ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್ ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ ಮೊದಲಷ್ಟೇ ಫೋನ್ ಮಾಡಿದ್ರೀ... ಆಗ್ಲೇ ಮತ್ತೆ ನೆನಪಾಯ್ತಾ?” ಎನ್ನುತ್ತಾಳೆ ಕಿಚಾಯಿಸುವ ಧ್ವನಿಯಲ್ಲಿ...
ಅನುಜ್ ನ ಸೋತ ಮುಖ ನೋಡಿ “ ಏನಾಯ್ತ್ರೀ... ಯಾಕೆ ಪದೇ ಪದೇ ಅದನ್ನೇ ಯೋಚಿಸ್ತಾ ಇರ್ತೀರಾ.... ಏನೂ ಆಗಲ್ಲ.. ಎಲ್ಲ ಸರಿಯಾಗತ್ತೆ... ಚಿಂತಿಸಬೇಡಿ” ಎನ್ನುತ್ತಾಳೆ.... ಅನುಜ್ ಕಣ್ಣಲ್ಲಿ ನೀರು ಬರತ್ತೆ... “ ಜಾನ್ಹವಿ ಎಲ್ಲಿ?” ಎಂದು ಕೇಳುತ್ತಾನೆ... ಜಾನ್ಹವಿ , ಅಕ್ಷತಾ ಅನುಜ್ ರ ಐದು ವರ್ಷದ ಮಗಳು.... “ಜಾನ್ಹವಿ ಮಲಗಿದ್ದಾಳೆ, “ ಎನ್ನುತ್ತಾ ಫೋನ್ ತೆಗೆದುಕೊಂಡು ಮಗಳನ್ನು ಮಲಗಿಸಿದ್ದ ರೂಮಿಗೆ ಹೋಗಿ ಮಗಳನ್ನು ತೋರಿಸುತ್ತಾಳೆ...
ಮಗಳು ಮಲಗಿದ್ದ ರೀತಿ ನೋಡಿ ಅನುಜ್ ಗೆ ಕಂಟ್ರೋಲ್ ಮಾಡಲು ಆಗುವುದಿಲ್ಲ... ಜೋರಾಗಿ ಬಿಕ್ಕಲು ಆರಂಭಿಸುತ್ತಾನೆ... ಆತ ಅಳುವುದನ್ನು ನೋಡಿ ಅಕ್ಷತಾ “ ರೀ.. ಜ್ವರ ಈಗ ಬಿಟ್ಟಿದೆ.... ನೀವೇನೂ ಹೆದರಬೇಡಿ... ನಮ್ಮ ಮಗಳು ಸ್ಟ್ರಾಂಗ್ ಇದಾಳೆ... ನಿಮ್ಮ ಹಾಗೆ” ಎನ್ನುತ್ತಾ ಅನುಜ್ ಮೂಡ್ ಸರಿ ಮಾಡಲು ನೋಡುತ್ತಾಳೆ....
“ಹಾಗಲ್ಲ ಅಕ್ಷತಾ, ಈಗಿನ ಪರಿಸ್ಥಿತಿಯಲ್ಲಿ .......” ಎಂದೇನೋ ಹೇಳಲು ಹೊರಟಿದ್ದ..... ಮಧ್ಯದಲ್ಲಿ ಅಕ್ಷತಾ ಬಾಯಿ ಹಾಕಿ “ ರೀ.... ಕೊರೋನಾ, ಗಿರೋನಾ ಏನೂ ಇಲ್ಲ... ಸುಮ್ ಸುಮ್ನೆ ಇಲ್ಲದ್ದನ್ನೆಲ್ಲ ಯೋಚಿಸ್ಬೇಡಿ... ಅವಳು ನಿನ್ನೆ ಸ್ನಾನ ಮಾಡುವಾಗ ಟ್ಯಾಪ್ ನೀರು ಕುಡಿದಿದ್ದಾಳೆ.... ಅಷ್ಟೆ... ಹಾಗೆ ಮಾಡಿದಾಗಲೆಲ್ಲ ಅವಳಿಗೆ ಜ್ವರ ಬರತ್ತೆ.....ಸಿರಪ್ ಹಾಕಿದ್ದೇನೆ....ಕಡಿಮೆ ಆಗತ್ತೆ ಬಿಡಿ” ಎಂದು ಸಮಾಧಾನದ ಧ್ವನಿಯಲ್ಲಿ.... ಅನುಜ್ ಕಣ್ಣಲ್ಲಿ ಧಾರಾಕಾರವಾಗಿ ನೀರು ಬರಲು ಶುರು ಆಗತ್ತೆ....
