Apr 14, 2014

ಬೇಲಿ ಮತ್ತು ದಣಪೆ..!!!

 ಪ್ರಕಾಶಣ್ಣ ಬರೆದ  http://ittigecement.blogspot.in/2014/04/blog-post.html          ಈ ಕಥೆಯನ್ನು ಮುಂದುವರಿಸುವ ಪ್ರಯತ್ನ ಇದು...

  ದೇಹ ಜಾರುತ್ತಿತ್ತು... ಮನಸ್ಸು ಬೇಡ, ಬೇಡ ಎನ್ನುತ್ತಿತ್ತು... ಇಷ್ಟು ವರ್ಷ ಜತನದಿಂದ ಮನಸ್ಸಿಗೆ, ಬುದ್ದಿಗೆ ಹಾಕಿದ್ದ ಬೇಲಿ ಎಗ್ಗಿಲ್ಲದೇ ಬಿರುಗಾಳಿಗೆ ಸಿಕ್ಕಿತ್ತು... ಇಷ್ಟು ವರ್ಷದಿಂದ ಒಳ್ಳೆಯ ಗೆಳೆಯನಾಗಿದ್ದವ ಈಗ ಇನಿಯನಾಗುವ ಪರಿಸ್ಥಿತಿ ಹೇಗೆ ಬಂತು..? ಉತ್ತರ ಇರಲಿಲ್ಲ... ಆತನ ಉಸಿರು ನನ್ನ ತುಟಿ ಸೋಕುತ್ತಿತ್ತು.. ನನ್ನ ತುಟಿ ಅದುರುತ್ತಿತ್ತು.. ಬಯಸದೇ ಬಂದ ಸುಖಕ್ಕಾಗಿ ದೇಹ ಕಾದಿತ್ತಾ..? ಆತನ ಮೈ ಬಿಸಿ ನನ್ನನ್ನು ಕರಗಿಸುತ್ತಾ ಇತ್ತು... ನಾನು ಸೋಲಲು ಸರ್ವಥಾ ತಯಾರಾಗಿದ್ದೆ..

   ಅಷ್ಟರಲ್ಲೇ ಹೆಜ್ಜೆ ಸದ್ದು... ಕಿವಿ ನೆಟ್ಟಗಾಯಿತು.. ಪರಿಚಿತ ಹೆಜ್ಜೆ ಸದ್ದಾಗಿತ್ತು ಅದು...ತಕ್ಷಣ ಎಚ್ಚೆತ್ತೆ... ಆತನಿಂದ ದೂರ ಸರಿದೆ... ಸೆರಗೆಲ್ಲಾ ಕೆಳಗೆ ಬಿದ್ದಿತ್ತು... ಸರಿ ಮಾಡಿಕೊಂಡೆ... ಆತ ತಲೆ ತಗ್ಗಿಸಿದ.. ಇಬ್ಬರಲ್ಲೂ ಪಾಪ ಪ್ರಜ್ನೆ ಇತ್ತು... ಹೆಜ್ಜೆ ಸದ್ದು ಯಾರದೆಂದು ಗೊತ್ತಾಗಿತ್ತು ನನಗೆ.. ಓಡಿ ಹೋಗಿ ಬಾಗಿಲು ತೆಗೆದೆ.. ಎದುರಿಗೆ ನನ್ನ ಗಂಡ ನಿಂತಿದ್ದರು.. ನನ್ನವರು ತುಂಬಾ ಒಳ್ಳೆಯವರು.. ನನ್ನ ಗೆಳೆಯನನ್ನು ನೋಡಿ ಇನ್ನೂ ಖುಶಿಯಾದರು.. " ಸರ್, ನಿಮ್ಮ ಸಹಕಾರ ಮನೋಭಾವ ನಮ್ಮಂಥ ಉದ್ಯಮಿಗಳಿಗೆ ಅವಶ್ಯಕ.. ಅದ್ರಲ್ಲೂ ನೀವು ನನ್ನಾಕೆಯ ಗೆಳೆಯನಾಗಿದ್ದುದು ನನ್ನ ಭಾಗ್ಯ” ಎಂದರು..

ನನಗೆ ಮುಜುಗರವಾಯಿತು..ಅಲ್ಲಿ ನಿಲ್ಲಲು ಮನಸ್ಸಾಗಲಿಲ್ಲ... " ನಾನು ಟೀ ಮಾಡಿಕೊಂಡು ಬರುತ್ತೇನೆ.." ಎನ್ನುತ್ತಾ ಒಳಗೆ ಹೋದೆ... ಬೇಗ ಬೇಗನೆ ಟಿ ಮಾಡಿಕೊಂಡು ಬಂದೆ.. ಟೀ ಕುಡಿದು ಗೆಳೆಯ ಬೇಗ ಹೋಗಲಿ ಎನ್ನುವುದಾ ನನ್ನ ಆಶಯ ..? ನನಗೇ ತಿಳಿದಿರಲಿಲ್ಲ.. ” ಟೀ ಎಂದರೆ ಇದು..ಅಮ್ರ‍ತ.. ದೇವತೆಗಳು ಮಾತ್ರ ಕುಡಿಯುವ ಟಿ ಇದು.. " ಎಂದ ಆತ ನನ್ನ ನೋಡುತ್ತಾ.. ನನಗೆ ನಾಚಿಕೆಯಾಯ್ತು... ಅಲ್ಲಿಂದ ಹೊರಟೆ.. ಒಳಗಡೆಗೆ... ನನ್ನವರು ಆತನಿಗೆ ಊಟ ಮಾಡಿಸಿಯೇ ಕಳಿಸುವ ಉದ್ದೇಶದಲ್ಲಿದ್ದರು... ನನಗೆ ಮನಸ್ಸಿರಲಿಲ್ಲ... ಇಷ್ಟೆಲ್ಲಾ ನಡೆದ ನಂತರ ಆತನನ್ನು ನನ್ನ ಗೆಳೆಯ ಎಂದು ಕರೆಯಲು ಮನಸ್ಸು ಒಪ್ಪುತ್ತಾ ಇರಲಿಲ್ಲ... ಆತನಿಗೂ ನನ್ನ ಮುಜುಗರ ಅರ್ಥವಾಗಿರಬೇಕು... ಊಟಕ್ಕೆ ಒಪ್ಪದೇ ಹೊರಟು ಹೋದ.. ನನಗೆ ಬೈ ಕೂಡ ಹೇಳದೆ... ನನಗೆ ಪಿಚ್ಚೆನಿಸಿತು...

