ಪ್ರಾಣ. ಆತ ಪಾಠ ಮಾಡುವ ರೀತಿ, ತಿಳಿಸಿ ಹೇಳುವ ಪರಿ, ಸಮಸ್ಯೆಗಳನ್ನು ಬಿಡಿಸುವ ವಿಧಾನ ಸುಪರ್. ಆತನಿಲ್ಲದೇ ನಾನು ಬದುಕಲ್ಲ. " ಏನೇನೊ ಬಡಬಡಿಸಿದ್ದಳು.....   

      ’’ಅಬ್ಭಾ , ಹದಿನೆಂಟರಲ್ಲಿ ಎಲ್ಲಿಯ  ಬದುಕು, ಎಂಥಹ ಪ್ರೀತಿಯ ವಿಷಯ.? ಎಲ್ಲಿಂದ ಕಲಿತಳು ಇದನ್ನೆಲ್ಲಾ ಇವಳು.?’’.  ನಾನು ಏನೇನೂ ಮಾತಾಡಲಿಲ್ಲ. "ಮಲ್ಲಿ, ಇವತ್ತು ರೆಸ್ಟ್ ತೆಗೆದುಕೋ, ನಾಳೆ ಮಾತಾಡೋಣ." ಎಂದು ಹೊರಗೆ ಬಂದಿದ್ದೆ. ಪತಿದೇವ ಮನೆಗೆ ಬಂದಾಗ ಎಲ್ಲವನ್ನೂ ಹೇಳಿದರೂ ಆತ ತಲೆ ಕೆಡಿಸಿಕೊಳ್ಳಲಿಲ್ಲ. ” ಅದೆಲ್ಲಾ ಈ ವಯಸ್ಸಲ್ಲಿ ಸಾಮಾನ್ಯ, ನಾಳೆ ಸರಿ ಆಗ್ತಾಳೆ ಬಿಡು " ಎನ್ನುವ ಭಾವ ಆತನದು. ಅಮ್ಮನಾದ ನನಗೆ ದಿಗಿಲಾಗಿತ್ತು. ಮದುವೆಗೆ ಮೊದಲು ನನ್ನ ತಂಗಿ ಹೀಗೇ ಅಮ್ಮನಲ್ಲಿ ಹೇಳಿದ್ದಾಗ, ಹೇಗಾಗಿದ್ದಿರಬಹುದು ಎಂದು ಈಗ ನನಗೆ ಅನುಭವಕ್ಕೆ ಬಂದಿತ್ತು. ಅಮ್ಮ ಆಗಾಗ ಹೇಳುತ್ತಿದ್ದಳು, " ವಯಸ್ಸಿಗೆ ಬಂದ ಹೆಣ್ಣು ಮಕ್ಕಳೆಂದರೆ ಸೆರಗಲ್ಲಿ ಕಟ್ಟಿಕೊಂಡ ಕೆಂಡದಂತೆ." ಅದರ ಅರ್ಥ ನನಗೆ ಈಗ ತಿಳಿದಿತ್ತು. ಈ ಸಂಕಷ್ಟದಿಂದ ಪಾರು ಮಾಡಲು ನೂರಾರು ದೇವರಿಗೆ ಹರಕೆ ಹೊತ್ತು ಮಲಗಿದರೂ ನಿದ್ದೆ ಬರಲಿಲ್ಲ.

   ಬೆಳಿಗ್ಗೆ ಬೇಗ ಎದ್ದು ಅವಳಿಗಿಷ್ಟವಾದ ನೀರು ದೋಸೆ ಮಾಡಿ ಕಾದು ಕುಳಿತೆ. ನನ್ನವರು ಎಂದಿನಂತೆ ಹೊಟ್ಟೆ ತುಂಬಾ ತಿಂದು ’ಆಫಿಸಿನಲ್ಲಿ ಕೆಲಸ ಇದೆ’ ಎನ್ನುತ್ತಲೇ ಹೊರಟರು. ಈಗ ಮಗಳ ಹತ್ತಿರ ಮಾತಾಡುವ ಕೆಲಸ ನನ್ನದಾಗಿತ್ತು. ’’ ಬಾಮ್ಮಾ ಮಲ್ಲಿಗೆ, ಇವತ್ಯಾಕೋ ಫಿಲ್ಮ್ ಹೋಗೋಣ ಎನಿಸುತ್ತಾ ಇದೆ. ಶಾರುಖ್ ಫಿಲ್ಮ್ ನೋಡೋಣ, ಓನ್ ಲೈನ್ ಬುಕ್ ಮಾಡಮ್ಮಾ." ಎಂದೆ. ಅವಳನ್ನು ದಿನವಿಡಿ  ಬ್ಯುಸಿ ಇಡುವುದು ನನ್ನ ಇರಾದೆಯಾಗಿತ್ತು. ಮುಖ್ಯವಾಗಿ ಇವತ್ತಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗುವುದು ತಪ್ಪಿಸಬೇಕಿತ್ತು. " ಅಮ್ಮ ಥ್ಯಾಂಕ್ಸ್ , ನೀರು ದೋಸೆ ಮಾಡಿದ್ದಕ್ಕೆ. ಹೊಟ್ಟೆ ತುಂಬಿತು. " ಎಂದಳು ಮಲ್ಲಿಗೆ.

      ’ಇದೇ ಸರಿಯಾದ ಸಮಯ , ಆ ವಿಷಯ ಪ್ರಸ್ಥಾಪನೆಗೆ ’ ಎನಿಸಿತು.  " ಮಗಳೇ, ಈ ವಯಸ್ಸಲ್ಲಿ ಎಲ್ಲರೂ ಪ್ರೀತಿ , ಪ್ರೇಮ ಅನ್ನುತ್ತಾರೆ. ಆದರೆ ಅದಕ್ಕೆ ನಿಮ್ಮ ಮನಸ್ಸು ಪಕ್ವವಾಗಿ ಇರಲ್ಲ. ಇಷ್ಟವಾದುದನ್ನ ಬೇಕು ಎನ್ನುವ ಮನಸ್ಸು ನಿಮ್ಮದು. ನಾನು ಯೋಚಿಸಿದ್ದೇ ಸರಿ, ಎನ್ನುವ ವಯಸ್ಸು ನಿನ್ನದು..ಇದಕ್ಕೆಲ್ಲಾ ಮನಸ್ಸು ಕೊಡದೇ ನಿನ್ನ ಅಭ್ಯಾಸದ ಬಗ್ಗೆ ಗಮನ ಕೊಡು ಮಗಳೇ.." ಎಂದೆ ಅಪ್ಯಾಯಮಾನವಾಗಿ. ಮಗಳ ಉತ್ತರ ಏನಿರುತ್ತದೋ ಎನ್ನುವ ಹೆದರಿಕೆ ಇತ್ತು. " ಅಮ್ಮಾ, ನಾನು ಆಗಲೇ ಮನಸ್ಸು ಆತನಿಗೆ ಕೊಟ್ಟು ಬಿಟ್ಟಿದ್ದೇನೆ. ಆತ ನನ್ನನ್ನ ಪ್ರೀತಿಸುತ್ತಾನೋ ಇಲ್ಲವೋ ನನಗದು ಅನವಶ್ಯಕ, ನಾನು ಮಾತ್ರ ಆತನನ್ನೇ ಪ್ರೀತಿಸುತ್ತೇನೆ. ನನ್ನ ಜನ್ಮವಿರುವವರೆಗೂ".. 
    
