Sep 25, 2011

ಈ ರೀತಿ.....!!!

ಈ ಕಥೆಯನ್ನು ಪ್ರಕಾಶಣ್ಣ ಬರೆದ ಕಥೆ(  http://ittigecement.blogspot.com/  )ಯನ್ನು ಮುಂದುವರೆಸಿ ಬರೆಯುವ ಪ್ರಯತ್ನ ಮಾಡಿದ್ದೇನೆ.... 



ನಾನ್ಯಾಕೆ ಹಾಗೆ ಮಾಡಿದೆ ಎಂದು ತಿಳಿಯಲಿಲ್ಲ..........
 ಮನುಷ್ಯ ಸಹಜವಾಗಿ ಎಲ್ಲರ ಜೊತೆ ಬೆರೆಯುತ್ತಾನೆ......
 ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಜೊತೆ ಬೆರೆಯದಿದ್ದರೆ ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ...
ಸಂಬಂಧಿಕರ ಜೊತೆ ಸೇರದಿದ್ದರೆ ಅವರೆಲ್ಲ ದೂರ ಹೋಗುತ್ತಾರೆ....

ಛೆ...ತಪ್ಪು ಮಾಡಿದೆ ಎನಿಸಿತು....  ಬೆನ್ನು ತಿರುಗಿಸಿ ನೋಡಿದೆ....
 ಆತ ಮೊಬೈಲ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಎನಿಸುತ್ತದೆ.... ನಾನು ತಿರುಗಿದ್ದನ್ನು ನೋಡಿಯೂ ಸಹ ಆತ ಮೆಸೇಜ್ ಕುಟ್ಟುವುದು ಮುಂದುವರಿಸಿದ........
 ನನ್ನ ಕೋಪ ಇಳಿದಿತ್ತಾದರೂ ತೋರಿಸಲು ಹೋಗಲಿಲ್ಲ..... ಹೆಣ್ಣು ಯಾವಾಗಲೂ ಗಂಡೇ ಸೋಲಲಿ ಎಂದು ಬಯಸುತ್ತಾಳೆ....
 ಆತ ಏನೂ ಪ್ರತಿಕ್ರೀಯಿಸದೇ ಇರಲು ನಾನೂ ಸೋಲಲು ಬಯಸಲಿಲ್ಲ.... ಬೆನ್ನು ತಿರುಗಿಸಿ ಮಲಗಿದೆ....
 ಮಲಗೇ ಇದ್ದರೂ ನಿದ್ದೆ ಬರಲಿಲ್ಲ.... 
ಮನಸ್ಸು ನನ್ನನ್ನು ನನ್ನ ಕಾಲೇಜಿನ ದಿನಗಳತ್ತ ಕೊಂಡೊಯ್ದಿತು....

ಪದವಿಯ ಕೊನೆಯ ವರ್ಷದಲ್ಲಿದ್ದೆ...........
ಇದೇ ನನ್ನ ಕಾಲೇಜಿನ ಅಂತಿಮ ವರ್ಷವೆಂದೇ ಇರಬೇಕು...
ಎಲ್ಲರ ಜೊತೆಯೂ ಖುಷಿ ಖುಷಿಯಿಂದ ಇರುತ್ತಿದ್ದೆ.....
ಅದರಲ್ಲೂ ಒಬ್ಬ ಹುಡುಗನ ಜೊತೆ ನನಗೆ ತುಂಬಾ ಖುಶಿ ಕೊಡುತ್ತಿತ್ತು.... ನನಗೆ ಒಳ್ಳೆಯ ಗೆಳೆಯನಾಗಿದ್ದ....

ನನ್ನ ಧುಖ್ಹಕ್ಕೆ ಹೆಗಲಾಗುತ್ತಿದ್ದ... ಖುಷಿಗೆ ಕಿವಿಯಾಗುತ್ತಿದ್ದ....
ಆದರೂ ನಾನು ಅವನನ್ನು ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ......
ಗಂಟೆಗಟ್ಟಲೆ ಹರಟಿದರೂ ಸಹ ನನ್ನ ಮನೆಯ ವಿಳಾಸ ಅವನಿಗೆ ಹೇಳಿರಲಿಲ್ಲ... ಅವನೂ ಕೇಳಿರಲಿಲ್ಲ.....

