Oct 22, 2010

ನನ್ನದೇನು ತಪ್ಪು....?

ಕೆಲಸ ಮಾಡಿ ಮಾಡಿ ಸುಸ್ತಾಗಿತ್ತು....  ತಿಂಗಳ ನಂತರ ಹೆಂಡತಿ ಮಕ್ಕಳನ್ನು ನೋಡಲು ಹೋಗುವವನಿದ್ದೆ ಈ ದಿನ.....  ಪೇಪರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ..... ತಿಂಗಳಿಗೊಮ್ಮೆ ರಜೆ ಸಿಗುತ್ತಿತ್ತು..... ಊರಿಗೆ ಹೋಗಲು ಹತ್ತು ಘಂಟೆ ಪ್ರಯಾಣ ಮಾಡಬೇಕಿತ್ತು..... ಕೆಲಸ ಬಿಡುವ ಸಮಯ ಆಗುತ್ತಲಿದ್ದರಿಂದ ಗಮನವೆಲ್ಲಾ ಗಡಿಯಾರದ ಮೇಲೆಯೆ ಇತ್ತು..... ಕೊನೆಗೂ ಸಮಯಕ್ಕೆ ಸರಿಯಾಗಿ ಬಿಟ್ಟಿದ್ದರಿಂದ ಓಡುತ್ತಾ ರೂಮಿಗೆ ಬಂದು ಊರಿಗೆ ಹೋಗಲು ಬೇಕಾದ ಸಾಮಾನೆಲ್ಲಾ ಬ್ಯಾಗ್ ಗೆ ಹಾಕಿದೆ...... ಮಗನಿಗೆ ತೆಗೆದುಕೊಂಡಿದ್ದ ಅಂಗಿಯನ್ನು ಮುದ್ದಿಸಿ ಚೀಲಕ್ಕೆ ಹಾಕಿದೆ..... ಹಿಂದಿನ ವಾರ ಪೇಟೆಗೆ ಹೊಗಿದ್ದಾಗ ತೆಗೆದುಕೊಂಡಿದ್ದ ಕಪ್ಪು ಬ್ಯಾಗ್ ತುಂಬಾ ಇಷ್ಟಪಟ್ಟು ಕೊಂಡಿದ್ದೆ...... ನನ್ನ ಹೆಂಡತಿಯ ಇಷ್ಟದ ಬಣ್ಣ ಅದು..... ಈ ಸಾರಿ ಬರುವಾಗ ಮಗನಿಗೆ ಸಣ್ಣದೊಂದು ಅಲಾರಾಂ ಇರುವ ಗಡಿಯಾರ ತರಲು ಹೇಳಿದ್ದಳು..... ಮಗನಿಗೆ ಬೆಳಿಗ್ಗೆ ಬೇಗನೆ ಎದ್ದು ಓದಲು ಅನುಕೂಲ ಆಗಲಿ ಎಂದು ಆಕೆಯ ಆಶೆಯಾಗಿತ್ತು..... ಚಿಕ್ಕದಾದ ಗಡಿಯಾರ  ಟಿಕ್ ಟಿಕ್ ಎಂದು ಸದ್ದು ಮಾಡುತ್ತಾ ಮುದ್ದಾಗಿತ್ತು.... " ಹೇಯ್ ರಷೀದ್.... ಟೈಮ್ ಆಗ್ತಾ ಇದೆ ಬಾರೋ..... ಬಸ್ ಸಿಗಲ್ಲ ಮತ್ತೆ..... " ಪಕ್ಕದ ರೂಮಿನಿಂದ ಗೆಳೆಯ ಕರೆಯುತ್ತಿದ್ದ...... ಮುಖ ತೊಳೆಯಲೂ ಹೋಗಲಿಲ್ಲ.... ಹಾಕಿಕೊಂಡಿದ್ದ ಅಂಗಿ ,ಪ್ಯಾಂಟ್ ಬದಲಾಯಿಸಲೂ ಹೋಗಲಿಲ್ಲ...... ಬ್ಯಾಗ್ ಹೆಗಲಿಗೆ ತೂಗುಹಾಕಿಕೊಂಡವನೇ ಗೆಳೆಯನ ರೂಮಿಗೆ ಓಡಿದೆ..... ಅವನ ರೂಮಿನಲ್ಲಿ ಟಿವಿಯಲ್ಲಿ ದೊಡ್ಡದಾದ ಸದ್ದಿನಲ್ಲಿ ಸುದ್ದಿ ಬರ್ತಾ ಇತ್ತು...... " ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ... ಹಲವರಿಗೆ ಗಾಯ..... ದುಷ್ಕರ್ಮಿಗಳಿಗಾಗಿ ಹುಡುಕಾಟ.." ಎಂದೆಲ್ಲಾ ಒದರುತ್ತಿತ್ತು ಟಿ.ವಿ...... ನಾನು ಒಂದು ಕ್ಷಣ ಗಾಬರಿಯಾದೆ..... ಒಂದು ಬಾಂಬ್ ಎಲ್ಲೇ  ಸ್ಫೊಟವಾದರೂ ಸಮಸ್ಯೆಯಾಗುವುದು ನಮ್ಮಂಥ ಪಾಪದವರಿಗೆ...... ಅದರಲ್ಲೂ ಬಡ ಜನರು, ದಿನಗೂಲಿ ಮಾಡುವವರಿಗೆ ಇದೊಂದು ದೊಡ್ಡ ಶಾಪವಾಗಿತ್ತು..... ಎಲ್ಲೇ ಬಾಂಬ್ ಬಿದ್ದರೂ ಅನುಮಾನ ಶುರುವಾಗೋದು ಮುಸ್ಲೀಮರ ಮೇಲೇ..... ಮೊದಲೆಲ್ಲಾ ದೂರದಲ್ಲಿ ಬಾಂಬ್ ಬೀಳುತ್ತಿತ್ತು, ಇಲ್ಲಿ ಅಷ್ಟೇನೂ ಪರಿಣಾಮ ಬೀರುತ್ತಿರಲಿಲ್ಲ... ಈಗ ಮಾತ್ರ ಬುಡಕ್ಕೇ ಬಿದ್ದಿತ್ತು ಬಾಂಬ್..... ಈಗ ಇಲ್ಲೆಲ್ಲಾ ಏನೇನ್ ಸಮಸ್ಯೆ ಆಗುವುದಿದೆಯೊ ಅನಿಸಿ ಭಯ ಶುರು ಆಗಿತ್ತು.... ಗೆಳೆಯ ಬಂದು ಕೈಹಿಡಿದು ಎಳೆದುಕೊಂಡು ಹೋಗಿರದಿದ್ದರೆ ನಾನು ಅಲ್ಲೇ ನಿಂತಿರುತ್ತಿದ್ದೆ.....