    ನಗು ಬಂತು ನನಗೆ, ಇಷ್ಟು ಚಿಕ್ಕ ಮಗು ಇಷ್ಟೆಲ್ಲಾ ಮಾತನಾಡುತ್ತದಲ್ಲಾ ಎಂದು.. "ಯಾಕೆ ನಗಾಡುವುದು ನೀನು.? ತಮಾಶೆಯಾಗಿ ಕಾಣತ್ತಾ ನಿನಗೆ ಇದು..?" ಎಂದಳು ಮುಖ ಡುಮ್ಮ ಮಾಡುತ್ತಾ.. "ಹಾಗಲ್ಲಮ್ಮ, ಇನ್ನೂ ಹದಿನೆಂಟು ವಯಸ್ಸು ನಿಂದು, ಜನ್ಮದ ಬಗ್ಗೆ ಮಾತನಾಡುತ್ತೀಯಲ್ಲಾ.. ಅದಕ್ಕೆ ನಗು ಬಂತು. ನಾಳೆ ಇನ್ನೂ ಚಂದದ ಹುಡುಗ ಸಿಕ್ಕಾಗ ಇವನನ್ನೇ ಮರೆತುಬಿಡುವ ವಯಸ್ಸು ನಿಂದು.. ತುಂಬಾ ತಲೆ ಕೆಡಿಸಿಕೊಳ್ಳಬೇಡ ಮಗಳೇ.." ಎಂದೆ.. ಅವಳ ಕಣ್ಣಲ್ಲಿ ವಿಚಿತ್ರ ಬೆಳಕು ಬಂತು.. ನನಗೇನೋ , ಹುರುಪು... ಯಾವುದಾದರೂ ನೆವದಲ್ಲಿ ಇವಳ ಈ ಪ್ರಕರಣ ಸಮಾಪ್ತಿಯಾದರೆ ಸಾಕಿತ್ತು. " ಅಮ್ಮಾ, ನೀನು ಯಾರನ್ನಾದರೂ ಪ್ರೀತಿಸಿದ್ದೆಯಾ, ಅಪ್ಪನನ್ನು ಮದುವೆಯಾಗುವ ಮೊದಲು ?" ಪಕ್ಕದಲ್ಲೇ ಬಾಂಬ್ ಬಿದ್ದವಳಂತೆ ಬೆಚ್ಚಿ ಬಿದ್ದೆ. 

    ನನ್ನದು ಮತ್ತು ನನ್ನವರದು ಲವ್ ಮ್ಯಾರೇಜ್ ಆದರೂ ಮನೆಯವರ ಒಪ್ಪಿಗೆ ಇತ್ತು. ಬರ್ತಿ ಹತ್ತು ವರುಷದ ಪರಿಚಯ, ಸ್ನೇಹದ ನಂತರ ಮದುವೆಯಾಗಿತ್ತು. ನಮ್ಮಿಬ್ಬರ ನಡುವೆ ಮುಚ್ಚು ಮರೆ ಏನೂ ಇರಲಿಲ್ಲ. ಯಾವುದೇ ವಿಚಾರವನ್ನೂ ಬಚ್ಚಿಡದೇ, ಹಂಚಿಕೊಳ್ಳುತ್ತಿದ್ದೆವು. ಮೊನ್ನೆ ಮೊನ್ನೆ ಎರೋಬಿಕ್ಸ್ ಕ್ಲಾಸ್ ನಲ್ಲಿ ಬೆನ್ನಿಗೆ ಬಿದ್ದ ಹುಡುಗನನ್ನು  ಸರಿ ಮಾಡಲು ದಾರಿ ತೋರಿಸಿದ್ದೂ ನನ್ನವರೇ. ಹೀಗೆ ನನ್ನ ಜೀವನದಲ್ಲಿ ಬೇರೆ ಯಾರೂ ಇರಲಿಲ್ಲ. ಈ ಪುಟ್ಟ ಮಗಳು ಕೇಳಿದ ಪ್ರಶ್ನೆಗೆ ಏನು ಉತ್ತರ ಹೇಳುವುದೋ ತಿಳಿಯಲಿಲ್ಲ. ’ ನಾನೂ ಸಹ ನಿನ್ನ ಹಾಗೆ ಮದುವೆಗೆ ಮೊದಲು ಇನ್ನೊಬ್ಬನನ್ನು ಪ್ರೀತಿಸಿದ್ದೆ, ಆದರೂ ಅದರಿಂದ ಹೊರಬಂದು ಈಗ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ.’ ಎಂದು ಸುಳ್ಳು ಹೇಳೋಣ ಎನಿಸಿತು. "ಯಾಕೆ , ನಿನ್ನಪ್ಪನಿಂದ ನನಗೆ ಡೈವೋರ್ಸ್ ಕೊಡಿಸೊ ಯೋಚನೆ ಇದೆಯಾ. ನಾನು ನಿನ್ನಪ್ಪ ಸುಖವಾಗಿ ಇರೋದು ಇಷ್ಟ ಇಲ್ಲವಾ ನಿನಗೆ.?" ಎಂದೆ ನಾಟಕೀಯವಾಗಿ...

    ಆಕೆಯ ಮುಖ ಮೂರಗಲ ಆಯಿತು. ’ಯಾಕೋ, ಈ ಪ್ಲಾನ್ ವರ್ಕ್ ಆಗತ್ತೆ’ ಎನಿಸಿತು. " ಅಮ್ಮಾ, ಹೇಳಮ್ಮಾ... ಅಪ್ಪನಿಗೆ ಗೊತ್ತಾದ್ರೂ ಏನೂ ಅನ್ನಲ್ಲ. ನಿನ್ನನ್ನ ಅಷ್ಟು ಇಷ್ಟಪಡ್ತಾರೆ ... ಯಾವಾಗ ನೀನು ಲವ್ ಮಾಡಿದ್ದು ? ಅವರೂ ನಿನ್ನನ್ನು ಲವ್ ಮಾಡಿದ್ನಾ..? ಈಗ ಅವರು ಎಲ್ಲಿದ್ದಾರೆ..? ಅವರಿಗೆ ಮದುವೆ ಆಗಿದೆಯಾ..? ನಿನ್ನ ಮದುವೆ ಆದ ನಂತರ ಅವರನ್ನ ಮೀಟ್ ಮಾಡಿದ್ಯಾ..?."   ಅಬ್ಭಾ... ಪ್ರಶ್ನೆಗಳ ಬೌನ್ಸರ್ ಬರುತ್ತಿತ್ತು.. ನನಗೆ ಒಳಗೊಳಗೆ ನಗು ಬರುತ್ತಿತ್ತು. ಅದನ್ನ ತೋರಿಸುವ ಹಾಗಿರಲಿಲ್ಲ. ನಾನು ಕಟ್ಟುಕಥೆ ಹೇಳಲು ರೆಡಿಯಾದೆ. ಇದು ನನ್ನ ಕಲ್ಪನಾ ಶಕ್ತಿಯ ಪರೀಕ್ಷೆಯಾಗಿತ್ತು. ನಾನು ತಯಾರಾದೆ...

