Aug 15, 2011

ಕೇಸರಿ..... ಬಿಳಿ... ಹಸಿರು.......

           ಕೆಲಸದ ನಿಮಿತ್ತ ಕಾರಿನಲ್ಲಿ ಹೊರಟಿದ್ದೆ..... ಪ್ರಯಾಣದ ಸುಸ್ತಿನಿಂದಾಗಿ ನಿದ್ದೆ ಬಂದುಬಿಟ್ಟಿತ್ತು.... ಎಚ್ಚರವಾದಾಗ ಕಾರು ಒಂದು ಶಾಲೆಯ ಪಕ್ಕದಲ್ಲಿ ಹೋಗುತ್ತಿತ್ತು.... ಶಾಲೆಯ ಎದುರಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಸಾಲಾಗಿ ನಿಂತು ಡಾನ್ಸ್ ಮಾಡುತ್ತಿದ್ದರು..... ಅವರು ತೊಟ್ಟಿದ್ದ ಬಟ್ಟೆಯಿಂದ ಅವರೆಲ್ಲಾ ಸ್ವಾತಂತ್ರ್ಯ ದಿನಕ್ಕಾಗಿ ತಯಾರಿ ನಡೆಸಿದ ಹಾಗಿತ್ತು......... ಸ್ವಾತಂತ್ರ್ಯ ದಿನಕ್ಕಾಗಿ ಭಾಷಣ ಬರೆದುಕೊಡಲು  ಮೂರನೆಯ ತರಗತಿ ಓದುತ್ತಿದ್ದ ಮಗಳು ಹೇಳಿದ್ದು ನೆನಪಾಯ್ತು........ ನಾನು ಶಾಲೆಗೆ ಹೋಗುತ್ತಿದ್ದ ದಿನದಲ್ಲೂ ನನಗೆ ಅಪ್ಪನೇ ಭಾಷಣ ಬರೆದುಕೊಡುತ್ತಿದ್ದರು.... ಅದನ್ನು ಬಾಯಿಪಾಠ ಮಾಡಿಕೊಂಡು ಮೂರು ಮೂರು ಸಾರಿ ಅಪ್ಪನೆದುರು ಅಮ್ಮನೆದುರು ಪ್ರಾಕ್ಟೀಸ್ ಮಾಡಿಕೊಂಡು ಹೋಗಿ ಹೇಳುತ್ತಿದ್ದೆವು..... ಮಧ್ಯದಲ್ಲೇ ಮರೆತು ಹೋಗಿ ಮುಜುಗರವಾಗದಿರಲಿ ಅಂತ ಕಾಗದದಲ್ಲಿ ಬರೆದು ಕೈಯಲ್ಲಿ ಮುದ್ದೆ ಮಾಡಿ ಹಿಡಿದುಕೊಳ್ಳುತ್ತಿದ್ದೆ... ಹೆದರಿಕೆಯಿಂದ ಕೈಯಲ್ಲಿನ ಬೆವರಿನಿಂದಾಗಿ ಕಾಗದ ಒದ್ದೆಯಾಗುತ್ತಿತ್ತು...... ಅದೆಲ್ಲಾ ನೆನಪಾಗಿ ನಗು ಬಂತು..... ಸ್ವಲ್ಪ ಹೊತ್ತು ಇಲ್ಲೇ ಇರೋಣ ಎನಿಸಿ ಕಾರು ನಿಲ್ಲಿಸಲು ಹೇಳಿದೆ.... ಪಕ್ಕದಲ್ಲಿನ ಅಂಗಡಿಯ ಬೇಂಚ್ ಮೇಲೆ ಒಬ್ಬರು ವಯಸ್ಸಾದವರು ಕುಳಿತಿದ್ದರು.......  ಮುಖದ ತುಂಬಾ ಗಡ್ಡ, ಮೀಸೆ ತುಂಬಿ ಹೋಗಿತ್ತು.... ಬಟ್ಟೆ ತೇಪೆ ಹಾಕಿತ್ತು...... ನೋಡಿದ ಕೂಡಲೇ ಗೌರವ ಬರುವ ಹಾಗಿರಲಿಲ್ಲ....ಬೇರೆ ಎಲ್ಲೂ ಕುಳಿತುಕೊಳ್ಳಲು ಜಾಗ ಇರದೇ ಇದ್ದುದರಿಂದ ಆ ಹಿರಿಯರ ಪಕ್ಕದಲ್ಲೇ ಕುಳಿತೆ..........ನಾಳೆಯೇ ಸ್ವತಂತ್ರ ದಿನವಾದ್ದರಿಂದ ಎಲ್ಲಾ ಅಂಗಡಿಯಲ್ಲೂ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟಧ್ವಜ ತುಂಬಿ ಹೋಗಿತ್ತು.......  ಗಾಳಿ ಜೋರಾಗಿ ಬೀಸುತ್ತಿತ್ತು......  ಮಳೆ ಬರುವ ಹಾಗೆ ಇತ್ತು.....  ಮಕ್ಕಳೆಲ್ಲಾ ಇನ್ನೂ ಡಾನ್ಸ್ ಮಾಡುತ್ತಲೇ ಇದ್ದರು........

