Dec 6, 2009

'' ಹೀಗೂ ಉಂಟೆ.........'' !

''ನನ್ನ ಅಣ್ಣ ಸತ್ತು ಇವತ್ತಿಗೆ ಹತ್ತು ವರ್ಷ ಸರ್'' ..... ಎಂದಿಗೂ ಮಾತಾಡದ ನನ್ನ ಡ್ರೈವರ್ ಇವತ್ತು ಮಾತಾಡುತ್ತಿದ್ದ.... .....'' ಏನಾಗಿತ್ತು ಅವರಿಗೆ'' ಎಂದೆ...... '' ಯಾರೋ ಮಾಟ ಮಾಡಿಸಿದ್ದರು ಸರ್'' ಅಂದ......... ನಾನು ಬೆಚ್ಚಿದೆ..... ಅವನು ಹೇಳುತ್ತಾ ಹೋದ..... ಆಗಷ್ಟೇ ಆಫೀಸಿನಿಂದ ಸೈಟಗೆ ಹೊರಟಿದ್ದೆ..... ಎಂದಿಗೂ ಏನೂ ಕೇಳದ, ಹೇಳದ ಡ್ರೈವರ್ ಮಾತಾಡುತ್ತಿದ್ದ...... ನಾನು ಕೇಳಿಸಿಕೊಳ್ಳಲು ತಯಾರಾದೆ.... ..... ಅವನು ಹೇಳುತ್ತಾ ಹೋದ.......... '' ನಮ್ಮದು ತುಂಬಾ ಬಡ ಕುಟುಂಬ ಸರ್, ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ.. ಹಿರಿಯ ಅಣ್ಣ , ಅವನ ಗೆಳೆಯರ ಸಂಗಡ ಮುಂಬೈ ಗೆ ಹೋಗಿ ಹೋಟೆಲ್ ಕೆಲಸ ಸೇರಿಕೊಂಡ.... ಹೋದ ಸ್ವಲ್ಪ ಸಮಯದಲ್ಲೇ ಅವನೇ ಒಂದು ಹೋಟೆಲ್ ನಡೆಸಲು ಶುರು ಮಾಡಿದ........ ಒಳ್ಳೆಯ ಸಂಪಾದನೆಯೂ ಬರ್ತಾ ಇತ್ತು..... ಬಂದ ಹಣದಲ್ಲಿ, ಇಲ್ಲಿ ಒಂದು ತೋಟ, ಮನೆ ಎಲ್ಲಾ ತೆಗೆದುಕೊಂಡ..... ನಮ್ಮನ್ನೆಲ್ಲ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.... ಅಲ್ಲಿಂದ ಊರಿಗೆ ಬರುವಾಗಲೆಲ್ಲಾ ಹೊಸದಾಗಿ ಕೊಂಡ ಕಾರಿನಲ್ಲೇ ಬರುತ್ತಿದ್ದ.... ನಾನು ಕಾಲೇಜ್ ಗೆ ಹೋಗ್ತಾ ಇದ್ದೆ....... ಅಣ್ಣನ ಏಳಿಗೆ ನೋಡಿ ನಮ್ಮ ಸಂಭಂದಿಕರಿಗೆಲ್ಲಾ ಹೊಟ್ಟೆಯುರಿ ಶುರು ಆಯ್ತು..... ತೀರಾ ಬಡವರಾಗಿದ್ದ ನಾವು, ಶ್ರೀಮಂತರಾಗಿದ್ದನ್ನ ನೋಡಲು ಅವರಿಗೆ ಸಹಿಸಲು ಆಗಲಿಲ್ಲ....... ಅವರಲ್ಲಿ ಯಾರೋ ಕೇರಳಕ್ಕೆ ಹೋಗಿ ಮಾಟ ಮಾಡಿಸಿ ಬಂದಿದ್ದಾರೆ.... ಮುಂಬೈ ಯಲ್ಲಿ ಅಣ್ಣನ ವ್ಯಾಪಾರ ನೋಡಿ ಅವನ ಪಕ್ಕದ ಹೋಟೆಲಿನವರೂ ಸಹ ಮಾಟ ಮಾಡಿಸಿದ್ದಾರೆ........... ಅವನಿಗೆ ಮಲಗಿದಾಗ ಕನಸು ಬೀಳುವುದಂತೆ.........'ಮನೆಗೆ ಬಾ, ನಾನು ಕಾಯ್ತಾ ಇದ್ದೇನೆ' ಎಂದು ಯಾರೋ ಕರೆದ ಹಾಗೆ.......ಹೀಗೆಲ್ಲಾ ನಡೀತಾ ಇದೆ ಎಂದು ನಂಗೆ ಫೋನ್ ಮಾಡಿ ಹೇಳಿದ..... ನಾನು ನಂಬಲಿಲ್ಲ ಸರ್, ...... ನನ್ನ ಹುಡುಗು ಬುದ್ದಿ, ಬಿಸಿ ರಕ್ತ.... ಯಾವುದನ್ನೂ ನಂಬಲಿಲ್ಲ...... ಅಮ್ಮ ಮಾತ್ರ ಹೆದರಿದರು...... ಅಣ್ಣನ ಜಾತಕ ತೆಗೆದುಕೊಂಡು, 'ಬಟ್ಟ' ರಲ್ಲಿ ಹೋದರು..... ' ತುಂಬಾ ಕೆಟ್ಟ ದೋಷವಿದೆ, ಜಾಗ್ರತೆಯಾಗಿರಲು ಹೇಳಿ' ಎಂದಿದ್ದಾರೆ ಭಟ್ಟರು....... ಅಮ್ಮ ಇದನ್ನೆಲ್ಲಾ ಅಣ್ಣನಿಗೆ ಹೇಳಿದರೂ, ಅಣ್ಣ ಹಣದ ಗತ್ತು, ಹುಂಬತನದಿಂದ ಇದನ್ನೆಲ್ಲಾ ಕಿವಿಗೆ ಹಾಕಿಕೊಳ್ಳಲೇ ಇಲ್ಲ.......... ಅಮ್ಮನ ಹೆದರಿಕೆ ಮುಂದುವರಿದೆ ಇತ್ತು....... ಸ್ವಲ್ಪ ದಿನದ ನಂತರ ಅಣ್ಣ ಮನೆಗೆ ಬಂದ....... ಅವನಿಗೆ ಅಮ್ಮ ಹುಡುಗಿ ನೋಡಿದ್ದರು........ ಮರುದಿನ ನೋಡಲು ಹೊಗುವವರಿದ್ದೆವು...... ಅಂದು ರಾತ್ರಿ ನನಗಿನ್ನೂ ನೆನಪಿದೆ....... ಕೋಳಿ ಸಾರು ಮಾಡಿದ್ದೆವು..... ಅಣ್ಣ ತುಂಬಾ ಪ್ರೀತಿಯಿಂದ ಊಟ ಮಾಡಿದ್ದ..... ತುಂಬಾ ಹೊತ್ತಿನ ತನಕ ಮಾತನಾಡಿ ಮಲಗೋದು, ಹನ್ನೆರಡಾಗಿತ್ತು...... ಮಲಗಿದ ಸ್ವಲ್ಪ ಹೊತ್ತಿನಲ್ಲೇ, ಅಣ್ಣ ' ಯಾರೋ ಕರೆಯುತ್ತಿದ್ದಾರಲ್ಲ' ಎನ್ನುತ್ತಾ ಹೊರಗೆ ಹೋದ....... ಇಷ್ಟು ಹೊತ್ತಾದರೂ ಅಣ್ಣ ಬರಲಿಲ್ಲವಲ್ಲ ಎಂದು ನಾನು ಹೊರಗೆ ಹೋಗಿ ನೋಡಿದರೆ, ಅಣ್ಣ ಮುಖ ಕೆಳಗಾಗಿ ಬಿದ್ದಿದ್ದ...... ನಾನು ಜೋರಾಗಿ ಕೂಗಿದೆ...... '' ಅಪ್ಪಾ...... ಹೊರಗೆ ಬನ್ನಿ, ಅಣ್ಣ ಬಿದ್ದಿದ್ದಾನೆ'' ..... ಅಪ್ಪ ಓಡೋಡಿ ಬಂದು ಅಣ್ಣನನ್ನ ಎತ್ತಿದರು..... ಬಾಯಲ್ಲಿ ರಕ್ತ ಸುರಿಯುತ್ತಿತ್ತು...... ಕೊಡಲೇ ಆಸ್ಪತ್ರೆಗೆ ಕರೆದುಕೊಂಡು ಹೊದೆವಾದರೂ ಪ್ರಯೋಜನವಾಗಲಿಲ್ಲ..... ಅಣ್ಣ ಆಗಲೇ ಸತ್ತು ಹೋಗಿದ್ದ..........