ಮನಸ್ಸು ಗೊಂದಲದ ಗೂಡಾಗಿತ್ತು..... ಯಾಕೆಲ್ಲಾ ಇದನ್ನೆಲ್ಲಾ ಮಾಡುತ್ತಾರೋ ಜನ..... ಇದನೆಲ್ಲಾ ಸಮರ್ಥನೆ ಮಾಡಿಕೊಳ್ಳುವ ಜನರೂ ಇದ್ದಾರೆ.... ಅವರವರ ಭಾವಕ್ಕೆ ತಕ್ಕ ಹಾಗೆ ಯೋಚನೆ ಮಾಡುತ್ತಾರೆ.... ಸಮಸ್ಯೆ ನಮ್ಮಂಥ ಜನ ಸಾಮಾನ್ಯರಿಗೆ.... ಸೂತ್ರಧಾರರು ಎಲ್ಲೋ ಕುಳಿತು ಇದನ್ನೆಲ್ಲಾ ಮಾಡಿಸುತ್ತಾರೆ.... ಅವರ ಸೂತ್ರಕ್ಕೆ ಕುಣಿಯುವ ಗೂಬೆಗಳು , ಅವರ ಆಮಿಷಕ್ಕೆ ಒಳಗಾಗಿ ಇದನ್ನೆಲ್ಲಾ ಮಾಡುತ್ತಾರೆ.... ಇವೆಲ್ಲದರ ನೇರ ಪರಿಣಾಮ ನಮ್ಮಂಥ ಬಡಪಾಯಿ ಮುಸಲ್ಮಾನರ ಮೇಲೆ ಆಗತ್ತೆ ಅನ್ನೋದು ಇದನ್ನೆಲ್ಲಾ ಮಾಡಿಸುವ ಖದೀಮರಿಗೆ ಅರ್ಥಾನೇ ಆಗಲ್ಲ..... ಹಿಂದಿನ ಸಾರಿ ದೆಹಲಿಯಲ್ಲಿ ಬಾಂಬ್ ಹಾಕಿದ್ದಾಗ ನನ್ನ ಕೆಲವು ಗೆಳೆಯರು ಮುಸ್ಲೀಂ ಎಂದು ಗೊತ್ತಾಗದಿರಲಿ ಅಂತ ಗಡ್ಡ ಬೋಳಿಸಿದ್ದರು..... ನಾನು ಮಾತ್ರ ಯಾವುದೊ ತಲೆ ಕೆಟ್ಟ ಜನರ ಮನೆಹಾಳ ಕೆಲಸಕ್ಕೆ ಹೆದರಿ ನಾನು ಗಡ್ಡ ಬೋಳಿಸಲು ತಯಾರಾಗಿರಲಿಲ್ಲ.....    ನಾನು ಮುಸ್ಲಿಂ ಎಂದು ಗೌರವ ಪಟ್ಟುಕೊಳ್ಳಲು ತುಂಬಾ ಜನ ಮಹಾತ್ಮರು ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ... ನಾನು ಆ ಜನರ ಗುಂಪಿಗೆ ಸೇರಿದ್ದೇನೆಯೆ ಹೊರತು..... ಯಾರೋ ದೇಶದ್ರೋಹಿಗಳ ಮತಕ್ಕೆ ಸೇರಿದವನಲ್ಲ ಎಂದು ಸಾರಬೇಕಿತ್ತು..... ಕೈಯಿ ನನ್ನ ಎದೆಮಟ್ಟದ ಗಡ್ಡವನ್ನು ಸವರುತ್ತಿತ್ತು.... ಬೇಗ  ಬಸ್ ಬಂದು ಎಷ್ಟು ಬೇಗ ಊರು ಸೇರುತ್ತೇನೋ ಎನ್ನುವ ಹಾಗಾಗಿತ್ತು......

ಹಿಂದಿನ ಊರಿಂದ ಬರಬೇಕಿದ್ದ ಬಸ್ ಸ್ವಲ್ಪ ತಡವೇ ಆಗಿತ್ತು..... ಆಗೀಗ ಸೈರನ್ ಹಾಕಿಕೊಂಡು ಬರುವ ಪೋಲಿಸ್ ಜೀಪುಗಳು ನಡುಕ ಹುಟ್ಟಿಸುತ್ತಿದ್ದವು.... ತಪ್ಪೇ ಮಾಡದೇ ಇದ್ದರೂ ಯಾಕೆ ಹೆದರಿಕೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತಿರಲಿಲ್ಲ..... ಅಂಗಿ ಕೊಳಕಾಗಿತ್ತು.... ಪ್ಯಾಂಟ್ ಸಹ ಕೊಳಕಾಗಿತ್ತು...... ಮನೆಗೆ ಹೋಗುವ ಗಡಿಬಿಡಿಯಲ್ಲಿ ಎಲ್ಲವನ್ನೂ ಮರೆತು ಹಾಗೇ ಓಡಿ ಬಂದಿದ್ದೆ.... ಗೂಡಾ ಅಂಗಡಿಯವ ಚಾ ಕೊಡುವಾಗಲೂ ಒಂಥರಾ ಮುಖ ಮಾಡಿಕೊಂಡಿದ್ದ..... ನನ್ನ ಅಂಗಿ ಪ್ಯಾಂಟ್ ಕೊಳಕಾಗಿದ್ದನ್ನ ಮತ್ತೆ ನನ್ನ ಕೈಲಿದ್ದ ಕಪ್ಪು ಬ್ಯಾಗನ್ನ ನೋಡಿ ಆತ ನನ್ನ  ಬಗ್ಗೆ ತಪ್ಪು ತಿಳಿದಿರಬೇಕು ಎಂದುಕೊಂಡು ಸಮಾಧಾನ ಮಾಡಿಕೊಂಡೆ....  ತಡವಾಗಿ ಬಂದ ಬಸ್ನಲ್ಲಿ ಜನ ತುಂಬಿಹೋಗಿದ್ದರು...... ನಾನು ಅದರಲ್ಲೇ ತೂರಿಕೊಂಡು ಒಳಗೆ ಹೋದೆ.......

