Jan 28, 2010

ಬ್ರೇಕ್ ಹಾಕೋಕೆ ನೆನಪೇ ಇಲ್ಲ....

ಅವನು ಗಣಪತಿ....... ನಮ್ಮೊರ ಸೋಡಾ ಸಪ್ಲಯರ್.... ಹಳ್ಳಿಯಲ್ಲಿ 'ಗೋಲಿ ಸೋಡಾ' ಮಾರಾಟ ಮಾಡುತ್ತಿದ್ದ..... 'ಶುಂಟಿ ಸೋಡಾ' 'ಸಪ್ಪೆ ಸೋಡಾ' ತುಂಬಾ ಚೆನ್ನಾಗಿ ಮಾಡುತ್ತಿದ್ದ....... ಒಳ್ಳೆಯ ರುಚಿಯಿರುತ್ತಿತ್ತು ಕೂಡ..... ಮಾಡುವ ರೀತಿ, ಶುದ್ದಿಯ ಬಗ್ಗೆ ಅನುಮಾನಗಳಿದ್ದರೂ ಸಹ ರುಚಿಯ ಬಗ್ಗೆ ಮಾತಿರಲಿಲ್ಲ...... ತುಂಬಾ ಕೊಳಕಾಗಿ ಇರುತ್ತಿದ್ದ...... ಅದಕ್ಕಾಗಿಯೇ ಸೋಡಾ ರುಚಿಯಾಗಿರುತ್ತದೆ ಎಂದು ನಾವೆಲ್ಲಾ ಮಾತಾಡಿಕೊಳ್ಳುತ್ತಿದ್ದೆವು ..... ಅವನ ಸೈಕಲ್ ಮೇಲೆ ಊರಲ್ಲಿನ ಎಲ್ಲಾ ಅಂಗಡಿಗಳಿಗೂ ಈತನೇ ಸೋಡಾ ಸಪ್ಲಯ್ ಮಾಡುತ್ತಿದ್ದ.... ವ್ಯಾಪಾರ ಚೆನ್ನಾಗಿ ಆಗುತ್ತಿದ್ದ ಹಾಗೆ ಸ್ಕೂಟರ್ ತೆಗೆದುಕೊಂಡ....... ಸ್ಕೂಟರ್ ಹಿಂದೆ ಸೋಡಾ ರಾಕ್ ಇಟ್ಟುಕೊಂಡು ಹೊರಟನೆಂದರೆ, ''ಮೈಸೂರು ಅಂಬಾರಿ'' ಯ ನೆನಪು ತರಿಸುವ ಹಾಗೆ ಸ್ಕೂಟರ್ ನಡೆಸುತ್ತಿದ್ದ.....

Jan 18, 2010

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?


'' ಅವ್ವಾ, ಹೋಗಿ ಬರುತ್ತೇನೆ '' ..... ಅಣ್ಣ , ಅಮ್ಮನನ್ನು ಕರೆಯುತ್ತಿದ್ದ....
ಅಪ್ಪನ ಕಾಲಿಗೂ ನಮಸ್ಕರಿಸಿದ..... ಅಪ್ಪನ ಕಣ್ಣು ಆಗಲೇ ಹನಿಗೂಡುತ್ತಿತ್ತು..... ಅಮ್ಮ ಅಲ್ಲಿಗೆ ಬರುತ್ತಾ ಇದ್ದರು..... ಅವರ ಕಾಲಿಗೂ ಅಣ್ಣ ನಮಸ್ಕರಿಸಿದ..... ನಾನು ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ್ದೆ..... ಇದು ಪ್ರತಿ ಸಾರಿ ಊರಿಗೆ ಬಂದು ಅಲ್ಲಿಂದ ಹೊರಡುವಾಗ ನಡೆಯುವ ದ್ರಶ್ಯ..... ಈ ಸಾರಿ ಊರಹಬ್ಬಕ್ಕೆ ಮನೆಗೆ ಹೋಗಿ ಎರಡು ದಿನ ಳೆದು
ವಾಪಸ್ ಬರುವಾಗಲೂ ಹೀಗೆ ನಡೆಯಿತು .... ಸಾರಿ ಸಹ ಇದು ನನ್ನನ್ನು ತುಂಬಾ ಘಾಡವಾಗಿ ಕಾಡಿತು..... ಹಲವು ಪ್ರಶ್ನೆಗಳನ್ನು ಸಹ ಕೇಳಿತು.....

