Sep 17, 2012

ಪ್ಲೀಸ್..... ಬೇಡ........!!!ಆಫೀಸಿನ ಕಿರಿಕಿರಿಯಿಂದ ಮನೆಗೆ ಬಂದರೂ ಮನೆಯವಳ ಕಿರುಕುಳ ತಪ್ಪಲಿಲ್ಲ.... ವಿಷಯ ಚಿಕ್ಕದೇ ಆಗಿದ್ದರೂ ಅವಳ ಹಠದಿಂದಾಗಿ ನನಗೆ ಸಿಟ್ಟು ಬಂದಿತ್ತು....  ಈ ಸಾರಿ ಊರಿಗೆ ಹೋಗೋದು ಬೇಡ, ಮುಂದಿನ ಸಾರಿ ಹೋಗೋಣ ಎಂದರೂ ಕೇಳಿರಲಿಲ್ಲ ಅವಳು....  ಮನೆಯಲ್ಲಿ ಕುಳಿತಿರಲು ಮನಸ್ಸಾಗದೇ ಹೊರಗೆ ಬಂದೆ....  ಬೈಕ್ ಕೀ ಜೇಬಿನಲ್ಲೇ ಇತ್ತು....  ಬೈಕ್ ನ ಕಣ್ಣಿಗೆ ಚುಚ್ಚಿದೆ....  ಸಿಟ್ಟಿನಿಂದಲೇ ಕಿಕ್ ಹೊಡೆದೆ....  ಬೈಕ್ ತಿರುಗಿಸುತ್ತಿರುವಾಗಲೇ ನನ್ನವಳು ಹೊರಕ್ಕೆ ಓಡಿ ಬಂದಳು....  ಯಾಕೋ, ಅವಳನ್ನು ನೋಡಲೂ ಮನಸಾಗಲಿಲ್ಲ....  ಆಕ್ಸಿಲೇಟರ್ ಹೆಚ್ಚಿಸಿದೆ....  ಏನೂ ಕೆಲಸವಿರದೇ ಇದ್ದರೂ, ಸುಮ್ಮನೆ ಒಂದು ಡ್ರೈವ್ ಗೆ ಹೋಗಿ ಬರೋಣ ಎನಿಸಿತ್ತು....  ಮನೆಯಲ್ಲೇ ಇದ್ದರೆ ಜಗಳವಾಗಬಹುದು ಎಂಬ ಭಯವಿತ್ತು....  ಅದಕ್ಕೆ ಹೊರಬಿದ್ದಿದ್ದೆ....  ಹೊರಗೇನೋ ಬಂದಿದ್ದೆ....  ಎಲ್ಲಿಗೆ ಹೋಗೋದು ಅಂತ ಗೊತ್ತಿರಲಿಲ್ಲ....  ಸಿಟಿ ಕಡೆ ಹೋಗಲು ಮನಸ್ಸಿರಲಿಲ್ಲ, ಹೋದರೆ ಯಾರಾದರೂ ಪರಿಚಯದವರು ಸಿಕ್ಕಾರು ಎನ್ನುವ ಅನುಮಾನ ಇತ್ತು....  ಇನ್ನೊಂದು ದಾರಿ ಹಿಡಿದೆ....... 
  
      ಒಂದು ಅರ್ಧ ತಾಸು ಡ್ರೈವ್ ಮಾಡಿ ಬರೋಣ ಎಂದು ಹೊರಟಿದ್ದೆ.... ಸಿಟ್ಟು, ಬೇಸರದ ಭರದಲ್ಲಿ ಎಷ್ಟು ದೂರ ಹೋಗಿದ್ದನೋ ತಿಳಿದಿರಲಿಲ್ಲ.... ಊರಿನ ಸ್ಮಶಾನವನ್ನೂ ದಾಟಿ ಬಂದಿದ್ದೆ.... ಒಂದು ಗದ್ದೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದೆ.... ಸಾವಕಾಶವಾಗಿ ಒಂದು ಸಿಗರೇಟ್ ಎಳೆದೆ.... ದಮ್ ಬಿಡ್ತಾ ಬಿಡ್ತಾ ಮನಸ್ಸು ಸ್ತಿಮಿತಕ್ಕೆ ಬರ್ತಾ ಇತ್ತು.... ಇನ್ನೊಂದು ಸಿಗರೇಟಿಗೆ ಬೆಂಕಿ ಇಟ್ಟು ಬೈಕ್ ಸ್ಟಾರ್ಟ್ ಮಾಡಿದೆ.... ಮನೆ ಕಡೆ ತಿರುಗಿಸಿದೆ.... ಆಗಲೇ ಕತ್ತಲಾಗುತ್ತಿತ್ತು.... ಈ ತಲೆಬಿಸಿಯಲ್ಲಿ ಒಂದು ವಿಶ್ಯ ಮರೆತೇ ಬಿಟ್ಟಿದ್ದೆ.... ನನಗೆ ಸ್ಮಶಾನ ಎಂದರೆ ತುಂಬಾ ಭಯ.... ಈಗ ಸ್ಮಶಾನವನ್ನೂ ದಾಟಿ ಬಂದಿದ್ದೆ.....  ಮೊದಲೇ ಹೆದರಿಕೆ....   ಈಗ ಏನು ಮಾಡುವುದೆಂದು ತಿಳಿಯಲಿಲ್ಲ....   ದೆವ್ವ, ಭೂತಗಳನ್ನು ನೋಡದೇ ಇದ್ದರೂ ಅದರ ಬಗ್ಗೆ ಕೇಳಿಯೇ ಭಯ ಇತ್ತು....   ನೋಡು ನೋಡುತ್ತಲೇ ಸ್ಮಶಾನ ಬಂದೇ ಬಿಟ್ಟಿತ್ತು....  ಸ್ವಲ್ಪ ಹೊತ್ತು ನಿಲ್ಲಿಸಿದೆ, ಯಾರಾದರೂ ಸಿಕ್ಕರೆ ಹತ್ತಿಸಿಕೊಂಡು ಹೋಗೋಣ ಎನಿಸಿತ್ತು....  ಅವರಿಗೆ ಪಿಕ್ ಅಪ್ ಕೊಟ್ಟು ಉಪಕಾರ ಮಾಡುವ ಯೋಚನೆ ಇಲ್ಲದಿದ್ದರೂ, ಯಾರಾದರೂ ಸಂಗಡ ಇದ್ದರೆ ನನ್ನ ಹೆದರಿಕೆ ಕಡಿಮೆ ಆಗುತ್ತದಲ್ಲಾ ಎನ್ನುವ ದೂರುದ್ದೇಶ ನನ್ನದಾಗಿತ್ತು.... 