            ಜೋರಾಗಿ ಗಾಳಿ ಬೀಸಿದಾಗ ಕಾಗದದ ಒಂದು ರಾಷ್ಟಧ್ವಜ ಹಾರಿಬಂದು ನನ್ನ ಕಾಲ ಬಳಿ ಬಂದು ಬಿತ್ತು...... ಯಾಕೋ ರಾಷ್ಟ್ರಧ್ವಜ ಕಾಲ ಬಳಿ ಬಿದ್ದಿರುವುದು ಸರಿ ಎನಿಸದೇ ಎತ್ತಿಕೊಳ್ಳಲು ಮುಂದಾದೆ..... ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯರು ರಾಷ್ಟ್ರಧ್ವಜವನ್ನು ಎತ್ತಿಕೊಂಡರು.... ಇದನ್ನು ತೆಗೆದುಕೊಂಡು ಇವರೇನು ಮಾಡುತ್ತಾರೆ ಎಂದುಕೊಂಡು ಅವರತ್ತ ನೋಡಿದೆ............ಅವಾಕ್ಕಾದೆ.......ರಾಷ್ಟ್ರಧ್ವಜವನ್ನು ಅವರು ತಮ್ಮ ಎದೆಗೆ ಒತ್ತಿ ಹಿಡಿದಿದ್ದರು....... ನನಗೆ ಎನೂ ಅರ್ಥ ಆಗಲಿಲ್ಲ.... ಮಾತನಾಡಿಸೋಣ ಎನಿಸಿ ಅವರ ಭುಜ ಮುಟ್ಟಿದೆ...... ಆತನ ಕಣ್ಣಲ್ಲಿ ನೀರಿತ್ತು......ನನಗೆ ಎನೂ ಅರ್ಥ ಆಗಲಿಲ್ಲ.... "ಏನಾಯ್ತು ಸಾರ್.....? ಯಾಕೆ ಕಣ್ಣಲ್ಲಿ ನೀರು....? ಯಾರು ನೀವು....? " ನನ್ನ ಪ್ರಶ್ನೆ  ಸರ ಸರನೆ ಬಂದಿದ್ದರಿಂದ  ಅವರು ತಿರುಗಿ ಕುಳಿತು ನನ್ನನ್ನೇ ನೋಡಿದರು....... " ಈ ಮೂರು ಬಣ್ಣದ ಕಾಗದಕ್ಕಾಗಿ ಎಷ್ಟೋ ಜನ ತಮ್ಮ ಪ್ರಾಣ ಬಿಟ್ಟಿದ್ದಾರೆ ಗೊತ್ತಾ...? ತಮ್ಮ ಮನೆ, ಮಠ, ಕುಟುಂಬ ಬಿಟ್ಟು ಈ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ್ದಾರೆ ಗೊತ್ತಾ...?" ಎಂದರು .... ನನಗೆ ಕುತೂಹಲ...... " ತಾವು ಯಾರು ಸರ್....? ನೀವೂ ಸ್ವಾತಂತ್ರ್ಯ ಹೋರಾಟಗಾರರಾ...? "ಎಂದೆ....ಆವರು ತಮ್ಮ ನೋಟವನ್ನು ಬೇರೆಡೆ ತಿರುಗಿಸಿದರು..... ತಮ್ಮಷ್ಟಕ್ಕೆ ಎನ್ನುವ ಹಾಗೆ ಮಾತನಾಡತೊಡಗಿದರು............