    " ನನಗಾಗ, ಹದಿನೇಳು ವಯಸ್ಸು. ಫಷ್ಟ್ ಪಿ.ಯು.ಸಿ.  ನಾನು ಒಬ್ಬರು ಲೇಡಿ ಲೆಕ್ಚರ್ ಹತ್ತಿರ ಟ್ಯೂ ಶನ್ ಗೆ ಹೊಗುತ್ತಿದ್ದೆ. ಮನೆಯಲ್ಲಿ ಅವರ ತಮ್ಮನೊಬ್ಬನಿದ್ದ. ನನ್ನನ್ನು ತುಂಬಾ ಗೋಳು ಹೊಯ್ದುಕೊಳ್ಳುತ್ತಿದ್ದ. ನಾನು ನೋಟ್ಸ್ ಬರೆಯುವಾಗ, ಆತ ತಿಂಡಿ ತಿನ್ನುತ್ತಾ ’ ನಿನಗೆ ಬೇಕಾ ’ ಎನ್ನುವ ಹಾಗೆ ತೋರಿಸುತ್ತಿದ್ದ. ಬರ್ತ್ ಡೇ ಗೆ ಗಿಫ಼್ಟ್ ಕೊಡುತ್ತಿದ್ದ.  ಅವನ ತರಲೆಗಳೇ ನನ್ನನ್ನು ಆತನ ಕಡೆಗೆ ಸೆಳೆದಿದ್ದವು. ಆತನ ಜೀವನ ಶೈಲಿ ತುಂಬಾ ವಿಚಿತ್ರವಾಗಿದ್ದುದೂ ನನ್ನನ್ನ ಸೆಳೆಯಲು ಕಾರಣವಾಗಿದ್ದಿರಬಹುದು. ಅವನ ಅಕ್ಕನ ಜೊತೆ ಅಂದರೆ ನನ್ನ ಲೆಕ್ಚರ್ ಜೊತೆ ಫಿಲ್ಮ್ ನೋಡಲು ಕರೆಯುತ್ತಿದ್ದ. ಬರದಿದ್ದರೆ ಜಾಸ್ತಿ ಕಾಡಿಸುತ್ತಿದ್ದ. ಒಮ್ಮೆಮ್ಮೆ ರೊಮ್ಯಾಂಟಿಕ್ ಕಾದಂಬರಿ ಓದಲು ಕೊಡುತ್ತಿದ್ದ ಮತ್ತೆ ಅದರ ಬಗ್ಗೆ ನನ್ನ ಅನಿಸಿಕೆ ಕೇಳುತ್ತಿದ್ದ.  ನಾನು ಒಂದು ದಿನ ಕ್ಲಾಸ್ ಗೆ ಬರದೇ ಇದ್ದರೆ ಮನೆಗೇ ಬರುತ್ತಿದ್ದ. ನಾನು ಅವನನ್ನು ಪ್ರೀತಿಸುತ್ತಿದ್ದೆನಾ ಅಥವಾ ಆತ ನನ್ನನ್ನ ಪ್ರೀತಿಸುತ್ತಿದ್ದನಾ ತಿಳಿದಿರಲಿಲ್ಲ.  ಆತ ನನ್ನ ಪಕ್ಕ ಇರುವುದು ನನಗೆ ತುಂಬಾ ಖುಷಿ ನೀಡುತ್ತಿತ್ತು. ಅದಕ್ಕೆ ಕಾರಣ ನನಗೆ ತಿಳಿದಿರಲಿಲ್ಲ. ಆದರೂ ನನಗೆ ಆತನೆಂದರೆ ತುಂಬಾ ಇಷ್ಟವಿತ್ತು. ಆತ ಒಂದು ದಿನ ನನಗೆ ಕಾಣಿಸದೇ ಇದ್ದರೂ ಮನಸ್ಸು ರೋದಿಸುತ್ತಿತ್ತು.  

     ನನ್ನ ಲೆಕ್ಚರ್ ಗೆ ಬೇರೆ ಊರಿಗೆ  ವರ್ಗವಾದಾಗ, ಆತ ನನ್ನನ್ನು ತಬ್ಬಿಕೊಂಡು ’ ಐ ಲವ್ ಯು’ ಅಂದಿದ್ದ. ಬಾಯಿ ತನಕ ಬಂದಿದ್ದ ನನ್ನ ಉತ್ತರ ಗಂಟಲಲ್ಲೇ ಉಳಿಸಿಕೊಂಡಿದ್ದೆ. ನಾಳೆಯಿಂದ ಈತ ನನ್ನ ಪಾಲಿಗೆ ಇಲ್ಲ ಎನ್ನುವ ಸತ್ಯವೂ ನನ್ನ ಬಾಯಿ ಕಟ್ಟಿತ್ತೇನೋ ಗೊತ್ತಿರಲಿಲ್ಲ. ನಾಳೆಯಿಂದ ಹೇಗಿರಲಿ ಎನ್ನುವ ಭಾವವೇ ನನ್ನನ್ನು ಹಿಪ್ಪಿ ಮಾಡಿತ್ತು. ಆತ ಹೊರಟು ಹೋಗಿ ವಾರಕ್ಕೊಮ್ಮೆ ಬರೆಯುತ್ತಿದ್ದ ಪತ್ರ , ದಿನ ಕಳೆದಂತೆ ತಿಂಗಳಿಗೊಂದು ನಂತರ ಜನ್ಮದಿನಕ್ಕೊಂದರಂತೆ ಬರುತ್ತಿತ್ತು. ಕ್ರಮೇಣ ಅದೂ ನಿಂತು ಹೋಯಿತು. ಅವನ ಜೀವನಕ್ಕೆ ಯಾರು ಬಂದರೋ ತಿಳಿದಿಲ್ಲ. ನನ್ನ ಜೀವನದಲ್ಲಿ ನಿನ್ನ ಅಪ್ಪ ಬಂದರು. ಈಗಿನ ಪರಿಸ್ತಿತಿ ಏನೆಂದರೆ ನನಗೆ ಆತನ ಹೆಸರೇ ಮರೆತು ಹೋಗಿದೆ. 