ಮಧ್ಯೆ ನಾನು ಬಾಯಿ ಹಾಕಿದೆ............'' ಪೋಸ್ಟ್ ಮಾರ್ಟಂ ಏನಾದರೂ ಮಾಡಿದ್ರಾ, ಡಾಕ್ಟರ ಏನಂದ್ರು'' ಎಂದೆ........ ' ಅದೆಲ್ಲಾ ಹಳ್ಳಿಯಲ್ಲಿ ಎಲ್ಲಿ ಮಾಡ್ತಾರೆ ಸಾರ್...... ನಂಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ..... ಅಣ್ಣನನ್ನು ಸುಟ್ಟು ಮನೆಗೆ ಬಂದೆವು...... ಅಮ್ಮ ಮಂಕಾಗಿದ್ದಳು..... ಇನ್ನೂ ಏನೋ ಕೆಟ್ಟದಾಗಲಿದೆ ಎಂದು ಬಡಬಡಿಸುತ್ತಿದ್ದಳು.... ನಾನು ಏನೂ ಅರ್ಥವಾಗದೆ, ಏನೂ ಮಾಡದೆ ಸುಮ್ಮನಿದ್ದೆ.... ಇನ್ನೊಬ್ಬ ಅಣ್ಣ, ತೋಟದ ಮನೆಯ ಕೆಲಸದಲ್ಲಿ ಅಪ್ಪನ ಜೊತೆಯಾದ..... ನಾನು ಬಾಂಬೆಯಲ್ಲಿ ಅಣ್ಣನ ಹೋಟೆಲ್ ನೋಡಿಕೊಳ್ಳುತ್ತೇನೆ ಎಂದೆ...... ' ಬೇಡ, ಹೋಟೆಲ್ ನನ್ನ ಮಗನ ಪ್ರಾಣ ತಿಂತು... ನೀವ್ಯಾರಾದರೂ ಅಲ್ಲಿಗೆ ಹೋದರೆ ನನ್ನ ಮೇಲಾಣೆ' ಅಮ್ಮ ಅಬ್ಬರಿಸುತ್ತಿದ್ದರು.....ನಾನು ಉಪಾಯ ಇಲ್ಲದೆ ಕಾಲೇಜ್ ಗೆ ಹೋದೆ ಸರ್..........