             "ಗಾಂಧೀಜಿ ಆಗಷ್ಟೇ ಅಸಹಕಾರ ಚಳುವಳಿ ಆರಂಭಿಸಿದ್ದರು...... ನನಗಾಗ ಇಪ್ಪತ್ತು ವರ್ಷ ವಯಸ್ಸು..... ಹತ್ತನೇ ಕ್ಲಾಸ್ ತನಕ ಓದಿ ಮನೆಯಲ್ಲೇ ಇದ್ದೆ....ಅಪ್ಪ ಅಮ್ಮ ಇಬ್ಬರೂ ನೌಕರಿ ಮಾಡುತ್ತಿದ್ದರು.... ನಾನೇನು ಮಾಡಿದರೂ ನಡೆಯುತ್ತಿತ್ತು....ಮಾಡದೇ ಇದ್ದರೂ ನಡೆಯುತ್ತಿತ್ತು.... ಸುಮ್ಮನೇ ಒಡಾಡಿಕೊಂಡು ಇದ್ದೆ....  ಗೆಳೆಯರ ಬಳಗ ದೊಡ್ಡದಿತ್ತು..... ಆದರೆ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ನಮ್ಮಿಂದ ದೂರವೇ ಇತ್ತು....... ಸಂಜೆಯಾದರೆ ಸಾಕು ಕಬಡ್ಡಿ ಆಡುತ್ತಿದ್ದೆವು... ನನ್ನ ಇಬ್ಬರು ಆತ್ಮೀಯ ಸ್ನೇಹಿತರಲ್ಲಿ ಒಬ್ಬನಿಗೆ ಗಾಂಧೀಜಿಯ ಹೋರಾಟದ ಬಗ್ಗೆ ಒಲವಿತ್ತು... ಅವರ ಬಗ್ಗೆ ನಮಗೆಲ್ಲಾ ಹೇಳುತ್ತಿದ್ದ.... ದಿನದ ಆಟ ಮುಗಿಯುತ್ತಿದ್ದಂತೆ ಗಾಂಧಿಜಿಯ ವಿಚಾರಗಳ ಬಗ್ಗೆ ಹೇಳುತ್ತಿದ್ದ.... ನನಗೆ ಅದರ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ....." ಎಂದು ಹೇಳಿ ದೀರ್ಘವಾದ ಉಸಿರು ತೆಗೆದುಕೊಂಡರು ಆತ........ ನಾನು ಅವರಿಗೆ ನೀರು ತಂದು ಕೊಟ್ಟೆ...... ನೀರನ್ನು ಕುಡಿದ ಅವರು ಮುಂದುವರಿಸಿದರು....