   ವಯಸ್ಸು ಹೆಚ್ಚಾಗುತ್ತಾ ಹೋದ ಹಾಗೆ ಮನಸ್ಸು ಪ್ರಭುದ್ದಗೊಳ್ಳುತ್ತದೆ. ಬುದ್ದಿಗೆ ಮನಸ್ಸನ್ನು ಗೆಲ್ಲುವ ತಾಕತ್ತಿರಬೇಕು. ಇಲ್ಲದಿದ್ದರೆ ಎಲ್ಲಾ ಕನಸುಗಳೂ ಹಳ್ಳ ಹಿಡಿಯುತ್ತವೆ.   ನನಗೆ ಈಗ ಆತ ಎದುರಿಗೆ ಸಿಕ್ಕರೆ ನಿಂತು ಮಾತನಾಡಿಸುತ್ತೀನಾ ಗೊತ್ತಿಲ್ಲ. ಅವನ ಬಗ್ಗೆ ಯೋಚಿಸಲೇ ಇಲ್ಲ ನಾನು. ನಿನ್ನ ಮನಸ್ಸು ಮತ್ತು ವಯಸ್ಸು ಹಾಗೇನೆ ಕಣಮ್ಮ. ಅದಕ್ಕೂ ದುನಿಯಾ ತೋರಿಸು. ಅದಕ್ಕೇ ಅರ್ಥ ಆಗತ್ತೆ. ಈಗಲೇ ನೀ ಕಂಡ ಜಗತ್ತಿನ  ಆಳ ಮತ್ತು ವಿಶಾಲ ಅಳೆಯಬೇಡ, ಅವನನ್ನು ಬಿಟ್ಟರೆ ಜಗತ್ತಲ್ಲಿ ಬೇರೆ ಯಾರೂ ಇಲ್ಲ ಅನ್ನೊದನ್ನ ಕಿತ್ತೊಗೆ ಮನಸ್ಸಿಂದ ’ ಎಂದು ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದೆ. 

    ಮನಸ್ಸಲ್ಲೇ ಕಲ್ಪಿಸಿಕೊಂಡ ನನ್ನ ಲವ್ ಸ್ಟೋರಿ ನನಗೇ ಖುಶಿ ಕೊಟ್ಟಿತ್ತಾ.. ಗೊತ್ತಿಲ್ಲ... ಮಗಳ ಮುಖದಲ್ಲಂತೂ ಸ್ವಲ್ಪ ಗೆಲುವು ತಂದಿತ್ತು. ಅವಳು ಏನು ಯೋಚಿಸುತ್ತಿದ್ದಳೋ ಗೊತ್ತಿಲ್ಲ. " ಅಮ್ಮಾ, ನನಗೂ ಮನಸು ಹಗುರಾಗಿದೆ. ನಿನ್ನ ರೀತಿಯಲ್ಲೇ ನಾನೂ ಯೋಚಿಸುತ್ತೇನೆ . ನೋಡೋಣ. ಸಂಜೆ ಫಿಲ್ಮ್ ಗೆ ಹೋಗೋಣ ಅಪ್ಪನಿಗೂ ಬರಲು ಹೇಳು" ಅಂದಳು ನಗುತ್ತಾ. ನನಗೆ ನೂರಾನೆಯೊಂದಿಗೆ ಹೋರಾಡಿ ಗೆದ್ದ ಬಲ. 

   ಸಂಜೆ ಮನೆಯವರು ಬಂದಾಗ ನಡೆದದ್ದೆಲ್ಲ ಹೇಳಿದೆ..... ಅವರು " ನೋಡಿಲ್ವಾ, ನಾನು ಹೇಳಿದ್ದೆ , ಎಲ್ಲ್ಲಾ ಸರಿ ಹೋಗತ್ತೆ ಅಂತ. ನೀನು ಸುಮ್ನೆ ಟೆನ್ಶನ್ ಮಾಡ್ಕೊಂಡಿದ್ದೆ" ಅಂದರು... ನನಗೆ ನಗು ಬಂತು, ನನಗೇ ಗೊತ್ತಿತ್ತು... ನಾನು ಇದನ್ನು ಪರಿಹರಿಸಲು ಪಟ್ಟ ಕಷ್ಟ. " ನಿಮಗೇನ್ರೀ ನನ್ನ ಕಷ್ಟ ಗೊತ್ತು.? ಏನೇನ್ ಹೇಳಿ ಅವಳಿಗೆ ಸರಿ ಮಾಡಿದ್ದೇನೆ ಅಂತ. ನಿಮಗೆ ಸರಿ ಆದ್ರೆ ’ ಒಹ್..! ಸ್ಸರಿ ಆಯ್ತಾ..?’ ... ಸರಿ ಆಗಿಲ್ಲಾ ಅಂದ್ರೆ..’ ನಿನ್ನ ಕೈಲಿ ಏನೂ ಆಗಲ್ಲ’ ಅಂತೀರಾ. ನಮ್ಮ ಕಷ್ಟ ನಿಮಗೆ ಅರ್ಥ ಆಗಲ್ಲ. ಸುಳ್ಳು -ಪಳ್ಳು ಹೇಳಿ ನಂಬಿಸಿದ್ದೇನೆ ಅವಳನ್ನ " ಎಂದೆ ಮುಖ ಉಬ್ಬಿಸಿಕೊಂಡು.... ಅವರು ಹತ್ತಿರ ಬಂದು ” ನಿನ್ನ ಮೇಲೆ ನಂಬಿಕೆ ಇತ್ತು ಕಣೆ. ಅದಕ್ಕೆ ನಿನ್ನ ಮೇಲೆಯೇ ಬಿಟ್ಟೆ ಇದನ್ನ ಪರಿಹಾರ ಮಾಡಲು " ಎಂದರು ... ಸ್ವಲ್ಪ ಸಮಾಧಾನ ಆಯ್ತು. " ಅದ್ಸರಿ, ಏನು ಸುಳ್ಳು ಹೇಳಿದೆ ಅವಳಿಗೆ ?" ಕೇಳಿದರು.