''ಸ್ವಲ್ಪ ಕಾರ್ ನಿಲ್ಸು'' ಎಂದೆ..... ಕೆಳಗಿಳಿದು ಹೋಗಿ, ಕೆಲಸಗಾರರಿಗೆ ಮುಂದಿನ ಕೆಲಸಗಳ ಬಗ್ಗೆ ಹೇಳಿ, ಮತ್ತೆ ಬಂದು ಕುಳಿತೆ...... ''ಸರಿ, ಮನೆಗೆ ಹೋಗೋಣ'' ಎಂದೆ........ ನನ್ನ ಡ್ರೈವರ್ ಅದೇ ಲಹರಿಯಲ್ಲಿದ್ದ..... ನಾನೂ ಸಹ ಅವನಿಗೆ ಕಿವಿಯಾದೆ............... '' ನಂತರ ನನ್ನ ಎರಡನೇ ಅಣ್ಣನೂ ವಿಚಿತ್ರವಾಗಿ ಆಡಲು ಶುರು ಮಾಡಿದ ಸರ್, ಇದ್ದಕ್ಕಿದ್ದಂತೆ ' ನಾನು ಮುಂಬೈ ಗೆ ಹೋಗಬೇಕು, ನನ್ನ ಹಣ ಇದೆ ಅಲ್ಲಿ' ಎಂದೆಲ್ಲಾ ಕೂಗುತ್ತಿದ್ದ ..... ಅಮ್ಮ ಮತ್ತೆ ಜಾತಕ ತೆಗೆದುಕೊಂಡು ಹೋದರು, ಬಾರಿ ನಾನೂ ಅವರ ಜೊತೆ ಹೋದೆ.... ಭಟ್ಟರು ಮಾತ್ರ ' ತುಂಬಾ ದೊಡ್ಡದಾಗಿ ಮಾಟ ಮಾಡಿಸಿದ್ದಾರೆ, ನಾವು ತಿರುಗುಮಾಟ ಮಾಡಬಹುದು, ಆದ್ರೆ ತುಂಬಾ ಖರ್ಚಾಗತ್ತೆ' ಅಂದ್ರು...... ಅಮ್ಮ 'ಎಷ್ಟಾದರೂ ಅಡ್ಡಿಯಿಲ್ಲ..... ಮನೆ , ತೋಟ ಮಾರಿ ಹಣ ತರುತ್ತೇನೆ.... ನನ್ನ ಮಕ್ಕಳು ಸುಖವಾಗಿ ಇರಬೇಕು ಅಷ್ಟೇ ಅಂದಳು..... ನಂಗೆ ಏನೂ ಅರ್ಥವಾಗದೆ ಇದ್ದರೂ ಏನೋ ತುಂಬಾ ಅಪಾಯವಿದೆ ಎಂದೆನಿಸಿತ್ತು.....ಹಾಗೆಯೇ ಅಮ್ಮ, ತೋಟದ ಸ್ವಲ್ಪ ಭಾಗ ಮಾರಿ, ಹಣ ತಂದು ಭಟ್ಟರು ಹೇಳಿದ ಹಾಗೆ ಮಾಡಿ ಮುಗಿಸಿದಳು..... ಅಣ್ಣ ಸುಧಾರಿಸುತ್ತಾ ಬಂದ....... ಅವತ್ತು, ದೊಡ್ಡಣ್ಣ ಸತ್ತು ಐದು ವರ್ಷವಾಗಿತ್ತು ಸರ್.... ತೋಟದ ಕೆಲಸಕ್ಕೆ ಹೋದ ಎರಡನೇ ಅಣ್ಣ ಉಳಿದ ಕೆಲಸಗಾರರಿಗೆ, ' ನಾನು ಈಗ ಸಾಯುತ್ತೇನೆ, ನನ್ನ ಹೆಣವನ್ನು ಇಲ್ಲೇ , ಇದೆ ಜಾಗದಲ್ಲಿ ಹುಗಿಯಬೇಕು' ಎಂದಿದ್ದಾನೆ.... ಕೆಲಸಗಾರರೆಲ್ಲ ನಗಾಡುತ್ತಾ ಕೆಲಸ ಮುಂದುವರಿಸಿದ್ದಾರೆ.... ಅಣ್ಣ ಸೀದಾ ಹೋಗಿ, ತೋಟದ ಮನೆಯ ಒಳಗೆ ಹೋಗಿ ನೇಣು ಹಾಕಿಕೊಂಡ............ ಅವತ್ತು ಗ್ರಹಣವಾಗಿತ್ತು ಸರ್.....