ಗೆಳೆಯನ ಸನಿಹ ಕೂಡ ಬೇಕು.. ಆತ ದೂರವೂ ಇರಬೇಕು.. ನನ್ನ ಮನಸಿನ ಮರ್ಮ ನನಗೆ ಅರ್ಥವಾಗಲಿಲ್ಲ... ಒಮ್ಮೊಮ್ಮೆ ಹೀಗೆ ಮನಸಿನ ಮರಳುತನ ಅರ್ಥಕ್ಕೆ ಸಿಗೋದೆ ಇಲ್ಲ...
ನನ್ನವರು ನನ್ನ ಬಳಿ ಬಂದು ಸೊಂಟ ಬಳಸಿದರು... ಅವರ ಈ ಕಾರ್ಯಕ್ಕೆ ಯಾವಾಗಲೂ ಪುಳಕಿತಗೊಳ್ಳುವ ನನಗೆ ಈಗ ಮುಳ್ಳು ಚುಚ್ಚಿದ ಅನುಭವ.. ಮೆಲ್ಲಗೆ ಬಿಡಿಸಿಕೊಂಡೆ.... " ಯಾಕೆ..? ಏನಾಯ್ತು..? ಮೈ ಹುಶಾರಿಲ್ವಾ..? ಆವಾಗ್ಲಿಂದ ನೋಡ್ತಾ ಇದ್ದೇನೆ.. ಸಪ್ಪಗಿದ್ದೀಯಾ...ಏನಾಯ್ತು..? " ಎಂದರು ಗಾಬರಿಯಿಂದ.. ನನಗೆ ಏನಾದರೂ ಹೇಳಿ ನುಣುಚಿಕೊಳ್ಳುವ ಅವಸರ.. " ತಲೆ ನೋಯ್ತಾ ಇದೇರಿ..ಸ್ವಲ್ಪ ಹೊತ್ತು ಮಲಗುತ್ತೇನೆ " ಎಂದು ಹೇಳಿ ಅವರ ಉತ್ತರಕ್ಕೂ ಕಾಯದೇ ಬೆಡ್ ರೂಮಿಗೆ ಬಂದೆ...
ಮಲಗುವ ಮನಸ್ಸಿರದೇ ಇದ್ದರಿಂದ ಬಾತ್ ರೂಮಿಗೆ ಹೊಕ್ಕೆ... ಮೈ ತೊಳೆದುಕೊಂಡರೆ ಮನಸ್ಸು ಹಗುರಾಗಬಹುದು ಎನ್ನುವ ಆಶಯದಿಂದ.. ಶಾವರ್ ನಿಂದ ಬಂದ ತಂಪು ನೀರು ನನ್ನನ್ನು ಗತಕಾಲಕ್ಕೆ ಕೊಂಡೊಯ್ದಿತು...

  ಅದು ನಮ್ಮ ಕಾಲೇಜಿನ ಕೊನೆಯ ವರ್ಷ .. ಮಂಗಳೂರು, ಬೇಕಲ್ ಪೋರ್ಟ್ ಟೂರ್ ಇತ್ತು... ನಮ್ಮ ಸಂಖ್ಯೆ ತುಂಬಾ ಇದ್ದರಿಂದ ಎರಡು ಬಸ್ ಬೇಕಾಗಿತ್ತು... ಹುಡುಗ , ಹುಡುಗಿ ಎನ್ನುವ ಭೇದ ಇಲ್ಲದೆ, ಎಲ್ಲರೂ ಸೇರಿ ಕುಳಿತೆವು.. ನಾನು ನನ್ನ ಊರಿನ ಗೆಳತಿಯ ಜೊತೆ ಕುಳಿತರೆ, ನನ್ನ ಹಿಂದೆ ಇದೇ ಗೆಳೆಯ ಇನ್ನೊಂದು ಹುಡುಗಿಯ ಜೊತೆ ಕುಳಿತಿದ್ದ... ನನ್ನ ಮನಸ್ಸಲ್ಲೂ ಏನೂ ಭಾವವಿರಲಿಲ್ಲ.. ಆತನೂ ಸಹಜವಾಗಿಯೇ ಇದ್ದ.. ಅಂತಾಕ್ಷರಿ, ಡಾನ್ಸ್ ಎಲ್ಲಾ ಜೋರಾಗಿತ್ತು... ಅಂತಾಕ್ಷರಿ ತಂಡದಲ್ಲಿ ನಾವಿಬ್ಬರು ಒಂದು ತಂಡ.. ನಮ್ಮಿಬ್ಬರ ಸ್ನೇಹದ ಬಗ್ಗೆ ಎಲ್ಲರಿಗೂ ಗೌರವ ಇತ್ತು... ನನಗಿನ್ನೂ ನೆನಪಿದೆ.. ಅಂತಾಕ್ಷರಿ ಆಟದ ’ನ’ ಅಕ್ಷರಕ್ಕೆ ಆತ " ನಾನಿನ್ನ ಮರೆಯಲಾರೆ.. ” ಹಾಡಿದ್ದ.. ಆ ಪರಿಯ ಸ್ನೇಹದಲ್ಲೂ ನಾನು ನಾಚಿದ್ದೆ... " ಮೆಲ್ಲುಸಿರೆ ಸವಿಗಾನ” ಎನ್ನುತ್ತಾ ಮುಖ ಹತ್ತಿರಕ್ಕೆ ತಂದಿದ್ದ... ಮೈ ಜುಮ್ಮೆಂದರೂ, ಮನಸ್ಸು ತಿಳಿಯಾಗಿತ್ತು... ’ ಸ್ನೇಹ ಜಿಂದಾಬಾದ್, ಪ್ರೀತಿ ಜಿಂದಾಬಾದ್.. ನಾನೂ ಸ್ನೇಹಜೀವಿ, ನೀನೂ ಸ್ನೇಹಜೀವಿ’ ಹಾಡಿಗೆ ನಾನೂ ದನಿಗೂಡಿದ್ದೆ.. ನನ್ನ ದನಿಗೆ ಆತ ಕಣ್ಣಲ್ಲೇ ಮೆಚ್ಚುಗೆ ತೋರಿಸಿದ್ದ... ಹಾಡು, ಕೂಗು ಎಲ್ಲಾ ಮುಗಿದಾಗ ರಾತ್ರಿ ಎರಡು ಗಂಟೆ... ಸಿಕ್ಕ ಸಿಕ್ಕ ಸೀಟ್ ನಲ್ಲೇ ಒರಗಿದ್ದೆವು..