    ನಾನು ಎಳೆ ಎಳೆಯಾಗಿ ನನ್ನ ಕಲ್ಪನೆಯ ಲವ್ ಸ್ಟೋರಿ ಹೇಳುತ್ತಾ ಹೋದೆ. ಕಥೆ ಹೇಳಿ ಮುಗಿಸಿದಾಗ ನನ್ನ ಮುಖದಲ್ಲಿ ಒಂದು ರೀತಿಯ ಹೆಮ್ಮೆ ಇತ್ತು..ಕಥೆ ಮುಗಿಸಿ ಅವರ ಕಡೆ ನೋಡಿದಾಗ ಅವರ ಮುಖ ಕೆಂಪಾಗಿತ್ತು. ’ಅಯ್ಯೋ  ದೇವ್ರೆ.. ಇದೇನಪ್ಪ . ನನ್ನ ಕಲ್ಪನೆಯನ್ನು ನಿಜ ಅಂದ್ಕೊಂಡು ಬಿಟ್ರಾ ಹೇಗೆ.?’ ಎನಿಸಿತು. ಕೇಳಿಯೂ ಬಿಟ್ಟೆ. " ಯಾಕೆ ಏನಾಯ್ತು..? ಏನಾದರು ತಪ್ಪು ಮಾಡಿದೆನಾ  ಹೇಳಿ.? ಇದು ಅವಳ ಮೇಲೆ ಏನಾದರೂ ತಪ್ಪು ಪರಿಣಾಮ ಬೀರತ್ತಾ ಹೇಗೆ..?" ನನ್ನ ಕಳವಳ ನನ್ನದಾಗಿತ್ತು.. 

   ಅವರು ಗಂಭೀರವಾಗಿ " ಇದು ನಿನ್ನ ಕಲ್ಪನೆಯ ಕಥೆಯಾ.? ಇದನ್ನ ನಾನು ನಂಬಬೇಕಾ..? ನೀನು ಈ ರೀತಿ ಮಾಡ್ತೀಯಾ ಅಂತ ನಾನು ಯೋಚಿಸಿರಲಿಲ್ಲ. ನೆನಪಿದೆಯಾ ನಿನಗೆ, ಮದುವೆಗೆ ಮುಂಚೆ ನಮ್ಮ ಮಧ್ಯೆ ಒಂದು ಒಪ್ಪಂದವಾಗಿತ್ತು ..?".  ನಾನು ಅಯೋಮಯವಾಗಿ ” ಹೌದು, ನಮ್ಮಿಬ್ಬರ ಮಧ್ಯೆ ಏನೂ ಗುಟ್ಟು ಇರಬಾರದು ಅಂತ. ನಾನು ಅದನ್ನ ಪಾಲಿಸಿದ್ದೇನೆ ಕೂಡ " ಅಂದೆ ಸ್ವಲ್ಪ ಜೋರಾಗಿಯೇ.. " ಅವರು ಇನ್ನೂ ಗಂಭೀರವಾಗಿ, " ಇನ್ನೂ ಒಂದು ಶರತ್ತಿತ್ತು, ನಮ್ಮ ಹಳೆಯ ನೆನಪುಗಳನ್ನು ಕೆದಕಬಾರದು ಮತ್ತು ನನ್ನ ಹಳೆಯ ಸೂಟ್ ಕೇಸ್ ತೆರೆಯಬಾರದು. ತೆರೆದರೂ ನಮ್ಮ ನಮ್ಮ ಡೈರಿ ಯನ್ನು ಓದಬಾರದು. ನೆನಪಿದೆಯಾ.? ನೀನು ಆ ಶರತ್ತನ್ನ ಮುರಿದುಬಿಟ್ಟೆ. ನನ್ನ ಡೈರಿ ಓದಿಬಿಟ್ಟೆ ಅಲ್ವಾ..? ನಿನ್ನಿಂದ ಇದನ್ನ ನಿರೀಕ್ಷಿಸಿರಲಿಲ್ಲ ನಾನು..ನನಗೆ ನಿಜವಾಗಿಯೂ ತುಂಬಾ ನೋವಾಗಿದೆ." ಎನ್ನುತ್ತಾ ಹೊರ ನಡೆದರು.

   ನನಗೆ ಒಂದು ಸಮಸ್ಯೆ ಮುಗಿದುದ್ದಕ್ಕೆ ಸಂತಸ ಪಡಬೇಕೋ, ಹೊಸ ಸಮಸ್ಯೆ ಶುರು ಆದುದಕ್ಕೆ ಆತಂಕ ಪಡಬೇಕೋ ತಿಳಿಯಲಿಲ್ಲ.

35 comments:

  1. ತಾಯಿ ತನ್ನ ಮಗುವಿಗೆ ಊಟ ಮಾಡಿಸುವಾಗ ಚಂದಾಮಾಮನಿಗೆ ತೋರಿಸಿ..ಮಗು ನೀನು ತಿನ್ನದೇ ಹೋದರೆ ಚಂದಾಮಾಮ ತಿಂದು ಬಿಡುತ್ತಾನೆ ಎಂದು ಹೇಳಿ ಮಗುವಿಗೆ ತಿನ್ನಿಸುತ್ತಾಳೆ.ಮಗುವೂ ಕೂಡ ಆ ಹೆದರಿಕೆಯಿಂದಲೋ ಅಥವಾ ತನ್ನ ತುತ್ತನ್ನು ಇನ್ನೊಬ್ಬರು ಕಸಿಯುತ್ತಾರೆ ಎನ್ನುವ ಅಳುಕಿನಿಂದ ತಿಂದು ಬಿಡುತ್ತದೆ..ಈ ಕಥೆಯಲ್ಲೂ ಹಾಗೆ ಆಗಿದೆ.ಮಗಳು ದಾರಿಗೆ ಬಂದಳು...ಆದರೆ ಮೇಲೆ ನೋಡುತ್ತಿದ್ದ ಚಂದಮಾಮ ನನಗೆ ಮೋಸ ಮಾಡಿ ನನ್ನ ತುತ್ತನ್ನು ಕಸಿದುಬಿಟ್ಟೆ ಎಂದು ಅವಳ ಮೇಲೆ ಕೋಪಗೊಂಡ..ಸಾವಿರ ಅಡಿ ಜಲಪಾತದಿಂದ ಅಚಾನಕ್ಕಾಗಿ ಅಳಕ್ಕೆ ಇಳಿದ ಅನುಭವ..ನಿಮ್ಮ ಕಥೆಗಳು ಹೆದ್ದಾರಿಯಲ್ಲಿ 200-250ಕಿ.ಮಿ. ವೇಗದಲ್ಲಿ ಹೋಗುತ್ತಿರುವಾಗ ಹ್ಯಾಂಡ್ ಬ್ರೇಕ್ ಅಪ್ಲೈ ಮಾಡಿ ನಿಲ್ಲಿಸಿದಂತೆ ನಿಂತು ಯೋಚನೆಗೆ ಈಡು ಮಾಡುತ್ತದೆ..ಅಭಿನಂದನೆಗಳು...