ನನ್ನಿಂದ ಮಾತೆ ಹೊರಡಲಿಲ್ಲ.... ಇದೆಲ್ಲಾ ಸತ್ಯಾನಾ..... ಯಾರೋ ಮಾಟ ಮಾಡಿಸೋದು.... ಯಾರೋ ಸಾಯೋದು.... ಇದೆಲ್ಲಾ ಸತ್ಯ ಆಗಿಬಿಟ್ಟರೆ, ಜಗತ್ತಿನ ಜನಸಂಖ್ಯೆ ಇಷ್ಟು ಇರುತ್ತಿರಲಿಲ್ಲ.... ಎಲ್ಲರೂ ಹಣ ಕೊಟ್ಟು, ಕಂಡವರಾಗದವರನ್ನು ಸುಲಭವಾಗಿ ಸಾಯಿಸಬಹುದಿತ್ತು ಎಂದುಕೊಂಡೆ......

ಅವನು ಹಾಗೆ ಮುಂದುವರಿಸಿದ...... '' ಅಮ್ಮ ಇದೆ ಕೊರಗಿನಲ್ಲಿ ಸತ್ತು ಹೋದರು, ಅಪ್ಪ ಮಾತ್ರ ದಿನಾ ಅಮ್ಮನ , ಅಣ್ಣನ ಫೋಟೋಗೆ ಹೂವು ಹಾಕುತ್ತಾ ದಿನ ಕಳೆಯುತ್ತಿದ್ದಾರೆ.... ನಾನು ಕಾರು ಬಾಡಿಗೆಗೆ ಬಿಟ್ಟಿದ್ದೇನೆ, ತಮ್ಮ ಕಾಲೇಜ್ ಗೆ ಹೋಗ್ತಾ ಇದ್ದಾನೆ ಸರ್..... ಹೇಗೋ ದಿನ ದೂಡುತ್ತಿದ್ದೇವೆ ಸರ್..... '' ಎಂದ........... ನನಗೆ ತುಂಬಾ ಕುತೂಹಲ.... '' ನಿಂಗೆ ಯಾವತ್ತಾದರೂ ಅಂಥಾ ಅನುಭವ ಆಗಿತ್ತಾ '' ಎಂದು ಕೇಳಿದೆ..... '' ಆಗ್ತಾ ಇರತ್ತೆ ಸರ್, ಏನ್ ಮಾಡೋದು, ಹಣೆಬರಹ .... ಅನುಭವಿಸಬೇಕು'' ಅಂದ ನಿಟ್ಟುಸಿರು ಬಿಟ್ಟು.........

''ಇಲ್ಲೇ ನಿಲ್ಸೂ, ಮನೆ ಬಂತಲ್ಲ..... ಎಲ್ಲಿಗೆ ಹೋಗ್ತಾ ಇದೀಯಾ.... '' ಎಂದು ಕೂಗಿದೆ ನಾನು......ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದ......... ಶನಿವಾರವಾಗಿದ್ದರಿಂದ ನಾಳೆ ರಜೆಯಿತ್ತು..... ಅವನಿಗೆ ಏನಾದರೂ ಹಣ ಕೊಡೋದು ನನ್ನ ರೂಡಿ....ನೂರು ರುಪಾಯಿ ಕೊಡೋಕೆ ಹೋದೆ.... ಅವನ ಕಣ್ಣು ಮುಚ್ಚಿತ್ತು...... ... '' ಏನಾಯ್ತೂ'' ಎಂದೆ.... ಮಾತಾಡಲಿಲ್ಲ..... 'ಏಯ್ .... ಏನೋ ಇದು.... ಕಣ್ ಬಿಡೋ, ಹಣ ತೆಗೋ'' ಎಂದೆ..... ಅವನ ಕಣ್ಣು ಮುಚ್ಚೆ ಇತ್ತು...... ನಂಗೆ ಗಾಬರಿಯಾಯಿತು....... ಕೈಯಲ್ಲಿದ್ದ ನೀರಿನ ಬಾಟಲಿಯಿಂದ ನೀರು ತೆಗೆದು ಮುಖಕ್ಕೆ ಹೊಡೆದೆ..... ಥಟ್ಟನೆ ಕಣ್ಣು ಬಿಟ್ಟ...... '' ಸಾರೀ ಸರ್..... ನಿದ್ದೆ ಬಂದು ಬಿಟ್ಟಿತ್ತು..... ಯಾವಾಗ ಬಂದ್ರೀ ಸರ್..... ಎಲ್ಲಿಗೆ ಹೋಗೋಣ ಸರ್......'' ಎಂದ ಕಣ್ಣುಜ್ಜಿಕೊಳ್ಳುತ್ತಾ ..... '' ಇದೇನ್ ಸಾರ್, ನಿಮ್ಮನೆಗೆ ಬಂದು ಬಿಟ್ವಾ.... ಆಫೀಸ್ ಎದುರಿಗೆ ಗಾಡಿ ನಿಲ್ಲಿಸಿ. ಗಾಡಿಯಲ್ಲಿ ಮಲಗಿದ್ದೊಂದೇ ನೆನಪು ನಂಗೆ.... ಇಲ್ಲಿಗೆ ಹೇಗೆ ಬಂದ್ವೀ ಸರ್''........... ಎಂದ ಗಾಬರಿಯಲ್ಲಿ....... ಬಾಟಲಿಯಲ್ಲಿ ಉಳಿದ ನೀರು ಕುಡಿಯಲು ಕುಡಿಯಲು ಹೋದೆ..... ನೀರು ಗಂಟಲಲ್ಲಿ ಇಳಿಯಲಿಲ್ಲ........