ಸುಮಾರು ಹೊತ್ತು ಕಾದೆ.... ಯಾರೂ ಬರುವ ಲಕ್ಷಣ ಕಾಣಲಿಲ್ಲ....  ಇದೆಲ್ಲಾ ಬೇಕಿತ್ತಾ.? ಹೆಂಡತಿಯ ಮೇಲಿನ ಸಿಟ್ಟು ಇದನ್ನೆಲ್ಲಾ ಮಾಡಿಸಿತು....  ಹೆಂಡತಿಯ ಮುಖ ನೆನಪಿಗೆ ಬಂತು....  ಇನ್ನೂ ಸಿಟ್ಟು ಬಂತು....  ಅದಿರಲಿ, ಈ ಸಂಕಟದಿಂದ ಪಾರಾಗುವುದು ಹೇಗೆಂದು ತಿಳಿಯಲಿಲ್ಲ....  ದೇವರ ಹಾಡು ಹಾಡುತ್ತಾ ಹೋದರಾಯಿತು ಎಂದುಕೊಂಡು ಹೊರಟೆ.... ದೇವರ ಹಾಡುಗಳನ್ನ ನೆನಪು ಮಾಡಿಕೊಂಡೆ....  " ಫೂಜ್ಯಾಯ ರಾಘವೇಂದ್ರಾಯ, ............" ಅರ್ಧ ಬರುತ್ತದೆ. " ದೇವರೆ ನೀನು ನಿಜವಪ್ಪ........" ಸುಮಾರಾಗಿ ಬರುತ್ತಿತ್ತು.... ಮೊದಲಿಗೆ ಗಣಪತಿಯ ಹಾಡಿನಿಂದಲೇ ಶುರು ಮಾಡೋಣ ಎನಿಸಿಕೊಂಡು " ಗಜಮುಖನೇ...." ಎಂದು ಶುರು ಮಾಡಿದ್ದೆ ಅಷ್ಟೇ, ಸ್ವಲ್ಪ ದೂರದಲ್ಲಿ ಒಬ್ಬ ಮನುಷ್ಯ ನಿಂತಿದ್ದ.... ಜೀವ ಬಂದ ಹಾಗಾಯಿತು.... ದೇವರ ಹಾಡು ಮರೆತೇ ಹೋಯಿತು....  ಆದರೂ ಮನಸ್ಸ ಮೂಲೆಯಲ್ಲಿ ದೇವರಿಗೆ ಧನ್ಯವಾದ ಹೇಳಿದೆ.... ಆತನ ಬಳಿ ಹೋಗಿ ನಾನೇ ಬೈಕ್ ನಿಲ್ಲಿಸಿದೆ....  ಟಿಪ್ ಟಾಪ್ ಆಗಿ ಇದ್ದ. ಜಾಕೆಟ್ ಹಾಕಿದ್ದ. ಕಳ್ಳನಾಗಿದ್ದರೆ ಎನಿಸಿತು, ದೆವ್ವಕ್ಕಿಂತ ಕಳ್ಳನೇ ಲೇಸು ಎನಿಸಿತು.... " ಬರ್ತೀರಾ ಸಾರ್.?" ಎಂದೆ.... " ಹೌದು, ಸ್ವಲ್ಪ ದೂರ ಅಷ್ಟೇ ಥ್ಯಾಂಕ್ಯೂ" ಎನ್ನುತ್ತಲೇ ಆತ ಬೈಕ್ ಹಿಂದೆ ಕುಳಿತ.... ಕೈಯಲ್ಲಿ ಒಂದು ಬ್ಯಾಗ್ ಇತ್ತು. ಅದಕ್ಕೆ ಸ್ಚಲ್ಪ ಕೆಸರು ಮೆತ್ತಿತ್ತು. ಎಲ್ಲಾದರೂ ಬಿದ್ದಿದ್ದನಾ...? ನಾನು ಕೇಳಲಿಲ್ಲ....  " ಎಲ್ಲಿಗೆ ಹೋಗಿದ್ರೀ ಸರ್..? " ಕೇಳಿದ ಆತ.... ನನಗೆ ಮಾತನಾಡುವ ಮೂಡ್ ಇರಲಿಲ್ಲ....  ಹೆಂಡತಿಯ ಮೇಲೆ ಸಿಟ್ಟು ಇನ್ನೂ ಕರಗಿರಲಿಲ್ಲ ಅಲ್ವಾ..?....  