ಬೇಕಲ್ ಪೋರ್ಟ್ ತಲುಪಿದಾಗ ಬೆಳಿಗ್ಗೆ ಆರು ಗಂಟೆ...  ಕೋಟೆಯ ಮೇಲೆ ನಿಂತು ಬೆಳಗಿನ ಸೂರ್ಯನ ಆಗಮನ ನೋಡುವುದೇ ಚಂದ.. ಪಕ್ಕದಲ್ಲೇ ಇದ್ದ ಸಮುದ್ರದಲ್ಲಿ ಹೊಯ್ದಾಡಿದೆವು... ನೀರಾಟ, ಸಮುದ್ರದ ಮರಳಿನ ಹೊಡೆದಾಟ ಮುಗಿದಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ... ಹೊರಡುವ ಮುನ್ನ ಎಲ್ಲರೂ ಸೇರಿ ಗ್ರೂಪ್ ಫೋಟೊ ತೆಗೆದುಕೊಂಡೆವು... ಆತ ನನ್ನತ್ತ ಓಡಿ ಬಂದು ನನ್ನ ಪಕ್ಕದಲ್ಲೇ ನಿಂತಿದ್ದ... ಗ್ರೂಪ್ ಫೋಟೊ ಆದ ನಂತರ ನಮ್ಮಿಬ್ಬರದೇ ಬೇರೆ ತೆಗೆದುಕೊಂಡೆವು.. ಆಗ ಆತನ ಕೈ ನನ್ನ ಹೆಗಲ ಮೇಲೆ ಇತ್ತು.. ಆತನ ಕೈ ಬೆಚ್ಚಗಿತ್ತು... ನಾನು ಗಮನಿಸಿದರೂ ಕೇಳಲಿಲ್ಲ... ಹತ್ತಿರದಲ್ಲೇ ಇದ್ದ ಹೊಟೆಲ್ ನಲ್ಲಿ ಸ್ನಾನ ಮಾಡಿ ಮಂಗಳೂರಿಗೆ ಹೊರಟೆವು..  ಮಂಗಳಾದೇವಿ, ಕದ್ರಿ, ಕುದ್ರೋಳಿ ದೇವರ ದರ್ಶನ ಪಡೆದು ಪಣಂಬೂರು ಬೀಚ್ ಗೆ ಹೋದೆವು...

ಅಲ್ಲಿ ಕೆಲವು ಹುಡುಗರು ಬಿಯರ್ ಕದ್ದು ಮುಚ್ಚಿ ಕುಡಿಯಲು ಶುರು ಮಾಡಿದರು.. ಇದು ನಮಗೆ ತಿಳಿದು ಹುಡುಗಿಯರು ಒಂದು ಗುಂಪಾದೆವು.. ನನ್ನ ಗಮನ ಆತನ ಮೇಲಿತ್ತು, ಈತ ಕುಡಿಯುತ್ತಾನಾ ಎನ್ನುವ ಕುತೂಹಲಕ್ಕಾಗಿ ಅಷ್ಟೆ.. ಕತ್ತಲೆಯಾಗುತ್ತಾ ಬಂದಿತ್ತು.. ನಾವು ಹೊರಡಲು ರೆಡಿಯಾದೆವು..   ಹೇಗೂ ವಾಪಸ್ ಊರಿಗೇ ಹೋಗುವುದಾದ್ದರಿಂದ ಸ್ವಲ್ಪ ಹೊತ್ತು ಇಲ್ಲೇ ಕಳೆದು ಪ್ರಯಾಣ ಬೆಳೆಸಿದರಾಯಿತು ಎನ್ನುವುದು ನಮ್ಮ ಜೊತೆ ಬಂದಿದ್ದ ಅಧ್ಯಾಪಕರದ್ದು... ಹಾಗೆಯೇ ಊಟವನ್ನೂ ಅಲ್ಲೇ ಇದ್ದ ಢಾಬಾದಲ್ಲಿ ಮುಗಿಸಿದೆವು... ಊಟ ಮುಗಿಸಿದ ನಾನು   ಸ್ವಲ್ಪ ಹೊತ್ತು ಸಮುದ್ರದ ಕಡೆಗೆ ವಾಕ್ ಗೆ ಹೊರಟೆ, ಸ್ವಲ್ಪ ದೂರ ಹೋದ ನಂತರ ಆತ ಓಡುತ್ತಾ ನನ್ನ ಜೊತೆ ಬಂದ... " ಬೆಳದಿಂದಳ ರಾತ್ರಿಯಲ್ಲಿ ಇಷ್ಟು ಚಂದದ ಹುಡುಗಿಯರು ಸಮುದ್ರ ತಟದಲ್ಲಿ ವಿಹಾರ ಮಾಡಬಾರದಂತೆ " ಎಂದ ನಾಟಕೀಯವಾಗಿ.. ನಾನೂ " ಅಹುದೇ, ವಿಹರಿಸಿದರೆ ಏನಾಗತ್ತೆ  ಮಹಾಪ್ರಭು..? " ಕೇಳಿದೆ ನಗುತ್ತಲೇ.. ಆತ " ಇನ್ನೇನಿಲ್ಲ, ತಿಮಿಂಗಲ ಬಂದು ಕಚ್ಚೊಂಡು ಹೋಗತ್ತೆ ಅಷ್ಟೆ.. ಅವೌ.." ಅಂದ ಜಗ್ಗೇಶ್ ದನಿಯಲ್ಲಿ... ನಾನು ನಾಚಿದೆ.. ಆತ ಇನ್ನೂ ಹತ್ತಿರ ಬಂದ
" ಸುತ್ತಲೂ ಬೆಳದಿಂಗಳ ಬೆಳಕು, ಸಮುದ್ರದ ತೆರೆಗಳೂ ಉಕ್ಕೇರಿದೆ.. ಪೂರ್ಣಮೆಯ ಬೆಳದಿಂಗಳಿಗೆ ನಿನ್ನ ಸೌಂದರ್ಯ ಕರಗೋದಿಲ್ಲಾ ತಾನೆ..? ಅಂದ ಆತ ಕಣ್ಣಲ್ಲಿ ಪ್ರೀತಿ ತುಂಬಿಕೊಂಡು... "ಕರಗಿದ್ರೆ ನೀನು ಏನ್ಮಾಡ್ತೀಯಾ..?" ಎಂದೆ ನಾನು ನಿರ್ಭಾವುಕಳಾಗಿ...  " ಬೆಳದಿಂಗಳ ಬೆಳಕೇ ನಿನ್ನನ್ನು ಕರಗಿಸುವುದಾದರೆ ಇದೇ ಕೈಯಿಂದ ಚಂದಿರನನ್ನು ಮುಚ್ಚಿಡುತ್ತೇನೆ.." ಎಂದ ಆತನ ಮಾತಿಗೆ ನಾನು ಜೋರಾಗಿ ನಕ್ಕೆ...  ’ಬಾ , ಇಲ್ಲೇ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ..’ ಎಂದವನಿಗೆ  ಇಲ್ಲ ಎನ್ನದಾದೆ... ಸಮುದ್ರದ ಮರಳ ರಾಶಿಯಲ್ಲಿ ಕೈ ಯಾಡಿಸುತ್ತಾ ಆತನ ಮಾತಿಗೆ ತಲೆದೂಗುತ್ತಾ ಇದ್ದವಳಿಗೆ ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ... ದೂರದಲ್ಲಿ ಬಸ್ ಸ್ಟಾರ್ಟ್ ಆದ ಸದ್ದು ಕೇಳಿ ಎದ್ದು ಬಂದೆವು.. ನಾವು ಬರುವಷ್ಟರಲ್ಲಿ ಬಸ್ ಹೊರಟಾಗಿತ್ತು... ನಂತರ ಗೊತ್ತಾದ ವಿಷಯ ಏನೆಂದರೆ ಎರಡು ಬಸ್ ಇದ್ದ ಕಾರಣ, ಎರಡೂ ಬಸ್ ನವರು ಇನ್ನೊಂದು ಬಸ್ ನಲ್ಲಿ ಇರಬಹುದು ಎಂಬ ಊಹೆಯೊಂದಿಗೆ ನಮ್ಮನ್ನು ಬಿಟ್ಟು ಹೋಗಿದ್ದರು...  ಆ ತಂಪು ಗಾಳಿಯಲ್ಲೂ ಮೈ ಬೆವತು ಹೋಯಿತು...