ಒಮ್ಮೆ ಕಾಲೇಜಿನ ಪ್ರವಾಸವಿತ್ತು....... ಆತನೂ ಬಂದಿದ್ದ....
ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆತ ಪದೇ ಪದೇ  ಬಂದು ನನ್ನ ಬಳಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದ..... ನಾನು ಅದನ್ನು ಒಪ್ಪಿರಲಿಲ್ಲ.....
ಗೋವಾದ ಪ್ರವಾಸವಾಗಿತ್ತು... ಒಂದು ದಿನ ಅಲ್ಲೇ ಉಳಿಯುವ ವ್ಯವಸ್ಥೆ ಸಹ ಇತ್ತು....... 
ಎಲ್ಲರೂ ಬೀಚ್ ನಲ್ಲಿ ಕುಣಿಯುತ್ತಿದ್ದೆವು.... ಆತ ನನ್ನನ್ನು ಸಮೀಪಿಸಲು ಪ್ರಯತ್ನಿಸುತ್ತಿದ್ದಾನೆ ಅನಿಸುತ್ತಿತ್ತು......

ಯಾಕೋ ಆತನನ್ನು ದೂರವಿಡಬೇಕು ಎನಿಸುತ್ತಿತ್ತು.... ಹಾಗೆ ಮಾಡಿದೆ....
 ಕುಣಿದು ಕುಣಿದು ಸುಸ್ತಾಗಿತ್ತು.... ರೂಮಿಗೆ ಬಂದು ಸ್ನಾನ ಮಾಡಿ ಊಟ ಮಾಡಿದೆವು....
  ಮಲಗುವವರಿದ್ದೆವು... ನನ್ನ ರೂಮ್ ನಲ್ಲಿ ನನ್ನ ಗೆಳತಿ ಒಬ್ಬಳಿದ್ದಳು...
ಅಷ್ಟರಲ್ಲಿ ಆತ ಅಲ್ಲಿಗೇ ಬಂದ...

ಆತ ತನ್ನ ಗೆಳೆಯರ ಜೊತೆ ಬಿಯರ್ ಕುಡಿದು ಬಂದಿದ್ದ ಎನಿಸುತ್ತಿತ್ತು...... ಬೀಯರ್ ವಾಸನೆಯೇ ವಾಕರಿಕೆ ತರಿಸುತ್ತಿತ್ತು....
ಬಂದವನೇ ನನ್ನ ಬೆಡ್ ಮೇಲೆ ಕುಳಿತ.... ನನ್ನ ಗೆಳತಿ ಬಾತ್ ರೂಮಿಗೆ ಹೋದಳು...
ಅದೇ ಸಮಯದಲ್ಲಿ ಆತ ನನ್ನ ಕೈ ಹಿಡಿದ.....
ನನಗೆ ಶಾಕ್ ಹೊಡೆದ ಹಾಗಾಯಿತು.....

ಇದು ನನ್ನ ಗೆಳೆತನಕ್ಕೆ ಮಾಡಿದ ಅಪಮಾನವಾಗಿತ್ತು..... ನಂಬಿಕೆಗೆ ಮಾಡಿದ ದ್ರೋಹವಾಗಿತ್ತು.....
ಯಾವ ನಿರೀಕ್ಷೆಯೂ ಇಲ್ಲದೆ ಸ್ನೇಹ ಮಾಡಿದ್ದೆ.....

ಈತನ ವರ್ತನೆ ನನ್ನನ್ನು ಕೆಣಕಿತ್ತು..... ಸಿಟ್ಟು ಬಂತು...
ಫಟೀರೆಂದು  ಎರಡು ಕೆನ್ನೆಗೆ  ಬಿಟ್ಟೆ......

ಆತನ ನಷೆ ಇಳಿದಿರಬೇಕು ಎನಿಸತ್ತೆ....
ಮಾತನಾಡದೆ ಹೊರಗೆ ಹೋದ....

ಬಾತ್ ರೂಮಿಗೆ ಹೋದ ಗೆಳತಿ ಹೊರಗೆ ಓಡಿ ಬಂದಳು" ಏನದು ಸದ್ದು.." ಎಂದಳು...
"ಸೊಳ್ಳೆ ಹೊಡೆದೆ" ಎಂದೆ... ನನ್ನ ಸಿಟ್ಟು ಹಿಡಿತಕ್ಕೆ ಬಂದಿತ್ತು.....

ಎಂದಿಗೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳದ ಆತ ಇಂದೇಕೆ ಹೀಗಾದ ಎನಿಸುತ್ತಿತ್ತು.... ನಾಳೆ ಕೇಳಿದರಾಯಿತು ಎಂದುಕೊಂಡು ಮಲಗಿದೆ....

ಬೆಳಿಗ್ಗೆ ಬೇಗನೇ ಎದ್ದೆ....
ಆತನಲ್ಲಿ ಹೋಗಿ ಕೇಳಬೇಕು ಎಂದಿಕೊಂಡು ಆತನ ರೂಮ್ ಹುಡುಕಿಕೊಂಡು ಹೋದೆ....

ಒಂದು ರೂಮಿನ ಬಾಗಿಲು ಅರ್ಧ ತೆರೆದಿತ್ತು....
ಇಣುಕಿದೆ...
ನನ್ನದೇ ಕಾಲೀಜಿನ ಹುಡುಗರು ಎಲ್ಲರೂ ಇದ್ದರು....
ಇದೇನಿದು ಎಲ್ಲರೂ ಇಷ್ಟು ಬೇಗ ಸೇರಿದ್ದಾರೆ ಎಂದುಕೊಂಡು ಒಳಗೆ ಹೋದೆ....  ಬೆಡ್ ಮೇಲೆ ಆತ ಕುಳಿತಿದ್ದ.... ಆತನ ಸುತ್ತಲು ಎಲ್ಲರೂ ನಿಂತಿದ್ದರು... ಅವರ ಹಿಂದೆ ನಾನು ನಿಂತಿದ್ದೆಯಾದ್ದರಿಂದ ನನ್ನನ್ನು ಯಾರೂ ಗಮನಿಸಲಿಲ್ಲ.....
ಆತ ಮೆಲ್ಲಗೆ ಮಾತನಾಡುತ್ತಿದ್ದ...... ನಾನು ಕಿವಿಗೊಟ್ಟು ಕೇಳಿದೆ..." ನನಗೆ ಎನೂ ಮನಸ್ಸಿರಲಿಲ್ಲ...ಅವಳೇ ನನ್ನನ್ನು ರೂಮಿಗೆ ಕರೆದಿದ್ದಳು.... ನನಗೆ ನಮ್ಮ ಸ್ನೇಹವನ್ನು ಹಾಳು ಮಾಡುವ ಮನಸಾಗಲಿಲ್ಲ..... ನೀವೇ ನೋಡಿದ್ದಿರಲ್ಲ, ಡಾನ್ಸ್ ಮಾಡುವಾಗ ಸಹ ನನ್ನ ಹತ್ತಿರವೇ ಬರುತ್ತಾ ಇದ್ದಳು.... ರಾತ್ರಿ ರೂಮಿಗೆ ಬರಲು ಹೇಳಿದ್ದಳು..... ಎನೋ ವಿಷಯ ಇರಬೇಕೆಂದುಕೊಂಡು ಹೋದೆ.... ಅವಳ ಗೆಳತಿ ಬಾತ್ ರೂಮಿಗೆ ಹೋಗಿದ್ದಾಗ ನನ್ನ ಕೈ ಹಿಡಿದು ಬಾ ಎಂದಳು.... ಕೆನ್ನೆಗೆ ಎರಡು ಬಿಗಿದು ಬಂದೆ... ಸ್ನೇಹವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ....." ಎಂದು ಇನ್ನೆನೋ ಹೇಳುವವನಿದ್ದ......
ನಾನು ಆತನ ಗೆಳೆಯರ ಮಧ್ಯದಲ್ಲೇ ನುಸುಳಿಕೊಂಡು ಆತನ ಎದುರಿಗೆ ನಿಂತೆ...
 ಆತನ ಬಾಯಿಗೆ ಬೀಗ ಬಿದ್ದಿತ್ತು.......
ನನ್ನ ಮೈ ಕಂಪಿಸುತ್ತಿತ್ತು.... ನನ್ನ ನಡುಕ ನನಗೇ ಕೇಳಿಸುತ್ತಿತ್ತು.... 