              " ಎಂದಿನಂತೆ ಅವತ್ತೂ ಕಬಡ್ಡಿ ಆಡಿ ಕುಳಿತಿದ್ದೆವು..... ನನ್ನ ಆತ್ಮೀಯ ಗೆಳೆಯ ನನ್ನ ಕಾಲ ಮೇಲೆ ಮಲಗಿದ್ದ.....ಆಗಲೇ ಕಿವಿಗೆ ನೂರಾರು ಕುದುರೆ ಓಡಿಬರುತ್ತಿರುವ ಸದ್ದು ಬಿತ್ತು....  ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಕುದುರೆಯಲ್ಲಿ ಬಂದ ಆಂಗ್ಲರ ಬಂದೂಕು ನನ್ನ ಗೆಳೆಯರ ಪ್ರಾಣ ತೆಗೆದುಕೊಂಡಿತ್ತು.... ನನ್ನ ಗೆಳೆಯ ನನ್ನ ಕಾಲ ಮೇಲೆಯೆ ಸತ್ತಿದ್ದ..... ನನ್ನ ಮೈಮೇಲೆ ಬಿದ್ದಿದ್ದ ಆತ ನನ್ನನ್ನು ಬಚಾವ್ ಮಾಡಿದ್ದ... ನಿಮಿಷದಲ್ಲಿ ಅಲ್ಲಿದ್ದ ನನ್ನ ಹದಿನೈದು ಸ್ನೇಹಿತರನ್ನು ಕೊಂದು ಹಾಕಿದ್ದರು... ನನ್ನ ಮೇಲೆ ನನ್ನ ಸ್ನೇಹಿತನ ದೇಹ ಬಿದ್ದಿದ್ದರಿಂದ, ಕೆಳಗಿದ್ದ ನನ್ನನ್ನು ಯಾರೂ ನೋಡಲಿಲ್ಲ..... ಆಂಗ್ಲರು ಹೊರಟುಹೋಗಿದ್ದರು..... ಮೇಲೆದ್ದು ನಿಂತೆ....ಸುತ್ತಲೂ ಹೆಣಗಳ ರಾಶಿ..... ಯಾವುದೇ ಶಡ್ಯಂತ್ರ ಮಾಡದೇ ನಮ್ಮಷ್ಟಕ್ಕೆ ನಾವಿದ್ದರೂ ಈ ಅಧಿಕಾರಧಾಹಿಗಳು ನನ್ನ ಸ್ನೇಹಿತರನ್ನು ಕೊಂದಿದ್ದರು....ಹಾಗಿದ್ದ ಮೇಲೆ ಸ್ವಾತಂತ್ರಕ್ಕಾಗಿ ಹೋರಾಡುತ್ತಿರುವ ಎಷ್ಟೋ ಭಾರತೀಯರನ್ನು ಹೇಗೆ ಕಾಡುತ್ತಿರಬೇಡ ಎನ್ನಿಸಿತು....ಜೊತೆ ಜೊತೆಯಲ್ಲಿ ಆಡಿದ ಗೆಳೆಯರನ್ನು ರಕ್ತದ ಮಡುವಿನಲ್ಲಿ ನೋಡಲು ಆಗಲಿಲ್ಲ..... ಅಲ್ಲಿಂದ ಹೊರಟುಬಿಟ್ಟೆ...... ಮುಂದಿನ ನನ್ನ ಜೀವನ ಸ್ವಾತಂತ್ರಕ್ಕಾಗಿ ಮುಡಿಪಿಟ್ಟೆ.... ಮೈಸೂರಿನಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಜೊತೆಯೇ ಉಳಿದೆ..... ನಾನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ತಪ್ಪಿಗೆ ನನ್ನ ಅಪ್ಪ ಅಮ್ಮನನ್ನೂ ಕೊಂದು ಹಾಕಿದ್ದಾರೆ ಎಂಬ ಸುದ್ದಿ ಸಿಕ್ಕಿತ್ತು....  ಅವತ್ತೇ ನಾನು ಮತ್ತು ನನ್ನ ಸಹಪಾಠಿಗಳೆಲ್ಲಾ ಸೇರಿ ಒಂದು ರೈಲನ್ನು ನಿಲ್ಲಿಸಿ ಅದರಲ್ಲಿನ ಯುದ್ಧ ಸಾಮಗ್ರಿಯನ್ನು ದೋಚುವವರಿದ್ದೆವು...."