ಏನೂ ತೋಚಲಿಲ್ಲ... ಆದರೂ ಈತ ಇದ್ದಾನಲ್ಲ ಎನ್ನುವ ಬರವಸೆ... ಆತ ತನ್ನ ಪರ್ಸ್ ನೋಡುತ್ತಿದ್ದ... ಸ್ವಲ್ಪ ಇತ್ತು ಹಣ.. ಕಣ್ಣಲ್ಲಿ ’ ನಾನಿದ್ದೇನೆ, ಹೆದರಬೇಡ ’ ಎನ್ನುವ ಭಾವಕ್ಕೆ ನಾನು ಸಮಾಧಾನದಿಂದಿದ್ದೆ.. ತಡರಾತ್ರಿಯಾದ್ದರಿಂದ ನಿದ್ರೆ ಬರುತ್ತಿತ್ತು.. ಇದ್ದ ಹಣದಲ್ಲಿ ಹೇಗಾದರೂ ಮಾಡಿ ಊರಿಗೆ ತಲುಪುವ ಬರವಸೆ ಇತ್ತು.. ಪಕ್ಕದಲ್ಲೇ ಇದ್ದ ಲಾಡ್ಜ್ ಗೆ ಹೋಗಿ ವಿಚಾರಿಸಿದರೆ ಒಂದೇ ರೂಮ್ ಇತ್ತು... ನನ್ನ ಮೇಲೆ ನನಗೆ ಬರವಸೆ ಇದ್ದ ಕಾರಣ ಜೊತೆಯಲ್ಲಿ ಇರಲು ಒಪ್ಪಿದೆ... ಗುಂಪಿನಲ್ಲಿ ಇದ್ದಾಗಿನ ತುಂಟ ಗೆಳೆಯ ಇಬ್ಬನೇ ಇದ್ದಾಗ ಮೌನಿಯಾಗಿ ಬಿಟ್ಟಿದ್ದ... ನನಗೆ ಬೆಡ್ ಮೇಲೆ ಮಲಗಲು ಹೇಳಿ ಆತ ಅಲ್ಲಿಯೇ ಇದ್ದ ಸೋಫ ಮೇಲೆ ಮಲಗಿದ.. ಆತನ ಕಡೆ ತಿರುಗಿ ಮಲಗಲು ಹೆದರುತ್ತಿತ್ತು ಮನಸ್ಸು.. ನಿಟ್ಟುಸಿರಳತೆಯ, ಕೈಯಳತೆಯ ದೂರದಲ್ಲಿ ಮಲಗಿದ್ದರೂ ನಮ್ಮ ನಮ್ಮ ಬೇಲಿ ನಮಗೆ ತಿಳಿದಿತ್ತು.. ಸ್ನೇಹಕ್ಕೆ ಒಂದು ಚೌಕಟ್ಟು ಇತ್ತು... ಒಂದೇ ರೂಮಿನಲ್ಲಿದ್ದರೂ ಮೈ ಮನಸ್ಸು ದೂರದಲ್ಲಿತ್ತು...

ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜಿ ಸ್ನಾನ ಮುಗಿಸಿದೆ... ಬೇರೆ ಬಟ್ಟೆ ಇರದ ಕಾರಣ ಅದೇ ಬಟ್ಟೆ ಧರಿಸಿದೆವು... ತಿಂಡಿ ತಿಂದು ಬಸ್ ನಲ್ಲಿ ಹೊರಟೆವು ಊರ ಕಡೆಗೆ.. ಅಕ್ಕಪಕ್ಕದಲ್ಲೇ ಕುಳಿತು ಸುಮಾರು ಹತ್ತು ತಾಸು ಪ್ರಯಾಣ ಬೆಳೆಸಿ ಊರು ಮುಟ್ಟಿದೆವು.. ಭುಜಕ್ಕೆ ಭುಜ ಒರಗಿಸಿಕೊಂಡು, ಆ ತಿರುವು ಮುರುವಿನ ದಾರಿಯ ತಿಕ್ಕಾಟದಲ್ಲೂ ಸಂಯಮದಿಂದ ಇದ್ದ ದೇಹ, ಮನಸ್ಸಿನ ಬಗ್ಗೆ ನನಗೆ ಹೆಮ್ಮೆ ಇತ್ತು... ಕಾಲೇಜ್ ಮುಗಿದು ನಮ್ಮ ಮದುವೆ ಆದರೂ ಆ ಚೌಕಟ್ಟಿಗೆ ಭಂಗ ಬಂದಿರಲಿಲ್ಲ.. ಬಾತ್ ರೂಮಿನ ಬಾಗಿಲು ಬಡಿದ ಹಾಗಾಗಿ ವಾಸ್ತವಕ್ಕೆ ಬಂದೆ.. ನನ್ನವರು ಕರೆಯುತ್ತಿದ್ದರು.. ನಾನು ಸ್ನಾನ ಮುಗಿಸಿ ಹೊರಬಂದೆ... ಬಟ್ಟೆ ಬದಲಿಸಿ ಬೆಡ್ ಮೇಲೆ ಒರಗಿದೆ..