ನನ್ನಷ್ಟಕ್ಕೆ ಒಳಗೆ ಹೋದವನೇ ನನ್ನ ಬ್ಯಾಗ್ ಇಟ್ಟೆ...... ಎಲ್ಲರೂ ನನ್ನನ್ನೇ ನೋಡುತ್ತಿದ್ದರು..... ನನ್ನ ಗಡ್ಡವನ್ನೊಮ್ಮೆ, ನನ್ನ ಕಪ್ಪು ಬ್ಯಾಗನ್ನೊಮ್ಮೆ ದುರುಗುಟ್ಟಿ ನೋಡುತ್ತಿದ್ದರು...... ನಾನು ತಲೆ ತಗ್ಗಿಸಿ ನಿಂತೆ....... ಎಲ್ಲರ ಮುಖದಲ್ಲಿನ ದ್ವೇಷ, ಸಿಟ್ಟು ತಿರಸ್ಕಾರ ರಾಚುತ್ತಿತ್ತು.... ಅದರಲ್ಲಿ ಒಬ್ಬ " ಇಲ್ಲಿನ ಗಾಳಿ, ನೀರು ಬೇಕು.... ಉಳಿಯಲು ಜಾಗವೂ ಬೇಕು... ಆದ್ರೆ ನಿಷ್ಟೆ ಮಾತ್ರ ಪಾಕಿಸ್ತಾನಕ್ಕೆ ಯಾಕೆ...? " ಎನ್ನುತ್ತಿದ್ದ...... ನನ್ನ ಮನಸ್ಸಲ್ಲೂ ಇದೇ ಪ್ರಶ್ನೆ ಕಾಡುತ್ತಿತ್ತು...... ಆದರೆ ಉತ್ತರ ಯಾರಿಂದ ಪಡೆಯಲಿ ........?.. ಇನ್ನೊಬ್ಬ " ಯಾರನ್ನೂ ನಂಬುವ ಹಾಗಿಲ್ಲ..... ಉಣ್ಣುವ ಮನೆಗೆ ಬಾಂಬ್ ಹಾಕುವವರು ಎಲ್ಲಾ ಕಡೆ ಇದ್ದಾರೆ...." ಆತನ ಕಣ್ಣು ನನ್ನನ್ನೇ  ನೋಡುತ್ತಿತ್ತು..... ನನ್ನಲ್ಲಿ ಉತ್ತರ ಇರಲಿಲ್ಲ...... ಕಂಡಕ್ಟರ್ ಬಂದು ಟಿಕೇಟ್ ಕೇಳಿದ..... " ಭಟ್ಕಳಕ್ಕೆ ಒಂದು ಟಿಕೇಟ್ " ಎಂದೆ.....  ಆತ ನನ್ನನ್ನು ಮೇಲಿಂದ ಕೆಳಗಿನವರೆಗೂ  ನೋಡಿ ಟಿಕೇಟ್ ಕೊಟ್ಟ...... ಯಾರೋ ಫೋನಿನಲ್ಲಿ ಮಾತನಾಡುತ್ತಾ ಇದ್ದರು.." ಹೌದಾ...? ಇಬ್ಬರು ಸತ್ತರಂತಾ...? ಬೇರೆ ಕಡೆಯೂ ಬಾಂಬ್ ಹಾಕುವ ಸುದ್ದಿ ಇದೆಯಂತಾ...? ಈ ಮಕ್ಕಳನ್ನೆಲ್ಲಾ ಸುಟ್ಟುಬಿಡಬೇಕು...." ಎಂದೆಲ್ಲಾ ಅಬ್ಬರಿಸುತ್ತಿದ್ದ..... ಫೋನಿನಲ್ಲಿ ಮಾತು ಮುಗಿಸಿದವನೇ ಆತ " ಎಲ್ಲಾ ಕಡೆ ಬಾಂಬ್ ಹಾಕಬಹುದಂತೆ.... ಆ ಬ....ಮಕ್ಕಳ ಗ್ಯಾಂಗ್ ಎಲ್ಲಾ ಕಡೆ ಇದೆಯಂತೆ....ಜನರೆಲ್ಲಾ ಅನುಮಾನ ಬಂದಲ್ಲೆಲ್ಲಾ ಪೋಲಿಸರಿಗೆ ತಿಳಿಸಬೇಕಂತೆ.... ಈಗಾಗಲೇ ಬಾಂಬ್ ಎಲ್ಲಾ ಕಡೆ ಸಪ್ಲೈ ಆಗಿದೆಯಂತೆ.... ಇನ್ನು ಸ್ಫೋಟ ಆಗೊದೊಂದೇ ಬಾಕಿಯಂತೆ...." ಎಂದೆಲ್ಲಾ ಕೂಗುತ್ತಿದ್ದ...... ನನಗೆ ಮನೆಯಲ್ಲಿ ನನಗಾಗಿ ಕಾಯುತ್ತಿದ್ದ ಹೆಂಡತಿ ಮಕ್ಕಳ ನೆನಪಾಯಿತು.....