    ReplyDelete
    Replies
    1. ಹ್ಹ ಹ್ಹಾ... ನಿಮ್ಮ ಅನಿಸಿಕೆ ಓದಿ ಖುಶಿಯಾಯ್ತು.... ಕಥೆಯ ಕೊನೆಯಲ್ಲಿ ತಿರುವು ಇಲ್ಲದೇ ಹೋದರೆ ಮಜಾ ಇರಲ್ಲ ಅಂತ ಪ್ರಕಾಶಣ್ಣ ಹೇಳ್ತಾ ಇರ್ತಾರೆ..ಅದಕ್ಕೆ ಈ ಪ್ರಯತ್ನ...ನಿಮಗೆ ಇಷ್ಟಾ ಆದರೆ ಖುಶಿ ನನಗೆ... ಧನ್ಯವಾದ ನಿಮ್ಮ ಮೆಚ್ಚುಗೆಗೆ...

      Delete
  2. ದಿನಕರ್..ಎಳೆ ಮನಸಿನ ತುಮುಲಗಳನ್ನು ಚನ್ನಾಗಿ ತಾಯ ಸ್ತಾನದಲ್ಲಿಟ್ಟು ತೂಗಿ ಬರೆದಿದ್ದೀರಿ...ಕಡೆಯಲ್ಲಿನ ತಿರುವಿಗೆ..?? ಕಥೆ ಮುಂದುವರೆಯುವುದು ಅಂತಾನಾ? ಅಥವಾ ನಮಗೇ ಬಿಟ್ಟದ್ದಾ...?? ಇದೂ ನಿಮಗೇ ಬಿಟ್ಟದ್ದು...ಇಷ್ಟ ಆಯ್ತು ಮಾಮೂಲಿನಂತೆ ನಿಮ್ಮ ಕಥೆ ಹೇಳುವ ಬಗೆ ..ಓದಿಸಿಕೊಂಡು ಹೋಗುತ್ತೆ...

    ReplyDelete
    Replies
    1. ಆಜ಼ಾದ್ ಸರ್, ಕಥೆ ಮುಂದುವರಿಸಲು ಅಂತ ಅಲ್ಲ... ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ನಿಮಗೆ ಇಷ್ಟಾ ಆದರೆ ಅದೇ ಸಂತೋಷ ನನಗೆ...ಧನ್ಯವಾದ...

      Delete
  3. ದಿನಕರ...

    ಒಂದು ಸುಳ್ಳು ಹೇಳಿದರೆ ಅಲ್ಲಿಗೇ ನಿಲ್ಲುವದಿಲ್ಲ...
    ಮತ್ತೆ ಮತ್ತೆ ಹೇಳುತ್ತಲೇ ಇರಬೇಕು ಅಂತಾರಲ್ಲ... ಅದು ನಿಜ ಅಲ್ವಾ?

    ನೀವು ಬರೆದ ಕಥೆ ಓದಿ ನನಗೊಂದು ಕಥೆಯ ಕಲ್ಪನೆ ಹೊಳೆದಿದೆ...
    ಸಧ್ಯದಲ್ಲಿಯೇ ಬರೆಯುವೆ..

    ಚಂದದ ಕಥೆ ಕೊಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
    Replies
    1. ಪ್ರಕಾಶಣ್ಣ,
      ಇಲ್ಲಿ ಕಥಾನಾಯಕಿ, ಮಗಳಿಗಷ್ಟೇ ಸುಳ್ಳು ಹೇಳುತ್ತಾಳೆ. ಅವಳ ಜೀವನದಲ್ಲಿ ಲವ್ ಸ್ಟೋರಿ ಇರಲ್ಲ ಆದ್ರೂ ಕಲ್ಪನೆ ಮಾಡಿ ಹೇಳಿರುತ್ತಾಳೆ. ಯಾವಾತ್ತಾದರೂ ಒಮ್ಮೆ ಅದನ್ನ ಮಗಳಿಗೆ ಹೇಳಿದರೂ ಪರಿಣಾಮ ಬೀರಲ್ಲ ಅಂತ ನನ್ನ ಅಭಿಪ್ರಾಯ. ಕಥಾನಾಯಕಿಯ ಕಲ್ಪನೆಯ ಕಥೆ ಯಾರದ್ದಾದರೂ ನಿಜಜೀವನಕ್ಕೆ ಹತ್ತಿರವಾಗಿದ್ದೀತು.... ದುರಾದ್ರಷ್ಟಕ್ಕೆ ಆ ಕಥೆ ಅವಳ ಗಂಡನದೇ ಆಗಿರುತ್ತದೆ.... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....

      Delete
  4. ಕ್ಲೈಮ್ಯಾಕ್ಸಿನಲ್ಲಿ ಕಥೆಗೆ ವಿಭಿನ್ನ ತಿರುವು ಕೊಡುವ ಕಲೆಯನ್ನು ನಿಮ್ಮಿಂದ ಕಲಿಯ ಬೇಕು ಮೊಗೇರ ಸಾಬ್.

    ಮಗಳ ಸಮಸ್ಯೆ ಪರಿಹಾರವಾದದಕ್ಕೆ ಅಮ್ಮ ಖುಷಿ ಪಡಬೇಕೋ? ಅಥವಾ ಗಂಡನಿಗೆ ಬಂದ ಸಿಟ್ಟನ್ನು ಉಪಶಮನ ಮಾಡಬೇಕೋ? ನನಗಂತೂ ತಿಳಿಯಲಾರದಾಯ್ತು.

    ಸೂಪರ್ರು.

    ReplyDelete
    Replies
    1. ಬದರೀ ಸರ್,
      ಇದು ಗಂಡನ ತಪ್ಪು ತಿಳುವಳಿಕೆ ಅಷ್ಟೇ.... ಹೆಂಡತಿಯ ಕಲ್ಪನೆಯ ಕಥೆ ಇವನದಾದಾಗ ಇವನಿಗಾದ ತಪ್ಪು ತಿಳುವಳಿಕೆ ಇದು... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ...

      Delete
  5. ಸರಸವಾಗಿ ಸಾಗಿದ ಕತೆ ಕೊನೆಯಲ್ಲಿ ಇಂತಹ ರೋಚಕ ತಿರುವನ್ನು ಪಡೆದದ್ದು, ಸ್ವಾರಸ್ಯಕರವಾಗಿದೆ. ಓ ಹೆನ್ರಿಯ ಕತೆಗಳನ್ನು ನೆನಪಿಸುತ್ತದೆ.

    ReplyDelete
    Replies
    1. ಸುನಾಥ್ ಸರ್..
      ನಿಮ್ಮ ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದ.... ಕಥೆಗೊಂದು ರೋಚಕ ತಿರುವು ಇರಲಿ ಎಂದು ಈ ರೀತಿ ಬರೆದೆ ಸರ್... ಇಷ್ಟಪಟ್ಟಿದ್ದಕ್ಕೆ ಖುಶಿಯಾಯ್ತು....