" ಯಾಕೆ ಸರ್, ಏನಾಯ್ತು...? ಏನಾದ್ರೂ ಸಮಸ್ಯೇನಾ...? " ಆತ ಮಾತನಾಡುತ್ತಲೇ ಇದ್ದ.... ನಾನು ಉತ್ತರಿಸಲಿಲ್ಲ.... ’ನನ್ನ ತಲೆಬಿಸಿ ನನಗೆ. ಈತನದೊಂದು’ ಎನಿಸಿತು.....  "ಸಾರ್ , ನನಗನಿಸತ್ತೆ ನಾನು ನಿಮ್ಮ ಜೊತೆ ಬರೋದು ನಿಮಗೆ ಇಷ್ಟ ಇಲ್ಲ ಅನಿಸತ್ತೆ, ನನ್ನನ್ನು ಇಲ್ಲೇ ಬಿಡಿ, ನಾನು ನಡೆದೇ ಬರುತ್ತೇನೆ" ಎಂದ ಆತ....  ಯಾವಾಗ ಆತ ಇಳಿದುಹೋಗುತ್ತೇನೆ ಎಂದನೋ ಆಗ ನನ್ನ ಕಿವಿ ನೆಟ್ಟಗಾಯಿತು....  "ಹಾಗೆನಿಲ್ಲ ಸಾರ್, ಮನೆಯಲ್ಲಿ ಸ್ವಲ್ಪ ಕಿರಿಕಿರಿ, ಎಲ್ಲರ ಮನೆಯಲ್ಲಿ ಇದ್ದ ಹಾಗೆ" ಎಂದೆ.... " ಓ ಹೌದಾ, ಯಾರ ಜೊತೆ ಜಗಳ ..? ಕೇಳಿದ ಆತ.... ನನಗೆ ಹೇಳುವ ಮನಸ್ಸಿರಲಿಲ್ಲ.... ಆತನೇ ಮತ್ತೆ ಕೇಳಿದ.... "ಮನೆಯಲ್ಲಿ ಯಾರ್ಯಾರಿದ್ದರೆ ಸರ್.....?"    "ಹೆಂಡತಿ ಮತ್ತು ಮಗಳು" ಎಂದೆ ನಾನು.... "ಹಾಗಿದ್ರೆ ಹೆಂಡತಿಯ ಜೊತೆಗೆ ಜಗಳ ಅಲ್ವಾ..? " ಎಂದ ಆತ.... ನಾನು "ಹ್ಹೂ " ಎಂದೆ.... "ಇದು ಎಲ್ಲರ ಮನೆಯ ದೋಸೆ ಸರ್.... ಆದ್ರೆ ನಾವು ತುಂಬಾ ಮುಖ್ಯವಾದ ವಿಷಯ ಮರೆಯುತ್ತೇವೆ....." ಎಂದು ಪ್ರವಚನ ಶುರು ಮಾಡುವವನಿದ್ದ.... ಈ ದೆವ್ವದ ಹೆದರಿಕೆ ಒಂದು ಇಲ್ಲದಿದ್ದರೆ ಈತನನ್ನು ಅಲ್ಲೇ ಇಳಿಸಿಬಿಡುತ್ತಿದ್ದೆ.... ಒಲ್ಲದ ಮನಸ್ಸಿಂದ  " ಏನು...?" ಎಂದೆ.... ನನಗೆ ಈತನ ಪುರಾಣ ಕೇಳದೇ ಬೇರೆ ಉಪಾಯ ಇರಲಿಲ್ಲ.... 

" ನನ್ನ ಕಥೆಯೂ ಅದೇ ಆಗಿತ್ತು ಸರ್, ನಾನು, ನನ್ನ ಹೆಂಡತಿ, ಮೂರು ವರ್ಷದ ಮಗಳು....  ನಮ್ಮದು ಲವ್ ಮ್ಯಾರೇಜ್ ಸರ್. ನನಗಾಗಿ ತನ್ನ ಮನೆ, ತನ್ನವರನ್ನ ಬಿಟ್ಟು ಬಂದಿದ್ದಳು ಆಕೆ....  ಆಕೆಯ ಮನೆಯವರಿಗೆ ನಾನು ಬೇಡವಾಗಿದ್ದೆ.... ನನ್ನ ಜಾತಿ ಅವರ ಜಾತಿಗಿಂತ ಕೀಳಾಗಿತ್ತಂತೆ....  ನನ್ನನ್ನು ತುಂಬಾ ದ್ವೇಷಿಸುತ್ತಿದ್ದರು ಅವಳ ಮನೆಯವರೆಲ್ಲಾ.... ಆದರೂ ನಾವು ಮದುವೆಯಾದೆವು.... ಮದುವೆಯಾಗಿ ವರ್ಷಕ್ಕೇ ಮಗಳು ಬಂದಿದ್ದಳು....  ನನ್ನ ಕೆಲಸವೂ ಚೆನ್ನಾಗಿತ್ತು....  ಕೆಲವೊಮ್ಮೆ ಕೆಲಸದ ಪ್ರಯುಕ್ತ ನಾನು ದೂರದ ಊರಿಗೆ ಹೋಗಬೇಕಾಗುತ್ತಿತ್ತು....  ಆಗ ನನ್ನವಳು  ಒಬ್ಬಂಟಿಯಾಗುತ್ತಿದ್ದಳು....  ಅವಳಿಗೆ ತನ್ನ ಹೆತ್ತವರ ನೆನಪಾಗುತ್ತಿತ್ತೋ ಏನೊ.... ಅವರಿಗೆ ಫೋನ್ ಮಾಡಿದ್ದಾಳೆ.... ಅವರೂ ಸಹ ಮಾತನಾಡಿದ್ದಾಳೆ....  ಮೂರು ವರುಷದ ಧ್ವೇಷ ಕರಗಿತ್ತೋ ಎನೋ....  ಆದರೆ ಅವರಿಗೆ ನನ್ನ ಮೇಲಿನ ಕೋಪ ಹಾಗೆ ಇತ್ತು ಎನಿಸತ್ತೆ..... ಅದಕ್ಕಾಗಿಯೇ ನನ್ನವಳು ಈ ವಿಷಯ ಮುಚ್ಚಿಟ್ಟಳು..... 