“ಇಲ್ಲ ಅಕ್ಷತಾ, ದೇವರಿಂದ ಬೇಡಿ ಪಡೆದ ಮಗಳು ಇವಳು... ಮಗಳಿಗಾಗಿ ಬೇಡದ ದೇವರಿರಲಿಲ್ಲ... ಅಂಥ ಮಗಳನ್ನೂ ಬಿಟ್ಟು ಹೊಟ್ಟೆಪಾಡಿಗಾಗಿ ವಿದೇಶಕ್ಕೆ ಬಂದು ದುಡಿಯಬೇಕಾಯ್ತು... ಇದಕ್ಕಿಂತ ದೌರ್ಬಾಗ್ಯ ಇದೆಯಾ ಜೀವನದಲ್ಲಿ...?? ಯಾರಿಗಾಗಿ ದುಡಿಯುತ್ತೇವೋ ಅವರಿಂದಲೇ ದೂರ ಇದ್ದು ಜೀವ ತೇಯ್ದು ಜೀವನ ನಡೆಸೋದು?? “ ಅಕ್ಷತಾ ಅವನ ಮಾತಿಗೆ ಅಡ್ಡ ಬರಲಿಲ್ಲ... ಮಾತಾಡಿಯಾದರೂ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಲಿ ಎನಿಸಿತು ಆಕೆಗೆ...
ಅನುಜ್ ಮುಂದುವರಿಸಿದ್ದ “ ಅವಳ ಪ್ರತೀ ಚಲನವನ್ನೂ ನಾನು ಗಮನಿಸಬೇಕು, ಅನುಭವಿಸಬೇಕು ಅಂತ ಪ್ರಾರ್ಥಿಸಿದ್ದವನಿಗೆ ಫೋನ್ ಮೂಲಕ ಅವಳೊಂದಿಗೆ ಮಾತನಾಡುವುದೊಂದೆ ಉಳಿದಿತ್ತು... ಅವಳು ಮೊಬೈಲ್ ಮುತ್ತು ಕೊಟ್ಟಾಗಲೂ ಅವಳ ಕೆನ್ನೆಯ ಮೆದು ಅನುಭವಿಸಿದ್ದೆ ನಾನು... ಅವಳು ಬಿದ್ದಾಗಳೂ ಗೆದ್ದಾಗಲೂ ಅವಳ ವಿಡಿಯೋ ನೋಡಿ ಆನಂದಿಸಿದೆ.... “ ಮುಂದಕ್ಕೆ ಮಾತು ಬರದೇ ಗಂಟಲು ಕಟ್ಟಿತು ಅನುಜ್ ಗೆ....
“ ರೀ .. ಬಿಸಿ ನೀರು ಕುಡೀರಿ... ಏನೂ ಆಗಲ್ಲ... ಸ್ವಲ್ಪ ದಿನ ಅಷ್ಟೆ.... ಮತ್ತೆ ಜೊತೆಯಾಗಿ ಬದುಕೋಣ...ಇಲ್ಲೇ ಏನಾದರೂ ಸಣ್ಣ ಕೆಲಸ ಮಾಡಿಕೊಂಡು ಇರೋಣ... ಮತ್ತೆ ದೂರ ಹೋಗುವ ಮಾತಾನಾಡಬಾರದು ಅಷ್ಟೆ...” ಎಂದಳು ಅಕ್ಷತಾ..
ಅನುಜ್ ಪ್ಲಾಸ್ಕಿನಲ್ಲಿದ್ದ ಬಿಸಿ ನೀರು ಕುಡಿದು ಕಣ್ಣೊರಿಸಿಕೊಳ್ಳುತ್ತಾನೆ....