      Delete
  6. ಒಳ್ಳೆಯ ಕಥೆ. ಕೊನೆಯಲ್ಲಿನ ಟ್ವಿಸ್ಟ್ ತುಂಬ ಚೆನ್ನಾಗಿದೆ.

    ReplyDelete
    Replies
    1. ಸುಮ ಮೇಡಮ್,
      ಧನ್ಯವಾದ ನಿಮ್ಮ ಮೆಚ್ಚುಗೆಗೆ....

      Delete
  7. ಒಂದು ಸುಖಾಂತವಪ್ಪಾ .. ಅಂತ ಅರ್ಧ ಕಥೆ ಓದಿ ನಿಟ್ಟುಸಿರು ಬಿಡೋ ಹೊತ್ತಿಗೆ ಕಥೆಯಲ್ಲಿನ ಟ್ವಿಸ್ಟ್ ಉಸಿರನ್ನು ಗಂಟಲಲ್ಲೇ ಸಿಕ್ಕಿ ಹಾಕಿ ಕೊಳ್ಳುವಂತೆ ಮಾಡಿತ್ತು ...
    ಸೂಪರ್ ಕಥೆ ಸರ್ ....

    ReplyDelete
    Replies
    1. ಸಂಧ್ಯಾ ಮೇಡಮ್,
      ಕೊನೆಯ ತಿರುವು ಇರದೇ ಇದ್ದರೆ... ತುಂಬಾ ಸರಲವಾಗಿರುತ್ತಿತ್ತು ಎಂದು ನನ್ನ ಅಭಿಪ್ರಾಯ... ಅದಕ್ಕಾಗಿ ಈ ರೀತಿ ಬರೆದೆ...ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...

      Delete
  8. ಡೈರಿ ಓದದೇ ಗಂಡನ ಮನ ಓದಿದಳಾ ?
    ಕಥೆಯ ತಿರುವು ತುಂಬಾ ಚೆನ್ನಾಗಿದೆ.

    ReplyDelete
    Replies
    1. ಸ್ವರ್ಣ ಮೇಡಮ್,
      ಇಷ್ಟ ಪಟ್ಟು ನಿಮ್ಮ ಅನಿಸಿಕೆ ಹಾಕಿದ್ದಕ್ಕೆ ಧನ್ಯವಾದ..... ಅವಳ ಕಲ್ಪನೆಯಲ್ಲಿ ಬಂದ ಕಥೆ, ದುರದ್ರಷ್ಟಕ್ಕೆ ಆಕೆಯ ಗಂಡನದೇ ಆಗಿರುತ್ತದೆ.....

      Delete
  9. ಚೆಂದದ ಕಥೆ.ಒಂದು ಸಮಸ್ಯೆಯನ್ನು ಬಗೆ ಹರಿಸಲು ಹೋಗಿ,ಮತ್ತೊಂದು ಸಮಸ್ಯೆಗೆ ಸಿಕ್ಕಂತಾಯಿತಲ್ಲಾ ....ಪಾಪ!! ಜೀವನವೆಂದರೆ ಇದೇನಾ?!!!

    ReplyDelete
    Replies
    1. ಡಾಕ್ಟರ್ ಸರ್,
      ಕೊನೆಗೆ ಕೊಟ್ಟ ತಿರುವೇ ಈ ಕಥೆಯ ಹೀರೊ.... ಧನ್ಯವಾದ ನಿಮ್ಮ ಮೆಚ್ಚುಗೆಗೆ...

      Delete
  10. ಕತೆ ಕೊನೆಗೆ ನೀವು ಕೊಟ್ಟ ತಿರುವು ಸೇರ್ತು

    ReplyDelete
    Replies
    1. ಉಮೇಶ್ ಸರ್..
      ಧನ್ಯವಾದ ಸರ್ ನಿಮಗೆ ಇಷ್ಟಾವಾದುದಕ್ಕೆ.....

      Delete
  11. ಹಹಹ..ಮೊದಲಿನಿಂದ ಹಿಡಿತ ಸಾಧಿಸಿ ಕೊನೆಗೆ ಹಿಂಗ್ ಮಾಡಿ ಬಿಟ್ರಲ್ಲ?
    ಪಾಪ,ಆ ಹೆಣ್ಣುಮಗಳು ತಲೆ ಮೇಲೆ ಕೈಹೊತ್ತು ಕುಳಿತಿರುವ ದೃಶ್ಯ ನೋಡುತ್ತಿದ್ದೇನೆ.
    ಅಸಲಿಗೆ,ಕೊನೆಯಲ್ಲಿ ಇಲ್ಲಿ ತಲೆ ಕೆಡಿಸಿಕೊಂಡವರು ಯಾರು ಎಂಬುದೇ ಯಕ್ಷ ಪ್ರಶ್ನೆ!
    ಚೆನ್ನಾಗಿದೆ. :-)

    ReplyDelete
    Replies
    1. ರಾಘವೇಂದ್ರ ಸರ್...
      ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆಕೆ ತಲೆ ಮೇಲೆ ಕೈ ಹೊರುವ ಸ್ಥಿತಿಯೇ ಇದೆ.... ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇನ್ನೊಂದು ಹುಟ್ಟಿಕೊಂಡಿತು...
      ಧನ್ಯವಾದ ನಿಮಗೆ ಇಷ್ಟವಾದುದಕ್ಕೆ..... ಮತ್ತೆ ಅನಿಸಿಕೆ ಹಾಕಿದ್ದಕ್ಕೆ...

      Delete
  12. ಊರಲ್ಲಿ ಹೋಗೋ ಮಾರಿ ಮನೆಗೆ ತಂದಂಗೆ ಆಯ್ತು... ಕಥೆ ಚೆನ್ನಾಗಿದೆ

    ReplyDelete
    Replies
    1. ರಾಘವೇಂದ್ರ ಸರ್...
      ನನ್ನ ಬ್ಲಾಗಿಗೆ ಸ್ವಾಗತ... ಹೌದು... ಆಕೆ ತಲೆ ಮೇಲೆ ಕೈ ಹೊರುವ ಸ್ಥಿತಿಯೇ ಇದೆ.... ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇನ್ನೊಂದು ಹುಟ್ಟಿಕೊಂಡಿತು...
      ಧನ್ಯವಾದ ನಿಮಗೆ ಇಷ್ಟವಾದುದಕ್ಕೆ..... ಮತ್ತೆ ಅನಿಸಿಕೆ ಹಾಕಿದ್ದಕ್ಕೆ...