ಈ  ಘಟನೆ ನಡೆದು ತುಂಬಾ ದಿನಗಳ ವರೆಗೆ ಆತನನ್ನು ನಾನು ಭೇಟಿಯಾಗಲಿಲ್ಲ.. ಫೊನ್ ಸಹ ಮಾಡಲಿಲ್ಲ..  ಆದರೆ ಮನ ಮಿಡಿಯುತ್ತಿತ್ತು.. ಹಾತೊರೆಯುತ್ತಿತ್ತು... ದೇಹ ಹದವಾಗಿತ್ತು... ನನ್ನವರ ಉದ್ಯಮಕ್ಕೆ ತುಂಬಾ ಸಹಾಯ ಮಾಡಿದ ಆತ ಎಂದೂ ಏನನ್ನೂ ಅಪೇಕ್ಷೆ ಪಟ್ಟಿರಲಿಲ್ಲ... ಸರಕಾರದ ಉನ್ನತ ಮಟ್ಟದಲ್ಲಿದ್ದ ಆತನ ಸಹಾಯಕ್ಕೆ ನನ್ನವರು ತುಂಬಾ ಚಿರರುಣಿಗಳಾಗಿದ್ದರು... ಹಾಗಿದ್ದ ಒಂದು ದಿನ, ನನ್ನವರ ಒಂದು ಪ್ರತಿಷ್ಟಿತ ಪ್ರಾಜೆಕ್ಟ್ ಗೆ ಆತನ ಅಂಕಿತ ಬೇಕಿತ್ತು... ಕಾನೂನು ರಿತ್ಯಾ ಎಲ್ಲಾ ಸರಿ ಇದ್ದ ಕಾರಣ ಆತನ ಸಹಿ ಬೀಳುವುದೂ ಸುಲಭವೂ ಆಗಿತ್ತು...

ಅವತ್ತು ಸಹಿ ಆಗಿ ಫೈಲ್ ತೆಗೆದುಕೊಂಡು ಬರಲು ಹೋದ ನನ್ನವರು, ಅರ್ಜಂಟ್ ಆಗಿ ಮುಂಬೈ ಗೆ ಹೋದರು.. ನನಗೆ ಫೈಲ್ ತೆಗೆದುಕೊಂಡು ಬರಲು ಹೇಳಿದ್ದರು... ಆತನ ಜೊತೆ ಮಾತನಾಡಿ ಸುಮಾರು ತಿಂಗಳುಗಳೇ ಕಳೆದಿದ್ದವು... ಎದೆ ಬಡಿತ ಜೋರಾಗಿತ್ತು.. ಮೊಬೈಲ್ ಸ್ಕ್ರೀನ್ ಮೇಲಿದ್ದ ಆತನ ಹೆಸರನ್ನು ಪ್ರೆಸ್ ಮಾಡುವಾಗ ಬೆರಳು ಅದುರಿತು.. " ಹಲೋ, ಏನಮ್ಮಾ... ಹ್ಯಾಗಿದೀಯಾ..?"ಅದೇ ದ್ವನಿ, ಅದೇ ತಂಪು.. ಮೈ ಜುಮ್ಮೆಂದಿತು.. ಸೆರಗು ಸರಿ ಮಾಡಿಕೊಂಡೆ... " ಅದೇ.. ನಮ್ಮವರು ಮುಂಬೈ ಗೆ ಹೋಗಿದ್ದಾರೆ.. ಫೈಲ್ ತೆಗೆದುಕೊಂಡು ಬರಲು ಹೇಳಿದ್ದಾರೆ... ಅದಕ್ಕೆ ಫೋನ್ ಮಾಡಿದೆ.." ಎಂದೆ ಸಾವಕಾಶವಾಗಿ.. " ಅರೆ.. ನೀನೇ ಬರ್ತೀಯಾ... ನಾನು ಆಗಲೇ ಆಫೀಸ್ ಬಿಟ್ಟಾಯ್ತು.. ಇವತ್ತೇ ಫೈಲ್ ಬೇಕು ಅನ್ನೋ ಹಾಗಿದ್ರೆ ಮನೆಗೆ ಬಂದು ಬಿಡು... ನಿನ್ನ ಕೈಯಿ ಟೀ ಕುಡಿದು ತುಂಬಾ ದಿನ ಆಯ್ತು .. ಮುಖ್ಯವಾಗಿ ನಿನ್ನ ನಾಚುವ ಮುಖ ನೋಡಿ. " ಅಂದ ಅದೇ ತುಂಟತನದಲಿ.. ಫೋನ್ ಗಟ್ಟಿಯಾಗಿ ಹಿಡಿದೆ... " ಅಬ್ಭಾ, ನಿಮ್ಮ ಮನೆಗೆ ಬಂದು ನಾನು ಟೀ ಮಾಡಬೇಕಾ..? ನಾನು ನಿಮ್ಮ ಮನೆಗೆ ಬರೋದು ಫೈಲ್ ಒಂದು ಕಾರಣವಾದರೆ, ಇನ್ನೊಂದು ಕಾರಣ ನಿನ್ನ ಮಗನ ಜೊತೆ ಆಟವಾಡಬೇಕು.. ಆತನ ಕಣ್ಣು ನಿನ್ನ ಹಾಗೇ ಇದೆ.. ಅದು ನನಗೆ ಇಷ್ಟ.." ಎಂದೆ.. " ಯಾಕೆ.. ನಾನು ಇಷ್ಟ ಇಲ್ವಾ..? " ಎಂದವನು ಹಾಗೇ ಮುಂದುವರಿದು" ಮನೆಯಾಕೆ ಮತ್ತು ಮಗ ಊರಿಗೆ ಹೋಗಿದ್ದಾರೆ.. ನಿಂಗೆ ತುಂಬಾ ಇಷ್ಟ ಅಂದ್ರೆ ನನ್ನ ಕಣ್ಣ ಜೊತೆ ಆಟ ಆಡಬಹುದು.. ಬೇಗ ಬಂದು ಬಿಡು " ಎಂದವನೇ ಫೋನ್ ಡಿಸ್ಕನೆಕ್ಟ್ ಮಾಡಿದ....

ಹುಚ್ಚುಕೋಡಿ ಮನಸು ಗರಿಗೆದರಿತ್ತು... ಒಮ್ಮೆ ಹದಗೊಂಡ ದೇಹ ಹುರಿಗೊಳ್ಳುತ್ತಿತ್ತು... ಎದ್ದು ಬೀರುವಿನಲ್ಲಿದ್ದ ಸೀರೆ ಹುಡುಕಿದೆ... ಕೈಗೆ ಅನಾಯಾಸವಾಗಿ ಆತನಿಗಿಷ್ಟವಾದ ಆಕಾಶನೀಲಿ ಬಣ್ಣದ ಸೀರೆ ಸಿಕ್ಕಿತು... ನೆರಿಗೆ ಹಾಕುವಾಗ ಹೊಕ್ಕಳು ತಾಗಿ ನನ್ನ ಮೈಯಿ ಜುಮ್ಮೆಂದಿತು... ಯಾವಾಗಲೂ ಬಳಸದ ತುಟಿ ಲಿಪ್ಸ್ಟಿಕ್ ಬೇಡುತ್ತಿತ್ತು.... ರೆಡಿಯಾಗಿ ಒಮ್ಮೆ ಕನ್ನಡಿ ಕಡೆ ನೋಡಿದೆ... ನನ್ನ ನೋಡಿ ನಾನೇ ನಾಚಿದೆ... ಇದೇ ನಾಚಿಕೆ ಆತನಿಗೆ ಇಷ್ಟವಲ್ಲವಾ..?