ಏನು ಹೇಳಬೇಕೋ ತಿಳಿದಿರಲಿಲ್ಲ...
ಥೂ..... ಎಂದು ಮುಖಕ್ಕೆ ಉಗಿದೆ.....
ಹೊರಗೆ ಬಂದೆ.....
ಬೇರೆಯದೇ ಬಸ್ ಹಿಡಿದು ಊರಿಗೆ ಬಂದಿದ್ದೆ....
ನಂತರ ಕಾಲೇಜಿನ ಕಡೆ ತಲೆ ಹಾಕಿರಲಿಲ್ಲ....

ಎಲ್ಲಾ ನೆನಪಾಯಿತು....... ಇದೆಲ್ಲವನ್ನು ನಾನೂ ಸಹ ಗಂಡನಿಗೆ ಹೇಳಿರಲಿಲ್ಲ....
ನನ್ನದೇನೂ ತಪ್ಪಿಲ್ಲ ಎಂದರೂ ಆತ ನಂಬಬಹುದು ಎನಿಸಿರಲಿಲ್ಲ..... ಮತ್ತೆಲ್ಲಾ ವಿಷಯದ ಬಗ್ಗೆ ಹೇಳಿಕೊಂಡರೂ ಈ ವಿಷಯ ಮುಚ್ಚಿಟ್ಟಿದ್ದೆ.....
ಯಾಕೊ ಹೇಳಬೇಕು ಎನಿಸಿರಲಿಲ್ಲ........ 

ಫೋನ್ ರಿಂಗ್ ಆದ ಹಾಗಾಯಿತು....
ನನ್ನ ಯೋಚನಾ ಸರಣಿಗೆ ಕತ್ತರಿ ಬಿತ್ತು......

ಕಿರುಗಣ್ಣಲ್ಲೇ ನೋಡಿದೆ...
ಆತ ಫೋನ್ ಕಿವಿಗಿಟ್ಟು ಪಿಸುಗುಟ್ಟಿದ... ಮತ್ತೆ ಕಟ್ ಮಾಡಿ.... ಮೆಸೇಜ್ ಕುಟ್ಟತೊಡಗಿದ...

ನಾನು ಸುಮ್ಮನೇ ಮಲಗಿದೆ.....


ಬೆಳಿಗ್ಗೆ ಬೇಗ ಎದ್ದು ತುಳಸಿಕಟ್ಟೆ ತೊಳೆದು ದೀಪ ಹಚ್ಚಿದೆ....
ಎಲ್ಲರಲ್ಲೂ ತಪ್ಪಿರತ್ತೆ.... ಕೆಲವೊಂದು ಹುಳುಕುಗಳು ಇರುತ್ತವೆ....
ಅದರ ಜೊತೆ ಹೊಂದಿಕೊಂಡು ಹೋದರೆ ಜೀವನ ಎಂದು ಅಮ್ಮ ಹೇಳುತ್ತಿದ್ದುದು ನೆನಪಾಯಿತು....

ನಿನ್ನೆ ಆತನ ಜೊತೆ ನಡೆದ ಜಗಳ ಮರೆತು ಸರಿಯಾಗೋಣ ಎನಿಸಿತು....
ಒಳ್ಳೆಯ ಕಾಫಿ ಮಾಡಿಕೊಂಡು ಬೆಡ್ ರೂಮಿಗೆ ಹೋದೆ....

ಆತ ಬೇಗನೇ ಎದ್ದಿದ್ದ... ಯಾರದೋ ಜೊತೆ ಮೆಲ್ಲ ದನಿಯಲ್ಲಿ ಮಾತನಾಡುತ್ತಿದ್ದ..... ನಾನು ಒಳಗೆ ಬಂದ ನಂತರ ಫೋನ್ ಕಟ್ ಮಾಡಿದ.....
ನಾನು " ಕಾಫಿ ಕುಡಿಯಿರಿ" ಎಂದೆ.....

"ಇದೇನು ಜಗಳ ಎಲ್ಲಾ ಮುಗೀತಾ..? ನಿನ್ನೆ ತುಂಬಾ ಸಿಟ್ಟಲ್ಲಿದ್ದೆ..... " ಎಂದರು.....

" ಅದೆಲ್ಲಾ ಬಿಟ್ಟುಬಿಡಿ... ಜಗಳ ಮರೆತು, ಜತೆಯಾಗಿ ಬಾಳೋಣ... ಮೊದಲು  ಕಾಫಿ ಕುಡಿಯಿರಿ" ಎಂದೆ......