  ಹೀಗೆ ತುಂಬಾ ದಿನದಿಂದ ನಡೆಯಿತ್ತಾ ಇತ್ತು ಎನಿಸತ್ತೆ....  ಒಂದಿನ ನಾನು ಆಫೀಸಿನ ಕಿರಿಕಿರಿಯಿಂದ ಬೇಸತ್ತು ಬೇಗನೇ ಮನೆಗೆ ಬಂದಿದ್ದೆ.... ಅವಳ ಮೊಬೈಲ್ ಗೆ ಕಾಲ್ ಬರ್ತಾ ಇತ್ತು..... ಅದನ್ನು ನಾನು ನೋಡಿದೆ, ’ ಮೈ ಡ್ಯಾಡ್’ ಎಂದಿತ್ತು.... ನನಗೆ ಗಾಬರಿ.....!!! ’ ಇದೇನಿದು...? ಇವರ್ಯಾಕೆ ಫೋನ್ ಮಾಡ್ತಾ ಇದಾರೆ...? ’ ಎನಿಸಿತು..... ಮೊದಲೇ ಆಫೀಸಿನ ಕಿರಿಕಿರಿ,ಇದರಲ್ಲಿ ಇವರ ಕಾಲ್ ಬಂದು ಇನ್ನೂ ಸಿಟ್ಟು ತರಿಸಿತ್ತು.....  ನನ್ನವಳು ಬಂದು ಕಾಲ್ ಡಿಸ್ಕನೆಕ್ಟ್ ಮಾಡಿದಳು...... "ರೀ,ನಿಮ್ಮ ಹತ್ತಿರ ಒಂದು ವಿಷ್ಯ ಹೇಳೊದಿತ್ತು" ಎಂದಳು..... ನಾನು "ಏನು ವಿಷ್ಯ" ಕೇಳಿದೆ.... ಇವಳ ತಂದೆ ಕಾಲ್ ಮಾಡೊದಕ್ಕೂ, ಇವಳು ಮಾತನಾಡುವುದಕ್ಕೂ ಏನಾದರೂ ಸಂಬಂಧ ಇರಬಹುದು ಎನಿಸಿತು.....  "ಇತ್ತೀಚಿಗೆ ನಾನೇ ಅಪ್ಪನಿಗೆ ಕಾಲ್ ಮಾಡಿದ್ದೆ, ಅಪ್ಪನಿಗೆ ನಮ್ಮ ಮೇಲೆ ಕೋಪ ಇಲ್ಲವಂತೆ........".... ಇನ್ನೇನೋ ಹೇಳುವವಳಿದ್ದಳು ಎನಿಸತ್ತೆ..... ನನ್ನ ಕೋಪ ಮಿತಿ ಮೀರಿತ್ತು..... ಅದರಲ್ಲೂ ಇವಳೇ ಇವಳಪ್ಪನಿಗೆ ಫೋನ್ ಮಾಡಿದ್ದಾಳೆ, ಮತ್ತದನ್ನು ನನಗೆ ತಿಳಿಸಿಲ್ಲ ಎಂದು ಕೋಪ ನೆತ್ತಿಗೇರಿತ್ತು.... "ಹೋಗು... ನೀನು ಅಪ್ಪನ ಹತ್ತಿರ.... ಅವರ ಹತ್ತಿರವೇ ಇರು.... ನಿನ್ನ ಕಂಡರೆ ಪ್ರೀತಿ ಅಲ್ವಾ...? " ಎಂದವನಿಗೆ ಅಲ್ಲಿರುವ ಮನಸ್ಸಾಗಲಿಲ್ಲ.... ಹೊರಬಿದ್ದೆ.... ಬೈಕ್ ತೆಗೆದುಕೊಂಡು ಹೊರಟಿದ್ದೆ..... ಎಲ್ಲಿಗೆ ಎಂದು ಗೊತ್ತಿರಲಿಲ್ಲ.........." 

    ’ಅರೇ, ಇದೇನಿದು ನನ್ನ ಸಮಸ್ಯೆಯನ್ನೇ ಹೇಳುತ್ತಿದ್ದಾನಲ್ಲ ಈತ ಎನಿಸಿತು.... "ತಪ್ಪಲ್ವಾ ಸರ್ ಅದು, ಆಕೆ ನಿಮ್ಮಿಂದ ಮುಚ್ಚಿಡಬಾರದಿತ್ತು. ಎಲ್ಲವನ್ನೂ ಹಂಚಿಕೊಳ್ಳಬೇಕಾಗಿತ್ತು ಅಲ್ವಾ...? " ಎಂದೆ ನಾನು.....  ಇದನ್ನು ಹೇಳುವಾಗ ನನ್ನವಳ ಮುಖ ನನ್ನೆದುರಿಗೆ ಇತ್ತು.....  ಆತ ನಗಾಡಿದ "ಇದು ನಿಮ್ಮ ಸಿಟ್ಟು ಹಾಗೆ ಮಾತನಾಡಿಸತ್ತೆ ಸರ್, ಸ್ವಲ್ಪ ಯೋಚನೆ ಮಾಡಿ..... ನಮ್ಮ ಜಗತ್ತು ನಮ್ಮ ಕೆಲ್ಸ, ಆಫೀಸು ಇಲ್ಲೇ ತಿರುಗುತ್ತಾ ಇರತ್ತೆ....  ಸಮಯ ಉಳಿದರೆ ಅಷ್ಟೇ ಹೆಂಡತಿ  ಮಕ್ಕಳಿಗೆ.....  ಆದ್ರೆ ಹೆಂಡತಿ ಎನ್ನುವವಳ ಜಗತ್ತು ನಮ್ಮ ಸುತ್ತಲೇ ತಿರುಗುತ್ತಾ ಇರುತ್ತದೆ.....  ನನ್ನ ಗಂಡನ ಬಟ್ಟೆ, ಅವನ ಊಟ, ಅವನ ಆರೋಗ್ಯ, ಅವನ ಅಪ್ಪ ಅಮ್ಮ, ಅವನ ಮಕ್ಕಳು, ಆತನ ನಿದ್ರೆ, ಆತನಿಗೆ ನೀಡಬೇಕಾದ ಸುಖ.... ಹೀಗೆಯೇ ಇರತ್ತೆ.... ಎಂದಿಗೂ ಆಕೆ ತನ್ನ ಬಗ್ಗೆ ಯೋಚಿಸೋದೆ ಇಲ್ಲ.... ಅವರಿಗೂ ಒಂದು ಮನಸ್ಸು ಇರತ್ತೆ,ಅದು ಅವಳ ಅಪ್ಪ ಅಮ್ಮನ ಬಗ್ಗೆ ಮಿಡಿಯತ್ತೆ ಅಂತ ನಮಗೆ ಅನಿಸೋದೇ ಇಲ್ಲ..... ಈಗ ನೋಡಿ ನನ್ನ ವಿಶ್ಯದಲ್ಲಿ, ನನ್ನಾಕೆ ಮಾಡಿದ ಕೆಲಸವೇ ನನಗೆ ದೊಡ್ಡ ಅಪರಾಧವಾಗಿ ಕಾಣಿಸಿತ್ತು....  ಅವಳು ತನ್ನ ಅಪ್ಪನ ಜೊತೆ ಮಾತನಾಡಿದ್ದು ನನಗೆ ಹೇಳಿದರೆ ’ನನಗೆ ಬೇಸರವಾಗಬಹುದು’ ಎಂದು ಹೇಳದೇ ಇರಬಹುದಾಗಿತ್ತು..... ಇದನ್ನೇ ನಾನು ದೊಡ್ಡ ರಂಪಾಟ ಮಾಡಿಕೊಂಡು ಹೊರ ಬಂದಿದ್ದೆ. "..... 