ಹೌದು ಎನಿಸಿ...ಇನ್ನಷ್ಟು ನಾಚಿದೆ...

20 comments:

  1. ನಾನು ಕಥೆ ಬರೆಯುವಾಗ ಇದು ಮತ್ತೆ ಮುಂದುವರೆಯಬಹುದೆನ್ನುವ ಕಲ್ಪನೆ ಕೂಡ ಇರಲಿಲ್ಲ..

    ಒಂದು ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಿದ್ದೀರಿ ದಿನಕರ್ ಜೀ...

    ಕಥಾ ಭಾಗ..
    ಕಥೆಯ ಪಾತ್ರಗಳು..
    ಪಾತ್ರಗಳ ಗುಣಧರ್ಮಗಳು ಹಾಗೆ ಇವೆ... ಮುಂದಿನ ಭಾಗ ಯಾರು ಬರೆಯ ಬಹುದು ?

    ನಿಜಕ್ಕೂ ನಮ್ಮ ಬ್ಲಾಗಿಗರ ಕಲ್ಪನೆ..
    ಕ್ರಿಯೇಟಿವಿಟಿಗೆ ಪ್ರೀತಿಯ ಸಲಾಮ್ !

    ದಿನಕರ ಜೀ ಪ್ರೀತಿಯ ಮುದ್ದುಗಳು..
    ಬೆನ್ನಿಗೆ
    ಶಭಾಶ್ ಗುದ್ದುಗಳು...

    ReplyDelete
  2. ಸರ್.... ಭಾವನೆಗಳನ್ನು ತುಂಬಾ ಚೆನ್ನಾಗಿ ಹಿಡಿದಿದ್ದೀರ... ಆದರೂ ಸಂಯಮ ಎಲ್ಲೆ ಮೀರುತ್ತದೆಯ ತಿಳಿಯುವುದರೊಳಗೆ ಕಥೆ ನಿಂತಂತೆ ಭಾಸವಾಯ್ತು...! ಮುಂದ್ವರ್ಸಿ ದಯವಿಟ್ಟು.....

    ReplyDelete
  3. ನನಗಂತು ಸಖತ್ ಖುಷಿಯಾಗಿದೆ. ಈ ನೆಪದಲಾದರೂ ನಮ್ಮ ಪುರಾತನ ಬ್ಲಾಗರುಗಳು ಮತ್ತೆ active ಆಗುತ್ತಾರಲ್ಲಂತ! :)

    ಪ್ರಕಾಶಣ್ಣ ಎಬ್ಬಿಸಿದ ಬೇಲಿ, ಮೊಗೇರ ಸಾಹೇಬರ ದಯೆಯಿಂದ ದಣಪೆಯವರೆಗೂ ಮುಂದುವರೆದಿದೆ...

    ಈ ಭಾಗದಲ್ಲಿಯ ಮೊದಲ highlight ಆ ನವಿರು.

    ಸಾದೃಶ್ಯತೆಯೂ ಇಂಚಿಂಚಲ್ಲೂ ಮೈದಳೆದಿದೆ. ಅದು ಬೇಕಲ್ ಪ್ರವಾಸದ ಅಡಿಗಡಿಗೂ ನಿರೂಪಿತವಾಗಿದೆ.

    ರೋಚಕತೆ ಮತ್ತು ಯವ್ವನದ ಬಿಸುಪು, ಎಲ್ಲರನ್ನೂ ಗತಕ್ಕೆ ಖಂಡಿತ ಜಾರಿಸುವಂತಿದೆ.

    ಇಲ್ಲೂ ಸಭ್ಯತೆಯು ಹದ ಮೀರಿಲ್ಲ. ಅದೇ ಇಬ್ಬರು ಕಥೆಗಾರರ ನಿಜ ಜೀವನ. ಸರಸದ ಯಾವುದೇ ಹಂತದಲ್ಲೂ ಬೇಲಿಯನ್ನು ಮುರಿಯದಿರುವುದು ನಿಮ್ಮಿಬ್ಬರ ಗಿರಿಮೆ.

    ಮುಂದುವರೆಯಲಿ...


    ReplyDelete
  4. ದಿನಕರ್ ಜಿ ಪ್ರಕಾಶಣ್ಣನ ಕಥೆಯನ್ನು ಒಂದು ಸುಂದರ ಚೌಕಟ್ಟಿನೊಳಗೆ ಮುಂದುವರೆಸಿದ್ದೀರ, ಪ್ರತೀ ಹಂತದಲ್ಲೂ ಕಥೆಯು ಕುತೂಹಲ ಕೆರಳಿಸುತ್ತಾ ಸಾಗಿದೆ. ಮುಂದಿನ ಕಥೆಯನ್ನು ನಾನು ಮುಂದುವರೆಸುವ ಪ್ರಯತ್ನ ಮಾಡುತ್ತೇನೆ , ಕಥೆ ಹೆಣೆಯುವ ಕಾರ್ಯ ಸಾಗಿದೆ. ನಿಮ್ಮ ಕಥೆಯನ್ನು ಗೆಳೆಯರು ಮೊದಲು ಓದಲಿ ನಂತರ ಸ್ವಲ್ಪ ಸಮಯ ಕಳೆದು ನನ್ನ ಮುಂದುವರೆದ ಕಥೆ ಬರುತ್ತದೆ. ಕೊ ಕ್ಕೋ ಆಟ ಮುಂದುವರೆಸೋಣ , ಒಳ್ಳೆಯ ತಿರುವು ಕೊಟ್ಟ ನಿಮಗೆ ಧನ್ಯವಾದಗಳು , ಪ್ರಕಾಶಣ್ಣನ ಪ್ರೀತಿಯ ಗುದ್ದಿನ ಜೊತೆಗೆ ನನ್ನದೆರಡು ಗುದ್ದು

    ReplyDelete
  5. ಪ್ರಕಾಶಣ್ಣ,
    ತುಂಬಾ ದಿನ ಆಗಿತ್ತು ಏನಾದರು ಬರೆದು.... ಪುಸ್ತಕ ಬಿಡುಗಡೆ ಆದ ನಂತರದ ಎರಡನೇ ಕಥೆ ಇದು.. ಕಥೆ ಬರೆಸಿದ್ದಕ್ಕೆ ತುಂಬಾ ಧನ್ಯವಾದ... ನಿಮ್ಮ ಕಥೆಯನ್ನು ಮುಂದುವರಿಸುವುದು ಸವಾಲಿನ ಕೆಲಸ ಯಾಕೆಂದರೆ ನಿಮ್ಮ ಪಾತ್ರ ನಿರೂಪಣೆಯನ್ನು ಮುಂದುವರಿಸುವುದು ಕಷ್ಟದ ಕೆಲಸ.. ನನ್ನ ಕೈಲಾದ ಪ್ರಯತ್ನ ಇದು... ಮೆಚ್ಚಿದ್ದಕ್ಕೆ ತುಂಬಾ ತುಂಬಾ ಧನ್ಯವಾದ...