         " ಎಲ್ಲಾ ಯೋಜನೆಯ ಹಾಗೆ ನಡೆದಿತ್ತು..... ಎಲ್ಲಾ ದೋಚಿದ ನಂತರ ರೈಲಿನಿಂದ ಕೆಳಗಿಳಿಯುವಾಗ ಕಾಲು ಜಾರಿ ಬಿದ್ದಿದ್ದೆ..... ನನ್ನ ತಲೆ ರೈಲುಹಳಿಗೆ ತಾಗಿತ್ತು....ಪ್ರಜ್ನೆ ತಪ್ಪಿತ್ತು.... ನನ್ನ ಸಹಪಾಠಿಗಳು ನನ್ನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು... ಎರಡು ತಿಂಗಳ ನಂತರ ನನಗೆ ಪ್ರಜ್ನೆ ಬಂದಾಗ ನಮ್ಮ ದೇಶ ಸ್ವತಂತ್ರವಾಗಿತ್ತು....ನಮ್ಮ ದೇಶದ ಧ್ವಜ ನನ್ನ ದಿಂಬಿನ ಮೇಲಿತ್ತು.... ಅದನ್ನೆತ್ತಿಕೊಂಡು ನಾನು ಹೊರಟೆ..... ನನ್ನ ಊರ ಕಡೆಗೆ..... ನನ್ನ ಹೋರಾಟ ಗುರುತಿಸಿದ ನನ್ನ ಊರು, ಸರಕಾರ ನನಗೆ ಪಿಂಚಣಿ ಕೊಡುತ್ತಿತ್ತು..... ತದ ನಂತರ ಬಂದ ಸರಕಾರದ ಭ್ರಷ್ಟತನ ಎಲ್ಲೆ ಮೀರಿತ್ತು....  ನಾವೆಲ್ಲಾ ಹೋರಾಡಿದ್ದು ಇದಕ್ಕೇನಾ ಎನ್ನುವ ಹಾಗಿತ್ತು.... ನನಗೆ  ಕೊಡುತ್ತಿದ್ದ ಪಿಂಚಣಿಯನ್ನು ತೆಗೆದುಕೊಳ್ಳಲು ಮನಸ್ಸು ಬರುತ್ತಿರಲಿಲ್ಲ.... ಊರನ್ನೇ ಬಿಟ್ಟು ಇಲ್ಲಿ ಬಂದೆ.... ಎಲ್ಲಾದರೂ ಕೇಸರಿ , ಬಿಳಿ, ಹಸಿರು ಬಣ್ಣ ಕಂಡರೆ ಹಿಂದಿನದೆಲ್ಲಾ ನೆನಪಾಗುತ್ತದೆ.... ಎದೆಯುಬ್ಬಿ ಬರುತ್ತದೆ..... ಹುತಾತ್ಮರ ಬಲಿದಾನ ನೆನಪು ಬರುತ್ತದೆ..... ರಾಷ್ಟ್ರಧ್ವಜ ಎದೆಗೊತ್ತಿಕೊಳ್ಳುತ್ತೆನೆ ಅಷ್ಟೆ" ಅಂದವರೆ ಮತ್ತೇನೂ ಹೇಳದೇ ನಡೆದುಬಿಟ್ಟರು ಹಿರಿಯರು...... ನಾನು ಅವರ ಹಿಂದೆ ಹೋಗುವ ಪ್ರಯತ್ನ ಮಾಡಲಿಲ್ಲ ಯಾಕೆಂದರೆ ಅವರ ನಡಿಗೆಯಲ್ಲಿ ಧ್ರಡತೆಯಿತ್ತು....

        ಮನೆಗೆ ಬಂದವನೇ ಇದನ್ನೆಲ್ಲಾ ಭಾಷಣ ರೂಪದಲ್ಲಿ ಬರೆದು ಮಗಳಿಗೆ ಕೊಟ್ಟೆ...  ಎರಡೆರಡು ಸಾರಿ ಬಾಯಿಪಾಠ ಮಾಡಿದ ಮಗಳು ಮಧ್ಯದಲ್ಲೇ ಒಳಗೋಡಿ ಹೋದಳು.... ನನಗೆ ಅರ್ಥ ಅಗಲಿಲ್ಲ.... ವಾಪಸ್ ಬರುವಾಗ ಅವಳ ಕೈಯಲ್ಲಿ  ಬಣ್ಣ ಬಣ್ಣದ ಪೆನ್ಸಿಲ್  ಇತ್ತು..... ಅದನ್ನು ನನ್ನ ಕೈಯಲ್ಲಿ ಇಟ್ಟಳು.... " ಅಪ್ಪಾ, ನೀವು ಹೇಳಿದ ಅಜ್ಜನಿಗೆ ಈ ಬಣ್ಣ ಅಂದ್ರೆ ಇಷ್ಟ ಅಲ್ವಾ....? ನಾಳೆ ಇದನ್ನು ಅವರಿಗೆ ಕೊಡಿ ಆಯ್ತಾ...?" ಎಂದು ಮತ್ತೆ ಸಾವಧಾನ ಸ್ಥಿತಿಯಲ್ಲಿ ನಿಂತು ಭಾಷಣದ ಬಾಯಿಪಾಠ ಮುಂದುವರಿಸಿದಳು....