       "ಹೌದಲ್ವಾ..? ನಾನು ಮಾಡಿದ್ದೂ ಅದೇ ಸರ್.... ನನ್ನಾಕೆ ತನ್ನ ಅಪ್ಪನ ಮನೆಗೆ ಹೋಗಬೇಕು ಅಂದಿದ್ದಳು..... ಈ ಸಾರಿ ಬೇಡ, ಮುಂದಿನ ಸಾರಿ ಹೋಗೋಣ ಎನ್ನೋದು ನನ್ನ ಮಾತಾಗಿತ್ತು....  ಅದನ್ನೇ ದೊಡ್ಡ ಮಾಡಿಕೊಂಡು ನಾನು ಹೊರಬಿದ್ದಿದ್ದೇನೆ.... ತಪ್ಪು ಮಾಡಿದ್ದೇನೆ ಎಂದು ಗೊತ್ತಿದರೂ ಮನಸ್ಸು ಒಪ್ಪುತ್ತಿರಲಿಲ್ಲ....  ನಾವು ದಿನದ ಹೆಚ್ಚು ಹೊತ್ತು ಆಫೀಸಿನಲ್ಲೇ ಕಳೆಯುತ್ತೇವೆ..... ದಿನದ ಇಪ್ಪತ್ನಾಲ್ಕು ಘಂಟೆ ಮನೆಯ ನಾಲ್ಕು ಗೋಡೆಗಳ ನಡುವೆ ಕಳೆಯುವ ನನ್ನಾಕೆಗೆ ಸ್ವಲ್ಪವೂ ಬಿಡುವು ಬೇಡವೇ.....? ನಮಗೆ ಆಫೀಸು ಕಿರಿಕಿರಿಯಾದರೆ ಮನೆಗೆ ಬರಬಹುದು..... ಆದರೆ ನನ್ನಾಕೆಗೆ ಮನೆಯಲ್ಲೇ ಕಿರಿಕಿರಿಯಾದರೆ ಎಲ್ಲಿ ಹೋಗಿಯಾಳು.....? ಚೆ, ಎಂಥಾ ಕೆಲಸವಾಯ್ತು.... ಮನೆಗೆ ಹೋಗಿ ಅವಳಲ್ಲಿ ’ಸಾರಿ’ ಕೇಳಬೇಕು" ಎಂದೆ.... ನನ್ನ ಮಾತಿನಿಂದ ಆತನಿಗೆ ಖುಶಿಯಾಯ್ತು " ತುಂಬಾ ಒಳ್ಳೆಯ ಮಾತು ಸರ್, ಈಗಲಾದರೂ ಈ ಯೋಚನೆ ಬಂತಲ್ಲಾ.... ನಿಮ್ಮಾಕೆ ತುಂಬಾ ಲಕ್ಕಿ ಸರ್.... ಅವರಿಗೆ ಬೇಸರ ಮಾಡಬೇಡಿ.... ಅವರನ್ನು ಖುಶಿಯಿಂದ ನೋಡಿಕೊಳ್ಳಿ." ಎಂದ. ಮೊದಲ ಬಾರಿಗೆ ನನಗೆ ಅನುಮಾನ ಬಂತು.ಈತನೇನಾದರೂ ನನ್ನಾಕೆಯ ಸಂಬಂಧಿ ಇರಬಹುದಾ ಹೇಗೆ ಅಂತ..... ಆದರೆ ಈ ಅನುಮಾನ ಎಷ್ಟು ಬೇಗ ಬಂತೋ ಅಷ್ಟೇ ಬೇಗ ಮಾಯವಾಯಿತು ಕೂಡ..... ಇದ್ಯಾವುದರ ಪರಿವೆ ಇಲ್ಲದೇ ಆತ ತನ್ನ  ಕಥೆ ಮುಂದುವರಿಸಿದ್ದ....  "ಹೀಗೆಯೇ...  ನಿಮ್ಮ ಹಾಗೆಯೇ ಸ್ವಲ್ಪ ದೂರದ ತನಕ ಹೋಗಿ ಬರೋಣ ಎಂದು ಹೊರಟವನೆ ಸ್ನೇಹಿತನೊಬ್ಬ ಸಿಕ್ಕಿದ.... ಅವನ ಜೊತೆ ಹೋಗಿ ಸ್ವಲ್ಪ ವಿಸ್ಕಿ ಕುಡಿದೆ.... ತಲೆಯಲ್ಲಿ ಸಿಟ್ಟಿತ್ತಲ್ವಾ...? ಸ್ವಲ್ಪ ಸ್ವಲ್ಪ ಕುಡಿಯುತ್ತಲೇ  ಸ್ವಲ್ಪ ಹೆಚ್ಚಿಗೇ ಕುಡಿದೆ. "