25 comments:

  1. ಮಾಟ ಮಂತ್ರ, ಭೂತದ ಚೇಷ್ಟೆ..ಇದೆಲ್ಲಾ ನನ್ನ ಮಟ್ಟಿಗೆ ದುರ್ಬಲಮನಸ್ಸನ್ನು ವಶೀಕರಿಸುವ ಹಿಪ್ನಾಟಿಕ್ ತಂತ್ರಗಳು ಎನಿಸುತ್ತವೆ...ಇದು ಹಳ್ಳಿಗಾಡಿನಲ್ಲೇ ಹೆಚ್ಚು ಕಾಣುವುದೇಕೆ? ಈ ಮಾತು ನನ್ನ ತಿಳುವಳಿಕೆಗೆ ಹೊರತಾದುದು. ಅಂದರೆ ಇವುಗಲ ಬಗ್ಗೆ ನಂಬಿಕೆ ಇರುವವರನ್ನು ಹೆಚ್ಚಾಗಿ ಪ್ರಭಾವಿತಗೊಳಿಸುತ್ತವೆಯೇ ಈ ತಂತ್ರಗಳು..??!! ಗೊತ್ತಿಲ್ಲ..
    ಒಳ್ಳೆಯ ಕಯ್ಹೆ ಹೇಳುವ ಪರಿ, ದಿನಕರ್..ಮುಂದುವರಿಯಲಿ...

    ReplyDelete
  2. ಅಜಾದ್ ಸರ್,
    ಇದು ಸ್ವಲ್ಪ ಸತ್ಯ ಕಥೆ.... ಅರ್ಧ ಸತ್ಯ ಅನ್ನಬಹುದು.... ಅದನ್ನ ನಾನು ಮುಂದುವರೆಸಿ ಕಥೆ ಮಾಡಿ ಹೇಳಿದ್ದೇನೆ..... ನಾನೂ ಸಹ ಇದನ್ನ ನಂಬಲ್ಲ ಆದ್ರೆ ಒಬ್ಬನೇ ಇದ್ದಾಗ ಯೋಚನೆ ಮಾಡಿದ್ರೆ ಹೆದರಿಕೆ ಆಗತ್ತೆ......

    ReplyDelete
  3. ಕಥೆ ಚೆನ್ನಾಗಿದೆ. ಮಾಟ ಮಂತ್ರಗಳ ಬಗ್ಗೆ ಹೆಚ್ಚು ಭಯ ಪಡುವವರನ್ನೇ ಅದು ಭಾಧಿಸುವುದಂತೂ ಸತ್ಯ. ಅದರ ಹೆಸರಲ್ಲಿ ದುಡಿಯುವವರಿಗೆ , ಹೀಗೆ ನಂಬುವವರು ಸಿಕ್ಕಾಗ ಹಬ್ಬ.

    ReplyDelete
  4. ತುಂಬಾ ಪರಿಣಾಮಕಾರಿಯಾದ ಶೈಲಿಯಲ್ಲಿ ಬರೆದಿದ್ದೀರಿ. ಇಂತಹ
    ನಿಗೂಢ ಘಟನೆಗಳನ್ನು ಅವಾಸ್ತವ ಎಂದು ಅಲ್ಲಗಳೆಯಲು ಸಾಧ್ಯವಿಲ್ಲ.