“ಅದಲ್ಲ ಅಕ್ಷತಾ, ಪ್ರೀತಿಸಿ ಮದುವೆಯಾದ ನಿನ್ನನ್ನೂ , ದೇವರನ್ನು ಬೇಡಿ ಬೇಡಿ ಪಡೆದ ಮಗಳನ್ನೂ ಬಿಟ್ಟು ಇರಲಾಗದೇ ಚಡಪಡಿಸಿದ್ದೆ ನಾನು... ದುಬೈ ಲಿ ಕಳೆದ ಮೂರು ವರ್ಷ ಮೂವತ್ತು ವರ್ಷಕ್ಕೆ ಸಮನಾಗಿತ್ತು... ಈ ಕೊರೋನಾ ಬಂದ ಕೊಡಲೇ ಯಾಕೋ ........ “ ಅನುಜ್ ಕಣ್ಣೀರು ಇನ್ನೂ ಜೋರಾಯಿತು...
ಅಕ್ಷತಾ ಸಹ ಕುಸಿದು ಕೂತಳು...
ಅನುಜ್ ಮುಂದುವರಿಸಿದ “ ಕೊರೋನಾ ಹಾವಳಿ ಅಲ್ಲೂ ಜಾಸ್ತಿಯಾದಾಗ ನಿಮ್ಮದೆಲ್ಲಾ ತುಂಬಾ ನೆನಪಾಯ್ತು ಅಕ್ಷತಾ.... ದೂರದೇಶದಲ್ಲೆಲ್ಲೋ ಪಾಪಿ ಪರದೇಶಿ ಯಾಗಿ ಸತ್ತು ಅನಾಥ ಶವವಾಗಿ ಮಣ್ಣಾಗಲು ಮನಸ್ಸಾಗಲೇ ಇಲ್ಲ.... ನನ್ನ ಜೊತೆಗೇ ಕೆಲಸ ಮಾಡುತ್ತಿದ್ದ ಸಹಪಾಠಿಯೊಬ್ಬ ಕೊರೋನಾ ದಿಂದ ಆಸ್ಪತ್ರೆ ಸೇರಿದ್ದ.... ತದನಂತರ ಆತನ ಬಗ್ಗೆ ಸುದ್ದಿಯೇ ಸಿಗಲಿಲ್ಲ... ಒತ್ತಾಯಪೂರ್ವಕವಾಗಿ ಕಂಪನಿಗೆ ಕೇಳಿದರೆ ವಿಪರೀತ ಜ್ವರ ಬಂದು ಸತ್ತು ಹೋದನಂತೆ ವೈದ್ಯಕೀಯ ವಿಧಿ ವಿಧಾನದಂತೆ ದಫನ್ ಮಾಡಿದರಂತೆ... ಯಾಕೋ ಈ ಸುದ್ದಿ ಕೇಳಿ ಅಲ್ಲಿ ಇರಲು ಮನಸ್ಸಾಗಲಿಲ್ಲ ಅಕ್ಷತಾ... ಕಣ್ಣು ಮುಚ್ಚಿದರೆ ನಿನ್ನ ಮತ್ತು ಜಾನ್ಹವಿ ಮುಖವೇ ಕಣ್ಣೆದುರು ಬರುತ್ತಿತ್ತು... “ ಕೆನ್ನೆ ಮೇಲಿಳಿಯುತ್ತಿದ್ದ ಕಣ್ಣೀರನ್ನೊಮ್ಮೆ ಒರೆಸಿಕೊಂಡು ಧೀರ್ಘ ಉಸಿರೆಳೆಯುತ್ತಾನೆ ಅನುಜ್....
ಕತ್ತೆತ್ತಿ ಮೇಲೆ ನೋಡುತ್ತಾ “ ನಿಮ್ಮನ್ನೆಲ್ಲಾ ಮತ್ತೆ ನೋಡುತ್ತೇನೆ ಎನ್ನುವ ಬರವಸೆಯೇ ಇರಲಿಲ್ಲ ಅಕ್ಷು.... ಪುಣ್ಯಕ್ಕೆ ಸಿಕ್ಕ ಫ್ಲೈಟ್ ಬುಕ್ ಮಾಡಿ ಬಂದೇ ಬಿಟ್ಟೆ.... ಉಳಿದ ಸಮಯದಲ್ಲೆಲ್ಲ ಬರುವಾಗ ಸರ್ ಪ್ರೈಜ್ ಅಂತ ಬರ್ತಿದ್ದೆ.... ಆದ್ರೆ ಈ ಸಾರಿ ಜೀವಕ್ಕೆ ಹೆದರಿ ಓಡಿ ಬಂದೆ....