ಊಟದ ಸಲುವಾಗಿ ಡ್ರೈವರ್ ಬಸ್ಸನ್ನು ನಿಲ್ಲಿಸಿದ..... ನಾನು ದೊಡ್ಡದಾದ ಉಸಿರು ಬಿಟ್ಟು ಹೊರಗೆ ಬಂದೆ..... ಕೆಳಗೆ ಇಳಿಯುತ್ತಿದ್ದವರೆಲ್ಲಾ ನನ್ನ ಬ್ಯಾಗ್ ಕಡೆ ನೋಡುತ್ತಾ ಇಳಿಯುತ್ತಲಿದ್ದರು..... ನನಗೆ ಒಂದೂ ತಿಳಿಯುತ್ತಿರಲಿಲ್ಲ..... ಬೇಗನೇ ಊಟ ಮುಗಿಸಿ ಬಸ್ ಒಳಗೆ ಬಂದೆ..... ಅಲ್ಲಿ ಕುಳಿತವರೆಲ್ಲಾ ನನ್ನನ್ನು ನೋಡುತ್ತಲಿದ್ದರು.... ಕೆಲವರು ನನ್ನ ಬ್ಯಾಗ್ ಕಡೆ ನೋಡುತ್ತಾ ಮಾತನಾಡುತ್ತಿದ್ದರು...... ನಾನೂ ಗಮನವಿಟ್ಟು ಕೇಳಿದೆ.... ಟಿಕ್.... ಟಿಕ್.... ಟಿಕ್ ಎನ್ನುವ ಶಬ್ಧ ಬರುತ್ತಾ ಇತ್ತು...... ಎಲ್ಲಿಂದ ಅಂತ ಗೊತ್ತಿರಲಿಲ್ಲ....ಕೆಲವರು ಆಗಲೇ ಬಸ್ ಕೆಳಗಿಳಿಯಲು ಶುರು ಮಾಡಿದ್ದರು..... ನನಗೂ ಹೆದರಿಕೆ ಶುರು ಆಗಿತ್ತು.... ನನಗೆ ಗೊತ್ತಿಲ್ಲದೇ ಕೈಯಿ ನನ್ನ ಬ್ಯಾಗ್ ಎತ್ತಿಟ್ಟುಕೊಂಡಿತ್ತು.....  ಬ್ಯಾಗ್ ಎದೆಗವಚಿ ಇಟ್ಟುಕೊಂಡೆ...... ಹಿಂದೆ ಮುಂದೆ ಯೋಚಿಸದೇ ಕೆಳಗಿಳಿದು ಬಿಟ್ಟೆ.... ನಾನು ಕೆಳಗೆ ಇಳಿದದ್ದೇ ತಡ... ಎಲ್ಲರೂ ಬಸ್ ಹತ್ತಿದರು...... ನಾನು ಅರ್ಥವಾಗದೇ ಅಲ್ಲೇ ನಿಂತೆ..... ಟಿಕ್ ಟಿಕ್ ಶಬ್ಧ ನಿಂತಿರಲಿಲ್ಲ....... ಬಸ್ ಹೊರಟೇಬಿಟ್ಟಿತು...... ಟಿಕ್ ಟಿಕ್ ಶಬ್ಧ ಇನ್ನೂ ಹತ್ತಿರವಾದಂತಿತ್ತು....... ಆಗ ನೆನಪಾಯಿತು.... ಬ್ಯಾಗ್ನಲ್ಲಿದ್ದ ಮಗನಿಗಾಗಿ ಕೊಂಡ ಗಡಿಯಾರ......... ಬ್ಯಾಗ್ ಓಪನ್ ಮಾಡಿ ಹೊರ ತೆಗೆದೆ....... ಮಗನ ಮುದ್ದು ಮುಖ ನೆನಪಾಗಿ ಗಡಿಯಾರಕ್ಕೆ ಮುತ್ತು ಕೊಟ್ಟೆ..... ಯಾರೋ ಮಾಡಿದ ತಪ್ಪಿಗೆ ಯಾರನ್ನೋ ಅನುಮಾನದಿಂದ ನೋಡುವ ಜಗತ್ತಿನ ಬಗ್ಗೆ ಯೋಚಿಸಿ ನಗು ಬಂತು.....

ಬೆನ್ನ ಹಿಂದೆ ಪೋಲಿಸ್ ಸೈರನ್ ಹತ್ತಿರವಾಗುತ್ತಿತ್ತು.........

34 comments:

  1. ದಿನಕರಣ್ಣ,
    ಒಂದು ರೋಚಕ ಕಥೆ. ಹಾಗೇನೆ ಎಷ್ಟೊಂದು ಸತ್ಯಕ್ಕೆ ಹತ್ತಿರವಾಗಿದೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಅನುಭವಿಸಬೇಕು.
    ಕೆಲವೊಮ್ಮೆ ನಮ್ಮದು ತಪ್ಪಿಲ್ಲದಿದ್ದರೂ ,ಹತ್ತು ಜನ ನಿನ್ನದೇ ತಪ್ಪು ಅಂತ ಹೇಳಿದಾಗ ಇರಬಹುದೇನೋ ಅನ್ನಿಸಿಬಿಡುತ್ತದೆ.
    ರಶೀದ್ ನ ಆತಂಕ ಆತನ ಅಸಹಾಯಕತೆ ಉತ್ತಮವಾಗಿ ಚಿತ್ರಣಗೊಂಡಿದೆ. ದ್ರೋಹಿಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದವರಲ್ಲ,ಅಸಲಿಗೆ ಅವರಿಗೊಂದು ಧರ್ಮವಿಲ್ಲ.
    ಒಂದೇ ಉಸಿರಿನಲ್ಲಿ ಓದಿಸಿಕೊಳ್ಳುವ ತೀವ್ರತೆ ಕಥೆಯಲ್ಲಿದೆ, ಮತ್ತೇನು ಹೇಳಲಿ. .