ನಾನು ಕೈ ನೋಡಿಕೊಂಡೆ.... ಕೈಯಲ್ಲಿ ಮೂರು ಬಣ್ಣದ ಪೆನ್ಸಿಲ್ ಇತ್ತು.....

ಕೇಸರಿ..... ಬಿಳಿ... ಹಸಿರು....... 

21 comments:

 1. ವಾಹ್.... ಕಣ್ಣಂಚುಗಳು ತೇವವಾದವು ಸಾರ್..... ನಿಜವಾಗಿ ಅದೆಷ್ಟೋ ಮಹಾತ್ಮರು ತಮ್ಮ ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟರೂ ಬ್ರಿಟೀಷರ ಧಾಳಿಗಿಂತ ನಮ್ಮವರ ಭ್ರಷ್ಟಾಚಾರದ ಧಾಳಿ ಹೆಚ್ಚಾಯಿತಲ್ಲಾ ಅಂತ ಮನಸಿಗೆ ನೋವಾಗುತ್ತದೆ....

  ReplyDelete
 2. It is great!
  ಮನವನ್ನು ಆರ್ದ್ರಗೊಳಿಸುವ ಲೇಖನ.

  ReplyDelete
 3. ದಿನಾಕರ್...

  ಕಥೆ ಓದಿ ಭಾವುಕನಾಗಿಬಿಟ್ಟೆ..

  ನೀವು ಚಿತ್ರಿಸಿದ ಹಿರಿಯರ ಪಾತ್ರ ಅಣ್ಣಾ ಹಜಾರೆಯವರನ್ನು ನೆನಪಿಸಿತು..

  ನಮ್ಮೊಳಗಿನ ಒಳ್ಳೆಯವ ಜಾಗ್ರತನಾಗ ಬೇಕು..

  ಚಂದವಾದ ಕಥೆಗೆ ಧನ್ಯವಾದಗಳು...

  ReplyDelete
 4. nijakku anna hazaare nenapaayitu. indu avara bhandanavaagide. turtu paristitiyanthaa sannivesha namma sutta mutta balavaaguttide. bahusha innondu krantiya sanniveshakke idu munnudiyo yeno?
  tamma kathe katheyalla naijyavenisuvashttu mattige mana tattide.

  ReplyDelete
 5. ೬೫ ವರ್ಷಗಳ ಹಿಂದೆ ಬ್ರಿಟಿಷರ ಕೆಳಗೆ ನಾವು ಗುಲಾಮರು, ಇಂದು ನಮ್ಮವರ ಕೆಳಗೆ ನಾವು ಗುಲಾಮರು.. ಇದಕ್ಕೆ ಹೆಸರು ಸ್ವಾತಂತ್ರ್ಯ.


  _ನನ್ನ ಬ್ಲಾಗಿಗೂ ಬನ್ನಿ.:ಚಿಂತನಾ ಕೂಟ

  ReplyDelete
 6. ಅಣ್ಣಾ, ಇದೊಂದು ಮನಸ್ಸನ್ನ ಆರ್ದ್ರಗೊಳಿಸುವ, ಅವಲೋಕನಕ್ಕೆ ದಾರಿ ಮಾಡುವ ಕಥೆ. ತುಂಬಾ ಇಷ್ಟಾ ಆಯ್ತು. ನೀವು ಕಥೆ ಹೇಳುವ ಶೈಲಿಯಂತೂ ಸೂಪರ್. ಥ್ಯಾಂಕ್ಸ್.