    ReplyDelete
  6. ದೇವರು ಹೊಸೆದ ಪ್ರೇಮದ ದಾರ.. ದಾರದೆ ಬೆಸೆದ ಋತುಗಳ ಹಾರ.. ಎನ್ನುವ ಹಾಗೆ ಒಂದು ಎಳೆಯ ಕಥೆ ಅದನ್ನ ಇನ್ನೊಬ್ಬರು ಹಿಡಿದುಕೊಂಡು ಇನ್ನೊಂದು ಬದಿ ಹೊಸೆಯುತ್ತಾ ಹೋಗುವುದು.. ಫಲಿತಾಂಶ ಯಾವುದಕ್ಕೂ ಜಗ್ಗದ ಒಂದು ಹಗ್ಗ ತಯಾರಾಗುತ್ತದೆ.. ದಿನಕರ್ ಸರ್ ನೀವು ಗೆದ್ದಿದ್ದೀರಾ..

    ಅಂತ್ಯ ಎನ್ನುವ ಆರಂಭದ ಬಗ್ಗೆ ಓಡುತ್ತಲೇ.. ಅದರ ಇನ್ನೊಂದು ಮಗ್ಗುಲಿಗೆ ತಿರುಗಿದಾಗ ಅರೆ ಅರೆ.. ಎನ್ನುವಂತಾಯಿತು.. ಆ ನವಿರಾದ ಮನಸ್ಸಿಗೆ ಹುಚ್ಚು ಹಿಡಿಸುವ ಆ ಪರಿ ಸೂಪರ್.. ನೀವು ಕೊಡುವ ಕಥೆಯ ತಿರುವುದು ಘಟ್ಟಗಳ ತಿರುವುಗಳ ಹಾಗೆ.. ಒಮ್ಮೊಮ್ಮೆ ಇಳಿಜಾರು ಎನ್ನುವ ಕಡೆ ಮತ್ತೆ ಏರು ದಾರಿ,,.. ಏರು ದಾರಿ ಇರಬಹುದು ಎನ್ನುವ ಕಡೆ ಇಳಿಯುವ "ಜಾರು"..

    ಸೂಪರ್ ದಿನಕರ್ ಸರ್.. ಮನಸ್ಸು ಒಂದು ರಬ್ಬರ್ ಚಂಡಿನಂತೆ.. ರಭಸವಾಗಿ ಹೊಡೆದಷ್ಟು ಪುಟ ಏಳುವ ತಾಕತ್ ಹೆಚ್ಚು.. ಈ ನೀತಿಯನ್ನು ಸುಂದರವಾಗಿ ಚಿತ್ರಿಸಿದ್ದೀರ.. ನಾಯಕಿ ಆಸೆಯನ್ನು ತಡೆ ಹಿಡಿದಷ್ಟು.. ಅದು ಪುಟಿದು ಏಳುತ್ತಿದೆ..

    ಸೂಪರ್ ತಿರಿವಿನಲ್ಲಿ ನಿಲ್ಲಿಸಿದ್ದೀರಿ.. ಹಾಟ್ಸ್ ಆಫ್ ದಿನಕರ್ ಸರ್

    ReplyDelete
  7. ho! alli shuru maadi, illige bandu ninthide! kathey eNeda reethi chennaagide dinakar :)

    ReplyDelete
  8. ದಿನಕರ್ ; ಪ್ರಕಾಶಣ್ಣ ನವಿರಾಗಿ ಹೆಣೆದ ಕಥೆಯನ್ನು ನೀವೂ ಕೂಡ ಹಾಗೇ ಮುಂದುವರೆಸಿಕೊಂಡು ಹೋಗಿದ್ದೀರ.ಸುತ್ತಿ,ಬಳಸಿ ಕಥೆ ಮತ್ತೆ ಅದೇ ಕುತೂಹಲ ಕೆರಳಿಸುವ ಘಟ್ಟಕ್ಕೆ ಬಂದು ನಿಂತಿರುವುದು ಸೋಜಿಗ!!!! ಅದರಲ್ಲಿ ನಿಮ್ಮ ಜಾಣ್ಮೆ ಯೂ ಸೇರಿಕೊಂಡಿದೆ!!! SO WE ARE BACK TO SQUARE ONE!!! ಈಗ ನಮ್ಮ ಬಾಲಣ್ಣ ಕಥೆಯನ್ನು ಹೇಗೆ ಮುಂದುವರಿಸುತ್ತಾರೆ ಎನ್ನುವ ಕುತೂಹಲ.ಆಲ್ ದಿ ಬೆಸ್ಟ್ ಬಾಲಣ್ಣ .

    ReplyDelete
  9. ಪ್ರಕಾಶರ ಕತೆಯನ್ನು ನೀವು ಮುಂದುವರೆಸಿದ ರೀತಿ ತುಂಬ ಸ್ವಾರಸ್ಯಕರವಾಗಿದೆ. ಕುತೂಹಲವನ್ನು ಕೆರಳಿಸುವ ಕತೆ ಓದುಗನಿಗೆ ಕಚಗುಳಿ ಇಡುತ್ತದೆ. ಅಭಿನಂದನೆಗಳು.

    ReplyDelete
  10. dinakaranna dhanyavdagalu chandada kathe....ee katheyalli neevu mangaluranna balasiddu ista aytuu ekendre namma parisaradalli namage baravanige hechchu avakasha ide annodu nanna bhavane..:)..endinante koneyallondu oohisada tiruvu...
    gottilla...noduva kanninante badukina banna!

    ReplyDelete
  11. ರುಚಿ ಗೊತ್ತಿಲ್ಲದಿರುವಾಗ ಇರುವ ಭಾವನೆಗೂ, ದೇಹ ಅನುಭವಗಳಿಗೆ ಪಕ್ಕಾದ ಮೇಲೆ ನಡೆಯುವ ಬದಲಾವಣೆಗೂ ವ್ಯತ್ಯಾಸ ಇದೇ ಅಲ್ಲವೇ?