    ReplyDelete
  2. ದಿನಕರ್ ಸರ್,

    ವಾಸ್ತವಕ್ಕೆ ತುಂಬಾ ಹತ್ತಿರವಾದ ಘಟನೆಯಿದು ಎನ್ನಿಸುತ್ತದೆ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆಯೆನ್ನುವಂತೆ, ಇಲ್ಲಿ ಆತ ಅನುಭವಿಸಿದ ಮಾನಸಿಕ ಶಿಕ್ಷೆಯನ್ನು ಗಮನಿಸಿದಾಗ ಮನಸ್ಸಿಗೆ ಬೇಸರವಾಯಿತು...

    ReplyDelete
  3. ನಿಮ್ಮ ಕತೆ ಸೈರೆನ್ ಗೆ ಅಂತ್ಯವಾದರೆ ನನ್ನ ಮಾತು ಸುರು ಆಗೂದೆ ಅಲ್ಲಿಂದ !!!!!!
    ನಾನು ಯಾವುದೋ ಒಂದು ಒಳ್ಳೆದಿನ ಹೇಳಿ ರವಿವಾರ ಬೆಳಗೆ ೧೧ ಸುಮಾರಿಗೆ ಶಿರಸಿ ಬಿಟ್ಟೆ ,ಚಿಕ್ಕಮಗಳೂರಿಗೆ ೭-೮ ತಾಸಿನ ದಾರಿ . ಪದೇ ಪದೇ ಬಸ್ ಬದಲು ಮಾಡುವ ಚಟದಿಂದ ,ಸಾಗರಕ್ಕೆ ಬಂದು ಉಂಡು ಶಿವಮೊಗ್ಗಕ್ಕೆ ಎಂದು ಹಾಸನ ಗಾಡಿ ಹತ್ತಿದೆ . ನನ್ನೊಡನೆ ಹತ್ತಿದ ಒಬ್ಬ ಮಹಾನುಭಾವ "ಭದ್ರಾವತಿ ಎಸ್ಟ್ ಹೊತ್ತಿಗೆ ಹೋಗ್ತಿರ್ರೀ? " ಎಂದ .ಅದಕ್ಕೆ ನಮ್ಮ ಕಂಡಕ್ಟರ್ "ಕರೆಕ್ಟ್ ೫:೩೦ ಕ್ಕೆ ಸಾರ್ "ಎಂದ . ಬಾಯಿಮಾತಲ್ಲಾದರೂ ಹೇಳಿದನಲ್ಲ ಎಂದು ತುಸು ನಕ್ಕೆ ....... ಸರಿ ಅಂತೂ ಇಂತೂ ಆಕಳಿಸುತ್ತಾ ಶಿವಮೊಗ್ಗ ಬಸ್ ಸ್ಟ್ಯಾಂಡ್ ತಲುಪಿದೆ .ಅಲ್ಲಿ ಜನವೋ ಜನ ,ಏಕೆ ಎಂದು ಕೇಳಿದಾಗ "ಏನೋ ಹಿಂದೂ ಮುಸ್ಲಿಂ ಜಗಳವಂತೆ,ಕಿಡಿಗೇಡಿಗಳ ಕೆಲಸವಂತೆ " ಎಂದರು .ಸರಿ ಏನೂ ಮಾಡಲು ತಿಳಿಯದೆ ಅವರಿವರಿಗೆ ಸುಮ್ಮನೆ ಮೆಸ್ಸೇಜು ಮಾಡುತ್ತಾ ಕುಳಿತೆ ..ನೋಡು ನೋಡುತ್ತಿದ್ದಂತೆ ಯಾವುದೋ ಕಟ್ಟಡಕ್ಕೆ ಬೆಂಕಿ ಹತ್ತಿ ಉರಿಯಿತು ,ನನ್ನ ಮನದಲ್ಲೋ ಸೈರನ್ ಹೊಡೆಯಿತು .
    ಬೇಡ ಬೇಡ ಎಂದುಕೊಂಡರೂ ಅಮ್ಮನಿಗೆ ಕರೆ ಮಾಡಿ ಹೇಳಿದ್ದಕ್ಕೆ ,ಯಾವುದೂ ನೆಂಟರ ಮನೆಗೆ ಹೋಗಿ ಉಳಿದು ಕೊಳ್ಳುವ ವ್ಯವಸ್ತೆ ಆಯಿತು ......ಆಗ ಸಮಯ ೬:೩೦ (ಇನ್ನು ಭದ್ರಾವತಿಗೆ ೫.೩೦ಕ್ಕೆ ಹೋಗುವೆ ಎನ್ದವನನ್ನು ಇನ್ನೂ ಹುಡುಕುತ್ತಿದ್ದೇನೆ !!!! )ಸರಿ ಅಲ್ಲಿಂದ ,ಎಲ್ಲ ಮುಸ್ಲಿಮರಿಗೂ ಹಿಂದುಗಳಿಗೂ ಬೈದು ನೆಂಟರ ಮನೆಗೆ ತಲುಪಿದಾಗ ಅಲ್ಲಿದ್ದ ಕೂಸೆನ್ದಳು "ಅಪ್ಪ ನಾನು ಗಲಾಟೆ ಶುರು ಆತು ಹೇಳಿ ಫಾತಿಮಾನ ಮನೆಗೆ ಹೋಗಿದ್ದೆ ,ಸ್ವಲ್ಪ ಹೊತ್ತು ಬಿಟ್ಟು ನಿಂಗೆ ಫೋನು ಮಾಡಿದಿ !!!!!!"
    ಇವಿಷ್ಟು ಈ ಲೇಖನಕ್ಕೆ ಪ್ರತಿಕ್ರಿಯೆ .
    ನನ್ನ ಪೂರ್ತಿ ಕತೆ ಓದಲು ,ಬನ್ನಿ ನನ್ನ ಚೌಕಿಗೆ
    http://chinmaysbhat.blogspot.com