    ReplyDelete
  5. 'ರಾಯಭಾಗದ ರಹಸ್ಯ ರಾತ್ರಿ ' ಜೋಗಿಯ ಕಥೆಗಳು ನೆನಪಾದವು... ಸ್ವಲ್ಪ ಉಸಿರಲ್ಲಿ ಏನೋ ಏರಿಳಿತವಾಯಿತು..
    ಚೆನ್ನಾಗಿದೆ ನಿಮ್ಮ ಕಥೆ..
    ನಿಮ್ಮವ,
    ರಾಘು.

    ReplyDelete
  6. ಸರ್, ಇದು ಕಥೆನಾ ನಿಜನಾ ಹಹಹ ಸ್ವಲ್ಪ ಹೆದರಿದ್ದೆ ಹಹಹ.. ತುಂಬಾ ಚೆನ್ನಾಗಿದೆ ಕಥೆ..ಎಂತಹ ಅನುಭವ ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ .... ಬೆಚ್ಚುವಂತೆಮಾಡಿದಿರಿ.... ಮಾಟ ಮಂತ್ರ ಎಂದು ಊರುಗಳಲ್ಲಿ ಭಾರಿ ನಂಬುತ್ತಾರೆ ಜನ ಇದರಿಂದ ದುಡ್ಡು ದಂಡ ನೆಮ್ಮದಿಯೂ ಹಾಳಾಗುತ್ತದೆ...ಅಷ್ಟೆ.

    ReplyDelete
  7. ಪ್ರಾಕ್ಟಿಕಲ್ಲಾಗಿ ಯೋಚನೆ ಮಾಡುವುದೇ ಇಲ್ಲ ....ಡಾಕ್ಟರ್ ಹತ್ತಿರ ಹೋಗುವುದರ ಬದಲು ಮಾಟ ಮ೦ತ್ರದ ಸ್ಪೆಶಲಿಸ್ಟ್ ಗಳ ಹತ್ತಿರ ಹೋಗುವ ಜನರ ಮುಗ್ಧತೆಗೇನು ಮಾಡೊಣ ಹೇಳಿ.... ?
    ಒಳ್ಳೆಯ ಬರಹ.

    ReplyDelete
  8. ಮಾಟ ಎಂದರೆ ಭಾಗಷ್ಯ ಮುಗ್ದ ಮನಸುಗಳ ಮೇಲೆ ಮಾಡುವ ಧಾಳಿ ಎನ್ನಿಸುತ್ತದೆ.

    ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ, ಕೊನೆಯ ವರೆಗೂ ಅತ್ಯಂತ ಕುತೂಹಲಮಯ ವಾಗಿ ಸಾಗುತ್ತದೆ.
    ಓದಿ ತುಂಬಾ ಕುಶಿ ಆಯಿತು. :) :)

    ReplyDelete
  9. ದಿನಕರ್ ಸರ್,
    ನಮ್ಮ ಕಡೆಗೂ ಇದು ತುಂಬಾ ಇದೆ, ಮಾಟ ಮಾಡಿಸಿದ್ದಾರೆ ಎನ್ನುತ್ತಿರುತ್ತಾರೆ
    ಒಮ್ಮೆ ಮನಸ್ಸು ದುರ್ಬಲ ವಾದರೆ ಎಲ್ಲ ಮಾತುಗಳನ್ನು ನಂಬಲು ಆರಂಬಿಸುತ್ತದೆ,
    ನಾವು ಕ್ರಿಕೆಟ್ ನೋಡಿದಂತೆ, ೫೦ ರನ್ ಗೆ ೮ ವಿಕೆಟ್ ಹೋದರು ಭಾರತದವರೂ ಗೆಲ್ಲುತ್ತಾರೆ ಎಂಬ ಹುಂಬ ವಿಶ್ವಾಸವಿಟ್ಟು
    ಕೊಂಡಂತೆ ಅಲ್ಲವೇ? ಮನಸ್ಸು ದುರ್ಬಳವಾದರೆ ದೇವರಮೇಲೆ, ದೆವ್ವದ ಮೇಲೆ, ಮಾಟ. ತಂತ್ರದ ಮೇಲೆ ಹೀಗೆ ಲಂದ ಕಂಡಲ್ಲಿ ನಂಬಿಕೆ ಬೆಳೆಯುತ್ತ ಹೋಗುತ್ತದೆ

    ReplyDelete
  10. ಚೆನ್ನಾಗಿದೆ .... ಎಷ್ಟೋ ದಿನಗಳಿಂದ ಮಾಟ ಮಂತ್ರದ ಬಗ್ಗೆ ಕಥೆ ಬರೆಯಬೇಕು ಅಂದುಕೊಂಡಿದ್ದೆ.. ಅಷ್ಟರಲ್ಲಿ ನಿಮ್ಮ ಕಥೆ ಬಂತು ನೋಡಿ... ಓದಿ ಖುಷಿಯಾಯಿತು... ಕೊನೆಯವರೆಗೂ ಏನಾಗುತ್ತೋ ಅನ್ನೋ ಕುತೂಹಲ ಉಳಿಸಿಕೊಂಡು ಓದಿಸಿಕೊಂಡು ಹೋಗುವ ಕಥೆ...