    ReplyDelete
  12. then,

    http://bhashegonibeedu.blogspot.in/2014/04/blog-post.html

    ಅವನ ಮನೆ ಸೇರುವಷ್ಟರಲ್ಲಿ ನಾನು ಬೆವತು ಹಣ್ಣು. ಅಲ್ಲಿ ಏನೇನು ಆಗಬಹುದು ಊಹಿಸಿಯ ಮನಸ್ಸುಹಕ್ಕಿ ಹಾಗೆ ಹಾರಡಿತ್ತು. ನನ್ನ ನಾಚಿಕೆ, ಅವನ ಹೊಗಳಿಕೆ, ಅಯ್ಯಯ್ಯೊ... ಅಬ್ಬಬ್ಬಾ...

    ನನಗಾಗಿಯೇ ಕಾದಿದ್ದ ಅವನು...

    ಮೊದಲು ಟೀ ನಂತರ ಫೈಲ್ ಕೆಲಸ ಎಂದ...

    ಹಾರುತ್ತಿದ್ದ ನನ್ನ ಎದೆಯನ್ನು ಹಿಡಿದು ಅಡಿಗೆ ಮನೆಗೆ ನಡೆದೆ...

    ಗ್ಯಾಸ್ ಹಚ್ಚಲು ಲೈಟರ್ ತೆಗೆದೆ...

    ಗ್ಯಾಸ್ ಆನ್ ಮಾದಿದೆ... ಅಷ್ಟರಲ್ಲಿ ಅವನು ಅಡುಗೆ ಮನೆ ಬಾಗಿಲಿಗೆ ಬಂದ...

    ಅವನ ತುಂಟ ನಗು ನೋಡುತ್ತಾ ನಿಂತೆ ನಾನು... ಮಾತಿಗೆಳೆದ ಅವನು...

    ಗ್ಯಾಸ್, ಸದ್ದೇ ಇಲ್ಲದೆ, ವಾಸನೆಯೂ ಇಲ್ಲದೆ ಅಡುಗೆ ಮನೆಯ ಗಾಳಿಯನ್ನು ಆವರಿಸಿಕೊಳ್ಳುತ್ತಿತ್ತು... ಅದರ ಅರಿವು ಇಬ್ಬರಿಗೂ ಇರಲಿಲ್ಲ

    ಫೋನ್ ರಿಂಗ್ ಆದದ್ದು ಕೇಳಿ, ಅವ, ಟೀ ಮಾಡು, ಅಲ್ಲೇ ಬಾ, ಮಾತಾಡೋಣ ಎಂದು ಹೇಳಿ ಹಾಲ್ ಗೆ ನಡೆದ...

    ಫೋನ್ ನಲ್ಲಿ ಅವನು ಹಾಯ್ ಎಂದು ನನ್ನ ಪತಿಯ ಹೆಸರು ಹೇಳಿದಾಗ ಕನಸಿನ ಲೋಕದಲ್ಲಿದ್ದ ನಾನು ವಾಸ್ತವಕ್ಕೆ ಬಂದಿದ್ದೆ...

    ReplyDelete
  13. ಕಥೆ ಫ್ಲಾಶ್ ಬ್ಯಾಕ್ ಗೆ ಮರಳಿ ಹೊಗುವುದರಿಂದ ಅಲ್ಲೇ ನಿಂತು ಬಿಡುತ್ತೇನೋ ಅನ್ನುವ ಭೀತಿಯನ್ನು ಹೋಗಲಾಡಿಸಿ, ಕಥೆಯ ಮುಂದುವರಿಕೆಗೆ ಅನುವು ಮಾಡಿ ಕೊಟ್ಟಿದ್ದಿರಿ..

    ಉತ್ತಮ ನಿರೂಪಣೆ..

    ReplyDelete
  14. ಕಥೆ ಫ್ಲಾಶ್ ಬ್ಯಾಕ್ ಗೆ ಮರಳಿ ಹೊಗುವುದರಿಂದ ಅಲ್ಲೇ ನಿಂತು ಬಿಡುತ್ತೇನೋ ಅನ್ನುವ ಭೀತಿಯನ್ನು ಹೋಗಲಾಡಿಸಿ, ಕಥೆಯ ಮುಂದುವರಿಕೆಗೆ ಅನುವು ಮಾಡಿ ಕೊಟ್ಟಿದ್ದಿರಿ..

    ಉತ್ತಮ ನಿರೂಪಣೆ..

    ReplyDelete
  15. ದಿನಕರಣ್ಣ
    ಮತ್ತೆ ಕತೆಯ ದಾರವಾಹಿ ಶುರು ಆಗಿದ್ದು ನೋಡಿ ತುಂಬಾ ಸಂತೋಷವಾಯ್ತು. ಪ್ರಕಾಶಣ್ಣನ ಉತ್ತಮವಾದ ಕತೆಯನ್ನು ಅಷ್ಟೇ ಉತ್ತಮವಾಗಿ ಮುಂದುವರೆಸಿದ್ದೀರಾ. ಕತೆಯ ಕುತೂಹಲಕ್ಕೆ ಎಲ್ಲೂ ಭಂಗವಾಗದಂತೆ ಮುಂದೇನು ಎಂದು ಯೋಚಿಸುವಂತಾಯ್ತು.

    ReplyDelete
  16. ವಾಹ್.. ಕಥೆ ಮುಂದುವರಿಸಿರುವ ಪರಿ ಸೂಪರ್.... ಎಲ್ಲಾ ಬ್ಲಾಗ್ ಗಳು ಬಣ್ಣವಾಗಿವೆ ಈಗ ಕಥಾ ಸರಣಿಯಿಂದ

    ReplyDelete
  17. Super story continuation.. like the first part... second one was interesting too.. liked it :)

    ReplyDelete
  18. ಖೋ ಖೋ ಆಟದಲ್ಲಿ ಭಾಗವಹಿಸುವ ಹಂಬಲ ನನಗೂ ಆಯಿತು. ಬಂದ ಕೆಲಸಗಳನ್ನೆಲ್ಲ ಬದಿಗೊತ್ತಿ ಈ ಕಥೆಯನ್ನು ಮುಂದುವರೆಸಿರುವೆ. ಮೂಲ ಹಾಗು ಮುಂದುವರೆಸಿದ ಲೇಖಕರಂತೆ ನಾನೂ ಕೂಡ ಕಥೆಯಲ್ಲಿ ಎಲ್ಲೂ ಎಲ್ಲೆ ಮೀರಿ ಹೋಗದಂತೆ ನೋಡಿಕೊಂಡಿದ್ದೇನೆ. ಕಥೆಯ ಈ ಎಂಟನೇ ಭಾಗವನ್ನು ನೀವು ಓದುವಿರೆಂದು ನಂಬಿದ್ದೇನೆ. http://sudhieblog.blogspot.in/2014/05/blog-post.html

    ReplyDelete
  19. ತುಂಬಾ ಚೆನ್ನಾಗಿ ಇದೆ ಸರ್...ನಿಮ್ಮಸಾಹಿತ್ಯ ಇಷ್ಟ ಆಯ್ತು..

    ReplyDelete