ಏರ್ ಪೋರ್ಟಲ್ಲಿ ಟೆಂಪರೇಚರ್ ಇರದ ಕಾರಣ ಕ್ವಾರಂಟೈನ್ ಆಗಲಷ್ಟೇ ಹೇಳಿದರು.... “
ಜಾನ್ಹವಿ ಮಗ್ಗಲು ಬದಲಾಯಿಸುವ ಧ್ವನಿ ಕೇಳಿ ಅವಳ ಬಳಿ ಹೋಗುತ್ತಾಳೆ....
“ಈಗೆಲ್ಲಾ ಸರಿ ಆಯ್ತಲ್ವಾ ಮತ್ತೇನು ಸಮಸ್ಯೆ ಈಗ? ಸ್ವಲ್ಪ ದಿನ ದ ನಂತರ ಮತ್ತೆ ಮೊದಲಿಂತೆಯೇ ಆಗುತ್ತದೆ... ಗಾಬರಿ ಬೇಡ” ಎಂದಳು ಅಕ್ಷತಾ...
ಅನುಜ್ “ ಹೆದರಿಕೆ ಇರೋದು ಇಲ್ಲೇ ಅಕ್ಷತಾ.... ಸಾವಿರಾರು ಮೈಲು ದೂರದಲ್ಲಿದ್ದರೂ ವಿಡಿಯೋ ಕಾಲ್ ಮಾಡಿದಾಗ ಮಗಳು ಮಡದಿ ಪಕ್ಕದಲ್ಲೇ ಇದ್ದ ಅನುಭವ ಕೊಡುತ್ತಿತ್ತು... ಈಗ ನೋಡು ಒಂದೇ ಮನೆಯಲ್ಲದ್ದೂ ಗೊಡೆಯೊಂದರ ಆ ಕಡೆ ನೀವಿದ್ದರೂ ಸಾವಿರಾರು ಮೈಲು ದೂರವಿದ್ದ ಅನುಭವ... “” ಅನುಜ್ ಕಣ್ಣಲ್ಲಿ ಧಾರಾಕಾರ ನೀರು ಬರುತ್ತಿತ್ತು...
“ಅದಕ್ಕಿಂತ ದೊಡ್ಡ ಅಪರಾಧಿ ಪ್ರಜ್ಞೆ ಅಂದ್ರೆ ನನ್ನಿಂದಲೇ ನನ್ನ ಮಗಳಿಗೂ ಜ್ವರ ಬಂದಿದ್ದರೇ ಎನ್ನುವ ಭಾವ.... ಈ ಭಾವನೆಯೇ ನನ್ನ ಜೀವ ತಿನ್ನುತ್ತಿದೆ ಅಕ್ಷತಾ “” ಎನ್ನುತ್ತಾ ಮುಖ ಮುಚ್ಚಿಕೊಳ್ಳುತ್ತಾನೆ...
ಈಗ ಅಕ್ಷತಾ “ ರ್ರೀ... ಅದೇನ್ ನಿನ್ನೆಯಿಂದ ಅದನ್ನೇ ಹೇಳಿಕೊಂಡು ಅಳ್ತಾ ಇದೀರಾ.... ಏನೂ ಆಗಲ್ಲ ಅಂದ್ರೂ ಕೇಳಲ್ಲ ನೀವು.... ಬೇಡ ಬಿಡೀ ಈ ಕ್ವಾರಂಟೈನ್.... ಬಂದು ಬಿಡಿ ರೂಂ ಹೊರಗಡೆ... ಎಲ್ಲರೂ ಒಟ್ಟಿಗೇ ಇರೋಣ... ಏನಾದರೂ ಆದರೆ ಎಲ್ಲರಿಗೂ ಆಗಲಿ... ಬನ್ನಿ ಹೊರಗಡೆ “ ಎನ್ನುತ್ತಾ ಕೋಣೆಯ ಬಾಗಿಲಿನ ಕಡೆ ಹೋಗುತ್ತಾಳೆ....