    ReplyDelete
  4. ದಿನಕರ್ ಸರ್,
    ನಿಮ್ಮ ಕಥಾ ನಾಯಕ ರಶೀದ ನ ಆತಂಕ ಭಯ ಹಾಗೂ ಅವನ ಅಸಹಾಯಕತೆ ಯನ್ನು ಚೆನ್ನಾಗಿ ಬರೆದಿದ್ದೀರಿ..ನಿಜವಾಗಿ ನಡೆದ ಘಟನೆ ಇರಬಹುದೇನೋ ಅಂತ ಅನಿಸಿ ಬೇಜಾರಾಯ್ತು..ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತೆವಲ್ವಾ!

    ReplyDelete
  5. ಪದವಿ ಮುಗಿಸುವವರೆಗೆ ನನಗೂ “ಅದೇ” ಭಾವನೆಯಿತ್ತು..ನಂತರ ನಿಧಾನಕ್ಕೆ ಆ ಭಾವನೆ ಅಳಿಸಿ ಹೋಯಿತು..
    ಒಂದು ಕಡೆ ಬಹು ಭಾಷಾ ವಿದ್ವಾನ್ “ಶ್ರೀ ಶತಾವಧಾನಿ ಆರ್ ಗಣೇಶ್”ಹೇಳಿದ ಮಾತು ಲೇಖನ ಓದಿದಾಗ ನೆನೆಪಾಯಿತು.”ಕಾಲ ಬದಲಾಗ್ತಾ ಇದ್ಯಲ್ಲಾ”ಅನ್ನೋ ಪ್ರಶ್ನೆಗೆ ಉತ್ತರಿಸಿದ್ದು...ಕಾಲ ಬದಲಾಗ್ತಾ ಇಲ್ಲ,ಜನ ಬದಲಾಗ್ತಾ ಇದಾರಷ್ಟೆ..ಹಿಂದೆ ರಾಮನೂ ಇದ್ದ,ರಾವಣನೂ ಇದ್ದ,ಈಗಲೂ ಒಳ್ಳೆಯವರೂ ಇದ್ದಾರೆ,ಕೆಟ್ಟವರೂ ಇದ್ದಾರೆ...ಒಳ್ಳೆಯದು,ಕೆಟ್ಟದ್ದು ಯಾವುದೋ ಧರ್ಮಕ್ಕೆ,ಜಾತಿಗೆ,ಹೀಗೆ ಯಾರಲ್ಲೋ ಒಬ್ಬರಲ್ಲಿ ಮಾತ್ರ ಇರುವಂತದ್ದಲ್ಲ... ಲೇಖನ ಮನ ತಟ್ಟಿತು,ಅಂತರಂಗವ ಕೆದಕಿತು...
    ಧನ್ಯವಾದಗಳು
    ಪ್ರೀತಿಯಿಂದ......
    ಸಂತೋಷ ಭಟ್ಟ

    ReplyDelete
  6. ಚೆನ್ನಾಗಿ ಬರೆದಿದ್ದೀರಿ ದಿನಕರ್ ಅವರೇ...... ಧನ್ಯವಾದಗಳು

    ReplyDelete
  7. ದಿನಕರ,
    ಮಸ್ಲಿಮ್ ಮನೋಸ್ಥಿತಿಯ ವಾಸ್ತವ ಚಿತ್ರಣ ನೀಡಿದ್ದೀರಿ. ರಶೀದನಂತಹ ಅನೇಕ ಬಡಪಾಯಿಗಳು ಅನುಭವಿಸಬೇಕಾದ ಯಾತನೆಗೆ ಕನ್ನಡಿ ಹಿಡಿದಂತಹ ಕತೆಯಿದು.

    ReplyDelete
  8. ಮಿನಿ ಕಥೆ ರೋಚಕವಾಗಿದೆ.ಯಾರೋ ಮಾಡುವ ತಪ್ಪಿಗೆ ಅಮಾಯಕ ಬಲಿಯಾಗುವುದು ಸಹಜ ವಾಗಿದೆ.ಅದಕ್ಕೆ ಒಂದೇ ಧರ್ಮದ ಬಹಳಷ್ಟು ಜನ ಕಂಡು ಬಂದಿರುವ ಕಾರಣ ಅದೇ ಧರ್ಮದ ವ್ಯಕ್ತಿಯ ಮೇಲೆ ಅನುಮಾನದ ಹುತ್ತ ಬೆಳೆದಿದೆ.ನಿರೂಪಣೆ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ಧರ್ಮದಲ್ಲಿಯೂ ಕೆಟ್ಟವರು ಹಾಗು ಒಳ್ಳೆಯವರು ಇರುವುದನ್ನು ಹುಡುಕಬೇಕಾಗಿದೆ. ನಿಮಗೆ ಥ್ಯಾಂಕ್ಸ್.

    ReplyDelete
  9. ದಿನಕರ್...

    ನಿಜಕ್ಕೂ ಒಬ್ಬ ದೇಶ ಭಕ್ತ ನಾಗರಿಕನಾಗಿದ್ದರೆ ಬಹಳ ನೋವಾಗುತ್ತದೆ..

    ನಿಜ ...
    ಬಾಂಬ್ ಹಾಕುವವರು ಹೆಚ್ಚಾಗಿ ಮುಸಲ್ಮಾನರಾಗಿದ್ದರೂ...
    ಎಲ್ಲರೂ ಭಯೋತ್ಪಾದಕರಲ್ಲವಲ್ಲ...
    ಹೆಚ್ಚಿನ ಜನರಿಗೆ ಇದರ ಅರಿವೇ ಇರುವದಿಲ್ಲವಲ್ಲ...