    ಮತ್ತೆ ವಿನಯ್ ಅವರಿಂದ ಪಾರಿವಾಳದ ಕಥೆ ಕೇಳಿಸಿಕೊಂಡೆ.. ಸಕತ್ತಾಗಿದೆ :-).. ಮತ್ತೆ ಹೊಸ ವರ್ಷಕ್ಕೆ "New Year" ಕಾರ್ಡ್ ಕೊಡ್ತೀರ ಇಲ್ಲ "Sister" ಕಾರ್ಡ್ ಕೊಡ್ತೀರ??? ಹಾ ಹಾ ಹಾ!!!!

    ReplyDelete
  11. ಚೆನ್ನಾಗಿದೆ ಇನ್ನಷ್ಟು ಬರೀರಿ

    ReplyDelete
  12. ಹೆದರಿಸಿಬಿಟ್ಟಿರಲ್ಲ ರೀ... ಹ್ಹಾ ಹ್ಹಾ ಹ್ಹಾ....
    ನಿಜಕ್ಕೂ ಈ ಥರದ ಅನುಭವಗಳನ್ನು ನಾನು ಕೇಳಿದ್ದೇನೆ.
    ಇದು ನಿಜವೆಂದೇ ಹೇಳಬಹುದು.
    ನಂಬುವವರು ನಂಬಲಿ, ಬಿಡುವವರು ಬಿಡಲಿ.
    ತುಂಬಾ ಸ್ವಾರಸ್ಯಕರವಾಗಿ ನೈಜ ಘಟನೆ ತರ ಬರೆದಿದ್ದೀರಿ.

    ReplyDelete
  13. ಸುಮಾ ಮೇಡಂ,
    ದೆವ್ವನ್ನ ನಂಬೋದೋ ಬಿಡೋದೋ, ಅದು ತುಂಬಾ ಕಷ್ಟದ ವಿಷ್ಯ... ಒಬ್ಬೊಬ್ಬರು ಒಂದೊಂದು ವಿಷಯ ಹೇಳುತ್ತಾರೆ.... ಯಾರನ್ನ ನೋಮ್ಬೋದು .... ಪ್ರತಿಕ್ರೀಯೆ ನೀಡಿದ್ದಕ್ಕೆ ಧನ್ಯವಾದಗಳು....

    ReplyDelete
  14. ಸುನಾಥ್ ಸರ್,
    ಇದು ನಡೆದ ಘನತೆ..... ಮೊದಲಾರ್ಧ ಮಾತ್ರ...... ಅಂತ್ಯ ನಾನು ಯೋಚಿಸಿದ್ದು..... ಮೆಚ್ಚಿದ್ದಕ್ಕೆ ತುಂಬಾ ಖುಷಿಯಾಯಿತು....

    ReplyDelete
  15. ರಘು ಸರ್,
    ಜೋಗಿಯವರ ' ರಾಯಘಾಗದ ರಹಸ್ಯ ರಾತ್ರಿ' ಕಥೆಯನ್ನು ಖಂಡಿತಾ ಓದುತ್ತೇನೆ..... ಥ್ಯಾಂಕ್ಸ್ ಕಾಮೆಂಟ್ ಮಾಡಿದ್ದಕ್ಕೆ...

    ReplyDelete
  16. ಮನಸು ಮೇಡಂ,
    ಇದನ್ನ ಮೊದಲ ಸಾರಿ ಕೇಳಿದಾಗ ನನಗೂ ಗಾಬರಿಯಾಗಿತ್ತು..... ಸುಮ್ಮನೆ ನಂಬಿರಲಿಲ್ಲ..... ಅವನಿಗೂ ಸುಳ್ಳು ಹೇಳಲು ಬೇರೆ ಕಾರಣಗಳು ಇರಲಿಲ್ಲ ..... ನಿಮಗೆ ಹೆದರಿಸಿದ್ದಕ್ಕೆ ನನಗೆ ಖುಷಿಯಾಗುತ್ತಿದೆ,,,,,,,,, ಹ ಹಹಾ..........

    ReplyDelete
  17. ವಿಜಯಶ್ರೀ ಮೇಡಂ,
    ಹಳ್ಳಿ ಜನರು ತುಂಬಾ ಮುಗ್ಧರು ..... ಅವ್ರಿಗೆ ಅವರ ಹಿರಿಯರು ಹೇಳಿದ್ದನ್ನೇ ನಂಬುತ್ತಾರೆ... ಹಾಗೆ ನಡೆಯುತ್ತಾರೆ ಕೂಡ .... ಪ್ರತಿಕ್ರಿಯೆಗೆ ಧನ್ಯವಾದ.....