  ReplyDelete
 7. ದಿನಕರ್;ಸುಂದರ ಕಥೆ.ಮನಸ್ಸು ಭಾರವಾಯಿತು.

  ReplyDelete
 8. ಕಥೆ ತುಂಬಾ ಚೆನ್ನಾಗಿದೆ ದಿನಕರ್ ಸಾರ್...

  ರಾಷ್ಟ್ರೀಯ ಭಾವ ತುಂಬಿ ತುಳುಕಿದೆ..

  ಅಜ್ಜನ ಪಾತ್ರ ಹಾಗು ಕಥೆ ತುಂಬಾ ಹಿಡಿಸಿತು

  ReplyDelete
 9. ಕಥೆ ತುಂಬಾ ಚೆನ್ನಾಗಿದೆ..
  ಧನ್ಯವಾದಗಳು

  ReplyDelete
 10. ದಿನಕರ್ ತುಂಬಾ ಒಳ್ಳೆಯ ಲೇಖನ. ಪ್ರಾರಂಭದಿಂದ ಅಂತ್ಯದವರೆಗೂ ಮನಸನ್ನು ಹಿಡ್ತ್ತ ಲೇಖನ. ಮನಸ್ಸು ಭಾರವಾಯಿತು. ನಿಮಗೆ ಜೈ ಹೋ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 11. kathyanna nirupane haage barediddeeraa..indina vaastavada chitrana swatantra horaatagarara prayatnakke ondu kappu chukkiyante! ishta aaytu Dinakar!

  ReplyDelete
 12. ಅಭಿನ೦ದನೆಗಳು ದಿನಕರ್, ಸ್ವಾತ೦ತ್ರ್ಯೋತ್ಸವಕ್ಕೆ ಉತ್ತಮ ಕೊಡುಗೆ. ಕಥಾ ಹ೦ದರ ಮತ್ತು ನಿರೂಪಣೆ, ಎರಡೂ ಸೊಗಸಾಗಿದೆ.

  ಅನ೦ತ್

  ReplyDelete
 13. Great story !!!Hats off to all those who has lost thier lives for Indian independence....

  ReplyDelete
 14. ದಿನಕರ್,
  ವಿಚಾರಯೋಗ್ಯ ಬರಹ..
  ಮನಕ್ಕೆ ತಾಟುವ ಕತೆ

  ReplyDelete
 15. ಕತೆ ನನ್ನನ್ನು ಭಾವುಕನಾಗಿಸಿತು...ಸುಂದರ ನಿರೂಪಣೆ....ಇಷ್ಟ ಆಯಿತು ಸರ್....

  ReplyDelete
 16. " ಈ ಮೂರು ಬಣ್ಣದ ಕಾಗದಕ್ಕಾಗಿ ಎಷ್ಟೋ ಜನ ತಮ್ಮ ಪ್ರಾಣ ಬಿಟ್ಟಿದ್ದಾರೆ ಗೊತ್ತಾ...? ತಮ್ಮ ಮನೆ, ಮಠ, ಕುಟುಂಬ ಬಿಟ್ಟು ಈ ದೇಶವನ್ನು ಮುಕ್ತಿಗೊಳಿಸಲು ಹೋರಾಡಿದ್ದಾರೆ ಗೊತ್ತಾ...?" ಈ ಒ೦ದು ಹೇಳಿಕೆಯನ್ನು ಆಧರಿಸಿ ಕಥೆ ರೂಪುಗೊ೦ಡಿದೆ. ಕಥೆ ಎನ್ನುವುದಕ್ಕಿ೦ತಲೂ ನಮ್ಮೆದುರೇ ನಡೆಯುತ್ತಿರುವ ನಿಜ ಘಟನೆಯ೦ತೆ ನಿರೂಪಿಸಿದ್ದೀರಿ ದಿನಕರ್. ಮನವನ್ನು ಒ೦ದುಕ್ಷಣ ಮೂಕವಾಗಿಸಿದ ಈ ಬರಹಕ್ಕಾಗಿ ಧನ್ಯವಾದಗಳು.