  "ಅದೇ ಸಮಯಕ್ಕೆ ನನ್ನ ಮೊಬೈಲ್ ಗೆ ನನ್ನವಳ ಕಾಲ್ ಬಂತು..... ನನ್ನ ಸಿಟ್ಟೂ ಇನ್ನೂ ಇಳಿದಿರಲಿಲ್ಲ. " ಏನು...ಇನ್ನೇನು ಹೇಳುವುದಿದೆ...? ಎಲ್ಲಾ ಮುಗಿಯಿತಲ್ಲ...? ಹೊರಡು ನಿನ್ನ ಮನೆಗೆ... ನಿನ್ನ ಅಪ್ಪನ ಮನೆಗೆ..." ಎಂದವನೇ ಕಾಲ್ ಕಟ್ ಮಾಡಿದೆ.... ನಶೆ ಏರುತ್ತಿತ್ತು.... ಮನೆಗೆ ಹೋಗಲೇಬೇಕಿತ್ತು.... ಬೈಕ್ ಸ್ಟಾರ್ಟ್ ಮಾಡಿದೆ.... ಮನೆಯತ್ತ ಹೊರಟೆ.....  ಮಾರ್ಗ ಮಧ್ಯದಲ್ಲಿ, ಮತ್ತೆ ನನ್ನವಳ ಕಾಲ್ ಬಂತು......." ಅದೇ ಸಮಯಕ್ಕೆ ನನ್ನ ಫೋನ್ ರಿಂಗಾಗುತ್ತಿತ್ತು. ನನ್ನಾಕೆಯ ಫೋನ್ ಆಗಿತ್ತು....."ಹಲೋ, ಬರ್ತಾ ಇದ್ದೇನೆ ಮನೆಗೆ.... ಸಂಗಡ ಊಟ ಮಾಡೋಣ " ಎಂದು ಫೋನ್ ಕಟ್ ಮಾಡಿದೆ......  ನನ್ನ ಹಿಂದೆ ಕುಳಿತಾತನಿಗೆ ಖುಶಿಯಾಗಿತ್ತು..... " ವೆರಿ ಗುಡ್ ಸರ್, ಖುಶಿಯಾಯ್ತು ನನಗೆ, ಆದ್ರೆ ನಾನು ದೊಡ್ಡ ತಪ್ಪು ಮಾಡಿದ್ದೆ..... ನಿಮ್ಮಾಕೆಯ ಹಾಗೆಯೇ ನನ್ನವಳೂ ಕಾಲ್ ಮಾಡಿದ್ದಳು.... ಆದ್ರೆ ನಾನು ಮತ್ತೆ ಅವಳಿಗೆ ಸಿಟ್ಟಿನಿಂದಲೇ ಉತ್ತರಿಸಿದ್ದೆ. ಸಿಟ್ಟಿನಿಂದಲೇ ಕಾಲ್ ಕಟ್ ಮಾಡಿದ್ದೆ."..... ದೊಡ್ಡದಾಗಿ ಉಸಿರು ತೆಗೆದುಕೊಳ್ಳುತ್ತಾ ಅಂದ "ಹಾಗೆಯೇ ಮನೆಗೆ ಹೋಗುವ ಅವಕಾಶವನ್ನೂ ಕಳೆದುಕೊಂಡಿದ್ದೆ.........  " ನನಗೆ ನಿಜವಾಗಿಯೂ ಕನಿಕರ ಹುಟ್ಟಿತು. " ಯಾಕೆ ಸರ್, ನಿಮ್ಮಾಕೆ ಮನೆ ಬಿಟ್ಟು ಹೋಗಿದ್ದರಾ..? " ಕೇಳಿದೆ...... 
ನನಗೆ ಸ್ವಲ್ಪ ಧೈರ್ಯ ಬಂದಿತ್ತು....... ಯಾಕೆಂದರೆ ಸ್ಮಶಾನವನ್ನು ದಾಟಿ ಬಂದಿದ್ದೆ. 
"ಇಲ್ಲ ಸಾರ್...ನನ್ನಾಕೆ  ಮತ್ತೆ ಫೋನ್ ಮಾಡಿದಳು... ನನಗೆ ಕೋಪ ನೆತ್ತಿಗೇರಿತು... ಅವಳಿಗೆ ಚೆನ್ನಾಗಿ ಬಯ್ದೆ..."
ಆತ ಸ್ವಲ್ಪ ಹೊತ್ತು ಸುಮ್ಮನಾದ...
ನನಗೆ ಕುತೂಹಲ ಜಾಸ್ತಿಯಾಯ್ತು...
"ಮುಂದೆ ಏನಾಯ್ತು ಸಾರ್...?
ಈಗ ನೀವೆಲ್ಲ ಪ್ರೀತಿಯಿಂದ ಇದ್ದಿರಲ್ವಾ?...."
"ಇಲ್ಲಾ ಸಾರ್...
ನಾನು ಕೋಪದಲ್ಲಿ ಮಾತಾಡುತ್ತಿದ್ದೆ..
ಮುಂದಿನಿಂದ  ಬರುತ್ತಿದ್ದ ಲಾರಿಗೆ ನನ್ನ ಬೈಕ್ ಜೋರಾಗಿ ಢಿಕ್ಕಿ ಆಯ್ತು..."
ನನಗೆ ಪಾಪ ಅನ್ನಿಸಿತು...
"ಹೋಗ್ಲಿ ಬಿಡಿ ಸಾರ್.... ಈಗ ಎಲ್ಲ ಸರಿ ಹೊಯ್ತಲ್ವಾ? ಎನೋ ಕೆಟ್ಟ ಘ್ಹಳಿಗೆ ಆಗೋಯ್ತಲ್ಲಾ .... ಮತ್ತೆ ತಪ್ಪು ಮಾಡಬೇಡಿ ಸರ್ "ಎಂದೆ.....
" ಸಾರ್......ನೀವು ನಿಮ್ಮ ಮಡದಿಯೊಡನೆ ಪ್ರೀತಿಯಿಂದ ಚೆನ್ನಾಗಿರಿ...
ನನ್ನ ಹಾಗೆ ಮಾಡ್ಕೋಬೇಡಿ..." ಅಂದರು ಆತ ಬೇಸರದಿಂದ....
"ನಿಮಗೇನಾಯ್ತು...?" ಕೇಳಿದೆ ನಾನು...... 
"ಆ  ಅಪಘಾತದಲ್ಲಿ ನನ್ನ ತಲೆಯೇ ಕತ್ತರಿಸಿ ಹೋಯ್ತು....!!! "

ನಾನು ಬೈಕ್  ನಿಲ್ಲಿಸಿ ತಿರುಗಿ ನೋಡಿದೆ...

ಹಿಂದೆ ಯಾರೂ ಇರಲಿಲ್ಲ.....!!