    ReplyDelete
  18. ಬಾಲು ಸರ್,
    ಮೊದಲ ಬಾರಿಗೆ ಎಲ್ಲರಿಗೂ ಹೆದರಿಸಿದ್ದಕ್ಕೆ ನನಗೆ ಖುಷಿ ಆಗ್ತಾ ಇದೆ..... ಹ ಹಾ ಹಾ

    ReplyDelete
  19. ಗುರು ಸರ್,
    ದುರ್ಬಲ ಮನಸ್ಸು ಇದನ್ನ ನಂಬುತ್ತದೆ ಎನ್ನೋದೇನೋ ಸರಿ, ಆದ್ರೆ...... ಆ ಪರಿಸ್ತಿತಿಯಲ್ಲಿ ಇದನ್ನೇ ನಮ್ಬಬೇಕಾಗುತ್ತದೆ ಎಂದು ನನ್ನ ಅನಿಸಿಕೆ..... ನಿಮ್ಮ ಅನಿಸಿಕೆಗೆ ಧನ್ಯವಾದಗಳು.....

    ReplyDelete
  20. ರವಿಕಾಂತ್ ಸರ್,
    ನಿಮಗಿಂತ ಮೊದಲೇ ನಾನು ದೆವ್ವದ ಕಥೆ ಬರೆದಿದ್ದಕ್ಕೆ ಖುಷಿಯಿದೆ.... ನಿಮ್ಮ ಕಥೆ ಓದಲು ಕುತೂಹಲವಿದೆ..... ಬೇಗ ಬರೆಯಿರಿ.....
    ಮತ್ತೆ, ಪಾರಿವಾಳದ ಕಥೆ ಹೇಳು ಅಂದ್ರೆ, ವಿನಯ್ ಬೇರೆ ಕಥೆ ಹೇಳಿದ್ದಾನೆ..... ನಾನೇ ಅವನಿಗೆ ಹೇಳುತ್ತೇನೆ, ನಿಜ ಕಥೆ ಹೇಳಲು.....

    ReplyDelete
  21. ಮಿಥುನ್ ಸರ್,
    ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ....

    ReplyDelete
  22. ಶಿವಪ್ರಕಾಶ್,
    ನಾನು ಸಹ ಅಲ್ಪ ಸ್ವಲ್ಪ ದೆವ್ವದ ಕಥೆ ನಂಬುತ್ತೇನೆ..... ರಾತ್ರಿ ಒಬ್ಬನೇ ಇದ್ದಾಗ ನೆನಪು ಬಂದರೆ ಭಯವಾಗತ್ತೆ ಅಷ್ಟೇ ..... ತುಂಬಾ ಹೆದರಲ್ಲ..... ಹ ಹಾ ಹಾ....

    ReplyDelete
  23. ಏನೂ ನಂಬೋಕೆ ಆಗಲ್ಲ್ ಬಿಡಿ... ನಂಬಿದ್ರೆ ನಂಬಿ ಬಿಟ್ರೆ ಬಿಡಿ ಅಂತಾನೇ ಎಲ್ರೂ ಇಂಥಾ ಕಥೆ ಹೇಳೋದು... ಎಲ್ಲದಕ್ಕೂ ವೈಜ್ಞಾನಿಕ ಕಾರಣ ಹುಡುಕೊದರಲ್ಲಿ ಸಾಕು ಸಾಕಾಗಿ ಹೋಗುತ್ತದೆ...

    ReplyDelete
  24. ಜಗತ್ತಿನಲ್ಲಿ ಮಾನವನ ಶಕ್ತಿಗಿ೦ತ ಹೊರತಾಗಿ ಏನೋ ಶಕ್ತಿ ಇದೆ ಅನ್ನುವುದನ್ನು ನಾನು ನ೦ಬುತ್ತೇನೆ. ನಕಾರಾತ್ಮಕ ಮನಸ್ಸಿಗೆ ಭೂತದ ನ೦ಬುಗೆ ಬರುತ್ತದೆ.. ಸಕಾರಾತ್ಮಕ ಮನಸ್ಸಿಗೆ ದೇವರ ನ೦ಬುಗೆ ಬರುತ್ತದೆ... ಅಥವಾ ಅದಕ್ಕೊ೦ದು ಹೆಸರನ್ನು ಕೊಡದಿರಬಹುದು...ಒಟ್ಟಿನಲ್ಲಿ ವಿಧಿಲಿಖಿತವನ್ನು ಯಾರೂ ತಪ್ಪಿಸಲಾರರು.. ಎ೦ಬುದು ನನ್ನ ನ೦ಬುಗೆ... ಹಳ್ಳಿಗಳಲ್ಲಿ ದುಡ್ಡಿಗಾಗಿ ಮಾಟ ಮ೦ತ್ರ ಎ೦ದು ದುಡ್ಡು ಮಾಡುವವರ ಮಧ್ಯೆ ಮುಗ್ಧಜನರು ಮೋಸಹೋಗುತ್ತಿದ್ದಾರೆ...
    ವ೦ದನೆಗಳು.

    ReplyDelete
  25. mai jumm annisuva haage baredhidheeri dinakar avare... namma oorinalli yaavaagalu maata manthra antha maathaaduttaare.. nijava ballavaru yaaru?

    ReplyDelete