  ReplyDelete
 17. ಮನಕಲಕುವ ಘಟನೆ. ಆದರೆ ನೀವು ಆ ವ್ಯಕ್ತಿಯ ಪೂರ್ಣ ಪರಿಚಯ ಮಾಡಿಕೊಂಡು ನಮಗೂ ಪರಿಚಯಿಸಬೇಕಿತ್ತು ಎಂದು ಅನ್ನಿಸುತ್ತದೆ. ಮುಂದೊಮ್ಮೆ ಸಾಧ್ಯವಾದರೆ ಆ ವ್ಯಕ್ತಿಯನ್ನು ಪರಿಚಯಿಸಲು ಕೋರುವೆ.
  ನನ್ನ 'ಕವಿಮನ'ತಾಣದಲ್ಲಿ ಮರೆತುಹೋಗಿರುವ ಮತ್ತು ಹೆಚ್ಚನವರಿಗೆ ತಿಳಿದಿರದ ಧೊಂಡಿಯ ವಾಘ ಎಂಬ ಹೋರಾಟಗಾರನ ಬಗ್ಗೆ ಬರೆದಿರುವೆ. ತಾವು ಒಮ್ಮೆ ಓದಿ ಅಭಿಪ್ರಾಯ ದಾಖಲಿಸಬಹುದೆ?

  ReplyDelete
 18. ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆಯಿರಲಿ.

  ವಾವ್, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿದ ಲೇಖನ ಸಾರ್.

  ಕಣ್ಣೂ, ಮನವೂ ದ್ರವಿಸಿ ಹೋಯಿತು. ಭಾವುಕನಾಗಿ ಹೋದೆ. ಕಥೆಯ ವಸ್ತು, ಅದರ ನಿರೂಪಣೆ, ಬಾಷಾ ಬಳಕೆ ಮತ್ತು ಸರಳತೆ ಮನ ಮುಟ್ಟಿತು.

  ಸೂಪರ್ ಸಾರ್!

  ReplyDelete
 19. ಒಂದು ವಿಷಯ ದಿನಕರರೇ, ಕಥೆ ಮಾರ್ಮಿಕವಾಗಿದೆ ಆದರೆ ಆಗಿನ ಸ್ವಾತಂತ್ರ್ಯಾ ನಂತರದ ತಕ್ಷಣದ ಸರಕಾರದಲ್ಲಿ ಪಿಂಚಣಿ ವ್ಯವಸ್ಥೆ ಇರಲಿಲ್ಲ, ಅಂದಿನ ಯಾವ ಹೋರಾಟಗಾರನೂ ಅದನ್ನು ಬಯಸಲೂ ಇಲ್ಲ, ಅವರು ದುಡ್ಡಿಗಾಗಿ ಬದುಕಲಿಲ್ಲ;ದೇಶಕ್ಕಾಗಿ ಬದುಕಿದರು, ಇನ್ನೊಂದು ಚಿಕ್ಕ ಅನಿಸಿಕೆ ಒಬ್ಬನನ್ನು ಗುಂಡುಹಾರಿಸಿ ಕೊಂದ ಬ್ರಿಟಿಷ್ ಜನ ಪಕದಲ್ಲೇ ಇನ್ನೊಬ್ಬನನ್ನು ಬಿಟ್ಟಿದ್ದು ಕಡಿಮೆ, ಈ ಎರಡು ಅಂಶಗಳು ನನ್ನ ಗಮನಕ್ಕೆ ಬಂದವು, ಒಬ್ಬ ವಿಮರ್ಶಕನ ಮನಸ್ಸಿಟ್ಟು ನೋಡಿದ್ದೇನೆ. ಉಳಿದಂತೆ ಕಥೆ ಚಿಕ್ಕದಾಗಿ ಚೆನ್ನಾಗಿದೆ, ಶುಭಮಸ್ತು.

  ReplyDelete
 20. sundara kathe sir, kannu bhavuka aytu

  tadavaagi odta idini kshamisi :)

  ReplyDelete