29 comments:


 1. ಹಿಚ್ಕಾಕ್ ಚಿತ್ರ ನೋಡಿದಂತೆ ಭಾಸವಾಯಿತು..ನಿರೂಪಣಾ ಶೈಲಿ ಸೂಪರ್..ಬರು ಬರುತ್ತಾ..ಅಂತ್ಯದ ಬಗ್ಗೆ ಸುಲಿಹು ಸಿಕ್ಕರೂ..ಇರಲಿ ಏನು ತಿರುವು ಸಿಗುತ್ತೆ ಓದಿಯೇ ಬಿಡೋಣ ಅನ್ನುವಷ್ಟು ಚೆನ್ನಾಗಿದೆ..ಸೂಪರ್ ಸರ್..ಕೋಪದಲ್ಲಿದ್ದಾಗ ವಿವೇಚನೆ ಎನ್ನುವುದು ಗಾಳಿಪಟ ಆಗಿ ಬಿಡುತ್ತದೆ..ಒಳ್ಳೆಯ ಗಾಳಿ ಸಿಕ್ಕರೆ..ತೆಲಾಡಿಕೊಂಡು ಕೆಳಗೆ ಇಳಿಯುತ್ತದೆ..ಬಿರುಗಾಳಿಗೆ ಸಿಕ್ಕರೆ..ತಲೆಯು ಇಲ್ಲ. ಕೋಪವು ಇಲ್ಲ..ಸುಂದರ ಲೇಖನ..

  ReplyDelete
 2. ಸರ್... ಸಕ್ಕತ್ ಕಥೆ ದೆವ್ವಕ್ಕೂ ಹೆದರ್ತೀರಿ ಅಂತಾ ಗೊತ್ತಯ್ತು ಅದೇ ದೆವ್ವ ಬುದ್ಧಿ ಮಾತು ಹೇಳಿ ಸಂಸಾರ ಸರಿ ಮಾಡ್ತು ಹಹಹಹ.. ಚೆನ್ನಾಗಿದೆ ಕಥೆಯ ಶೈಲಿ

  ReplyDelete
 3. ಥ್ರಿಲ್ !! ರೋಮಾಂಚನ !! ತುಂಬಾ ಚೆನ್ನಾಗಿದೆ ದಿನೇಶ್ !!

  ReplyDelete
 4. ದಿನಕರ್...

  ಓದಿ ಥ್ರಿಲ್ ಆಯ್ತು.... !

  ತುಂಬಾ ದಿನಗಳ ನಂತರ ಇಂಥಹ ಕಥೆ ಓದಿದೆ...

  ಸಕತ್ ಮಜಾ ಬಂತು .............................

  ReplyDelete
 5. ನಮ್ಮ ದಿನಕರ್ ಮೊಗೆರ ದೇಹದೊಳಗೆ ಒಬ್ಬ ಮಹಾ ಕಥೆಗಾರ ಅಡಗಿದ್ದಾನೆ, ಏನೇ ಬರೆಯಲಿ ಅದು ಸಿಕ್ಸರ್ರೆ , ಒಳ್ಳೆಯ ಕಥೆ ಹಲವು ತಿರುವುಗಳನ್ನು ಹೊಂದಿ ಕುತೂಹಲ ಮೂಡಿಸುತ್ತದೆ. ಕಥೆಯ ಗಾರುಡಿಗ ನಿಮಗೆಹಾಗು ನಿಮ್ಮ ಕುಟುಂಬಕ್ಕೆ ಗೌರಿ ,ಗಣೇಶ ಹಬ್ಬದ ಶುಭಾಶಯಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 6. ದಿನಕರ್;ಒಳ್ಳೆಯ ಕಥೆ!!ಇಷ್ಟ ಆಯಿತು!!!

  ReplyDelete
 7. ದಿನಕರ್;ಒಳ್ಳೆಯ ಕತೆ!!!ಇಷ್ಟವಾಯಿತು!!!

  ReplyDelete
 8. ದೆವ್ವ ನಿಜಾನೋ ಸುಳ್ಳೋ ಆದರೆ ಅದು ಹೇಳಿದ್ದು ಕಟು ಸತ್ಯ... ಎಲ್ಲರೂ ಅರ್ಥ ಮಾಡ್ಕೊಂಡ್ರೆ ಸುಮಾರ್ ಜನ ದೆವ್ವ ಅಗೋದು ತಪ್ಪುತ್ತದೆ !

  ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ .. ಹಿಂದೆ ಇರುವುದು ದೆವ್ವನೇ ಆಗಿರಬೇಕು ಅನ್ನೊದು ಇಲ್ಲ... ನಿಮ್ಮ ಭಯ.. ಒಳ ಮನಸ್ಸಿನಲ್ಲಿ ಹೆಂಡತಿ ಮೇಲಿರುವ ಪ್ರೀತಿ .. ಮತ್ತು ಮಾಡಿದ ತಪ್ಪನ್ನು ವಿಶ್ಲೇಷಣೆ .. ದೆವ್ವವಾಗಿ ಹಿಂದೆ ಕೂತಿತ್ತು ! ( ಈ ಕಾಲದಲ್ಲೂ ದೆವ್ವದ ಕಥೆನಾ ಅನ್ನೋರಿಗೊಂದು ಸಮಜಾಯಿಶಿ :) )

  ReplyDelete
 9. ಹಹಹಹ ದಿನಕರ್, ಸ್ಮಶಾನ ಭಯ ಎಲ್ಲಾ ನಮ್ಮಲ್ಲೂ ಇದ್ದದ್ದೇ... ಇದ್ದಾಗ ಅಭಯ ಕೊಟ್ಟವರು ಸತ್ತಾಗ ಅದೇ ಭಯಕ್ಕೆ ಕಾರಣ...ಚನ್ನಾಗಿದೆ ಕಥೆ...ಆದರೆ ನಿಜ ಹೇಳಲೇಬೇಕು... ನನಗೆ ಹಿಂದೆ ಕುಳಿತದ್ದು ಭೂತವೇ ಎಂದು ಗೊತ್ತಿತ್ತು... ಅದಕ್ಕೆ ನಿಮಗೆ ಕಥೆ ಬರೆಯುವಾಗ ಹೇಳಲಿಲ್ಲ... ನಿಮ್ಮ ಹಿಂದೆ ಭೂತ ಕೂತಿದೆ ನೋಡಿ ಅಂತ...ಹಹಹಹ್ಹಹಹಹ...ಹಿಹಿಹಿಹ್ಹಿಹಿಹಿ...ಕಿಕಿಕಿಕಿಕಿ...