ಅನುಜ್ ಛಂಗನೇ ಸೋಫಾದಿಂದ ಎದ್ದು ಬಾಗಿಲಿನ ಬಳಿ ಓಡುತ್ತಾನೆ...
ಬೋಲ್ಟ್ ಹಾಕಿಕೊಳ್ಳುತ್ತಾನೆ......
ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದು ಪುಟ್ಟ ಕುಟುಂಬದ ಅಳಲು ಮನ ಮಿಡಿಯುವಂತೆ ಚಿತ್ರಿತವಾಗಿದೆ.
ReplyDeleteಕುಟುಂಬದ ಏಳಿಗೆಗೆ ದೂರದಲ್ಲೆಲ್ಲೋ ದುಡಿಯುವ ಪತಿಯ ಪರಿಪಾಟಲು ಮತ್ತು ಧೈರ್ಯ ತುಂಬುವ ಮಡದಿ, ಇವೆರಡೇ ಪಾತ್ರಗಳ ಮೂಲಕ ತಾವು ಕಟ್ಟಿಕೊಟ್ಟ ಈಗಿನ ಧಾರುಣ ಸನ್ನಿವೇಶ ಮನ ಮ್ಲಾನವಾಗಿಸಿತು.
ಕರೋನಾ ಸಮಯದ ಸಂಕಟವನ್ನು ಚೆನ್ನಾಗಿ ಬಿಂಬಿಸಿದ್ದೀರಿ,ದಿನಕರ. ಉತ್ತಮ ಕಥೆ. ಅಂತ್ಯ ಸಮಾಧಾನಕರವಾಗಿದೆ.
ReplyDeleteNice story
ReplyDeleteತುಂಬ ಚೆನ್ನಾಗಿ ಬರೆದಿದ್ದೀರಿ. ಈ ಕೊರೋನಾ ಮಹಾಮಾರಿಯು ಸಮಾಜದ ಕೆಲವು ಮೌಲ್ಯಗಳ ಮೇಲೂ ಪ್ರಭಾವವನ್ನು ಬೀರಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿಯವರು ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಇತರೇ ದೇಶಗಳಿಗೆ ತುಲನೆ ಮಾಡಿದರೆ ಪರಿಸ್ಥಿತಿಯ ಭಯಾನಕತೆ ಕಮ್ಮಿಯೆಂದೇ ಹೇಳಬಹುದು, ಆದರೆ ನಾವು ಪ್ರಜೆಗಳು ಜಾಗರೂಕರಾಗಬೇಕು.ಇದು ಬಹು ಅವಶ್ಯಕ. ಮನೆಯಲ್ಲೇ ಇರಿ, ಸ್ವಸ್ಥವಾಗಿರಿ.
ReplyDeleteಅಪರೂಪಕ್ಕೊಮ್ಮೆ ಹಳೆಯ ದಿನಗಳು ನೆನಪಾದಾಗೆಲ್ಲ ಬ್ಲಾಗ್ ಲೋಕ ಸುತ್ತುವ ಚಾಳಿ ನನ್ನದು. ಇದೇ ಮೊದಲ ಬಾರಿ ನಿಮ್ಮ ಬ್ಲಾಗ್ನೊಳಗೆ ಕಣ್ಣಾಡಿಸಿದೆ. ನಿಮ್ಮ ಬರವಣಿಗೆ ಓದಿಸಿಕೊಂಡು ಹೋಗುತ್ತೆ.
ReplyDeleteಕನ್ನಡ ಎಲ್ಲಿ ಮರೆತು ಹೋಗುತ್ತೆ ಎಂಬ ಭಯದಲ್ಲಿ ಅಪರೂಪಕ್ಕೆ ಒಂದೆರಡು ಬರಗಳನ್ನು ನಾನು ಬರೆಯಲು ಪ್ರಯತ್ನಿಸುತ್ತೇನೆ.
ಬರಹ ಚೆನ್ನಾಗಿದೆ...ಮುಂದುವರೆಸಿ
ReplyDelete