ನಾನು , ನನ್ನಣ್ಣ ಊರಿನಿಂದ ದೂರದಲ್ಲಿ ಕೆಲಸ ಮಾಡುತ್ತೇವೆ..... ನಮಗೆ ನಮ್ಮದೇ ಸಂಸಾರ, ನಮ್ಮದೇ ಆದ ತಾಪತ್ರಯಗಳಿವೆ..... ಹೊಟ್ಟೆಪಾಡಿಗಾಗಿ ನಾವು ನಮ್ಮ ಗೂಡಿಗೆ ಹಿಂತಿರುಗಿ ಬರಲೇ ಬೇಕು..... ಅಪ್ಪ ಅಮ್ಮನಿಗೆ ಬೇಸರವಾಗುತ್ತದೆ ಎಂದು ಅಲ್ಲೇ ಕುಳಿತರೆ ಬಡಪಾಯಿ ಹೊಟ್ಟೆಗೆ ಹಸಿವೆಯಾಗುತ್ತದಲ್ಲ... ..... ಅದಕ್ಕೆ ನೋವು ನಲಿವು, ಸಿಟ್ಟು ಸೆಡವು, ಪ್ರೀತಿ ಮತ್ತೆ ಅದರ ಆತ್ಮೀಯತೆ ಅರ್ಥವಾಗುವುದಿಲ್ಲವಲ್ಲ....

ಅಪ್ಪ ಅಮ್ಮ, ನಮಗೆ ವಿದ್ಯೆ ಕೊಡಿಸಲು ತುಂಬಾ ಕಷ್ಟ ಪಟ್ಟಿದ್ದರು..... ಅದರಲ್ಲೂ ಅಮ್ಮ , ಅಪ್ಪನ ಕೆಲಸದ ಹೊರತಾಗಿಯೂ, ಸಣ್ಣ ಪುಟ್ಟ ವ್ಯಾಪಾರ ಮಾಡಿ ನಮ್ಮ ಭವಿಷ್ಯದ ಕನಸಿಗೆ ಧಾರೆ ಎರೆದಿದ್ದರು ..... ಅವರ ಕಷ್ಟದ ದಿನಗಳು ನಮಗೆ ಆಗ ಏನೂ ಅರ್ಥ ಆಗುತ್ತಿರಲಿಲ್ಲ..... ದೀಪ ಹೇಗೆ ತನ್ನನ್ನು ಹೊತ್ತಿಕೊಂಡು ಇತರರಿಗೆ ಬೆಳಕು ಕೊಡುತ್ತದೋ ಹಾಗೆ ಅಪ್ಪ ಅಮ್ಮ ಅವರ ವರ್ತಮಾನ ಮರೆತು ನಮ್ಮ ಭವಿಷ್ಯಕ್ಕಾಗಿ ದುಡಿದಿದ್ದರು.... ಅವರ ಸ್ವಂತ ಸುಖ ಮರೆತು ನಮಗೆ ವಿದ್ಯೆ ಕೊಡಿಸಿ ಅದರಲ್ಲೇ ಸಾರ್ತಕ್ಯ ಕಂಡರು......ತಮ್ಮ ಹಾಗೆ ವಿದ್ಯೆ ಇಲ್ಲದೆ ಕಷ್ಟ ಪಡುವುದರ ಬದಲು ವಿದ್ಯೆ ಕಲಿತು ಒಳ್ಳೆಯ ಉದ್ಯೋಗಲ್ಲಿರಲಿ ಎಂದು ಹಾರೈಸಿ ಕನಸು ಕಂಡಿದ್ದರು.......

ಅವರ ಹಾರೈಕೆ, ಆಶಿರ್ವಾದದ ಫಲದಿಂದ ಉದ್ಯೋಗವೂ ದೊರೆತಿದೆ........ ಆದರೆ ಅವರಿಂದ ದೂರವೂ ತಳ್ಳಿದೆ... ...... ಮನೆಯಲ್ಲಿ ಏನಾದರೂ ಪೂಜೆ, ಊರಹಬ್ಬ ಇದ್ದರೆ, ಊರಿಗೆ ಹೋಗಿ ಒಂದೆರಡು ದಿನ ಮನೆಯಲ್ಲಿ ಕಳೆದು ಹೊರಡುತ್ತೇವೆ... ..... ಪ್ರತಿ ಬಾರಿ ಇಲ್ಲಿಂದ ಹೊರಡುವಾಗಲೂ ಇದೆ ಪ್ರಶ್ನೆ ನನ್ನನ್ನು ಪದೇ ಪದೇ ಕಾಡುತ್ತವೆ......