    ನಮಗೆ ಯಾಕೆ ಮುಸಲ್ಮಾನರನ್ನು ಕಂಡರೆ ಈ ರೀತಿಯ ಭಾವ ?
    ಅಲ್ಲವಾ?

    ಒಂದು ಸೂಕ್ಷ್ಮ ಎಳೆಯನ್ನು ಬಹಳ ಚಂದವಾಗಿ ಹೆಣೆದಿದ್ದೀರಿ...

    ಅಭಿನಂದನೆಗಳು...

    ReplyDelete
  10. ನನಗೆ ಜನಸಾಮಾನ್ಯ ಅವನ ಕಾಳಜಿ...ಸುಮ್ಮಸುಮ್ಮನೆ ಹೆದರುವ ಸ್ವಾಭಾವಿಕ ಮುಗ್ಧಗುಣ ಎಲ್ಲ ಕಣ್ಣ ಮುಂದೆ ನಿಂತದ್ದು ಬೆಳೆಯುತ್ತಿರುವ ನನ್ನ ಸ್ನೇಹಿತ ಕಥೆಗಾರ ದಿನಕರ್ ನಿಮ್ಮ ಈ ಕಥೆಯ ಮೂಲಕ..ಹೌದು..ಈ ಅನುಭವ ನನಗೂ ಆಗಿದೆ...ಧರ್ಮ ಹಿಂಸೆಯಿಂದ ಅಲ್ಲ ಪ್ರೀತಿಯಿಂದ ಬೆಳೆಯುತ್ತೆ ಅನ್ನೋದು ಸ್ವಯಂ ಮೊಹಮ್ಮದರ ವಾದವಾಗಿತ್ತು...ಕೆಲಸ ಕಾರ್ಯವಿಲ್ಲದ...ಬುದ್ಧಿಮೇಯಲು ಬಿಡುವ ಯುವಕರು ಆಮಿಷಗಳಿಗೆ ಬಲಿಯಾಗೋದು ಸಹಜ....ಅಮಾಯಕರು ಸಂಚಿಗೆ ಬಲಿಯಾಗೋದೇ ಹೆಚ್ಚು....ಬಹಳ ಚನ್ನಾಗಿ ಮೂಡಿಬಂದಿದೆ ಕಥೆ...ದಿನಕರ್..ಚಲ್ತೆ ರಹೋ...

    ReplyDelete
  11. sir rochakateyalli chennagi mudi bandide sir... aneka bari yaro madida tappige mugdaru badapayigalu bali agtare, anumanakke sikki naraluttare...

    esto Muslim ru namma deshadalli deshakagi sadisidavaru iddare sir adaru namma jana yeno obba muslim kandare tamma drusti konavanne badalisi kollatare... idu enta duradrusta alva sir ondibbaru maduva tappige.. idii janangave aparadhigalagi hogiddare..

    ReplyDelete
  12. ದಿನಕರ್;ಕತೆ ಸೊಗಸಾಗಿ ಮೂಡಿ ಬಂದಿದೆ.ತುಂಬಾ ಇಷ್ಟವಾಯಿತು.ನಿಸ್ಸಾರ್ ಅಹಮದ್ ಅವರ 'ನಿಮ್ಮೊಡನಿದ್ದೂ ನಿಮ್ಮಂತಾಗದೆ 'ಎನ್ನುವ ಕವಿತೆ ನೆನಪಾಯಿತು.ಸಾಧ್ಯವಾದಾಗ ಬ್ಲಾಗಿನಲ್ಲಿ ಆ ಕವಿತೆ ಹಾಕುತ್ತೇನೆ.

    ReplyDelete
  13. ದಿನಕರ್, ಕಥೆ ಚೆನ್ನಾಗಿದೆ. ಒ೦ದು ಸೂಕ್ಷ್ಮ ವಿಚಾರವನ್ನಿಟ್ಟುಕೊ೦ಡು ಚೆನ್ನಾಗಿ ಹೆಣೆದಿದ್ದೀರಿ.

    ReplyDelete
  14. ದಿನಕರ್,
    ರಶೀದನ ಆತಂಕ ಭಯ ಹಾಗೂ ಅವನ ಅಸಹಾಯಕತೆ ಚೆನ್ನಾಗಿ ಚಿತ್ರಣವಾಗಿದೆ....
    ವಾಸ್ತವಕ್ಕೆ ಹತ್ತಿರವಾದ ಘಟನೆ ಎನ್ನಿಸುತ್ತದೆ....
    ಚೆನ್ನಾಗಿದೆ...

    ReplyDelete
  15. ದಿನಕರ್,
    ಕತೆಯ ಎಳೆ ವಾಸ್ತವ್ಯ ಮತ್ತು ಮನಸ್ಥಿತಿಗಳೊಂದಿಗೆ ಸಮ್ಮಿಲಿತವಾಗಿ ಮಾನವೀಯತೆಯ ಚಿತ್ತಾರ ಮೂಡಿಸಿದೆ..

    ಥಿಂಕಿಂಗ್ ಕತೆಗಾಗಿ ಧನ್ಯವಾದಗಳು..

    ReplyDelete
  16. ಕಥೆ ನೈಜತೆ ತು೦ಬಿಕೊ೦ಡು ಚೆನ್ನಾಗಿ ಓದಿಸಿಕೊ೦ಡು ಹೋಯಿತು.ಚೆನ್ನಾಗಿ ಬರೆದಿದ್ದೀರಿ.