"ನಿನ್ನದೂ ಸಹ ತಪ್ಪಿಲ್ಲ , ಎಲ್ಲಾ ಕಡೆಯಲ್ಲೂ ಸಂಬಂಧ ಕೆಟ್ಟು ಹೋಗಿದೆ... ಯಾರನ್ನೂ ನಂಬುವ ಹಾಗಿಲ್ಲ... ಇದನ್ನೆಲ್ಲಾ ಸರಿ ಮಾಡೊದು ಹೇಗಂದ್ರೆ, ಏನನ್ನು ಮುಚ್ಚಿಡದೇ ಎಲ್ಲವನ್ನೂ ಹಂಚಿಕೊಳ್ಳೋದು.... ನನ್ನ ಜೀವನ ತೆರೆದ ಪುಸ್ತಕದ ಹಾಗೆ.... ನಿನ್ನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದೇನೆ....  ಇಷ್ಟೆಲ್ಲಾ ಮಾಡಿದರೂ ನೀನು ನನ್ನ ಮೇಲೆ ತಪ್ಪು ತಿಳಿದೆ...... ಇರಲಿ, ಈಗ್ಲಾದ್ರೂ  ಎಲ್ಲಾ ಅರ್ಥ ಆಯ್ತಲ್ಲಾ.... ಸರಿ..... ಇದೇ ರೀತಿ ಇರು.... ಎರಡೇ ನಿಮಿಷ ಬಂದೆ.." ಎಂದವರೇ ಬಾತ್ ರೂಮಿಗೆ ಓಡಿದರು..... ಬಾಗಿಲು ಹಾಕಿಕೊಳ್ಳುವವರಿದ್ದರು.....

ಅಷ್ಟರಲ್ಲೇ ವಾಪಸ್ ಬಂದು ಮೊಬೈಲ್ ತೆಗೆದುಕೊಂಡು ಏನೋ ಕುಟ್ಟಿದರು...... ಮತ್ತೆ ಮೊಬೈಲ್ ನ್ನು ಬೆಡ್ ಮೇಲಿಟ್ಟು ಬಾತ್ ರೂಮಿಗೆ ಹೋದರು.....

ನನಗೆ ಮತ್ತೆ ತಲೆಯಲ್ಲಿ ಹುಳ.......
ಇದ್ಯಾಕೆ ಇಷ್ಟೊಂದು ಮೊಬೈಲ್ ಹುಚ್ಚು ಎನಿಸಿತು.....

ಮೊಬೈಲ್ ಕೈಯಲ್ಲಿ ತೆಗೆದುಕೊಂಡೆ....
ನೊಕಿಯಾ ಮೊಬೈಲ್ ಆಗಿತ್ತು.....
ದುಬಾರಿಯದೇ ಆಗಿತ್ತು.....

ನಿನ್ನೆ ರಾತ್ರಿ ಮೊಬೈಲ್ ನಲ್ಲಿ ಮಾತನಾಡಿದ್ದು ಮತ್ತು ಮೆಸೇಜ್  ನೆನಪಾಯಿತು.....
ಯಾರ ಜೊತೆ ಎನಿಸಿ....INBOX ನೋಡಿದೆ....... EMPTY... 
ಎಂದಿತ್ತು..!! ಅರೆ... ಇದೇನಿದು.... ನಿನ್ನೆ ರಾತ್ರಿಯಿಡಿ ಮೆಸೇಜ್  ಮಾಡಿದ್ದರಲ್ಲ.....
 SENT MESSAGE ನೋಡಿದೆ.......... ಅದೂ EMPTY
ಎಂದಿತ್ತು......!!
ಅದ್ಸರಿ.....
ನಾನು ಬೆಳಿಗ್ಗೆ ಕಾಫಿ ತರುವ ಮೊದಲು ಯಾರದೋ ಜೊತೆ ಮಾತನಾಡುತ್ತಿದ್ದರಲ್ಲ ಎನಿಸಿ Dialed call list ನೋಡಿದೆ......
 Empty ಎಂದಿತ್ತು.......!!
Received call list ನೋಡಿದೆ..............
Empty ಎಂದಿತ್ತು..... !!


ಫೋನ್ ತೆಗೆದು ಪಕ್ಕದಲ್ಲಿಟ್ಟೆ....
"ಟಿವ್...ಟಿವ್" ಎಂದು ಮೆಸೇಜ್ ಅಲರ್ಟ್ ಆಯ್ತು.....

ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!