ನಾವಿಬ್ಬರೂ ಪ್ರತಿ ತಿಂಗಳೂ ಮನೆ ಖರ್ಚಿಗೆ ಅಂತ ಹಣ ಕಳಿಸಿಕೊಡುತ್ತೇವೆ.....

ಆದರೆ ಮಕ್ಕಳು ಕಳುಹಿಸುವ ಹಣ ಪ್ರೀತಿ ಕೊಡುತ್ತದಾ......?


ಅಪ್ಪ ಅಮ್ಮ ಇಬ್ಬರಿಗೂ ವಯಸ್ಸಾಗಿದೆ.......

ಅವರ ನರಳಿಕೆ ನಮಗೆ ಕೇಳಿಸುತ್ತದಾ.....?


ಕೆಲಸದ ಗಡಿಬಿಡಿಯಲ್ಲಿ ಫೋನ್ ಮಾಡುತ್ತೇವೆ ....

ಅವರ ನಿಟ್ಟುಸಿರಿಗೆ ಕಿವಿಯಾಗಲು ಸಾದ್ಯವಾಗತ್ತಾ.....?


ತಮ್ಮ ಜೀವ ತೇಯ್ದು ನಮಗೆ ಕೊಡಿಸಿದ ವಿದ್ಯೆ......

ನಮ್ಮನ್ನು ಅವರಿಂದ ದೂರ ತರಿಸಿತಾ.....?


ಅವರ ಹಾಗೆ ಕಷ್ಟ ಪಡುವುದು ಬೇಡ ಎಂದು ನಮಗೆ ಕಲಿಸಿದ ವಿದ್ಯೆ......

ಅವರ ಕೊನೆಗಾಲದಲ್ಲಿ ಅವರದೇ ಉಪಯೋಗಕ್ಕೆ ಬಾರದೆ ಹೋಯಿತಾ....?


ಸಿಮೆಂಟಿನಿಂದ ಕಟ್ಟಿಸಿದ ಮನೆ , ಮಕ್ಕಳು ಕೊಡುವ ನೆರಳು ಕೊಡತ್ತಾ....?

ನಿರ್ಜೀವ ಫೋನಿನಿಂದ ಬರುವ ಮಕ್ಕಳ ದ್ವನಿ, ಮನಸ್ಸಿಗೆ ನೆಮ್ಮದಿ ನೀಡತ್ತಾ....?


ಅಪ್ಪ ಅಮ್ಮ ನಮಗೆ ವಿದ್ಯಾ ಕೊಡಿಸದೇ ಇದ್ದಿದ್ದರೆ, ಇಂದು ನಾವು ಊರಲ್ಲೇ ಏನಾದರು ಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದೆವು..... ಅವರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದೆವು..... ಅಪ್ಪ ಅಮ್ಮ ಸ್ವಾರ್ಥಿಯಾಗದೆ ಇದ್ದದ್ದು ತಪ್ಪಾ....?

ನನ್ನ ಕೊನೆಯ ಪ್ರಶ್ನೆ....

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?







Jan 10, 2010

ನಾನಿರದ ನೀನು......!

ನಾನಿರದ ನಿನ್ನ ಜೀವನ.....

ಉಪ್ಪಿಲ್ಲದ ಸಾರು,
ಉಪ್ಪುಪ್ಪು ನೀರು.......

ಚಕ್ರವಿಲ್ಲದ ತೇರು,
ಪೆಟ್ರೋಲಿಲ್ಲದ ಕಾರು......

ತಂಪಿಲ್ಲದ ಬೀರು,
' ಟುನ್ ' ಮಾಡದ ಬಾರು .......

ತೂತಾಗಿರೋ ಸೂರು,
ನೆರೆ ಬಂದ ಊರು........


ನಾನಿರದೇ ನೀನು......

ಕರೆಂಟಿಲ್ಲದ ಫ್ಯಾನು,
ನೀರಲ್ಲಿಲ್ಲದ ಮೀನು.....

ಹಾಳಾಗಿರೋ ಜೇನು,
ಶಾಯಿಯಿಲ್ಲದ ಪೆನ್ನು......

ಕೈಗೆಟುಕೋ ಬಾನು,
ಅಮಾವಾಸ್ಯೆಯ ' ಮೂನು ' .......

ಬೋಳುತಲೆಯ ಹೇನು,
ಬಾರದೆ ಹೋದ ಸೀನು........