    ReplyDelete
  17. ದಿನಕರ್ ಅವರೇ,
    ನಿಮ್ಮೊಳಗೆ ಒಬ್ಬ ಅದ್ಭುತ ಕಥೆಗಾರನಿದ್ದಾನೆ! ರಶೀದ್ ನ ಮಾನಸಿಕ ತುಮುಲವನ್ನು ಚೆನ್ನಾಗಿ ಚಿತ್ರಿಸಿದ್ದೀರಿ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

    ReplyDelete
  18. ಡಾಕ್ಟರ್ ಹೇಳಿದಹಾಗೆ ಕತೆ ಓದುತ್ತಿದ್ದಂತೆ ನಿಸಾರ್ ಅವರ ಕವಿತೆನೆನಪಾಯಿತು.
    ರಶೀದನೇನೋ ಬಡಪಾಯಿ ಒಪ್ಪೋಣ ಆದರೆಯಾರದೋ ಮಾತಿಗೆ ಒಳಗಾಗಿ ಅನೇಕರು ತಾವು ನಿಂತನೆಲವನ್ನೇ
    ಸುಡಲು ನಿಂತಿದ್ದಾರಲ್ಲ

    ReplyDelete
  19. ದಿನಕರ್ ಅವರೇ ನಿಮ್ಮ ನಿರೂಪಣೆ ಬಹಳ ಚೆನ್ನಾಗಿದೆ.ವಾಸ್ತವದಲ್ಲಿ ಕಾಣುವ ಅನುಭವಿಸುವ ತುಮುಲಗಳನ್ನು ಸತ್ಯಗಳನ್ನು ಕಥೆಯಾಗಿ ನಿರೂಪಿಸಿದ್ದೀರಿ.ಅಭಿನ೦ದನೆಗಳು.

    ReplyDelete
  20. ದಿನಕರ್
    ಕಥೆ ತು೦ಬಾ ಯೋಚಿಸುವ೦ತೆ ಮಾಡುತ್ತದೆ.ಪರಿಸ್ಥಿತಿ ಮತ್ತು ಪೂರ್ವಾಗ್ರಹ ಎರಡೂ ಸ೦ಶಯಕ್ಕೆಡೆ ಮಾಡಿಕೊಡುತ್ತದೆ.
    ವ೦ದನೆಗಳು.

    ReplyDelete
  21. yeah..its happening thing sir.. your story gives a message for such things..

    ReplyDelete
  22. ಕಣ್ಣಿಗೆ ಕಟ್ಟುವಂತೆ ಬರೀತೀರಿ.. ಸೂಪರ್ರ್..
    ವಿಚಾರ ಮಾಡಬೇಕಾದ ಲೇಖನ..
    ನನ್ನ 'ಮನಸಿನಮನೆ'ಗೂ ಬನ್ನಿ..

    ReplyDelete
  23. manasige naatithu e kathe dhinakar avarE... yochisuvanthe maaduttade kathe....

    ReplyDelete
  24. ತುಂಬಾ ಚೆನ್ನಾಗಿ ಬರೆದಿದ್ದೀರಿ ರಶೀದ ಮನದ ತುಮುಲ. ತಮ್ಮಲ್ಲಿನ ಕಥೆಗಾರನಿಗೆ ವಂದನೆಗಳು.

    ReplyDelete
  25. svalpa natakeeyavagiddaru kathe chennagide...

    ReplyDelete
  26. ಒಳ್ಳೆಯ ಕಥೆಗಾರರು ನೀವು ಎಂಬುದು ಒಂದೆರಡು ಕಥೆಗಳ ರುಚಿಯೇ ಹೇಳುತ್ತದೆ. ನಿಮ್ಮಲ್ಲಿನ ಕಥೆಗಾರ ಆಗಾಗ ಜಾಗ್ರತನಾಗಿ ಬರೆಯತೊಡಗುತ್ತಾನೆ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು.

    ReplyDelete
  27. ತುಂಬ ಒಳ್ಳೆಯ ವಿಷಯದ ಕುರಿತು ಕಥೆ ಬರೆದಿದ್ದೀರ ಸಾರ್... ಉತ್ತಮವಾಗಿದೆ!

    ReplyDelete
  28. ಭಾರತೀಯ ಮುಸಲ್ಮಾನನ ಮನಸ್ಥಿತಿ ಚೆನ್ನಾಗಿ ವ್ಯಕ್ತವಾಗಿದೆ.

    ReplyDelete
  29. ದಿನಕರ್, ನಿಮ್ಮ ಮನಮುಟ್ಟುವ ಕಥೆಯನ್ನು ಅ೦ದೇ ಓದಿದ್ದೆ. ಪ್ರತಿಕ್ರಿಯೆ ಹಾಕಿದ್ದೆ ಅನ್ಕೊ೦ಡು ಬಿಟ್ಟಿದ್ದೆ. ಭಾರತೀಯ ಮುಸಲ್ಮಾನರ ಮನೋ-ಸ೦ದಿಗ್ಧ ವಿಚಾರಗಳನ್ನು ಸೂಕ್ಷ್ಮವಾಗಿ, ನವಿರಾಗಿ ಚಿತ್ರಿಸಿದ್ದೀರಿ. ನಿರೂಪಣೆ ತು೦ಬಾ matured ಆಗಿದೆ.

    ಶುಭಾಶಯಗಳು
    ಅನ೦ತ್

    ReplyDelete
  30. ಮನಸಿಗೆ ಮುಟ್ಟಿದ ಕಥನ ಸರ್, ಇದರ ಲಿಂಕ್ನ್ನು ನನ್ನ ಸ್ನೇಹಿತರಿಗೆ ಮೈಲ್ ಮಡಿದ್ದೇನೆ.

    ReplyDelete
  31. ಯಾಕೋ ಇತ್ತೀಚೆಗೆ ಪತ್ತೆ ಇಲ್ಲ... ಎಲ್ಲಾ ಕ್ಷೇಮ ತಾನೆ?

    ಏನಾದರೂ ಬರೆಯಿರಿ ;)

    ReplyDelete
  32. Dear all...

    thanks for your comment.. thank you very much...

    ReplyDelete