      Delete
  13. ದಿನಕರಣ್ಣಾ..
    ಮೊದಲಿಗೆ ನಿಮಗೆ ಧನ್ಯವಾದ...ತುಂಬಾ ದಿನದಿಂದ ಒಬ್ಬ ಹೆಣ್ಣಿನ ಮನಸ್ಸಿನಲ್ಲಿರುವ ಗೊಂದಲಗಳನ್ನು ಓದುವ ಕಥೆಗಾಗಿ ಹುಡುಕುತ್ತಿದ್ದೆ..ಇವತ್ತು ಆಸೆ ಈಡೇರಿತು..ಇಲ್ಲಿ "ನಾನು" ಹೆಣ್ಣು..
    ಹಮ್..ಕಥೆಯ ಬಗ್ಗೆ ಏನು ಹೇಳಲಿ..ಚೆನಾಗಿದೆ..ಕೊನೆಯಲ್ಲಿ ಭಾರಿ ತಿರುವೂ ಇದೆ..ಈ ಬಾರಿ ಮಾತ್ರ ಕೊನೆಯನ್ನು ಊಹಿಸಿಲು ಆಗಲಿಲ್ಲ...
    ಚೆನಾಗಿತ್ತು...ಬರೆಯುತ್ತಿರಿ..
    ಇಷ್ಟವಾಯ್ತು...
    (ಹಂಗೆ ಸುಮ್ನೆ: ಹಮ್ ಯಜಮಾನ್ರು ಸಂಜೆಗೆ ಮನೆಗೆ ಬಂದಾಗ ಹೇಳಿದ್ದಲ್ವಾ,ಬೆಳಿಗ್ಗೆ ಕಣ್ಣು ಬೆಳ್ಳಗೆ ಆದ್ಮೇಲೆ ಸರಿ ಆದರೂ ಆದೀತು...ಹೇಳಿ ನೋಡಿ ಅವರಿಗೆ ಒಮ್ಮೆ ಹಾ ಹಾ)
    ನಮಸ್ತೆ..

    ReplyDelete
    Replies
    1. ಚಿನ್ಮಯ್,
      ಹ್ಹ ಹ್ಹ..ನೀನು ಹೇಳಿದ ಉಪಾಯ ಅವಳಿಗೆ ಹೇಳಿದ್ದೇನೆ.. ಈಗ ಸರಿಯಾಗಿದೆಯಂತೆ... ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ....

      Delete
  14. ದಿನಕರ್ ಸರ್.....

    ಕಥೆ ಓದುತಿದ್ದಾಗ ನಾನು ಈ ಕಥೆಯ ಮುಕ್ತಾಯ ಹೀಗಿರಬಹುದೇನೋ ಎಂದು ನನ್ನದೇ ಆದ ಕಥೆ ಹೆಣೆಯುತಿದ್ದೆ...ಆದರೆ ನಿಮ್ಮ ಕಥೆಯ ಅಂತ್ಯ ಅನಿರೀಕ್ಷಿತವಾಗಿತ್ತು.....ಈ ತಿರುವೇ ಕಥೆಯ ಅತೀ ದೊಡ್ಡ ಪ್ಲಸ್ ಪಾಯಿಂಟ್.....ನಿಮ್ಮ ನಿರೂಪಣೆಯಂತೂ ಯಾವಗಲು ಸೂಪರ್.....ಸರಳವಾಗಿ ಸುಂದರವಾಗಿ ,ಓದುಗರನ್ನು ಅತೀ ಸುಲಭವಾಗಿ ಓದಿಸಿಕೊಂಡು ಹೋಗುವ ನಿಮ್ಮ ಶೈಲಿಯೇ ನಮಗಿಷ್ಟ. ......ಒಂದು ಸುಂದರ ಕಥೆಗೆ ಅಭಿನಂದನೆಗಳು.....

    ReplyDelete
    Replies
    1. ಅಶೋಕ್ ಸರ್..
      ನಿಮ್ಮ ಅನಿಸಿಕೆ ಮತ್ತು ನಿಮ್ಮ ಮೆಚ್ಚುಗೆಗೆ ಧನ್ಯವಾದ.... ಹೌದು ಈ ಕಥೆಯ ತಿರುವೇ ಪ್ಲಸ್ ಪಾಯಿಂಟ್...

      Delete
  15. ಅಶೋಕ್ ಸರ್ ಮೇಲಿನ ಪ್ರತಿಕ್ರಿಯೆಯಲ್ಲಿ ಹೇಳಿದ್ದೇ ನನ್ನದೂ ಆಗಿದೆ. ಸುಂದರವಾದ ನಿರೂಪಣೆ ದಿನಕರ್ ಸರ್.

    ReplyDelete
  16. ಈಶ್ವರ್ ಸರ್..
    ಸ್ವಾಗತ ನನ್ನ ಬ್ಲಾಗ್ ಗೆ.. ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ ಧನ್ಯವಾದ...

    ReplyDelete
  17. ಕತೆಯೊಳಗೊಂದು ಕತೆ. ಅದಕ್ಕೊಂದು ಅನಿರೀಕ್ಷಿತ ಅಂತ್ಯ! ಚೆನ್ನಾಗಿದೆ ಮೊಗೇರರೆ :-)

    ReplyDelete
  18. ಸ್ವಲ್ಪ ತಡವಾಗಿ ಕತೆ ಓದಿದೆ ಸರ್..
    ಸೂಪರ್ ಕತೆ... ತಾಯಿ ಮನಸ್ಸಿನ ತುಮುಲಗಳು.. ಮತ್ತು ಮಗಳ ಮನಸ್ಸಿನ ಮೇಲೆ ಅವಳ ಕಲ್ಪನೆಯ ಕತೆ ಮೂಡಿಸಿದ ಪರಿಣಾಮಗಳನ್ನು ಚೆನ್ನಾಗಿ ಹೇಳಿದ್ದಿರಿ. ಕೊನೆಯಲ್ಲಿನ ತಿರುವು ಮತ್ತೂ ಖುಷಿಯಾಯಿತು..
    ಮುಂದಿನ ಕಂತಿಗಾಗಿ ಕಾಯುತ್ತೇನೆ..

    ReplyDelete
  19. Ayyo nittusiru biduvashtaroLage matte usiru kattitu... :(
    Kathe chennaagideyaadaroo ashtoLLe, chendada samsaara ondu suLLemba satyadinda (!) saaravilladantayteno emba bejaru...!!

    ReplyDelete
  20. ಸಾರ್, ಈ ಕಥೆಯನ್ನು ಕನ್ನಡ ಕಿರು ಚಿತ್ರದಲ್ಲಿ ಉಪಯೋಗಿಸಿಕೊಂಡಿದ್ದಾರೆ..
    ಆದರೆ ಅದರಲ್ಲಿ ಎಲ್ಲೂ ನಿಮ್ಮ ಹೆಸರು ಕಾಣಿಸುವುದಿಲ್ಲ..
    ಆ ವೀಡಿಯೋದ ಲಿಂಕ್ ಬೇಕಿದ್ರೆ ಹೇಳಿ ಕಳಿಸುತ್ತೇನೆ..

    ReplyDelete