  ReplyDelete
 10. ಗಳಿಗೆ ಗಳಿಗೆಗೂ ತನ್ನ ನಿಗೂಢತೆಯನ್ನು ಉಳಿಸಿಕೊಂಡು ಬಂದ ಕಥನದಲ್ಲಿ, ಕಡೆಗೆ ಸ್ಫೋಟವಾಗುವ ಸತ್ಯ ಮೈ ಝುಂ ಎಂದಿತು.

  ಕಥನಾ ಶೈಲಿಯಲ್ಲಿ, ನಾವು ಗಂಡಸರು ತೋರುವ ಸ್ವ ಪ್ರತಿಷ್ಟೆ ಮತ್ತು ಮಡದಿಯರನ್ನು ಅರ್ಥ ಮಾಡಿಕೊಳ್ಳದ ಅಹಂ ಪೊರೆ ಅನಾವರ್ಣವಾಗಿದೆ.

  ಮೂರು ಹೊತ್ತು ಹೊಅರಗೇ ಇರುವ ಮತ್ತು ಮನೆಯ ನಾಲ್ಕು ಗೋಡೆಗಳ ನಡುವೆ ಮಡದಿಯು ಅನುಭವಿಸುವ ನಿರಂತರ ಮೌನದಾಘಾತ ನಮಗೆ ತಟ್ಟುವುದೇ ಇಲ್ಲ.

  ಮುಂದಿನ ಹಬ್ಬಕ್ಕೆ ನಾನು ನನ್ನ ಪತ್ನಿಯನ್ನು ನಾನೇ ತವರಿಗೆ ಕಳಿಸುತ್ತೇನೆ.

  ಅತ್ಯುತ್ತಮ ನಿರೂಪಣಾ ಶೈಲಿ.

  ReplyDelete
 11. ತುಂಬಾ ಸೊಗಸಾದ ನಿರೂಪಣೆ...

  ReplyDelete
 12. ದಿನಕರ್ ಸರ್,
  ಕತೆಯನ್ನು ಓದಿಸಿಕೊಂಡು ಹೋಗುತ್ತಾ ಕೊನೆಯಲ್ಲಿ ಕೊಟ್ಟ ತಿರುವು ಮಾತ್ರ ಸೂಪರ್...ತುಂಬಾ ಚೆನ್ನಾಗಿ ಬರೆದಿದ್ದೀರಿ..

  ReplyDelete
 13. This comment has been removed by the author.

  ReplyDelete
 14. ಹ ಹ ಹ... ಕಥೆ ತುಂಬಾ ಚೆನ್ನಾಗಿದೆ..

  ReplyDelete
 15. ಹ ಹ ಹ... ಕಥೆ ತುಂಬಾ ಚೆನ್ನಾಗಿದೆ..

  ReplyDelete
 16. Dinakar,
  A beautiful story that combines the truth of married life as well as suspense!

  ReplyDelete
 17. ಹಾಯ್ ದಿನಕರ್ ಸರ್....

  ಚೆನ್ನಾಗಿದೆ ಸರ್.....ನಿಮ್ಮ ನಿರೂಪಣಾ ಶೈಲಿ ಇಷ್ಟ ಆಯಿತು......ಇದು 'ಭೂತ' ವಿರಬೇಕೆಂದು ಊಹಿಸಿದ್ದೆ....ಆದರೆ ಅಂತ್ಯ ನಾನು ಅಂದುಕೊಂಡ ಹಾಗಿರಲಿಲ್ಲ.....ಸಸ್ಪೆನ್ಸ್ ಚೆನ್ನಾಗಿತ್ತು.....

  ReplyDelete
 18. ಹಾ ಹಾ...ಎರಡೇ ಪಾತ್ರದಲ್ಲಿ(ಒಂದೇ ಅಲ್ವಾ?) ಅದೇಷ್ಟೋ ವಿಷಯ ಹೇಳಿದ್ದೀರಿ...ಅವುಗಳು ನನಗೇನು ತೀರಾ ಅರ್ಥವಾಗದಿದ್ದರೂ ಚೆನ್ನಾಗಿದೆ ಅಂತಷ್ಟೇ ಹೇಳಬಲ್ಲೆ..(ಇನ್ನೊಂದು ೫-೬ ವರ್ಷದ ಮೇಲೆ ನಿಧಾನವಾಗಿ ಅರ್ಥವಾಗಬಹುದು ಬಿಡಿ!)

  ಕಥೆಯ ಕೊನೆ ಮಜಕೂರಾಗಿದೆ..ನಿರೂಪಣಾ ಶೈಲಿ ಇಷ್ಟವಾಯ್ತು..ದಾರಿ ಮಧ್ಯದಲ್ಲೆಲ್ಲೊ ಪೆಟ್ರೋಲು ಖಾಲಿಯಾಗುತ್ತದೆ ಅಂದುಕೊಂಡಿದ್ದೆ,ಅದೊಂದು ಆಗಲಿಲ್ಲ ನೋಡಿ!!!!

  ಧನ್ಯವಾದ ಸಾರ್...
  ನಮಸ್ತೆ..

  ReplyDelete
 19. I-Keshav Nayak-just happened to visit your blog,got interested & became a member.I have my own blog:-keshavu-hknayak.blogspot.in I am not much of a writer,but published some of my writings in my blog.You may join it.Your above story is good and I liked it.Carry on the good work.

  ReplyDelete
 20. chennagide kathe. antya svalpa "predictable" annisidaroo kooDa koneyalli "kick" idde ide.

  ReplyDelete
 21. Really wonderful!!! hendatiyondigina sittu devvada bheti maadisadiddaru, apaghaatavannantu maadisabahudu!!! wonderful message

  ReplyDelete
 22. Wonderful story and wonderful message ! Hendatiyondigina sittu devvada bheti maadisadiddaru,apaghaatavannantu maadisabahudu !

  ReplyDelete
 23. This comment has been removed by the author.

  ReplyDelete
 24. ಕಥೆ ಚೆನ್ನಾಗಿದೆ but ಇನ್ನೂ ಚೆನ್ನಾಗಿ ಹೇಳ್ಬಹುದಿತ್ತು ಅನ್ಸುತ್ತೆ

  ReplyDelete